ಬದುಕೊಂದು ‘ಹೇಮಾವತಿ…’

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಪ್ರತೀ ಗುರುವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಆರೋಗ್ಯವಂತ ಸಮಾಜದ ನಿರ್ಮಾಣ ಸರ್ವಕಾಲಕ್ಕೂ ಅಗತ್ಯವಾದುದು. ಅಂತಹ ನಿರ್ಮಾಣವೆಂದರೆ, ಬರೀ ಕಟ್ಟಡಗಳಲ್ಲಿ, ಸುಂದರವಾದ ನಗರವಷ್ಟೇ ಅಲ್ಲ; ಸ್ವಚ್ಛವಾದ ಹಳ್ಳಿ ಅಷ್ಟೇ ಅಲ್ಲ, ಅಲ್ಲಿ ವಾಸಿಸುವ ಜನರ ಶುದ್ಧಾಂತಃಕರಣದ ನಿರ್ಮಾಣ. ಜನರಲ್ಲಿ ಒಳ್ಳೆಯತನದ, ಸೋದರತೆಯ ರಚನೆ. ಇದು ಸಾಧ್ಯವಾಗುವುದು, ಸಾಹಿತ್ಯ, ಸಂಗೀತ, ಕಲೆಯ ಮಾಧ್ಯಮದಲ್ಲಿ ಮಾತ್ರ ಎನ್ನುವ ಮಾತಿದೆ.

ಹೀಗಾಗಿಯೇ ನಾನು ಪ್ರೀತಿಸಿದ್ದು-ಪ್ರೀತಿಸುವುದು, ಗೌರವಿಸಿದ್ದು-ಗೌರವಿಸುವುದು ಹೆಚ್ಚು ಹೆಚ್ಚು ಖುಷಿ ಕೊಡುವ, ಹಿಂದೊಂದು-ಮುಂದೊಂದು ರೀತಿ ವರ್ತಿಸದ ಪುಸ್ತಕಗಳನ್ನು.

ಇಷ್ಟವಾದ ಕಾರಣಕ್ಕೆ ಪದೇ-ಪದೇ ಓದುವ, ಅನಂತಮೂರ್ತಿಯವರ ‘ಪೂರ್ವಾ ಪರ’ ಪುಸ್ತಕದ ‘ಪ್ರಜ್ಞೆ ಮತ್ತು ಪರಿಸರ’ ಅಧ್ಯಾಯದಲ್ಲಿ ಬರುವ “ಕಾವ್ಯದ ಸೃಜನಶೀಲತೆಯ ಸ್ವರೂಪ, ಅದರ ಬಿಗಿ, ಅದರ ಕಷ್ಟ, ಅದು ತರುವ ಏಕಾಗ್ರತೆಯ ಸುಖ, ಪ್ರೇಮಕ್ಕೂ ಅದಕ್ಕೂ ಇರುವ ನಂಟು, ಅದರ ಮಣ್ಣು ಮಾತ್ರ ಗರ್ಭಿಸಿಕೊಳ್ಳಬಲ್ಲ ಆಕಾಶ, ಆ ಮಣ್ಣನ್ನು ಹದದಲ್ಲಿಡುವ ಸಮೃದ್ಧ ಅನುಭವ ಜನಜೀವನ-ಇವೆಲ್ಲವನ್ನೂ ತೀವ್ರವಾಗಿ ಅನುಭವಿಸಿದ್ದ ನಮ್ಮ ಕಾಲದ ದೊಡ್ಡ ಕವಿಯೆಂದರೆ, ಬೇಂದ್ರೆ.

‘ಯಯಾತಿ’ ಕಾದಂಬರಿಯಲ್ಲಿ ಬರುವ “ಬದುಕು ನಡೆಯುವುದು ಪಂಚಾಂಗದ ಮೇಲಲ್ಲ ನಾಡಿ ಮಿಡಿತದ ಮೇಲೆ” ಸಾಲುಗಳಿಗೆ ಮೊದಲ ಪ್ರಾಶಸ್ತ್ಯ.

ಹೀಗೆ, ಆ ಒಂದು ಅಂಶಕ್ಕಾಗಿ, ಈ ಒಂದು ವ್ಯಾಕ್ಯಕ್ಕಾಗಿ ಮೆಚ್ಚುವಂತೆ ಅಂತ್ಯದ ಕಾರಣಕ್ಕಾಗಿ ನಾನು ಇಷ್ಟಪಡುವ ಕೆಲವೇ ಕೆಲವು ಪುಸ್ತಕಗಳಲ್ಲಿ ಗೊರೂರರ ‘ಹೇಮಾವತಿ’ಯೂ ಒಂದು!

ಪ್ರತಿಸಲ ಓದಿದಾಗಲೂ ಇಂಥದೊಂದು ಬದುಕನ್ನು ನಾವು ಕಾಣಲಿಲ್ಲ ಎನ್ನುವ ಹಳಹಳಿಕೆಯನ್ನು ಮೀರಿ ಸಂತೃಪ್ತಿಯನ್ನು ಕೊಟ್ಟ ಪುಸ್ತಕವಿದು. ಹಾಗೆಯೇ ಕೆಲವು ಭ್ರಮೆಗಳನ್ನು ಸರಿಸಿದ ಪುಸ್ತಕವೂ ಹೌದು.

ಪೋಸ್ಟ್ ಗ್ಲೋಬಲೈಸೇಷನ್ ಪೀಳಿಗೆಯ ನಮಗೆ ಮನೆಯೆಂದರೆ ಪ್ರವೈಸಿ ಹೆಸರಲ್ಲಿ ಒಂಟಿತನದತ್ತ ದೂಡಿದ ಕಲ್ಪನೆ. ಎಲ್ಲೂ ಏನೂ ಕಾಣದ, ನುಣುಪು ಗೋಡೆಗಳ, ಯಾರೂ ಮಾಡಿಸಿರದ ಅತ್ಯಾಧುನಿಕ ವಿನ್ಯಾಸಗಳ ಪ್ರದರ್ಶನದ ವಸ್ತು. ಮುಂಚೆ ನಾವಿದ್ದ ಮನೆಯಲ್ಲಿ ಹಿಂದಿನವರೆಲ್ಲ ಆರಾಮಾಗಿ ಬದುಕಿದ್ದರು. ಅದಕ್ಕೆ ಬೇಕಾದ ಸೌಕರ್ಯಗಳೂ ಇದ್ದವು.

ನಾನು ಬೆಳೆದದ್ದೂ ಅಲ್ಲೇ. ದೊಡ್ಡ ಗೇಟನ್ನು ದಾಟಿ ಬಂದರೆ ಎಡಕ್ಕೆ ದೊಡ್ಡ ಹಕ್ಕಿ(ಕೊಟ್ಟಿಗೆ). ಬಲಕ್ಕೆ ಕಣ. ದನಕರುಗಳ ಜೊತೆ ಎಷ್ಟೆಲ್ಲ ಅಕ್ಕರೆಯ ಒಡನಾಟವಿದ್ದರೂ, ಏ‌… ಮನೆಗೆ ಬರುತ್ತಿದ್ದ ಹಾಗೆ‌ ಶೆಗಣಿ ಹೊತ್ಲ ನೋಡುವುದೇ..? ಬಲು ಮುಜುಗರದ ಸಂಗತಿ.

ಈ ಸಮಯದಲ್ಲೇ ನಾನು ‘ಹೇಮಾವತಿ’ಯನ್ನು ಓದಿದ್ದು. ಮನೆಯ ಸ್ಥಿತಿ-ಗತಿ ಕುರಿತಾದ ನನ್ನ ಅನೇಕ ವಿಚಾರಗಳನ್ನು ತಿದ್ದಿದ ಪುಸ್ತಕವಿದು. ಕೆಳಗಿನ ಸಾಲುಗಳನ್ನು ಈಗಲೂ ನೆನಪಿಟ್ಟು ನೆನೆಯುತ್ತೇನೆ.

“… ಊರಿನ ಮಧ್ಯದ ದೊಡ್ಡ ತೊಟ್ಟಿಯ ಮನೆ, ರಾಮಣ್ಣ ಪೆರುಮಾಳರದು. ಅವರ ಅಜ್ಜ ಶ್ರೀನಿವಾಸ ಪೆರುಮಾಳರಿದ್ದ ಮನೆಯೇ ಇದು. ಆದರೆ ಈಚೆಗೆ ರಾಮಣ್ಣ ಮನೆಯನ್ನು ಬಹಳ ದೊಡ್ಡದು ಮಾಡಿದ್ದಾರೆ. ಊರಿನ ಮಿತ್ರರು ಆ ಹಳೆಯ ಮನೆಯನ್ನು ಕೆಡವಿಸಿ ಅದರ ಸ್ಥಳದಲ್ಲಿ ದೊಡ್ಡದಾಗಿ ಮಂಗಳೂರು ಹೆಂಚಿನ ಹೊಸ ಮನೆಯನ್ನು ಕಟ್ಟಿ ಎಂದು ಪ್ರೋತ್ಸಾಹಿಸಿದರು, ರಾಮಣ್ಣ ಪೆರುಮಾಳರದು ಸ್ವಭಾವವಾಗಿ ಹಳೆಯ ಸಂಪ್ರದಾಯ. ಪೂರ್ವಿಕರ ಮನೆಯನ್ನು ಕಿತ್ತು ಹಾಕಲು ಅವರು ಒಪ್ಪಲಿಲ್ಲ.

“ಅದು ಯಾವ ಶುಭ ಮುಹೂರ್ತದಲ್ಲಿ ಕಟ್ಟಿದ ಮನೆಯೋ ಅದೇ ಇರಲಿ” ಎಂದರು. ಇನ್ನೂ ಹೆಚ್ಚು ಬಲಾತ್ಕಾರವಾದಾಗ “ನಮಗಿಂತ ನೂರ್ಮಡಿ ದೊಡ್ಡವರಾದ ನಮ್ಮ ಹಿರಿಯರೆಲ್ಲಾ ಈ ಸಣ್ಣ ಮನೆಯಲ್ಲಿಯೇ ಇದ್ದರು ನಮಗೆ ಇದು ಸಾಲದೇ? ದೊಡ್ಡವರು ಸಣ್ಣ ಮನೆಯಲ್ಲಿರುತ್ತಾರೆ. ಸಣ್ಣವರು ದೊಡ್ಡ ಮನೆಯಲ್ಲಿರುತ್ತಾರೆ. ಸಣ್ಣ ದೇಹದಲ್ಲಿ ದೊಡ್ಡ ಆತ್ಮ ಇರುತ್ತದೆ” ಎಂದು ಬಿಟ್ಟರು.

ಈ ತಲೆಮಾರುಗಳು ಬದುಕಿದ ಮನೆ ಎಂದಾಗಲೆಲ್ಲ ನನಗೆ ನನ್ನ ಬಾಲ್ಯಸೇಹಿತ ಮಂಜುವಿನ ಮನೆ ನೆನಪಾಗುತ್ತದೆ. ಮೊದಲು ಮನೆ ಬಗ್ಗೆ ಹೇಳಿ ಆಮೇಲೆ ಅವನ ಬಗ್ಗೆ ಹೇಳುತ್ತೇನೆ. ಮುಂದೆ ಅಂಗಡಿ ಹಿಂದೆ ಮನೆ ಇರುವಂತೆ ಮಾಡಿಕೊಂಡ ವ್ಯವಸ್ಥೆಯದು. ಅಗಲವಾದ ಚಚ್ಚೌಕದ ಕಲ್ಲಿನ ಬುನಾದಿ ಮೇಲೆ ನಿಂತ ಮಡಗಿ ಕಟ್ಟಡ. ಮೆಟ್ಟಿಲು ಹತ್ತುತ್ತಿದ್ದ ಹಾಗೆ ಬಲಗಡೆ ಎಣ್ಣೆ ಡಬ್ಬಿಗಳು… ಶೇಂಗಾ ಎಣ್ಣೆಯ ಆ ಘಮಕ್ಕಾಗಿ, ಗಲ್ಲೆ ಮುಂದಿನ ನುಣುಪು ಬೆಂಚು, ಕಿರಾಣಿ ತೂಗುವ ಹಳೆಯ ಕಾಟಾ ಅದರ ನುಣುಗುಡುವ ಕಲ್ಲುಗಳನ್ನು ನೋಡಲೆಂದೇ ನಾನು ಅನೇಕ ಸಲ ಅಂಗಡಿಗೆ ಹೋಗಿದ್ದೇನೆ.

ಎಂದೂ ಮನೆಯ ಬಗ್ಗೆಯಾಗಲಿ, ತನ್ನ ಕೆಲಸ ಬಗ್ಗೆಯಾಗಲಿ ಗೊಣಗದೆ, ಇರುವುದನ್ನು ಇರುವ ಹಾಗೆ ಒಪ್ಪಿಕೊಂಡು ಮುಂದೆ ಸಾಗಲು ಈ ಪುಸ್ತಕ ಮತ್ತು ಈ ಸ್ನೇಹ ನೀಡಿದ ತಿಳಿವಳಿಕೆ ಅತ್ಯಮೂಲ್ಯವಾದದ್ದು.

ಪುಸ್ತಕ ಮಾಧ್ಯಮಕ್ಕೆ ಹೊರಳುವ‌ ಮುಂಚೆ ನನ್ನ ಬದುಕನ್ನು ನಿರ್ದೇಶಿಸಿದವರಲ್ಲಿ ನಾನು ಮೊದಲು ನೆನೆಯುವುದು ಮಂಜುವನ್ನು. ಕಾರಣ ಇಷ್ಟೇ, ಗಿಬ್ರಾನ್ ಹೇಳುತ್ತಾನಲ್ಲ “ನನ್ನಮ್ಮ ಕವಿತೆಯಾಗಿರಲಿಲ್ಲ. ಆದರೆ, ಕವಿತೆಯಂತೆ ಬದುಕಿದಳು” ಅಂತ. ಹಾಗೆ ಇವನು ಪುಸ್ತಕ ಆಗಲಿಲ್ಲ ಆದರೆ ಪುಸ್ತಕಗಳಷ್ಟೇ ಪ್ರಭಾವ ಬೀರಿದ.

ಬದುಕಿಗೆ ಬೇಕಾದ ಜಾಣ್ಮೆಗೂ, ಶಿಕ್ಷಣಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಹೈಸ್ಕೂಲ್ ಮುಗಿಯುತ್ತಿದ್ದಂತೆ ವಂಶಪಾರಂಪರ್ಯವಾಗಿ ಬಂದ ವ್ಯಾಪಾರಕ್ಕೆ ತಿರುಗಿದ. ನಾವು ಯೂನಿವರ್ಸಿಟಿಗೆ ಮಣ್ಣು ಹೊತ್ತು ಕಟ್ಟಿಕೊಂಡ ಜೀವನಕ್ಕಿಂತ ಸಶಕ್ತವಾಗಿ ಬದುಕು ಕಟ್ಟಿಕೊಂಡ. ತಿಳಿದು ಮಾಡುವ, ಅತಿಯಾಗಿ ತಿಳಿದು ಮಾಡಲು ಹೋಗಿ ತಲೆ ಬಿಸಿ ಮಾಡಿಕೊಳ್ಳದ – ಸಮಪ್ರಜ್ಞೆಯಲ್ಲಿ ಕೆಲಸ ಮಾಡುವುದನ್ನು ನಾನು ಕಲಿತಿದ್ದೇ ಇವನಿಂದ.

ನಮ್ಮಿಬ್ಬರ ಸ್ನೇಹದ ಒಂದು ತುಣುಕು: ಮೊನ್ನೆ ನಾ ಅರ್ಜೆಂಟು ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು. ಕಾರು ಕಳುಹಿಸುವಾಗ ಇವಿಷ್ಟು ಕಿರಾಣಿ ಸಾಮಾನು ಕೊಟ್ಟು ಕಳುಹಿಸು ಅಂತ text ಮಾಡಿದ್ದೆ. ಮನೆಗೆ ಬಂದ ಸಾಮಾನಿನ ಚೀಲ ಬಿಚ್ಚಿದರೆ ಮೇಲೆಯೇ ಒಂದು ಪುಟಾಣಿ ಬಿಸ್ಕೆಟ್ ಪಾಕೆಟ್.

ಅರೆರೇ ನನಗೆ ಇಷ್ಟ, ಜಾಸ್ತಿ ತಿನ್ನುವುದು ಬೇಡ, ಆದರೆ ತಿನ್ನಲಿ ಎಂದು ಚಿಕ್ಕದು ಇಟ್ಟಿದ್ದಾನೆ ಅಂತ ಬೀಗುತ್ತಾ ಕಿರಾಣಿ ವೆಚ್ಚದ ಚೀಟಿ ಮತ್ತು ನನಗೆ ಬೇಕಾದ ಸಾಮಾನು ಬ್ಯಾಗಿಗೆ ಹಾಕಿಕೊಂಡು ಹೊರಟೆ. ಟ್ರೈನ್ ಹತ್ತಿ ಗೂಗಲ್ ಪೇ ಮಾಡಲು ಯಾದಿ ಬಿಚ್ಚುತ್ತೇನೆ. ಆ ಬಿಸ್ಕೆಟ್ ಇತ್ತಲ್ಲ… (ಚೀಟಿಯಲ್ಲಿರುವ ಕೊನೆಯ ನಾಲ್ಕು ರೂ.,) ಅದು ಒಟ್ಟು ಹಣವನ್ನು ದುಂಡುಮೊತ್ತ ಮಾಡಲು ಇಟ್ಟದ್ದು! ನಗುವ ನೆನಪುಗಳು ಬೇಕು ಬಾಳಿಗೆ!! ಇಂಥವು ಬೇಕಾದಷ್ಟಿವೆ ಅಂತ ಬಾಯಿ ಬಿಟ್ಟು ಹೇಳಬೇಕಿಲ್ಲ…

ಮನೆ (ಎಂದರೆ ಊರು), ಸ್ನೇಹ, ಪುಸ್ತಕಗಳ ಎದುರು ನಿಂತರೆ; ತಿರಸ್ಕಾರವಿಲ್ಲದ, “ನೀನು ಬಂದಿರುವುದು ನನಗೆ ಗೊತ್ತು. ಆಗಲಿ” ಎಂಬ ಸರ್ವಜ್ಞತ್ವವಿಲ್ಲದ, “ನೀನು ಯಾಕೆ ಬಂದಿದ್ದೀಯೋ ಗೊತ್ತಿಲ್ಲ” ಎನ್ನುವ ಆಷಾಢಭೂತಿತನವಿಲ್ಲದ, ಅದೊಂದು ಶುಭ್ರಾತಿಶುಭ್ರ ಅಂತಃಕರಣದ ಭಾವ. ಈ ಬದುಕಿಗೆ ಈ ಮೂರರ ಋಣ ದೊಡ್ಡದು!

September 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಚೆನ್ನಾಗಿದೆ ಮೇಡಂ……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: