ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೇಷ್ಠತೆಯ ವ್ಯಸನ

ಗಿರಿಜಾ ಶಾಸ್ತ್ರಿ

ಮರಾಠಿಯ ಪ್ರಸಿದ್ಧ ವಿದ್ವಾಂಸರಾದ R.C.ಡೇರೆ ಯವರು “If you dig Maharashtra for 500 years you will find Karnataka there” ಎಂದಿದ್ದರು. ಹಾಗೆ ಸಾವಿರಾರು ವರ್ಷಗಳನ್ನು ಆದಿಮಾನವ ಕಾಲದವರೆಗೆ ( homo sapiens- 70,000 )ನಾವು ಅಗೆಯುತ್ತಾ ಹೋದರೆ ಇನ್ನೇನೇನು ಸಿಗಬಹುದು? ಎಷ್ಟು ಸಂಕರಗಳು! ಅದೆಷ್ಟು ಸಂಪರ್ಕಗಳು! ಸಂಘರ್ಷಗಳಾಗಿರಬಹುದು!? ಇಂದಿನ ನಮ್ಮ ಸಂಸ್ಕೃತಿ ಎಂಬುದು ಹಿಂದಿನ ಈ ಎಲ್ಲಾ ಸಾಂಸ್ಕೃತಿಕ ಸಂಘರ್ಷ, ಸೌಹಾರ್ದಗಳ ಒಂದು ಮಿಶ್ರ ಮೊತ್ತ. ಇದನ್ನು ನಾವು ವಸ್ತುನಿಷ್ಠವಾಗಿ ನೋಡಬೇಕೇ ಹೊರತು, ನಮ್ಮ ಭೂತಕಾಲವನ್ನು ಇದು ಒಳ್ಳೆಯದು ಇದು ಕೆಟ್ಟದ್ದು, ಇದು ಶ್ರೇಷ್ಠ, ಅದು ಕನಿಷ್ಠ ಎಂದು‌ ವಿಭಾಗಿಸಿ ನೋಡುವುದು ಎಷ್ಟು ಸರಿ?

ಜಗತ್ತಿನ ಚರಿತ್ರೆಯಲ್ಲಿ ಅನೇಕ ಸಾಮ್ರಾಜ್ಯಗಳು ಹುಟ್ಟಿ ಬೆಳೆದು ಮಣ್ಣು ಮುಕ್ಕಿವೆ. “ಒಂದು ಸಾಮ್ರಾಜ್ಯವನ್ನು ಕಬಳಿಸಿ ಹುಟ್ಟಿಕೊಳ್ಳುವ ಇನ್ನೊಂದು ಸಾಮ್ರಾಜ್ಯವು ಎಂದಿಗೂ ರಕ್ತಪಾತದ, ದಬ್ಬಾಳಿಕೆಯ ಮೂಲಕ ಅಧಿಕಾರ ಸ್ಥಾಪನೆಯ ಬುನಾದಿಯಮೇಲೆಯೇ ನಿಂತಿರುತ್ತದೆ” ಎಂದು ಯುವಲ್ ನೋಹಾ ಹರಾರಿ ತಮ್ಮ ‘Sapiens: A brief History of Human Kind’ ಎಂಬ ಪುಸ್ತಕದಲ್ಲಿ ಅಭಿಪ್ರಾಯಪಡುತ್ತಾರೆ. ಹೀಗೆ ಆಕ್ರಮಿಸಿಕೊಂಡ ಸಾಮ್ರಾಜ್ಯದ ನಂಬಿಕೆಗಳ ಜೊತೆಗೆ ಆಕ್ರಮಣಕ್ಕೆ ಒಳಗಾದ ಸಾಮ್ರಾಜ್ಯದ ಜನರು ಕಾಲಕ್ರಮೇಣ ಒಂದು ರೀತಿಯ ಪ್ರೀತಿ- ದ್ವೇಷದ ಹೊಂದಾಣಿಕೆ ಮಾಡಿಕೊಂಡುಬಿಡುತ್ತಾರೆ. ಹೀಗಿರುವಾಗ ಚರಿತ್ರೆಯಲ್ಲಿ ಆಗಿ ಹೋದ ಸಾಮ್ರಾಜ್ಯಗಳನ್ನು ‘ಕೆಟ್ಟ’ ಮತ್ತು ‘ಒಳ್ಳೆಯ’ ಎಂದು ಎರಡು ಬೈನರಿಗಳಲ್ಲಿ ವಿಭಾಗಿಸಲು ಸಾಧ್ಯವಿಲ್ಲ. ಇದು ಬಹಳ ಸಂಕೀರ್ಣವಾದುದು. ಉದಾಹರಣೆಗೆ, ಇಂದಿನ ಆಧುನಿಕ ಭಾರತವು , ಬ್ರಿಟಿಷ್ ಸಾಮ್ರಾಜ್ಯದ ಕೂಸು. ಬ್ರಿಟಿಷರು ಇನ್ನೂರು ವರುಷಗಳ ಕಾಲ ನಮ್ಮನ್ನು ಆಳುವ ನೆಪದಲ್ಲಿ ನಮ್ಮ ಜನರನ್ನು ಗುಲಾಮರನ್ನಾಗಿಸಿಕೊಂಡರು, ಕೊಂದರು, ಘಾಸಿಗೊಳಿಸಿದರು, ಅತ್ಯಾಚಾರವೆಸಗಿದರು. ಅದೇ ಸಮಯಕ್ಕೆ ‘ರಾಷ್ಟ್ರ’ವೆಂಬ ಒಂದು ರಾಜಕೀಯ ಐಕ್ಯತೆಯ ಕಲ್ಪನೆ ಜಾಗೃತವಾಗಲೂ, ನಮ್ಮ ಸಾಮಾಜಿಕ ಅನಿಷ್ಟಗಳಮೇಲೆ ಬೆಳಕು ಚೆಲ್ಲಲೂ ಕಾರಣರಾದರು.

ಪರಸ್ಪರ ಕಚ್ಚಾಡುತ್ತಿದ್ದ ರಾಜ್ಯಗಳು, ಬುಡಕಟ್ಟುಗಳು ಒಟ್ಟಾಗಿ ಸ್ವತಂತ್ರ ಭಾರತವೆಂಬ ಹೆಸರಿನಲ್ಲಿ ರೂಪುಗೊಳ್ಳಲು ಬ್ರಿಟಿಷರೇ ಕಾರಣ.ನಮ್ಮ ನ್ಯಾಯಾಂಗ, ಆಡಳಿತ ವ್ಯವಸ್ಥೆಗೆ ಅಡಿಪಾಯ ಹಾಕಿದವರು ಅವರೇ. ಸ್ವತಂತ್ರ ಭಾರತವು ಪಾಶ್ಚಿಮಾತ್ಯ ‘ಪ್ರಜಾಪ್ರಭುತ್ವ’ದ ಪರಿಕಲ್ಪನೆಯನ್ನು ತನ್ನದನ್ನಾಗಿಸಿಕೊಂಡಿತು. ಅವರು ಬರದಿದ್ದರೆ ರೈಲ್ವೇ, ಟಪ್ಪಾಲು, ಟೆಲಿಫೋನ್ ಕಾಣಲು ನಮ್ಮ ದೇಶ ಇನ್ನೆಷ್ಟು ಕಾಲ ಕಾಯಬೇಕಾಗಿತ್ತೋ. ಆಧುನಿಕ ವಿದ್ಯಾಭ್ಯಾಸ ನಮಗೆ ಪರಿಚಯವಾದದ್ದೇ ಅವರಿಂದ. ಕುವೆಂಪು ಅವರು “ಬ್ರಿಟಿಷರು ಬಾರದಿರುತ್ತಿದ್ದರೆ ನಾನು ಸಗಣಿ ಬಾಚಿಕೊಂಡೇ ತಿರುಗಬೇಕಾಗಿತ್ತು” ಎಂದು ಹೇಳಿದ್ದು ಇದೇ ಅರ್ಥದಲ್ಲಿಯೇ.

ಹೀಗಾಗಿ ಬ್ರಿಟಿಷರು ಶತ್ರುಗಳಾದರೂ ಅವರು ರೂಪಿಸಿದ ಅಭಿವೃದ್ದಿ ವ್ಯವಸ್ಥೆ ನಮಗೆ ಅನುಕೂಲವಾಗಿಯೇ ಪರಿಣಮಿಸಿತು.

(ಬ್ರಿಟಿಷರು ಕಟ್ಟಿದ ಮುಂಬಯಿಯ ಗಾಥಿಕ್ ಶೈಲಿಯ ವಿ.ಟಿ ಸ್ಟೇಷನ್ ಇಂದಿಗೂ ಅದ್ಭುತ ಸ್ಮಾರಕವಾಗಿಯೇ ಉಳಿದಿದೆ- ಹೆಸರು ಬದಲಾದರೂ)

ಆದ್ದರಿಂದ ನಮ್ಮದೇ ಆದ ಅಪ್ಪಟ ಭಾರತೀಯ ಎಂಬ ಒಂದು ಪರಿಶುದ್ಧ ವ್ಯವಸ್ಥೆ / ಸಂಸ್ಕೃತಿ ಇದೆಯೇ? ಎಂದು ಕೇಳುತ್ತಾರೆ ಲೇಖಕರು.

ಬ್ರಿಟಿಷರ ಪ್ರಭಾವದಿಂದ ತಪ್ಪಿಸಿಕೊಂಡು ಹಿಂದಕ್ಕೆ ಓಡಿಹೋದರೆ ಮೊಘಲರ ಪ್ರಭಾವದೊಳಗೆ ಸಿಕ್ಕಿ ಬೀಳುತ್ತೇವೆ. ಮೊಘಲರು ಶತ್ರುಗಳಾದರೂ ಅವರ ಸ್ಮಾರಕಗಳನ್ನು ನಾವು ಉಳಿಸಿಕೊಂಡಿದ್ದೇವೆ. (ಉದಾ: ತಾಜಮಹಲ್. ಅದರ ಬಗ್ಗೆ ಹೆಮ್ಮೆ ಪಡುತ್ತೇವೆ.) ಅವರ ಸಾಹಿತ್ಯ, ಸಂಗೀತ ಮುಂತಾದವು ನಮ್ಮ ಸಂಸ್ಕೃತಿಯ ಭಾಗವಾಗಿ ಹೋಗಿವೆ.

ಅದಕ್ಕೂ ಹಿಂದೆ ಹೋದರೆ ಶೈವ, ವೈಷ್ಣವ, ಜೈನ, ಬೌದ್ಧ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾಗಿ, ಸಂಘರ್ಷದಲ್ಲಿ ಸಾಮಾನ್ಯ ಜನತೆ ಸಿಲುಕಿದೆ. ಅದರಿಂದ ಕನ್ನಡಕ್ಕೆ ಲಾಭವೂ ಆಗಿದೆ. ಜೈನ ಸಾಹಿತ್ಯವನ್ನು ಹೊರತುಪಡಿಸಿದರೆ ನಮ್ಮಲ್ಲಿ ಕ್ಲಾಸಿಕ್ಕುಗಳೇ ಇಲ್ಲವಾಗುತ್ತವೆ.

ನಮ್ಮ ಈ ‘ಜಂಬೂ ದ್ವೀಪ’ದೊಳಗೆ ‘ಛಪ್ಪನ್ನೈವತ್ತಾರು ದೇಶಗಳು’ ಇದ್ದುವೆಂದು ತಿಳಿದು ಬರುತ್ತದೆ. ಅವುಗಳ ನಡುವೆ ಆದಾನ ಪ್ರದಾನಗಳು ಹಲವಾರು ನಡೆದಿವೆ. ಹಾಗೆ ಯುದ್ಧಗಳೂ ಘಟಿಸಿವೆ.

ಹೀಗಾಗಿ ಅಪ್ಪಟವಾದ ನಮ್ಮದೆನ್ನುವ ಸಂಸ್ಕೃತಿ ಯಾವುದು? ಕಾಲಕಾಲಕ್ಕೆ ಅನೇಕ ಸಾಮ್ರಾಜ್ಯಗಳು ಹೇರಿದ ನಂಬಿಕೆಗಳನ್ನು ಬಲವಂತವಾಗಿ, ಕೆಲವೊಮ್ಮೆ ಹೊಂದಾಣಿಕೆಯಿಂದ, ಸೌಹಾರ್ದದಿಂದ ಒಪ್ಪಿಕೊಂಡು ನಡೆಸಿಕೊಂಡು ಬರುತ್ತಿರುವ ಈ ಸಂಸ್ಕೃತಿಯನ್ನು ನಮ್ಮದು ಎನ್ನುತ್ತೇವೆ.

ಹಾಗಾದರೆ ಯಾವುದು ನಮ್ಮದು? ಪರಿಶುದ್ಧವಾದುದು? ನಮ್ಮದು ಎನ್ನುವುದೊಂದು ಭ್ರಮೆ. ಎಲ್ಲ ಕಾಲದಲ್ಲಿಯೂ ಇಂತಹ ಭ್ರಮೆಯಲ್ಲೇ‌ ಬದುಕುತ್ತಾ ಬಂದಿದ್ದೇವೆ. ಪರಸ್ಪರ ಹೊಡೆದಾಡಿ ಸಾಯುತ್ತಿದ್ದೇವೆ.

ನಮ್ಮ ಈ ಸಾಂಸ್ಕೃತಿಕ ವಾರಸುದಾರಿಕೆಯು ಎಷ್ಟು ಸಂಕೀರ್ಣವಾದುದೆಂದರೆ ಅದರ ಬಗ್ಗೆ ‘ಇದು ಹೀಗೇ’ ಎಂದು ಯಾರಿಗೂ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ಭೂತಕಾಲವನ್ನು ಇವರು ಕೆಟ್ಟವರು ಮತ್ತು ಇವರು ಒಳ್ಳೆಯವರು, ನಮ್ಮದು ಶ್ರೇಷ್ಠ ಅವರದ್ದು ಕನಿಷ್ಠ ಎಂದು ವಿಭಾಗಿಸುತ್ತಾ ಹೋದರೆ ಅದು ನಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ಯಾವುದನ್ನು ಉಳಿಸಿಕೊಳ್ಳಬೇಕು ಯಾವುದನ್ನು ಅಳಿಸಬೇಕು ಎಂಬುದನ್ನು ವಸ್ತುನಿಷ್ಠವಾಗಿ, ತರತಮ ಭಾವದಿಂದ ಕಾಲವೇ ಆಲೋಚಿಸಿಕೊಂಡು ಬಂದಿದೆ. ಹಾಗೆ ಅದು ಉಳಿದುಕೊಂಡೂ ಬಂದಿದೆ. ಕಾಲದ ಆಯ್ಕೆಯನ್ನು ನಾವು ಗೌರವಿಸಬೇಕು. ಅಂತಹ ಪರಂಪರೆ ಮುಂದುವರೆಯಬೇಕು. ಅದರ ಬದಲಾಗಿ ಸಾವಿರಾರು ವರ್ಷಗಳ ಈ ಮನುಕುಲದ ಸರಪಳಿಯನ್ನು ಕತ್ತರಿಸಿ, ಕೇವಲ 500 ವರ್ಷಗಳ ಮೇಲ್ಪದರವನ್ನು ಮಾತ್ರ ಅಗೆದು ಅದು ಮಾತ್ರ ನಮ್ಮ ಚರಿತ್ರೆಯೆಂದು ಬಗೆದು ಅದರ ಆಧಾರದ ಮೇಲೆಯೇ ನಾವು ಇಂದಿನ ನಮ್ಮ ಪ್ರಜಾತಂತ್ರವನ್ನು ರೂಪಿಸುವುದಾದರೆ ನಮಗಿಂತ ಮೂರ್ಖರು ಇನ್ನೊಬ್ಬರಿಲ್ಲ. ಎಪ್ಪತ್ತುಸಾವಿರ ವರ್ಷಗಳ ಮನುಕುಲದ ಇತಿಹಾಸದಲ್ಲಿ ನಮ್ಮ ಕಾಲವೆಷ್ಟು ಕ್ಷಣಿಕ!

‍ಲೇಖಕರು Admin

31 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading