ಸಂಗನಗೌಡ ಹಿರೇಗೌಡ ಓದಿದ ‘ಕವಿಜೋಡಿಯ ಆತ್ಮಗೀತ’

ಹಿಂದಣದ ಕಥನ ಮುಂದಣದ ಅನಂತ

ಸಂಗನಗೌಡ ಹಿರೇಗೌಡ

ನಟರಾಜ್‌ ಹುಳಿಯಾರ್‌ ಅವರ ‘ಕವಿಜೋಡಿಯ ಆತ್ಮಗೀತ’ (ಕಥಾಕಾವ್ಯ) ಕೃತಿ ಮತ್ತೆ ಮತ್ತೆ ಕೈಗೆತ್ತಿಕೊಂಡಾಗ ಥಟ್ಟನೆ ಪಂಪ, ರನ್ನ, ಕುಮಾರವ್ಯಾಸರ ಕಾವ್ಯಗಳ ಶೈಲಿ ಮತ್ತು ಜನಪದರ ಬಯಲಾಟ, ಯಕ್ಷಗಾನದ ಶೈಲಿಯಂತೆ ಗೋಚರವಾಗುವುದರಿಂದ, ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಇದೊಂದು ಹೊಸ ಬಗೆಯ ಹುಚ್ಚತನವೆಂದು ಹೇಳಬೇಕಾಗುತ್ತದೆ.

ಕಾವ್ಯ ಮೀಮಾಂಸೆ ಬಗ್ಗೆ ಶ್ರೀವಿಜಯ ತನ್ನ ‘ಕವಿರಾಜ ಮಾರ್ಗʼ ಕೃತಿಯಲ್ಲಿ ‘ಕಿರಿದರಲ್ಲಿ ಪಿರಿದರ್ಥವನ್ ಪೇಳುವನು ಸತ್ಕವಿ’ ಎಂದು ಹೇಳುತ್ತಾನೆ. ಇಂಥ ಮಾತನ್ನು ಹಾಯ್ದು ಬಂದಿದ್ದ ಪಂಪ, ರನ್ನ, ನಾಗಚಂದ್ರ, ಕುಮಾರವ್ಯಾಸರಂಥವರು ಸುದೀರ್ಘವಾದ ಪುರಾಣ ವಸ್ತುಗಳನ್ನು ತಮ್ಮ ಕಾಲಕ್ಕೆ ತಕ್ಕಂತೆ ಸಂಕ್ಷಿಪ್ತಗೊಳಿಸಿ, ಅದರಲ್ಲಿಯೂ ಸೂಕ್ಷ್ಮವಾಗಿ ಹಿಗ್ಗಿಸಿ ಕಾವ್ಯ ರಚಿಸಿದ್ದು ಗೊತ್ತೇ ಇದೆ.

ತುಸು ಉತ್ಪ್ರೇಕ್ಷವೆನಿಸಿದರೂ ನಟರಾಜ್‌ ಹುಳಿಯಾರ್‌ ಅವರು ಇಂಗ್ಲೆಂಡಿನ ಕವಿ ‘ಟೆಡ್‌ ಹ್ಯೂಸ್‌ʼ ಮತ್ತು ಅಮೇರಿಕಾದ ಕವಯಿತ್ರಿ ‘ಸಿಲ್ವಿಯಾ ಪ್ಲಾತ್ʼ ಇವರಿಬ್ಬರ ಹಿಂದಣದ ಕಥನ ಮತ್ತು ಮುಂದಣದ ಅನಂತವನು ಕೇವಲ ನೂರಿಪ್ಪತ್ತೇಳು ಪುಟದಲ್ಲಿ ಲಯಬದ್ಧವಾಗಿ ಹಿಡಿದಿಟ್ಟಿದ್ದಾರೆ.

ಒಂದು ಕೃತಿ ಓದಿದಾಗ ನಮ್ಮೊಳಗಿನ ಹೊಯ್ದಾಟವನ್ನು ಲೋಕದ ಮುಂದೆ ಹೇಳಲೂ ಆಗದ, ಬಚ್ಚಿಟ್ಟುಕೊಳ್ಳಲೂ ಆಗದ, ಕಟ್ಟಲೂ ಆಗದ, ಇತ್ತ ಕೆಡವಲೂ ಆಗದ, ಅನೇಕ ದುಗಡ ದುಮ್ಮಾನಗಳನ್ನು ಮುಟ್ಟಿ ಮಾತಾಡಿಸಿ ಬಂದಾಗ ಮಾತ್ರ ಆ ಕೃತಿಯ ನಿಜವಾದ ಗೆಲುವಾಗುತ್ತದೆ. ಹಾಗಾಗಿ ಈ ‘ಕವಿಜೋಡಿಯ ಆತ್ಮಗೀತ’ ಎನ್ನುವ ಕೃತಿಯ ಶೀರ್ಷಿಕೆ ಅದು ಕೇವಲ ‘ಸಿವ್ವಿʼ ಮತ್ತು ‘ಟೆಡ್ಡಿʼ ಎನ್ನುವ ಪಾರ ಪೋರಿಯ ಸ್ವಯಂ ಪ್ರತಿಭೆ, ನೆಲಮೂಲದ ಮುಗ್ಧತೆ ಮತ್ತು ಉತ್ಕಟ ಪ್ರೇಮಕಾಮದ ಆತ್ಮಗಳ ಗುದ್ದಾಟವಾಗಿ ಕಾಣುವುದಿಲ್ಲ. ಎಲ್ಲಾ ಕಾಲಕ್ಕೂ ಇರುವ, ಇರಬೇಕಾದ, ಇರುವ ಸಾಧ್ಯತೆಯಿರುವ ಒಟ್ಟು ಲೋಕದ ಗುದ್ದಾಟವಾಗಿ ಘಟಿಸುತ್ತದೆ.

‘ಮನುಷ್ಯ ಜಾತಿ ಅತೀ ವಾಸ್ತವವನ್ನು ತಾಳಿಕೊಳ್ಳಲಾರದು…
ಯುಗದ ಕವಿ ಎಲಿಯಟ್‌ ಕಾಲಜ್ಞಾನದ ಕಟು ಸತ್ಯ
ಕೊನೆಗೆ ಹೊಸಕಾಲದ ಕವಿಯೆದುರು
ರುದ್ರನರ್ತನಗೈದು ಅಣಕಿಸತೊಡಗಿತು’

‘ಅನುಭವದ ಎಲ್ಲೇ ಮೀರಿದಾಗ ಮೌನ ಆವರಿಸುತ್ತದಂತೆ’ ಇಲ್ಲಿ ಎಳೆ ಸೌತೆಕಾಯಿಯಂಥ ಸಿಲ್ವಿಯಾಳು ಪ್ರೇಮಾನುಭವದ ಆತ್ಯಂತಿಕ ಸ್ಥಿತಿ ತಲುಪದಯೇ, ಲೋಕವನ್ನು ವಿಚಾರ, ವಿವೇಕದಿಂದ ಪರಿಗಣಿಸದೆ; ತುಮುಲ, ತುಡಿತ, ಉದ್ರೇಕ, ಉನ್ಮಾದದಿಂದಲೇ ನೋಡುವ ಸರ್ವಾಧಿಕಾರದ ಮನೋಭಾವ ಶೈಶಾವಸ್ತೆಯಿಂದಲೇ ಬೆಳಿಸಿಕೊಂಡು ಬಂದಿರುತ್ತಾಳೆ.

ಹಾಗಾಗಿಯೇ ಎಲಿಯಟ್‌ನ ಮಾತಿನಂತೆ ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟು ತನ್ನನ್ನು ತಾನೇ ಇಲ್ಲವಾಗಿಸಿಕೊಂಡು ಬಿಡುತ್ತಾಳೆ. ಈ ಇಲ್ಲವಾಗಿಸಿಕೊಂಡದ್ದರ ಹಿಂದಿನ ಕಥನವನ್ನು ಪದ್ಯಗಳಲ್ಲಿ ಸಾಕಷ್ಟು ಚಿತ್ರಿತವಾಗಿದೆ. “ಭಾರಿ ಎನ್ನುವ ಭ್ರಾಂತಿ ನಮ್ಮ ಗುಲಾಮತನದ ಸಂಕೇತ” ಎನ್ನುವುದು ಸಿಲ್ವಿಯಾಳು ಅರಿಯದೆ ಟೆಡ್‌ ಹ್ಯೂಸ್‌ನನ್ನು ಉಗ್ರವಾಗಿ ಪ್ರೀತಿಸುತ್ತಿದ್ದಳೆನ್ನುವುದಕ್ಕೆ,

“ಅವನು ಎಲ್ಲಿರಲಿ ಎಂತಿರಲಿ
ಅವನ ಅಡಿಯಿಂದ ಮುಡಿಯವರೆಗೆ
ಅವನ ಸುತ್ತಮುತ್ತ ಅಕ್ಕಪಕ್ಕ
ಹದ್ದುಗಾವಲುಗಣ್ಣ!

“ಆಗೊಂದು ಕಡು ವಿಚಿತ್ರ ಕತೆಯಾಯಿತು
ರೇಡಿಯೋ ಬಿಬಿಸಿಯಲ್ಲಿ ಕವಿಯ ಸಂದರ್ಶನವಿತ್ತು;
ಸಂದರ್ಶಕಿ ಸುಂದರಿ; ಹೀಗಾಗಿ ಕವಯಿತ್ರಿಗೆ ಸಹಜ
ಸಿಡಿಮಿಡಿಯಿತ್ತು!”

‘ಆ ಕಳವಳ ಆ ಹೊತ್ತು ನಿಜವಾಯಿತು
ಆಸಿಯಾ ಎಂಬ ಸುಂದರಿ
ಸಿಲ್ವಿಯಾಳ ಅಡುಗೆ ಮನೆಗೆ ಅಡಿಯಿಟ್ಟಗಳಿಗೆ
ಸಿಲ್ವಿಯಾ ಮೈ ಉರಿವ ಒಲೆಯಾಗಿತ್ತು!’

ತನ್ನತನದೊಳು ಅನ್ಯತನವನ್ನು ಆಗುಮಾಡಿಕೊಳ್ಳದ್ದಕ್ಕಾಗಿ ಇಬ್ಬರ ನಡುವಿನ ಅನನ್ಯ ಸಂಬಂಧ ಅಳಿಸಿಬಿಡುತ್ತದೆ. ಈ ಮಾತಿಗೆ ಇಲ್ಲಿಯ ಇನ್ನೊಂದು ಪದ್ಯ ಸೂಕ್ತ ಅನ್ನಿಸುತ್ತದೆ.

‘ಪ್ರೀತಿಯೆಂದರೆ ತನ್ನ ಮೀರಿ ನೋಡುವ ಕಲೆಯೆಂಬ
ಸತ್ಯ ಅವಳಿಗೆ ನೆನಪಾಗಲಿಲ್ಲ; ಅವನಿಗೆ ಅರಿವಾಗಲಿಲ್ಲ’

ಜರ್ಮನಿ ಕವಿ ನೀಶೆ ಒಂದು ಕಡೆ ಹೀಗೆ ಹೇಳುತ್ತಾನೆ “ಒಬ್ಬರನ್ನೇ ಪ್ರೀತಿಸುವುದು ನಿಜಕ್ಕೂ ಮೃಗ ಪ್ರವೃತ್ತಿ, ಇನ್ನೊಬ್ಬರಿಗೆ ಮೋಸ ಮಾಡಿದಂತೆ” ಟೆಡ್‌ ಹ್ಯೂಸ್‌ ಮತ್ತು ಸಿಲ್ವಿಯಾ ಪ್ಲಾತ್‌ ಹೀಗೆ ಹೇಳದಿದ್ದರೂ ‘ಮೈಕ್‌ʼ, ‌‘ಡಿಕ್ʼ, ‘ಆಸಿಯಾʼ ಇಂಥವರ ಜೊತೆಗೆ ಪ್ರೇಮಕಾಮದ ಸಂಬಂಧಗಳನ್ನಿಟ್ಟುಕೊಂಡಿರುತ್ತಾರೆ. ಇದು ಸಿಮೊನ್‌ ದ ಬೋವಾ ಮತ್ತು ಸಾರ್ತ್ರ ನಡುವಿನ ಸಂಬಂಧವೂ ಈ ತರಹದ್ದು.

ಬೋವಾಳು ಅಮೇರಿಕಾದ ‘ನೆಲ್ಸನ್‌ ಎಲ್‌ಗ್ರಿನ್‌ನನ್ನು ಮತ್ತು ಪ್ರಾನ್ಸ್‌ನ ಜಿನ್‌ ಪಾಲ್ ಸಾರ್ತ್ರನನ್ನು ಪ್ರೀತಿಸಿದ್ದಳು. ಆದರೆ ಇವರಿಬ್ಬರೂ ಬೇರೆ ಚೆಲುವೆಯರ ಜೊತೆಗಿನ ಸಂಬಂಧವನ್ನು ಬೋವಾ ಒಮ್ಮಿಲೇ ಮೀರದಿದ್ದರೂ ಹಂತ ಹಂತವಾಗಿ ಮೀರುತ್ತಾಳೆ. ನೆಲ್ಸನ್‌ ಎಲ್‌ಗ್ರಿನ್‌ ಮತ್ತು ನತಾಲಿ ಸೊರೆಕೊನ್‌ ನಡುವಿನ ಸಂಬಂಧದ ಕುರಿತು ಬೋವಾಳ ಮುಕ್ತಾಯದ ಒಂದು ಮಾತು’ ಯಾರೇ ಅಗಿರಲಿ ಹಳೆಯ ಭಾವನೆಗಳು ಮರೆಯಲಾಗುವುದಿಲ್ಲ. ಆದರೆ ಪರಸ್ಪರರನ್ನು ನಿಯಂತ್ರಿಸುವುದಕ್ಕೆ ಅವಕಾಶವಿರುವುದಿಲ್ಲ.

ಯಾರು ನಿಮ್ಮವರಾಗುವುದಿಲ್ಲವೋ ಅವರನ್ನು ಪ್ರೀತಿಸುವುದು. ಯಾರು ಇನ್ನೊಬ್ಬರ ಪ್ರೇಮದಲ್ಲಿದ್ದಾರೆ, ಅವರನ್ನು ಬಯಸುವುದು. ಯಾರ ಜೀವನದಲ್ಲಿ ನನಗೆ ಮುಖ್ಯ ಸ್ಥಾನವಿಲ್ಲವೋ ಅವರಿಗಾಗಿ ಹಂಬಲಿಸುವುದು ವ್ಯರ್ಥವೆನಿಸಿದೆ. (ಸಿಮೊನ್‌ ದ ಬೋವಾ ಮಾತು ಕಥನ. ವಿಕ್ರಮ ವಿಸಾಜಿ) ಇಲ್ಲಿ ಸಿಲ್ವಿಯಾ ಪ್ಲಾತ್‌, ಬೋವಾಳ ಹಾದಿ ಹಿಡಿಯಲಿಲ್ಲ ಎನ್ನುವುದಕ್ಕೆ ನಿರೂಪಕರು ಮೂರು ಸಾಲಿನಲ್ಲಿ ಸೂಚ್ಯವಾಗಿ ಹೇಳುತ್ತಾರೆ.

‘ಮತ್ತೆ ಮತ್ತೆ ಸತ್ತರೂ ಮತ್ತೊಮ್ಮೆ ಜಿಗಿದು ಮೇಲೆದ್ದು ಬರುವ
ಲೋಕದ ಲಕ್ಷ ಲಕ್ಷ ಕವಯಿತ್ರಿಯರ ನಿತ್ಯ ಛಲದ ಹಾಡು
ಅವಳ ಹಾಡುಪಾಡಾಗಲಿಲ್ಲ’

ನಮ್ಮ ಹಳ್ಳಿ ಜನರಲ್ಲಿ ಗಾದೆ ಮಾತೊಂದಿದೆ. ಅದು ಇವತ್ತಿಗೂ ಚಾಲ್ತಿಯಲ್ಲಿರುವಂಥದ್ದು. ‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂದು. ಇದನ್ನೆ ಬೆಂದ್ರೆಯವರು ‘ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂದು ಹೇಳುತ್ತಾರೆ. ಹೇಳುವ ಸಂಗತಿ ಬೇರೆಯಾಗಿದ್ದರೂ ಲೋಕದ ಜೀವನ ಮೀಮಾಂಸೆಯ ಕುರಿತದ್ದಾಗಿದೆ. ಹ್ಯೂಸ್‌ ಮತ್ತು ಪ್ಲಾತ್‌ಳ ನಡುವಿನ ವಿರಸವನ್ನು ನಿರೂಪಕರು

‘ಆ ಪಶ್ಚಿಮದ ಗಂಡ ಹೆಂಡಿರ ಜಗಳ ಮುಗಿಯಲು
ಈ ಪೂರ್ವದ ಹಾಗೆ
ಉಂಡು ಮಲಗುವ ಕಾಲ ಕೂಡಿ ಬರಲಿಲ್ಲ!’

ಎರಡೇ ಸಾಲಿನಲ್ಲಿ ವಿಭಿನ್ನ ಲೋಕದ ಸಂಬಂಧಗಳು ಸೊಗಸಾಗಿ ಹಿಡಿದಿದ್ದಾರೆ.

ಸಿಲ್ವಿಯಾ ಪ್ಲಾತ್‌ ತನ್ನ ಕವಿತೆಗಳನ್ನು ಮುಂದಣದ ಅನಂತಕ್ಕೆ ಬಿಟ್ಟು ಮಂಡೆಯೂರಿ ಹೋಗುವಾಗಿನ ಸಾಲುಗಳು ರನ್ನನು ‘ಗದಾಯುದ್ಧʼದಲ್ಲಿ ದುರ್ಯೋಧನ ಸಾಯುವಾಗ ‘ಕುರುಕುಲಾರ್ಕನಮರ್ಕನಂ ಅಸ್ತಮೈದರ್’ ಎಂಬ ಶ್ಲೇಷಲಂಕಾರ ಬಳಸುತ್ತಾನೆ. ಅಂದ್ರೆ ಇಳಿ ಹೊತ್ತಿನಲ್ಲಿ ಮುಳುಗುವ ಸೂರ್ಯ, ಮತ್ತು ಕುರುಕುಲದ ದುರ್ಯೋಧನ ಒಮ್ಮಿಲೇ ಮುಳುಗಿದರೆಂದು. ಇಲ್ಲಿ ಕಾವ್ಯದ ಮೂಲಭೂತ ಲಕ್ಷಣಕ್ಕೆ ಹೋಲಿಕೆಯಾಗದಿದ್ದರೂ ಇಲ್ಲಿಯ ನಾಲ್ಕು ಸಾಲುಗಳು ರನ್ನನ ಮಾತು ಥಟ್ಟನೆ ನೆನಪಿಸುತ್ತವೆ.

‘ಆ ಮಂಡೆಯೂರಿದ ಭಂಗಿ
ಅವಳು ಹಿಂದೊಮ್ಮೆ ಹರೆಯದಲ್ಲಿ ಬಂಡೆದ್ದ
ಕ್ರಿಸ್ತದೇವನ ಎದುರು ಸಲ್ಲಿಸಿದ
ಕೊನೆಯ ಪ್ರಾರ್ಥನೆಯಾಗಿತ್ತೆ?’

‘ಕಣ್ಣೆದುರಿನ ಚಿಲ್ಲರೆ ವಾಸ್ತವ ಮೀರಿ ಕಾಣಬಲ್ಲವರು’, ಉಪಮೆ, ರೂಪಕ, ಪ್ರತಿಮೆ, ವಸ್ತುಗಳನ್ನು ಹಂಚಿ ಉಂಡು ಕಾವ್ಯದಲ್ಲಿ ಸಹ ಅಸ್ತಿತ್ವವ ಬೆಳಿಸಿಕೊಂಡ ಇವರು; ಜೊತೆಗಿರುವಾಗ ತಮ್ಮ ಒಳಗಣ್ಣನ್ನು ಯಾಕೆ ತೆರದುಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ. ಅದರೆ ಅವಳಾತ್ಮ ಹೇಳುವ ಮಾತು ಎಲ್ಲಾ ಕಾಲಕ್ಕೂ ನಿಲ್ಲವಂಥದ್ದು.

‘ಖ್ಯಾತಿ ಎಲ್ಲವನ್ನೂ ನಾಶ ಮಾಡುತ್ತದೆ.
ಎಷ್ಟೋ ವರ್ಷ ಕಳೆದ ಮೇಲೆ
ಅವನ ಕವಿತೆಗೆ ಆತ್ಮದ ಉತ್ತರ ಕೇಳಿತು’

ಇಂಥ ಲಯಬದ್ಧ ಕೃತಿಗಳ ಕುರಿತು ಮಾತನಾಡುವುದಕ್ಕಿಂತ ಇವುಗಳನ್ನು ಅನುಭವಿಸುವುದು ಹೆಚ್ಚು ಸೂಕ್ತ ಅನ್ನಿಸುತ್ತದೆ. ಇಲ್ಲಿಯ ಟೆಡ್‌ ಹ್ಯೂಸ್‌ ಮತ್ತು ಸಿಲ್ವಿಯಾ ಪ್ಲಾತ್ ಇಬ್ಬರಲ್ಲಿ ಒಬ್ಬರನ್ನು ಏರಿಸುವ ಮತ್ತು ಇನ್ನೊಬ್ಬರನ್ನು ಇಳಿಸುವ ಪ್ರಯತ್ನವಂತು ನಿರೂಪಕರಾಗಲಿ, ಮತ್ತು ಅವರನ್ನು ಆಗುಮಾಡಿಕೊಂಡ ಲೋಕವಾಗಲಿ ಮಾಡಿಲ್ಲವೆಂದು ಕೃತಿಯ ಕೊನೆ ಕೊನೆಗೆ ಹೀಗೆ ಘಟಿಸುತ್ತದೆ.

‘ಒಂದಲ್ಲ ಒಂದು ದಿನ
ಎಲ್ಲಿ ಹುಡುಕಿದರೂ ಒಂದೂ ಬಿರುಕಿರದ
ಜೋಡಿಪ್ರತಿಮೆ ಹಡೆವ ದಿವ್ಯ ಚಣಕ್ಕಾಗಿ
ಕಾಯುತ್ತ ಕಾಯುತ್ತ
ಈಗ ಈ ಗಳಿಗೆಯಲ್ಲೂ
ಈಡನ್‌ ತೋಟದ ಹೊರಗೆ
ಬಯಲಲ್ಲಿ ಬತ್ತಲಾಗಿ
ಕವಿಜೋಡಿಯ ನಿಂತಿದ್ದರೂ ನಿಂತಿರಬಹುದು…’

ಇದೊಂದು ನಮ್ಮ ಮುಂದಣದ ಅನಂತಕ್ಕೆ ನಿರಂತರ ಆಗುಮಾಡಿಕೊಂಡು ಕಲೆಕ್ಟಿವ್‌ ರೆಸ್ಪಾಂಜ್ಬಲಿಟಿಯನ್ನು ಹೆಚ್ಚಿಸಿಕೊಳ್ಳಲು ಇಂಬು ಮಾಡಿಕೊಡುವ ಕೃತಿ.

‍ಲೇಖಕರು Admin

December 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: