ಶ್ರೀಶೈಲ ನಾಗರಾಳ ಕಣ್ಣಿನಲ್ಲಿ ಪು ತಿ ನ ‘ನೆರಳು’

ಡಾ ಶ್ರೀಶೈಲ ನಾಗರಾಳ

‘ಬೌದ್ಧಿಕತೆ- ಭಾವುಗಕತೆಗಳಿಂದ ಹೆಣೆದುಕೊಂಡು ಸಾವಯವಗೊಂಡ ಕವಿತೆಯು ಹಾಗೆಯೇ ಇಡಿಯಾಗಿ ಓದುಗನ ಹೃದಯಕ್ಕೆ ಇಳಿದು ಬರಬೇಕು’ -ಲೋಕೇಶ ಅಗಸನಕಟ್ಟೆ

ನೆರಳು
ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ.
ನೆಲನೆಲದಿ ಮನೆ ಮನೆಯ ಮೇಲೆ
ಕೊಳಬಾವಿಕಂಡು ಕಾಣದೋಲೆ
ಗಿಡಗುಲ್ಯ ತೆವರು ತಿಟ್ಟು
ಎನ್ನದಿದಕೊಂದು ನಿಟ್ಟು
ಗಾಳಿ ಬೆರಗಿದರ ನೆಲದೊಳೋಟ !
ವೇಗಕಡ್ಡಬಹುದಾದ ಹೂಟ ?
ಸಿಕ್ಕು ದಣಿವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ
ಇದನೋಡಿ ನಾನು ನೆನೆವೆನಿಂದು-
ಇಂಥ ನೆಳಲೇನು ಗಾಂಧಿಯೆಂದು
ಹರಿದತ್ತ ಹರಿಯ ಚಿತ್ತ
ಈ ಧೀರನಡೆವನತ್ತ
(ಗಣೇಶ ದರ್ಶನ ಕವನ ಸಂಕಲನ ಕಾಲ: ೧೯೪೭)

‘ಪುತಿನ’ ಎಂಬ ಕಾವ್ಯನಾಮದಿಂದ ಖ್ಯಾತರಾದ ಪುರೋಹಿತ ತಿರುನಾರಾಯಣ ನರಸಿಂಹಚಾರ್‌ರು, ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ಪ್ರಮುಖ ಕವಿ ಎನಿಸಿಕೊಂಡಿದ್ದಾರೆ. ಒಂದು ದೃಷ್ಟಿಯಿಂದ ‘ಪುತಿನ’ ಎನ್ನುವ ಹೆಸರು ವಯಕ್ತಿಕತೆಯನ್ನು ಮೀರಿ ಸಂಸ್ಕೃತಿ ಕರ್ನಾಟಕದ ಸಮಗ್ರ ಸಾಧನೆಗೆ ಸಂಕೇತವಾಗಿದೆ. ಪುತಿನ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದರಾದರೂ ಬಹುಮುಖ್ಯವಾಗಿ ಅವರನ್ನು ಕವಿ ಎಂದೇ ಒಪ್ಪಿಕೊಳಲಾಗಿದೆ. ಪುತಿನ ಅವರು ಯಾವುದನ್ನು ಕೈಗೆತ್ತಿಕೊಂಡರೂ ತಮ್ಮ ವಿಶಿಷ್ಟ ಸ್ಪರ್ಶದಿಂದ ಅದಕ್ಕೊಂದು ಹೊಸತನವನ್ನು ತಂದುಕೊಡುತ್ತಾರೆ. ಈ ಸ್ಪರ್ಶವನ್ನು ಅವರ ಎಲ್ಲ ಕೃತಿಗಳಲ್ಲಿ ಕಾಣುವಂತೆ ಅವರ ಲೌಕಿಕ ಜೀವನದ ವಿವಿಧ ಘಟಗಳ ಸಾಧನೆಯಲ್ಲಿಯೂ ಗುರುತಿಸಬಹುದು.

ಕನ್ನಡದಲ್ಲಿ ನವೋದಯ ತನ್ನ ಹೆಜ್ಜೆಯನ್ನು ಊರಿದ ಸಂದರ್ಭದಲ್ಲಿ ಪುತಿನ ಅವರು ಕಾವ್ಯ ವ್ಯವಸಾಯವನ್ನು ಪ್ರಾರಂಭಿಸಿದರು. ಇವರ ಸಮಕಾಲೀನರಾಗಿ ಮೈಸೂರು ಕೇಂದ್ರದಿಂದ ಕುವೆಂಪು, ಧಾರವಾಡ ಕೇಂದ್ರದಿಂದ ದ.ರಾ. ಬೇಂದ್ರೆ, ಮಂಗಳೂರು ಕೇಂದ್ರದಿಂದ ಪಂಜೆ, ಪೈ ಮೊದಲಾದವರು ಕಾವ್ಯ ರಚನಾ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಮೂರು ನವೋದಯ ಕೇಂದ್ರಗಳೆಂದು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದವು ಕೂಡ ಈ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಏಕಕಾಲಕ್ಕೆ ಕಾಣಿಸಿಕೊಂಡ ನವೋದಯದ ಒಲವು ಒಂದೇ ರೀತಿಯಾಗಿದ್ದಂತೆ ಕಂಡರೂ ಅದರಲ್ಲಿ ಭಿನ್ನತೆಗಳು ಇದ್ದಿರುವುದನ್ನು ಡಾ. ಗುರುಲಿಂಗ ಕಾಪಸೆಯವರು ಹೀಗೇ ಗುರುತಿಸುತ್ತಾರೆ.

‘ಮೈಸೂರಿನ ಕಡೆಗೆ ಇಂಗ್ಲಿಷ್ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಬಿ.ಎಂ. ಶ್ರೀ, ಕುವೆಂಪು ಅವರ ಪ್ರಭಾವಲಯದಲ್ಲಿ ಭಾವಗೀತೆಗಳ ಸೃಷ್ಟಿಕ ಕಾರ್ಯ ನಡೆಯಿತೆಂಬುದು ನಿಜ, ಆದರೆ, ಹೀಗೆಯೇ ಧಾರವಾಡದ ಗೆಳೆಯರು ಕಾವ್ಯ ರಚನೆಗೆ ತೊಡಗಿದರೆಂದು ಹೇಳುವುದು ಸಮಂಜಸವಾಗದು. ಏಕೆಂದರೆ ಈ ಕಡೆಯ ಕಾವ್ಯ ನಾಯಕರಾದ ದ.ರಾ. ಬೇಂದ್ರೆಯವರು ಪಡೆದ ಪ್ರೇರಣೆಗಳು ಭಿನ್ನ ರೀತಿಯವಾಗಿವೆ’ ಎನ್ನುತ್ತಾರೆ. ಧಾರವಾಡ ಕೇಂದ್ರದ ಗೆಳೆಯರ ಗುಂಪಿನ ಕೆವಿಗಳ ಮೇಲೆ ಇಂಗ್ಲಿಷನ ಜೊತೆಗೆ ಜನಪದ, ಅನುಭಾವ ಮರಾಠಿ, ಭಾಷಿಕ ಸಾಹಿತ್ಯ ಪ್ರೇರಣೆ ಆಗಿರುವುದನ್ನು ಅಲ್ಲಗಳೆಯುವಂತಿಲ್ಲ. ಇದೇ ಮಾತನ್ನು ಪುತಿನ ಅವರ ಕಾವ್ಯ ಕುರಿತು ಹೇಳಲಾಗದು.

ಕುವೆಂಪು, ದ.ರಾ. ಬೇಂದ್ರೆ ಹಾಗು ಪುತಿನ ಇವರು ನವೋದಯ ರತ್ನತ್ರಯರು ಎಂದರೆ ಅತಿಶಯೋಕ್ತಿಯಾಗದು. ಹೀಗಿದ್ದೂ ಈ ಮೂವರ ಕಾವ್ಯ ರೂಪ, ಕಾವ್ಯಶೈಲಿ ಮತ್ತು ಕಾವ್ಯ ಭಾಷೆಯಿಂದ ಭಿನ್ನವಾಗಿರುವುದು ಇದು ಕವಿಯ ಹಾಗೂ ತನ್ಮೂಲಕ ಅವರ ಕಾವ್ಯದ ವಿಶಿಷ್ಟತೆಯನ್ನು ನಿರ್ಧರಿಸುವಲ್ಲಿ ಅವನ ಬದುಕಿನ ಹಿನ್ನೆಲೆ ಮತ್ತು ಪ್ರೇರಣೆಯ ವಿವರಗಳು ಕಾವ್ಯದ ವ್ಯಾಖ್ಯಾನಕ್ಕೆ ನೆರವು ನೀಡಬಲ್ಲವು ಕುವೆಂಪು ಹುಟ್ಟಿ ಬೆಳೆದದ್ದು ನಿತ್ಯ ಹರಿದ್ವರ್ಣದ ದಟ್ಟಕಾನನದ ಮಲೆನಾಡಾದರೂ, ಅವರು ಉನ್ನತ ಶಿಕ್ಷಣ ಪಡೆದದ್ದು ಮೈಸೂರಿನಲ್ಲಿ ಅಲ್ಲಿನ ರಾಮಕೃಷ್ಣ ಆಶ್ರಮದ ಪರಿಸರದಲ್ಲಿ, ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಪ್ರಭಾವಲಯದಲ್ಲಿ ಕುವೆಂಪು ವ್ಯಕ್ತಿತ್ವ ರೂಪುಗೊಂಡಿತು.

ಇನ್ನು ಬೇಂದ್ರೆಯವರು ಹುಟ್ಟಿ ಬೆಳೆದದ್ದು ಮಲೆನಾಡಿನ ಸೆರಗು ಮುಂಬೈ ಪ್ರಾಂತದ ಧಾರವಾಡದಲ್ಲಿ ಶಿಕ್ಷಣ ಪಡೆದದ್ದು ಧಾರವಾಡ, ಸಾಂಗ್ಲಿ, ಪುಣೆ ಮುಂತಾಡೆಗಳಲ್ಲಿ ಎನ್ನಬೇಕು. ಎಚ್.ಎಸ್.ಆರ್ ಅವರು ಬೇಂದ್ರೆವಯರದು ಸ್ತ್ರೀ ಪೋಷಿತವಾದ ಬಾಲ್ಯವಾಗಿತ್ತು ಎನ್ನುವರು. ಬೇಂದ್ರೆಯವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಅಜ್ಜಿ, ತಾಯಿ, ಧಾರವಾಡದ ಮನೆಯ ಸುತ್ತಲಿನ ಪರಿಸರ ವಿಶ್ವವಿದ್ಯಾಲಯದ ಶಿಕ್ಷಣ ಇವೆಲ್ಲವೂ ಮಹತ್ವದ ಪಾತ್ರ ನಿರ್ವಹಿಸಿವೆ. ತಂದೆಯ ಮರಣಾನಂತರದಲ್ಲಿ ತಾಯಿಯೇ ಪೋಷಕಳಾಗಿ ಅವಳ ವಾತ್ಸಲ್ಯವನ್ನುಂಡು ಬೆಳೆದವರು ಅಂತೆಯೇ ತಾಯಿ ಅಂಬಿಕೆಯ ತನಮಯನಾದ ಅಂಬಿಕಾತನಯದತ್ತರಾಗಿ ಕವಿ ಬೇಂದ್ರೆ ಕಾವ್ಯ ರಚನೆಗೈದುದ್ದು.

ಮೇಲಿನ ಈ ಇಬ್ಬರು ಕವಿಗಳಿಗಿಂತಲೂ ಪುತಿನ ಅವರ ಜೀವನ ಮತ್ತು ವ್ಯಕ್ತಿತ್ವ ಭಿನ್ನವಾಗಿದೆ. ಪುತಿನ ಹುಟ್ಟಿ ಬೆಳೆದು ಬಾಲ್ಯವನ್ನು ಕಳೆದುದ್ದು ಮೇಲುಕೋಟೆಯ ಪರಿಸರದಲ್ಲಿ. ಇವರದು ವೈದಿಕ ಸಂಪ್ರದಾಯಕ ಪಂಡಿತ ಮನೆತನವಾಗಿದ್ದರೂ ಜಡ ಕರ್ಮಠ ಪರಂಪರೆಗಿಂತ ಭಿನ್ನವಾದ ಜ್ಞಾನ ಪಿಪಾಸುವಾದ ಆಯಮವನ್ನು ರೂಢಿಸಿಕೊಂಡವರು ಇದು ಅವರ ಬಹಿರಂಗ ಕಾವ್ಯ ಜೀವನದಲ್ಲೂ ಪ್ರಜ್ವಲಿಸುತ್ತದೆ.

ಬಾಲ್ಯದಲ್ಲಿ ತಂದೆ ತಿರುನಾರಾಯಣರವರ ಧಾರ್ಮಿಕತೆ, ಮೇಲುಕೋಟೆಯ ಭಕ್ತಿ ಪರಿಸರ ಅನಂತರ ಮೈಸೂರಿನಲ್ಲಿ ಪಡೆದ ಆಧುನಿಕ ಶಿಕ್ಷಣ, ಅಲ್ಲಿನ ಶಿವರಾಮಶಾಸ್ತ್ರೀ, ಬಿ.ಎಂ. ಶ್ರೀಯವರಂಥ ಮೇದಾವಿಗಳ ಸಂಪರ್ಕ, ಆ ನಂತರ ಬೆಂಗಳೂರಿನಲ್ಲಿ ಸೈನ್ಯ ಇಲಾಖೆಯಲ್ಲಿನ ಉದ್ಯೋಗ ತಾಯಿಯ ತವರೂರು ಗೋರೂರು ಇವೆಲ್ಲವುಗಳ ಜತೆಗೆ ದೇಶದಲ್ಲಿ ಕಾವು ಪಡೆದುಕೊಂಡ ಸ್ವಾತಂತ್ರ್ಯ ಚಳವಳಿ, ರಾಷ್ಟ್ರೀಯತೆ ಗಾಂಧೀಜಿಯ ವ್ಯಕ್ತಿತ್ವದ ಪ್ರಭಾವ ಎಲ್ಲವುಗಳು ಅವರೊಳಗೆ ಸೃಜನಶೀಲತೆಯ ಸೃಷ್ಟಿ ಕ್ರಿಯೆಗೆ ಚಾಲನೆಯನ್ನು ನಿಡಿದವು, ಪರಿಸರದ ಪ್ರಭಾವದಿಂದ ಮತ್ತು ಮನೋಧರ್ಮದ ಒಲವಿನಿಂದ ಪುತಿನ ತಮ್ಮದೇ ಕಾವ್ಯದಾರಿಯಲ್ಲಿ ಅನ್ವೇಷಕರಾಗಿ ನಡೆದುಕೊಂಡು ಬಂದವರಾಗಿದ್ದಾರೆ.

ತನ್ನದೇ ಆದಂತಹ ಐತಿಹಾಸಿಕತೆ, ವೈಶಿಷ್ಟ್ಯತೆಯನ್ನು ಹೊಂದಿದ ನವೋದಯ ಕುರಿತಾಗಿ ಆಗಾಗ್ಗೆ ಅನೇಕರು ಚಿಂತನೆಗಳನ್ನು ನಡೆಸಿದ್ದಾರೆ. ಈಗಲೂ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡಾ. ಜಿ. ಎಸ್. ಶಿವರುದ್ರಪ್ಪನವರು ತಮ್ಮ ಸಮಗ್ರಗದ್ಯ-೨ ರಲ್ಲಿ ನವೋದಯದ ಬಗ್ಗೆ ಹೀಗೆ ದಾಖಿಲಿಸುತ್ತಾರೆ. ‘೧೯೫೦ ರ ಹೊತ್ತಿನಲ್ಲಿ ನವ್ಯ ಕಾವ್ಯ ನೆಲೆಗೊಳ್ಳುತ್ತಿದ್ದಾಗ ಈ ಕಾವ್ಯದ ಪ್ರತಿಪಾದಕರು ಈ ಕಾಲಕ್ಕೆ ಹಿಂದಿನ ಹೊಸಗನ್ನಡ ಸಾಹಿತ್ಯವನ್ನು ‘ರೋಮ್ಯಾಂಟಿಕ್ ಕಾವ್ಯ’ ಎಂದು ಕರೆಯಲು ಮೊದಲು ಮಾಡಿದಂತೆ ತೋರುತ್ತದೆ. ಆಚಾರ್ಯ ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ರಚನೆಯಾದಂದಿನಿಂದ ಕನ್ನಡದಲ್ಲಿ ಕಾವ್ಯ ರಚನೆ ಮಾಡಿದ ಕವಿಗಳಾಗಲಿ, ಆ ಕಾಲದ ವಿಮರ್ಶಕರಾಗಲಿ, ೧೯೫೦ರ ತನಕ ಚಾಚಿದ ಕಾವ್ಯ ನಿರ್ಮಿತಿಯನ್ನು ‘ಹೊಸಗನ್ನಡ ಸಾಹಿತ್ಯ’ ಎಂದೋ ‘ಆಧುನಿಕ ಕಾವ್ಯ’ ಎಂದೋ ಕರೆದರೆ ವಿನಃ ರೋಮ್ಯಾಂಟಿಕ್ ಕಾವ್ಯ ಎಂದು ಕರೆದದ್ದು ನನಗೆ ನೆನಪಿಲ್ಲ. ಈ ಎರಡನ್ನೂ ಒಲ್ಲದೆ ಕುವೆಂಪು ಅವರು ‘ನವೋದಯ ಕಾವ್ಯ’ ಎಂದು ಹೆಸರು ಕೊಟ್ಟರುʼ ಹೀಗೆ ಕನ್ನಡ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ನವೋದಯ ಸಾಹಿತ್ಯದ ಸ್ವರೂಪ ಅದರಲ್ಲಿ ಕಾವ್ಯವು ಪಡೆದುಕೊಂಡ ಸ್ವರೂಪವನ್ನು ಕುರಿತು ಸ್ಪಷ್ಟಗೊಳಿಸಿರುವುದನ್ನು ಇಲ್ಲಿ ನೋಡುತ್ತೇವೆ.

ಕನ್ನಡ ನವೋದಯ ಕಾವ್ಯದ ಮೇಲೆ ಇಂಗ್ಲಿಷಿನ ದಟ್ಟ ಪ್ರಭಾವವಾಗಿದೆಯೆಂದು ಹೇಳಲಾಗುತ್ತದೆ. ಆದರೆ ಇದನ್ನು ಇದಮಿತ್ತಂ ಎಂದು ಪೂರ್ಣಾಂಗವಾಗಿ ಒಪ್ಪುವುದಕ್ಕೂ ಆಗದು ಎಂಬ ಮಾತನ್ನು ಅನೇಕರಲ್ಲಿ ಕಾಣುತ್ತೇವೆ. ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ವಸಹಾತುಶಾಹಿ ವಿದ್ಯಮಾನಗಳು ನಮ್ಮ ಜ್ಞಾನಶಾಖೆಗಳ ಮೇಲೆ ತನ್ನ ಪ್ರಭಾವವನ್ನು ಬೀರಿದವು. ಇದರಿಂದ ಪಾರಂಪರಿಕ ಮತ್ತು ಆಧುನಿಕ ತಿಳುವಳಿಕೆಗಳು ಪರಿವರ್ತನೆಯ ಮಗ್ಗುಲಿಗೆ ಹೊರಳಿಕೊಂಡವು ನಿಜ. ಇಲ್ಲಿಯೇ ಇನ್ನೊಂದು ಮಾತನ್ನು ನಾವು ಗಮನಿಸಲೇಬೇಕು ಅದೆಂದರೆ; ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಂತೆಯೇ ದೇಶೀ ಮೂಲದ ಜೀವದ್ರವ್ಯದ ಜೊತೆ ಬೆರೆತು ನೂತನ ಸತ್ವಪೂರ್ಣ ಕಾವ್ಯ ಸೃಷ್ಟಿಯು ಈ ಕಾಲದಲ್ಲಿ ಆಗಿರುವುದು. ಅದರ ವಸ್ತು. ವೈವಿದ್ಯ ರೂಪವೈವಿದ್ಯ ಬೆರಗುಗೊಳಿಸುವಂತಿದೆ.

ಈ ದೇಶೀ ಪರಂಪರೆಯ ಜೀವ ದ್ರವ್ಯಗಳನ್ನು ನಾವು ಬಹುಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಮಧುರಚೆನ್ನ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮಾರಂಥ ಅನೇಕರಲ್ಲಿ ಕಂಡರೆ, ಮೈಸೂರಿನ ಪ್ರಾಂತ್ಯದಲ್ಲಿ ಜಿ.ಪಿ. ರಾಜರತ್ನಂ, ಡಿ.ವಿ.ಜಿ ಪುತಿನರಂಥ ಕವಿಗಳ ಕವಿತೆಗಳಲ್ಲಿ ಕಂಡುಕೊಳ್ಳುತ್ತೇವೆ. ಇವರುಗಳು ಭಾಷೆ ಮತ್ತು ಬಂಧಗಳಲ್ಲಿ ಹೊಸತನವನ್ನು ಸಾಧಿಸಿದಂತೆಯೇ ಸಾಹಿತ್ಯ ವಸ್ತುವನ್ನು ಶ್ರೀ ಸಾಮಾನ್ಯನತ್ತ ಒಯ್ದ ರೀತಿ ಗಮನಾರ್ಹ, ನವೋದಯದ ಕವಿಗಳ ಕಾವ್ಯ ವಸ್ತುವಿನಲ್ಲಿ ಪ್ರಕೃತಿ, ಆಧ್ಯಾತ್ಮ ಜೀವನದ ಒಳತುಡಿತಗಳತೆಯೇ ರಾಷ್ಟ್ರೀಯತೆಯ ಸೆಲೆಯೂ ಕೂಡ ಎದ್ದು ಕಾಣುತ್ತದೆ. ಇವೇ ಮುಂತಾದವುಗಳಲ್ಲಿ ಹೊಸ ವಸ್ತು ಪ್ರಯೋಗಗಳಿಂದ ಹೊಸತನವನ್ನು ತರುವುದರೊದಿಗೆ ಕನ್ನಡಕ್ಕೆ ಹೊಸ ಉಸಿರನ್ನು ತುಂಬಿದ್ದನ್ನು ಕಾಣಲಾಗುತ್ತದೆ.

ನವೋದಯದ ಈ ಅವಧಿಯಲ್ಲಿ ಮತ್ತೊಂದು ಚಿಂತನೆಯಾಗಿ ರಾಷ್ಟ್ರೀಯತೆ ಬೀಜವೊಡೆಯಿತು. ರಾಷ್ಟ್ರೀಯ ಚಿಂತನೆಗಳನ್ನು ಜಾಗೃತಗೊಳಿಸುವ ಅಭಿಮಾನವುಕ್ಕಿಸುವ, ಭಾವುಕವಾಗಿ ಮಿಡಿಯುವ ಈ ಎಲ್ಲವನ್ನು ಹೊಸ ಶೈಲಿಯಲ್ಲಿ ಇತರೆ ಪ್ರಕಾರಗಳಲ್ಲಿಯಂತೆ ಕಾವ್ಯದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುವ ಕೆಲಸ ಅವ್ಯಾಹತವಾಗಿ ನಡೆಯಿತು. ಭಾವಗೀತೆ, ಕಥನ ಗೀತೆ, ಲಾವಣಿಗಳು ರಾಷ್ಟ್ರ ಪುರುಷರ ವ್ಯಕ್ತಿ ಚಿತ್ರ ಹಾಗೂ ರಾಷ್ಟ್ರೀಯ ಜಾಗೃತಿ ಮುಡಿಸುವಲ್ಲಿ ನಡೆಸಿದ ಪ್ರಯತ್ನಗಳು ಗಮನಾರ್ಹವಾದವು.

ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಚಿಂತನೆಯಬೀಜ ಮೊದಲಿಗೆ ಮೊಳಕೆವೊಡೆದದ್ದು ಪಶ್ಚಿಮಬಂಗಾಳದಲ್ಲಿ ರವೀಂದ್ರನಾಥಟ್ಯಾಗೋರ್ ಹಾಗು ಅನೇಕರು ಕಾವ್ಯದಲ್ಲಿ ತುಂಬ ಪರಿಣಾಮಕಾರಿಯಾಗಿ ಜಾಗೃತಗೊಳಿಸಿದರು. ಆ ನಂತರದಲ್ಲಿ ಮಹಾರಾಷ್ಟ್ರ ಆಂಧ್ರ ಮುಂತಾದೆಡೆಗಳಲ್ಲಿ ವಿಸ್ತರಿಸಿಕೊಂಡಿತು. ಇದೇ ಸಂದರ್ಭದಲ್ಲಿ ಬಂಗಾಳಿ, ಮರಾಠಿ, ತೆಲುಗು ಇತರ ಭಾಷೆಗಳ ಕವಿತೆಗಳು ಕನ್ನಡಕ್ಕೆ ಅನುವಾದವಾದವು ಇದರ ಜೊತೆಗೆ ನಮ್ಮ ಕವಿಗಳೂ ಸಹ ರಾಷ್ಟ್ರೀಯತೆಯನ್ನು ಕಾವ್ಯಕ್ಕೆ ವಸ್ತುವಾಗಿಸಿಕೊಂಡು ಬರೆದರು. ಕುವೆಂಪುರವರು ಪಾಂಚಜನ್ಯ ಕೃತಿಕೆ, ಪಕ್ಷಿಕಾಶಿ, ನವಿಲು, ಕೊಳಲು, ಕೋಗಿಲೆ ಮತ್ತು ಸೋವಿಯತ್ ರಷ್ಯ ಮುಂತಾದ ಸಂಗ್ರಹಗಳಲ್ಲಿ ಬೇಂದ್ರೆ ನಾದಲೀಲೆ ಗರಿ ಸಖಿಗೀತೆಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು ಅನಾವರಣಗೊಳಿಸಿದರು. ಅವರು ನರಬಲಿ ಕವಿತೆ ಬರೆದು ಅಂದಿನ ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸ ಅನುಭವಿಸಬೇಕಾಯಿತು.

ಕುವೆಂಪು ತಮ್ಮ ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತ್ ರಷ್ಯ ಸಂಗ್ರಹದಲ್ಲಿ ರಾಷ್ಟ್ರೀಯ ಚಿಂತನೆ ಬಿಂಬಿಸುವ ಕವಿತೆಗಳನ್ನು ಬರೆದರು, ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಭಾರತ ಜನನಿಯ ತನುಜಾತೆ ಜಯ ಜಯ ಹೇ ಕರ್ನಾಟಕ ಮಾತೆ ಮುಂತಾದವುಗಳು ನೋಡುತ್ತೇವೆ. ಇಂಥ ಸ್ವಾತಂತ್ರ್ಯ ಭಾವನೆಯ, ರಾಷ್ಟ್ರೀಯ ಭಾವನೆಯ ಕವಿತೆಗಳು ಪುತಿನ ಸಂಗ್ರಹದಲ್ಲಿಯೂ ಗಮನಾರ್ಹವಾಗಿ ಮೂಡಿಬಂದಿರುವವು. ಹೊಸ ಯುಗಕ್ಕೆ, ಹೊಸ ಬದುಕಿಗೆ ಸ್ವಾತಂತ್ರ್ಯವು ಅನಿವಾರ್ಯ. ಈ ಹುರುಪಿಗೆ ನಮ್ಮ ರಾಷ್ಟ್ರೀಯ ನೇತಾರರ ಹೋರಾಟ ಅದರಲ್ಲೂ ಗಾಂಧೀಜಿ ತುಂಬಾ ಸ್ಫೂರ್ತಿಯಾದುದನ್ನು ಅಲ್ಲಗಳೆಯಲಾಗದು ಪುತಿನ ಕೂಡ ಗಾಂಧಿಯ ಮತ್ತು ವ್ಯಕ್ತಿತ್ವ ಹೋರಾಟದಿಂದ ಸ್ಫೂರ್ತಿಗೊಂಡು, ಗಾಂಧಿ ಕುರಿತು ಬರೆದ ನೆರಳು ಕವಿತೆ ತುಂಬಾ ಪ್ರಸಿದ್ಧವಾಗಿದೆ.

*** *** ***

ರಾಷ್ಟ್ರೀಯತೆ ಇದು ರಾಜಕೀಯ ಪರಿಭಾಷೆಯಾಗಿ ಕಾಣಿಸಿಕೊಂಡು ಆಳದಲ್ಲಿ ರಾಷ್ಟ್ರಾಭಿಮಾನ, ಸ್ವತಂತ್ರತೆ ಹಾಗೂ ವ್ಯಕ್ತಿ ವ್ಯಕ್ತಿ ನಡುವಿನ ಸಂಕೀರ್ಣವಾದ ಸಂಬಂಧವನ್ನು ಬೆಸೆಯುವ ಕೆಲಸವನ್ನು ಮಾಡಿತು. ರಾಷ್ಟ್ರೀಯತೆಯಲ್ಲಿ ಮುಖ್ಯವಾಗಿ ದೇಶ ಪ್ರೇಮ, ರಾಷ್ಟ್ರೀಯ ಆದರ್ಶ ಮತ್ತು ಸ್ವದೇಶಿ ಸಂಸ್ಕೃತಿ ಇವುಗಳನ್ನು ಗುರುತಿಸಲಾಗುತ್ತದೆ. ಇದು ಅಹಿಂಸಾವಾದಿಗಳ, ಅದರಲ್ಲೂ ಗಾಂಧಿವಾದಿಗಳಲ್ಲಿ ಪ್ರಧಾನವಾಗಿ ಕಾಣುತ್ತೇವೆ. ಇದು ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸುವುದರೊಂದಿಗೆ ದೇಶೀ ಸಂಸ್ಕೃತಿಯ ಪುನರುಜ್ಜೀವನ, ಗ್ರಾಮ ಜೀವನದ ರಕ್ಷಣೆ, ದಾರಿದ್ರ್ಯ, ಶೋಷಣೆಯ ನಿರ್ಮೂಲನೆ, ಮಾನವತಾವಾದದ ಪ್ರತಿ ಸ್ಥಾಪನೆಯಂತಹ ಹಲವು ಮೌಲ್ಯಗಳು ಸಹ ರಾಷ್ಟ್ರೀಯತೆಯಲ್ಲಿ ಅಂತರ್ಗತವಾಗಿದ್ದವು. ಈ ಮೌಲ್ಯಗಳನ್ನು ನವೋದಯದ ಕವಿಗಳು ಸತ್ಯ, ಅಹಿಂಸೆ, ತ್ಯಾಗ, ಮಾನವಪ್ರೇಮ, ವ್ಯಕ್ತಿ ಮತ್ತು ಸಮಾಜದ ನಡುವೆ ಅನನ್ಯ ಸಂವಾದವನ್ನು, ಸಾಮರಸ್ಯವನ್ನು ಸ್ಥಾಪಿಸುವುದು ಆಶಯವಾಗಿಸಿಕೊಂಡರು.

ರಾಷ್ಟ್ರೀಯ ಚಳುವಳಿಯಲ್ಲಿ ಪುತಿನ ಅವರ ಹಾಜರಾತಿಯನ್ನು ಪ್ರಶ್ನಿಸುವವರು ಇಲ್ಲವೆಂತಿಲ್ಲ. ರಾಷ್ಟ್ರೀಯ ಚಳುವಳಿಯಲ್ಲಿ ಸಾಹಿತಿಗಳು ಎರಡು ತರಹದಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣುತ್ತೇವೆ. ಅದರಲ್ಲಿ ಕೆಲವರು ಹೋರಾಟವನ್ನೆ ಪ್ರಧಾನವಾಗಿಟ್ಟುಕೊಂಡು ಹೋರಾಟದಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ನೇರವಾಗಿ ಭಾಗವಹಿಸದೆ ಇದ್ದರೂ ತಮ್ಮ ಚಿಂತನೆಯ, ಬರವಣಿಗೆಯ ಮುಖಾಂತರ ಚಳುವಳಿಯನ್ನು ಬೆಂಬಲಿಸಿ ಜನರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಿದರು, ನವೋದಯದ ಪ್ರಮುಖ ಲೇಖಕರಾದ ಗೋರೂರು, ಸಿದ್ದವನಹಳ್ಳಿ ಕೃಷ್ಣ ಶರ್ಮ ಕೊ.ಚೆ., ಪಾಪು ಇನ್ನೂ ಅನೇಕರು, ರಾಷ್ಟ್ರೀಯ ಚಳುವಳಿಯಲ್ಲಿ ನೇರವಾಗಿ ಪಾಲ್ಗೊಂಡರು.

ಮತ್ತೆ ಕೆಲವರು, ಸೃಜನಾತ್ಮಕವಾಗಿ ಬರಹ ಕವಿತೆಗಳ ಮೂಲಕ ಜಾಗೃತಗೊಳಿಸುವ, ಸಾರ್ವತ್ರಿಕ ಪ್ರಜ್ಞೆಯಾಗಿಸುವ, ವಾಸ್ತವ ಆದರ್ಶಗಳ ಸಂಕೀರ್ಣ ಚಿತ್ರಗಳನ್ನು ನೈತಿಕ ಪಾತಳಿಕೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನಕ್ಕೆ ತೊಡಗಿಸಿಕೊಂಡರು, ಈ ಎಲ್ಲ ಅಂಶಗಳನ್ನು ಇಟ್ಟುಕೊಂಡೇ ಪುತಿನ ಅವರು ನೆರಳು ಕವಿತೆಯಲ್ಲಿ ಗಾಂಧಿ ಪ್ರತಿಮೆಯನ್ನು ಕಂಡರಿಸಿರುವುದನ್ನು ಕಾಣುತ್ತೇವೆ.

ಕವಿತೆಯ ‘ವಸ್ತು’ ಗಾಂಧಿಯೇ ಹೊರತು ‘ಗರುಡ’ವಾಗಲಿ, ಅದರ ‘ನೆರಳಾ’ಗಲಿ ಅಲ್ಲ, ಕವಿ ಗಾಂಧಿಯ ಮೋಹಕ ವ್ಯಕ್ತಿತ್ವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸೆಳೆಯಬಲ್ಲಂಥ ಲೋಹ ಚುಂಬಕತ್ವವನ್ನು ‘ಗರುಡ’ ಮತ್ತು ಅದರ ನೆರಳಿನ ರೂಪಕದಲ್ಲಿ ಕಟ್ಟಿಕೊಡುತ್ತಾರೆ. ಮನುಷ್ಯನ ಆಗಾಧ ಚೈತನ್ಯ, ಬಾಹ್ಯ ಬದುಕಿನ ಸಮಸ್ತದ ಜತೆ ಆಪ್ತ ಸಂಬಂಧವನ್ನು ಊರಿಕೊಳ್ಳುವುದೇ ಮುಖಾಂತರವೇ ನೆರಳು ಕವಿತೆಯ ಕೇಂದ್ರ ಪ್ರಜ್ಞೆ ಅದೇ ರಾಷ್ಟ್ರ ಪ್ರಜ್ಞೆ ಆಗಿದೆ ಎಂಬುದನ್ನು ಅರ್ಥೈಸಿಕೊಂಡಾಗ ಮಾತ್ರ ಪುತಿನ ಅವರನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

‘ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓದುತಿಹುದುʼ
ಕವಿತೆಯ ಮೊದಲನೆಯ ಸಾಲಿನಲ್ಲಿ ಗರುಡನ ಚಲನೆಯ ಕ್ರಿಯೆಯನ್ನು ಹೇಳಿದ್ದಾರೆ, ಕೆಳಗಿನ ಸಾಲು ಗರುಡನ ನೆರಳು ನೆಲದ ಮೇಲೆ ಹಿಂಬಾಲಿಸುವುದನ್ನು ಸೂಚಿಸುತ್ತದೆ. ಗರುಡ ಮೇಲಿದ್ದರೆ, ನೆರಳು ನೆಲದಲ್ಲಿದೆ ಅದು ಗರುಡನ ಆಜ್ಞಾಧಾರಕ ಹಿಂಬಾಲಕನಂತೆ ತನ್ನ ಕ್ರಿಯೆಯನ್ನು ಮಾಡುತ್ತಿದೆ. ಗಾಂಧಿ ಸತ್ಯಾಗ್ರಹ ಅಹಿಂಸೆ, ಸರ್ವೋದಯ, ರಾಷ್ಟ್ರೀಯ ವಿಚಾರಗಳಿಂದ ಹೇಗೆ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಜನಾಕರ್ಷಿತರಾದರು ಎಂಬುದನ್ನು ಕವಿತೆಯ ಈ ಸಾಲುಗಳು ಬಿಂಬಿಸುತ್ತವೆ.

ಗರುಡ ಪಕ್ಷಿಯ ಮೇಲೆ ಹಾರಿದಾಗ ಕೆಳಗೆ ಅದರ ನೆರಳು ಮನೆ, ಮಠ, ಹಾದಿ ಬೀದಿ, ಹಳ್ಳ ಕೊಳ್ಳ ಗುಡ್ಡ ಬೆಟ್ಟಗಳನ್ನು ಯಾವ ತಡೆಯೂ ಇಲ್ಲದೆ ಜಿಗಿದು ನಡೆಯುವುದನ್ನು ನೋಡಿದ ಪುತಿನ ಅವರಿಗೆ ಹೊಸದೊಂದು ಅನುಭವವಾಗುತ್ತದೆ. ಆ ಅನುಭವ ಕವಿಗಾದ ವಯಕ್ತಿಕ ಅನುಭವವಾದರೂ ಈ ನೆರಳು ಜೊಸದೊಂದು ಭಾವವನ್ನು ಪ್ರಚೋದಿಸುತ್ತದೆ. ಈ ಭಾವದಿಂದಲೇ ಇದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಕವಿತೆಯ ಮುಂದಿನ ಸಾಲುಗಳು ಕೂಡ ಅಷ್ಟೇ ಗಮನಾರ್ಹವಾಗಿವೆ.

ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ
ಈ ಸಾಲು ಗಾಂಧಿಯ ವ್ಯಕ್ತಿತ್ವಕ್ಕೆ ಶಕ್ತಿಪೂರ್ಣವಾದ ಧ್ವನಿಯನ್ನು ತಂದುಕೊಡುತ್ತದೆ. ಗಾಂಧಿ ತಮ್ಮ ಜೀವನದುದ್ದಕ್ಕೂ ಅಹಿಂಸೆ, ಮಾನವ ಪ್ರೇಮವನ್ನು ಪ್ರತಿಪಾದಿಸಿಕೊಂಡು ಬಂದವರು. ಆ ಮೂಲಕವೇ ಜನ ಕೋಟಿಯನ್ನು ಲೋಹ ಚುಂಬಕದಂತೆ ಆಕರ್ಷಿಸಬಲ್ಲ ವ್ಯಕ್ತಿತ್ವವನ್ನು ಕವಿ ಕಾಣುತ್ತಾರೆ. ಕವಿತೆಯ ಎರಡನೇ ಮತ್ತು ಮೂರನೇ ಚರಣಗಳು ಗಾಂಧಿಯ ವ್ಯಕ್ತಿತ್ವ ಮತ್ತು ಹೋರಾಟದ ಚಿತ್ರವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ನೆರವಾಗುತ್ತವೆ.

ಈ ಚರಣಗಳಲ್ಲಿ ಕಾಣಿಸಿಕೊಳ್ಳುವ ನೆಲ, ಮನೆ ಕೊಳ, ಬಾವಿ, ಗಿಡ, ಗುಲ್ಯ (ಕಂಟಿ) ತೆವರು, ತಿಟ್ಟು ಗಾಳಿಯ ವೇಗ ಬಿಡಿಸಿರಿ ಬೆರಗು ಎಲ್ಲವೂ ಗಾಂಧಿ ಹೋರಾಟದ ಚಿತ್ರಕ್ಕೆ ಬಣ್ಣ ತುಂಬುತ್ತವೆ. ಇಡೀ ಕವನದಲ್ಲಿ ಒಂದು ಚಲನೆ ಮತ್ತು ಆ ಚಲನೆ ಹೆಚ್ಚು ವಿವರವಾಗಿ ವಿಶ್ವಾರ್ಹವಾಗಿ ಕಟ್ಟಿ ಕೊಡುವುದಕ್ಕೆ ತುಡಿಯುವುದು ಮುಂದಿನ ಚರಣವು ಕವಿಯ ಆಶಯವನ್ನು ಮತ್ತಷ್ಟು ಸ್ಪಷ್ಟಗೊಳಿಸುತ್ತದೆ.

ಇದನೊಡಿ ನಾನು ನೆನೆವೆನಿಂದು-
ಇಂಥ ನೆಳಲೇನು ಗಾಂಧಿಯೆಂದು
ಹರಿದತ್ತ ಹರಿವು ಚಿತ್ತ
ಈ ಧೀರ ನಡೆವನತ್ತ
ಕವಿ ಪುತಿನ ಅವರು ಪುರಾಣ ಪ್ರತಿಮೆಯನ್ನು ಇತಿಹಾಸಕ್ಕೆ ಸಂಕೇತವಾಗಿ ಇಲ್ಲಿ ಬಳಸಿಕೊಂಡಿದ್ದಾರೆ. ಕವಿತೆಯನ್ನು ಓದುತ್ತ ಹೋದಂತೆ, ಅದು ತನ್ನ ಅರ್ಥದ ಪದರುಗಳನ್ನು ಬಿಚ್ಚಿಕೊಳ್ಳುತ್ತದೆ. ಕಾರಣವೆಂದರೆ ಗಾಂಧಿಗೆ ತನ್ನದೇ ಆದ ಅಸ್ತಿತ್ವವನ್ನು ಕೊಡಬೇಕೆನ್ನುವ ಕವಿಯ ತಿಳುವಳಿಕೆಯಾಗಿದೆ. ‘ಹರಿದಿತ್ತ ಹರಿಯ ಚಿತ್ತ’ ಇದು ಶ್ಲೇಷಾರ್ಥದಲ್ಲಿ ಪರಿಭಾವಿಸಬಹುದು. ಹರಿಯು ಸರ್ವೋತ್ತಮ ಇಡೀ ಬ್ರಹ್ಮಾಂಡವನ್ನು ಆವರಿಸಿರುವಂಥ ಶಕ್ತಿ ರೂಪಿ ಮತ್ತೊಂದು ಹರಿದತ್ತ ಎನ್ನುವುದು ಹರಿಗೆ ದತ್ತವಾದನು ಸಂತನಿವನು ಬೈರಾಗಿ, ತುಂಡು ಬಟ್ಟೆಯನ್ನುಟ್ಟು ಕೈಯಲ್ಲಿ ಕೋಲನ್ನು ಹಿಡಿದು ಚಿತ್ತ ಹರಿದತ್ತ ನಡೆಯುವ ಸ್ವತಂತ್ರ ನೀತ ಈ ಹರಿಪ್ರಿಯನಾದ ಗಾಂಧಿಯನ್ನು ಭಾರತೀಯ ಕೋಟಿ ಕೋಟಿ ಸ್ವತಂತ್ರ್ಯ ಸೇನಾನಿಗಳು ನೆರಳಿನಂತೆ ಅನುಸರಿಸುತ್ತಿರುವುದನ್ನು ತುಂಬಾ ಸೊಗಸಾಗಿ ಕಟ್ಟಿ ಕೊಟ್ಟಿರುವರು.

ಪುತಿನ ಅವರು ಕಾವ್ಯಕ್ಕೆ ಬಳಸಿಕೊಂಡಿರುವ ಪೌರಾಣಿಕ ಪ್ರತಿಮೆಗಳು ಕುರಿತು ಎಚ್.ಎಸ್.ಆರ್. ಬರೆಯುತ್ತ ‘ಪುತಿನ ಕವಿತೆಗಳೆಲ್ಲಕ್ಕೂ ಧಾರ್ಮಿಕ ಕವಿತೆಗಳೆಂಬ ಹಣೆಪಟ್ಟಿ ಹಚ್ಚುವುದು ಸರಿಯಲ್ಲ. ಅವರು ಸಮಕಾಲೀನ ಬದುಕನ್ನು ಪುರಾಣದ ಪರಿಭಾಷೆಯಲ್ಲಿ ಶೋಧಿಸುತ್ತಾರೆ’ ಎನ್ನುತ್ತಾರೆ. ಪುತಿನ ಅವರ ಕಾವ್ಯದಲ್ಲಿ ಬಳಸುವ ಪೌರಾಣಿಕ ಪ್ರತಿಮೆಗಳು ಅವ್ರು ಕವಿತೆಯ ಪರಿಕರಗಳೇ ಮಾತ್ರವೇ ಆಗಿದ್ದು. ಅವುಗಳನ್ನು ಸಮಕಾಲೀನ ಜೀವನ ಪರಿಸ್ಥಿತಿಯ ಮಥನಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಎನ್ನುವುದಕ್ಕೆ ನೆರಳು ಕವಿತೆಯು ಸಾಕ್ಷಿಯಾಗಿದೆ.

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: