ಅತ್ತೆ, ನಿಮಗೊಂದು ಪ್ರಶ್ನೆ…

ಡಾ ಜ್ಯೋತಿ

‘ಅತ್ತೆ…ಒಂದು ಕ್ಷಣ ನಿಲ್ಲಿ. ನನ್ನದೊಂದು ಪ್ರಶ್ನೆಯಿದೆ. ದಯವಿಟ್ಟು ಉತ್ತರಿಸುವಿರಾ? ಈ ಪ್ರಶ್ನೆ, ನಾನು ನಿಮ್ಮ ಮನೆ ಹೊಸ್ತಿಲ ತುಳಿದಾಗಿನಿಂದ ಕಾಡುತ್ತಿದೆ. ಆದರೆ, ಇಷ್ಟು ವರ್ಷ ನನ್ನ ಮನಸ್ಸಿನಲ್ಲಿಯೇ ಉಳಿದುಹೋಯಿತು. ಎಷ್ಟೋ ಸಲ, ಕೇಳಬೇಕೆಂದು ಪ್ರಯತ್ನಿಸಿದೆ. ಆದರೆ ಕೇಳಲಾಗಲಿಲ್ಲ. ಕೇಳಿದರೆ, ಎಲ್ಲಿ ನಿಮ್ಮ ಹಿರಿತನದ ನಿರ್ಧಾರವನ್ನು ಪ್ರಶ್ನೆ ಮಾಡಿದೆಯೆಂದು ತಪ್ಪಾಗಿ ತಿಳಿದುಕೊಳ್ಳುವಿರೆಂದು, ಇಷ್ಟು ದಿನ ಹಾಗೆಯೇ ಸುಮ್ಮನಿದ್ದೆ. ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಅಂತೂ, ಆ ಕ್ಷಣಕ್ಕೆ ಮುಹೂರ್ತ ಈಗ ಬಂದುಬಿಟ್ಟಿದೆಯೆನಿಸುತ್ತದೆ. ಬಹುಶಃ, ಈ ಜನ್ಮದಲ್ಲಿ ಇದೇ  ನಮ್ಮಿಬ್ಬರ ನಡುವಿನ ಕೊನೆಯ ಮಾತುಕತೆಯೆಂದು ಕಾಣಿಸುತ್ತದೆ. ಇಂದು, ನೀವು, ದೃತರಾಷ್ಟ್ರ ಹಾಗು ಗಾಂಧಾರಿಯೊಂದಿಗೆ ಹಿಮಾಲಯದತ್ತ ವಾನಪ್ರಸ್ಥಕ್ಕೆ ಹೋಗುತ್ತೇನೆಂದು ನಿರ್ಧರಿಸಿಯಾಗಿದೆ. ನಾವೆಷ್ಟೇ ಕೇಳಿಕೊಂಡರೂ ನೀವು ಮನಸ್ಸು ಬದಲಾಯಿಸುತ್ತಿಲ್ಲ.’

‘ಆದ್ದರಿಂದ, ಅನ್ಯತಾ ಭಾವಿಸದೇ, ಸಾಧ್ಯವಾದರೆ ಮಾತ್ರ ಉತ್ತರಿಸಿ. ನಾನು ಯಾರಲ್ಲೂ ಕೇಳಲಾಗದೆ, ನನ್ನನ್ನೇ ನಾನು ಪ್ರಶ್ನಿಸಿ, ಉತ್ತರ ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡುತ್ತಾ ಬಂದೆ. ಆದರೆ, ಇಂದಿಗೂ ಏನೂ ಅರ್ಥವಾಗಿಲ್ಲ. ಸ್ವತಃ ನೀವೇ ಹೇಳಿದರೆ, ಸ್ವಲ್ಪ ನಿರಾಳತೆ ಸಿಗಬಹುದೇನೋ. ಅದಕ್ಕಾಗಿ ಈ ಕೋರಿಕೆ.’

‘ಅಂದು ನೀವು, ನಿಮ್ಮ ಐದು ಗಂಡು ಮಕ್ಕಳಲ್ಲಿ, ನನ್ನನ್ನು ಸಮನಾಗಿ ಹಂಚಿಕೊಳ್ಳಿಯೆಂದು ಹೇಳಿರುವುದು ಒಂದು ಪ್ರಮಾದವಾಗಿತ್ತೇ? ಅಥವಾ, ಉದ್ದೇಶಪೂರ್ವಕವೇ? ಒಂದುವೇಳೆ, ಪ್ರಮಾದವಾಗಿದ್ದರೆ, ನಿಮ್ಮ ಮಾತನ್ನು ನೀವೇ ತಿದ್ದಿಕೊಳ್ಳುತ್ತಿದ್ದೀರಿ. ಸ್ವಯಂವರದಲ್ಲಿ ನಾನು ವರಿಸಿದ್ದು ಕೇವಲ ಅರ್ಜುನನನ್ನು ಮಾತ್ರ.  ಹಾಗಾಗಿ, ನಾನು ನ್ಯಾಯಸಮ್ಮತವಾಗಿ ಅವನಿಗೆ ಸಲ್ಲಬೇಕಾದವಳು, ಉಳಿದವರಿಗಲ್ಲ. ನನ್ನದು ಈ ಹಿಂದೆ ಎಂದೂ ನಡೆಯದಿದ್ದ ಒಂದು ವಿಚಿತ್ರ ದಾಂಪತ್ಯ ಜೀವನ. ಆಮೇಲೂ ಕೂಡ, ಒಂದು ಹೆಣ್ಣು, ಒಂದಕ್ಕಿಂತ ಹೆಚ್ಚು ಗಂಡಂದಿರೊಂದಿಗೆ ಕೂಡುಕುಟುಂಬವಾಗಿ ಬಾಳಿದ್ದನ್ನು ನಾನಂತೂ ಕಂಡಿಲ್ಲ. ಆ ದಿನ, ನೀವಂದ ಒಂದು ಮಾತು, ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ನನ್ನ ಸಹಬಾಳ್ವೆಗೆ ಧರ್ಮ ಕರ್ಮದ ಶ್ರೀರಕ್ಷೆ ಇದೆಯೆನ್ನಬಹುದಾದರೂ, ವರ್ಷಕ್ಕೊಮ್ಮೆ ಸ್ಪರ್ಶಿಸುವ ಗಂಡು ದೇಹ ಬೇರೆ. ಯಾರೊಂದಿಗೂ ಗಟ್ಟಿಯಾಗದ ಯಾಂತ್ರಿಕ ಸಂಬಂಧ. ಹೆಸರಿಗೆ ಐದು ಜನ ಗಂಡಂದಿರು. ಆದರೆ, ಕಷ್ಟ ಬಂದಾಗ ಮಾತ್ರ ಅಣ್ಣ ಕೃಷ್ಣನೇ ಸಹಾಯಕ್ಕೆ ಬರಬೇಕು. ನನಗಿಂತಹ ಸ್ವೇಚ್ಚಾಚಾರದ, ನನ್ನದಲ್ಲದ ಬದುಕು ಬೇಕಾಗಿರಲಿಲ್ಲ. ಏತಕ್ಕಾಗಿ ಹೀಗೆ ಮಾಡಿದಿರಿ?’

ಕುಂತಿ, ಖಂಡಿತವಾಗಿಯೂ ಇದನ್ನು ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ಸಾವರಿಸಿಕೊಂಡು ಹಾಗೆಯೇ ಕುಳಿತುಕೊಂಡಳು.  ನಿಧಾನವಾಗಿ ಕೈಚಾಚಿ ದ್ರೌಪದಿಯ ಕೈಹಿಡಿದು ಎಳೆದು ತನ್ನ ಪಕ್ಕದಲ್ಲಿ ಕೂರಿಸಿಕೊಂಡಳು. ದ್ರೌಪದಿಯ ಕೈ ಕಂಪಿಸುತ್ತಿದ್ದರೆ, ಕುಂತಿಯ ಹೃದಯ ಬಡಿತದ ಸದ್ದು ಕೇಳಿಸುವಂತಿತ್ತು. ಕುಂತಿ, ಒಂದು ಕ್ಷಣ ದ್ರೌಪದಿಯನ್ನು ಹಾಗೆಯೇ ದಿಟ್ಟಿಸಿ ನೋಡಿದಳು. ಗಂಟಲು ಸರಿಮಾಡಿಕೊಳ್ಳುತ್ತಾ, 

“ಮಗಳೇ, ನಿನ್ನ ಪ್ರಶ್ನೆ ನನಗೆ ಬೇಸರ ತಂದಿಲ್ಲ. ನಾನೆಂದೋ ನಿನ್ನಲ್ಲಿ ಹೇಳಬಹುದಿತ್ತು. ನೀನು ನನ್ನ ಮಗಳಂತೆ. ಆದರೆ, ಯಾಕೋ, ನಿನ್ನಲ್ಲಿ ಅದನ್ನು ಚರ್ಚಿಸುವ ಪ್ರಮೇಯ ಬರಲಿಲ್ಲವಷ್ಟೆ. ಇಂದು ಎಲ್ಲಾ ಹೇಳುತ್ತೇನೆ. ಹೇಳಲೇ ಬೇಕಿದೆ.  ಹೇಳಿದರೆ, ನನ್ನ ಮನಸ್ಸಿಗೂ ನಿರಾಳ. ನಿನ್ನಲ್ಲಿ ಹೇಳದೆ ನಾನು ಹೇಗೆ ಜೀವನ ಅಂತ್ಯ ಗೊಳಿಸಲಿ? 

ಅಂದು, ಅರಗಿನ ಅರಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಸಾಯಲೆಂದು ದಾಯಾದಿಗಳು ಬೆಂಕಿ ಇಟ್ಟಾಗ, ಹೇಗೋ ತಪ್ಪಿಸಿಕೊಂಡ ನಾವು, ಭಿಕಾರಿಗಳಂತೆ ಊರೂರು ಸುತ್ತುತ್ತಾ, ಅಂತೂ ಏಕಚಕ್ರಾಪುರ ತಲುಪಿದೆವು. ಅಲ್ಲಿ ಭೀಮ ಬಕನನ್ನು ಕೊಂದು, ಊರವರನ್ನು ರಕ್ಷಿಸಿದ್ದಕ್ಕೆ, ಬಹಳ ಕಾಲದ ನಂತರ ನಮಗೆ ವಿಶೇಷ ಮರ್ಯಾದೆ ಸಿಕ್ಕಿತು. ನಮ್ಮ ಕಥೆ ಕೇಳಿದ ಅಲ್ಲಿನ ಬ್ರಾಹ್ಮಣರು, ಪಾಂಚಾಲದಲ್ಲಿ ನಡೆಯುತ್ತಿರುವ ನಿನ್ನ ಸ್ವಯಂವರದ ಕುರಿತು ಮಾಹಿತಿ ನೀಡಿದರು. ನಮಗೆ ಮರಳಿ ಗದ್ದುಗೆಯೇರಲು ಇದೊಂದು ಸುವರ್ಣಾವಕಾಶವೆಂದು ಅನ್ನಿಸಿತು.  ಮಕ್ಕಳನ್ನು ಪಾಂಚಾಲಕ್ಕೆ ಕಳುಹಿಸಿ ನಾನು ಮನೆಯಲ್ಲಿಯೇ ಉಳಿದುಕೊಂಡರೂ ಬಹಳ ಆತಂಕದಲ್ಲಿದ್ದೆ. ಪಂದ್ಯದ ನಿಯಮಾನುಸಾರ, ಗೆಲ್ಲುವ ಅರ್ಹತೆ ಇದ್ದುದು ಅರ್ಜುನನಿಗೆ ಮಾತ್ರ. ಆದರೆ, ಯುಧಿಷ್ಠಿರ ವಯಸ್ಸಿನಲ್ಲಿ ದೊಡ್ಡವನು. ಅವನಿಗೆ ಮದುವೆ ಮಾಡದೆ, ಮೂರನೇ ಮಗನ ಹೆಂಡತಿಯನ್ನು ಹೇಗೆ ಬರಮಾಡಿಕೊಳ್ಳಲಿ? ಎನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು.ಈ ಕಾರಣಕ್ಕಾಗಿಯೇ, ಹಿಂದೆ ನಡೆದ ಭೀಮ-ಹಿಡಿಂಬೆ ಮದುವೆಯನ್ನೇ ಊರ್ಜಿತಗೊಳಿಸಲಿಲ್ಲ. ಅವಳನ್ನು ಕಾಡಿನಲ್ಲಿಯೇ ಉಳಿದುಕೊಳ್ಳಲು ಹೇಳಿದೆವು.  ಜೊತೆಗೆ, ನಾವಿರುವ ಪರಿಸ್ಥಿತಿಯಲ್ಲಿ ಯಾವ ರಾಜಮನೆತನದವರು ತಾನೇ ಹೆಣ್ಣು ಕೊಡುತ್ತಾರೆ, ಯುಧಿಷ್ಠಿರನಿಗೆ? 

ಹೀಗೆ ದಿನವಿಡೀ ಯೋಚಿಸುತ್ತಾ ಕುಳಿತು ಮುಸ್ಸಂಜೆಯಾಗುತ್ತಿದ್ದಾಗ, ನಾರದ ನನ್ನ ಭೇಟಿ ಮಾಡಲು ಬಂದಿದ್ದ. ಪಂದ್ಯದಲ್ಲಿ ಅರ್ಜುನ ಗೆದ್ದಿದ್ದಾನೆ ಎಂದ. ನಾನು ನನ್ನ ಆತಂಕ ಅವನಲ್ಲಿ ಹಂಚಿಕೊಂಡೆ. ಅವನು ಇನ್ನೊಂದು ಹೊಸ ಸಮಸ್ಯೆಯನ್ನು ಮುಂದಿಟ್ಟ. ಅದೇನೆಂದರೆ, ನಿನ್ನ ಸೌಂದರ್ಯಕ್ಕೆ ನನ್ನ ಎಲ್ಲಾ ಮಕ್ಕಳು ಮನಸೋತು ಆಸೆ ಕಣ್ಣುಗಳಿಂದ ನಿನ್ನನ್ನೇ ನೋಡುತ್ತಿದ್ದರು ಎನ್ನುವುದನ್ನು ನಾರದ ಹೇಳಿದ. ಇದರ ಪರಿಣಾಮವೇನಾಗಬಹುದೆಂದು ಊಹಿಸಿದ ನಾರದ, ಇಷ್ಟುವರೆಗೆ ಅನ್ಯೋನ್ಯವಾಗಿದ್ದ ಮಕ್ಕಳಲ್ಲಿ ಮುಂದೆ ಜಟಾಪಟಿಯಾಗಬಹುದೆಂದ.  ಹೊರಗಿನ ದಾಯಾದಿಗಳಿಂದ ರಾಜ್ಯ ಮರಳಿ ಪಡೆಯುವುದರ ಬದಲಾಗಿ, ನಾವು ನಾವೇ ಹೊಡೆದಾಡಿಕೊಳ್ಳುವ ಹಾಗಾದರೆ, ಏನು ಮಾಡುವುದು?  ಇದಕ್ಕೆ ಏನಾದರೂ ಮಾಡಲೇ ಬೇಕೆಂದುಕೊಂಡೆ. 

ಹಿಡಿಂಬೆಯಂತೆ ನಿನ್ನ ನಡೆಸಿಕೊಳ್ಳಲಾಗದು. ನೀನು ನಮ್ಮ ಮನೆಗೆ ಸೊಸೆಯಾಗಿ ಸಿಕ್ಕಿರುವುದೇ ನಮ್ಮ ಅದ್ರಷ್ಟವೆನ್ನಬೇಕು. ಒಬ್ಬ ಸುಂದರ ರಾಜಕುಮಾರಿ, ರಾಜ್ಯವಿಲ್ಲದ ನಮಗೆ ಸಿಗುವುದೆಂದರೆ, ಊಹೆಗೆ ನಿಲುಕದ ಮಾತಾಗಿತ್ತು. ಆದರೆ, ನನ್ನ ಐದು ಮಕ್ಕಳು ನಿನ್ನ ಸೌಂದರ್ಯಕ್ಕೆ ಮಾರು ಹೋಗಿರುವುದು ಒಬ್ಬ ತಾಯಿಯಾಗಿ ನನಗೆ ಆತಂಕದ ವಿಷಯವಾಗಿತ್ತು. ಆಗ ನಾರದ ನನ್ನ ಗೊಂದಲಗಳಿಗೆ ಪರಿಹಾರ ಸೂಚಿಸಿದ- ನಿಯೋಗದ ಮೂಲಕ ಗಂಡನನ್ನು ಹೊರತುಪಡಿಸಿ ಬೇರೆಯವರಿಂದ ಮಕ್ಕಳನ್ನು ಪಡೆಯುವುದು ಶಾಸ್ತ್ರೋಕ್ತವಾದರೆ, ಒಂದು ಕುಟುಂಬವನ್ನು ಒಟ್ಟಾಗಿಡಲೂ, ಐದು ಗಂಡು ಮಕ್ಕಳು ಒಬ್ಬಳನ್ನೇ ವಿವಾಹವಾದರೆ ತಪ್ಪೇನು?  ಇದಕ್ಕೆ ಪೂರಕವಾಗಿ, ನಾರದ ನಿನ್ನ ಹಿಂದಿನ ಜನ್ಮ ವೃತ್ತಾಂತವನ್ನು ಹೇಳಿದ- ‘ಅಲ್ಲಿ, ನೀನು ಶಿವನನ್ನು ಧ್ಯಾನಿಸಿ, ಸಕಲ ಗುಣ ಸಂಪನ್ನನಾದ ಗಂಡ ಸಿಗಲಿ, ಅವನಲ್ಲಿ ಧರ್ಮನಿಷ್ಠೆ, ದೇಹ ಧಾರ್ಡ್ಯತೆ, ಬುದ್ದಿಮತ್ತೆ, ಹಾಗು ಸೌಂದರ್ಯ ಮೇಳೈಸಿರಬೇಕೆಂದು ಪ್ರಾರ್ಥಿಸಿದ್ದೆ. ಅದಕ್ಕೆ ಶಿವನು, ಇದೆಲ್ಲಾ ಗುಣಗಳು ಒಂದೇ ಗಂಡಲ್ಲಿ ಸಿಗಲು ಸಾಧ್ಯವಿಲ್ಲ, ಮುಂದಿನ ಜನ್ಮದಲ್ಲಿ ಈ ಗುಣಗಳನ್ನು ಹೊಂದಿದ ಐದು ಜನ ಗಂಡಂದಿರು ನಿನಗೆ ಪ್ರಾಪ್ತಿಯಾಗಲಿ.’ ಈ ಕಥೆ ಹೇಳಿ ನನ್ನ ತಳಮಳ ಸ್ವಲ್ಪ ಕಡಿಮೆಯಾಯಿತು. ಇದು ದೇವರ ಇಚ್ಛೆ ಕೂಡ ಹೌದು ಎನ್ನಿಸಿ ನಿರಾಳವಾಯಿತು. 

ಹಾಗಾಗಿ, ನಿನ್ನನ್ನು ಮನೆಗೆ ಕರೆತರುವಾಗ ನಾನು ಮಾನಸಿಕವಾಗಿ ಸಿದ್ಧಳಾಗಿದ್ದೆ. ನಿರ್ಧಾರ ಗಟ್ಟಿಯಾಗಿತ್ತು. ಮುಂದೆ ನಡೆದಿರುವುದೆಲ್ಲಾ ಪೂರ್ವ ನಿಯೋಜಿತ. ಅಂದು, ಯುಧಿಷ್ಠಿರನೋ, ಭೀಮನೊ ಅಥವಾ ಅರ್ಜುನನೋ, ಯಾರೇ ಏನೇ ಹೇಳಿದ್ದರೂ, ನನ್ನ ಸಿದ್ದ ಉತ್ತರ ಒಂದೇ ಆಗಿತ್ತು- ‘ಎಲ್ಲರೂ ಸಮನಾಗಿ ಹಂಚಿಕೊಳ್ಳಿ’. ಇದು ಪ್ರಮಾದವಲ್ಲ. ಒಂದು ವೇಳೆ ಪ್ರಮಾದವಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳುತ್ತಿದ್ದೆ. ಒಂದು ಹೆಣ್ಣಿನ ಜೀವನದ ಪ್ರಶ್ನೆ ಮುಖ್ಯವೇ ಹೊರತು, ಆಡಿದ ಮಾತಲ್ಲ. ಹೊರಗಿನ ವ್ಯಕ್ತಿಗಳ ಅಥವಾ ವ್ಯವಸ್ಥೆಯ ಇಷ್ಟದಂತೆ ಹೆಣ್ಣು ತನ್ನ ಮೈಯೊಡ್ಡಿಕೊಳ್ಳಬೇಕೆಂದರೆ, ಅಷ್ಟು ಸುಲಭದ ಮಾತಲ್ಲ. ಅದು ಏನೆಂದು ನನಗೆ ಚೆನ್ನಾಗಿ ಅನುಭವವಿದೆ, ಅಷ್ಟೇ ನೋವಿದೆ. 

ಇದೆಲ್ಲಾ ಲೋಕ ಒಪ್ಪಿಕೊಳ್ಳಲು ಹೇಳುವ ವ್ಯಾವಹಾರಿಕ ಮಾತಾದರೂ, ನನ್ನ ನಿರ್ಧಾರದ ಅಸಲಿ ಕಥೆಯೇ ಬೇರೆಯಿದೆ. ನಾನಂದು ಹೇಳಿದ ಮಾತು, ‘ಎಲ್ಲರೂ ಸಮನಾಗಿ ಹಂಚಿಕೊಳ್ಳಿ’ ಪುರುಷ ಕುಲದ ಸೋಗಲಾಡಿತನ ಬಯಲಿಗೆಳೆಯುವ ಪ್ರಯತ್ನವೆನ್ನಬಹುದು. ಒಂದು ರೀತಿಯಲ್ಲಿ, ಗಂಡು ಮಕ್ಕಳ ಪತ್ನಿ ನಿಷ್ಠೆ, ಹೊಂದಾಣಿಕೆ ಮನೋಭಾವ ಪರೀಕ್ಷೆ ಮಾಡಬೇಕಿತ್ತು. ಸಾಮಾನ್ಯವಾಗಿ, ಮದುವೆಯಾದ ಗಂಡುಗಳು, ಯಾವುದೇ ಮುಲಾಜಿಲ್ಲದೆ, ಸವತಿಯರ ತಂದು, ಹೊಂದಾಣಿಕೆ ಮಾಡಿಕೊಂಡು ಬಾಳಿ, ಇದೆ ಸತಿ ಧರ್ಮ ಎನ್ನುತ್ತಾರಲ್ಲವೇ? ಅದೇ, ತದ್ವಿರುದ್ದವಾದರೆ, ಅವರ ಅನುಭವ, ನಡತೆ ಹೇಗಿರುತ್ತದೆ, ಎನ್ನುವುದನ್ನು ನನ್ನ ಗಂಡು ಮಕ್ಕಳಲ್ಲಿ ಪರೀಕ್ಷಿಸಬೇಕಿತ್ತು. ನಿಜ ಹೇಳಬೇಕೆಂದರೆ, ಅವರೆಲ್ಲಾ ನನ್ನ ಪರೀಕ್ಷೆಯಲ್ಲಿ ಸೋತವರೇ. ನೀನೊಬ್ಬಳೇ ಗೆದ್ದಿರುವುದು. ನಿನಗೆ ನನ್ನ ಮಾತು ಕೇಳಿ ಆಶ್ಚರ್ಯವಾಗಬಹುದು. ಆದರೂ ಅದು ಸತ್ಯ. ಇಷ್ಟು ದಿನ ನಾನು ಯಾರಲ್ಲಿಯೂ ಹೇಳಿಕೊಳ್ಳಲಾಗದ ನನ್ನ ‘ಆತ್ಮ’ಕಥೆಯನ್ನು ನಿನ್ನಲ್ಲಿ ಹೇಳಿಕೊಳ್ಳುತ್ತಿದ್ದೇನೆ. ಸಾವಧಾನದಿಂದ ಕೇಳಿಸಿಕೊಂಡರೆ, ನಿನಗೆ ನಾನು ಯಾಕೆ ಹಾಗೆ ಮಾಡಿದೆಯೆಂದು ಅರ್ಥವಾಗಬಹುದು.  

ನಿನಗೆ ಗೊತ್ತಿರುವಂತೆ, ನನಗೆ ಎರಡು ತವರು ಮನೆ. ನಾನು ಯಾದವ ರಾಜ ಶೂರಸೇನನಿಗೆ ‘ಪ್ರೀತ’ ಳಾಗಿ ಹುಟ್ಟಿದರೆ, ಅವನ ಸ್ನೇಹಿತ ಮತ್ತು ಸಹೋದರ ಸಂಬಂಧಿ ಕುಂತಿ ಭೋಜನಿಗೆ ದತ್ತು ಮಗಳಾಗಿ ‘ಕುಂತಿ’ ಎನಿಸಿಕೊಂಡೆ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ನನಗಿಚ್ಛೆಯಂತೆ ಓಡಾಡುತ್ತಾ, ಬಾಲ್ಯ ಕಳೆದು ಹೋದುದೇ ಗೊತ್ತಾಗಲಿಲ್ಲ. ನನಗಾಗ ಹದಿಮೂರು ವರ್ಷ ವಯಸ್ಸು. ನಾನು ಕುಂತಿಭೋಜನ ಅರಮನೆಯಲ್ಲಿದ್ದೆ. ಒಂದು ದಿನ, ಮಹಾ ಕೋಪಿಷ್ಠರೆಂದೆ ಹೆಸರಾಗಿದ್ದ ದುರ್ವಾಸರು ತಮ್ಮ ಶಿಷ್ಯಂದಿರೊಂದಿಗೆ, ಒಂದು ತಿಂಗಳು ಅಲ್ಲಿ ಉಳಿಯುವುದಕ್ಕೆಂದು ಬಂದಿದ್ದರು. ಅಪ್ಪನಿಗೆ ಚಿಂತೆಯಾಗಿತ್ತು. ಅಕಸ್ಮಾತ್, ಸಾಧುಗಳು ಉಗ್ರಾವತಾರ ತಾಳಿ ಶಾಪವೇನಾದರೂ ಕೊಟ್ಟುಬಿಟ್ಟರೆ, ಏನು ಗತಿ? ನಾನು ಸಮಾಧಾನಿಸಿದೆ. 

‘ಅಪ್ಪ ಚಿಂತಿಸಬೇಡ. ಅವರ ಯೋಗಕ್ಷೇಮದ ಉಸ್ತುವಾರಿ ನಾನೇ ನೋಡಿಕೊಳ್ಳುತ್ತೇನೆ.’

ನಾನು ಒಂದು ತಿಂಗಳು ಅವರ ಸತ್ಕಾರ ಬಿಟ್ಟರೆ ಬೇರೇನೂ ಮಾಡಲಿಲ್ಲ. ಎಲ್ಲಿ, ಏನಾದರೂ ಹೆಚ್ಚು ಕಡಿಮೆಯಾಗುತ್ತದೋ, ಎನ್ನುವ ಭಯ ಮನದ ಮೂಲೆಯಲ್ಲಿ ಆವರಿಸಿತ್ತು.  ಅಂತೂ, ದುರ್ವಾಸರು ಹೊರಡುವ ದಿನ ಬಂತು. ಇದ್ದಷ್ಟೂ ದಿನ ಗಂಭೀರವಾಗಿದ್ದ ಮುಖ ಸಡಿಲಗೊಳಿಸಿಕೊಂಡು ನನ್ನ ನೋಡಿ ಮುಗುಳ್ನಕ್ಕರು. ಹತ್ತಿರ ಕರೆದು, 

“ಮಗು, ನಿನ್ನ ಸತ್ಕಾರಕ್ಕೆ ಮೆಚ್ಚಿ ನಾನು ನಿನಗೊಂದು ವರ ಕೊಡುತ್ತಿದ್ದೇನೆ. ಮುಂದೆ ಅಗತ್ಯ ಬಿದ್ದರೆ, ನಿನಗೆ ಇಷ್ಟಬಂದ ದೇವತೆಗಳನ್ನು ಮನದಲ್ಲಿ ನೆನೆದು ನಿನ್ನ ಬಳಿ ಕರೆಸಿಕೊಂಡು, ಅವರಿಂದ ಐದು ಮಂದಿ ಪ್ರಚಂಡ ಗಂಡುಮಕ್ಕಳನ್ನು ಪಡೆಯುವ ಭಾಗ್ಯ ನಿನ್ನದಾಗಲಿ.”

ಅಂದು, ನನಗೆ ದುರ್ವಾಸರು ಕೊಟ್ಟ ವರಗಳ ಗಂಭೀರತೆ ಅರ್ಥವಾಗಲಿಲ್ಲ. ಪ್ರಪಂಚದಲ್ಲಿ, ಯಾವ ಹೆಣ್ಣಿಗೆ ಈ ಯೋಗವಿದೆ? ಭೂಮಂಡಲವನ್ನು ಆಳುವ ದೇವಾಧಿದೇವತೆಗಳು ನನ್ನ ಅಧೀನದಲ್ಲಿ. ಯಾರನ್ನು ಬೇಕಾದರೂ ಕರೆಸಿಕೊಳ್ಳಬಹುದು. ಗಂಡಿನ ದೇಹಸ್ಪರ್ಶ ಅನುಭವಿಸದ ವಯಸ್ಸದು. ಒಂದು ರೀತಿಯಲ್ಲಿ ಯವ್ವನದ ಹುಡುಗಾಟದ ವಯಸ್ಸು. ಯಾಕೆ ನಾನು, ವರಗಳ ಪ್ರಭಾವವನ್ನು ಒಮ್ಮೆ ಪರೀಕ್ಷಿಸಬಾರದು? ಮನಸ್ಸಿನಲ್ಲಿ ಒಂದು ಸಣ್ಣ ಕುತೂಹಲ ಮೂಡಿತು. ದಿನಕಳೆದಂತೆ ಆ ಕುತೂಹಲ ಹೆಮ್ಮರವಾಗಿ, ನನ್ನ ನಿದ್ರೆ ಕಸಿಯಿತು. 

ಸರಿ, ಯಾರನ್ನು ನೆನೆಯಲಿ? -ಪ್ರತಿದಿನ ಪ್ರಪಂಚಕ್ಕೆ ಬೆಳಕು ಕೊಡುವ ಸೂರ್ಯನನ್ನೇ?  ಮನುಷ್ಯ ಜನ್ಮಕ್ಕೆ ನಿಷ್ಪಕ್ಷಪಾತಿಯಾಗಿ ಅಂತ್ಯ ಕಾಣಿಸುವ ಯಮಧರ್ಮನನ್ನೇ? ಜೀವಿಗಳಿಗೆ ಉಸಿರು ನೀಡುವ ವಾಯುದೇವನನ್ನೇ?   ದೇವತೆಗಳ ರಾಜ ಇಂದ್ರನನ್ನೇ? ಅಥವಾ ಸುಂದರ ಕಾಯದ ಅಶ್ವಿನಿ ದೇವತೆಗಳನ್ನೇ? ಯಾರನ್ನು ಆಹ್ವಾನಿಸಿ ವರಪರೀಕ್ಷೆ ಮಾಡಲಿ? ಬಹಳ ಆಲೋಚನೆಯ ನಂತರ ಹೊಳೆದ ಹೆಸರು ಸೂರ್ಯ. ಪ್ರಪಂಚವನ್ನೇ ಬೆಳಗಿಸುವ ಸೂರ್ಯ ನನಗೆ ಜೀವನ ಪ್ರಕಾಶಿಸನೆ?

ಒಂದು ದಿನ ಅಮ್ಮನಿಗೆ   ಹೇಳಿ ಅರಮನೆಯಿಂದ ವಾಯುವಿಹಾರದ ನೆಪದಲ್ಲಿ ಹೊರ ನಡೆದವಳು ಸನಿಹದ ಬೆಟ್ಟದ ಮೇಲೆ ನಿಂತು ಸೂರ್ಯನನ್ನು ಆಹ್ವಾನಿಸಿದೆ. ದೂರ್ವಾಸರು ಹೇಳಿದಂತೆ ತಕ್ಷಣ ಬಂದ. ನನಗೆ ನಂಬಲಾಗಲಿಲ್ಲ. ಕರೆದಾಗಿದೆ, ಆದರೆ, ಮುಂದೆ ಏನು ಮಾಡಬೇಕೆಂದು ತೋಚಲಿಲ್ಲ. ನೋಡಲೆನೋ ಕೆಂಪುಕೆಂಪಗೆ ಬಹಳ ಚೆನ್ನಾಗಿದ್ದ. ಅವನು ನನ್ನ ಹತ್ತಿರ ಬಂದಂತೆ ನಾನು ಬೆವರಿ ಹೋದೆ. ನಾನೇಕೆ ಕರೆದೆಯೆಂದು ಅವನಿಗೆ ಗೊತ್ತಿತ್ತು. ತನ್ನ ಕೆಲಸ ಮುಗಿಸಿ ಹೋಗುವ ಆತುರದಲ್ಲಿದ್ದಂತೆ ಕಂಡ. ಅಯ್ಯೋ, ಒಂದು ಕ್ಷಣ ನಾನೇನು ಮಾಡಿದೆಯೆಂದು ಅರಿವಾಗಿ ಭಯವಾಯಿತು. ನನಗೆ ಪ್ರೀತಿಯಲ್ಲಿ ಮಿಂದು, ಇದೆಲ್ಲಾ ನಿಧಾನವಾಗಿ ನಡೆಯಬೇಕೆಂದಿತ್ತು. ಆದರೆ, ಅವನು ಪಕ್ಕಾ ವೃತ್ತಿಪರ ನಿರ್ಭಾವುಕನಂತೆ ಕಂಡುಬಂದ. ನನಗೆ ಒಮ್ಮೆ ತಪ್ಪಿಸಿಕೊಂಡರೆ ಸಾಕಾಗಿತ್ತು. 

‘ನೀನು ಹೋಗಿಬಿಡು. ತಪ್ಪಾಗಿ ಕರೆಸಿಕೊಂಡೆ. ಕ್ಷಮಿಸು.’

ಆದರೆ, ಅವನು ಬಿಡಲಿಲ್ಲ. ಒಂದು ಸುಂದರ ಹೆಣ್ಣುಮಗಳು ತಾನಾಗಿಯೇ ಕರೆಸಿಕೊಂಡರೆ ಬಿಡುತ್ತಾನೆಯೇ?  ಸಿಡಿಮಿಡಿಗೊಂಡ. 

‘ನನ್ನ ಕೆಲಸದ ಮಧ್ಯೆ ಬಂದಿದ್ದೇನೆ. ಏನೂ ನಿನ್ನ ಹುಡುಗಾಟ?  ಇದೇನು ಮಕ್ಕಳಾಟಿಕೆಯೇ?’

ಒತ್ತಾಯವಾಗಿ ಮೈಮೇಲೆ ಎರಗಿದ.  ಮುಂದೆ ಏನು ನಡೆದು ಹೋಯಿತೋ ನನಗೆ ಗೊತ್ತಾಗಲಿಲ್ಲ. ಎಚ್ಚರವಾದರೆ, ಆಗಲೇ ಕತ್ತಲಾಗುತ್ತಾ ಬಂದಿತ್ತು. ನಾನು ಹಾಗೆಯೇ ಬಿದ್ದುಕೊಂಡಿದ್ದೆ. ಸ್ವಲ್ಪ ಸುಧಾರಿಸಿಕೊಂಡು, ಗಡಿಬಿಡಿಯಲ್ಲಿ ಅರಮನೆಗೆ ವಾಪಸ್ಸಾದೆ. ಅದನ್ನೊಂದು ಕೆಟ್ಟ ಘಟನೆಯೆಂದು ಮರೆಯಲು ಪ್ರಯತ್ನಿಸಿದೆ, ಅಂತಃಪುರದ ಹೊರಗೆ ಕಾಲಿಡದೆ.  ಹೊರಗೆ ಸೂರ್ಯ ದಿನಾಲೂ ಉದಯಿಸುತ್ತಿದ್ದ, ಅಸ್ತಂಗತನಾಗುತ್ತಿದ್ದ, ನನ್ನ ಇರುವಿಕೆಯನ್ನು ಸಂಪ್ಪೂರ್ಣವಾಗಿ ಮರೆತುಹೋದಂತೆ. ನಾನು ಗರ್ಭಿಣಿಯಾಗಿರುವುದು ಅಮ್ಮನ ಅರಿವಿಗೆ ಬಂತು. ಕೇಳಿದಳು, ನಾನು ಎಲ್ಲ ಹೇಳಿಕೊಂಡೆ. ಒಂದು ಕ್ಷಣ ಆತಂಕ ಅವಳ ಮುಖದಲ್ಲಿ ಕಾಣಿಸಿಕೊಂಡಿತು. ಆದರೆ, ಅಷ್ಟೇ ಸಾವಧಾನದಿಂದ ಕಾರ್ಯೋನ್ಮುಖಳಾದಳು. ಒಬ್ಬಳು ಪರಿಚಾರಿಕೆಯನ್ನು ಹೊರತುಪಡಿಸಿ, ಉಳಿದವರಾರು ನನ್ನ ಅಂತಃಪುರಕ್ಕೆ ಕಾಲಿಡದಂತೆ ನೋಡಿಕೊಂಡಳು. ಅಂತೂ, ಒಂದು ಸುಂದರ ಮಗು ಹುಟ್ಟಿದ. ಅಮ್ಮನಿಗೆ ಆತಂಕವಾಗಿತ್ತು, ಎಲ್ಲಿ ನಾನು ಅದರೊಂದಿಗೆ ನೆಂಟು ಬೆಳೆಸಿಕೊಳ್ಳುತ್ತೇನೆಂದು. ಹೇಗಾದರೂ ಮಾಡಿ ಗುಟ್ಟಾಗಿ ಇದನ್ನು ಸಾಗಹಾಕಬೇಕೆಂದು ಕೊಂಡಳು. ಒಂದು ದಿನ ಮುಂಜಾವು, ನಾನು, ಅವಳು ಹಾಗು ಆ ಸೇವಕಿ, ಗಂಗಾ ನದಿ ತೀರಕ್ಕೆ ಬಂದು, ಆ ಮಗುವನ್ನು ಒಂದು ಬುಟ್ಟಿಯಲ್ಲಿಟ್ಟು ತೇಲಿಬಿಡಲು ಬಂದಿದ್ದೆವು. ಹೊಟ್ಟೆಯಲ್ಲಿ ಸಂಕಟವಾಯಿತು. ಆ ಮಗುವಿನ ತಪ್ಪೇನಿದೆ? ಅದಕ್ಕೆ, ಯಾಕೆ ಈ ಶಿಕ್ಷೆ? ನನ್ನ ಹುಡುಕಾಟಕ್ಕೆ ಬಲಿಯಾಗುತ್ತಿರುವುದು ಆ ಮುಗ್ದ ಜೀವಿ. ಅಮ್ಮನಲ್ಲಿ ಒಂದು ಮಾತು ಕೇಳಿದೆ. 

‘ನಾನು ಸಾಕುವುದು ನಿನಗಿಷ್ಟವಿಲ್ಲದಿದ್ದರೆ, ಪರ್ವಾಗಿಲ್ಲ. ಅದರ ಅಪ್ಪನಲ್ಲಿ ಒಂದು ಮಾತು ಕೇಳಲೇ?’

‘ಅಯ್ಯೋ, ನೀನೊಬ್ಬಳು. ಅವನಿಗೆ ಕಾಳಜಿ ಇದ್ದಿದ್ದರೆ ಯಾವತ್ತೋ ಬಂದು, ನಿನ್ನ ಯೋಗಕ್ಷೇಮ ವಿಚಾರಿಸುತ್ತಿದ್ದ. ನಿನ್ನ ಹೆಂಡತಿಯಾಗಿ ಸ್ವೀಕರಿಸುತ್ತಿದ್ದ. ದಿನವೂ ಭೂಮಿಯನ್ನು ಪ್ರಕಾಶಿಸುತ್ತಿಲ್ಲವೇ? ಅದರಲ್ಲಿರುವ ನೀನು ಅವನಿಗೆ ಕಾಣಿಸುವುದಿಲ್ಲವೇ? ಭ್ರಮೆ ಸಾಕು. ಇದೆಲ್ಲಾ ದೇವತೆಗಳು ಮತ್ತು ಋಷಿಮುನಿಗಳ ನಡುವಿನ ಕೊಂಡು-ಕೊಳ್ಳುವ ವ್ಯವಹಾರವಷ್ಟೇ. ವರ ಕೊಡುವವನು ಒಬ್ಬನಾದರೆ, ಫಲ ಅನುಭವಿಸುವವನು ಇನ್ನೊಬ್ಬ. ಈ ವ್ಯೂಹದಲ್ಲಿ ಸಿಲುಕಿ ಬಲಿಯಾಗುವುದು ಮಾತ್ರ ನಾವು, ಹುಲು ಮನುಷ್ಯರು. ಸುಮ್ಮನೆ ಗಂಗೆಯಲ್ಲಿ ತೇಲಿಬಿಡು. ಅದರ ಹಣೆಬರಹದಂತೆ ಆಗುತ್ತದೆ.’

ಆದರೂ, ಮನಸ್ಸು ತಡೆಯದೆ, ಅಮ್ಮನಲ್ಲಿ ಹಠ ಹಿಡಿದು ಸೂರ್ಯನ  ಕರೆದೆ. ಸದ್ಯ, ಅವನು ಬಂದುದೇ ಹೆಚ್ಚು. ಸಾಮಾನ್ಯವಾಗಿ,ಈ ದೇವತೆಗಳು, ತಮ್ಮ ಕೆಲಸ ಮುಗಿದ ಮೇಲೆ ಹಿಂದೆ ತಿರುಗಿ ನೋಡುವವರಲ್ಲ. ಅವನ ಉತ್ತರ ಮಾತ್ರ ನಿರಾಶೆ ಹುಟ್ಟಿಸಿತು.

‘ದುರ್ವಾಸರು ಹೇಳಿದಷ್ಟೇ ಮಾಡುವುದು ನನ್ನ ಕೆಲಸ. ಇಲ್ಲಿ ಯಾವುದೇ ನಂಟಿನ ಪ್ರಶ್ನೆ ಹುಟ್ಟುವುದಿಲ್ಲ. ಇದನ್ನೆಲ್ಲಾ ಮುಂಚೆಯೇ ಯೋಚಿಸಬೇಕಿತ್ತು. ನಾನಾಗಿಯೇ ನಿನ್ನ ಸರಸಕ್ಕೆ ಕರೆದೆನೇ, ಈಗ ಜವಾಬ್ದಾರಿ ವಹಿಸಿಕೋ ಎನ್ನಲು? ಇನ್ನೆಂದೂ ನನ್ನ ಕರೆಯಬೇಡ.’

ಬೇರೆ ದಾರಿಯಿಲ್ಲದೆ ನಾನು ಮಗುವನ್ನು ನೀರಿನಲ್ಲಿ ತೇಲಿಬಿಟ್ಟೆ. ಆಮೇಲೆ ಅಮ್ಮ ಅದನ್ನು ಮರೆತೇ ಬಿಟ್ಟಳು, ನಾನು ಮಾತ್ರ ದಿನವೂ ನೆನೆದುಕೊಂಡು ಕೊರಗುತ್ತಿದ್ದೆ. ನನಗೆ ಈ ವರಗಳ ಸಹವಾಸವೆ ಇನ್ನು ಬೇಡವೆನಿಸಿತ್ತು. ಇನ್ನೆಂದೂ ಯಾರನ್ನೂ ಆಹ್ವಾನಿಸಬಾರದೆಂದುಕೊಂಡಿದ್ದೆ.

ಸ್ವಲ್ಪ ಕಾಲದ ನಂತರ, ಅಪ್ಪ ಸ್ವಯಂವರ ಏರ್ಪಡಿಸಿದ. ನಾನು ಕುರುವಂಶದ ರಾಜಕುಮಾರ ಪಾಂಡುವನ್ನು ಆಯ್ಕೆ ಮಾಡಿದೆ. ಹಿಂದಿನದ್ದೆಲ್ಲಾ ಮರೆತು ಇನ್ನು ನನ್ನ ಸಂಸಾರ ಆರಂಭಿಸಬೇಕೆಂದು ಕೊಂಡಿರುವಾಗ, ಮಾದ್ರಿ ನನ್ನ ಸವತಿಯಾಗಿ ಬಂದಳು. ಅಂದಿನಿಂದ ಗಂಡನನ್ನು ಅವಳೊಂದಿಗೆ ಹಂಚಿಕೊಳ್ಳಬೇಕಾಯಿತು. ವಿಪರ್ಯಾಸವೆಂದರೆ, ಮದುವೆಯ ಮೊದಲು ಮಗು ಹುಟ್ಟಿದರೆ, ಹೆಣ್ಣಿಗೆ ಭವಿಷ್ಯವಿಲ್ಲ.  ಆದರೆ, ಮದುವೆಯಾದ ಗಂಡ ನನ್ನ ಮುಂದೆ, ಬೇರೊಬ್ಬ ಹೆಣ್ಣನ್ನು ಪತ್ನಿಯಾಗಿ ತರಬಹುದು.

ಒಂದು ದಿನ, ಕಾಡಿಗೆ ಬೇಟೆಯಾಡುವುದಕ್ಕೆ ಹೋದ ಮಹಾರಾಜ, ಅಲ್ಲಿ ಜಿಂಕೆಗಳಂತೆ ಸ್ವಚ್ಚಂದವಾಗಿ ಪತ್ನಿಯೊಂದಿಗೆ ಸರಸವಾಡುತ್ತಿದ್ದ ಕಿಂಡಮ ಋಷಿಯನ್ನು ಆಕಸ್ಮಿಕವಾಗಿ ಗುರಿಯಾಗಿಸಿ ತನ್ನ ಹರಿತ ಬಾಣದಿಂದ ಸಾಯುವ ಸ್ಥಿತಿಗೆ ತಂದ. ಕೋಪದಿಂದ ಕಿಂಡಮ ಶಾಪಕೊಟ್ಟ.  

‘ನಾನು ಯಾವ ಸ್ಥಿತಿಯಲ್ಲಿರುವಾಗ ನೀನು ನನ್ನಸಾಯಿಸಿದೆಯೋ, ಹಾಗೆಯೇ, ಇನ್ನು ಮುಂದೆ ನೀನೇನಾದರೂ ಪತ್ನಿಯನ್ನು ಸೇರಲು ಹೋದರೆ, ನಿನ್ನ ಮರಣವಾಗಲಿ.’

ಅಲ್ಲಿಗೆ ನನ್ನ ದಾಂಪತ್ಯ ಮುಗಿಯಿತು. ಮಾನಸಿಕವಾಗಿ ಆಘಾತಗೊಂಡ ಪಾಂಡು, ಅಧಿಕಾರವನ್ನು ತನ್ನ ಅಣ್ಣನಿಗೆ ಹಸ್ತಾಂತರಿಸಿ, ಸನ್ಯಾಸ ಸ್ವೀಕರಿಸುವ ನಿರ್ಧರಿಸಿದ. ನಾನು ಹಾಗು ಮಾದ್ರಿ ಅವನೊಂದಿಗೆ ಋಷ್ಯಶೃಂಗಕ್ಕೆ ಹೋದೆವು. ಅಲ್ಲಿ ಸಾತ್ವಿಕ ಜೀವನ ನಡೆಸುತ್ತಾ ತಕ್ಕಮಟ್ಟಿಗೆ ನೆಮ್ಮದಿಯಿಂದ ಇದ್ದೆವು. ಆದರೆ, ಇದ್ದಕ್ಕಿದ್ದಂತೆ ಒಂದು ದಿನ ಪಾಂಡು ಚಿಂತಿತನಾದ- ರಾಜನಾದ ನನಗೆ ಮಕ್ಕಳಿಲ್ಲದಿದ್ದಲ್ಲಿ ವಂಶ ಮುಂದುವರಿಯುವುದು ಹೇಗೆ? 

ನನ್ನಲ್ಲಿ ನಿಯೋಗ ಮಾಡಿಕೊ, ಎಂದು ಹಠ ಹಿಡಿಯಲಾರಂಭಿಸಿದ. ನನಗೆ ಹಿಂದಿನದೆಲ್ಲಾ ನೆನಪಾಯಿತು. ವ್ಯವಸ್ಥೆಯ ಹೊರಗೆ ಮಕ್ಕಳಾದರೆ, ಅದಕ್ಕೆ ಸಮಾಜದಲ್ಲಿ ಬೆಲೆಯಿಲ್ಲ, ಮಕ್ಕಳು ಬೀದಿ ಪಾಲಾಗುತ್ತಾರೆ. ಆದರೆ, ವಿವಾಹದ ಪರಿಮಿತಿಯೊಳಗೆ ಎಲ್ಲ ರೀತಿಯ ಹೊಂದಾಣಿಕೆಗೆ ಅವಕಾಶವಿದೆ. ಎಂತಹ ಅಸಂಬದ್ಧ ಪರಿಕಲ್ಪನೆ!’

ನಿಜ ಹೇಳಬೇಕೆಂದರೆ, ನನಗೇನೂ ಮಕ್ಕಳು ಬೇಕಿರಲಿಲ್ಲ. ಹುಟ್ಟಿದ ಮಗುವನ್ನು ನಾನೇ ಕೈಯಾರೆ ನದಿಯಲ್ಲಿ ತೇಲಿಬಿಟ್ಟ ಸಂಕಟ ನನಗೊಬ್ಬಳಿಗೆ ಗೊತ್ತು. ಯಾರಲ್ಲೂ ಹೇಳಿಕೊಳ್ಳಲಾಗದೆ ಅಷ್ಟು ವರ್ಷ ನುಂಗಿಕೊಂಡಿದ್ದೆ. ಆದರೆ, ವ್ಯವಸ್ಥೆಯೊಳಗೆ ಮುಂದುವರಿಯಬೇಕೆಂದರೆ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ. ಪಾಂಡುವಿನಲ್ಲಿ, ದುರ್ವಾಸರು ಅನುಗ್ರಹಿಸಿದ ಉಳಿದಿರುವ ನಾಲ್ಕು ವರಗಳ ವಿಚಾರ ಹೇಳಿಕೊಂಡೆ (ಕಳೆದುಕೊಂಡ ಒಂದು ವರವನ್ನು ಬಿಟ್ಟು). ಅವನು ಬಹಳ ಸಂತೋಷಗೊಂಡ. ಅವನೇ ಪರಿಶೀಲಿಸಲಾರಂಭಿಸಿದ-ಯಾರನ್ನು ಕರೆಯಬಹುದು, ತನ್ನ ವಂಶ ಮುಂದುವರಿಸಲು, ಅನುಗ್ರಹಿಸಿಯೆಂದು? 

‘ಸೂರ್ಯನನ್ನು ಕರೆಯುವ. ಅವನು, ಕುರುಕುಲ ಪ್ರಕಾಶಿಸುವ ಮಗನನ್ನು ಖಂಡಿತ ದಯಪಾಲಿಸುತ್ತಾನೆ.’

ಒಂದು ಕ್ಷಣ ನನ್ನ ಮೈ ಬೆವೆತಿತು. ಇವನು ನನ್ನ ಪರೀಕ್ಷಿಸುತ್ತಿಲ್ಲ ತಾನೇ? ಸಾವರಿಸಿಕೊಂಡು ಹೇಳಿದೆ. 

‘ಬೇಡ. ಅವನ ಪ್ರಕಾಶವನ್ನು ನನಗೆ ಸಹಿಸಿಕೊಳ್ಳಲು ಕಷ್ಟವಾದೀತು.’

‘ಸರಿ ಬಿಡು. ಲೋಕದಲ್ಲಿ ಜನರ ಧರ್ಮ, ಕರ್ಮಗಳಿಗೆ ಅನುಸಾರವಾಗಿ ಸ್ವರ್ಗ ನರಕಕ್ಕೆ ಬಹಳ ನಿಷ್ಪಕ್ಷವಾಗಿ ಕಳುಹಿಸುವ ಯಮಧರ್ಮನನ್ನು ಆಹ್ವಾನಿಸೋಣ.’

‘ನಿಮ್ಮಿಷ್ಟ.’

ಯಮ ಬಂದ. ತನ್ನ ಕೆಲಸ ಮುಗಿಸಿ ಹೋದ.  ನಾನು ಗರ್ಭಿಣಿಯಾದಾಗ ಪಾಂಡು ಬಹಳ ಸಂತೋಷಗೊಂಡ. ಮಾದ್ರಿಯ ಮುಖ ಸ್ವಲ್ಪ ಕಳೆಗುಂದಿತ್ತು. ಯುಧಿಷ್ಠಿರ ಹುಟ್ಟಿದ. ಮೌನವಾಗಿದ್ದ ನಮ್ಮ ಬಾಳಿನಲ್ಲಿ ಮಾತು, ನಗುವಿನ ಮಂಟಪ ಕಟ್ಟಿಸಿದ. ಒಂದು ವರ್ಷದ ನಂತರ ಪಾಂಡುವಿಗೆ ಪುನಃ ದುರ್ವಾಸರ ವರದ ನೆನಪಾಗತೊಡಗಿತು. 

‘ಕುಂತಿ, ಯುಧಿಷ್ಠಿರ ಧರ್ಮನಿಷ್ಠನಾಗಿರುತ್ತಾನೆ, ನಿಜ. ಆದರೆ, ಒಂದು ರಾಜ್ಯವನ್ನು ಸುರಕ್ಷಿತವಾಗಿಡಲು ದೇಹ ಶಕ್ತಿಯೂ ಬೇಕಲ್ಲವೇ? ಅದಕ್ಕೆ ಸೂಕ್ತ ದೇವರೆಂದರೆ, ವಾಯುದೇವ. ಅವನಿಂದ ಒಂದು ಮಗನನ್ನು ಪಡೆಯೋಣ.’

‘ಸರಿ, ನಿಮ್ಮಿಷ್ಟ.’

ವಾಯುದೇವನಿಂದ ಭೀಮ ಹುಟ್ಟಿದ. ಪಾಂಡು ಮತ್ತಷ್ಟು ಹಿಗ್ಗಿದ. ಅದಾದ ಒಂದೂವರೆ ವರ್ಷದ ನಂತರ, ಪಾಂಡುವಿನ ಮನಸ್ಸಿನಲ್ಲಿ ಇನ್ನೊಂದು ಚಿಂತೆ ಕಾಡಲಾರಂಭಿಸಿತು. ಧರ್ಮ ಹಾಗು ಭುಜಬಲದೊಂದಿಗೆ ಬುದ್ದಿಮತ್ತೆಯೂ ಮುಖ್ಯವಲ್ಲವೇ? ಅದಕ್ಕೆ ನೆನಪಾಗುವ ಹೆಸರೊಂದೇ, ದೇವಲೋಕದ ಶಾಶ್ವತ ರಾಜ, ಯಾವ ಘಟಾನುಘಟಿ ರಾಕ್ಷಸರಿಗೂ ಕೂಡ ಪೀಠ ಅಲುಗಾಡಿಸಲಾಗದ ಇಂದ್ರದೇವ. ನನಗೆ, ಅವನನ್ನು ಕರೆಯಲು ಸೂಚಿಸಿದ.

ಪಾಂಡುವಿಗೆ ಸಾಮ್ರಾಜ್ಯ ಹಾಗು ಪಟ್ಟ ಗಟ್ಟಿಯಾಗುವುದೇ ಮುಖ್ಯವಾಗಿದ್ದರೆ, ನನಗೆ ಈ ಅನುಭವಗಳು ಮಾನಸಿಕ ಹಿಂಸೆ ನೀಡುತ್ತಿರುವುದು ಅವನ ಅರಿವಿಗೆ ಬರಲಿಲ್ಲ. ಬಹುಶಃ, ಅಣ್ಣ ಧ್ರತರಾಷ್ಟ್ರ ಮತ್ತು ಅವನಿಗೆ ಹುಟ್ಟುವ ಮಕ್ಕಳಿಗೆ ಪಟ್ಟ ಶಾಶ್ವತವಾಗಿ ಬಿಡುತ್ತೆ, ಅದನ್ನು ಹೇಗಾದರೂ ತಪ್ಪಿಸಬೇಕು, ಅದಕ್ಕಾಗಿ ಅಣ್ಣನಿಗೆ ಮಕ್ಕಳು ಹುಟ್ಟುವ ಮೊದಲೇ, ಸಕಲಗುಣ ಸಂಪನ್ನನಾಗಿರುವ ಮಕ್ಕಳನ್ನು ಆದಷ್ಟು ಬೇಗ ಪಡೆಯಬೇಕು, ಎನ್ನುವ ತರಾತುರಿ ಅವನ ಮಾತಿನಲ್ಲಿ ಅಡಕವಾಗಿತ್ತು. ಈ ಅಧಿಕಾರ ದಾಹ, ನಮ್ಮ ಕುಟುಂಬವನ್ನು ಯಾವ ರೀತಿ ಛಿದ್ರಗೊಳಿಸಿತು, ಸಂತೋಷ ಕಿತ್ತುಕೊಂಡಿತು, ಹೇಗೆ ನಾವೆಲ್ಲಾ ವೈರಿಗಳಂತೆ ಹೊಡೆದಾಡಿ ಸತ್ತೆವು, ಎನ್ನುವ ಕಥೆ ನಿನಗೆ ಹೇಗೂ ಗೊತ್ತೇ ಇದೆ. 

ಪಾಂಡುವಿನ ಆಸೆಯಂತೆ, ಇಂದ್ರ ಓಡೋಡಿ ಬಂದ. ತನ್ನ ಸುತ್ತಲೂ ಸದಾ ಸುಂದರ ಹೆಣ್ಣುಮಕ್ಕಳನ್ನೇ ಸೇವೆಗೆ ಇಟ್ಟುಕೊಂಡಿದ್ದರೂ, ಅವನ ಸ್ತ್ರಿ ವ್ಯಾಮೋಹ ಮಾತ್ರ ಹಾಗೆಯೇ ಉಳಿದಿದೆ. ಅವನಿಂದ ಅರ್ಜುನನನ್ನು ಪಡೆದೆ. ಇನ್ನೂ ಒಂದು ವರ ಉಳಿದಿತ್ತು. ಅದನ್ನು ಉಪಯೋಗಿಸಬಾರದೆಂದು ಕೊಂಡಿದ್ದೆ. 

ಆದರೆ, ಒಂದು ದಿನ ಪಾಂಡು ಮಾದ್ರಿಯ ಮನದ ಇಂಗಿತ ತಿಳಿಸಿದ. ಅವಳಿಗೂ ಮಕ್ಕಳು ಬೇಕಂತೆ. ನಿನ್ನ ವರವನ್ನು ಅವಳಿಗೆ ಕೊಟ್ಟು ಬಿಡು, ಅಂದ. ನಂಗೆ ಅಚ್ಚರಿ, ಬೇಸರ ಎರಡೂ ಒಟ್ಟಿಗೆ ಆಯಿತು. ನನ್ನಲ್ಲಿಯೇ ಕೇಳಬಹುದಿತ್ತಲ್ಲ? ಅದಕ್ಕೂ ಬಿಗುಮಾನ ಅವಳಿಗೆ. ಗಂಡನ ಗಮನವೆಲ್ಲಾ ಸದಾ ತನ್ನೆಡೆಗೆ ಇರಬೇಕೆಂದು ಹರಸಾಹಸ ಪಡುತ್ತಲೇ ಇದ್ದಳು, ಯಾವಾಗಲೂ ನನ್ನೊಂದಿಗೆ ಸ್ಪರ್ಧೆಗೆ ಇಳಿದವಳಂತೆ. ನಾನು ಅದನ್ನೆಲ್ಲಾ ಲೆಕ್ಕಿಸದೆ ಮೌನವಾಗಿದ್ದೆ. ನಿರಾಳವಾಗಿ ವರವನ್ನು ಅವಳಿಗೆ ಹಸ್ತಾಂತರಿಸಿದೆ. 

ಮಾದ್ರಿಯ ಯೋಚನೆ ನೆನೆಸಿಕೊಂಡರೆ, ಕೆಲವೊಮ್ಮೆ ನಗಬೇಕೋ, ಅಳಬೇಕೋ ತಿಳಿಯುವುದಿಲ್ಲ. ಅವಳಿಗೆ ಸಿಕ್ಕಿದ ಒಂದು ವರದ ಆಧಾರದಲ್ಲಿಯೇ ನನ್ನ ಜೊತೆ ಸ್ಪರ್ಧೆಗಿಳಿದು, ಹೆಚ್ಚು ಮಕ್ಕಳ ಪಡೆಯಬೇಕೆಂದು ಕೊಂಡಳು. ಅದಕ್ಕಾಗಿಯೇ, ಅವಳಿಗಳಾದ ಅಶ್ವಿನಿ ಕುಮಾರರನ್ನು ಬರಮಾಡಿಕೊಂಡಳು. ಅವಳ ಅಭಿಲಾಷೆಯಂತೆ, ಅವಳಿಗಳಾದ ನಕುಲ ಮತ್ತು ಸಹದೇವರು ಹುಟ್ಟಿದರು. 

ಇಷ್ಟಕ್ಕೆ ಮುಗಿಯಲಿಲ್ಲ, ನನ್ನ ಸಂಸಾರದ ಗೋಳು. ಮಾದ್ರಿಗೆ ತನ್ನ ಗಂಡನ ಗಮನಸೆಳೆಯುವ ಹುಡುಗಾಟಕ್ಕೆ, ನಾನೇನೋ ಸುಮ್ಮನಿದ್ದೆ. ಆದರೆ, ಅದೇ ಪಾಂಡುವಿನ ಮರಣಕ್ಕೆ ಕಾರಣವಾಯಿತು.  ಗಂಡನಿಗೆ ಶಾಪವಿದೆ, ಅದರಿಂದಾಗಿ ನಾವು ಬೇರೆಯವರಿಂದ ಮಕ್ಕಳನ್ನು ಪಡೆಯಬೇಕಾಯಿತು, ಎಂದು ಗೊತ್ತಿದ್ದರೂ, ಅವನನ್ನು ಕಾಮೋದ್ರೇಕಗೊಳಿಸಿ ಸಾಯಿಸಿಬಿಟ್ಟಳು. ಆಮೇಲೆ, ಅಷ್ಟೇ ಪಶ್ಚಾತಾಪಗೊಂಡು, ಅವಳ ಮಕ್ಕಳನ್ನು ನನ್ನ ಕೈಗೊಪ್ಪಿಸಿ, ಪಾಂಡುವಿನೊಂದಿಗೆ ಚಿತೆಯೇರಿದಳು. 

ನಾನೆಂದೂ, ನನ್ನ ಐವರು ಮಕ್ಕಳಲ್ಲಿ ಭೇದಭಾವ ಮಾಡಲಿಲ್ಲ. ಶಾಸ್ತ್ರೋಕ್ತವಾಗಿ ಕೈಹಿಡಿದ ಗಂಡನಿಲ್ಲದೆ, ಮಕ್ಕಳ ಅಸಲಿ ಅಪ್ಪಂದಿರ ಸಹಾಯ ಕೇಳಲಾಗದೆ, ಎಲ್ಲಾ ಜವಾಬ್ದಾರಿ ಮೈಮೇಲೆ ಎಳೆದುಕೊಂಡು ಮಕ್ಕಳನ್ನು ಬೆಳೆಸಿದೆ. ಆದರೆ, ಪ್ರತಿ ದಿನ ಒಬ್ಬೊಬ್ಬ ಮಕ್ಕಳ ಮುಖ ನೋಡುವಾಗಲೂ, ಅವರ ಅಪ್ಪಂದಿರ ನೆನಪಾಗಿ ಕಸಿವಿಸಿಯೆನಿಸುತ್ತಿತ್ತು. ಸುತ್ತಲಿನ ಸಮಾಜದಲ್ಲಿ ಯಾರೂ ಕೊಂಕು ಮಾತನಾಡಲಿಲ್ಲ, ನಿಜ. ಆದರೆ, ನನ್ನ ಮಾನಸಿಕ ತುಮುಲವನ್ನು ಯಾರೊಂದಿಗೂ ಹೇಳಿಕೊಳ್ಳಲಾಗಲಿಲ್ಲ. 

ನಿಜವಾಗಿಯೂ, ದುರ್ವಾಸರು ಕೊಟ್ಟಿದ್ದು ವರವೇ? ಶಾಪವೇ? ಮದುವೆಯಾಗಿಲ್ಲವೆಂಬ ಕಾರಣಕ್ಕೆ ಮೊದಲ ಮಗುವನ್ನು ನಿರ್ದಾಕ್ಷಿಣ್ಯವಾಗಿ ಗಂಗೆಗೆ ಸಮರ್ಪಿಸಿದೆ.  ನನ್ನ ಹುಡುಗಾಟಕ್ಕೆ ಅವನು ಜೀವನವಿಡೀ ಬೆಲೆತೆತ್ತ.  ನನ್ನೆದುರೇ ಬೆಳೆದ, ಎಲ್ಲಾ ಅವಮಾನ ಎದುರಿಸಿದ, ನನ್ನ ಮಕ್ಕಳೇ ಅವನನ್ನು ಅವಮಾನಿಸಿದರು. ಆದರೂ, ನನಗೆ ಏನನ್ನೂ ಮಾಡಲಾಗಲಿಲ್ಲ. ಅವನ ನೋವುಗಳಿಗೆ ನಾನು ಕೊನೆಯವರೆಗೂ ಸ್ಪಂದಿಸದೆ ಹೋದೆ. ಯಾವ ವ್ಯವಸ್ಥೆಗೆ ಅಂಜಿ ನನ್ನ ಮಗನನ್ನು ಕೈಬಿಟ್ಟೆನೋ, ಅದೇ ವ್ಯವಸ್ಥೆಯೊಳಗೆ, ನನಗೆ ಬೇರೆಯವರಿಂದ ಮೂರು ಮಕ್ಕಳಾದವು. ಅವರಿಗೆ ಎಲ್ಲಾ ರಾಜ ಮರ್ಯಾದೆ ಸಿಕ್ಕಿತು. ಹಾಗೆ ಯೋಚಿಸಿದರೆ, ಅವನಿಗೆ ಮತ್ತು ಇವರಿಗೆ ಏನೋ ವ್ಯತ್ಯಾಸವಿದೆ? ಎಲ್ಲರೂ, ಗಂಡನಿಗಲ್ಲದೆ ಬೇರೆಯವರಿಗೆ ಹುಟ್ಟಿದವರು. ನನ್ನ ಗರ್ಭದಲ್ಲಿಯೇ ಹುಟ್ಟಿದ ಮಕ್ಕಳಿಗೆ ಯಾಕೆ ವಿಭಿನ್ನ ಸ್ವೀಕಾರ?  ಹೆಣ್ಣಿನ ದೇಹದ ಹಕ್ಕಿನ ಮೇಲೆಯೇ ಯಾಕೆ ಈ ವ್ಯವಸ್ಥೆಗಳು ನಿರ್ಮಿತವಾಗಿವೆ? ಇಲ್ಲಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇ?

ಈ ಪುರುಷ ವ್ಯವಸ್ಥೆಯ ಅಹಂಕಾರಕ್ಕೆ ಮದ್ದರೆಯಬೇಕೆಂದೇ ನಾನು ನಿನ್ನ ವಿಷಯದಲ್ಲಿ ಹಾಗೆ ನಡೆದುಕೊಂಡದ್ದು. ಒಂದು ವೇಳೆ ನಿನಗೆ ಮಕ್ಕಳಾಗದಿದ್ದಲ್ಲಿ, ನಿನ್ನನ್ನೂ ನಿಯೋಗಕ್ಕೆ ತಳ್ಳುತ್ತಿದ್ದರು. ಹಾಗಾಗಬಾರದೆಂದು ಶಾಸ್ತ್ರೋಕ್ತವಾಗಿ ನನ್ನ ಐದು ಮಕ್ಕಳಿಂದ ನಿನಗೆ ತಾಳಿ ಕಟ್ಟಿಸಿದೆ. ಸಾಮಾನ್ಯವಾಗಿ, ಗಂಡು, ಒಂದೇ ಹೆಣ್ಣಿನೊಂದಿಗೆ ಸಂಸಾರ ಮಾಡಿದ ಉದಾಹರಣೆ ಬಹಳ ಅಪರೂಪ. ಆದರೆ, ಹೆಣ್ಣು ಮಾತ್ರ ಸವತಿಯರನ್ನು ನಗುಮುಖದೊಂದಿಗೆ ಸ್ವೀಕರಿಸಬೇಕು, ಸಹಿಸಿಕೊಳ್ಳಬೇಕು, ಮಕ್ಕಳಾಗದಿದ್ದಲ್ಲಿ ನಿಯೋಗದ ಪ್ರಸಾದ ಪಡೆಯಲೂ ಸಿದ್ಧಳಾಗಬೇಕು. ಏನೆ ಆದರೂ, ವ್ಯವಸ್ಥೆಯೊಳಗೆ ನಡೆಯಬೇಕು. 

ಒಂದು ವೇಳೆ, ಈ ವ್ಯವಸ್ಥೆಯನ್ನೇ ಬದಲಾಯಿಸಿ, ಒಂದು ಹೆಣ್ಣನ್ನು ಐದು ಗಂಡಂದಿರು ಹಂಚಿಕೊಳ್ಳಬೇಕಾದರೆ, ಗಂಡಿನ ಮನಸ್ಸು ಹೇಗೆ ಪ್ರತಿಕ್ರಿಯಿಸಬಹುದು? ಅದಕ್ಕೆ ನನ್ನ ಮಕ್ಕಳೇ ನಿದರ್ಶನ. ಐವರಲ್ಲಿ, ಯಾರು ನಿನಗೆ ನಿಯತ್ತಾಗಿರಲಿಲ್ಲ. ಐದು ವರ್ಷಗಳಿಗೊಂದು ಬಾರಿ, ಒಂದು ವರ್ಷ ನಿನ್ನೊಂದಿಗಿದ್ದರೆ, ಉಳಿದ ನಾಲ್ಕು ವರ್ಷಗಳನ್ನು ಬೇರೆ ಹೆಂಡಂದಿರೊಂದಿಗೆ ಅವರು ಕಳೆದರು. ಅವರಿಂದ ನಿಗ್ರಹ ಸಾಧ್ಯವಾಗಲಿಲ್ಲ. ಹೋಗಲಿ, ನಿನ್ನ ಕಷ್ಟಗಳಿಗೂ ಯಾರೂ ಸ್ಪಂದಿಸಲಿಲ್ಲ. ಎಲ್ಲದಕ್ಕೂ ನೀನು ಕೃಷ್ಣನ ಮೊರೆಹೋಗಬೇಕಾಯಿತು. 

ನಿನ್ನ ಮದುವೆ ಮಾದರಿ ಖಂಡಿತವಾಗಿಯೂ ಮುಂದುವರಿಯುವುದಿಲ್ಲ. ಅಷ್ಟು ವಿಶ್ವಾಸವಿದೆ ನನಗೆ ಈ ವ್ಯವಸ್ಥೆಯ ಹರಿಕಾರರ ಮೇಲೆ. ಏನೆ ಆದರೂ ಗಂಡಿನ ಅನುಕೂಲಕ್ಕೆ ತಕ್ಕಂತೆ ನಡೆಯಬೇಕು. ಆದರೂ ನಾನೊಂದು ಭಿನ್ನ ಮಾರ್ಗ ತೋರಿಸಿಕೊಟ್ಟೆ, ನಿನ್ನ ಮೂಲಕ,  ನನ್ನ ಜೀವನಾನುಭವದ ಮೂಲಕ. 

ನನ್ನ ಈ ಪ್ರಯೋಗದಿಂದ ನಿನ್ನ ಮನಸ್ಸು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನಿನಗೆ ಈ ಅನುಭವ ಆರಂಭದಲ್ಲಿ, ಕಷ್ಟವಾಗಿರಬಹುದು. ಆದರೂ, ಬಹಳ ಚೆನ್ನಾಗಿಯೇ ನಿಭಾಯಿಸಿ ನನ್ನ ಮನ ಗೆದ್ದೇ, ನೀನು. ಅರ್ಜುನನ ಮೇಲೆ ಸ್ವಲ್ಪ ಹೆಚ್ಚು ಅಕ್ಕರೆಯಿದ್ದರೂ, ಎಲ್ಲರನ್ನೂ ಸಹಿಸಿಕೊಂಡೆ, ಸಮಾನವಾಗಿ ಗೌರವಿಸಿದೆ.  ಇಷ್ಟೆಲ್ಲಾ ಹೇಳಿದ ಮೇಲೂ ನನ್ನ ಮೇಲೆ ಬೇಸರ ಉಳಿದಿದ್ದರೆ, ಕ್ಷಮೆಯಿರಲಿ.

ದ್ರೌಪದಿ ಮೌನವಾಗಿ ನಿಟ್ಟುಸಿರೆಳೆದುಕೊಂಡಳು. 

‘ಸರಿ. ನಾನಿನ್ನು ಹೊರಡುತ್ತೇನೆ.  ಹೊರಗೆ ಅಕ್ಕ, ಭಾವನವರು ನನಗಾಗಿ ಕಾಯುತ್ತಿರಬಹುದು. ನಿನಗೆ ಒಳ್ಳೆಯದಾಗಲಿ.’

ಕುಂತಿ, ದ್ರೌಪದಿಯ ತಲೆಯನ್ನು ನಿಧಾನವಾಗಿ ನೇವರಿಸಿ ಹೊರ ನಡೆದಳು.

‍ಲೇಖಕರು Admin

December 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: