‘ಸಂಕ್ರಮಣ’ಕ್ಕೆ ನಿಲುಗಡೆಯಿಲ್ಲ…

ರಹಮತ್‌ ತರೀಕೆರೆ

‘ಸಂಕ್ರಮಣ’ ಎಂದರೆ ದಾಟುವುದು, ಸೂರ್ಯನು ತನ್ನ ಪಥ ಬದಲಿಸುವುದು, ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಚಲಿಸುವುದು ಎಂಬರ್ಥಗಳಿವೆ. ಆಕಸ್ಮಿಕವೆಂಬಂತೆ ಚಂಪಾ ಮಕರ ಸಂಕ್ರಾಂತಿಯ ದಿನಗಳಲ್ಲೇ ತೀರಿಕೊಂಡರು. ‘ಸಂಕ್ರಮಣ’ದಲ್ಲಿರುವ ಕ್ರಮ ಶಬ್ದಕ್ಕೆ ಒಂದಾದ ಬಳಿಕ ಮತ್ತೊಂದು ಬರುವ ವ್ಯವಸ್ಥೆ ಎಂಬರ್ಥವೂ ಇದೆ. `ಸಂಕ್ರಾಂತಿ’ಯಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಭಗ್ನಗೊಳಿಸಿ ಹೊಸ ವ್ಯವಸ್ಥೆ ಆರಂಭಿಸುವ `ಕ್ರಾಂತಿ’ ಶಬ್ದವೂ ಇದೆ.

೨೦ನೇ ಶತಮಾನದ ಉತ್ತರಾರ್ಧದಲ್ಲಿ ‘ಸಂಕ್ರಮಣ’ ಪತ್ರಿಕೆಯು ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಮಾಜದಲ್ಲಿದ್ದ ಚಿಂತನಾಕ್ರಮವನ್ನು ಭಗ್ನಗೊಳಿಸಿ ಹೊಸದನ್ನು ಹುಟ್ಟಿಸಲೆಂದೇ ಜನ್ಮತಾಳಿತು; ತಾನು ಪ್ರಕಟವಾಗುತ್ತಿದ್ದ ೫೫ ವರ್ಷ ಕಾಲ (೧೯೬೪-೨೦೧೮) ಅದು ಕರ್ನಾಟಕದಲ್ಲಿ ನಡೆದ ಎಲ್ಲ ಬಗೆಯ ಕ್ರಾಂತಿ-ಪ್ರತಿಕ್ರಾಂತಿಗಳನ್ನು ದಾಖಲಿಸುವ ದಸ್ತಾವೇಜೂ ಕೂಡ ಆಗಿತ್ತು. ಪತ್ರಿಕೆಯನ್ನು ಆರಂಭಿಸಿದ ಸಂಪಾದಕರಲ್ಲಿ ಮೂವರೂ ಧಾರವಾಡ ಸೀಮೆಯವರು; ಕರ್ನಾಟಕ ವಿಶ್ವವಿದ್ಯಾಲಯದ ಸಾಹಿತ್ಯದ ಅಧ್ಯಾಪಕರು. ಚಂಪಾ-ಗಿರಡ್ಡಿ ಆಂಗ್ಲಸಾಹಿತ್ಯದವರಾದರೆ ಪಟ್ಟಣಶೆಟ್ಟಿಯವರು ಹಿಂದಿ. ಮೂವರೂ ಬರೆದಿದ್ದು ಕನ್ನಡದಲ್ಲಿ.

೨೦ನೇ ಶತಮಾನದ ಮುಖ್ಯ ಚಳುವಳಿಗಳ ಹಿಂದೆ ಸಾಹಿತ್ಯಕ ಹಿನ್ನೆಲೆಯವರಿರುವುದರ ಪ್ರತೀಕವಿದು. ಆಧುನಿಕ ಕನ್ನಡ ಸಾಹಿತ್ಯ ಚಳುವಳಿಯನ್ನು ಆರಂಭಿಸಿದ ಬಿಎಂಶ್ರೀ ಕೂಡ ಆಂಗ್ಲ ಪ್ರಾಧ್ಯಾಪಕರೇ ಆಗಿದ್ದರು. ಅವರ ಚಾರಿತ್ರಿಕ ಮಹತ್ವದ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಭಾಷಣವು (೧೯೧೧) ಧಾರವಾಡದಲ್ಲೇ ಜರುಗಿತು. ಮುಂದೆ ಗೋಕಾಕ ಚಳುವಳಿಗೆ ನಾಂದಿ ಹಾಡಿದ್ದೂ ಇದೇ ಧಾರವಾಡ ಮತ್ತು ಕಲಬುರ್ಗಿ ಪಾಪು ಕಣವಿ ಚಂಪಾ ಮೊದಲಾದ ಅಲ್ಲಿನ ಲೇಖಕರು. ಆಂಗ್ಲ ಪ್ರಾಧ್ಯಾಪಕರೂ ತಮ್ಮ ವಿದ್ಯಾಗುರುಗಳೂ ಆಗಿದ್ದ ಪ್ರೊ.ಗೋಕಾಕರಿಗೆ ‘ಗೋಬ್ಯಾಕ್’ ಎಂದು ಚಂಪಾ ಹೇಳಿದ ಘಟನೆಯು ೮೦ರ ದಶಕದ ಕನ್ನಡ ಚಳುವಳಿಯ ಜಿಗಿತದ ಒಂದು ಹೆಜ್ಜೆಯಾಗಿದೆ.

ಚಂಪಾ ಚಳುವಳಿಯನ್ನು ಮುನ್ನಡೆಸಿದ ‘ಕನ್ನಡ ಕ್ರಿಯಾಸಮಿತಿ’ಯ ಕಾರ್ಯದರ್ಶಿಯಾಗಿದ್ದರು. ‘ಸಂಕ್ರಮಣ’ ಆ ಆಂದೋಲನದ ಸಂಗಾತಿಯಾಯಿತು. ಕರ್ನಾಟಕತ್ವವನ್ನು ವ್ಯಾಖ್ಯಾನಿಸುವ ಮತ್ತು ಪ್ರಾದೇಶಿಕ ರಾಜಕಾರಣವನ್ನು ಹುಡುಕುವ ಚಿಂತನೆಗಳಿಗೆ ವೇದಿಕೆಯೂ ಆಯಿತು. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ತನ್ನ ಪ್ರ್ರಾದೇಶಿಕತೆ, ಜನ, ಭಾಷೆ, ಸಾಹಿತ್ಯ, ಸಂಪನ್ಮೂಲ, ಸಂಸ್ಕೃತಿಯ ವಿಶಿಷ್ಟ ಚಹರೆ ಮತ್ತು ಅಧಿಕಾರಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಚಿಂತನೆಗಳನ್ನು ಅದು ಪ್ರಕಟಿಸಿತು.

`ಸಂಕ್ರಮಣ’ವು ಸಾಹಿತ್ಯಕ ಪರಿವೇಷದಲ್ಲಿದ್ದ ರಾಜಕೀಯ-ಸಾಮಾಜಿಕ ಚಿಂತನೆಗಳ ಪತ್ರಿಕೆಯೇ ಆಗಿತ್ತು. ಬೆಂಗಳೂರು-ಮೈಸೂರು ಭಾಗದ ಬ್ರಾಹಣ ಲೇಖಕರೇ ಪ್ರಧಾನವಾಗಿದ್ದ ನವ್ಯಸಾಹಿತ್ಯದಲ್ಲಿ, ಉತ್ತರ ಕರ್ನಾಟಕದ ಶೂದ್ರ ಲೇಖಕರ ಬರೆಹ ಪ್ರಕಟಿಸುವುದಕ್ಕಾಗಿಯೊ ಎಂಬಂತೆ ಹುಟ್ಟಿಕೊಂಡ ‘ಸಂಕ್ರಮಣ’ವು, ತನ್ನ ಜೀವಿತಾವಧಿಯಲ್ಲಿ ಎರಡು ಮುಖ್ಯ ರೂಪಾಂತರ ಕಂಡಿತು. ಮೊದಲನೆಯದು ನವ್ಯ ಸಾಹಿತ್ಯದಿಂದ ಹೊರಳಿ ದಲಿತ-ಬಂಡಾಯ ಚಳುವಳಿಗಳ ಭಾಗವಾಗಿದ್ದು. ಗಿರಡ್ಡಿ-ಪಟ್ಟಣಶೆಟ್ಟಿಯವರು ಸಂಪಾದಕ ಸ್ಥಾನದಿಂದ ನಿರ್ಗಮಿಸಲು ಸಾಮಾಜಿಕ ನಿಲುವುಗಳೇ ಕಾರಣವಾಗಿದ್ದು ಆಕಸ್ಮಿಕವಲ್ಲ.

ಚಂಪಾ, ಸಾಂಪ್ರದಾಯಿಕ ಚಿಂತ್ರನಾಕ್ರಮದ ಪ್ರತೀಕವೆಂದು ಪರಿಭಾವಿಸಿದ್ದ ಜಿ.ಬಿ.ಜೋಶಿಯವರ ಅಟ್ಟಕ್ಕೆ ಗಿರಡ್ಡಿಯವರು ಹತ್ತಿರವಾದರೆಂದು ಹುಟ್ಟಿದ ಭಿನ್ನಮತವು- ಈ ಬಗ್ಗೆ `ಸಂಕ್ರಮಣ’ದ ಸಂಪಾದಕೀಯಗಳಲ್ಲಿ ಉದ್ದಕ್ಕೂ ಕುಟುಕುಗಳಿದ್ದವು-ಅವರ ನಿರ್ಗಮನಕ್ಕೆ ನಾಂದಿಯಾಯಿತು. ಮೈಸೂರಿನಲ್ಲಿ ಶಿವರುದ್ರಪ್ಪ, ಲಂಕೇಶ್, ತೇಜಸ್ವಿ, ಆಲನಹಳ್ಳಿ, ಚಂಪಾ ಮೊದಲಾದ ಶೂದ್ರ ಲೇಖಕರು ಏರ್ಪಡಿಸಿದ್ದ ‘ಬರೆಹಗಾರರ ಕಲಾವಿದರ ಒಕ್ಕೂಟ’ದ (೧೯೭೪) ಸಮಾವೇಶಕ್ಕೂ ಅದರ ಬ್ರಾಹ್ಮಣವಿರೋಧಿ ನಿಲುವಿಗೂ ಪತ್ರಿಕೆ ವೇದಿಕೆಯಾಗುವುದಕ್ಕೆ ಭಿನ್ನಮತ ಸೂಚಿಸಿ ಪಟ್ಟಣಶೆಟ್ಟಿಯವರು ಹೊರಬಂದರು.

ಸಾಮಾಜಿಕ ಆಯಾಮವುಳ್ಳ ಈ ಎರಡೂ ನಿರ್ಗಮನಗಳು, ೭ಒರ ದಶಕದ ತಪ್ತಸ್ಥಿತಿಯನ್ನೂ, ಪರೋಕ್ಷವಾಗಿ ಚಂಪಾರ ತಾತ್ವಿಕ ನಿಲುವನ್ನೂ `ಸಂಕ್ರಮಣ’ದ ಹಾದಿಯನ್ನೂ ಖಚಿತಗೊಳಿಸಿದವು. ಲೋಹಿಯಾ, ಗಾಂಧಿ, ಅಂಬೇಡ್ಕರ್ವಾದಿ ಚಿಂತನೆಗಳ ಭಿತ್ತಿಯಲ್ಲಿ ಸಮಾಜ ಸಾಹಿತ್ಯ ಭಾಷೆ ರಾಜಕಾರಣವನ್ನು ವಿಶ್ಲೇಷಿಸುವ ಮತ್ತು ರೂಪಿಸುವ ಹಾದಿಯದಾಗಿತ್ತು. ಇದರ ಭಾಗವಾಗಿ ಸಂಕ್ರಮಣವು ಬಂಡಾಯ ಸಾಹಿತ್ಯ ಸಂಘಟನೆಯ ಮೊದಲ ಸಮಾವೇಶವೇ ಮೊದಲಾದ ಚಾರಿತ್ರಿಕ ವಿದ್ಯಮಾನದ ವಿಶೇಷ ಸಂಚಿಕೆಗಳನ್ನು ಪ್ರಕಟಿಸಿತು.

‘ಸಂಕ್ರಮಣ’ದ ಎರಡನೇ ರೂಪಾಂತರವು, ಚಂಪಾ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಭಿನ್ನಮತ ಮತ್ತು ಚಳುವಳಿಗಳ ಸೆಲೆಯಾದ ಧಾರವಾಡವನ್ನು ಬಿಟ್ಟು ಅಧಿಕಾರ ಕೇಂದ್ರಗಳಿರುವ ಬೆಂಗಳೂರಿಗೆ ಪ್ರಸ್ಥಾನ ಮಾಡುವ ಮೂಲಕ ಸಂಭವಿಸಿತು. ಬೆಂಗಳೂರಲ್ಲಿದ್ದುಕೊಂಡೇ ಅವರು ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತು ಗೆದ್ದರು. ಒಮ್ಮೆ ಸೋತರು. ರಾಜಕೀಯ ಪಕ್ಷಗಳಿಗೆ ಸೇರಿದರು, ಹೊರಬಂದರು. ವಿಧಾನಸಭಾ ಚುನಾವಣೆಗೆ ಬೆಂಗಳೂರಲ್ಲಿ ನಿಂತು ಪರಾಭವಗೊಂಡರು.

ಸ್ಥಾಪಿತ ಸಾಹಿತ್ಯ ಸಮಾಜ ರಾಜಕಾರಣಗಳ ಪರಿಕಲ್ಪನೆಯನ್ನು ಪ್ರತಿರೋಧಿಸುತ್ತ ಒಡಮೂಡುವ ಚಳುವಳಿ, ಸಂಘಟನೆ, ಸಾಹಿತ್ಯ ಪರಂಪರೆಗಳ ಹುಟ್ಟಿನ ಹಿಂದೆ ನಿಲ್ಲುತ್ತಿದ್ದ ಚಂಪಾ, ಈಗ ಪ್ರಧಾನಧಾರೆಯ ಸಾಹಿತ್ಯ ಸಮಾವೇಶಗಳ ಭಾಗವಾಗುತ್ತ ಹೋದರು. ಅವರ ಈ ಧೋರಣೆಯು ‘ಸಂಕ್ರಮಣ’ವನ್ನೂ ಪ್ರಭಾವಿಸಿದವು. ಚಂಪಾ- ತಾವು ನೇತೃತ್ವ ವಹಿಸಿದ ಸಂಸ್ಥೆಗಳಿಗೆ ನ್ಯಾಯ ಒದಗಿಸುವಂತೆ ಆಡಳಿತಗಾರರಾಗಿ ಕೆಲಸ ಮಾಡಿದ್ದನ್ನು ಆದರದಿಂದ ಸ್ಮರಿಸಬೇಕು. ಆದರೂ ಧಾರವಾಡದಲ್ಲಿ, ಅಧಿಕಾರ ಕೇಂದ್ರಗಳಿಂದ ದೂರವಿದ್ದಾಗ ಪುಟಿಸುತ್ತಿದ್ದ ಸೃಜನಶೀಲತೆ ಮತ್ತು ತೀವ್ರತೆಯಲ್ಲಿ ಮಂಕುತನ ಕಾಣಿಸಿದವು. ‘ಸಂಕ್ರಮಣ’ದ ಮೂಲ ಗುಣಕ್ಕೆ ಇದು ವ್ಯತಿರಿಕ್ತವಾಗಿತ್ತು.

ಪತ್ರಿಕೆ ತನ್ನ ಚಾರಿತ್ರಿಕ ಪಾತ್ರವನ್ನು ಮುಗಿಸಿತ್ತು. ವೃದ್ಧಾಪ್ಯ ಆವರಿಸುತ್ತ ಅದು ರಂಗನಿರ್ಗಮನಕ್ಕೆ ಸಿದ್ಧಗೊಳ್ಳತೊಡಗಿತು. ಕೊನೆಕೊನೆಯ ವರ್ಷಗಳಲ್ಲಿ ಅದು, ಅರ್ಧಶತಮಾನ ನಿರಂತರ ಪ್ರಕಟವಾದ ಚಾರಿತ್ರಿಕ ಹೆಗ್ಗಳಿಕೆಯ ಪ್ರಭಾವಳಿಯಿಂದ ಯಾಂತ್ರಿಕವಾಗಿ ಪ್ರಕಟವಾಗುತ್ತಿತ್ತು. ವೈಯಕ್ತಿಕ ಜಗಳಗಳನ್ನು ತಾತ್ವೀಕರಿಸಿ ಸಾರ್ವಜನಿಕ ಮಹತ್ವದ್ದೆಂಬ ರೀತಿಯಲ್ಲಿ ಮಂಡಿಸುತ್ತಿದ್ದ ಸಂಪಾದಕೀಯಗಳು, ಓದುಗರನ್ನು ಹಿಡಿದಿಡಲು ಸೋಲುತ್ತಿದ್ದವು. ಕಹಿತನ ಮತ್ತು ವಿಷಯದ ಘನತೆ ಕಳೆಯಬಲ್ಲ ಜೋಕುಗಳಿಂದ ಕೂಡಿದ ಸಂಪಾದಕೀಯಗಳು ಈ ಘಟ್ಟದಲ್ಲಿ ಹೆಚ್ಚಾಗಿ ಕಾಣಿಸಿದವು. ಪತ್ರಿಕೆಯ ಲೇಖನಗಳಲ್ಲೂ ಪ್ರಖರತೆ ಕಡಿಮೆಯಾಗುತ್ತಿತ್ತು.

ಹೊಸ ಶತಮಾನದಲ್ಲಿ ಕಾಣಿಸಿದ ಮತೀಯವಾದದ ಮುನ್ನಡೆ ಮತ್ತು ಜನಪರ ಚಳುವಳಿಗಳ ಹಿಂಜರಿಕೆಗಳೂ ಇದಕ್ಕೆ ಪೂರಕವಾಗಿದ್ದವು. ಬದಲಾದ ಚಾರಿತ್ರಿಕ ಸನ್ನಿವೇಶಕ್ಕೆ ಹೊಸ ನುಡಿಗಟ್ಟಿನಲ್ಲಿ ಹೊಸ ತಾತ್ವಿಕತೆಯಲ್ಲಿ ಹೊಸತಲೆಮಾರಿನ ಜತೆ ಸಂವಾದಿಸಬಲ್ಲ ಯಾವುದೊ ಲಗತ್ತು, ಕಸುವಿನ ಕೊರತೆ ಅದರ ಕೊನೆಯ ರೂಪಾಂತರವನ್ನು ಅಪ್ರಸ್ತುತಗೊಳಿಸುತ್ತ ಹೋಯಿತು. ಮುಖ್ಯವಾಗಿ ಹೊಸ ತಲೆಮಾರಿನ ಪ್ರತಿಭೆಗಳನ್ನು ಅದು ಒಳಗೊಳ್ಳಲು ಸಾಧ್ಯವಾಗಲಿಲ್ಲ. ಪತ್ರಿಕೆಯನ್ನು ಚಾತಕಗಳಂತೆ ಕಾಯುತ್ತಿದ್ದ ಓದುಗರು, ಅದರ ಬಗ್ಗೆ ಉದಾಸೀನ ಬೆಳೆಸಿಕೊಂಡರು. ಹೀಗಾಗಿಯೇ ಅದು ನಿಲುಗಡೆಯಾದಾಗ ಆಘಾತವೆನಿಸಲಿಲ್ಲ.

ಈ ಅವಸ್ಥೆಯು ಜನಾಂಗದ ಕಣ್ಣನ್ನು ತೆರೆದ ಅನೇಕ ರಾಜಕೀಯ ವ್ಯಕ್ತಿತ್ವಗಳಿಗೂ, ಲೇಖಕರಿಗೂ, ಅವರ ಬರೆಹಗಳಿಗೂ ಪತ್ರಿಕೆಗಳಿಗೂ ವಿದ್ಯಾಸಂಸ್ಥೆಗಳಿಗೂ ಸಂಭವಿಸಿತು. ಇದನ್ನು ಬಾಳಗತಿಯಲ್ಲಿ ಸಹಜವಾಗಿ ಸಂಭವಿಸುವ ಗತಿವಿಗತಿಗಳ ಲಯವೆನ್ನಬೇಕೊ, ಬದಲಾದ ಕಾಲಕ್ಕೆ ಮರುಹುಟ್ಟು ಪಡೆಯಲಾಗದ ನೈತಿಕ ಸೋಲೆನ್ನಬೇಕೊ ತಿಳಿಯದು. ಆದರೆ ‘ಸಂಕ್ರಮಣ’ದಂತಹ ಕಿರುಪತ್ರಿಕೆಯು, ತನ್ನ ಬಾಳುವೆಯ ಮೊದಲ ನಾಲ್ಕು ದಶಕಗಳಲ್ಲಿ, ಕರ್ನಾಟಕದ ವೈಚಾರಿಕ ಜಗತ್ತಿನಲ್ಲಿ ಮಾಡಿದ ಸಂಚಲನವನ್ನು ಕರ್ನಾಟಕದ ಚರಿತ್ರೆಯಲ್ಲಿ ದಾಖಲಾಗಿದೆ.

ಚಂಪಾರ ಹೆಸರಲ್ಲಿ ಚಂದ್ರನಿದ್ದಾನೆ. ವೈಚಾರಿಕ ಪ್ರಖರತೆಯನ್ನು ಸೂರ್ಯನಿಗೆ ಸಮೀಕರಿಸುವುದಾದರೆ, ಅವರೂ `ಸಂಕ್ರಮಣ’ವೂ ಅವರ ಬಹಳಷ್ಟು ಬರೆಹವೂ ಸೂರ್ಯಸಂಸ್ಕೃತಿಗೆ ಸೇರಿದ್ದು. ಈ ಅರ್ಥದಲ್ಲಿ ಅವರು ಬೇಂದ್ರೆಯವರ ಪಕ್ಷದವರಲ್ಲ. ಧಾರವಾಡದಲ್ಲಿ ಬೇಂದ್ರೆಯವರ ರಾತ್ರಿಸಂಸ್ಕೃತಿಯನ್ನು ವಿರೋಧಿಸುತ್ತಿದ್ದ ಸೂರ್ಯೋಪಾಸಕ ದಾರ್ಶನಿಕರಾದ ಶಂಬಾ ಪಕ್ಷದವರು ಎನ್ನಬಹುದು. ಶಂಬಾ ಸಂಶೋಧನೆ ಪ್ರತಿಪಾದಿಸಿದ ಕನ್ನಡ ಕರ್ನಾಟಕತ್ವಗಳ ಹುಡುಕಾಟವನ್ನು, ವೈಚಾರಿಕತೆಯನ್ನು ‘ಸಂಕ್ರಮಣ’ವು ಸಮಾಜವಾದಿ ಆಯಾಮದಲ್ಲಿ ವಿಸ್ತರಣೆ ಮಾಡುತ್ತಿತ್ತು.

ಕರ್ನಾಟಕದ ವಿಚಾರವಾದಿ ಚಳುವಳಿಯಲ್ಲಿ ಸಂಕ್ರಮಣದ ಪಾತ್ರ ದೊಡ್ಡದು. ಅದು ಕರ್ನಾಟಕ ಏಕೀಕರಣದ ಆಶೋತ್ತರಗಳನ್ನು, ಸಾಹಿತ್ಯ ಮತ್ತು ಸಂಸ್ಕೃತಿಗಳ ನೆಲೆಯಲ್ಲಿ ಮಂಡಿಸುತ್ತ ಹೋಯಿತು. ಅದರಲ್ಲಿ ಬರೆದ ಲೇಖಕರ ಪಟ್ಟಿಯನ್ನು ಗಮನಿಸಬೇಕು. ಅಲ್ಲಿ ಕರ್ನಾಟಕದ ಎಲ್ಲ ಭಾಗಗಳಿಂದ, ಜಾತಿವರ್ಗ ಧರ್ಮಗಳಿಂದ ಬಂದ, ಹಲವು ತಾತ್ವಿಕ ಪ್ರಸ್ಥಾನಗಳನ್ನು ಪ್ರತಿನಿಧಿಸುವ ಲೇಖಕರಿದ್ದಾರೆ. ಅಡಿಗರ ‘ಸಾಕ್ಷಿ’ ಅನಂತಮೂರ್ತಿಯವರ ‘ರುಜುವಾತು’ಗಳಿಗೆ ಹೋಲಿಸಿದರೆ ‘ಸಂಕ್ರಮಣ’ವು ಕರ್ನಾಟಕದ ಬಹುತ್ವವನ್ನು ಹೆಚ್ಚಾಗಿ ಪ್ರತಿನಿಧಿಸಿತು. ಇದಕ್ಕೆ ಅದು ಉತ್ತರ ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿದ್ದ ಧಾರವಾಡದಲ್ಲಿ ಬೇರು ತಳೆದಿದ್ದೂ ಒಂದು ಕಾರಣವಿರಬೇಕು. ಅದು ನೂರಾರು ಗ್ರಾಮೀಣ ಲೇಖಕರ ಮೊದಲ ಬರೆಹಗಳನ್ನು ಪ್ರಕಟಿಸಿತು.

ನನ್ನ ತಲೆಮಾರಿನವರು ಸಂಕ್ರಮಣದ ಲೇಖನ ಮತ್ತು ಸಂಪಾದಕೀಯಗಳ ಮೂಲಕ ನಮ್ಮ ಲೋಕದೃಷ್ಟಿಯನ್ನು ಕಟ್ಟಿಕೊಂಡೆವು. ‘ಸಂಕ್ರಮಣ’ ಬಂತೆಂದರೆ ವಾರಕಾಲ ವೈಚಾರಿಕ ಹಬ್ಬ. ಪತ್ರಿಕೆಯ ಹೆಸರಿನ ವಿಶಿಷ್ಟ ಅಕ್ಷರ ವಿನ್ಯಾಸ, ಅದರ ನಿರಲಂಕಾರೀ ಮುಖಪತ್ರ, ಅದರಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳ ಪಟ್ಟಿ ಎಲ್ಲವೂ ಆಪ್ತವಾಗುತ್ತಿತ್ತು. ವೈಯಕ್ತಿಕವಾಗಿ ನಾಲ್ಕು ದಶಕಗಳ ಕಾಲ ಅದರ ಚಂದಾದಾರನೂ ಓದುಗನೂ ಲೇಖಕನೂ ಆಗಿದ್ದ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ, ‘ಸಂಕ್ರಮಣ’ದ ಪಾತ್ರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಅಲ್ಲಿ ಪ್ರಕಟವಾದ ಲೇಖನಗಳು ನನಗೊಂದು ಚಹರೆ ದೊರಕಿಸಿಕೊಟ್ಟವು.

‘ಪಾವಿತ್ರ್ಯ ನಾಶವೂ ಪ್ರತಿಸಂಸ್ಕೃತಿ ನಿರ್ಮಾಣವೂ’ ಲೇಖನವು ಚರ್ಚೆ ಎಬ್ಬಿಸಿದಾಗ, ಆ ಕುರಿತು ಬಂದ ಪ್ರತಿಕ್ರಿಯೆಗಳನ್ನು ಪತ್ರಿಕೆ ಒಂದು ವರ್ಷಕಾಲ ಪ್ರಕಟಿಸಿತು. ‘ಸಂಕ್ರಮಣ’ವು ಪ್ರಕಟಿಸದೇ ಹೋದ ನನ್ನ ಏಕೈಕ ಲೇಖನ, ಅವರ ಕಾವ್ಯದ ಮೇಲೆ ಬರೆದಿದ್ದು. ಅದರಲ್ಲಿ ಅವರ ಕಾವ್ಯದ ಮಹತ್ವವನ್ನು ವಿಶ್ಲೇಷಿಸಿದ್ದೆ. ಜತೆಗೆ ಅವರ ಕಾವ್ಯದಲ್ಲಿರುವ ಸೆಕ್ಸಿಸ್ಟ್ ಗ್ರಹಿಕೆ, ಅಗ್ಗದ ತಮಾಶೆ, ವಿಡಂಬನೆಗಳಲ್ಲಿರುವ ವ್ಯಕ್ತಿನಿಂದೆ ಹಾಗೂ ನಾನೇ ಸರಿತನಗಳನ್ನು ಟೀಕಿಸಿದ್ದೆ.

ಕೊನೆಯಲ್ಲಿ ‘ಹೋಗಿರ್ತೇನಜ್ಜ ಹೋಗಿರ್ತೇನೆ, ನಿನ್ನ ಪಾದದ ಧೂಳಿ ನನ್ನ ಹಣೆಯ ಮೇಲಿರಲಿ. ಅದು ಕಣ್ಣೊಳಗೆ ಮಾತ್ರ ಬೀಳದಿರಲಿ’ ಎಂಬ, ಬೇಂದ್ರೆಯವರನ್ನು ಕುರಿತು ಅವರು ಬರೆದ ಹೇಳಿಕೆಯನ್ನು ಉಲ್ಲೇಖಿಸಿ, ನಮ್ಮನ್ನು ಬೆಳೆಸಿದ ವೈಚಾರಿಕ ಪರಂಪರೆಯ ಭಾಗವಾದ ಹಿರಿಯ ಕವಿಗಳನ್ನು, ನಮ್ಮ ತಲೆಮಾರು ಇಂತಹುದೇ ವಿಮರ್ಶಾತ್ಮಕ ಎಚ್ಚರದಿಂದಲೇ ಅನುಸಂಧಾನ ಮಾಡಬೇಕಿದೆ ಎಂದು ಮುಗಿಸಿದ್ದೆ. ಅವರಿಗದು ಇಷ್ಟವಾಗಲಿಲ್ಲವೊ, ತಮ್ಮ ಕಾವ್ಯದ ಮೇಲಿನ ಲೇಖನ ತಮ್ಮದೇ ಪತ್ರಿಕೆಯಲ್ಲಿ ಬರುವುದು ಸರಿಯಲ್ಲವೆನಿಸಿತೊ ತಿಳಿಯದೆ ಹೋಯಿತು.ನನಗೆ ಚೆನ್ನಾಗಿ ನೆನಪಿದೆ.

ಪತ್ರಿಕೆ ಬಂದೊಡನೆ ನಾವು ಮೊದಲಿಗೇ ಓದುತ್ತಿದ್ದುದು ಸಂಪಾದಕೀಯ. ಈ ಸಂಪಾದಕೀಯಗಳು ಕರ್ನಾಟಕದ ಸಮಾಜ ರಾಜಕಾರಣ ಭಾಷೆ ಸಾಹಿತ್ಯ ಚಳುವಳಿಗಳಿಗೆ ಸಂಬಂಧಿಸಿದ ಅಪೂರ್ವ ದಾಖಲೆಗಳು. ‘ಯಾವುದು ಶ್ರೇಷ್ಠ ಕವನ?’ ಎಂಬ ಕಾವ್ಯಮೀಮಾಂಸಕ ಚರ್ಚೆಯನ್ನು ಮಾಡುವ ಒಂದು ಸಂಪಾದಕೀಯವು ಆರಂಭವಾಗುವುದೇ, ಸಂಪಾದಕನು ಕಂಕುಳಲ್ಲಿ ಕೂಸನ್ನು ಹಿತ್ತುಕೊಂಡು ಬಿಕ್ಕೆ ಬೇಡುತ್ತ ನಿಂತ ಬಾಲೆಯ ಉಲ್ಲೇಖದೊಂದಿಗೆ. ಅದು ಎಷ್ಟು ಸರಳವಾಗಿ ಸಾಹಿತ್ಯವು ನೈತಿಕ ತುರ್ತಿನಲ್ಲಿ ಸಾಹಿತ್ಯವು ಉರಿವ ವರ್ತಮಾನಕ್ಕೆ ಮೈಗೊಟ್ಟೇ ಬದುಕಬೇಕೆಂಬ ತತ್ವವನ್ನು ಹೇಳಿತ್ತೆಂದು ಸೋಜಿಗವಾಗಿತ್ತು.

ತಮಗೆ ಮೆಚ್ಚುಗೆಯಾದ ಕನ್ನಡದ ಕವನಗಳನ್ನು ವಿಶ್ಲೇಷಿಸುವ ಅವರ ಸಾಹಿತ್ಯಕ ಸೂಕ್ಷ್ಮತೆಯನ್ನು ಬಿಂಬಿಸುವ ಸಂಪಾದಕೀಯಗಳೂ ಇವೆ. ಪತ್ರಿಕೆಯ ಲೇಖನ ಮತ್ತು ಸಂಪಾದಕೀಯಗಳಿಂದ ತಮ್ಮ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ಸಾವಿರಾರು ಜನ ರೂಪಿಸಿಕೊಳ್ಳುತ್ತಿದ್ದರು. ಇವರು ನಾಡಿನ ವಿವಿಧ ಜನಪರ ಚಳುವಳಿಯಲ್ಲಿ ತೊಡಗಿದ್ದವರೂ ಆಗಿದ್ದರು.

ಚಂಪಾ ನಾನಾ ಕಾರಣಕ್ಕೆ ಕಪ್ಪುಶಾಯಿಯ ಪೆನ್ನಲ್ಲಿ ಹಳದಿಕಾರ್ಡಿನ ಮೇಲೆ ಬರೆದ ಪತ್ರಗಳು ಸಹಸ್ರಾರು ಜನರಿಗೆ ಬಟವಾಡೆಯಾಗಿವೆ. ಅವರು ನಾಡಿನಾದ್ಯಂತ ಸಭೆ ಕಮ್ಮಟ ಸಮ್ಮೇಳನ ಎಂದು ಮಾಡುತಿದ್ದ ಓಡಾಟ, ಮಾಡುತ್ತಿದ್ದ ಭಾಷಣ, ಹರವಿಕೊಂಡಿದ್ದ ಚಂದಾದಾರರ ಜಾಲ ಮತ್ತು ಅವರು ಚಂದಾ ವಸೂಲಿ ಮಾಡುತ್ತಿದ್ದ ಜಾಣ್ಮೆ ಇವೆಲ್ಲವೂ, ಕರ್ನಾಟಕದ ಜನಪರ ಚಳುವಳಿಗೆ ಬೇಕಾದ ಮನಸ್ಸುಗಳನ್ನು ಒಗ್ಗೂಡಿಸುವ ತಂತ್ರವೂ ಆಗಿದ್ದವು.

ಏಕೀಕರಣಗೊಂಡ ಕರ್ನಾಟಕವನ್ನು ಬೆಸೆದಿಡುವ ಭಾಗವಾಗಿ ನಮ್ಮ ಲೇಖಕರ ಬರೆಹ, ತಿರುಗಾಟ, ಭಾಷಣ ಮತ್ತು ಪತ್ರಿಕೆಗಳನ್ನು ನೋಡಬೇಕಾಗಿದೆ. ಒಬ್ಬ ಲೇಖಕ-ಅಧ್ಯಾಪಕ, ಚಂದಾರರನ್ನು ಕಾಡಿಬೇಡಿ ನಡೆಸಿದ ಒಂದು ಕಿರುಪತ್ರಿಕೆಯು ಮಾಡಿದ ದೊಡ್ಡ ಪರಿಣಾಮಕ್ಕೆ ‘ಸಂಕ್ರಮಣ’ ಸಾಕ್ಷಿಯಾಗಿದೆ. ಇಂತಹ ಮತ್ತೊಂದು ನಿದರ್ಶನ ಭಾರತದಲ್ಲಿ ಮತ್ತೊಂದು ಇದೆಯೊ ಇಲ್ಲವೊ.ಸಂಕ್ರಮಣ ಪತ್ರಿಕೆಯಾಗಿ ನಿಂತಿದೆ, ಖರೆ. ಆದರದು ಹುಟ್ಟುಹಾಕಿದ ಚಿಂತನೆ ಮತ್ತು ಕ್ರಿಯಾಶೀಲತೆಗಳು, ಯಾವೆಲ್ಲ ರೂಪಾಂತರ ಪಡೆದು, ಪಥಬದಲಿಸುತ್ತ ಚಲಿಸುತ್ತಿವೆಯೊ? ಜೀವಂತ ಸಮಾಜದಲ್ಲಿ ಸಂಕ್ರಮಣಗಳಿಗೆ ನಿಲುಗಡೆ ಇರುವುದಿಲ್ಲ.

‍ಲೇಖಕರು Admin

January 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: