ಶ್ರವಣಕುಮಾರಿ ಸರಣಿ: ಕಡೆಗೆ ದಂಡೋಪಾಯವೇ…

ಶ್ರವಣಕುಮಾರಿ

ಕಡೆಗೆ ದಂಡೋಪಾಯವೇ…

ನಮ್ಮಶಾಖೆಯಲ್ಲಿ ಒಂದು ಪ್ರಸಿದ್ಧ ಆಸ್ಪತ್ರೆಯ ಖಾತೆಯಿತ್ತು. ಅಲ್ಲಿ ಕೆಲಸ ಮಾಡುವ ನೌಕರರೆಲ್ಲರ ಸಂಬಳದ ಖಾತೆಗಳು ನಮ್ಮಲ್ಲೇ. ಎಷ್ಟೋ ಜನ ತಾವು ಅಲ್ಲಿಂದ ಕೆಲಸ ಬಿಟ್ಟು ಬೇರೆ ಕಡೆಗಳಲ್ಲಿ ನೌಕರಿ ಹಿಡಿದರೂ, ತಮ್ಮ ಖಾತೆಗಳನ್ನು ಮುಚ್ಚಿ ಹೋಗದೇ ಅದರಲ್ಲೇ ತಮ್ಮ ವಹಿವಾಟನ್ನು ನಡೆಸಿಕೊಂಡಿರುತ್ತಿದ್ದರು. ಸರಿಯಾಗಿಯೇ ನಡೆಯುತ್ತಿರುವ ತನಕ, ಬ್ಯಾಂಕಿಗೂ ಅದರಿಂದ ತೊಂದರೆಯಿಲ್ಲ.

ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ದಾದಿಯೊಬ್ಬಳು ಒಮ್ಮೆ ಯಾವುದೋ ಸ್ವ.ಸ.ಯಂ.ನಿಂದ ಎರಡು ಬಾರಿ ಪಡೆದುಕೊಂಡ ಹಣದಲ್ಲಿ ಒಂದು ಬಾರಿ ಮಾತ್ರ ಖಾತೆಯಲ್ಲಿ ಕಡಿತವಾಗಿದೆ. ಇನ್ನೊಂದು 20000 ರೂಪಾಯಿಗಳ ಮೊತ್ತ ಖಾತೆಯಲ್ಲಿ ಹಣವಿಲ್ಲದೆ, ನಮ್ಮ ಶಾಖೆಗೆ ಋಣಿತವಾಯಿತು. ಅವಳ ಖಾತೆಯನ್ನು ತೆರೆದರೆ ಕೇವಲ ಒಂದೆರಡು ಸಾವಿರ ರೂಪಾಯಿಗಳು ಮಾತ್ರ ಇದೆ. ಅವಳು ನೀಡಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಅದು ಚಾಲ್ತಿಯಲ್ಲಿ ಇಲ್ಲ. ಖಾತೆಯ ಹಿಂದಿನ ವಿವರಗಳನ್ನು ಪರಿಶೀಲಿಸುತ್ತಾ ಹೋದಾಗ ಅವಳ ಖಾತೆಗೆ ನಮ್ಮಲ್ಲಿನ ಸಂಸ್ಥೆಯ ವೇತನವು ಜಮೆಯಾಗದೇ ಆರು ತಿಂಗಳ ಮೇಲಾಗಿತ್ತು. ಅಂದರೆ ಅವಳು ಇಲ್ಲಿನ ಕೆಲಸ ಬಿಟ್ಟಾಗಿದೆ, ಮೊಬೈಲ್‌ನ ಸಿಮ್ಮನ್ನೂ ಬದಲಾಯಿಸಿಕೊಂಡಿದ್ದಾಳೆ.

ಹೇಗೆ ಹಿಡಿಯಬಹುದೆಂದು ಬೇರೆ ಉಪಾಯಗಳನ್ನು ಯೋಚಿಸಿದೆ. ಆ ಆಸ್ಪತ್ರೆಯ ವ್ಯವಹಾರಗಳಿಗಾಗಿ ದಿನನಿತ್ಯ ಬರುತ್ತಿದ್ದ ವ್ಯಕ್ತಿ ಆ ದಿನ ಬಂದಾಗ ಆಕೆಯ ಬಗ್ಗೆ ವಿಚಾರಿಸಿದೆ. ಆತನಿಗೆ ಹೆಚ್ಚೇನೂ ವಿವರಗಳು ತಿಳಿದಿರಲಿಲ್ಲ. ಆಸ್ಪತ್ರೆಯ ಕಾರ್ಯಾಲಯದಲ್ಲಿ ವಿಚಾರಿಸಿ ತಿಳಿಸುವುದಾಗಿ ಹೇಳಿದ. ಮರುದಿನ ಆತ ಬಂದಾಗ ನಾನು ಊಹಿಸಿದ್ದನ್ನೇ ಹೇಳಿದ. “ಅವರ ಖಾತೆಯಲ್ಲಿ ಏನೋ ತೊಂದರೆಯಾಗಿದೆ. ಅವರ ಗೆಳತಿಯರು ಯಾರಾದರೂ ಇದ್ದಾರೆಯೆ?” ಎಂದು ವಿಚಾರಿಸಿದೆ.

“ಆಕೆಯ ಮೊಬೈಲ್‌ ನಂಬರ್ನಿಮ್ಮ ಬಳಿಯೇ ಇರಬೇಕಲ್ಲ” ಎಂದು ತನ್ನ ಬುದ್ಧಿವಂತಿಕೆ ತೋರಿದ. “ಅದಕ್ಕೆ ಫೋನಾಯಿಸಿದರೆ ಚಾಲ್ತಿಯಲ್ಲಿಲ್ಲ ಎನ್ನುತ್ತಿದೆ” ಎಂದೆ. ʻವಿಚಾರಿಸಿ ನೋಡುತ್ತೇನೆʼಎಂದವನು ಮರುದಿನ ಬಂದು ʻಆಕೆಯೊಂದಿಗೆ ಇದ್ದ ಇನ್ನಿಬ್ಬರೂ ಕೆಲಸ ಬಿಟ್ಟು ಎರಡು ತಿಂಗಳಾಗಿದೆʼ ಎನ್ನುವ ನನಗೆ ಬೇಕಿಲ್ಲದ ಸಂದೇಶವನ್ನು ತಂದ. ಅಲ್ಲಿಗೆ ಹುಡುಕಲು ಈ ಮಾರ್ಗ ಇಲ್ಲ ಎಂದು ನನ್ನ ಮಾರ್ಗವನ್ನೇ ಬದಲಾಯಿಸಿ ಆಕೆಯ ಖಾತೆಯ ವಿವರಗಳನ್ನು ನೋಡುತ್ತಾ ಹೋದೆ.

ನಮ್ಮ ಬ್ಯಾಂಕಿನದೇ ಬೇರೆ ಯಾವುದೋ ಶಾಖೆಯ ಖಾತೆಯೊಂದರಿಂದ ಅವಳ ಖಾತೆಗೆ ಪ್ರತಿ ತಿಂಗಳೂ ಒಂದು ಮೊತ್ತ ವರ್ಗಾವಣೆ ಮೂಲಕ ಜಮೆಯಾಗುತ್ತಿತ್ತು. ಆ ಖಾತೆಯ ವಿವರವನ್ನು ನೋಡಿದರೆ ಅದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಒಂದು ಹಳ್ಳಿಯ ಶಾಖೆ. ಅದರಲ್ಲಿ ದೂರವಾಣಿ ಸಂಖ್ಯೆ ಕೂಡಾ ಇರಲಿಲ್ಲ. ಆ ತಾಲ್ಲೂಕಿನ ದೂರವಾಣಿ ಸಂಪರ್ಕ ಕಚೇರಿಗೆ ಫೋನಾಯಿಸಿ ಆ ಪ್ರಾಥಮಿಕ ಆರೋಗ್ಯ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಆ ಕೇಂದ್ರಕ್ಕೆ ಕರೆಮಾಡಿದೆ.

ಅಲ್ಲಿನ ಮುಖ್ಯಸ್ಥರೊಂದಿಗೆ ಈಕೆಯ ಹೆಸರಿನವರು ಯಾರಾದರೂ ಅಲ್ಲಿ ಉದ್ಯೋಗ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಿಕೊಂಡೆ. “ಇದ್ದರು, ಈಗ ಹದಿನೈದು ದಿನದ ಹಿಂದಷ್ಟೇ ಇನ್ನೊಂದು ಕೇಂದ್ರಕ್ಕೆ ವರ್ಗಾವಣೆಯಾದರು” ಎಂದರು. ಅವರಿಂದ ಆ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಅವರಿಗೆ ಕರೆ ಮಾಡಿದೆ.

ಅಲ್ಲಿನ ಮುಖ್ಯಸ್ಥರು ಆಕೆ ಅಲ್ಲಿ ಕೆಲಸ ಮಾಡುತ್ತಿದ್ದುದನ್ನು ಖಚಿತಪಡಿಸಿ, ವಿಷಯವೇನೆಂದು ಕೇಳಿದರು. ಗ್ರಾಹಕರ ಖಾತೆಯ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಏನನ್ನೂ ಬೇರೆಯವರೊಂದಿಗೆ ಚರ್ಚಿಸುವಂತಿಲ್ಲ. ಹಾಗಾಗಿ “ಆಕೆಯ ಖಾತೆಯಲ್ಲಿ ಕೆಲವು ವಿವರಗಳನ್ನುಸರಿಪಡಿಸ ಬೇಕಾಗಿದೆ, ಆಕೆ ನಮಗೆ ನೀಡಿದ್ದ ಮೊಬೈಲ್‌ ಸಂಖ್ಯೆ ಈಗ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಈಗಿನ ಸಂಖ್ಯೆ ದೊರೆತರೆ ನಾನು ಅವರನ್ನೇ ಸಂಪರ್ಕಿಸುತ್ತೇನೆ”  ಎಂದಷ್ಟೇ ಹೇಳಿದೆ.

ಆತ ಕೊಟ್ಟರು. ಆ ಮೊಬೈಲ್‌ ಸಂಖ್ಯೆಗೆ ಫೋನಾಯಿಸಿದರೆ ಆಕೆ ಯಾವುದೋ ಸಮಾವೇಶದಲ್ಲಿ ಭಾಗವಹಿಸಿದ್ದರು. ʻಏನೂ ಕೇಳುತ್ತಿಲ್ಲ; ನಾನೇ ಮತ್ತೆ ಕರೆ ಮಾಡುತ್ತೇನೆʼಎಂದವಳು, ಅನುಮಾನದ ವಾಸನೆ ಬಂದಿತ್ತೇನೋ ಎರಡು ದಿನವಾದರೂ ಕರೆಯಿಲ್ಲ. ಮತ್ತೆ ನಾನೇ ಕರೆ ಮಾಡಿ ವಿಷಯ ತಿಳಿಸಿದಾಗ, ನಿರೀಕ್ಷೆಯಂತೆ ತನಗೆ ಹಾಗೆ ಎರಡು ಬಾರಿ ಹಣ ಬಂದೇ ಇಲ್ಲ ಎಂದು ವಾದಿಸಿದಳು. ನಾನು ಇ.ಜೆ.ಲಾಗಲ್ಲಿ ತೋರಿಸುತ್ತಿರುವ ಎಲ್ಲ ವಿವರಗಳನ್ನೂ ಹೇಳಿ ಆಕೆಗೆ ಎರಡು ಬಾರಿ ಮೊತ್ತ ಬಂದಿರುವ ಬಗ್ಗೆ ರುಜುವಾತು ತೋರಿಸಿದೆ.

ಆಕೆಯ ಭಂಡತನ ನೋಡಿ! “ನಾನೇನೋ ಎರಡು ಬಾರಿ ಪ್ರಯತ್ನ ಪಟ್ಟೆ; ಎಟಿಎಂ ಯಾಕೆ ಹಣ ಕೊಟ್ಟಿತು? ತಪ್ಪು ಅದರದ್ದು, ನನ್ನದಲ್ಲ. ನನ್ನ ಖಾತೆಗೆ ನನ್ನ ಹಳೆಯ ಸಂಸ್ಥೆಯಿಂದ ಯಾವುದೋ ಮೊತ್ತ ಬರುವ ನಿರೀಕ್ಷೆಯಲ್ಲಿದ್ದೆ. ಅದೇ ಬಂದಿರಬಹುದು ಎಂದು ತೆಗೆದುಬಿಟ್ಟೆ” ಎಂದಳು. “ಆಮೇಲೆ ಅದು ಅಲ್ಲ ಎಂದು ತಿಳಿಯಿತಲ್ಲವೇ. ಈಗ ಹೆಚ್ಚಾಗಿ ತೆಗೆದುಕೊಂಡಿರುವ ಇಪ್ಪತ್ತು ಸಾವಿರ ರೂಪಾಯಿಗಳನ್ನು ವಾಪಸ್ಸು ಕಟ್ಟಿ” ಎಂದರೆ  “ಆ ಹಣವನ್ನು ಊರಿಗೆ ಕಳುಹಿಸಿ ಬಿಟ್ಟಿದ್ದೇನೆ. ಈಗ ಸದ್ಯ ನನ್ನಲ್ಲಿಲ್ಲ. ನನಗಾದಾಗ ಕಟ್ಟುತ್ತೇನೆ” ಎಂದು ವಿಷಯವನ್ನು ಮುಗಿಸಲು ನೋಡಿದಳು.

ನಾನಾದರೂ ಏಕೆ ಬಿಟ್ಟೇನು!  “ಇನ್ನು ವಾರದೊಳಗೆ ವಾಪಸ್ಸು ಕಟ್ಟಿದರೆ ಸರಿ. ಬಾರದಿದ್ದರೆ ನಿಮ್ಮ ಈಗಿನ ಮೇಲಧಿಕಾರಿಗಳ ವಿಳಾಸ, ದೂರವಾಣಿ ಸಂಖ್ಯೆ ಎರಡೂ ನನ್ನ ಬಳಿ ಇದೆ. ಅವರಿಗೆ ಎಲ್ಲವನ್ನೂ ವಿವರವಾಗಿ ಪತ್ರ ಬರೆದು ನಿಮ್ಮ ಸಂಬಳದಿಂದ ವಸೂಲಿಮಾಡಿ ಕಳುಹಿಸುವಂತೆ ಕೋರುತ್ತೇವೆ” ಎಂದು ಬಿಟ್ಟೆ. ಈಗ ಅವಳೂ ಹೆದರಿ ಬಿಟ್ಟಳು. “ಇಲ್ಲ, ಹಾಗೆ ಮಾಡಬೇಡಿ ಇನ್ನು ಹದಿನೈದು ದಿನ ಕಾಲಾವಕಾಶ ಕೊಡಿ.ಕಟ್ಟುತ್ತೇನೆ” ಎಂದು ಕಾಲಾವಕಾಶ ತೆಗೆದುಕೊಂಡವಳು ಹತ್ತು ದಿನಗಳಲ್ಲೇ ಜಮೆ ಮಾಡಿದ್ದರಿಂದ ಈ ಪ್ರಕರಣ ಸಮಾಪ್ತಿಯಾಯಿತು. ಕೆಲವು ಬಾರಿʻ ದಂಡಂ ದಶಗುಣಂಭವೇತ್‌ʼ!!

ಕರ್ತವ್ಯ ಮೊದಲೋಅನುಕಂಪ ಮೊದಲೋ

ನಮ್ಮ ಶಾಖೆಯ ಒಂದು ಅತಿ ಮುಖ್ಯ ಗ್ರಾಹಕ ಕಂಪನಿಗೆ ಬೀದರ್‌, ಗುಲ್ಬರ್ಗಾ ಕಡೆಗಳಿಂದ ಹದಿನೆಂಟರಿಂದ, ಇಪ್ಪತ್ತೈದು ಇಪ್ಪತ್ತಾರು ವರ್ಷದ ಹುಡುಗರು ಅಪ್ರೆಂಟಿಸ್‌  ತರಬೇತಿಗಾಗಿ ಬರುತ್ತಾರೆ. ಈ ಅವಧಿಯಲ್ಲಿ ಅವರಿಗೆ ಏಳೆಂಟು ಸಾವಿರ ರೂಪಾಯಿಗಳ ಸ್ಟೈಫಂಡ್‌  ದೊರೆಯುತ್ತದೆ. ಅದರ ಸಲುವಾಗಿ ಕಂಪನಿಯ ನಿಯಮದ ಪ್ರಕಾರ ಅವರು ನಮ್ಮ ಶಾಖೆಯಲ್ಲಿ ಖಾತೆಯನ್ನು ತೆರೆಯುತ್ತಾರೆ.

ತರಬೇತಿ ಮುಗಿದ ನಂತರ ಊರಿಗೆ ಮರಳುವ ಮುನ್ನ ಆ ಖಾತೆಯನ್ನು ಮುಚ್ಚದೆ ಹಾಗೇ ಇಟ್ಟು ಕೊಂಡಿರುತ್ತಾರೆ. ಇನ್ನೆಲ್ಲಾದರೂ ಕೆಲಸ ದೊರೆತರೆ ಆಗ ಅದೇ ಖಾತೆಯನ್ನು ಉಪಯೋಗಿಸಿಕೊಳ್ಳುತ್ತಾರೆ. ಅಥವಾ ಮತ್ತೆ ಅದೇ ಕಂಪನಿಗೆ ಇನ್ನೊಮ್ಮೆ ತರಬೇತಿಗಾಗಿ ಬಂದರೆ ಅದೇ ಖಾತೆಯನ್ನೇ ಬಳಸಿಕೊಳ್ಳುತ್ತಾರೆ. ಇವೆರಡೂ ಜರುಗದಿದ್ದರೆ ನಿರ್ವಹಣೆಯಿಲ್ಲದ ಇಂತಹ ಖಾತೆಗಳು ಬ್ಯಾಂಕಿನ ಪಾಲಿಗೆ ದುಬಾರಿಯೇ.

ಇಂತಹ ಖಾತೆದಾರನೊಬ್ಬ ತನ್ನ ಊರಿಗೆ ಮರಳಿದ ಮೇಲೆ ಉಳಿದಿದ್ದ ಐದು ನೂರು ರೂಪಾಯಿಗಳನ್ನು ಪಡೆದುಕೊಂಡ. ವಹಿವಾಟಿನ ವಿವರವನ್ನು ಪಡೆದುಕೊಂಡರೆ ಮೊತ್ತ ಇನ್ನೂ ಕಡಿತವಾಗಿರಲಿಲ್ಲ; ತಕ್ಷಣವೇ ಇನ್ನೊಂದು ಬಾರಿ ತೆಗೆದು ಬಿಟ್ಟ. ಸರಿ, ನನ್ನ ಕಾರ್ಯಕ್ರಮ ಶುರುವಾಯಿತು. ಫೋನಾಯಿಸಿದೆ. “ಹಾ… ಗೊತ್ತಾಗಲಿಲ್ಲ ತೆಗೆದುಬಿಟ್ಟೆ” ಎಂದ. “ಈಗ ಗೊತ್ತಾಯಿತಲ್ಲ, ಅಲ್ಲಿನ ಹತ್ತಿರದ ಶಾಖೆಗೆ ಹೋಗಿ ಕಟ್ಟಿ ಬಿಡು” ಎಂದೆ. ಹಾ… ಎಂದವನು ವಾರವಾದರೂ ಖಾತೆಗೆ ಹಣ ಹಾಕಲಿಲ್ಲ. ಮತ್ತೆ ಕರೆ ಮಾಡಿದರೆ ತನ್ನ ಸ್ನೇಹಿತನ ಕೈಗೆ ಮೊಬೈಲನ್ನು ಕೊಟ್ಟು ಅವನಿಂದ ಮಾತನಾಡಿಸಿದ. ಸ್ನೇಹಿತ “ಅವನು ಊರಲ್ಲೇ ಇಲ್ಲ; ಹೋಗುವ ಮುನ್ನ ಮೊಬೈಲನ್ನು ಬಿಟ್ಟು ಹೋಗಿದ್ದಾನೆ” ಎಂದು ತನ್ನ ಸ್ನೇಹಿತನಿಗೆ ಉಪಕಾರ ಮಾಡಿದ.

“ಸರಿ, ಮರಳಿ ಬಂದ ನಂತರ ಬ್ಯಾಂಕಿನಿಂದ ಕರೆ ಮಾಡಿದ್ದ ವಿಷಯ ತಿಳಿಸು”  ಎಂದೆ. ನಂತರವೂ ಕರೆ ಇಲ್ಲ. ನಾನೂ ಮೂರ್ನಾಲ್ಕು ದಿನಗಳಿಗೊಮ್ಮೆ ಕರೆ ಮಾಡುವುದು, ಅವನು ಬೇರೆಯಾರಿಂದಲೋ ಅದಕ್ಕೆ ಉತ್ತರ ಹೇಳಿಸುವುದು…. ಇದು ಸುಮಾರು ಬಾರಿ ನಡೆದ ಮೇಲೆ ಒಂದು ದಿನʻ ಈ ನಂಬರ್‌ ಅಸ್ತಿತ್ವದಲ್ಲಿ ಇಲ್ಲʼ ಎನ್ನುವ ಉತ್ತರ ಬಂತು. ಇನ್ನು ಎಳ್ಳು ನೀರು ಬಿಟ್ಟ ಹಾಗೇ ಎಂದುಕೊಡು ಸುಮ್ಮನಾದರೂ, ಆಗಾಗ ಅವನ ಖಾತೆಯನ್ನು ನೋಡುವುದನ್ನು ಮಾತ್ರ ಬಿಡಲಿಲ್ಲ. ಅವನ ಹೆಸರು ಒಂದು ಮಂತ್ರದ ಹಾಗೆ ಮೆದುಳಿನಲ್ಲಿ ಅಚ್ಚಾಗಿ ಹೋಯಿತು.

ಹೀಗೇ ನಾಲ್ಕೈದು ತಿಂಗಳು ಕಳೆದ ಮೇಲೆ ಅದೇ ಸಂಸ್ಥೆಗಾಗಿ ಹೊಸ ಖಾತೆಯನ್ನು ತೆರೆಯಲು ಒಬ್ಬ ಹುಡುಗ ಬಂದು ಕುಳಿತ. ಹೆಸರು ನೋಡಿದರೆ ಅದೇ ಹೆಸರು. ತಕ್ಷಣ ಮುಖ ನಿರುಕಿಸಿದೆ. ಮುಖ ತಪ್ಪಿಸಿ ಎಲ್ಲೋ ನೋಡುತ್ತಿದ್ದ. ಅವನ ಹಳೆಯ ಖಾತೆಯ ಫೋಟೋ ತೆಗೆದು ನೋಡಿದೆ. ಈಗ ಕೊಟ್ಟ ಫೋಟೋವನ್ನೂ ನೋಡಿದೆ. ಬೇರೊಂದು ಪೋಸಿನಲ್ಲಿ ತೆಗೆಸಿಕೊಂಡ ಅವನದೇ ಫೋಟೋ. “ನೀನು ಅವನೇ ತಾನೆ?! ”ಅವನ ಕಣ್ಣಲ್ಲೇ ದೃಷ್ಟಿ ನೆಟ್ಟೆ. ʻಹೂನರಿʼ  ಎಂದ.

 “ಯಾಕೆ ಹಣ ಕಟ್ಟಲಿಲ್ಲ, ಬೇರೆಯವರ ಕೈಲಿ ಮಾತಾಡಿಸಿದ್ದು, ಸಿಮ್ಬದಲಾಯಿಸಿದ್ದು ಯಾಕೆ” ಎಂದೆ. “ಮನೀ ಕಡಿತಾಪತ್ರಯ ಇದ್ವುರೀ, ಕಟ್ಟಾಕಾಗ್ಲಿಲ್ಲ” ಎಂದು ತಲೆ ತಗ್ಗಿಸಿದ. ʻಇದ್ದರೂ ಇರಬಹುದೇನೋ…‌ ಆರೇಳು ಸಾವಿರದ ಸ್ಟೈಫಂಡಿಗಾಗಿ ಅಷ್ಟು ದೂರದ ಗುಲ್ಬರ್ಗದ ಕಡೆಯ ಹಳ್ಳಿಯಿಂದ ಬಂದಿರುವ ಹುಡುಗ. ಹೋಗಲಿ, ಬ್ಯಾಂಕಿಗೆ ಐನೂರು ರೂಪಾಯಿಗಳ ನಷ್ಟ ಬಲು ದೊಡ್ಡದೇ?! ಬಿಟ್ಟು ಬಿಡಲೇʼ ಅನ್ನಿಸಿಬಿಟ್ಟಿತು. ಹಿಂದೆಯೇ ಇದು ಸರಿಯಲ್ಲ.

ತಪ್ಪು ಮಾಡಿ, ಸಿಕ್ಕಿದವನನ್ನು ಬಿಟ್ಟು ಬಿಟ್ಟರೆ ನಾನೇ ಅವನಿಗೆ ತಪ್ಪು ಸಂದೇಶ ಕೊಟ್ಟ ಹಾಗಾಗುತ್ತದೆ ಅನ್ನಿಸಿ “ ಈಗ ಖಾತೆ ತೆರೆಯಲು ಎಷ್ಟು ಹಣ ತಂದಿದ್ದಿ” ಕೇಳಿದೆ. ʻಸಾವಿರ ರೂಪಾಯಿʼ ಎಂದು ತೋರಿದ. “ಹೊಸ ಖಾತೆಯೇನೂ ಬೇಡ, ನಿನ್ನ ಹಳೆ ಖಾತೆಗೆ ಆ ದುಡ್ಡು ಕಟ್ಟಿ ಬಾ. ಅದರಲ್ಲಿ ನಾನು ಐನೂರನ್ನು ತೆಗೆಯುತ್ತೇನೆ. ಇನ್ನು ಮೇಲೆ ಇಂತಹ ಪ್ರಯತ್ನಗಳನ್ನು ಮಾಡಬೇಡ” ಎಂದು ಅವನಿಂದ ಆ ಹಣವನ್ನು ವಸೂಲು ಮಾಡಿಕೊಂಡೆ.

ಈಗಲೂ ಒಮ್ಮೊಮ್ಮೆ ಅನ್ನಿಸುವುದಿದೆ. ʻಅವನಿಗೇನು ತಾಪತ್ರಯವಿತ್ತೋ… ನಾನು ಕೂಲಂಕುಶವಾಗಿ ವಿಚಾರಿಸಿದ್ದರೆ… ಹೋಗಲಿ ಎಂದು ಬಿಟ್ಟು ಬಿಡಬಹುದಿತ್ತೇನೋʼ ಎಂದು. ಆದರೆ ಅವನ ಏನೆಲ್ಲಾ ತಾಪತ್ರಯಗಳನ್ನು ಬಗೆಹರಿಸಲು ನನ್ನಿಂದ ಸಾಧ್ಯವಿತ್ತೇ?!  ಅಷ್ಟಕ್ಕೂ ಇದು ನನ್ನ ಸ್ವಂತ ದುಡ್ಡಲ್ಲ. ಕೆಲಸ ಮಾಡುತ್ತಿರುವ ಸಂಸ್ಥೆಯದು. ಇದರ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಯೋಚಿಸಬಾರದು ಎಂದು ಮತ್ತೆ ವಸ್ತು ಸ್ಥಿತಿಗೆ ಮರಳುತ್ತೇನೆ… ಇಂತಹ ಹಲವು ಸನ್ನಿವೇಶಗಳನ್ನು ನಿರ್ವಹಿಸಿದ್ದೇನಾದರೂ, ಕೆಲವು ಪ್ರಸಂಗಗಳು ಹೀಗೇ ಮನದಲ್ಲಿ ಉಳಿದು ಬಿಡುತ್ತವೆ.

ಏನೇ ಆದರೂ ಅಷ್ಟು ಸಣ್ಣ ಮೊತ್ತಕ್ಕೆ ಆ ಚಿಕ್ಕ ವಯಸ್ಸಿನ ಹುಡುಗರು ತಮ್ಮ ಹುಟ್ಟೂರನ್ನು ಬಿಟ್ಟು ಬೆಂಗಳೂರಿನಂತಹ ಮಹಾ ನಗರದಲ್ಲಿ ಮೂರ್ನಾಲ್ಕು ಸಹೋದ್ಯೋಗಿಗಳೊಂದಿಗೆ ಒಂದು ಸಣ್ಣ ಬಾಡಿಗೆ ಕೋಣೆಯನ್ನು, ಪಾಳಿಯ ಮೇಲೆ ಅಡುಗೆ ಕೆಲಸವನ್ನೂ ಹಂಚಿಕೊಂಡು ಬದುಕುವುದು; ಹಾಗೆಯೇ ಸ್ಟೈಫಂಡಿನಲ್ಲಿ ಅರ್ಧಭಾಗವನ್ನು ಊರಿಗೆ ಕಳಿಸುತ್ತಾ ಹತ್ತು ತಿಂಗಳಾದ ಮೇಲೆ ಅದೂ ಇಲ್ಲದೆ, ಬೇರೆ ಕೆಲಸ ಸಿಕ್ಕದಿದ್ದರೆ ಖಾಲಿ ಕೈಯಲ್ಲಿ ಊರಿಗೆ ಮರಳುವುದು…ಈ ಹುಡುಗರನ್ನು ಕಂಡರೆ ನನಗೆ ಒಂದು ರೀತಿಯ ಅಂತಃಕರಣವೇ!

‍ಲೇಖಕರು Avadhi

September 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಧನ್ಯವಾದಗಳು ಮೋಹನ್ ಸರ್,
    ಧನ್ಯವಾದಗಳು ಟೀಮ್ ಅವಧಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: