ಶ್ರೀನಿವಾಸ ಪ್ರಭು ಅಂಕಣ- ಒಂದು ಕ್ಷಣ ನನ್ನನ್ನೇ ದುರುದುರು ನೋಡಿದರು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

32

‘ಅಂತಿಮ ಯಾತ್ರೆ’ ನಾಟಕ ಮುಗಿಸಿಕೊಂಡು ದೆಹಲಿಗೆ ಹೋಗುವಾಗ ಹತ್ತಾರು ಪುಸ್ತಕಗಳನ್ನು ಜೊತೆಯಲ್ಲಿ ಒಯ್ದಿದ್ದೆ. ಅವುಗಳಲ್ಲಿ ಒಂದು ಜಿ.ಎಸ್. ಸದಾಶಿವ ಅವರ ಕಥಾಸಂಕಲನ ‘ನಂ ಕೌಲಿ ಕಂಡ್ರ’. ಪ್ರಜಾವಾಣಿಯಲ್ಲೇ ಕೆಲಸ ಮಾಡುತ್ತಿದ್ದ ಸದಾಶಿವ ಅವರ ಪರಿಚಯ ಅದಾಗಲೇ YNK ಅವರ ಮುಖಾಂತರ ಆಗಿತ್ತು. ‘ನಂ ಕೌಲಿ ಕಂಡ್ರ’ ಸಂಕಲನದಲ್ಲಿದ್ದ ‘ಸಿಕ್ಕು’ ನೀಳ್ಗತೆ ವಿಶೇಷವಾಗಿ ನನ್ನ ಗಮನ ಸೆಳೆಯಿತು.

ಮೇಲ್ನೋಟಕ್ಕೆ ಒಂದು ರೋಚಕ ಕಥೆಯಂತೆ ಭಾಸವಾಗುವ ‘ಸಿಕ್ಕು’ ಕಥೆಯ ಒಡಲಲ್ಲಿ ಹುದುಗಿರುವ ಧ್ವನ್ಯಾತ್ಮಕ ಪದರಗಳು ಬೆಚ್ಚಿ ಬೀಳಿಸುವಂಥವು. ನಗರದಿಂದ ಹೊರಟು ಆಕಸ್ಮಿಕವಾಗಿ ಒಂದು ಊರಿಗೆ ಬಂದಿಳಿಯುವ ಕಥೆಯ ಕೇಂದ್ರ ಪಾತ್ರ ರಾಜಶೇಖರನಿಗೆ ಆ ಊರಿನಿಂದ ಹೊರಬರುವ ದಾರಿಗಳೇ ಕಾಣದಾಗಿ ಬಿಡುತ್ತವೆ.. ಅದೇ ಊರಿನ ಪುಟ್ಟ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಪುಟ್ಟ ಹುಡುಗ ಮಾಣಿಯು ಸಹಾ ಎಲ್ಲ ಬಗೆಯ ಶೋಷಣೆಗಳಿಗೆ ಪಕ್ಕಾಗಿ ಹೊರಬರುವ ದಾರಿಯೇ ಕಾಣದೆ ನರಳುತ್ತಿದ್ದಾನೆ…

“ಈ ರೈಲು ಮುಂದಕ್ಕೆಲ್ಲೂ ಹೋಗೋಲ್ಲ..ಇದೇ ಕೊನೇ ನಿಲ್ದಾಣ”, “ಇಲ್ಲಿಗೆ ಬರೋದು ನಿಮಗೆ ಸೇರಿದ್ದು..ಹೋಗೋದು ನಮಗೆ ಸೇರಿದ್ದು”…ಕಥೆಯಲ್ಲಿ ಬರುವ ಇಂಥ ಮಾತುಗಳು ಮಾಣಿ—ರಾಜಶೇಖರ ಸಿಲುಕಿಕೊಂಡಿರುವ ಸಿಕ್ಕುಸಿಕ್ಕಿನ, ಕಗ್ಗಂಟಿನ ಬಲೆಯ ವಾತಾವರಣವನ್ನು ಅತ್ಯಂತ ಸಮರ್ಥವಾಗಿ—ಧ್ವನ್ಯಾತ್ಮಕವಾಗಿ ಸೃಷ್ಟಿಸಿಬಿಡುತ್ತವೆ.

ಉಸಿರುಗಟ್ಟಿಸುವ ವಾತಾವರಣದಲ್ಲಿ ಬಿಡುಗಡೆಯ ಮಾರ್ಗವೇ ಕಾಣದೇ ಪರಿತಪಿಸುವ ಅಮಾಯಕ ಮಾಣಿ—ರಾಜಶೇಖರರ ಅಸಹಾಯಕ ಸ್ಥಿತಿ ತಲ್ಲಣಗೊಳಿಸಿ ಬಿಡುತ್ತದೆ. ಫ್ರೆಂಚ್ ಲೇಖಕ ಫ್ರಾಂನ್ಜ಼್ ಕಾಫ್ಕಾ ನ ‘ದಿ ಟ್ರಯಲ್ ‘ಕಾದಂಬರಿಯನ್ನು ಒಮ್ಮೊಮ್ಮೆ ನೆನಪಿಸುವಂತಿದ್ದರೂ ‘ಸಿಕ್ಕು’ ಕಥೆ ಬದುಕಿನ ಅಸಂಗತತೆಗಳನ್ನು ಸೂಕ್ಷ್ಮವಾಗಿ ಧ್ವನಿಸುತ್ತಲೇ ಮತ್ತೊಂದು ಮುಖ್ಯ ಧ್ವನಿ ಪಾತಳಿಯಲ್ಲೂ ನಮ್ಮನ್ನು ತಟ್ಟುತ್ತದೆ: ಅದು, ನಮ್ಮ ದೇಶದ ಆಧುನಿಕ ಇತಿಹಾಸದ ಒಂದು ಕರಾಳ ಅಧ್ಯಾಯವಾದ ‘ತುರ್ತು ಪರಿಸ್ಥಿತಿ’ಯ ತಲ್ಲಣದ ದಿನಗಳು…

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿ, ಭಯಭೀತ ವಾತಾವರಣವೇ ಸರ್ವವ್ಯಾಪಿಯಾಗಿ ಇಡೀ ದೇಶವೇ ಒಂದು ಜೈಲಿನಂತಾಗಿ ಹೋಗಿದ್ದ ಶಾಪಗ್ರಸ್ತ ದಿನಗಳು. ‘ಸಿಕ್ಕು’ ಕಥೆಯಲ್ಲಿ ಕಮಲಿ ಎಂಬೊಂದು ಪಾತ್ರ ಬರುತ್ತದೆ. ಕೇವಲ ಇತರ ಪಾತ್ರಗಳ ಉಲ್ಲೇಖಗಳಲ್ಲೇ ಪ್ರತ್ಯಕ್ಷವಾಗುತ್ತಾ ಕಥೆಯ ಕ್ರಿಯೆಗೆ ಚಾಲನೆಯನ್ನೊದಗಿಸುವ ಈ ಕಮಲಿಯ ಅಮೂರ್ತ ಪಾತ್ರದ ಸಾವು ಯಾ ಕೊಲೆ, ಎಲ್ಲ ಅಸ್ಮಿತೆಗಳ—ಎಲ್ಲ ಸ್ವಾತಂತ್ರ್ಯದ ದಮನದ ಪ್ರತೀಕವಾಗಿ ನಿಂತುಬಿಡುತ್ತದೆ.

ಹೀಗೆ ಒಮ್ಮೊಮ್ಮೆ ಓದಿದಾಗಲೂ ಒಂದೊಂದು ಬಗೆಯಲ್ಲಿ ತೆರೆದುಕೊಳ್ಳುತ್ತಾ ಹೋದ ಈ ಕಥೆ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿತು. ಇದ್ದಕ್ಕಿದ್ದಂತೆ ‘ಇದನ್ನು ಯಾಕೆ ಒಂದು ಕಾಡುವ ನಾಟಕವಾಗಿ ರಂಗದ ಮೇಲೆ ತರಬಾರದು’ ಎಂಬ ಭಾವನೆ ಮೂಡಿಬಿಟ್ಟಿತು. ಹಾಗನ್ನಿಸಿದ ಮರುಕ್ಷಣವೇ ಕಾರ್ಯೋನ್ಮುಖನಾದೆ. ಅಂದೇ YNK ಅವರಿಗೆ ಫೋನ್ ಮಾಡಿ ನನಗನ್ನಿಸಿದ್ದನ್ನು ಹೇಳಿ ಅವರ ಸಲಹೆಯನ್ನು ಕೇಳಿದೆ. “ಸಿಕ್ಕು ಒಂದು ಅದ್ಭುತವಾದ ಕಥೆ.. ಕಥೆ ತೆರೆದುಕೊಳ್ಳುವ ಕ್ರಮದಲ್ಲಿಯೇ ಅನೇಕ ನಾಟಕೀಯ ಅಂಶಗಳು ಅಂತರ್ಗತವಾಗಿವೆ..ಒಳ್ಳೆಯ ನಾಟಕವಾಗುವ ಎಲ್ಲಾ ಸಾಧ್ಯತೆಗಳೂ ಈ ಕಥೆಯಲ್ಲಿವೆ.. ಮಾಡಿ” ಎಂದರು YNK. ಸರಿ, ಶುರುವಾಗಿಯೇ ಹೋಯಿತು ‘ಸಿಕ್ಕು’ ಕಥೆಯ ನಾಟಕ ರೂಪಾಂತರದ ಪ್ರಕ್ರಿಯೆ. ಸದಾಶಿವ, YNK, ರಿಚರ್ಡ್ ಜಿ ಲೂಯಿಸ್ ರೊಂದಿಗೆ ಒಂದಷ್ಟು ಚರ್ಚಿಸಿ ನಾಟಕರೂಪವನ್ನು ಸಿದ್ಧ ಪಡಿಸಿದೆ.

ಮತ್ತೊಂದು ರಜೆಯ ಸಂದರ್ಭಕ್ಕೆ ಬೆಂಗಳೂರಿಗೆ ಬಂದಾಗ ‘ಸಿಕ್ಕು’ ನಾಟಕವನ್ನು ರಂಗದ ಮೇಲೆ ತರಲು ಸಿದ್ಧತೆ ನಡೆಸಿದೆ. ‘ಸಿಕ್ಕು’ ನಾಟಕವನ್ನು ಪ್ರಪ್ರಥಮವಾಗಿ ನಾವು ಪ್ರದರ್ಶಿಸಿದ್ದು ಗಾಯನಸಮಾಜದಲ್ಲಿ. ರವೀಂದ್ರಕಲಾಕ್ಷೇತ್ರ ಆ ಸಮಯದಲ್ಲಿ ರಿಪೇರಿಗಾಗಿ ಮುಚ್ಚಿದ್ದರಿಂದ ಬೇರೆ ರಂಗಮಂದಿರವನ್ನು ಆರಿಸಿಕೊಳ್ಳುವ ಅನಿವಾರ್ಯತೆ ಇತ್ತು. ಗಾಯನಸಮಾಜವನ್ನು ನೋಡಲು ಹೋದ ನನಗೆ ಅಲ್ಲಿಯ ರಂಗಸ್ಥಳಕ್ಕಿಂತ ಸಭಾಂಗಣವೇ ‘ಸಿಕ್ಕು’ ನಾಟಕ ಪ್ರದರ್ಶನಕ್ಕೆ ಹೆಚ್ಚು ಸೂಕ್ತ ಸ್ಥಳ ಎನ್ನಿಸಿಬಿಟ್ಟಿತು! ಸಭಾಂಗಣದಲ್ಲಿ ಹಿಂಭಾಗದಲ್ಲಿ ಎರಡು ದೊಡ್ಡ ಕಂಬಗಳಿದ್ದವು. ಮೆಟ್ಟಿಲು ಮೆಟ್ಟಿಲಾಗಿ ಸಿಮೆಂಟ್ ಹಾಸುಗಳಿದ್ದ ಸಭಾಂಗಣದಲ್ಲಿ ಆಗ ಸ್ಥಿರವಾದ ಆಸನ ವ್ಯವಸ್ಥೆ ಇರಲಿಲ್ಲ.

ನಾನು ಆ ಕಂಬಗಳ ನಡುವಣ ಆವರಣವನ್ನೇ ಮುಖ್ಯ ರಂಗಸ್ಥಳವಾಗಿ ಮಾಡಿಕೊಂಡು, ಸುತ್ತ ಇದ್ದ ಸಿಮೆಂಟ್ ಹಾಸಿನ ಮೆಟ್ಟಿಲುಗಳ ಮೇಲೆ ಪ್ರೇಕ್ಷಕರು ಕುಳಿತು ನಾಟಕ ನೋಡುವಂತೆ ವ್ಯವಸ್ಥೆ ಮಾಡಿದೆ. ಕಂಬಗಳ ಸುತ್ತ ಕಪ್ಪುಪರದೆಯ ಆವರಣವನ್ನು ಸೃಷ್ಟಿಸಿ ಬೆಳಕಿನ ವರ್ತುಲಗಳಲ್ಲಿ ನಾಟಕದ ಕ್ರಿಯೆ ಜರುಗುತ್ತಾ ಹೋಗುವಂತೆ ವಿನ್ಯಾಸವನ್ನು ಸಿದ್ಧಪಡಿಸಿದೆ.

ಬೆಳಕಿನ ವರ್ತುಲಗಳಲ್ಲಿ ಪಾತ್ರಗಳನ್ನು ತುರುಕಿದಂತೆ ಭಾಸವಾಗುತ್ತಿದ್ದುದು ಉಸಿರುಗಟ್ಟಿಸುವ ವಾತಾವರಣ ನಿರ್ಮಿತಿಗೆ ಸಮರ್ಥವಾಗಿ ನೆರವಾಗುತ್ತಿತ್ತು. ರಂಗದ ಮೇಲೆ ಮೂರು ಬದಿಗೆ ಮೂರು ಟೇಬಲ್ ಗಳು: ಒಂದು,ಪೋಲೀಸ್ ಸ್ಟೇಷನ್ ಆವರಣ.. ಆ ಟೇಬಲ್ ಮುಂಭಾಗಕ್ಕೆ ‘we respect those who respect law’ಎಂಬ ಪೋಸ್ಟರ್ ; ಮತ್ತೊಂದು ಬದಿಗಿದ್ದ ಟೇಬಲ್ ಗೆ ‘ನ್ಯೂ ರಾಮಕ್ರೀಷ್ಣ ಹೊಟೇಲ’ ಎಂಬ ಪೋಸ್ಟರ್; ಮತ್ತೊಂದು ಟೇಬಲ್ ಗೆ ‘ಮುಂದೆ ದಾರಿ ಇಲ್ಲ’ ಎಂದು ಸೂಚಿಸಲು ರೈಲ್ವೇ ಹಳಿಗಳ ತುಟ್ಟತುದಿಯಲ್ಲಿರುವ ಸೂಚನಾ ಫಲಕದ ಪೋಸ್ಟರ್… ಕಥೆಯ ಧ್ವನಿಯನ್ನು ಈ ಸರಳ ರಂಗಸಜ್ಜಿಕೆ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತದೆ ಎಂದು ಭರವಸೆ ಮೂಡಿತು.

ಇನ್ನು ಪಾತ್ರವರ್ಗ.. ರಾಜಶೇಖರನ ಪಾತ್ರಕ್ಕೆ ಸೂಕ್ತ ಕಲಾವಿದನ ಹುಡುಕಾಟ ಆರಂಭವಾಯಿತು. ಒಂದೆರಡು ವರ್ಷಗಳ ಹಿಂದೆ ಕಲಾಕ್ಷೇತ್ರದಲ್ಲಿ ನಾನು ‘ಮಳೆ ನಿಲ್ಲುವವರೆಗೆ’ ಎಂಬ ನಾಟಕ ನೋಡಿದ್ದೆ. ಆ ನಾಟಕದ ಮುಖ್ಯಪಾತ್ರಧಾರಿಯ ಮನೋಜ್ಞ ಅಭಿನಯ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು. ರಾಜಶೇಖರನ ಪಾತ್ರಕ್ಕೆ ಆ ಕಲಾವಿದ ಸೂಕ್ತ ಆಯ್ಕೆ ಅನ್ನಿಸಿತು. ಆದರೆ ನನಗೆ ಅವರ ಹೆಸರು ನೆನಪಿಲ್ಲ! ಕೊನೆಗೆ ರಂಗಭೂಮಿ ಗೆಳೆಯರ ನೆರವಿನಿಂದ ಆ ಕಲಾವಿದನನ್ನು ಪತ್ತೆ ಮಾಡಿಯೇ ಬಿಟ್ಟೆವು..

ಆ ಅದ್ಭುತ ಕಲಾವಿದನೇ ಎಲ್.ಎಸ್.ಸುಧೀಂದ್ರ! ದೊಡ್ಡ ಸರಕಾರಿ ಹುದ್ದೆಯಲ್ಲಿ ಜವಾಬ್ದಾರಿಯುತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರೂ ರಂಗಭೂಮಿ—ನಾಟಕ ಎಂದೊಡನೆ ಓಡೋಡಿ ಬರುತ್ತಿದ್ದ ಈ ಸುಧೀಂದ್ರ ಒಬ್ಬ ಅಪರೂಪದ ಕಲಾವಿದ. ಗಂಭೀರ ಪಾತ್ರಗಳನ್ನೂ ಹಾಸ್ಯಪ್ರಧಾನ ಪಾತ್ರಗಳನ್ನೂಅಷ್ಟೇ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ಈ ಸುಧೀ ನನ್ನ ಮುಂದಿನ ಅನೇಕ ನಾಟಕಗಳ ಅವಿಭಾಜ್ಯ ಅಂಗವೇ ಆಗಿಹೋಗಿದ್ದ. ಅವನು ನಮ್ಮನ್ನಗಲಿ ಹೋಗಿ ವರ್ಷಗಳೇ ಕಳೆದುಹೋಗಿದ್ದರೂ, ರಂಗಭೂಮಿ ಗೆಳೆಯರು ಸುಧಿಯ ಅಪರೂಪದ ಹಾಸ್ಯಪ್ರಜ್ಞೆಯನ್ನು, ಕಚಗುಳಿ ಇಡುತ್ತಿದ್ದ ಅವನ ಹಾಸ್ಯೋಕ್ತಿಗಳನ್ನು ಇಂದಿಗೂ ನೆನೆಸಿಕೊಳ್ಳುತ್ತಾರೆ.

ಮತ್ತೊಂದು ಕೇಂದ್ರಪಾತ್ರವಾದ ಮಾಣಿಯ ಪಾತ್ರವನ್ನು ನಿರ್ವಹಿಸಿದ್ದು ರಘುನಂದನ್. ಮುಗ್ಧತೆಯೇ ಮೈವೆತ್ತವನಂತೆ ಕಾಣುತ್ತಿದ್ದ ರಘುನಂದನ್ ಮಾಣಿಯ ಪಾತ್ರಕ್ಕಾಗಿಯೇ ಹುಟ್ಟಿಬಂದವನಂತಿದ್ದ! ಹೋಟಲ್ ಸಾವ್ಕಾರನಾಗಿ ರಿಚರ್ಡ್, ಡಾಕ್ಟರ್ ಆಗಿ ಹೂಗೊಪ್ಪಲು ಕೃಷ್ಣಮೂರ್ತಿ, ಶೆಟ್ಟರಾಗಿ ಗುಂಡೂರಾವ್ ವೈ. ವಿ. ಇನ್ಸ್ ಪೆಕ್ಟರ್ ಆಗಿ ಕೃಷ್ಣೇಗೌಡ… ಒಟ್ಟಿನಲ್ಲಿ ಸಮರ್ಥ ಕಲಾವಿದರ ದಂಡೇ ನನ್ನ ನಾಟಕದಲ್ಲಿ ನೆರೆದಿತ್ತು. ದೂರದಲ್ಲೆಲ್ಲೋ ಹಾದುಹೋಗುತ್ತಿದ್ದ ರೈಲಿನ ಕೂಗನ್ನು ಆಗಾಗ್ಗೆ ಸಂದರ್ಭೋಚಿತವಾಗಿ ಹಾಗೂ ಸೂಚ್ಯವಾಗಿ ಬಳಸಿದ್ದು, ಗಡಿಯಾರದ ಟಿಕ್ ಟಿಕ್ ಸದ್ದನ್ನು ನಿಗೂಢ ವಾತಾವರಣ ಸೃಷ್ಟಿಗೆ ನಾಟಕದುದ್ದಕ್ಕೂ ಬಳಸಿದ್ದು ನಾಟಕದ ಧ್ವನಿಯನ್ನು ಹೆಚ್ಚು ತೀವ್ರವಾಗಿ ಪ್ರೇಕ್ಷಕನಿಗೆ ಮುಟ್ಟಿಸಲು ಸಹಕಾರಿಯಾಯಿತು.

ಗಾಯನ ಸಮಾಜದಲ್ಲಿ ನಡೆದ ‘ಸಿಕ್ಕು’ ನಾಟಕ ಪ್ರದರ್ಶನ ರಂಗಾಸಕ್ತ ಪ್ರೇಕ್ಷಕರ ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ‘ಸಿಕ್ಕು’ ನಾಟಕ ಒಬ್ಬ ನಾಟಕಕಾರನಾಗಿ-ನಿರ್ದೇಶಕನಾಗಿ ನನಗೆ ಹೆಸರು ತಂದುಕೊಟ್ಟಿದ್ದಷ್ಟೇ ಅಲ್ಲದೆ ನನಗೇ ಒಂದು ರೀತಿಯ ಸಮಾಧಾನ—ತೃಪ್ತಿಗಳನ್ನು ನೀಡಿ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಕೊಳ್ಳುವ ಉತ್ಸಾಹ-ಹುಮ್ಮಸ್ಸಿನ ಮನಸ್ಥಿತಿಯನ್ನೂ ನೀಡಿತು. ಅಮೆರಿಕಾದಿಂದ ಬಂದಿದ್ದ ಶ್ರೇಷ್ಠ ಕವಿ ಎ.ಕೆ.ರಾಮಾನುಜನ್ ಅವರು ಕಥೆಗಾರ ಸದಾಶಿವರೊಂದಿಗೇ ಬಂದು ‘ಸಿಕ್ಕು’ ನಾಟಕವನ್ನು ನೋಡಿ ಅಪಾರವಾಗಿ ಮೆಚ್ಚಿಕೊಂಡು ನನ್ನ ಬೆನ್ನು ತಟ್ಟಿ ಹೋದದ್ದು ನಾನು ಇಂದಿಗೂ ನೆನೆಸಿಕೊಳ್ಳುವ ವಿಶೇಷ ಸಂಗತಿ.

ಮುಂದೆ ಮ್ಯಾಂಚೆಸ್ಟರ್ ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ‘ಸಿಕ್ಕು’ ನಾಟಕ ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದದ್ದು ನಮ್ಮ ತಂಡದ ಮತ್ತೊಂದು ಮಹತ್ವದ ಸಾಧನೆ. ಅಲ್ಲಿ ನಮ್ಮ ನಾಟಕ ನೋಡಿ ಮೆಚ್ಚಿದವರಲ್ಲಿ ಶಂಕರ್ ನಾಗ್, ಜಿ.ಆರ್.ವಿಶ್ವನಾಥ್ ಪ್ರಮುಖರು. ಹೀಗೆ ‘ಸಿಕ್ಕು’ ನನ್ನ ರಂಗಭೂಮಿ ಪಯಣದ ಆರಂಭದ ದಿನಗಳ ಒಂದು ಅತ್ಯಂತ ಪ್ರಮುಖ ಮೈಲಿಗಲ್ಲಾದ್ದರಿಂದ ಆ ನಾಟಕದ ಬಗ್ಗೆ ಸ್ವಲ್ಪ ವಿಶೇಷವಾಗಿಯೇ ಬರೆದಿದ್ದೇನೆ.

ನಾಟಕಶಾಲೆಯಲ್ಲಿ ನಾವು ಬಹಳ ಖುಷಿಯಿಂದ ತೊಡಗಿಕೊಳ್ಳುತ್ತಿದ್ದುದು improvisation ತರಗತಿಗಳಲ್ಲಿ. ಇಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿದ್ದವರು ನಮ್ಮೆಲ್ಲರ ಅಚ್ಚುಮೆಚ್ಚಿನ ನಿರ್ದೇಶಕರೂ ಅಧ್ಯಾಪಕರೂ ಆಗಿದ್ದ ಬ್ಯಾರಿ ಜಾನ್ ಅವರು. ಯಾವುದಾದರೊಂದು ಕಥಾಭಾಗವನ್ನು ಆರಿಸಿಕೊಂಡು ರೂಢಿಗತ ಶೈಲಿಯಲ್ಲಿ ರಂಗಪ್ರಯೋಗವನ್ನು ಸಿದ್ಧಗೊಳಿಸದೆ ಸಹಜಸ್ಫೂರ್ತಿಯಿಂದ ಸಂಭಾಷಣೆಗಳನ್ನು ಹೆಣೆದುಕೊಳ್ಳುತ್ತಾ ಕಥಾಭಾಗವನ್ನು ವಿಸ್ತರಿಸುತ್ತಾ ಅತಿ ಕಡಿಮೆ ಸಮಯದಲ್ಲೇ ಒಂದು ಪ್ರಯೋಗವನ್ನು ಸಿದ್ಧಪಡಿಸುವುದು ಈ improvisation ಮಾರ್ಗದ ಕ್ರಮ. ಸಮಯಸ್ಫೂರ್ತಿಯ ಜತೆಗೆ ಕ್ರಿಯೆ-ಪ್ರತಿಕ್ರಿಯೆಗಳ ಸರಪಳಿಯನ್ನು ತಾರ್ಕಿಕವಾಗಿ-ಅಷ್ಟೇ ಶೀಘ್ರವಾಗಿ ಕಟ್ಟುತ್ತಾ ಹೋಗುವ ಈ ಪ್ರಯೋಗ ನಮ್ಮ ಪ್ರತಿಫಲನ ಸಾಮರ್ಥ್ಯವನ್ನು ನಿಶಿತಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ನಮ್ಮ ತಂಡದ ವತಿಯಿಂದ ಮಾಡಿದ ಇಂಥ ಕೆಲವು ಪ್ರಯೋಗಗಳು ತುಂಬಾ ಚೆನ್ನಾಗಿ ಮೂಡಿ ಬಂದು ವಿಶೇಷ ಮೆಚ್ಚುಗೆಗೆ ಪಾತ್ರವಾದವು. ‘monkey’s paw’ ನಾಟಕದ ಕಥಾಭಾಗ, ಪಂಚತಂತ್ರದ ಕಥೆಗಳು, ಕನ್ನಡದ ಕೆಲ ಕಥೆಗಳು, ಗೋಲ್ಡೋನಿಯ servant of two masters ನಾಟಕದ ಕಥಾಭಾಗ… ಇನ್ನೂ ಮುಂತಾದವು ನಾವು ಈ ಕ್ರಮದಲ್ಲಿ ಸಾದರಪಡಿಸಿದ ಕೆಲ ಪ್ರಯೋಗಗಳು. ಅಶೋಕ ಬಾದರದಿನ್ನಿ ಮುಖ್ಯಪಾತ್ರ ವಹಿಸಿದ್ದ servant of two masters ಪ್ರಯೋಗವಂತೂ ಬಲು ಜನಪ್ರಿಯವಾಗಿ ನಾಲ್ಕಾರು ಪ್ರದರ್ಶನಗಳನ್ನು ಕಂಡಿತು!

ಹಿಂದೆಯೇ ಹೇಳಿದ್ದಂತೆ ನಾನು ಶಾಲೆಯಲ್ಲಿದ್ದಾಗ ಮೊದಮೊದಲು ಅಭಿನಯದತ್ತ ಅಷ್ಟಾಗಿ ಆಸಕ್ತಿ ತೋರಿದವನಲ್ಲ. ಮೊದಲಿನಿಂದಲೂ ನಿರ್ದೇಶನ ಹಾಗೂ ಬೆಳಕಿನ ವಿನ್ಯಾಸಗಳೇ ನನ್ನ ಪರಮ ಆಸಕ್ತಿಯ ಕ್ಷೇತ್ರಗಳು. ಆದರೆ ಆ ಒಂದು ಪ್ರಸಂಗ ನನ್ನನ್ನು ಅಭಿನಯದತ್ತ ಸೆಳೆದದ್ದಷ್ಟೇ ಅಲ್ಲ, ನಾನು ನಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿ ನಾನು ಒಬ್ಬ ನಟನಾಗಿ ರೂಪುಗೊಳ್ಳುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿಬಿಟ್ಟಿತು! ಆ ಪ್ರಸಂಗವನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಕಾರಂತರು ಪಠ್ಯಕ್ರಮದಲ್ಲಿ ತಂದ ಬದಲಾವಣೆಯತ್ತ ಈಗಾಗಲೇ ತಮಗೆ ಹೇಳಿದ್ದೇನೆ. ಆ ಕ್ರಮದಲ್ಲಿ ತರಗತಿಯ ಎಲ್ಲರನ್ನೂ ಒಳಗು ಮಾಡಿಕೊಂಡು ಒಂದು ಪ್ರಮುಖ ನಾಟಕವನ್ನು ಮಾಡಿಸಲು ಖ್ಯಾತ ನಟರೂ ನಿರ್ದೇಶಕರೂ ಆಗಿದ್ದ ರೈನಾ ಅವರು ನಿಯೋಜಿತರಾದರು. ಅವರು ಆರಿಸಿಕೊಂಡ ನಾಟಕ ಹೆನ್ರಿಕ್ ಇಬ್ಸೆನ್ ನ “enemy of the people ಎಂಬ ವಾಸ್ತವವಾದಿ (realistic) ನಾಟಕ. ಜೆ.ಎನ್.ಕೌಶಲ್ ಅವರು ಆ ನಾಟಕವನ್ನು ಅತ್ಯಂತ ಸಮರ್ಥವಾಗಿ ಹಿಂದಿಗೆ ರೂಪಾಂತರಿಸಿದ್ದರು. ತಾಲೀಮು ಪ್ರಾರಂಭವಾದ ಮೊದಲ ದಿನ. ನಿರ್ದೇಶಕರು ಬಂದವರೇ ಇಬ್ಸನ್ ನ ಬಗ್ಗೆ, ನಾಟಕದ ಬಗ್ಗೆ ಪ್ರಾಸಂಗಿಕವಾಗಿ ಒಂದಷ್ಟು ಮಾತನಾಡಿ ಪಾತ್ರವರ್ಗವನ್ನು ಪ್ರಕಟಿಸಿಯೇ ಬಿಟ್ಟರು.

ನಮ್ಮ ತರಗತಿಯವರೇ ಆಗಿದ್ದ ಅಲೋಕನಾಥ್, ಅನ್ನು ಕಪೂರ್ ಹಾಗೂ ನೀನಾ ಗುಪ್ತಾ ಆ ವೇಳೆಗಾಗಲೇ ಪ್ರತಿಭಾವಂತ ಕಲಾವಿದರೆಂದು ಹೆಸರು ಪಡೆದಿದ್ದರು. Enemy of the people ನಾಟಕ ಇಂದಿಗೂ ಪ್ರಸ್ತುತವೆನ್ನಿಸುವಂತಹ ಕಥಾವಸ್ತುವನ್ನು ಹೊಂದಿರುವ ಒಂದು ಅಪೂರ್ವ ನಾಟಕ.ಇಬ್ಬರು ಸೋದರರ ನಡುವಣ ತಾತ್ವಿಕ ಸಂಘರ್ಷದ ಜತೆ ಜತೆಗೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ರಾಜಕೀಯ ಹುನ್ನಾರಗಳನ್ನೂ ಬಯಲಿಗೆಳೆಯುತ್ತಾ ಹೋಗುವ ಈ ನಾಟಕ ಬಲು ಜನಪ್ರಿಯವಾದುದು. ಯಾವುದೇ ನಟರಿಗೆ ಸವಾಲೊಡ್ಡುವಂತಹ ಪಾತ್ರಗಳು—ಡಾ॥ಸ್ಟಾಕ್ ಮನ್ ಹಾಗೂ ಮೇಯರ್ ಪೀಟರ್ ಸ್ಟಾಕ್ ಮನ್ನರ ಪಾತ್ರಗಳು.

ನಮ್ಮ ನಿರ್ದೇಶಕರು ಯಾವ ವಿಶೇಷ ಚರ್ಚೆಯನ್ನೂ ನಡೆಸದೆ ಮೊದಲೇ ನಿರ್ಧರಿಸಿಕೊಂಡು ಬಂದಿದ್ದ ತಮ್ಮ ಪಾತ್ರವರ್ಗದ ಆಯ್ಕೆಯ ಪಟ್ಟಿಯನ್ನು ನಮ್ಮ ಮುಂದಿಟ್ಟರು:ಅಲೋಕ್ ನಾಥ್ ಡಾಕ್ಟರ್ ಪಾತ್ರವನ್ನೂ ಅನ್ನುಕಪೂರ್ ಮೇಯರ್ ನ ಪಾತ್ರವನ್ನೂ ನೀನಾಗುಪ್ತಾ ಡಾಕ್ಟರರ ಪತ್ನಿಯ ಪಾತ್ರವನ್ನೂ ವಹಿಸುವುದರ ಜತೆಗೆ ಉಳಿದ ಮುಖ್ಯ ಪಾತ್ರಗಳಿಗೂ ಕೆಲ ಹಿಂದಿ ಭಾಷಿಕ ಕಲಾವಿದರು ಆಯ್ಕೆಯಾಗಿದ್ದರು. ನಾವೆಲ್ಲರೂ ಯಥಾಪ್ರಕಾರ ಗುಂಪು ಕಲಾವಿದರಾಗಿ ಪಾಲುಗೊಳ್ಳುವುದಲ್ಲದೇ ನೇಪಥ್ಯದ ಕರ್ತವ್ಯಗಳನ್ನು ನಿರ್ವಹಿಸಲು ನಿಯೋಜಿತರಾಗಿದ್ದೆವು. ನಾನು ಅದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸಿಯೂ ಇರಲಿಲ್ಲವಾದ್ದರಿಂದ ನನಗೆ ಬೇಸರವೇನೂ ಆಗಲಿಲ್ಲ.

ಅಂದಿನ ತಾಲೀಮು ಮುಗಿಸಿ ಹಾಸ್ಟೆಲ್ ಗೆ ಮರಳಿದ ನಂತರ ಅಶೋಕ ಮತ್ತೂ ಮೂರು ನಾಲ್ಕು ಸಹಪಾಠಿಗಳೊಂದಿಗೆ ನನ್ನ ಬಳಿ ಬಂದು ಮಾತು ಶುರು ಮಾಡಿದ: “ನಾವೇನು ಇಲ್ಲಿ ಸುಮ್ಮಾಕ್ ಈಟಿ ಹಿಡಕೊಂಡು ನಿಂದ್ರಾಕ ಬಂದೀವೇನು? ನಾವೇನು ಕಲಾವಿದರಲ್ಲೇನು? ನಮಗೇನು ಹಿಂದಿ ಬರಂಗಿಲ್ಲೇನು?”

ನನಗೆ ಅವನೇನು ಹೇಳುತ್ತಿದ್ದಾನೆಂದು ಪ್ರಾರಂಭದಲ್ಲಿ ಅರ್ಥವಾಗದಿದ್ದರೂ ನಂತರದಲ್ಲಿ ಅವನ ಮತ್ತು ಅವನೊಟ್ಟಿಗಿದ್ದ ಇತರ ಸಹಪಾಠಿಗಳ ಅಸಮಾಧಾನದ ಕಾರಣ ಪಾತ್ರವರ್ಗದ ಆಯ್ಕೆಯಲ್ಲಿ ನಡೆದಿದ್ದ ಏಕಮುಖೀ ತೀರ್ಮಾನವೆಂಬುದು ಅರಿವಾಯಿತು. ಅವರ ವಾದದಲ್ಲೂ ಹುರುಳಿತ್ತು: “ಹಿಂದಿ ಮಾತೃಭಾಷೆಯಲ್ಲದ ಅನೇಕ ವಿದ್ಯಾರ್ಥಿಗಳು ನಟನೆಯನ್ನೇ ಮುಂದೆ ವೃತ್ತಿಯಾಗಿ ಸ್ವೀಕರಿಸುವ ಮಹದಾಸೆ ಇಟ್ಟುಕೊಂಡಿದ್ದವರು. ಅಂಥವರಿಗೆ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಒಂದೇ ಒಂದು ಅವಕಾಶವೂ ಶಾಲೆಯಲ್ಲಿ ದೊರೆಯದೇ ಹೋದರೆ ಅವರು ಕಲಿಯುವುದಾದರೂ ಏನನ್ನು? ತರಗತಿಯಲ್ಲಿ ಕಲಿಕೆಗಾಗಿಯೇ ಸಿದ್ಧಪಡಿಸುವ ನಾಟಕಗಳಲ್ಲಿಯೇ ಅವಕಾಶ ದೊರೆಯದಿದ್ದರೆ ಮುಂದಿನ ಗತಿಯಾದರೂ ಏನು? ನಟನೆಯ ಪಾಠಗಳ ಜತೆಜತೆಗೇ ನಾವು ಭಾಷೆಯನ್ನೂ ಕಲಿತು ಪಾತ್ರ ಮಾಡಬಹುದಲ್ಲವೇ?”.

ಅಶೋಕನ ವಾದಸರಣಿಯೇನೋ ತರ್ಕಬದ್ಧವಾಗಿಯೇ ಇತ್ತು. “ಆದರೆ ನಿರ್ದೇಶಕನಾದವನಿಗೂ ಸಹಾ ಅವನದೇ ಆದ ನಿರೀಕ್ಷೆಗಳಿರುತ್ತವೆ..ತನಗೆ ಬೇಕಾದವರನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇರುತ್ತದೆ ಅಲ್ಲವೇ?” ಎಂದು ನಾನು ಮರು ಪ್ರಶ್ನಿಸಿದೆ. “ಅದೆಲ್ಲಾ ನಮ್ಮ class room production ಗಳಿಗೆ ಅನ್ವಯಿಸುವುದಿಲ್ಲ.. ಇಲ್ಲಿ ಎಲ್ಲರಿಗೂ ಕಲಿಯಲು ಅವಕಾಶ ಸಿಗಬೇಕು..ನಾಳೆ ನೀನೇ ನಮ್ಮ ಪರವಾಗಿ ನಿರ್ದೇಶಕರ ಹತ್ತಿರ ಮಾತಾಡಿ ನಮಗೂ ಪ್ರಮುಖ ಪಾತ್ರಗಳನ್ನು ನೀಡುವಂತೆ ಒತ್ತಡ ಹೇರಬೇಕು” ಎಂದ ಅಶೋಕ! ಅಯ್ಯಯ್ಯೋ! ಇದೊಳ್ಳೇ ಕಥೆಯಾಯಿತೇ! ನಿಮ್ಮ ಬೇಡಿಕೆಗಳನ್ನು ನೀವೇ ಅವರ ಮುಂದಿಡಬಹುದಲ್ಲಾ.. ನಡುವೆ ನನ್ನನ್ನೇಕೆ ಎಳೆಯುತ್ತಿದ್ದೀರಿ? ಎಂದರೆ ಅಶೋಕ, “ಏ ಮಬ್ಬಿಡಿಸಿಗಂಡ,ನನಗ ಮಾತಾಡಾಕ ಬಂದಿದ್ರ ನಿನ್ಯಾಕ ಕೇಳ್ತಿದ್ದೆ? ನಾ ಏನೋ ಅಂದು ಅದಕ್ಕ ಅಂವ ಇಂಗ್ಲೀಷ್ ನ್ಯಾಗ ಠುಸ್ ಬುಸ್ ಅಂದ್ರ ನಾ ಮತ್ತ ಹೊಯ್ಕಬಡ್ಕ.. ಅದ್ಕಾ ನೀ ಮಾತಾಡಂದಿದ್ದು..”

ನಾನೇನೋ ಮಹಾ ಇಂಗ್ಲೀಷ್ ಪ್ರವೀಣ ಎಂಬಂತೆ ಮಾತಾಡಿದ ಅವನ ಮಾತು ಕೇಳಿ ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ! ಅಂತೂ ಅವರುಗಳ ಒತ್ತಾಯಕ್ಕೆ ಕಟ್ಟುಬಿದ್ದು ನಿರ್ದೇಶಕರೊಟ್ಟಿಗೆ ಮಾತಾಡಲು ಒಪ್ಪಿಕೊಂಡೆ.

ಮರುದಿನ ರಿಹರ್ಸಲ್ ಆರಂಭಿಸುವ ಮೊದಲೇ “ಒಂದು ನಿಮಿಷ ಮಾತಾಡಲು ನನಗೆ ಅವಕಾಶ ಕೊಡಿ” ಎಂದು ಕೇಳಿಕೊಂಡು ಇಂಗ್ಲೀಷ್ — ಹಿಂದಿ ಮಿಶ್ರಿತ ಭಾಷೆಯಲ್ಲಿ ಹಿಂದಿ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳ ಸಮಸ್ಯೆಯನ್ನು ಅವರ ಗಮನಕ್ಕೆ ತಂದು ಅವರಿಗೂ ಅವಕಾಶ ಕೊಡಿರೆಂದು ಕೇಳಿಕೊಂಡೆ. ನಿರ್ದೇಶಕ ಮಹಾಶಯರು ಈ ತರಹದ ಪ್ರತಿಕ್ರಿಯೆಯನ್ನು ಬಹುಶಃ ನಿರೀಕ್ಷಿಸಿರಲಿಲ್ಲ! ಸಿಟ್ಟಿನಿಂದ ಮೊದಲೇ ಕೆಂಪಗಿದ್ದ ಅವರ ಮುಖ ಇನ್ನಷ್ಟು ಕೆಂಪಾಯಿತು..ಹುಬ್ಬು ಗಂಟಿಕ್ಕಿದವು…ಒಂದು ಕ್ಷಣ ನನ್ನನ್ನೇ ದುರುದುರು ನೋಡಿದರು.

ನಂತರ, “ಅಚ್ಛಾ? ಏ ಬಾತ್ ಹೈ! ಚಲೋ..ಠೀಕ್ ಹೈ..ಮೈ ಛೋಟಾಸಾ ಟೆಸ್ಟ್ ಲೂಂಗಾ.. ತುಮ್, ಕೆ ವಿ ಎಸ್ ಪ್ರಭು, ತುಮ್ ಡಾಕ್ಟರ್ ಕಾ ರೋಲ್ ಪಢೋ..ಶ್ರೀಕಾಂತ್, ತುಮ್ ಮೇಯರ್ ಕಾ ರೋಲ್ ಪಢೋ..ಅಶೋಕ್, ತುಮ್ ಅವಸ್ಥಿ ಕಾ ರೋಲ್ ಪಢೋ…” ಎಂದವರೇ ನನ್ನತ್ತ ಒಂದು ಹಸ್ತಪ್ರತಿಯನ್ನು ತಳ್ಳಿದರು. ಹೀಗೊಂದು ಪ್ರಸಂಗ ಎದುರಾದೀತೆಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ! ಗಂಟೆ ಬಾರಿಸಲು ಹೋಗಿ ಗುಡಿಯನ್ನೇ ಮೈಮೇಲೆ ಕೆಡವಿಕೊಂಡಂತಾಗಿತ್ತು ನನ್ನ ಸ್ಥಿತಿ! ನಾನು ಎಷ್ಟೇ ಸಮಜಾಯಿಷಿ ಕೊಡಲು ಯತ್ನಿಸಿದರೂ, ನನಗಾಗಿ ಕೇಳುತ್ತಿಲ್ಲ..ನಾನು ಇತರರ ಮುಖವಾಣಿಯಷ್ಟೇ’ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಆ ಪುಣ್ಯಾತ್ಮ ತನ್ನ ನಿರ್ಧಾರದಿಂದ ಮಿಸುಕಲಿಲ್ಲ. ಸೇಡು ತೀರಿಸಿಕೊಳ್ಳುವವರಂತೆ, “ನಹೀ..ಪಢೋ..ತುಮ್ ಪೆಹಲೇ ಪಢೋ..ಬಾದ್ ಮೇ ದೇಖೇಂಗೇ ಕೌನ್ ಕೌನ್ ಕಿತನೇ ಪಾನೀ ಮೇ” ಎಂದು ಗುರಾಯಿಸಿದರು. ಅವರ ಮೊಂಡುತನ ಕಂಡು ನನಗೂ ಸಿಟ್ಟು ಹತ್ತಿತು. ಆದದ್ದಾಗಲಿ ಎಂದವನೇ ಹಿಂದಿ ರೂಪಾಂತರದ ಹಸ್ತಪ್ರತಿಯನ್ನು ಕೈಗೆತ್ತಿಕೊಂಡೆ. ಉಳಿದವರಿಗೂ ಸನ್ನೆ ಮಾಡಿದೆ.

ಒಂದು ಬಾರಿ ಮನಸ್ಸಿನಲ್ಲೇ ಒಂದು ಪುಟದ ಹಿಂದಿ ಸಂಭಾಷಣೆಗಳನ್ನು ಮನನ ಮಾಡಿಕೊಂಡೆ. ಎಷ್ಟಾದರೂ ಹಿಂದಿ ಮೇಷ್ಟ್ರ ಮಗನಲ್ಲವೇ! ಒಂದೆರಡು ಹಿಂದಿ ಪರೀಕ್ಷೆಗಳನ್ನೂ ಕಟ್ಟಿ ಉತ್ತೀರ್ಣನಾಗಿದ್ದರಿಂದ ಹಿಂದಿ ಓದಲು ಬರೆಯಲು ಚೆನ್ನಾಗಿಯೇ ಬರುತ್ತಿತ್ತು. ಸರಿ,ಹಸ್ತಪ್ರತಿಗಳನ್ನು ತೆಗೆದುಕೊಂಡವರೇ ಎಲ್ಲರೂ ಓದತೊಡಗಿದೆವು. ಪಾಪ,ನಮ್ಮ ನಿರ್ದೇಶಕರು ಅಷ್ಟನ್ನೂ ನಿರೀಕ್ಷಿಸಿರಲಿಲ್ಲವೆಂದು ತೋರುತ್ತದೆ..ಹಾಗಾಗಿ ಕೊಂಚ ಹೈರಾಣಾದವರಂತೆ ಕಂಡರು..ನಂತರ ನಮಗೆ ನಿಲ್ಲಿಸಲು ಹೇಳಿ ಮೌನವಾಗಿ ಕುಳಿತು ಗಡ್ಡ ಕೆರೆದುಕೊಂಡರು.

ನಮ್ಮೆಲ್ಲರನ್ನೂ ಒಮ್ಮೆ ದಿಟ್ಟಿಸಿ ನೋಡಿದರು. ನಂತರ ಒಂದು ವಕ್ರ ನಗೆಯೊಂದಿಗೆ ಮಾತಾಡತೊಡಗಿದರು: “ಠೀಕ್ ಹೈ..democracy ಹೈ..ಸಬ್ ಕೋ ಮೌಕಾ ಮಿಲ್ ನಾ ಚಾಹಿಯೇ..ಮೈ ಇಸ್ ಪ್ಲೇ ಕೇ ಲಿಯೇ ಡಬ್ಬಲ್ casting ಕರೂಂಗಾ” ಎಂದವರೇ ಒಂದು ಕ್ಷಣ ಮಾತು ನಿಲ್ಲಿಸಿದರು.ಸೂಜಿ ಬಿದ್ದರೂ ಕೇಳುವಷ್ಟು ನೀರವತೆ..ಎಲ್ಲರ ಮುಖದಲ್ಲಿಯೂ ನಿರೀಕ್ಷೆ-ಕಾತರತೆಗಳು ಅಚ್ಚೊತ್ತಿದ್ದವು. ನಿರ್ದೇಶಕರು ಮುಂದುವರಿಸಿದರು: ” ಸೆಕೆಂಡ್ ಟೀಮ್ ಮೇ ಮೇಯರ್ ಕಾ ರೋಲ್ ಶ್ರೀಕಾಂತ್ ಕರೇಗಾ.. ಅವಸ್ಥಿ(ಮತ್ತೊಂದು ಮುಖ್ಯ ಪಾತ್ರ)ಕಾ ರೋಲ್ ಬಾದರದಿನ್ನಿ ಕರೇಗಾ..ಔರ್ ಡಾಕ್ಟರ್ ಕಾ ರೋಲ್….(ಕ್ಷಣ ತಡೆದು) ಕೆ ವಿ ಎಸ್ ಪ್ರಭು ಕರೇಗಾ..”

ತಲೆಗೇ ಸುತ್ತಿಗೆಯಿಂದ ಬಾರಿಸಿದಂತಾಗಿ ಬವಳಿ ಬಂದಂತಾಯಿತು. ಕಣ್ಣು ಮಂಜಾಗಿ ಮೆದುಳು ಗೊಂದಲದ ಗೂಡಾಯಿತು. ಮುಂದಿನ ಅವರ ಮಾತೊಂದೂ ಕಿವಿಗೆ ಬೀಳಲಿಲ್ಲ. ದಿಗ್ಭ್ರಾಂತನಾಗಿ ಅವರ ಮುಖವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: