ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗನಗೌಡ ಹಿರೇಗೌಡ ಓದಿದ ‘ಗಾಂಧಿ ಕಥನ’

ಸಂಗನಗೌಡ ಹಿರೇಗೌಡ

ಗಾಂಧಿ ಜಗತ್ತನ್ನು ನೋಡಿದ ಬಗೆ ಎಂಥಾದ್ದು, ಹಾಗೆಯೇ ಜಗತ್ತು ಗಾಂಧಿಯನ್ನು ನೋಡಿದ ಬಗೆ ಎಂಥಾದ್ದು ಎನ್ನುವುದನ್ನು, ಕಥನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿಕ್ಕ ಚಿಕ್ಕ ಶೀರ್ಷಿಕೆಗಳು, ಅದಕ್ಕನುಗುಣವಾಗಿ ನಾಲ್ಕೈದು ಪುಟದಷ್ಟು ವಿವರಣೆಗಳೂ ಇಲ್ಲಿದ್ದು, ಗಾಂಧಿಯ ಬಹುತೇಕ ಶಕ್ತಿಗಳು ಮತ್ತು ಕೆಲವು ಮಿತಿಗಳನ್ನು ಹೇಳುವ ಪುಸ್ತಕ. 

ಜೈನ ಧರ್ಮದ ಅಹಿಂಸೆಯ ತತ್ವದಲ್ಲಿ ಬರುವ ‘ಗಮನ ಪ್ರಾಯಶ್ಚಿತ್ತ’ ಮತ್ತು ಜನ್ನ ಹೇಳುವ ‘ಸಂಕಲ್ಪ ಹಿಂಸೆ’ ಯಂತೆ ಅಹಿಂಸೆಯ ಕುರಿತು ಗಾಂಧೀಜಿಯೂ  ಕೆಲವು ಕಠೋರ ನಿಲುವುಗಳನ್ನು ತಾಳಿದ್ದರು. ಹಸುವಿನ ಹಾಲನ್ನು ಸೇವಿಸಲೇ ಬೇಕು ಎಂದು ವೈದ್ಯರು ಸಲಹೆ ನೀಡಿದಾಗ, ಹಾಲಿನ ಪೌಷ್ಟಿಕಾಂಶ ಇರುವ ಯಾವುದಾದರೂ ಹಣ್ಣು ಹಂಪಲುಗಳ ಹುಡುಕಾಟ ಮಾಡುತ್ತಾರೆ.

ಕೊನೆಗೆ ಆ ತರಹದ ನೆರವು ಸಿಗದ್ದಕ್ಕಾಗಿ ತಾವು ಬದುಕುಳಿಯಲು ವೈದ್ಯರು ಹಾಲಿನ ಅನಿವಾರ್ಯ ಮುಂದಿಟ್ಟಾಗ ಮೇಕೆಯ ಹಾಲನ್ನು ಅನಿವಾರ್ಯಮಾಡಿಕೊಳ್ಳುತ್ತಾರಾದರೂ ಅವರ ಆಯ್ಕೆಯಾಗಿರಲಿಲ್ಲ. ತಮ್ಮ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡದ್ದರ ಬಗ್ಗೆ ಪಾಪ ಪ್ರಜ್ಞೆಯೂ ಕೂಡಾ ಅವರಿಗೆ ಕಾಡುತ್ತದೆ. ಮತ್ತದನ್ನು ಕಸ್ತೂರಿ ಬಾ ಅವರ ಹತ್ತಿರ ಹೇಳಿಕೊಳ್ಳುತ್ತಾರೆ.

ಗಾಂಧೀಜಿಯವರಿಗೆ ಕಸ್ತೂರಿಬಾಯಿಯವರಿಂದ ಸಿಕ್ಕ ಸಪೋರ್ಟ್ ಅಷ್ಟಿಷ್ಟಲ್ಲ! ಮಕ್ಕಳಾಗಿಯೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಕೆಲಸವಿಲ್ಲದಾದಾಗ, ಪೋರಬಂದರಿನ ಒಬ್ಬ ಮುಸ್ಲಿಂ ವ್ಯಾಪಾರಿಯು ದಕ್ಷಿಣ ಆಫ್ರಿಕಾದಲ್ಲಿದ್ದ ತನ್ನ ವ್ಯಾಪಾರ ಸಂಸ್ಥೆಯೊಂದರ ಸಂಬಂಧವಾದ ಲೆಕ್ಕ ಪತ್ರಗಳು ‌ಗುಜರಾತಿಯಲ್ಲಿದ್ದುದರಿಂದ ಅದನ್ನು ಅರ್ಥ ಮಾಡಿಕೊಂಡು ವಾದ ಮಾಡಬಲ್ಲ ಮತ್ತು ಗುಜರಾತಿ ಭಾಷೆ ಬಲ್ಲ ವಕೀಲನ ಹುಡುಕಾಟದಲ್ಲಿದ್ದಾಗ ಗಾಂಧಿಯ ಸಂಪರ್ಕ ಲಕ್ಷ್ಮಿ ದಾಸರಿಂದ ಸಿಗುತ್ತದೆ, ಅಲ್ಲಿಂದ ಗಾಂಧೀಜಿಯವರ ವೃತ್ತಿ ಬದುಕಿಗೆ ಅಲ್ಟರ್ನೇಟ್ ವೇ ಸಿಗುತ್ತದೆ…

ಗಾಂಧಿಜಿಯು ಆಫ್ರಿಕಾದಲ್ಲಿ ಕಟ್ಟಿದ ಟಾಲ್ ಸ್ಟಾಯ್ ಆಶ್ರಮ,  ಪರಮ ಶಿಷ್ಯ ಕಲೆನ್ ವಾಕ್, ಪೊಲಾಕ್ ಜೊತೆಗಿನ ಸಂಬಂಧ.    ರಹದಾರಿ ಪತ್ರಗಳ ವಿರುದ್ಧ ಮೊದಲ ಸತ್ಯಾಗ್ರಹ, ಪ್ರತಿದಿನವನ್ನೂ ತಮ್ಮ ಡೈರಿಯಲ್ಲಿ ಬರೆದು ಹಿಡುತ್ತಿದ್ದ ಟಾಲ್ ಸ್ಟಾಯ್, ಗಾಂಧೀಜಿಯವರು ಕೇವಲ ಒಂಭತ್ತು ದಿನದ ರೈಲು ಪ್ರವಾಸದಲ್ಲಿ ಬರೆದ ಹಿಂದ್ ಸ್ವರಾಜ್ ಪುಸ್ತಕದ ಕುರಿತು ಬರೆದ ಮಾತುಗಳು. ಸಂಕ್ಷಿಪ್ತವಾಗಿದ್ದರೂ ಅಮೋಘವಾಗಿದ್ದಾವೆ..

ಗಾಂಧಿ ಮತ್ತು ಸರಳಾದೇವಿಯ ಪತ್ರ ಸಂಬಂಧವನ್ನು ಕೆಲವರು ಆಡಿಕೊಳ್ಳುತ್ತಿದ್ದಾಗ, ಸಬರಮತಿ ಆಶ್ರಮದಲ್ಲಿದ್ದ ಮಹಾದೇವ ದೇಸಾಯಿಯವರು ಗಾಂಧಿ ಮತ್ತು ಸರಳಾದೇವಿಯ ಸಂಬಂಧ ‘ಅದೊಂದು ಬೌದ್ಧಿಕ ದಾಂಪತ್ಯ’ ಎಂದು ಸಮರ್ತಿಸಿಕೊಳ್ಳುತ್ತಾರೆ. ಕೊನೆಗೊಂದು ದಿನ ತನ್ನ ಕಿರಿಮಗ ರಾಮದಾಸನೇ ಬುದ್ಧಿ ಹೇಳುವಷ್ಟರಮಟ್ಟಿಗೆ ವಿಷಯ ಹೋದಾಗ ಸರಳಾದೇವಿಯ ಜೊತೆಗೆ ಸಂಬಂಧ ಕಡೆದುಕೊಂಡು ಬಿಡುತ್ತಾರೆ.

ಗಾಂಧಿಯನ್ನು ಕಾಣಲು  ಸರಳಾದೇವಿಯು ಆಶ್ರಮಕ್ಕೆ ಬಂದಾಗ ಅವರು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿರುತ್ತಾರೆ. ಆದರೆ ಈ ಕುರಿತು ಕಸ್ತೂರಿ ಬಾ ಅವರ ನಿಲುವೇನಾಗಿತ್ತೆನ್ನುವುದೂ ಇಲ್ಲಿ ಪ್ರಸ್ತಾಪವಾಗಿಲ್ಲ. ಭೌದ್ಧಿಕ ಪ್ರೇಮವೋ, ಭೌತಿಕ ಪ್ರೇಮವೋ! ಆದರೆ ಪ್ರೇಮವು ಯಾರನ್ನೂ ಬಿಟ್ಟಿಲ್ಲ, ಅದರಿಂದ ಬಿಡಿಸಿಕೊಂಡಾಗಿನ ವಿರಹವೂ ಕೂಡಾ!

ಬನಾರಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣವನ್ನೂ ಒಳಗೊಂಡು ಅನೇಕ ವೇದಿಕೆಗಳಲ್ಲಿ ಗಾಂಧೀಜಿಯವರು ಅಪಮಾನ, ಹೊಗಳಿಕೆ ತೆಗಳಿಕೆಗಳು ಒಟ್ಟೊಟ್ಟಿಗೆ ಸಿಗುತ್ತವೆ… ಗಾಂಧಿ, ಜಿನ್ನಾ, ಪಟೇಲರು, ನೆಹರೂ, ಗೋಖಲೆ, ದಕ್ಷಿಣ ಭಾರತದ ಶಿಷ್ಯ ರಾಜಗೋಪಾಲ್ ಚಾರಿ, ಸಬರಮತಿ ಆಶ್ರಮ, ಇತ್ಯಾದಿ ಸಂಗತಿಗಳು ಇಲ್ಲಿದ್ದು, ಉಳಿದಂತೆ ೬೭೦ ಪುಟದ ಈ ಕಥನ ಓದಿಯೇ ಅನುಭವಿಸಬೇಕು.

ಗಾಂಧೀಜಿಯು ತಮ್ಮ ವೈಯಕ್ತಿಕ ಜಗತ್ತು ಮತ್ತು ಸಮಕಾಲಿನ ಜಗತ್ತು ಒದಗಿಸಿದ್ದ ಒತ್ತಡಗಳಿಂದ ತಾವು ಕನಸಿದ ಲೋಕವನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದರ ಕಡೆಗೆ ಹೆಚ್ಚು ಸಮಯ ವ್ಯಯ ಮಾಡಿದರು. ಈ ಪುಸ್ತಕ ಗಾಂಧೀಜಿಯ ಅರಿವಿನ ವಿಸ್ತಾರವನ್ನು ಕಾಲ ಕಾಲಕ್ಕೆ ಹೇಗೆ ಬದಲಾಗುತ್ತಾ ಸಾಗಿತ್ತೆನ್ನುವುದನ್ನು ಹೇಳುತ್ತದೆ.

ಗಾಂಧೀಜಿಯ ‘ಹಿಂದ್ ಸ್ವರಾಜ್’ ಪುಸ್ತಕದ ಕೆಲವು ಪರಿಭಾಷೆಗಳನ್ನು ಬಳಸಿಕೊಂಡಿರುವ ಇವತ್ತಿನ ನಮ್ಮನ್ನಾಳುವ ಸರ್ಕಾರಗಳು ನಿಜವಾಗಿಯೂ ಗಾಂಧೀಜಿಯ ಕಾಳಜಿಗೆ ಬದ್ಧವಾಗಿದ್ದಾವೆಯೇ ಎಂದು ಕೇಳಿಕೊಂಡರೆ, ಇಲ್ಲವೆನ್ನುವಷ್ಟರ ಮಟ್ಟಿಗೆ ಕಡಿಮೆ.
ಇವತ್ತು ಗಾಂಧಿ ಹುಟ್ಟಿನ ದಿನದ ನೆಪದಲ್ಲಿ ಕನ್ನಡ ಓದಲು ಬರುವ ಅತೀ ಸಾಮಾನ್ಯರೂ ಓದಬಹುದಾದ ನಿರೂಪಣೆ ಈ ಪುಸ್ತಕದಲ್ಲಿದೆ.

‍ಲೇಖಕರು Admin

2 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading