ಇದೊಂದು ನೆನಪಿನಲ್ಲುಳಿಯುವ ಮಂತ್ರಮಾಂಗಲ್ಯ…

ಬೈರಮಂಗಲ ರಾಮೇಗೌಡ

ಕಳೆದ ಮುವ್ವತ್ತೈದು ವರ್ಷಗಳಿಂದ ನೂರಕ್ಕೂ ಹೆಚ್ಚು ‘ಮಂತ್ರಮಾಂಗಲ್ಯ’ ರೂಪದ ವಿವಾಹಗಳನ್ನು ಮಾಡಿಸಿರುವ ನನಗೆ ೪.೬.೨೦೨೧ ರಂದು ಶುಕ್ರವಾರ ಬೆಂಗಳೂರಿನ ಗೊಲ್ಲರಹಟ್ಟಿ ಸಮೀಪದ ತುಳಸಿನಗರದ ವರನ ಮನೆಯಲ್ಲಿ ನಡೆದ ಜಯಂತ್ ಮತ್ತು ನಳಿನಾ ದೇಶಪಾಂಡೆ ಅವರ ಮಂತ್ರಮಾಂಗಲ್ಯ ಒಂದು ಅಪೂರ್ವ ಮತ್ತು ಆದರ್ಶ ವಿವಾಹ ಎನಿಸಿಬಿಟ್ಟಿತು.

ನಾಡಿನ ಸುಪ್ರಸಿದ್ಧ ಜಾನಪದ ಗಾಯಕರು ಮತ್ತು ಸಂಗೀತ ಸಂಯೋಜಕರಾದ ಗುರುರಾಜ ಹೊಸಕೋಟಿ ಅವರ ಮಗ ರಾಜ್‌ಗುರು ಮತ್ತು ನಯನಾ ಅವರ ವಿವಾಹವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಮಂತ್ರಮಾಂಗಲ್ಯ ವಿಧಿಯಂತೆ ನೆರವೇರಿಸಲು ನನ್ನನ್ನು ಆಹ್ವಾನಿಸಿದ ಮೇಲೆ, ಅವರಂತೆಯೇ ಮದುವೆಯಾಗಲು ಬಯಸಿದ ತರುಣ ತರುಣಿಯರು, ಅವರ ಪೋಷಕರು ನನ್ನನ್ನು ಸಂಪರ್ಕಿಸಿದ್ದಾರೆ. ಮಂತ್ರಮಾಂಗಲ್ಯದ ಬಗೆಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ನನ್ನನ್ನು ಆಹ್ವಾನಿಸಿ ಮದುವೆ ಮಾಡಿಕೊಂಡಿದ್ದಾರೆ, ಮದುವೆ ಮಾಡಿಸಿದ್ದಾರೆ ಮತ್ತು ಸಂತೋಷಪಟ್ಟಿದ್ದಾರೆ.

ಜಯಂತ್-ನಳಿನಾ ದೇಶಪಾಂಡೆ ಮಂತ್ರಮಾಂಗಲ್ಯ ವಿವಾಹದ ಸುಳಿವು ಕೊಟ್ಟವರು ಮತ್ತು ಅದನ್ನು ನೆರವೇರಿಸಿಕೊಡುವಂತೆ ಮನವಿ ಮಾಡಿಕೊಂಡವರು ಕೂಡ ರಾಜ್‌ಗುರು ಮತ್ತು ನಯನಾ.

ಕೊರೊನಾ ಸಾಂಕ್ರಾಮಿಕ ಉಂಟುಮಾಡಿರುವ ತಲ್ಲಣ ಹಾಗೂ ಲಾಕ್‌ಡೌನ್ ನಿರ್ಬಂಧಗಳಿಗೆ ಒಳಪಟ್ಟು ವಿವಾಹ ಏರ್ಪಡಿಸುವ ಭರವಸೆ ಸಿಕ್ಕ ನಂತರ ನಾನು ಬರುವುದಾಗಿ ಒಪ್ಪಿಕೊಂಡೆ. ಅನಂತರ ವಧುವಿನ ತಮ್ಮ, ಕನ್ನಡದ ಜನಪ್ರಿಯ ಟಿ.ವಿ.ಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿರುವ ನಿರಂಜನ ದೇಶಪಾಂಡೆ, ವರ ಜಯಂತ್ ಮಾತನಾಡಿದ ಮೇಲೆ ಲಾಕ್‌ಡೌನ್ ನಿರ್ಬಂಧದಿಂದಾಗಿ ಅದ್ದೂರಿಯಾಗಿ ಕಲ್ಯಾಣಮಂಟಪದಲ್ಲಿ ನಡೆಯಬೇಕಾಗಿದ್ದ ಮದುವೆಯನ್ನು ಸರಳ ಮದುವೆಯಾದ ಮಂತ್ರಮಾಂಗಲ್ಯಕ್ಕೆ ಬದಲಾಯಿಸಿಕೊಂಡಿದ್ದಲ್ಲ; ಅವರಿಗೆ ಕುಪ್ಪಳಿಗೇ ಹೋಗಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲೇ ಮಂತ್ರಮಾಂಗಲ್ಯ ವಿವಾಹ ಮಾಡಿಕೊಂಡು ಬರಬೇಕೆನ್ನುವ ಆಸೆ ಇತ್ತು. ಆದರೆ ಈ ದಿನಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಇದ್ದುದರಿಂದ ಮನೆಯಲ್ಲೇ ಮಾಡಿಕೊಳ್ಳುವುದು ಎನ್ನುವ ತೀರ್ಮಾನಕ್ಕೆ ಬಂದರೆಂದು ಗೊತ್ತಾಯಿತು.

ಮಂತ್ರ ಮಾಂಗಲ್ಯಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗೆಗೆ ಅವರಿಗೆ ಸ್ಪಷ್ಟೀಕರಣ ಕೊಡುತ್ತ ‘ಪುರೋಹಿತರು, ಅವರ ಸಂಸ್ಕೃತದ ಮಂತ್ರೋಚ್ಚಾರಣೆ, ಧ್ವನಿವರ್ಧಕ, ಮಂಗಳವಾದ್ಯ ಇರತಕ್ಕದ್ದಲ್ಲ. ಎರಡೂ ಕಡೆಯ ತೀರಾ ಆಪ್ತರಾದ ಬಂಧುಮಿತ್ರರು ಮಾತ್ರ ಇರಬೇಕು, ಜನಜಂಗುಳಿ ಆಗಬಾರದು. ರಾಹುಕಾಲ ಯಮಗಂಡಕಾಲ ಗುಳಿಕ ಕಾಲಗಳನ್ನು ಪರಿಗಣಿಸಬಾರದು, ಭೋಜನಕೂಟ ಏರ್ಪಡಿಸಬಾರದು. ಬದಲಾಗಿ ಲಘುವಾದ ತಿಂಡಿಗಳನ್ನು ಕೊಡಬಹುದು. ವರದಕ್ಷಿಣೆ, ವರೋಪಚಾರ, ಮುಯ್ಯಿ ಹಾಕುವುದು ಇಂಥ ಪದ್ಧತಿಗಳನ್ನು ಅನುಸರಿಸಬಾರದು’ ಎಂದೆಲ್ಲ ಮನವರಿಕೆ ಮಾಡಿಕೊಟ್ಟೆ.

ಮಂತ್ರಮಾಂಗಲ್ಯದ ನಿಯಮಗಳನ್ನೆಲ್ಲ ಚಾಚೂ ತಪ್ಪದೆ ಅನುಸರಿಸುವಲ್ಲಿ ಅವರು ತೋರಿದ ಶಿಸ್ತು ನನ್ನನ್ನು ಬೆರಗುಗೊಳಿಸಿತು.

ಬೆಳಗ್ಗೆ ೯ ರಿಂದ ೧೦ ರವರೆಗೆ ಮಂತ್ರಮಾಂಗಲ್ಯಕ್ಕೆ ಸಮಯ ಗೊತ್ತು ಮಾಡಿದ್ದರು. ಗೆಳೆಯ, ನ್ಯಾಯವಾದಿ ನಂಜಪ್ಪ ಕಾಳೇಗೌಡರ ಜೊತೆಯಲ್ಲಿ ಒಂಬತ್ತು ಗಂಟೆಗೆ ಹದಿನೈದು ನಿಮಿಷ ಮುಂಚೆಯೇ ವರ ಜಯಂತ್ ಮನೆ ತಲುಪುವವರೆಗೆ ಗೊತ್ತಾಗದೇ ಇದ್ದ ಒಂದು ಸಂಗತಿಯನ್ನು ಇಲ್ಲಿಯೇ ಹಂಚಿಕೊಳ್ಳಬೇಕು.

ಮನೆ ಮುಂದೆ ಚಪ್ಪರ, ಅಂಗಳದಲ್ಲಿ ಬಣ್ಣದ ರಂಗವಲ್ಲಿ, ಬಾಗಿಲಲ್ಲಿ ತಳಿರು ತೋರಣ. ಕಾರು ಇಳಿದು ಒಳಗೆ ಪ್ರವೇಶಿಸುತ್ತಿದ್ದಂತೆ ಹಿರಿಯ ಪುರುಷರೊಬ್ಬರು ಎದುರಾದರು. ನಾನು ಪರಿಚಯ ಮಾಡಿಕೊಂಡೆ. ‘ಬನ್ನಿ ಬನ್ನಿ ಬಹಳ ಸಂತೋಷ’ ಎಂದು ಸ್ವಾಗತಿಸಿದರು. ಅವರು ವರ ಜಯಂತ್ ತಂದೆ ಚಂದ್ರಶೇಖರ್, ಫೋನಿನಲ್ಲಿ ತಿಳಿಸಿದ್ದಂತೆ ಮಾಡಿಕೊಂಡಿದ್ದ ಸಿದ್ಧತೆಗಳನ್ನು ತೋರಿಸುತ್ತಾ ವಿವರಿಸಿದರು. ಕೆಳಗೆ ಕುಳಿತುಕೊಳ್ಳಲು ಆರು ಅಡಿಗಳ ಅಂತರ ಬಿಟ್ಟು ಕುರ್ಚಿ ಹಾಕಿಸಿದ್ದರು.

ಕೈಗೆ ಹಾಕಿಕೊಳ್ಳಲು ಸ್ಯಾನಿಟೈಜರ್ ಇಟ್ಟಿದ್ದರು. ಆ ವೇಳೆಗೆ ಬಂದಿದ್ದವರೆಲ್ಲ ಮಾಸ್ಕ್ ಹಾಕಿಕೊಂಡಿದ್ದರು. ‘ಮದುವೆ ನಡೆಯುವುದು ಮೊದಲ ಅಂತಸ್ತಿನಲ್ಲಿ, ಬನ್ನಿ ಅಲ್ಲಿಗೆ ಹೋಗೋಣ’ ಎಂದು ಕರೆದುಕೊಂಡು ಹೋದರು. ಅಲ್ಲಿ ವಧು-ವರ, ಅವರ ತಂದೆ ತಾಯಿಯರು ಎಲ್ಲಿ ಕೂರಬೇಕು ಅಂತ ನಿರ್ದೇಶಿಸಿದ್ದಾಯಿತು. ಒಂದು ಟ್ರೇನಲ್ಲಿ ಕಳಸ, ಮಾಂಗಲ್ಯ, ಎರಡು ಹೂವಿನ ಹಾರಗಳು, ಅಕ್ಷತೆ ಎಲ್ಲಿ ಇಟ್ಟರೆ ಸೂಕ್ತ ಎಂದು ಸೂಚಿಸಿದ್ದಾಯಿತು. ವಿಡಿಯೋದವರು, ಫೋಟೋಗ್ರಾಫರ್ ಅಲ್ಲಿ ತಮಗೆ ಬೇಕಾದಂತೆ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. 

ಚಂದ್ರಶೇಖರ್ ಕುವೆಂಪು ಮಂತ್ರಮಾಂಗಲ್ಯದ ಎರಡು ಕಿರುಹೊತ್ತಿಗೆಗಳನ್ನು ನನ್ನ ಕೈಯಲ್ಲಿರಿಸಿ, ‘ಪ್ರಮಾಣಪತ್ರ ಭರ್ತಿ ಮಾಡ್ತಿರಿ ಸಾರ್’ ಎಂದು ಹೇಳಿ ಕೆಳಗೆ ಹೋದರು.

ಅದು ವರನ ಮನೆ, ವರನೇ ಇನ್ನೂ ಭೇಟಿಯಾಗಲಿಲ್ಲವಲ್ಲ ಅಂತ ಯೋಚಿಸುತ್ತಿದ್ದಾಗ ಒಬ್ಬ ತರುಣ ನನ್ನತ್ತ ಬಂದ. ‘ನಮಸ್ಕಾರ ಸಾರ್’ ಎಂದ. ನಾನು ತಲೆಯೆತ್ತಿ ನೋಡಿದೆ. ಎತ್ತರದ ನಿಲುವಿನ, ದೃಢ ಶರೀರದ, ಮಂದಸ್ಮಿತ ವದನದ ಆ ತರುಣ ‘ನಾನೇ ಸಾರ್ ಜಯಂತ್’ ಎಂದ.

ನಾನು ಮೇಲೆದ್ದು ಆತನ ಕೈಕುಲುಕಿ ವಿಶ್ ಮಾಡೋಣ ಅಂತ ನೋಡಿದೆ. ಆತನಿಗೆ ತೋಳುಗಳೇ ಇರಲಿಲ್ಲ!

ಆ ಜಾಗದಲ್ಲಿ ಅರ್ಧ ತೋಳಿನ ಅಂಗಿಯ ಎರಡು ತುದಿಗಳು ಎಡ-ಬಲದಲ್ಲಿ ಜೋತು ಬಿದ್ದಿದ್ದವು. ಅದರ ಬಗೆಗೆ ಆ ಕ್ಷಣದಲ್ಲಿ ಹೆಚ್ಚಿನ ಕುತೂಹಲ ತೋರುವುದಾಗಲೀ ವಿಚಾರಿಸುವುದಾಗಲೀ ಸರಿಯಲ್ಲ ಎನಿಸಿ ‘ಕೋವಿಡ್ – ೧೯ ರ ಹೊಡೆತದ ನಡುವೆ ಸರ್ಕಾರದ ನಿಯಮ ನಿರ್ಬಂಧಗಳನ್ನು ನಿರ್ಲಕ್ಷಿಸಿ, ಹೆಚ್ಚು ಜನರನ್ನು ಸೇರಿಸಿ, ಅದ್ದೂರಿಯಾಗಿ ಮದುವೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನೀವು ಸರಳ ವಿವಾಹಕ್ಕೆ ಅದರಲ್ಲೂ ಮಂತ್ರಮಾಂಗಲ್ಯಕ್ಕೆ ಮನಸ್ಸು ಮಾಡಿರುವುದು ತುಂಬಾ ಸಂತೋಷದ ಸಂಗತಿ’ ಎಂದು ಅಭಿನಂದಿಸಿದೆ.

ಜಯಂತ್ ಧನ್ಯವಾದಗಳನ್ನು ಹೇಳಿ ಕೆಳಗೆ ಹೋದ. ಆತನ ತೋಳಿಗಳಿಗೆ ಏನಾಯಿತು? ಹುಟ್ಟುವಾಗಲೇ ಇರಲಿಲ್ಲವೇ? ನಂತರದಲ್ಲಿ ಏನಾದರೂ ಅವಘಡ ಸಂಭವಿಸಿ ಹಾಗಾಯಿತೆ? ಎನ್ನುವ ಅನುಮಾನ ಹಾಗೇ ಉಳಿದುಕೊಂಡಿತ್ತು. ಅಷ್ಟರಲ್ಲಿ ಅವರ ತಂದೆ ಕಾಫೀ ತೆಗೆದುಕೊಂಡು ಬಂದರು. ಕಾಫೀ ಕುಡಿಯುತ್ತಲೇ ಜಯಂತ್ ಬಗೆಗೆ  ಅವರು ಹೇಳಿದ ಕಥೆ ನನ್ನನ್ನು ಮತ್ತಷ್ಟು ಅಚ್ಚರಿಗೆ ದೂಡಿತು.

ಚಂದ್ರಶೇಖರ್ ಶೃಂಗೇರಿ ತಾಲ್ಲೂಕಿನ ಬೇಗಾನೆ ಸಮೀಪದ ಕಣಸಿ ಗ್ರಾಮದವರು. ಎತ್ತಿನ ಗಾಡಿ ಹೊಡೆದು ಸಾಮಾನು ಸರಂಜಾಮು ಸಾಗಿಸಿ ಸಂಸಾರ ಸಲಹುತ್ತಿದ್ದ ತಂದೆಯವರು ಕ್ಷಯರೋಗದಿಂದ ಸತ್ತ ಮೇಲೆ, ಜಮೀನಿನ ವಿಷಯದಲ್ಲಿ ಮೋಸವೂ ಆಗಿ ೧೧ ವರ್ಷದ ಹುಡುಗನಾಗಿದ್ದಾಗ ಬೆಂಗಳೂರಿಗೆ ಬಂದು, ಪರಿಚಯದವರೊಬ್ಬರು ಹೋಟೆಲ್ ಮಾಲೀಕರ ಮನೆಯಲ್ಲಿ ಕೆಲಸಕ್ಕೆ ಹಚ್ಚಿ, ಎರಡು ವರ್ಷಗಳ ನಂತರ ಟ್ರಾವೆಲ್ಸ್ ಆಫೀಸಿನಲ್ಲಿ ಟೆಂಪೊ ಕ್ಲೀನರ್ ಆಗಿ, ಕ್ರಮೇಣ ಚಾಲಕನ ಕೆಲಸ ಕಲಿತು, ಹೊರ ಊರುಗಳಿಗೆ ದಿನ ಪತ್ರಿಕೆಗಳನ್ನು ರವಾನಿಸುವ ಕೆಲಸ ಮಾಡುತ್ತ, ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ಅಧಿಕೃತ ವಾಹನ ಚಾಲಕರಾದರು.

೧೯೮೩ರಲ್ಲಿ ‘ಪ್ಯಾಸೇಜ್ ಟು ಇಂಡಿಯ’ ಸಿನಿಮ ಚಿತ್ರೀಕರಣ ನಡೆಯುವಾಗ ಅಲ್ಲಿಯೂ ವಾಹನ ಚಾಲಕರಾಗಿ ಕೆಲಸ ಮಾಡಿದರು. ಹೊರ ರಾಜ್ಯಗಳಿಗೆ, ಶಬರಿ ಮಲೈಗೆ ಪ್ರವಾಸಿಗಳನ್ನೂ ಭಕ್ತರನ್ನೂ ಕರೆದುಕೊಂಡು ಹೋಗಿ ಬಂದರು. ೧೯೯೦ರಲ್ಲಿ ಕೊಪ್ಪದ ಬಳಿಯ ಅನ್ನಗಾರು ಗ್ರಾಮದ ಸುಮಿತ್ರ ಅವರನ್ನು ಧರ್ಮಸ್ಥಳದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು.

ಸುಮಿತ್ರ – ಚಂದ್ರಶೇಖರ್ ದಂಪತಿಗಳ ಇಬ್ಬರು ಗಂಡುಮಕ್ಕಳಲ್ಲಿ ಹಿರಿಯನಾದ ಜಯಂತ್ ನೋಡುವವರ ಕಣ್ಮನಗಳನ್ನು ಸೆಳೆಯುವಂಥ ಸ್ಫುರದ್ರೂಪಿಯಾದ ಹುಡುಗ. ಅಷ್ಟು ಹೊತ್ತಿಗೆ ಕರ್ನಾಟಕ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ವಾಹನ ಚಾಲಕರಾಗಿದ್ದ ಚಂದ್ರಶೇಖರ್ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆನ್ನುವ ಕನಸು ಕಟ್ಟಿಕೊಂಡು ಒಳ್ಳೆಯ ಶಾಲೆಗೆ ಸೇರಿಸಿದ್ದರು. ೨೦೦೦ ದಲ್ಲಿ ಕಾವಲ್ ಬೈರಸಂದ್ರದ ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್ನಲ್ಲಿದ್ದಾಗ ರಜಾದಿನಗಳಲ್ಲಿ ಬೆಳಗ್ಗೆಯೇ ಟ್ಯೂಷನ್‌ಗೆ ಹೋಗಿದ್ದ ಒಂಬತ್ತು ವರ್ಷದ ಬಾಲಕ ಜಯಂತ್ ಟ್ಯೂಷನ್ ಮುಗಿದ ಮೇಲೆ ಜೊತೆಯ ಹುಡುಗರೊಂದಿಗೆ ಕಟ್ಟಡದ ಕೊನೆಯ ಅಂತಸ್ತಿನ ಟೆರೇಸಿಗೆ ಹೋಗಿ ಆಟವಾಡುತ್ತಿದ್ದ.

ಆಡುವ ಉತ್ಸಾಹದಲ್ಲಿ ಮೇಲೆ ಹಾದುಹೋಗಿದ್ದ ಹೈ ಟೆನ್ಷನ್ ವಿದ್ಯುತ್ ವೈರನ್ನು ಮುಟ್ಟಿ ತೀವ್ರ ಆಘಾತಕ್ಕೆ ಒಳಗಾಗಿ ಮೂರ್ಛೆ ಹೋದ. ಕೂಡಲೇ ಅವನನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದ ಚಂದ್ರಶೇಖರ್ ಆಸ್ಪತ್ರೆಯತ್ತ ಧಾವಿಸಿದರು. ಮಗ ಬದುಕುಳಿದರೆ ಸಾಕೆಂದು ತಂದೆ ತಾಯಿ ಕಾಣದ ದೈವದಲ್ಲಿ ಮೊರೆಯಿಟ್ಟರು. ಒಂದೂವರೆ ತಿಂಗಳ ಆಸ್ಪತ್ರೆ ವಾಸದ ನಂತರ ನಿಷ್ಕ್ರಿಯ ತೋಳುಗಳನ್ನು ಕಳೆದುಕೊಂಡು ಮನೆಗೆ ಬಂದ ಜಯಂತ್ ಕೃತಕ ಕೈ ಜೋಡಿಸಿಕೊಂಡು ಪರೀಕ್ಷೆ ಬರೆದ. ಕೃತಕ ಕೈ ಉಪಯೋಗಿಸುವುದು ಅಷ್ಟೊಂದು ಇಷ್ಟವಾಗದೆ, ಕೈಯಿಂದ ಮಾಡುವ ಕೆಲಸಗಳನ್ನು ಕಾಲಿಂದ ಯಾಕೆ ಮಾಡಬಾರದು ಎಂದು ಕಾರ್ಯಪ್ರವೃತ್ತನಾದ.

ಸತತ ಪ್ರಯತ್ನದ ಮೂಲಕ ಕಾಲನ್ನು ಪಳಗಿಸಿಕೊಂಡ ಮೇಲೆ ತನ್ನ ದೇಹದಲ್ಲಿ ತೋಳುಗಳಿಲ್ಲ ಎನ್ನುವುದೇ ಮರೆತುಹೋಯಿತು. ತೋಳುಗಳು ಇರುವವರಿಗಿಂತ ನಾನೇನು ಕಡಿಮೆಯಲ್ಲ ಎನ್ನುವ ಆತ್ಮವಿಶ್ವಾಸ ಪುಟಿಯಿತು. ವಿಕಲ ಚೇತನರ ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದು ಸಾಮಾನ್ಯ ಶಾಲೆ-ಕಾಲೇಜುಗಳಲ್ಲಿ ಎಲ್ಲರೊಳಗೆ ನಾನೂ ಒಬ್ಬ ಎನ್ನುವಂತೆ ವಿದ್ಯಾಭ್ಯಾಸ ಮಾಡಿ, ಮಾಗಡಿ ರಸ್ತೆಯ ಶಾಂತಿಧಾಮ ಕಾಲೇಜಿನಿಂದ ಬಿ.ಕಾಂ. ಪದವಿ ಪಡೆದುಕೊಂಡ. ಮುಂದೆ ಸ್ವಿಮ್ಮಿಂಗ್ ಕಲಿಯುವ ಆಸಕ್ತಿ ಮೂಡಿ, ಕಲಿಯುತ್ತ ಕಲಿಯುತ್ತ ಅದರಲ್ಲಿ ಪರಿಣತಿ ಪಡೆದು, ಸ್ಪರ್ಧೆಗೆ ಇಳಿಯುವ ಛಲ ಮೂಡುತ್ತದೆ.

ವಿಕಲ ಚೇತನರಿಗಾಗಿಯೇ ಇರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ನಾಲ್ಕು ಬಾರಿ ಭಾಗವಹಿಸಿ ಚಿನ್ನದ ಪದಕ, ಕಂಚಿನ ಪದಕ ಗಳಿಸಿದ. ಉಡುಪಿ ಸಮೀಪದ ಸಮುದ್ರದಲ್ಲಿ ಒಂದು ಕಿ.ಮೀ. ಈಜಿ ದಾಖಲೆ ಮಾಡಿದ. ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಅಪರೂಪದ ಸಾಧನೆಯಿಂದಾಗಿ ಆಸ್ಟೆçÃಲಿಯ ಮೂಲದ ಎ.ಎನ್. ಜಡ್. ಬ್ಯಾಂಕ್ ನ ಉದ್ಯೋಗ ಅವನನ್ನು ಕೈ ಬೀಸಿ ಕರೆಯಿತು. ಅಲ್ಲಿಗೆ ಗ್ರಾಹಕರಾಗಿ ಬಂದ ನಳಿನಾ ದೇಶಪಾಂಡೆ ಅವರಿಗೆ ಈ ಜಯಂತ್ ಎನ್ನುವ ಸುಂದರ ಪುರುಷನ ಪರಿಚಯ ಆಗುತ್ತದೆ. ಪರಿಚಯ ಸ್ನೇಹವಾಗಿ, ಅದು ಆಪ್ತವಾಗಿ, ಪ್ರೇಮಕೋಗಿಲೆ ಕುಹೂ ಎನ್ನಲು ಹೆಚ್ಚು ಸಮಯ ಬೇಕಾಗಲಿಲ್ಲ.

ಪ್ರೇಮಿಸಿಕೊಂಡೇ ಎಷ್ಟು ಕಾಲ ಇರುವುದು. ಒಬ್ಬರ ಮನಸ್ಸನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾಗಿದೆ. ಎರಡೂ ಜೀವಗಳು ಹತ್ತಿರ ಇರಲು ಬಯಸುತ್ತಿವೆ. ಆದ್ದರಿಂದ ಮದುವೆಯ ಮುನ್ನುಡಿ ಬರೆದುಬಿಡಬಾರದೇಕೆ ಎಂದು ಎಲ್ಲವನ್ನೂ ಸಮರ್ಪಕವಾಗಿ ಮೌಲ್ಯಮಾಪನ ಮಾಡಿಯೇ ಜಯಂತ್ ನಳಿನಾ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸುದ್ದಿ ಜಯಂತ್ ಮನೆಗೆ ಮುಟ್ಟಿತು. ತಾಯಿ ಸುಮಿತ್ರ ಅವರಿಗೆ ಗಾಬರಿಯಾಯಿತು. ನಳಿನಾರನ್ನು ಮನೆಗೆ ಕರೆಸಿಕೊಂಡು ವಿಚಾರಿಸಲಾಗಿ, ಇಬ್ಬರ ನಡುವೆ ಗಾಢವಾದ ಅನುರಾಗ ಅರಳಿರುವುದು ಮನವರಿಕೆಯಾಯಿತು.

ನಳಿನಾ ಎದುರೇ ಜಯಂತ್‌ನ ಅಂಗಿಯನ್ನು ಬಿಚ್ಚಿ, ಅವನ ಬಲಗಡೆ ತೋಳು ಪೂರ್ಣ ಕತ್ತರಿಸಲ್ಪಟ್ಟಿರುವುದನ್ನೂ, ಎಡಗಡೆ ತೋಳು ಐದಾರು ಅಂಗುಲಗಳಷ್ಟು ಮಾತ್ರ ಇರುವುದನ್ನೂ ಪ್ರತ್ಯಕ್ಷವಾಗಿ ತೋರಿಸಿದರು. ನಳಿನಾ ಅದನ್ನು ನೋಡಿ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಮನಸ್ಸುಗಳು ಬೆರೆತಿರುವ ಕಡೆ ಶರೀರದ ಕೊರತೆ ಅಷ್ಟು ಮುಖ್ಯವಲ್ಲ ಎಂದುಬಿಟ್ಟರು. ಹುಡುಗನಿಗಿಂತ ಹುಡುಗಿಯ ವಯಸ್ಸು ಎರಡು ವರ್ಷ ಹೆಚ್ಚಾಗುತ್ತದಲ್ಲ ಅಂದಾಗ ಗಾಂಧಿ-ಕಸ್ತೂರ್ ಬಾ ಉದಾಹರಣೆಯೇ ನಮ್ಮೆದುರಿಗಿದೆ ಎಂದರು. ಹುಡುಗಿಯ ದೃಢ ನಿರ್ಧಾರಕ್ಕೆ ಜಯಂತ್ ತಂದೆ ತಾಯಿ ಮಣಿದು, ವಿವಾಹಕ್ಕೆ ಅಸ್ತು ಎಂದರು. ನಳಿನಾ ತಮ್ಮ ನಿರಂಜನ ದೇಶಪಾಂಡೆ ಅಕ್ಕನ ತೀರ್ಮಾನವನ್ನು ಅನುಮೋದಿಸಿ, ಮಂತ್ರಮಾAಗಲ್ಯಕ್ಕೆ ನೆರವಾಗಿ ನಿಂತ.

ಕತ್ರಿಗುಪ್ಪೆಯ ನ್ಯಾಷನಲ್ ಪಬ್ಲಿಕ್ ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ನಳಿನಾ ರಾಗ-ಭಾವಗಳು ಬೆರೆತ ಸಂತೋಷವನ್ನು ಅನುಭವಿಸುತ್ತಿದ್ದುದು, ಅದನ್ನು ಜಯಂತ್ ಜೊತೆಗೆ ಹಂಚಿಕೊಳ್ಳುತ್ತಿದ್ದುದು ಮಂತ್ರಮಾಂಗಲ್ಯ ವಿವಾಹದಲ್ಲಿ ಅವರನ್ನು ಆಶೀರ್ವದಿಸಲು, ಹಾರೈಸಲು ಬಂದಿದ್ದ ಬಂಧು ಮಿತ್ರರಿಗೆ ವೇದ್ಯವಾಗುತ್ತಿತ್ತು. ಅವರ ತಂದೆ ವಿನಯಕುಮಾರ್ ದೇಶಪಾಂಡೆ ಹುಬ್ಬಳ್ಳಿಯಲ್ಲಿದ್ದ ತಮ್ಮ ವೃದ್ಧ ತಂದೆಯನ್ನು ನೋಡಿಕೊಳ್ಳುವ ಕಾಯಕದಲ್ಲಿ ಇದ್ದುದರಿಂದ ತಾಯಿ ಜಯಶ್ರೀ ಮದುವೆಗೆ ಹಾಜರಾಗಿದ್ದರು.

ಮದುವೆಯ ಸಂದರ್ಭದಲ್ಲಿ ತಂದೆ ತಾಯಿ ನಿಭಾಯಿಸಬೇಕಾದ ಹೊಣೆಗಾರಿಕೆಯನ್ನು ನಿರಂಜನ ಮತ್ತವನ ಪತ್ನಿಯೇ ನಿರ್ವಹಿಸಿದರು. ನಳಿನಾ ತಂದೆಯವರ ತಂದೆ, ಅಂದರೆ ತಾತ ಇನ್ಫೋಸಿಸ್ ಸುಧಾ ಮೂರ್ತಿಯವರಿಗೆ ಗುರುಗಳಾಗಿದ್ದವರು. ಆ ಕುಟುಂಬದ ಪರಂಪರಾಗತ ಮಾನವೀಯ ಮೌಲ್ಯಗಳೇ ನಳಿನಾ ಅವರಲ್ಲಿ ಹರಿದುಬಂದಿರುವುದರಿಂದಲೋ ಏನೋ ವಿಕಲಚೇತನ ತರುಣನನ್ನು ಬಾಳಸಂಗಾತಿಯಾಗಿ ಮನಃಪೂರ್ವಕವಾಗಿ ಆಯ್ಕೆಮಾಡಿಕೊಂಡಿರಬಹುದು. ಕನಸು ತುಂಬಿಕೊಂಡ ಹುಡುಗಿಯೊಬ್ಬಳು ವರನ ಕೈ ಹಿಡಿಯುವ ಸಂದರ್ಭದಲ್ಲಿ ಅನುಭವಿಸುವ ಸಹಜವಾದ ಸಂತೋಷ ಸಂಭ್ರಮಗಳು ಆಕೆಯಲ್ಲಿ ತುಂಬಿತುಳುಕುತ್ತಿದ್ದವು. ಮನ ಮೆಚ್ಚಿದ ಹುಡುಗನಿಗೆ ಮಂತ್ರಮಾAಗಲ್ಯದಲ್ಲಿ ಅಕ್ಕನನ್ನು ಒಪ್ಪಿಸಿದ ತೃಪ್ತಿ ನಿರಂಜನ ದೇಶಪಾಂಡೆಯಲ್ಲಿ ಕಾಣುತ್ತಿತ್ತು.

ನಾನು ವಿವಾಹ ಸಂಹಿತೆಯನ್ನು ಬೋಧಿಸುವಾಗ ಜಯಂತ್ -ನಳಿನಾ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಮಂದಹಾಸ ಬೀರುತ್ತ ಪ್ರಮಾಣ ಮಾಡುತ್ತಿದ್ದರು, ಶಬ್ದಗಳನ್ನು ಸ್ಪಷ್ಟವಾಗಿ ಉಚ್ಚರಿಸುತ್ತಿದ್ದರು. ‘ಸರ್ಕಾರದ ನಿಯಮದಂತೆ ಎರಡನೇ ಮಕ್ಕಳನ್ನು ಪಡೆದು, ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತೇವೆ’ ಎಂದು ಪ್ರಮಾಣ ಮಾಡುವಾಗ ತುಳುಕಿದ ಅವರ ನಗೆಯನ್ನು ಇಡೀ ಸಭೆ ಪ್ರತಿಧ್ವನಿಸಿತು! ಸಂಹಿತೆ ಬೋಧನೆ, ವಧು-ವರರ ಪ್ರಮಾಣ ವಚನದ ನಂತರ ಅವರಿಬ್ಬರೂ ಪರಸ್ಪರ ಹಾರ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿದೆ. ನಳಿನಾ ಕೈಯಲ್ಲಿದ್ದ ಹೂವಿನ ಹಾರ ಜಯಂತ್ ಕೊರಳನ್ನು ಅಲಂಕರಿಸಿತು.

ಜಯಂತ್ ಪರವಾಗಿ ಅವನ ತಾಯಿ ವಧುವಿನ ಕೊರಳಿಗೆ ಹಾರ ಹಾಕಿದರು. ಪರಸ್ಪರರು ಅಪೇಕ್ಷಿಸಿದಲ್ಲಿ ವರನು ವಧುವಿನ ಕೊರಳಿಗೆ ತಾಳಿ ಕಟ್ಟಬಹುದು ಎಂದು ಘೋಷಿಸಿದೆ. ಅದನ್ನೂ ಜಯಂತ್ ತಾಯಿ ನೆರವೇರಿಸಬಹುದು ಎಂದುಕೊಂಡೆ. ಆದರೆ ಸರದ ಮಾದರಿಯಲ್ಲಿ ಸಿದ್ಧಪಡಿಸಲಾಗಿದ್ದ ಮಾಂಗಲ್ಯವನ್ನು ಜಯಂತ್ ಎಡಭಾಗದ ಮೊಂಡು ತೋಳಿಗೆ ಹಾಕಿಸಿಕೊಂಡು ಅದನ್ನು ತನ್ನೆದುರು ಬಾಗಿದ ವಧುವಿನ ಕೊರಳಿಗೆ ಆರಾಮವಾಗಿ ಹಾಕಿದಾಗ, ಅದು ಆಕೆಯ ಎದೆಯ ಮೇಲೆ ವಿರಾಜಮಾನವಾದ ಕೌತುಕವನ್ನು ಇಡೀ ಸಭೆ ಚಪ್ಪಾಳೆ ತಟ್ಟಿ, ಹರ್ಷೋದ್ಗಾರ ಹೊರಡಿಸುವ ಮೂಲಕ ಸೂಚಿಸಿತು.

ವಿಡಿಯೋಗ್ರಾಫರ್, ಫೋಟೋಗ್ರಾಫರ್ ಹೆಚ್ಚು ಕ್ರಿಯಾಶೀಲರಾದರು. ವಧು-ವರ ಇಬ್ಬರೂ ತಂದೆತಾಯಿ, ಅತ್ತೆಮಾವಂದಿರ ಪಾದಗಳಿಗೆ ನಮಸ್ಕರಿಸಿ, ಅಕ್ಷತೆ ಹಾಕಿಸಿಕೊಂಡು ಆಶೀರ್ವಾದ ಪಡೆದುಕೊಂಡರು. ಮಂತ್ರಮಾಂಗಲ್ಯ ವಿವಾಹಕ್ಕೆ ಸಾಕ್ಷಿಯಾದವರು ಒಬ್ಬೊಬ್ಬರಾಗಿ ಬಂದು ನೂತನ ದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.

ಕೊನೆಯ ಹಂತದಲ್ಲಿ ಮಂತ್ರಮಾಂಗಲ್ಯ ದೃಢೀಕರಣ ಪತ್ರ ಸಿದ್ಧಪಡಿಸಿ ತಂದೆ, ತಾಯಿ ಮತ್ತು ಕೆಲವು ಹಿರಿಯರ ಸಹಿ ಹಾಕಿಸಿ, ನಳಿನಾ ಕೈಯಲ್ಲೂ ಸಹಿ ಹಾಕಿಸಿ, ‘ಜಯಂತ್ ನಿನ್ನ ಸಹಿ ನಂತರದಲ್ಲಿ ಹಾಕಿಕೊಳ್ಳಪ್ಪ’ ಎಂದು ಹೇಳಿದೆ. ಅದಕ್ಕೆ ಜಯಂತ್ ‘ಈಗಲೇ ಅದು ವಿಡಿಯೋ ಮತ್ತು ಫೋಟೊಗಳಲ್ಲಿ ದಾಖಲಾಗಲಿ, ಪೆನ್ ಕೊಡಿ ಸಾರ್, ಸಹಿ ಹಾಕ್ತೀನಿ’ ಎಂದ. ಅಮ್ಮ ನನ್ನಿಂದ ಪೆನ್ ತೆಗೆದುಕೊಂಡು, ಜಯಂತ್ ಬಲಗಾಲಿನ ಹೆಬ್ಬೆರಳು ಮತ್ತು ಅದರ ಪಕ್ಕದ ಬೆರಳಿನ ನಡುವೆ ಸಿಕ್ಕಿಸಿ, ಪತ್ರವನ್ನು ಒಂದು ಪುಸ್ತಕದ ಮೇಲೆ ಇರಿಸಿದರು. ನಾನು ತೋರಿಸಿದ ಜಾಗದಲ್ಲಿ ಜಯಂತ್ ಚಕಚಕನೆ ಸಹಿಹಾಕಿದ. ಎಲ್ಲರ ಸಮಕ್ಷಮದಲ್ಲಿ ಆ ದೃಢೀಕರಣ ಪತ್ರವನ್ನು ನೂತನ ದಂಪತಿಗಳಿಗೆ ಒಪ್ಪಿಸಿ, ಶುಭ ಹಾರೈಸಿ, ಅಲ್ಲಿಂದ ನಿರ್ಗಮಿಸಿದೆ.

ಮಾರನೆಯ ದಿನ ಜಯಂತ್ ತಂದೆ ಫೋನ್ ಮಾಡಿ ‘ಸಾರ್, ಮಗ-ಸೊಸೆ ತುಂಬಾ ಸಂತೋಷವಾಗಿದ್ದಾರೆ. ಜೋಡಿ ಹಕ್ಕಿಗಳಂತಿರುವ ಅವರನ್ನು ನೋಡಿ ನಮಗೂ ಸಂತೋಷವಾಗಿದೆ. ನಮ್ಮ ಸಂಸಾರ, ಈಗ ಆನಂದಸಾಗರ’ ಎಂದರು.

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: