ಬೀಗವಿಕ್ಕಿದ್ದ ಮನೆಯಲ್ಲಿ ಬೆಂಕಿಗೆ ಬಲಿಯಾದ ಮಕ್ಕಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳುಕೃತಿ ಅತ್ಯಂತ ಜನಪ್ರಿಯ ಬಹುರೂಪಿಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ʼಬೀಗ ಹಾಕಿದ್ದ ಮನೆಯಲ್ಲಿ ಬೆಂದು ಹೋದ ಮಕ್ಕಳುʼ – 

ದಿನಪತ್ರಿಕೆಯಲ್ಲಿ ಒಂದು ತುಣುಕು ಸುದ್ದಿ.

ನಾನಾಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ (2011). ಜೊತೆಗೆ ರೂಢಿಸಿಕೊಂಡಿದ್ದ ಜಾಯಮಾನದಂತೆ ಎತ್ತೆತ್ತ ನೋಡಿದರೂ ಮಕ್ಕಳ ವಿಚಾರಗಳು, ಮಕ್ಕಳ ಮೇಲಾಗುವ ಶೋಷಣೆಗಳು ಮಾತ್ರ ಕಾಣುವ ದೃಷ್ಟಿಕೋನ. ಹಾಗೆಯೇ ಪತ್ರಿಕೋದ್ಯಮ ಮತ್ತು ಅಪರಾಧ ಶಾಸ್ತ್ರ ಹಾಗೂ ಸಮಾಜ ಕಾರ್ಯದ ಕಲಿಕೆಯಿಂದಾಗಿ ಅಂತರ್ಗತವಾದ ಪ್ರಶ್ನೆಗಳು – ಯಾರಿಗೆ ಆಗಿರುವುದು, ಎಲ್ಲಿ ಆಯಿತು, ಯಾವಾಗ ಆಗಿದ್ದು, ಈಗ ಯಾರು ಏನು ಮಾಡಿದ್ದಾರೆ, ಮುಖ್ಯವಾಗಿ ಯಾಕೆ ಹಾಗಾಯಿತು?

ವರದಿಯಲ್ಲಿ ಹೆಚ್ಚಿನ ವಿವರಗಳಿರಲಿಲ್ಲ. ಬೆಂಗಳೂರು ನಗರದ ಹಿಂದುಳಿದ ಬಡ ಸಮುದಾಯಗಳು ವಾಸಿಸುವ ಒಂದು ಪ್ರದೇಶದ ಮನೆಯೊಂದರಲ್ಲಿ ಇಬ್ಬರು ಮಕ್ಕಳು ಬೆಂಕಿಗೆ ಬಲಿಯಾಗಿದ್ದರು. ಅವರ ತಾಯಿ ನೀರು, ಆಹಾರ ಇಟ್ಟು ಮಕ್ಕಳನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಾಳೆ. ಮಕ್ಕಳ ವಯಸ್ಸು ನಾಲ್ಕು ಮತ್ತು ಎರಡು. ಒಂದು ದುರಾದೃಷ್ಟದ ದಿನ ಏನೋ ಆಗಿ ಬೆಂಕಿ ಹತ್ತಿ ಮಕ್ಕಳಿಬ್ಬರು ದುರ್ಮರಣಕ್ಕೀಡಾಗಿದ್ದಾರೆ, ಅಷ್ಟೆ.

ಆಯೋಗದ ಕಾನೂನು ಸಲಹೆಗಾರರನ್ನು ಕರೆದು ಪ್ರಸ್ತಾಪಿಸಿದೆ. ಹೆಚ್ಚೇನೂ ಪ್ರಯೋಜನವಾಗಲಿಲ್ಲ. ಅದೊಂದು ಆಕಸ್ಮಿಕ. ಹೆಚ್ಚೆಂದರೆ ಪೊಲೀಸ್‌ ದೂರು ಏನೆಂದು ಆಗಿದೆ (ಎಫ್‌.ಐ.ಆರ್) ನೋಡಬೇಕು, ಪ್ರಕರಣ ನ್ಯಾಯಾಲಯಕ್ಕೆ ಹೋದರೆ ಸಂಬಂಧಿಸಿದ ಇಲಾಖೆ ಉತ್ತರಿಸುತ್ತದೆ.

ಏನೋ ಕಸಿವಿಸಿಯಾಯಿತು. ಪ್ರಾಯಶಃ ಇದನ್ನು ಓದುತ್ತಿರುವ ನಿಮಗೂ ಹಾಗೇ ಅನ್ನಿಸಿರಲಿಕ್ಕೆ ಸಾಕು. ಪ್ರಾಯಶಃ ನಮ್ಮ ಬಾಲ್ಯದಲ್ಲಿ ಇಂತಹ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿದ್ದೆವು. ಗುಡಿಸಲುಗಳಿಗೆ ಬೆಂಕಿ ಬಿದ್ದು ಮಕ್ಕಳು, ದೊಡ್ಡವರು ಎಲ್ಲರೂ ಸಾಯುತ್ತಿದ್ದುದು. ಆದರೆ ಈಗಿನ ದಿನಗಳಲ್ಲೂ ಹೀಗಾಗುತ್ತಿದೆಯಲ್ಲ ಎಂಬ ಆತಂಕ.

ಮಾಧ್ಯಮದ ಗೆಳೆಯರನ್ನು ಸಂಪರ್ಕಿಸಿ ಉಲ್ಲೇಖಿತ ಪ್ರಕರಣವನ್ನು ವರದಿ ಮಾಡಿದವರನ್ನು ಪತ್ತೆ ಮಾಡಿ ವಿವರ ಅಪೇಕ್ಷಿಸಿದೆ. ಸಿಕ್ಕಿದ್ದಿಷ್ಟು. ಬೆಂಗಳೂರಿನ ಕೊಳೆಗೇರಿಯಂತಹ ಪ್ರದೇಶದಲ್ಲಿ ಯಾರೋ ತಮ್ಮ ಮನೆ ಮಹಡಿ ಮೇಲೆ ಶೀಟ್‌ ಹೊದೆಸಿದ ಮನೆಯೆಂಬ ಗೂಡು ಕಟ್ಟಿದ್ದರು. ಮನೆಗೆ ಕಿಟಕಿಗಳಿರಲಿಲ್ಲ. ತಾಯಿ ಎಲ್ಲೋ ಏನೋ ದಿನಗೂಲಿ ಕೆಲಸ.

ಆಕೆ ಬಹಳಷ್ಟು ದಿನಗಳಿಂದ ಮಾಡಿದಂತೆ ಆ ದಿನವೂ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೊರಗಿನಿಂದ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಳು. ಆಕೆ ಹಿಂದೆ ಬರುವಷ್ಟರಲ್ಲಿ ಮನೆಗೆ ಬೆಂಕಿ ಬಿದ್ದಿತ್ತು. ಸುತ್ತಮುತ್ತಲಿನ ಜನ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಬೀಗ ಒಡೆದು ಬಾಗಿಲನ್ನೂ ತೆಗೆದಿದ್ದಾರೆ. ಆದರೆ ಅಷ್ಟರೊಳಗೆ ಹೊಗೆ ಸುತ್ತಿಕೊಂಡು ಸ್ವಲ್ಪ ಬೆಂಕಿ ತಗಲಿ ಮಕ್ಕಳು ಸತ್ತು ಹೋಗಿದ್ದರು.

ಮತ್ತಷ್ಟು ಪ್ರಶ್ನೆಗಳು – ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ ಯಾಕೆ ಬಂದಿತ್ತು? ಹತ್ತಿರದಲ್ಲಿ ಆ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಇರಲಿಲ್ಲವೆ – ಅಂಗನವಾಡಿ, ಬಾಲವಾಡಿ, ಇತ್ಯಾದಿ. ಆಕೆ ಒಂಟಿ ತಾಯಿಯೇನು? ಅವರಿದ್ದ ಮನೆಗೆ ಕಿಟಕಿ ಇರಲಿಲ್ಲ ಎಂದರೇನು? ಆ ಮನೆಯನ್ನು ಕಟ್ಟಿದವರು ಯಾರು? ಅಂತಹ ಮನೆ ಕಟ್ಟಲು ಅನುಮತಿ ಕೊಟ್ಟವರಾರು? ಈಗ ಆ ಮಕ್ಕಳ ಸಾವಿಗೆ ಯಾರು ಹೊಣೆ?

ದ.ರಾ. ಬೇಂದ್ರೆಯವರ ʼಸಾಯೋ ಆಟʼ ನಾಟಕದ ಕತೆಯಾಯಿತು. ‘ಸತ್ಯ ಹರಿಶ್ಚಂದ್ರ’ ಕತೆಯಲ್ಲಿ ಬರುವಂತೆ ‘ಲೋಹಿತಾಶ್ವ’ನ ಸಾವಿಗೆ ಯಾರು ಕಾರಣ? ‘ಓಹಿಲೇಶ್ವರ’ ಚಲನಚಿತ್ರದಲ್ಲಿ ʼ…ಯಾವ ಕಾರಣಕ್ಕಾಗಿ… ಈ ಸಾವು ನ್ಯಾಯವೆ?ʼ ಎಂಬ ಆರ್ತನಾದದಂತೆ. ಈ ಮಕ್ಕಳಿಗೆ ಜನ್ಮತಃ ಇರುವ ಸಂವಿಧಾನದ ಪರಿಚ್ಛೇದ 21 – ಜೀವಿಸುವ ಹಕ್ಕು – ಇದನ್ನು ಇಲ್ಲಿ ಉಲ್ಲಂಘಿಸಿದವರು ಯಾರು? 

ಮಕ್ಕಳ ಹಕ್ಕುಗಳ ಒಡಂಬಡಿಕೆ ಪರಿಚ್ಛೇದ 18ರಂತೆ ತಂದೆ ತಾಯಿಯರಿಗೆ ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡುವ ಪ್ರಾಥಮಿಕ ಜವಾಬ್ದಾರಿಯಿದೆ. ಅಂತಹ ಅವರ ಜವಾಬ್ದಾರಿಯನ್ನು ನಿರ್ವಹಿಸಲು ಸರ್ಕಾರ ಬೆಂಬಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಬೇಕು. ಹಾಗೆಯೇ ಪರಿಚ್ಛೇದ 26ರಂತೆ ಮಕ್ಕಳಿಗೆ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ವಿಮೆಯ ಸಂಪೂರ್ಣ ಫಲ ಪಡೆಯುವುದು ಮಕ್ಕಳ ಹಕ್ಕು. 

ನನ್ನ ಟಿಪ್ಪಣಿಯನ್ನು ಹಿಡಿದುಕೊಂಡು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆಗಿನ ಅಧ್ಯಕ್ಷರಾಗಿದ್ದ ನೀನಾ ನಾಯಕ್‌ ಅವರ ಮುಂದೆ ಕುಳಿತೆ. ಪ್ರಕರಣ ವಿವರಿಸಿದೆ. ಪ್ರಕರಣ ಒಂದು ಅಗ್ನಿ ಅನಾಹುತ ಎಂದಷ್ಟೇ ಆಗಿ ಮುಗಿದು ಹೋಗಿದೆ. ಈ ವಿಚಾರವನ್ನು ಕುರಿತು ನಾವು ಮಧ್ಯ ಪ್ರವೇಶಿಸಬೇಕಲ್ಲವೆ, ಇದು ಒಂಟಿ ಪ್ರಕರಣವಾಗಿ ವರದಿಯಾದರೂ ಇಂತಹದ್ದು ಹಲವು ಸಂಗತಿಗಳ ಮೇಲೆ ಪ್ರಭಾವ ಬೀರುತ್ತದಲ್ಲವೆ. ಈ ರೀತಿಯ ಪ್ರಕರಣಗಳು ಹಲವೆಡೆ ನಡೆಯುತ್ತಿರುತ್ತದೆ.

ಉದಾಹರಣೆಗೆ, ತಾಯಿ ತಂದೆಯರು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊರಗಿನಿಂದ ಬೀಗ ಹಾಕಿಕೊಂಡು ಹೋಗುವುದು; ಬೀಗ ಹಾಕದೆ ಮನೆಯಲ್ಲೇ ಇರಲು ಹೇಳಿ ಹೋಗುವುದು; ಮನೆಯೆದುರು ಬಿಟ್ಟು ಅಕ್ಕಪಕ್ಕದವರಿಗೆ ಹೇಳಿ ಹೋಗುವುದು; ಬೇರೆಯವರ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವುದು ಇತ್ಯಾದಿ. ಅಲ್ಲಿ ಮಕ್ಕಳಿಗಾಗಿ ಹಗಲು ಹೊತ್ತಿನಲ್ಲಿ ನೋಡಿಕೊಳ್ಳುವ ವ್ಯವಸ್ಥೆಗಳಿಲ್ಲವೆ, ಇದ್ದರೂ ಇಂತಹ ಕುಟುಂಬಗಳಿಗೆ ಅದರ ಶುಲ್ಕವನ್ನು ಭರಿಸಲಾಗದಿರಬಹುದು, ಸರ್ಕಾರದ ವ್ಯವಸ್ಥೆಗಳಿದ್ದರೂ ಅದು ಸಂಜೆಯ ತನಕ ಇರದಿರಬಹುದು, ಇತ್ಯಾದಿ. ಹೀಗಾಗುತ್ತಿರುವಾಗ ಮಕ್ಕಳ ಮೇಲೆ ಬಗೆ ಬಗೆಯ ದೌರ್ಜನ್ಯಗಳು, ಶೋಷಣೆಗಳು ಆಗುತ್ತಿರಬಹುದಲ್ಲವೆ.

ಇಂತಹದರಲ್ಲಿ ಮಕ್ಕಳ ಹಕ್ಕುಗಳ ನೀತಿ ನಿರೂಪಣೆ ಏನು ಹೇಳುತ್ತದೆ? ಮತ್ತೊಮ್ಮೆ ಮಕ್ಕಳನ್ನು ಕುರಿತು ಭಾರತ ಸಂವಿಧಾನ, ಭಾರತ ದಂಡ ಸಂಹಿತೆ, ರಾಷ್ಟ್ರೀಯ ಮಕ್ಕಳ ನೀತಿ 1979 (ಈಗ 2012ರಲ್ಲಿ ಹೊಸ ನೀತಿ ಬಂದಿದೆ), ಮಕ್ಕಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ 2001 (ಆಗ್ಗೆ ರಾಜ್ಯ ಕ್ರಿಯಾ ಯೋಜನೆ ಇರಲಿಲ್ಲ –ನಾನು ಸಮಾಲೋಚಕನಾಗಿ 2003ರಲ್ಲಿ ನಿರ್ಮಿಸಿದ್ದ ‌ಕರ್ನಾಟಕ ರಾಜ್ಯ ಕ್ರಿಯಾ ಯೋಜನೆಗೆ 2010ರಲ್ಲಿ ಅವಧಿ ತೀರಿತ್ತು);

ನಗರಾಭಿವೃದ್ಧಿ, ಕಟ್ಟಡ ನಿರ್ಮಾಣ ನೀತಿಯಲ್ಲಿ ಇಂತಹ ಪ್ರಕರಣಗಳನ್ನು ಕುರಿತು ಏನಾದರೂ ಇದೆಯಾ, ಬೆಂಗಳೂರು ಬೃಹತ್‌ ನಗರ ಪಾಲಿಕೆಯವರ ಪಾಲು ಏನು, ಕೊಳೆಗೇರಿ ಅಭಿವೃದ್ಧಿ ಪ್ರಾಧಿಕಾರದ ಪಾತ್ರವೇನು, ಹೀಗೆ ಮಕ್ಕಳು ಸತ್ತು ಹೋದರೆ ಪರಿಹಾರ ಸಿಗುವ ಸಾಧ್ಯತೆ ಇದೆಯೆ, ಇದ್ದರೆ ಅದನ್ನು ಯಾರು ಕೊಡಬೇಕು – ಎಲ್ಲ ತಿರುವಿ ಹಾಕಿಯಾಯಿತು.

ಮತ್ತಷ್ಟು ಹೊಸ ಪ್ರಶ್ನೆಗಳು. ಇಷ್ಟರ ಮೇಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಕಾಯಿದೆ 2005ರಂತೆ ಇಂತಹ ಪ್ರಕರಣಗಳಿಗೆ ರಾಜ್ಯ ಆಯೋಗ ಗಮನ ಕೊಡಬಹುದೆ? ಪ್ರಕರಣವನ್ನು ವಿವಿಧ ಕೋನಗಳಿಂದ ಗಮನಿಸುತ್ತಾ ಅಧ್ಯಯನ ಮಾಡುತ್ತಾ ಹೋದಂತೆ ಅದು ಜಟಿಲವಾಗುತ್ತಲೇ ಹೋಯಿತು. ನೀನಾ ಅವರ ಸಲಹೆಯಂತೆ ಇನ್ನೊಂದಿಷ್ಟು ಓದುವುದು, ತಿಳಿದವರೊಡನೆ ಮಾತನಾಡುವ ಆವಶ್ಯಕತೆ ಬಿತ್ತು.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989ರ ಪರಿಚ್ಛೇದ 19ರಂತೆ ಮಕ್ಕಳ ದುರುಪಯೋಗವಾಗಬಾರದು ಮತ್ತು ಮಕ್ಕಳನ್ನು ಕುರಿತು ಯಾರೇ ಆಗಲಿ ನಿರ್ಲಕ್ಷ್ಯ ತೋರಬಾರದು. ಪರಿಚ್ಛೇದ 3ರಂತೆ ಮಕ್ಕಳ ಹಿತದೃಷ್ಟಿಯಿಂದ ಸಂಬಂಧಿಸಿದವರು ಕ್ರಮಗಳನ್ನು ಕೈಗೊಳ್ಳಬೇಕು. ಭಾರತ ದಂಡ ಸಂಹಿತೆಯ ಸೆಕ್ಷನ್‌ 304ಎ ಹೇಳುವಂತೆ ನಿರ್ಲಕ್ಷ್ಯದಿಂದ ಮಕ್ಕಳ ಸಾವಿಗೆ ಕಾರಣವಾದವರಿಗೆ ಶಿಕ್ಷೆಯಿದೆ.

ಈ ಪ್ರಸಂಗದಲ್ಲಿ ತಂದೆ ತಾಯಿಯ ನಡೆ ನಿರ್ಲಕ್ಷ್ಯವೇ? ಅದೇ ಕಾಯಿದೆಯ ಸೆ. 317 ಹೇಳುವುದು 12 ವರ್ಷದೊಳಗಿನ ಮಕ್ಕಳನ್ನು ಪೋಷಕರು ಗಮನಿಸದೆ ಬಿಟ್ಟು ಹೋಗುವುದು ಅಥವಾ ಅಪಾಯಕ್ಕೆ ತಳ್ಳುವುದು ಶಿಕ್ಷಾರ್ಹ. ಏನೇ ಸುತ್ತಿ ಬಳಸಿ ಬಂದರೂ ತಾಯಿಯನ್ನೇ ಕಟಕಟೆಯಲ್ಲಿ ನಿಲ್ಲಿಸಬೇಕೆಂಬುದು ಕಾಣುತ್ತಿದೆ.

ಆಗಲೇ ಏನೋ ಹೊಳೆಯಿತು. ದ.ರಾ. ಬೇಂದ್ರೆಯವರ ʼಸಾಯೋ ಆಟʼ ನಾಟಕ ಆಡಿದ್ದಕ್ಕೂ ಸಾರ್ಥಕವಾಯಿತು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಂಜಿನಿಯರ್‌ ಆಗಿ ನಿವೃತ್ತರಾಗಿದ್ದ ನನ್ನೊಬ್ಬ ಚಿಕ್ಕಪ್ಪನಿಗೆ ಫೋನ್‌ ಮಾಡಿದೆ. ಹೀಗೆ ಹೀಗೆ ಎಲ್ಲ ಹೇಳಿ ಮುಖ್ಯ ʼಆ ಮನೆಗೆ ಕಿಟಕಿಯಿರಲಿಲ್ಲʼ. ಹೀಗೆ ಒಂದು ಮನೆಯನ್ನು ಕಟ್ಟಲು ಕಾರ್ಪೊರೇಷನ್‌ ಅನುಮತಿ ಕೊಟ್ಟಿರತ್ತಾ? ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಬೆಂಗಳೂರು ಮಹಾನಗರ ಪಾಲಿಕೆಯ ನೀತಿ ನಿಯಮಗಳು 2003ನ್ನು ವಿವರಿಸಿದ ಚಿಕ್ಕಪ್ಪ, ತಮ್ಮ ಎಂದಿನ ಸಾದೋಹರಣ ಉಪನ್ಯಾಸವನ್ನೇ ಮಾಡಿದರು. ಅದರ ಒಟ್ಟು ತಥ್ಯ ಮನೆಯೆಂದರೆ ಕಿಟಕಿ ಇರಲೇಬೇಕು. ಇಲ್ಲದಿದ್ದರೆ, ಅದು ಗೋಡೌನ್‌ ಇರಬಹುದು. ಆದರೂ ಗಾಳಿ ಆಡಲು ಏನಾದರೂ ವ್ಯವಸ್ಥೆ ಮಾಡಲೇಬೇಕು.

ಮನೆ ಕಟ್ಟಲು ನಗರ ಪಾಲಿಕೆಯಿಂದ ಅನುಮತಿ ಪಡೆಯಬೇಕಾದರೆ ನಕಾಶೆ ಕೊಟ್ಟಿರಬೇಕು ಮತ್ತು ಅದರಲ್ಲಿ ಕಟ್ಟಡದ ಸುತ್ತಮುತ್ತ ಜಾಗ ಬಿಡಬೇಕು, ಕಿಟಕಿ, ಬಾಗಿಲು ಇತ್ಯಾದಿ ತೋರಿಸಲೇಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದನ್ನೆಲ್ಲಾ ಉಲ್ಲಂಘಿಸಿ ಸೈಟು ಪೂರ್ತ ಮನೆ ಕಟ್ಟುವವರೇ ಅಧಿಕ. ಹಾಗಾದರೆ ಈ ನಿರ್ದಿಷ್ಟ ಮನೆ ಕಟ್ಟಲು ಅನುಮತಿ ತೆಗೆದುಕೊಂಡಿದ್ದರೇನು? ಉಲ್ಲಂಘಿಸಿರುವುದು ತಿಳಿದು ಬಂದರೆ ಸಂಬಂಧಿಸಿದವರು ಏಕೆ ಕ್ರಮ ಕೈಗೊಳ್ಳಲಿಲ್ಲ. ಮುಂದಿನ ಪ್ರಶ್ನೆಗಳು ಸಿದ್ಧವಾದವು.

ಅಧಿಕೃತವಾಗಿ ಪತ್ರಗಳು ಪ್ರಕರಣ ವಿವರಿಸಿ ಬೆಂಗಳೂರು ಮಹಾನಗರ ಪಾಲಿಕೆಗೆ ಹೋದವು. ಸಂಬಂಧಿಸಿದ ಪ್ರದೇಶದ ಎಂಜಿನಿಯರುಗಳು, ಹಾಗೂ ಪೊಲೀಸರಿಗೆ ಬುಲಾವ್‌ ಹೋಯಿತು. ಪೊಲೀಸರು ಬಂದು ಹೋದರು. ಅದೊಂದು ಆಕಸ್ಮಿಕವೆಂದೂ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲವೆಂದೂ ತಿಳಿಸಿದರು. ನಗರ ಪಾಲಿಕೆಯವರಿಗೆ ಕಳುಹಿಸಿದ ಎರಡು, ಮೂರು ಬುಲಾವ್‌ಗಳಿಗೆ ಜವಾಬು ಬರಲಿಲ್ಲ. ನಾಲ್ಕನೇ ಬುಲಾವ್‌ ಪೊಲೀಸ್‌ ಸಮನ್ಸ್‌ ರೂಪದಲ್ಲಿ ಕಳುಹಿಸಲಾಗುವುದು ಎಂದಾಗ ಜನ ಬಂದರು.

ಎಲ್ಲ ಪ್ರಕರಣಗಳಂತೆ ಇಲ್ಲಿಯೂ ನಾವಲ್ಲ, ಅವರಲ್ಲ, ಇವರಲ್ಲ, ಮತ್ತೊಬ್ಬರ ಜವಾಬ್ದಾರಿ ಎಲ್ಲ ಪ್ರಹಸನ ನಡೆಯಿತು. ಮುಖ್ಯ ಪ್ರಶ್ನೆ, ಆ ಮನೆಯನ್ನು ಕಟ್ಟಲು ನೀವು ಅನುಮತಿ ಕೊಟ್ಟಿರುವಿರೇನು ಅಥವಾ ಅಂತಹದೊಂದು ವಾಸದ ಮನೆಯ ಬಗ್ಗೆ ನಿಮಗೆ ತಿಳಿದಿತ್ತೆ, ತಿಳಿದಿತ್ತು ಎಂದಾದರೆ ಅಂತಹ ಮನೆಗಳನ್ನು ಕಟ್ಟಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಅಥವಾ ಅಂತಹವರಿಗೆ ಸೂಕ್ತ ಕ್ರಮಗಳನ್ನ ಕೈಗೊಳ್ಳಲು ಮಾಹಿತಿ ಕೊಟ್ಟಿರುವಿರೇನು ಇತ್ಯಾದಿ.

ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇನ್ನೊಬ್ಬರದ್ದು. ಅದು ಸ್ಲಮ್‌ ಹತ್ತಿರವಿದೆ, ಸ್ಲಮ್‌ ಒಳಗಿದೆ, ಅಂಚಿನಲ್ಲಿದೆ… ಅಷ್ಟು ಹೊತ್ತಿಗೆ ನಮ್ಮ ಕಾನೂನು ಸಲಹೆಗಾರರು ಚುರುಕಾದರು. ಮೇಲಿಂದ ಮೇಲೆ ವಿವರಣೆ, ವಿಚಾರಣೆ ಮಾಡುತ್ತಿದ್ದಾಗ ಬೇರೆ ಬೇರೆ ಹೆಸರಿನ, ಅಧಿಕಾರದ ಜನರೆಲ್ಲ ಬೆಂಗಳೂರು ಕೃಷಿ ಭವನದ ನಾಲ್ಕನೇ ಮಹಡಿಯಲ್ಲಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಏನೇನೋ ಬೈಲಾಗಳು, ಫೈಲುಗಳನ್ನು ಹೊತ್ತು ಬರುವಂತಾಯಿತು. ಪ್ರಶ್ನೆ ಮಾತ್ರ ಒಂದೇ. ಆ ಮನೆ… ಕಿಟಕಿ… ಅನುಮತಿ… ಅವಘಡ… ಸಾವು… ಯಾರು ಹೊಣೆ!

ಹಗ್ಗ ಎಳೆದದ್ದೂ ಎಳೆದದ್ದೇ!

ಸರಿ! ಸುಮಾರು ಏಳು ತಿಂಗಳು ಕಳೆದಿತ್ತು. ಒಂದು ಹಂತದಲ್ಲಿ ಆ ಮನೆಯ ಮಾಲೀಕರೊಂದಿಗೆ ಬಂದಿದ್ದ ಒಬ್ಬ ಅಧಿಕಾರಿ ಹೇಳಿಯೇ ಬಿಟ್ಟರು, ಆ ತಾಯಿಗೆ ನಾವು ಪರಿಹಾರ ಕೊಡುತ್ತೇವೆ. ಆ ತಾಯಿಯನ್ನು ಹುಡುಕಿ ಆಕೆಯ ಬ್ಯಾಂಕ್‌ ಅಕೌಂಟ್ ಗೆ ಹಣ ಹಾಕಿ ಅದನ್ನು ಅವರಿಗೆ ಕೊಟ್ಟ ಫೋಟೋವನ್ನು ಅಧಿಕಾರಿಗಳು ತಂದು ನಮ್ಮ ಫೈಲಿಗೆ ಹಾಕಿದರು. ಹಣ ಯಾರು ಕೊಟ್ಟರು? ಉತ್ತರ ಸ್ಪಷ್ಟವಾಗಿ ಸಿಗಲಿಲ್ಲ. ಮನೆ ಮಾಲೀಕರೆ, ಎಂಜಿನಿಯರ್‌, ಕಾರ್ಪುರೇಷನ್‌? ಯಾರು ಯಾರು ಯಾರು?

ಮುಂದೊಮ್ಮೆ ಆ ತಾಯಿಯನ್ನು ಭೇಟಿ ಮಾಡಿದೆ. ಅದೇ ಪ್ರದೇಶದಲ್ಲಿ ತಮ್ಮದೇ ಸ್ವಂತ ಗೂಡನ್ನು ನೆಲದ ಮೇಲೆ ಕಟ್ಟಿಕೊಂಡಿದ್ದರು. 

ಮಕ್ಕಳ ಹಕ್ಕುಗಳ ಆಯೋಗಕ್ಕೆ ತೀರ್ಪು ಕೊಡುವ ಅಥವಾ ಶಿಕ್ಷೆ ವಿಧಿಸುವ, ದಂಡ ಕಟ್ಟಿ ಅಥವಾ ಪರಿಹಾರ ಕೊಡಿ ಎಂದು ಹೇಳುವ ಅಧಿಕಾರವಿಲ್ಲ. ಆದರೆ ಪ್ರಕರಣಗಳನ್ನು ವಿಶ್ಲೇಷಿಸಿ ನ್ಯಾಯಾಲಯಗಳಿಗೆ ಹೋಗಲು ಸೂಚಿಸಬಹುದು ಅಥವಾ ನೀತಿ, ಕಾನೂನು, ಕಾರ್ಯಕ್ರಮಗಳಲ್ಲಿ ಬದಲಾವಣೆ, ತಿದ್ದುಪಡಿಗಳಿಗಾಗಿ ನಿರ್ದಿಷ್ಟ ಸಲಹೆಗಳನ್ನು ಕೊಡಬಹುದು.

2010-11ರ ಅವಧಿಯಲ್ಲೇ ಇಂತಹದೇ ಇನ್ನೊಂದು ಪ್ರಕರಣ ವರದಿಯಾಗಿತ್ತು. ಹೊಲಕ್ಕೆ ಹೋಗಿದ್ದಾಗ ರೈತ ಕುಟುಂಬದ ಮಗುವೊಂದಕ್ಕೆ ಹಾವು ಕಚ್ಚಿ ಮಗು ನಿಧನವಾಗಿತ್ತು. ಹಾವು ಕಚ್ಚಿ ರೈತರು ಸತ್ತರೆ ಪರಿಹಾರ ಕೊಡುವುದಾಗಿ ಸರ್ಕಾರ ಆಗಷ್ಟೇ ಘೋಷಿಸಿತ್ತು. ರೈತರ ಮಕ್ಕಳು ಸತ್ತರೆ? ಇಲ್ಲ ಎಂದು ಸಂಬಂಧಿತ ಇಲಾಖೆ ಕೈಯಾಡಿಸಿ ಬಿಟ್ಟಿತ್ತು. ಈ ಪ್ರಕರಣದ ಹಿಂದೆ ಬಿದ್ದಾಗ, ಪರಿಹಾರ ಕೊಡುವ ನೀತಿಯನ್ನು ಮೇಲಿಂದ ಮೇಲೆ ಓದುವಾಗ ಕಣ್ಣಿಗೆ ಬಿದ್ದದ್ದು, ʼರೈತ ಕುಟುಂಬ ಸದಸ್ಯರುʼ ಎಂಬ ಪದಪುಂಜ. ಮಕ್ಕಳು ಕುಟುಂಬದ ಸದಸ್ಯರು ಎಂಬುದನ್ನು ಮೇಲೆತ್ತಿಟ್ಟು ಒತ್ತಾಯಿಸಿದಾಗ ಪರಿಹಾರ ಸಿಕ್ಕಿತ್ತು.

ಮಕ್ಕಳು ಆಕಸ್ಮಿಕಗಳಿಗೆ ಬಲಿಯಾಗುವ ಇಂತಹ ಪ್ರಕರಣಗಳು ಈಗಲೂ ನಿಂತಿಲ್ಲ. ತೀರಾ ಇತ್ತೀಚೆಗೆ ಹೈದರಾಬಾದಿನಲ್ಲಿ ಕದ ಮುಚ್ಚಿದ್ದ ಮನೆಯೊಳಗೆ ಮಕ್ಕಳು ಬೆಂಕಿ ಹೊಗೆಗೆ ಬಲಿಯಾದರು. ಕಾರಿನೊಳಗೆ ಸಿಲುಕಿಕೊಂಡು ಬಾಗಿಲು ತೆರೆಯಲು ಬಾರದೆ ಮಕ್ಕಳು ಉಸಿರುಗಟ್ಟಿ ಸಾಯುತ್ತಿದ್ದಾರೆ. ಬಚ್ಚಲ ಮನೆಯಲ್ಲಿ ನೀರು ತುಂಬಿರುವ ಬಕೆಟ್‌ಗೆ ಬಿದ್ದು ಸಾಯುವ ಮಕ್ಕಳು. ಪಾರ್ಕಿನಲ್ಲಿ ಆಡುವಾಗ ತೊಲೆ ಬಿದ್ದು ಸಾಯುವ ಮಕ್ಕಳು, ಕುಳಿತ ಕಲ್ಲು ಬೆಂಚು ಧಡಕ್‌ ಎಂದು ಉರುಳಿ ಸತ್ತ ಮಗು. ಬೆಂಗಳೂರಿನ ಲಾಲ್ ‌ಬಾಗ್ ‌ನಲ್ಲಿ ಜೇನುಗಳ ದಾಳಿಗೆ ಸಿಲುಕಿದ ಮಗು!

ಇಷ್ಟೆಲ್ಲದರ ನಡುವೆ ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ಚೈಲ್ಡ್‌ ಲೈನ್‌ 1098, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಗಳು ಸದಾ ಎದುರಿಸುವ ಇನ್ನೊಂದು ವಿಚಾರ ಪೋಷಕರು ಅಥವಾ ಶಿಕ್ಷಕರು ಅಥವಾ ಯಾರ ಸುಪರ್ದಿಯಲ್ಲಿ ಮಕ್ಕಳಿರುತ್ತಾರೋ ಅಂತಹವರೇ ಮಕ್ಕಳ ಮೇಲೆ ದೌರ್ಜನ್ಯ ಮಾಡುವುದು.

ಮಕ್ಕಳ ನ್ಯಾಯ ಕಾಯಿದೆ 2015 ಸೆ. 75ರಲ್ಲಿ ಈಗ ಒಂದು ವಿಚಾರ ಸ್ಪಷ್ಟಪಡಿಸಿದೆ. ʼಯಾರಾದರೂ ತಮ್ಮ ಸುಪರ್ದಿಯಲ್ಲಿರುವ ಯಾವುದೇ ಮಗುವಿನ ಮೇಲೆ ಎಂತಹದೇ ದೌರ್ಜನ್ಯ, ನಿರ್ಲಕ್ಷ್ಯ ತೋರಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆʼ ಸದ್ಯ ಸುದ್ದಿಯಲ್ಲಿರುವ ವಿಚಾರ ಬೆಂಗಳೂರಿನ ಸುದ್ದ ಗುಂಟೆಪಾಳ್ಯದಲ್ಲಿ ಹಠ ಮಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಅಜ್ಜಿಯೇ ಮಾಡಿದ ದೌರ್ಜನ್ಯ.

ಮಕ್ಕಳ ನ್ಯಾಯ ಕಾಯಿದೆಯ ಸೆ. 75 ಸ್ಪಷ್ಟಪಡಿಸುವಂತೆ ತಮ್ಮ ವಶದಲ್ಲಿರುವ ಮಗುವಿನ ಮೇಲೆ ದೌರ್ಜನ್ಯ ಹಿಂಸೆ ಕೊಟ್ಟವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಬಹುದು. ಅಜ್ಜಿಯನ್ನು ಬಂಧಿಸಿದ್ದಾರೆ. ಮುಂದೆ ವಿಚಾರಣೆ ನಡೆಯಬೇಕಷ್ಟೆ.

ಮಕ್ಕಳು ದೌರ್ಜನ್ಯ ಹಿಂಸೆಗಳಿಗೆ ಗುರಿಯಾಗದಂತೆ ರಕ್ಷಿಸುವ ಹೊಣೆ ನಿಜವಾಗಬೇಕಾದರೆ ಎಲ್ಲರಿಗೂ ಈ ಕುರಿತು ಅರಿವು, ತರಬೇತಿ, ಮಾಹಿತಿ ಬೇಕೇಬೇಕು. ಇದಕ್ಕಾಗಿಯೇ ಎಲ್ಲೆಡೆ ಮಕ್ಕಳ ರಕ್ಷಣಾ ನೀತಿ ರೂಪಿತವಾಗಬೇಕು ಅದು ಜಾರಿಯಾಗಬೇಕು.

ಬಹಳ ಮುಖ್ಯವಾಗಿ ಯಾರದೋ ತಪ್ಪಿಗೆ ಇನ್ನಾರೋ ಬಲಿಯಾಗುವ ಪ್ರಸಂಗಗಳಲ್ಲಿ ಯಾರನ್ನು ಹೊಣೆಗಾರರನ್ನಾಗಿಸಬೇಕು. ಅಂತಹವರ ಬಾಧ್ಯತೆಯೇನು, ಇವುಗಳನ್ನು ಸರ್ಕಾರದ ವಿವಿಧ ಕಾನೂನುಗಳು, ನಿಯಮಗಳಲ್ಲಿ ಹೇಗೆ ಅಳವಡಿಸಬೇಕು ಎನ್ನುವುದು ಈಗಲೂ ಸ್ಪಷ್ಟ ಉತ್ತರವಿಲ್ಲದ ಪ್ರಶ್ನೆಗಳಾಗಿವೆ. ಯಾರು ಕೊಡಬೇಕು ಇಂತಹ ಮಾಹಿತಿಯನ್ನು?

‍ಲೇಖಕರು ವಾಸುದೇವ ಶರ್ಮ

September 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sampath Katti

    ತುಂಬಾ ಉತ್ತಮ ಲೇಖನ… ಒಂದು ಪ್ರಕರಣವನ್ನು ಯಾವೆಲ್ಲಾ ರೀತಿಯಲ್ಲಿ ಕಾನೂನು ಕಾಯಿದೆಗಳ ಪರಿಧಿಯಲ್ಲಿ ವಿಶ್ಲೇಷಣೆ ಮಾಡಬಹುದು… ಅದರ ಆಧಾರದ ಮೇಲೆ ಇಲಾಖೆಗಳ ಜೊತೆಗೆ ವಕಾಲತ್ತು ಮಾಡಬಹುದು ಎನ್ನುವುದನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನ್ನಂತಹ ಹಲವಾರು ಯುವ ಜನತೆಗೆ ಈ ಮಾಹಿತಿ ಉತ್ತಮ ಮಾರ್ಗದರ್ಶನವಾಗಲಿದೆ. ಧನ್ಯಾದಗಳು ಸರ್ ನಿಮ್ಮ ಈ ಉಪಯುಕ್ತ ಮಾಹಿತಿಯ ಲೇಖನಕ್ಕಾಗಿ.

    ಪ್ರತಿಕ್ರಿಯೆ
  2. Anjali

    ದೇಹ ಸುಡುವ ಬೆಂಕಿ, ಮನಸ್ಸು ಮುರುಟಿಸುವ ಶಾಖ…. ಇಬ್ಬಗೆಯಲ್ಲಿ ಬೇಯುತ್ತಿದ್ದಾರೆ ಅವರುಗಳು. ಅವರು “ನಮ್ಮವರು” ಆಗುವವರೆಗೂ ಪರಿಹಾರ ಇಲ್ಲ.
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: