‘ಸಂಕ’ದ ಕೂಡು ದೊಡ್ಡಿಯೊಳಗೆ ಬಂದಿಯಾಗಿದ್ದೆ ನಾನು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಕಳೆದ ವಾರದಿಂದ

‘ನನ್ನ ವಿರುದ್ಧ ನಿಲ್ಲೋ ಅಷ್ಟು ಧೈರ್ಯ ಬಂತೆ ನಿನಗೆ? ಎಂದು ಹರಿಹಾಯ್ದರು. ಹಿಂದಿನ ದಿನ ಮಾಡಿದ್ದ ಬದಲಾವಣೆಗಳಿಂದ ಅಸಮಾಧಾನಗೊಂಡಿದ್ದ ನಾನು ಆ ಮಹತ್ವದ ಸುದ್ದಿಯನ್ನು ತಮ್ಮ ಗಮನಕ್ಕೆ ತರಲಿಲ್ಲವೆಂದು ಮುಖ್ಯ ಉಪಸಂಪಾದಕರು ಸುದ್ದಿ ಮಿಸ್ ಆಗಿದ್ದಕ್ಕೆ ಸಮಜಾಯಿಷಿ ನೀಡಿದ್ದರು.

ವಾಸ್ತವದಲ್ಲಿ ಟೆಲಿ ಪ್ರಿಂಟರಿನಲ್ಲಿ ಕಂಡ ಕೂಡಲೇ ನಾನು ಆ ಸುದ್ದಿಯನ್ನು ಮುಖ್ಯ ಉಪಸಂಪಾದಕರ ಗಮನಕ್ಕೆ ತಂದಿದ್ದೆ. ಅದೇನೂ ಅಂಥ ಮಹತ್ವದ ಸುದ್ದಿಯಲ್ಲವೆಂದು ಅವರು ಅದನ್ನು ಬದಿಗಿರಿಸಿದ್ದರು. ನನ್ನ ವಿವರಣೆಯನ್ನು ಶಾಮರಾಯರು ಕಿವಿಗೆ ಹಾಕಿಕೊಳ್ಳಲಿಲ್ಲ, ನೋಟೀಸ್ ಕೊಟ್ಟರು.

ನನ್ನ ಕ್ಷಣಗಣನೆ ಶುರುವಾಯಿತೆಂದುಕೊಂಡೆ. ಹಾಗೇನೂ ಆಗಲಿಲ್ಲ. ಶಾಮರಾಯರಿಗೆ ಕೊಟ್ಟ ವಿವರಣೆಯನ್ನೇ ನಾಗೇಶರಾಯರಿಗೂ ತಿಳಿಸಿದ್ದೆ. ಬದಲಾವಣೆಯಿಂದ ತಮಗೆ ಆಗಿದ್ದ ಅಸಮಾಧಾನವನ್ನು ಮುಖ್ಯ ಉಪಸಂಪಾದಕರು ನಾಗೇಶರಾಯರ ಬಳಿ ತೋಡಿಕೊಂಡಿದ್ದರಂತೆ. ಇದರಿಂದ ನಾಗೇಶರಾಯರು ವಾಸ್ತವ ಸಂಗತಿ ಏನೆಂಬುದನ್ನು ತಿಳಿಸಿ ನನ್ನನ್ನು ಬಚಾವ್ ಮಾಡಿದ್ದರು.

‘ತಾಯಿ ನಾಡು’ವಿನಿಂದ ಸಂಯುಕ್ತ ಕರ್ನಾಟಕಕ್ಕೆ ಬಂದದ್ದರಿಂದ ನನ್ನ ಬಡತನ ಸ್ವಲ್ಪಮಟ್ಟಿಗೆ ಹಿಮ್ಮೆಟ್ಟಿತ್ತು. ಬ್ರೇಕ್ ಫಾಸ್ಟಿಗಾಗಿ ನಾರಾಯಣಸ್ವಾಮಿಯ ಆಗಮನವನ್ನೇ ಎದುರು ನೋಡುತ್ತಾ ಕೂರುವಂಥ ಸ್ಥಿತಿ ಇರಲಿಲ್ಲ. ಆದರೆ ನನ್ನ ಸ್ವಾತಂತ್ರ್ಯ ಸ್ವಲ್ಪ ಬಡವಾಗಿತ್ತು. ಅಲ್ಲಿ ಸಂಬಳ ಅಲ್ಪಸ್ವಲ್ಪವಾದರೂ ವಾತಾವರಣದಲ್ಲಿ ಸ್ವಾತಂತ್ರ್ಯದ ಗಾಳಿಗೆ ಬರವಿರಲಿಲ್ಲ.

ಉಸಿರುಗಟ್ಟಿಸುವ ವಾತಾವರಣದಲ್ಲಿ ನಾನು ‘ಸಂಕ’ ಸೇರಿದಾಗ ನನಗಿದ್ದ ಏಕೈಕ ಭರವಸೆಯೆಂದರೆ ಇಂದಿರಾತನಯರು. ಆದರೆ ನಾನು ಸೇರಿದ ಕೆಲವೇ ದಿನಗಳಲ್ಲಿ ಅವರು ‘ಪ್ರಜಾವಾಣಿ’ ಸೇರಿದರು. ನನಗೆ ಅಲ್ಲಿದ್ದ ಇನ್ನೊಬ್ಬ ಸಂವಹನೀಯ ಮಿತ್ರನೆಂದರೆ ಜಿ ಎಸ್ ಸದಾಶಿವ.

ಬಿ ಶ್ರೀನಿವಾಸಮೂರ್ತಿ ಎಂಬುವವರು ಸಾಪ್ತಾಹಿಕ ಪುರವಣಿ ನೋಡಿಕೊಳ್ಳುತಿದ್ದರು. ಸದಾಶಿವ ಸಾಪ್ತಾಹಿಕ ಪುರವಣಿಯಲ್ಲಿ ಅವರಿಗೆ ಜೂನಿಯರ್ ಆಗಿದ್ದರು. ಸಾಪ್ತಾಹಿಕ ಪುರವಣಿ ವಿಭಾಗವಿದ್ದದ್ದು ಮಹಡಿಯ ಮೇಲೆ, ಲೈಬ್ರರಿ ಇದ್ದ ಸ್ಥಳದಲ್ಲಿ. ಊಟದ ವಿರಾಮದಲ್ಲಿ ನಾವು ಭೇಟಿಯಾಗುತ್ತಿದ್ದೆವು. ಸಾಹಿತ್ಯದಲ್ಲಿ ನನಗಿರುವ ಆಸಕ್ತಿಯನ್ನು ಸದಾಶಿವ ನಾಗೇಶ ರಾಯರಿಗೆ ತಿಳಿಸಿರುವ ಸಾಧ್ಯತೆ ಇತ್ತು.

‘ಸ್ಟೇಟ್ಸ್ ಮನ್’  ಇತ್ಯಾದಿ ದೈನಂದಿನ ವಿದ್ಯಮಾನಗಳ ಇಂಗ್ಲಿಷ್ ಲೇಖನಗಳ ಭಾಷಾಂತರವನ್ನೇ ನನಗೆ ವಹಿಸುತ್ತಿದ ನಾಗೇಶ ರಾಯರು ಒಂದು ದಿನ ಕೆಲವು ಪುಸ್ತಕಗಳನ್ನು ನನ್ನ ಕೈಯ್ಯಲ್ಲಿಟ್ಟು ಇವುಗಳ ರಿವ್ಯೂ ಬರೆದುಕೊಡಿ ಎಂದರು. ‘ಸಂಕ’ ಕಾರ್ಯ ವೈಖರಿಯೇ ವಿಚಿತ್ರವಾಗಿತ್ತು. ಸಾಪ್ತಾಹಿಕ ಪುರವಣಿ ಸಂಪಾದಕರು ಬಿ ಶ್ರೀನಿವಾಸಮೂರ್ತಿಯವರಾಗಿದ್ದರೂ ಪುಸ್ತಕ ವಿಮರ್ಶೆಯನ್ನು ನಾಗೇಶ ರಾಯರೇ ನೋಡಿಕೊಳ್ಳುತ್ತಿದ್ದರು. ಹೀಗೆ ‘ಸಂಕ’ದಲ್ಲಿ ನನ್ನ ಬುಕ್ ರಿವ್ಯೂ ಶುರುವಾಯಿತು.

‘ಕಾಲೂರ ಚೆಲುವ’ ಅಚ್ಚಗನ್ನಡದಲ್ಲಿ ಬರೆದ ಒಂದು ಕಥನ ಕಾವ್ಯ. ಕೊಳಂಬೆ ಪುಟ್ಟಣ್ಣಗೌಡರು ಕವಿ. ನನಗೆ ನೆನಪಿರುವಂತೆ ಇದರ ವಿಮರ್ಶೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮೊದಲ ಪತ್ರಿಕಾ ವಿಮರ್ಶೆ. ನಾಗೇಶ ರಾಯರು ಕೊಟ್ಟ ಪುಸ್ತಕಗಳಲ್ಲಿ ಇದೂ ಒಂದು. ನನ್ನ ವಿಮರ್ಶೆಯನ್ನು ಮೆಚ್ಚಿಕೊಂಡು ಕೊಳಂಬೆ ಪುಟ್ಟಣ್ಣಗೌಡರು ನನಗೊಂದು ಪತ್ರ ಬರೆದರು ಹಾಗೂ ಸ್ವಹಸ್ತಾಕ್ಷರ ಹಾಕಿ ಕಾವ್ಯದ ಪ್ರತಿಯೊಂದನ್ನು ನನಗೆ ಕಳಹಿಸಿ ಕೊಟ್ಟರು. ಈಗಲೂ ಅದು ನನ್ನ ಬಳಿ ಇದೆ. ಹೀಗೆ ನಾನು ‘ಸಂಕ’ದಲ್ಲಿ ನನಗರಿವಿಲ್ಲದಂತೆಯೇ ಸಾಹಿತ್ಯ ವಿಮರ್ಶಕನಾಗಿ ಬಿಟ್ಟಿದ್ದೆ.

‘ಸ್ಟೇಟ್ಸ್ ಮನ್’ ಪತ್ರಿಕೆ ಹಿಮಾಲಯದ ಕೊರೆಯುವ ಚಳಿಯಲ್ಲಿ ಗಡಿ ರಕ್ಷಣೆ ಮಾಡುತ್ತಿರುವ ನಮ್ಮ ವೀರ ಯೋಧರ ಸಾಹಸಗಳು, ಅವರು ಪಡುವ ಬವಣೆ, ಅಲ್ಲಿನ ಸ್ಥಿತಿಗತಿಯ ದರ್ಶನ ಮಾಡಿಸುವ ಒಂದು ಲೇಖನ ಮಾಲೆಯನ್ನು ಪ್ರಕಟಿಸಲಾರಂಭಿಸಿತ್ತು. ಅದು ಚೈನಾದೊಂದಿಗಿನ ನಮ್ಮ ಗಡಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದ ‘ಸ್ಟೇಟ್ಸ್ ಮನ್’ ಪತ್ರಿಕೆಯ ವರದಿಗಾರನ ಪ್ರತ್ಯಕ್ಷದರ್ಶಿ ಕಥನವಾಗಿತ್ತು.

ತುಂಬಾ ಮಾಹಿತಿ ಪೂರ್ಣವೂ ನಮ್ಮ ವೀರ ಯೋಧರ ವೀರತೇಜವನ್ನು ವಿವರಿಸುವ ಲೇಖನ ಮಾಲೆ ಅದಾಗಿತ್ತು. ಓದಿದರೆ ಮೈ ನವಿರೇಳಿಸುತ್ತಿತ್ತು. ಆ ಲೇಖನಗಳನ್ನು  ಕನ್ನಡೀಕರಿಸಿ ‘ಸಂಕ’ ಸಂಪಾದಕೀಯ ಪುಟದಲ್ಲಿ ಪ್ರಕಟಿಸಲು ಸಂಪಾದಕರು ನಿರ್ಧರಿಸಿದ್ದರು. ಆ ಲೇಖನಗಳನ್ನು ನಾನು ಮತ್ತು ಇಂದಿರಾತನಯರು ಹಂಚಿಕೊಂಡು ಅನುವಾದಿಸತಕ್ಕದ್ದೆಂದು ಶಾಮ ರಾಯರು ಹೇಳಿದ್ದಾರೆಂದು ನಾಗೇಶ ರಾಯರು ನಮಗೆ ತಿಳಿಸಿದರು. ಅಂದಿನಿಂದ ‘ಸ್ಟೇಟ್ಸ್ ಮನ್’ ಪತ್ರಿಕೆ ಬಂದ ಕೂಡಲೇ ಒಂದು ಪ್ರತಿ ನನ್ನ ಕೈವಶವಾಗುತ್ತಿತ್ತು.

ಸುಮಾರು ಹದಿನೈದು ಕಂತುಗಳಲ್ಲಿ ಈ ಲೇಖನಮಾಲೆ ಪ್ರಕಟವಾಯಿತು. ಇಂದಿರಾತನಯರು ‘ನಿಮ್ಮಿಂದಲೇ ಶುರುವಾಗಲೀ’ ಎಂದು ಅನುವಾದವನ್ನು ಮೊದಲು ನನಗೆ ಒಪ್ಪಿಸಿದರು. ಒಂದೆರೆಡು ಅನುವಾದಗಳು ಪ್ರಕಟವಾದ ನಂತರ ‘ಭಾಷೆ ಶೈಲಿಗಳಲ್ಲಿ ಏಕರೂಪತೆ ಇರಬೇಕು. ಆದ್ದರಿಂದ ನೀವೇ ಇದನ್ನು ಮಾಡಿ ಬಿಡಿ’ ಎಂದು ಇಂದಿರಾತನಯರು ಈ ಲೇಖನ ಮಾಲೆಯ ಅನುವಾದವನ್ನು ಪೂರ್ತಿಯಾಗಿ ನನಗೆ ವಹಿಸಿಬಿಟ್ಟರು. ಇದಕ್ಕೆ ನಾಗೇಶ ರಾಯರ ಸಮ್ಮತಿಯೂ ಇತ್ತು. ಈ ಲೇಖನಗಳನ್ನು ‘ಸಂಕ’ ಓದುಗರು ಮೆಚ್ಚಿಕೊಂಡಿದ್ದರು.

ಇದಾದ ಆರೆಂಟು ತಿಂಗಳ ನಂತರ ‘ಹಿಮಾಲಯದ ವೀರರು’ ಲೇ: ಮತ್ತೂರು ಕೃಷ್ಣಮೂರ್ತಿ ಎಂಬ ಪುಸ್ತಕವೊಂದು ನನ್ನ ಕಣ್ಣಿಗೆ ಬಿತ್ತು. ಕೈಗೆತ್ತಿಕೊಂಡು ನೋಡಿದೆ. ಅದು ‘ಸಂಕ’ದಲ್ಲಿ ಪ್ರಕಟವಾದ ‘ಸ್ಟೇಟ್ಸ್ ಮನ್’ ಪತ್ರಿಕೆಯಿಂದ ನಾನು ಅನುವಾದಿಸಿದ ಲೇಖನಗಳ ಸಂಗ್ರಹವಾಗಿತ್ತು. ಲೇಖಕರು ಮುನ್ನುಡಿಯಲ್ಲಿ ಇದು ‘ಸಂಕ’ಕ್ಕೆ ತಾವು ಬರೆದ ಸ್ವತಂತ್ರ ಲೇಖನಗಳ ಸಂಕಲನವೆಂದು ಭಿನ್ನವಿಸಿಕೊಂಡಿದ್ದರು.

ನಾನು ಇದನ್ನು ಇಂದಿರಾತನಯರ ಬಳಿ ಪ್ರಸ್ತಾಪಿಸಿದೆ. ಆ ವೇಳೆಗಾಗಲೇ ಆ ಪುಸ್ತಕದ ಒಂದು ಪ್ರತಿಯನ್ನು ಇಂದಿರಾತನಯರ ಕೈಯ್ಯಲ್ಲಿರಿಸಿ “ಶ್ಯಾಮೂ ಹೆಚ್ಚು ಜನಕ್ಕೆ ನಮ್ಮ ವೀರ ಯೋಧರ ಪರಿಚಯವಾಗಲಿ ಎಂದು ಇದನ್ನು ಪುಸ್ತಕ ರೂಪದಲ್ಲಿ ತಂದಿದ್ದೇನೆ. ರಾಯಲ್ಟಿ ಹಂಚಿಕೊಳ್ಳೋಣ” ಎಂದು ಹೇಳಿದ್ದರಂತೆ.

“ಸಾರ್, ಇದು ಕೃತಿಚೌರ್ಯವಲ್ಲದೆ ಬೇರೇನೂ ಅಲ್ಲ. ಹಗಲು ದರೋಡೆ. ನಾನು ಅನುವಾದಿಸಿದ್ದನ್ನು ಅವರು ತಮ್ಮ ಹೆಸರಲ್ಲಿ ಪ್ರಕಟಿಸಿರುವುದು ಸರಿಯೇ?” ಎಂದು ಇಂದಿರಾತನಯರಲ್ಲಿ ನನ್ನ ನೋವು ಆಕ್ರೋಶಗಳನ್ನು ತೋಡಿಕೊಂಡೆ.

“ನೀವು ಮಾಡಿದ್ದೂ ಕೃತಿಚೌರ್ಯವಲ್ಲವೆ? ನೀವೂ ‘ಸ್ಟೇಟ್ಸ್ ಮನ್’ ನಿಂದ ಅನುವಾದಿಸಿದ್ದು, ಅದರಲ್ಲಿ ನಿಮ್ಮ ಕಾಪಿರೈಟ್ ಸಾಧಿಸುವುದು ಹೇಗೆ ಸಾಧ್ಯ?”

“ಸಾರ್, ನಾನು ಕೃತಿಚೌರ್ಯ ಮಾಡಿಲ್ಲ. ಅನುವಾದ ಮಾಡಿದ್ದೇನೆ. ಅನುವಾದ ಮಾಡಲು ಹೇಳಿದ ಸಂಪಾದಕರು ‘ಸ್ಟೇಟ್ಸ್ ಮನ್’ ಪತ್ರಿಕೆಯಿಂದ ಅನುಮತಿ ಪಡೆದಿರಬೇಕಲ್ಲವೆ?”

ಸ್ವಲ್ಪ ಹೊತ್ತು ಗಂಭೀರವದನರಾಗಿದ್ದ ಇಂದಿರಾತನಯರು. “ರಂಗನಾಥ ರಾವ್, ಇದನ್ನ ಇಲ್ಲಿಗೇ ಬಿಟ್ಟುಬಿಡಿ. ಮುಂದುವರಿಸಬೇಡಿ. ನೀವು ನಡೆಯಬೇಕಾದ ಹಾದಿ ಇನ್ನು ಬಹಳಷ್ಟಿದೆ. ಇದೊಂದು ‘ಸಣ್ಣ ದರ್ಶನವಷ್ಟೆ’ ಎಂದು ನನ್ನನ್ನು ಸಮಾಧಾನಗೊಳಿಸಿದರು.

‘ಹಿಮಾಲಯದ ವೀರರು’ ಎಸ್ ಎಸ್ ಎಲ್ ಸಿ ಗೆ ಕನ್ನಡ ಪಠ್ಯವಾಯಿತು. ರಾಯಲ್ಟಿ ಹಂಚಿಕೊಳ್ಳುವುದು ಮಾತಾಗಿಯೇ ಉಳಿಯಿತು. ಈ ಮಧ್ಯೆ ಇಂದಿರಾಯತನಯ ಪ್ರಜಾವಾಣಿಗೆ ಹೋದರು. ಈ ಬೌದ್ಧಿಕ ಅಪ್ರಮಾಣಿಕತೆ ಕಂಡು ನಾನು ಕ್ಷುದ್ರನಾಗಿದ್ದರೂ ಅಸಹಾಯಕನಾಗಿದ್ದೆ. ಅಲ್ಲಿ ನನ್ನ ಬೆಂಬಲಕ್ಕೆ ನಿಲ್ಲುವವರು, ನೈತಿಕತೆಯನ್ನು ಎತ್ತಿ ಹಿಡಿಯುವವರು ಯಾರೂ ಇರಲಿಲ್ಲ.

‘ಸಂಕ’ದಲ್ಲಿ ಈಗ ನನ್ನ ಸಮಾನ ಮನಸ್ಕರೆಂದರೆ ಜಿ ಎಸ್ ಸದಾಶಿವ ಒಬ್ಬರೇ. ಖಾದ್ರಿ ಅಚ್ಯುತನ್ ಕೇಂದ್ರ ವಾರ್ತಾ ಸೇವೆಗೆ ಆಯ್ಕೆಯಾಗಿ ಶಿಮ್ಲಾದ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಆಫೀಸಿನಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸದಾಶಿವನ ಜೊತೆಯಲ್ಲೂ ಹೆಚ್ಚು ಮಾತನಾಡುವಂತಿರಲಿಲ್ಲ. ಸಾಪ್ತಾಹಿಕ ಪುರವಣಿ ವಿಭಾಗ ಇದ್ದದ್ದು ಮೊದಲ ಮಹಡಿಯಲ್ಲಿ.

ಬೆಳಗ್ಗೆ ಸಂಪಾದಕೀಯ ವಿಭಾಗದಲ್ಲಿದ್ದ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಮೇಲೆ ಹೋದರೆಂದರೆ ಅವರು ಕೆಳಗೆ ಬರುವಂತಿರಲಿಲ್ಲ. ಮೇಲೆ ಹೋಗಿ ಅವರನ್ನು ಮಾತನಾಡಿಸುವಂತಿರಲಿಲ್ಲ. ಅಷ್ಟು ಕಟ್ಟುನಿಟ್ಟು. ಲಂಚ್ ವೇಳೆಯಲ್ಲಿ ನಮ್ಮ ಭೇಟಿ. ಚಾಮರಾಜಪೇಟೆಯಲ್ಲಿ ಸದಾಶಿವ ರೂಮ್ ಮಾಡಿಕೊಂಡಿದ್ದರು. ಬಹುತೇಕ ಪ್ರತಿ ಭಾನುವಾರ ನಾನು ಅವರ ರೂಮಿಗೆ ಹೋಗುತ್ತಿದ್ದೆ. ಒಟ್ಟಿಗೆ ಬೆಳಗಿನ ಉಪಾಹಾರ.

ನಂತರ ಸದಾಶಿವ ಆಗತಾನೇ ‘ಚಂಡೆ ಮದ್ದಳೆ’ ಭೇರಿ ಬಾರಿಸುತ್ತಾ ಬಂದಿದ್ದ ನವ್ಯ ಕಾವ್ಯದ ಬಗ್ಗೆಯೋ ಅನಂತ ಮೂರ್ತಿಯವರ ಕತೆಗಳ ಬಗ್ಗೆಯೋ ಮಾತಾಡುತ್ತಿದ್ದರು. ದುಡ್ಡು ಕಾಸಿನಲ್ಲಿ ಸದಾಶಿವ ನನಗಿಂತ ಕೊಂಚ ಭದ್ರವಾಗಿದ್ದರು. ಮಹಾತ್ಮ ಗಾಂಧಿ ರಸ್ತೆಯ ಪುಸ್ತಕದ ಅಂಗಡಿಗೆ ಬರುವ ಹೊಸ ಪುಸ್ತಕಗಳನ್ನು ಕೊಳ್ಳುವಷ್ಟು. ಆಗೆಲ್ಲ 5-10 ರೂಗಳಿಗೆ ಪೆಂಗ್ವಿನ್ ಪೇಪರ ಬ್ಯಾಕ್ ಪುಸ್ತಕಗಳು ಕೈಗೆಟುಕುತ್ತಿದ್ದವು.

ಸದಾಶಿವನ ಸಣ್ಣ ಲೈಬ್ರರಿಯಲ್ಲಿ ಕಾಮು, ಕಾಫ್ಕಾ, ಡಿ ಎಚ್ ಲಾರೆನ್ಸ್, ಎಜ್ರಾ ಪೌಂಡ್, ಟಿ ಎಸ್ ಎಲಿಯಟ್, ಸಾತ್ರೆ ಇವರುಗಳ ಪುಸ್ತಕಗಳು ಹಾಸು ಹೊಕ್ಕಾಗಿದ್ದವು. “ಅಹಹಾ ಇಂದೆನಗೆ ಆಹಾರ ಸಿಕ್ಕಿತು” ಎಂದು ನಾನು ಸದಾಶಿವನ ಪುಸ್ತಕ ಭಂಡಾರಕ್ಕೆ ಲಗ್ಗೆ ಹಾಕಿದೆ. ಶೇಕ್ಸ್ ಪಿಯರ್, ಶೆಲ್ಲಿ, ಕೀಟ್ಸ್, ವರ್ಡ್ಸ್ ವರ್ತ್, ಗ್ರಹಾಂ ಗ್ರೀನ್, ಪೆರ್ರಿಮ್ಯಾಸನ್ ವರಗೆ ಬಂದು ನಿಂತಿದ್ದ ನನ್ನ ಇಂಗ್ಲಿಷ್ ಸಾಹಿತ್ಯದ ಓದಿನ ದಿಗಂತ ವಿಸ್ತರಿಸತೊಡಗಿತು.

ಸ್ವಾತಂತ್ರ್ಯ ಮತ್ತು ಹಸಿವು ಈ ಎರಡು ಹಪಾಹಪಿತನಗಳು ಮಾನವನ ‘ವಿಧಿ’ಯನ್ನೇ ಹಾದಿ ತಪ್ಪಿಸಿ ಕ್ರಾಂತಿಯನ್ನುಂಟು ಮಾಡಬಲ್ಲದು ಎನ್ನುವುದಕ್ಕೆ ಜಗತ್ತಿನ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಅರವತ್ತರ ದಶಕವೂ ಇಂಥದೊಂದು ಹಪಾಪಿತನದಿಂದ ಏದುಸಿರು ಬಿಡುತ್ತಿತ್ತು. ನೆಹರೂ ಅವರ ಸಮಾಜವಾದಿ ಪರಿಕಲ್ಪನೆಯಿಂದ ಭ್ರಮನಿರಸನಗೊಂಡು, ಲೋಹಿಯಾ ಅವರ ಸಮಾಜವಾದದಿಂದ ಆಕರ್ಷಿತರಾದ ಹೊಸ ತಲೆಮಾರೊಂದು ಪರಿವರ್ತನೆಗೆ ಚಡಪಡಿಸುತ್ತಿತ್ತು.

ಅಡಿಗರು “ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ, ಶೇಕಡ ಹತ್ತಕ್ಕೆ ಮೋಸವಿಲ್ಲ” ಎಂದು ನೆಹರೂ ಸಮಾಜವಾದಕ್ಕೊಂದು ಭಾಷ್ಯ ಬರೆದಿದ್ದರು. ನನ್ನ ಮನಸ್ಸಿನ ಲೋಲಕವೂ ಲೋಹಿಯಾ ಚಿಂತನೆಗಳತ್ತ. ಕರ್ನಾಟಕದಲ್ಲಿ ಕಾಗೋಡು ಸತ್ಯಾಗ್ರಹ, ಗೋಪಾಲ ಗೌಡರು, ಅಣ್ಣಯ್ಯ ಅವರುಗಳತ್ತ ತುಯ್ದಾಡುತ್ತಿತ್ತು. ‘ತಾಯಿನಾಡು’ ಪತ್ರಿಕೆ  ಕೆಲವೇ ದಿನಗಳಲ್ಲಿ ನನಗೆ ಪತ್ರಕರ್ತನ ಸ್ವಾತಂತ್ರ್ಯವನ್ನು ಕೊಟ್ಟು ಬಿಟ್ಟಿತ್ತು.

ನನ್ನ ಮಾನವಾಸಕ್ತಿ ಬರವಣಿಗೆಗಳಿಗೆ ಸಂಪಾದಕರು/ಸುದ್ದಿ ಸಂಪಾದಕರು ಧಾರಾಳವಾಗಿ ಸ್ಥಳಾವಕಾಶ ಮಾಡಿಕೊಟ್ಟರು. ನನ್ನ ಒಂದು ಹಸಿವಿಗೆ ಸ್ವಲ್ಪಮಟ್ಟಿಗೆ ಅಲ್ಲಿ ‘ಆಹಾರ’ ದೊರಕಿತ್ತು. ಆದರೆ ಒಡಲಾಳದ ಹಸಿವಿಗೆ ಅಲ್ಲಿ ಮುಕ್ತಿ ಸಿಕ್ಕಿರಲಿಲ್ಲ.

‘ಸಂಕ’ದಲ್ಲಿ ಇದಕ್ಕೆ ತದ್ವಿರುದ್ಧ. ಮಾಹೆಯಾನ 125 ರೂ., ಸಂಬಳ ನನ್ನ ಮತ್ತು ನನ್ನ ಮನೆಯವರ ಹಸಿವನ್ನು ಸ್ವಲ್ಪಮಟ್ಟಿಗಾದರೂ ತಣಿಸಿತ್ತು. ಆದರೆ ನನ್ನ ಸ್ವಾತಂತ್ರ್ಯದ ಹಪಾಪಹಪಿಗೆ ಶೃಂಖಲೆ ತೊಡಿಸಿದ್ದರು. ಸ್ವತಂತ್ರ ಚಿಂತನೆಗೆ ಇಲ್ಲಿ ಅವಕಾಶವಿರಲಿಲ್ಲ. ಸಂಪಾದಕೀಯ ವಿಭಾಗವು ಸೋಲ್ಜೆನಿಟ್ಸಿನ್ನನ ‘ಎ ಡೇ ಇನ್ ದಿ ಲೈಫ್ ಆಫ್ ಇವಾನ್ ದಿ ಡೆನಿಸೊವಿಚ್’ ನ ಕೂಡು ದೊಡ್ಡಿ (ಕಾನ್ಸಂಟ್ರೇಷನ್ ಕ್ಯಾಂಪ್)ಯಂತಿತ್ತು. ‘ಸಂಕ’ದ ಈ ಕೂಡು ದೊಡ್ಡಿಯೊಳಗೆ ಬಂದಿಯಾಗಿದ್ದೆ ನಾನು.

ಹೀಗ ಕಳೆದ ಎರಡೂವರೆ ವರ್ಷಗಳಲ್ಲಿ ನಾನು ‘ಸಂಕ’ದಲ್ಲಿ ಕಲಿತದ್ದು ಕಡಿಮೆ ಏನಲ್ಲ. ಸುದ್ದಿಗಳ ಭಾಷಾಂತರದಲ್ಲಿ, ಸುದ್ದಿಗಳ ಪರಿಷ್ಕರಣೆಯಲ್ಲಿ, ಪುಟ ವಿನ್ಯಾಸದಲ್ಲಿ ನಾನು ಅಗತ್ಯಕ್ಕಿಂತ ಹೆಚ್ಚಿನ ಉತ್ಸಾಹದಲ್ಲಿ ತೊಡಗಿಕೊಂಡು ಇವನ್ನೆಲ್ಲ ಕಲಿತೆ. ಎಲ್ಲಕ್ಕಿಂತ ಮಿಗಿಲಾಗಿ ‘ಸ್ಟೇಟ್ಸ್ ಮನ್’ ಮೊದಲಾದ ದೆಹಲಿ ಪತ್ರಿಕೆಗಳ ಲೇಖನಗಳ ಅನುವಾದ, ಸಿಂಡಿಕೇಟ್ ಲೇಖನಗಳ ಅನುವಾದ ಕಾರ್ಯವನ್ನು ಶ್ಯಾಮ ರಾಯರು ನನಗೆ ಕೊಡುತ್ತಿದ್ದುದರಿಂದ (ಇವು ಸಂಪಾದಕೀಯ ಪುಟದಲ್ಲಿ ಪ್ರಕಟವಾಗುತ್ತಿದ್ದವು) ನನಗೆ ಭಾಷಾಂತರದಲ್ಲಿ ಒಂದು ಮಟ್ಟದ ಸಿದ್ಧಿ ಸಾಧ್ಯವಾಯಿತು. ಹಾಗೆಯೇ ನನ್ನಿಂದ ಪುಸ್ತಕ ವಿಮರ್ಶೆಗಳನ್ನು ಬರೆಸುವ ಮೂಲಕ ‘ಸಂಕ’ ನನಗೆ ಸಾಹಿತ್ಯ ಲೋಕದಲ್ಲಿ ಈಸುವ ಅವಕಾಶವನ್ನೂ ಒದಗಿಸಿತ್ತು.

ದಿನಗಳು ಉರುಳುತ್ತಿದ್ದವು. ಸುದ್ದಿಗಳ, ಲೇಖನಗಳ ಭಾಷಾಂತರದಲ್ಲಿ ಪೇಜ್ ಮೇಕಪ್ ಕೆಲಸಗಳಲ್ಲಿ ಏಕತಾನತೆ ಕಾಡಲಾರಂಭಿಸಿತು. ಸ್ವತಂತ್ರವಾಗಿ ಲೇಖನಗಳನ್ನು ಬರೆಯಬೇಕು, ನನ್ನ ತುಡಿತಗಳಿಗೆ ಅಭಿವ್ಯಕ್ತಿ ಕೊಡಬೇಕು, ಕೆಲಸದಲ್ಲಿ ಹೆಚ್ಚು ಸೃಜನಶೀಲನಾಗಬೇಕು, ಮ್ಯಾಗ್ಸೈನ್ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶ ದೊರೆತರೆ ಹೆಚ್ಚು ಸೃಜನಶೀಲನಾಗಲು ಆಸ್ಪದವಾದೀತು ಎಂಬುದೆಲ್ಲವೂ ಮನಸ್ಸಿನ ಮಂಡಿಗೆಗಳಾದವು. ಆದರೆ ಅಂಥ ಅವಕಾಶ ದೊರೆಯಲಿಲ್ಲ. ಸಂಪಾದಕೀಯ ಪುಟಕ್ಕೆಂದು ಬರೆದುಕೊಟ್ಟ ಎರಡು ಮೂರು ಲೇಖನಗಳನ್ನು ‘ಶಾರಾ’ ತಿರಸ್ಕರಿಸಿದ್ದರು. ‘ನಾನು ಹೇಳಿದಷ್ಟು ಮಾಡು’ ಎಂದು ಉಪದೇಶಿಸಿದ್ದರು.

ನನಗೆ ವಾರದ ರಜೆ ಇದ್ದ ಒಂದು ದಿನ. ಬೆಳಗ್ಗೆಯೇ ಇಂದಿರಾತನಯರ ಮನೆಗೆ ಹೋದೆ. ಅವರಿಗೆ ಆಗ ಮಧ್ಯಾಹ್ನದ ಪಾಳಿ. ಅವರು ಆಫೀಸಿಗೆ ಹೊರಟರು. ನಾನೂ ಅವರ ಜೊತೆ ಶಿವಾಜಿನಗರದ ಬಸ್ಸು ಹತ್ತಿದೆ. ಯಾವುದಾದರೂ ಇಂಗ್ಲಿಷ್ ಸಿನೆಮಾ ನೋಡುವ ಉಮೇದಿನಲ್ಲಿ. ಟಿಕೆಟ್ ತೆಗೆದುಕೊಳ್ಳಲು ಇಂದಿರಾತನಯರು “ನಿಮ್ಮ ಡೆಸ್ಟಿನೇಶನ್” ಎಂದು ಕೇಳಿದರು.

“ಮೈ ಡೆಸ್ಟಿನಿ ಈಸ್ ಎಂ ಜಿ ರೋಡ್” ಎಂದು ಬಿಟ್ಟೆ ಅಚಾನಕವಾಗಿ.

“ನಿಮ್ಮ ಡೆಸ್ಟಿನಿ ಎಂ ಜಿ ರೋಡಾ?”

“ಹೌದು ನನ್ನ ಡೆಸ್ಟಿನಿ, ಡೆಸ್ಟಿನೇಶನ್ ಎರಡೂ ಮಹಾತ್ಮ ಗಾಂಧಿ ರಸ್ತೆ”

ಇಂದಿರಾತನಯರು ನಕ್ಕು ಬಿಟ್ಟರು. ಹೌದು ನನ್ನ ಡೆಸ್ಟಿನಿ ಮತ್ತು ಡೆಸ್ಟಿನೇಶನ್ ಎರಡೂ ಮಹಾತ್ಮ ಗಾಂಧಿ ರಸ್ತೆಯಾಗಿತ್ತು. ಆದರೆ ತಲುಪುವ ಮಾರ್ಗ ಕಾಣದಾಗಿತ್ತು. ಆ ಕ್ಷಣ ಆಶ್ಚರ್ಯಕರವಾಗಿ ನನ್ನ ದಿಗಂತದಲ್ಲಿ ಹೊಸ ನಕ್ಷತ್ರವೊಂದು ಗೋಚರಿಸಿತ್ತು. ನಾನು ಪುಳಕಿತನಾಗಿದ್ದೆ.

। ಮುಂದಿನ ವಾರ ‘ಪ್ರಜಾವಾಣಿ’ ಕಥಾನಕ ।

September 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: