ಹಂಗಿಲ್ಲದ ಹಾದಿಯಲಿ ಕಂಪಿನ ಪಯಣ..

 ವರದೇಂದ್ರ ಕೆ ಮಸ್ಕಿ

ಅತ್ಯುತ್ತಮ ಶೀರ್ಷಿಕೆಯೊಂದಿಗೆ ಮಹತ್ವಪೂರ್ಣ ಮುನ್ನುಡಿ, ಅರ್ಥಗರ್ಭಿತ ಬೆನ್ನುಡಿ ಇರುವ; ಓದಿದರೆ ಮತ್ತೆ ಮತ್ತೆ ಓದಿಸಿಕೊಳ್ಳುವ, ಆ ಓದಿದ ಕವಿತೆಗಳ ಗುಂಗಲ್ಲೇ ನಮ್ಮನ್ನಿರುವಂತೆ ಮಾಡುವ, ಚಿಂತನೆಯ ಬುಗ್ಗೆಗಳನ್ನು ಎಬ್ಬಿಸುವ ಕವಿತೆಗಳ ಸಂಕಲನ ‘ಹಂಗಿಲ್ಲದ ಹಾದಿ’, ಸೊಗಸಾದ ಕೃತಿ. ಪುಸ್ತಕದ ಶೀರ್ಷಿಕೆಯೇ ಓದುಗರನ್ನು ತನ್ನೆಡೆಗೆ ಆಕರ್ಷಿಸುವಂತಿದೆ. 

ಅನೇಕ ವೈಚಾರಿಕ ಕವಿತೆಗಳನ್ನೊಳಗೊಂಡ ಸಂಕಲನ ನೇರವಾದ ಸಂದೇಶಗಳನ್ನು ಓದುಗನಿಗೆ‌ ನೀಡುತ್ತದೆ. ಪ್ರೀತಿ, ಉಕ್ಕಿಬರುವ ಒತ್ತಾಸೆಗಳನ್ನು ನೆನಪಿಸುತ್ತ, ಕಳೆದುಕೊಂಡ ನೆನಪುಗಳ ದೋಣಿಯಲ್ಲಿ ನಮ್ಮನ್ನು ಸಾಗಿಸುತ್ತಾರೆ ಕವಯಿತ್ರಿ ಜಹಾನ್ ಆರಾ ಎಚ್ ಅವರು. ಅರ್ಧ ಶತಕದಷ್ಟು ಕವಿತೆಗಳನ್ನೊಳಗೊಂಡ ಕೃತಿ, ‘ಹಂಗಿಲ್ಲದ ಹಾದಿ’ಯ ಓದಿನ ಪಯಣ ನಿಮ್ಮನ್ನು ಸುಮ್ಮನೆ ಓದಿನ ದಾರಿಯಲ್ಲಿ ಸಾಗಲು ಬಿಡದು.

ಪ್ರತಿ ಹೆಜ್ಜೆಗೂ ಹೃದಯವನ್ನು ಕಂಪಿಸುತ್ತದೆ. ವಾಸ್ತವ ಸತ್ಯಗಳನ್ನು ದಾರಿಯುದ್ದಕ್ಕೂ‌ ತೋರಿಸುತ್ತ ಕವಯಿತ್ರಿ ಓದುಗರ ಕಣ್ತೆರಿಸುತ್ತಾರೆನ್ನಬಹುದು. ಅಂತಹ ಅನೇಕ ಕವಿತೆಗಳ‌ ಸಂಗಮದಲ್ಲಿ ಒಂದಷ್ಟು ಕಾವ್ಯಗಳ ಕಿರು ಪರಿಚಯದ ನೋಟ ಇಲ್ಲಿದೆ.. ‘ನಾನು ಹೆಣ್ಣು ಯಾವತ್ತಿಗೂ ಗುಲಾಮಳಲ್ಲ, ಕಾಮಿನಿಯಲ್ಲ, ಕೇವಲ ಭೋಗದ ವಸ್ತುವಲ್ಲ, ಷರಾಬಿನ ಅಮಲಲ್ಲ, ನಾನು ಚೈತ್ರಕ್ಕೆ ಆರತಿ, ಜನ್ಮಕ್ಕೆ ಮುಕ್ತಿ ಕೊಡುವವಳು, ಮುಕ್ಕೋಟಿ ದೇವರು ನಮಿಸುವ ಮುತ್ತೈದೆ, ನಾನು ಪುರುಷನಿಗೆ ಸಮಾನವಾಗಿ ಬದುಕಬಲ್ಲವಳು, ಸಮಪಾಲು ಸಮಬಾಳಿನಂತಿರುವ ಅರ್ಧಾಂಗಿ ನಾನು ‘ಹೆಣ್ಣು’ ಎಂದು ಕವಯಿತ್ರಿ ಸಮಾಜದಲ್ಲಿನ ಅಸಮತೋಲನ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯದ ಕುರಿತಾಗಿ ಖಾರವಾಗಿಯೇ ಪ್ರಖರವಾಗಿ ಪ್ರಸ್ತುತ ಪಡಿಸುತ್ತಾರೆ.

ಮುಂದೆ, ನಾನು ಹೆಣ್ಣು; ಗಂಡನ್ನು ಪೂರ್ಣಗೊಳಿಸುವವಳು ಎಂಬ ಹೆಮ್ಮೆಯ ಮತ್ತು ತನ್ನತನದ ಬಗ್ಗೆ ಅಭಿಮಾನವನ್ನೂ ತಾಳಿ ಪುರುಷರ ಏಳಿಗೆಗೆ ನಾವೇ ಪ್ರಾಮುಖ್ಯ ಎಂಬ ಮಾತನ್ನು ಹೇಳುತ್ತಾರೆ. ಹೇಣ್ಣು ಕವಿತೆಯ ವಸ್ತು, ಬಳಸಿದ ಪದಗಳು ಉತ್ತಮವಾಗಿವೆಯಾದರೂ, ಮೊದಲೆರೆಡು ಸಾಲುಗಳಲ್ಲಿನ ಲಯದಂತೆ ಮಿಕ್ಕ ಸಾಲುಗಳನ್ನು ಜೋಡಿಸಿದ್ದರೆ ಮತ್ತಷ್ಟು ಪ್ರಭಾವಿತವಾಗುತ್ತಿತ್ತೆನಿಸುತ್ತದೆ.

ಮಕ್ಕಳಿಗಾಗಿ ಜೀವ ಸವೆಸುವ, ಜೀವನವನ್ನು ಮುಡುಪಾಗಿಡುವ ತಾಯಿಯೆಂದರೆ ಸಾಕು, ಎಲ್ಲರ ಹೃದಯ ಅರಳುತ್ತದೆ. ಆ ಪದ ಆಲಿಸಿದ ಮಾತ್ರದಿಂದಲೇ ಮನದಲ್ಲಿ ಮಧುರ ಭಾವನೆ ಉಕ್ಕುತ್ತದೆ. ತಾಯಿ ಕೊಟ್ಟ ಜನ್ಮದ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಅಂತೆಯೇ ತಂದೆಯೂ ಕೂಡ ಎಂದು ಕವಯಿತ್ರಿ ಜಹಾನ್ ಅವರು ‘ಜೀವ ಜೋಳಿಗೆ’ಯಲ್ಲಿ ಹೇಳುತ್ತಾರೆ. ತಾಯಿ ಜನ್ಮ ಕೊಟ್ಟರೆ, ತಂದೆ ಮರುಜನ್ಮ ಕೊಡುತ್ತಾನೆ ಹೇಗೆಂದರೆ… 

‘ಆ ಬಾಹು ಕೋಶಗಳ ಸುಭದ್ರ ಕೋಟೆಯಲಿ
ಸಿಕ್ಕಿತೆನಗೆ ಮರುಜನ್ಮವು
ಬದುಕು ಬಹುಮಾನವಾಗಿ ಸಿಕ್ಕಿತು
ಅಪ್ಪ ನಿನ್ನ ಅಕ್ಕರೆ ಅಪ್ಪುಗೆಯೊಂದಿಗೆ’ ಎಂದು ತಂದೆಯ ತ್ಯಾಗವು ಮಕ್ಕಳಿಗೆ ಮರುಜನ್ಮವಿದ್ದಂತೆ. ಅಮ್ಮ ಜೀವ ನೀಡುತ್ತಾಳೆ, ಅಪ್ಪ ಜೀವನ ನೀಡುತ್ತಾನೆ ಎನ್ನುವ ಅವರ ಅನುಭವಕ್ಕೆ ಕಾವ್ಯ ರೂಪ ಕೊಟ್ಟಿದ್ದಾರೆ.

ತಪ್ಪಿದ ಪ್ರೇಮದ ದುರಂತ ಕಾವ್ಯ ‘ಹೇಜ್ಜೆ ಮೂಡದ ಹಾದಿ’. ಪ್ರತಿ ಅಕ್ಷರಗಳಲ್ಲೂ ಮೂಡಿದ ವೇದನೆಯು ನಮ್ಮ ಭಾವನೆಗಳನ್ನು ಸಂವೇದಿಸುತ್ತವೆ.
‘ಅಂಗೈಯಲ್ಲಿ ನನ್ನ ಹೆಸರಿಗೆ
ಜಂಭ ಹೆಚ್ಚುತ್ತಿತ್ತು ಅವನೇ ಬರೆದಾಗ’ ಎಂದಾಗ ಅವನೇ ಒಲಿದು ಬಂದಾಗ ಪ್ರೇಮವನ್ನು ಅರುಹಿದಾಗ ನನ್ನಲ್ಲಿಯ ಜಂಭ ಹೆಚ್ಚುತ್ತಿತ್ತು…

ಅದಕ್ಕೆ
‘ಯಾಕೋ ಏನೋ ಆ ಹೆಸರು
ಹೃದಯದ ಹಾಳೆಯ ಮೇಲೆ
ಇನ್ನೂ ಮೂಡಲೇ ಇಲ್ಲ’‌‌ … ಎಂದು ತನ್ನ ಜಂಭದಿಂದ ಕಳೆದುಕೊಂಡ ಪ್ರೀತಿಯನ್ನು ನೆನೆದು ಪಶ್ಚಾತ್ತಾಪ ಪಟ್ಟ ಮನಸಿನ ಕವಿಮಾತು ಕವಿತೆಯಲ್ಲಿ ಮೂಡಿದೆ. ಮುಂದುವರೆದು, ಸಂಜೆಯ ದಾರಿಗೆ, ಕಾಲು ದಾರಿಗೆ, ಮರುಭೂಮಿ ದಾರಿಯಾದರೂ ಸರಿ ನೀ ನನ್ನ ಜೊತೆ ಬೇಕು; ಎಂದು ಒಂಟಿತನದ ನೋವನ್ನು ಹೇಳುವ ಸಾಲುಗಳು ಹೃದಯವನ್ನು ಹಿಂಡಿಬಿಡುತ್ತವೆ. ಈ ಸಂಕಲನದ ಹೆಚ್ಚು ಕಾಡುವ ಕವಿತೆಯಲ್ಲಿ ಇದೂ ಕೂಡ ಒಂದು.

‘ನೀನೆಂದರೆ’ ಕವಿತೆ ಒಂದು ಗಟ್ಟಿ ಕಾವ್ಯ. ಕವಯಿತ್ರಿಯವರ ಕಲ್ಪನಾ ಲೋಕ, ಓದುಗನ ಅರ್ಥೈಸುವಿಕೆಗೆ ಮೀರಿದ್ದು ಎನಿಸುತ್ತದೆ. ಮತ್ತೆ ಮತ್ತೆ ಓದಿಸಿಕೊಂಡ ಕವಿತೆ ಅವಲೋಕನೆಕ್ಕೆ ಹೀಗೆ ದಕ್ಕಿದೆ.
‘ಚಂದಿರನ ಜೊತೆಗೆ ಅಪರಿಮಿತ
ಚುಕ್ಕಿಗಳಿದ್ದರೂ
ಚುಂಬಕ ಶಕ್ತಿ ನೀನು’
… ಸಾವಿರಾರು ನಕ್ಷತ್ರ, ಗ್ರಹಗಳ ರಾಶಿ ನಡುವೆ ಸೂರ್ಯನೇ ಆಕರ್ಷಿತ, ಶಕ್ತಿಶಾಲಿ ಹೇಗೋ! ಹಾಗೆ ಸಾವಿರಾರು ಜನರ ನಡುವೆ, ನೀ ನನ್ನ ಚುಂಬಕ ಶಕ್ತಿ. ಭ್ರಮರವಾಗಿ ಬಂದು ಸೇರುವೆ. ನಿನ್ನ ಬಂಧಿಯಾಗುವೆ… ಎಂದು ಕಾವ್ಯದಲ್ಲಿ ಪ್ರೇಮದ ಗಟ್ಟಿತನವನ್ನು ಸುರಿಸಿದ್ದಾರೆ. ಕೊನೆಯಲ್ಲಿ..
‘ನೀನೆಂದರೆ ಭರವಸೆಯ ಬದುಕು
ಮತ್ತೆ ಮತ್ತೆ ಬದುಕಲು’ …ಎಂಬ ಭಾವದೃಷ್ಟಿ, ಅವನು ಸಿಕ್ಕ ಭರವಸೆ ಅನಿಸುತ್ತದೆ. ಜಗತ್ತಿಗೆ ಸೂರ್ಯನ ಭರವಸೆ; ನನಗೆ ನಿನ್ನದು ಎನ್ನುತ್ತಾರೆ. ಈ ಕವಿತೆಯಲ್ಲಿ ಬಳಸಿದ ರೂಪಕಗಳು ಓದುಗನಿಗೆ ವ್ಹಾ.. ! ಅನ್ನಿಸದೇ ಇರವು. ಪ್ರೀತಿ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ವ್ಯಾವಹಾರಿಕ ಮತ್ತು ಕೃತಕವಾಗಿಬಿಟ್ಟಿದೆ. ಸಹನೆ, ಶಾಂತಿಗಳೂ ಕೂಡ ಇಲ್ಲದೆ ಎಲ್ಲೆಡೆ ಕುಕೃತ್ಯಗಳು ಜರುಗುತ್ತಲೇ ಇರುತ್ತವೆ. ಇಂತಹ ಘಟನೆಗಳನ್ನು ಕಂಡ ಕವಯಿತ್ರಿ ಜಹಾನ್ ಅವರು ಯಾರಿಗೆ ಮೊರೆ ಹೋಗಬೇಕೆಂದು ಸರಿಯಾಗಿ ಅರಿತುಕೊಂಡು ‘ಡಿಯರ್ ಬುದ್ಧ’ನಿಗೆ ಪ್ರಾರ್ಥಿಸುತ್ತಾರೆ.
ನಿನ್ನ ಬಳಿ ಮಾತನಾಡಬೇಕಿದೆ ಸ್ವಲ್ಪ ಸಮಯಕೊಡು ಎಂದು ಆತ್ಮೀಯವಾಗಿಯೇ ಯಾಚಿಸುತ್ತಾರೆ.

‘ಸದಾ ಶಾಂತಿ ಬಯಸುವ
ನಿನ್ನ ನಗುವಿನ ಮಂತ್ರ
ಬಿಡುವಿನಲ್ಲಿ ನಂಗೂ ಹೇಳಿಕೊಡು’

‘ಸಾಸಿವೆಯಷ್ಟು ಪ್ರೀತಿ ಇಲ್ಲಪ್ಪ
ಈ ಜನರಲ್ಲಿ ಏನ್ಮಾಡ್ತೀಯಾ
ಆಸೆಗಳ ಹಿಂದೆ ಓಡಿ ಓಡಿ
ದುಃಖದ ಮರದಡಿಯಲ್ಲಿ
ಉಸ್.. ಎಂದು ಕುಂತು ಬಿಟ್ಟಿದ್ದಾರೆ’ … ಎಂದು ಆಸೆಗಳ ಹಿಂದೆ ಓಡುವ ಜನರ ಕುರಿತಾಗಿ ವ್ಯಂಗ್ಯನಾತ್ಮಕವಾಗಿ ನುಡಿದು, ಮರೀಚಿಕೆಯಾದ ಪ್ರೀತಿ, ಶಾಂತಿಯನ್ನು ಮರು ಹುಟ್ಟಿಸಲು ಫ್ರೀ ಇದ್ರೆ ನೀನು ಉಪದೇಶ ಮಾಡು, ನಿನ್ನ ಬಿಡುವಿನಲ್ಲಿ ನಂಗಿಷ್ಟು ಸಮಯ ಕೊಟ್ಟು ನಿನ್ನ ಹಿತವಚನಗಳನ್ನು ಕೇಳಲು ಅವಕಾಶ ಕೊಡು ಎಂದು ಬುದ್ಧನನ್ನು ಅಂಗಲಾಚುವ ಕಾವ್ಯದ ಸಧೃಡ ದನಿ ವಿಶೇಷವೆನಿಸುತ್ತದೆ. ಮುಂದೇ ಇದೇ‌ ಬುದ್ಧನನ್ನು ‘ಹೇಳು ಒಮ್ಮೆ’ ಕವಿತೆಯಲ್ಲಿ ಕಟುವಾಗಿ ಪ್ರಶ್ನಿಸುತ್ತಾರೆ.

‘ಸಿದ್ಧನಾದೆ ಬುದ್ಧನಾದೆ ಆದರೂ ಒಬ್ಬಂಟಿಗನಾದೆ,
ಏಕೆ‌ ಯೋಚಿಸಲಿಲ್ಲ ಆ ತಂದೆಯ ಬಗ್ಗೆ
ಏಕೆ ತಡೆಯಲಿಲ್ಲ ನಿನ್ನ ಸತಿಯ ಪ್ರೇಮದ ಬುಗ್ಗೆ
ನೆನಪಾಗಲಿಲ್ಲವೇ ಆ ಪುಟ್ಟ ಕಂದನ ಮುಗ್ಧ ನಗು’

‘ಕಂಡ ಸತ್ಯಗಳ‌ ಹಿಂದೆ ಓಡಿ ಮಾಡಿದಾದರೂ ಏನು?
ಕಣ್ಣ ಮುಂದಿನ ಸತ್ಯ ತಿಳಿಯದೆ ಏಕೆ ಬಿಟ್ಟು ಹೋದೆ?
ಇದು ನ್ಯಾಯವೇ?
ಎಷ್ಟುದೂರ ನಿನ್ನ ನಡಿಗೆ? … ಎಂದು ಪರಿತ್ಯಕ್ತನಾದ ಗೌತಮನಿಗೆ ರಾಜನಾಗಿದ್ದರೆ, ಆರ್ಯಪ್ರಜಾ ತಂದೆ ನೀನಾಗುತ್ತಿದ್ದೆ, ಸಾರ್ಥಕವಾಗುತ್ತಿತ್ತು ನಿನ್ನವರ ಮತ್ತು ನಿನ್ನ ಪ್ರಜೆಗಳ ಬದುಕು ಎಂದು ವಿಧವಿಧವಾಗಿ ಪ್ರಶ್ನಿಸಿ, ಪರಿತ್ಯಕ್ತರಾಗಬೇಕಾದವರ ಮನಸಿಗೆ ಸತ್ಯ ದರ್ಶನ ಮಾಡಿಸುತ್ತಾರೆ.. ಅನೇಕ ಮಧುರಾನುಭವದ ಅಮಲಲ್ಲಿ ತೇಲಿಸುವ ಕವಿತೆಗಳಲ್ಲಿ ‘ನೀ ಕಂಡ್ರ ಸಾಕು’; ಮನಸಲ್ಲಿ ಉಳಿಯುವ ಕವಿತೆ. ಮನಸಿನ ಉತ್ಕಟ, ಉತ್ಕೃಷ್ಟ ಪ್ರೇಮಕ್ಕೆ ಅಕ್ಷರ ರೂಪ ಕೊಟ್ಟಂತಿದೆ. ಆಂಗ್ಲ ಭಾಷಾ ಮಿಶ್ರಿತ ಕವಿತೆ ಆಹ್ವಾದಕರವಾಗಿದ್ದು ಲಯ ಕಂಡುಕೊಂಡಿದೆ.

ಕವಯಿತ್ರಿಯಲ್ಲಿ ಒಂದು ಸೂಕ್ಷ್ಮವಾಗಿ ಅವಲೋಕಿಸುವ ಮನಸ್ಥಿತಿ ಇದೆ. ಅಂತೆಯೇ ನಡೆದ ಘಟನಾವಳಿಗಳ ಮೇಲೆ ತಮ್ಮ ವಿಭಿನ್ನ ಆಲೋಚನಾ ಸಾಮರ್ಥ್ಯದಿಂದ ವಸ್ತುಸ್ಥಿತಿಯನ್ನು ಅನುಭಾವಿಸುವ ಮನೋಸಾಮರ್ಥ್ಯವೂ ಇದೆ ಎಂಬುದು, ಅವರ ಕವಿತೆಗಳ ಮೂಲಕ ಓದುಗನಿಗೆ ತಿಳಿಯುತ್ತದೆ. ‘ಅವಳ ನೆನಪುಗಳ ವ್ಯಾಕರಣ’, ‘ಕಳಚಿತು ಮುಖವಾಡ’, ‘ವೃಕ್ಷಾನುಸಂಧಾನ’ ಕವಿತೆಯ ಭಾವಪೂರ್ಣ ಸಾಲುಗಳು ಈ ನಿಟ್ಟಿನಲ್ಲಿ ಸಾಕ್ಷಿಯಾಗುತ್ತವೆ.

ಬರವಣಿಗಯ ಹಾದಿಯಲ್ಲಿರುವ ವ್ಯಕ್ತಿ ಒಬ್ಬ ಸಾಹಿತಿಯ ಪರಿಪೂರ್ಣ ಮನಸ್ಥಿತಿಯನ್ನು ಅರಿಯಬೇಕಾದರೆ ಅವನ ಸಾಹಿತ್ಯ ಓದಲೇಬೇಕು. ನಿಜವಾದ ಸಾಹಿತಿಯಾದವರ ಕಾವ್ಯಗಳಲ್ಲಿ ಯಾವುದೇ ಮಡಿವಂತಿಕೆ, ಸಂಪ್ರದಾಯದ ಚೌಕಟ್ಟು ಇರುವುದಿಲ್ಲ. ಅಂತಹ ಚೌಕಟ್ಟನ್ನು ಮೀರಿ ಕವಯಿತ್ರಿಯವರು ‘ದೀಪಾವಳಿ’, ‘ಬನ್ನಿ’, ‘ಶ್ರಾವಣ ಸಿಂಚನ’ ಎಂಬ ಹಿಂದೂ ಸಂಪ್ರದಾಯದ ಹಬ್ಬಗಳ ಕುರಿತಾಗಿ ಬರೆಯುತ್ತಾರೆ. ಈ ಕಾರಣದಿಂದಾಗಿ ಕವಯಿತ್ರಿಯವರು ಓದುಗನಿಗೆ ವಿಶೇಷವಿನಿಸುತ್ತಾರೆ. ಅಷ್ಟೇ ಅಲ್ಲದೆ ವೈಚಾರಿಕ ಪ್ರಜ್ಞೆಯಿಂದಲೂ ಕವನದ ಶೀರ್ಷಿಕೆಗೆ ಮೆರುಗು ನೀಡುತ್ತಾರೆ. ದೀಪಾವಳಿಯೆಂದರೆ ದೀಪಗಳನ್ನು ಬೆಳಗುವುದು ಸಾಂಕೇತಿಕ, ಆದರೆ ಹಚ್ಚುವ
‘ಅಷ್ಟ ದೀಪಗಳು
ಅಷ್ಟ ಗುಣಗಳಾಗಿ ಬೆಳಗಿ
ದುಷ್ಟ ಕಪ್ಪು ಇಂದು
ಉನ್ಮೂಲನವಾಗಬೇಕಿದೆ’‌ … ಎಂಬುದಾಗಿ ಮನದ ಕಪ್ಪುತನ, ಅಂದರೆ ದುಷ್ಟತನ, ಬೆಳಕಿನಲ್ಲಿ ದಹಿಸಿ ಗುಣಗಳು ಬೆಳಗಬೇಕು ಎನ್ನುತ್ತಾರೆ. ಮುಂದುವರೆದು,
‘ನನ್ನೊಳಗಿನ ದಿಪಿಕೆ
ದೀಪ ಮಾಲೆ ಹಚ್ಚಿದೆ
ಬಾಳ‌ ಪಥದಿ ದೀಪಾವಳಿ ಬಂದಿದೆ’
ವಾವ್… ನಿಜ ಅಂತರಂಗದಲ್ಲಿನ ಬೆಳಗೇ ನಿಜವಾದ ಬೆಳಕನ್ನು ಚೆಲ್ಲುವ ದೀಪಮಾಲೆ. ಅದೇ ನಿಜವಾದ ದೀಪಾವಳಿ ಎಂಬ ಕವಿ ಹೃದಯದ ಭಾವ ಬದುಕಿನ ಸಾರ್ಥಕತೆಯನ್ನು ಸನ್ನಡತೆಯಲಿ ಪಡೆಯಬೇಕೆಂದು ತಿಳಿಸುತ್ತದೆ.

ಹಾಗೆ ‘ಬನ್ನಿ’, ‘ಶ್ರಾವಣ ಸಿಂಚನ’ ಕವಿತೆಗಳಲ್ಲಿ ಹಬ್ಬಗಳ ವೈಭವವನ್ನು ಸಾರುತ್ತ, ಅದರ ಜೊತೆಯಲ್ಲಿ..
‘ನಲ್ಲನ ನೆನಪಿನಿಂದಲಿ
ಕಿರುನಗೆ ಸೂಸುತ ಕೇಲಿಕೆ ತಾನಾಗಿ
ಸೊಬಗಿಗೂ ಸಂಭ್ರಮದ
ತೋರಣವೀ ಶ್ರಾವಣ’ … ಎಂದು, ಶ್ರಾವಣ ಬದುಕಿಗೆ ಬರಬೇಕು, ಬದಲಾವಣೆ‌ ಮನಸಲ್ಲಾಗಬೇಕು.

ನಲ್ಲಗೆ ನಲ್ಲೆಯ ನೆನಪಿನಿಂದ, ನಲ್ಲೆಗೆ ನಲ್ಲನ ನೆನಪಿನಿಂದ ನಗು ಬಂದರೆ, ಅದುವೇ ಸಂಸಾರಕೆ ಶ್ರಾವಣ. ಸಂಭ್ರಮದ ತೋರಣ ಎಂದು ಶ್ರಾವಣವನ್ನು ಬದುಕಿಗೆ ಹೋಲಿಸಿ ಸೊಗಸಾಗಿ ಅರ್ಥೈಸುತ್ತಾರೆ. ಉದಯೋನ್ಮುಖ, ಭರವಸೆಯ ಕವಯಿತ್ರಿ, ಜಹಾನ್ ಆರಾ ಎಚ್. ಅವರು ಜನರಲ್ಲಿರುವ ಅಜ್ಞಾನವನ್ನು ವಿರೋಧಿಸಿ, ‘ಉಧೋ ಯಲ್ಲಮ್ಮ’ ಕವಿತೆ ಬರೆಯುತ್ತಾರೆ.

ತಾಯೆ ನೀನು ನಿನ್ನ ಗುಡಿ ಇಲ್ಲದಿದ್ದರೆ, ನಾನು ನಗರಕ್ಕೆ ಸೇರಿ
‘ರಸ್ತೆ ಬದಿಯಲ್ಲಿ ಚಪ್ಪಾಳೆ ತಟ್ಟುತ್ತಾ
ಕುಹಕದ ನೋಟ ಮಾದಕದ ನಗೆಗಳ ಜೊತೆ
ಅನೈತಿಕತೆಯ ಮಟ್ಟ ತಲುಪಿರುತ್ತಿದ್ದೆ’ … ಪುಣ್ಯ ನನ್ನವ್ವ ನಿನ್ನ ಗುಡಿ ಇದೆ, ಬಾಳ ದೀಪ ಬೆಳಗಿದೆ, ಕಣ್ಣೀರ ಮರೆಸಿದೆ, ಕಾಮಿಗಳ ಹಾಸಿಗೆಯ ದಾಸಿಯಾಗಿಸದೆ ಜೋಗತಿ ಹೆಸರಲ್ಲಿ ನಿನ್ನ ಭಕ್ತರಿಗೆ ಭಕ್ತಿ ಹಂಚುವ ಸೌಭಾಗ್ಯವತಿಯಾಗಿಹೆ ಎಂದು, ಮಂಗಳಮುಖಿಯರ ಕುರಿತಾಗಿ ಮನಮುಟ್ಟುವ ಕವಿತೆ ಕೊಟ್ಟಿದ್ದಾರೆ. ಜನರು ತಮ್ಮ ಸ್ವಾರ್ಥಕ್ಕೆ ದ್ವಿಲಿಂಗಿಗಳನ್ನು ವ್ಯಭಿಚಾರಕ್ಕೆ ತಳ್ಳುತ್ತಿದ್ದಾರೆಂಬುದನ್ನೂ ಖಂಡಿಸಿ, ಯಲ್ಲಮ್ಮಳ ದಯೆಯಿಂದ ಜೋಗತಿ ಪಟ್ಟ ತುಸು ಮಾನಸಿಕ ನೆಮ್ಮದಿಗೆ‌ ಕಾರಣವಾಗಿದೆ‌ ಎನ್ನುತ್ತಾರೆ.

ಹೀಗೆ ಅಜ್ಜಿತಲೆ, ಮೌನವಾದೆಯಾ ಮಹಾತ್ಮ, ವರಕವಿ, ನನ್ನೊಳಗಿನ ಹೆಣ್ಣು, ಮೆಹಂದಿ ಮೊಹಬ್ಬತ್, ಅವನಪಾಡು, ಕಳಚಿತಾ ಮುಖವಾಡ ವಿಶೇಷ ಮತ್ತು ವಿಭಿನ್ನ ದೃಷ್ಟಿಕೋನದ ಕವಿತೆಗಳು ಸಾಮಾಜಿಕವಾಗಿಯೂ ಎಚ್ಚರಗೊಳಿಸುತ್ತವೆ. ಪ್ರೇಮದ ಕುರಿತಾದ ಕವಿತೆಗಳು ಓದುಗನ ಮನಸಲ್ಲಿ ಉಳಿಯುತ್ತವೆ. ಅಲ್ಲದೆ ಕೆಲವು ಕವಿತೆಗಳು ದೀರ್ಘ ಎನಿಸುತ್ತವೆಯಾದರೂ ಒಂದು ಘಟನಾವಳಿಯ ಸ್ವರೂಪವನ್ನು ಬಿಚ್ಚಿಡುವಲ್ಲಿ ಗೆದ್ದಂತೆ ತೋರುತ್ತವೆ.

ಒಟ್ಟಿನಲ್ಲಿ ‘ಹಂಗಿಲ್ಲದ ಹಾದಿ’ಯ‌ ಓದಿನ ಪಯಣ, ಕೆಲವು ಅನಿವ್ಯಾರ್ಯವಾಗಿ ಸಿಕ್ಕಿಬಿದ್ದ ಹಂಗಿನ ಹಾದಿಯಿಂದ ಹೊರ ಬರುವ ಮನಸ್ಥತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ. ಅಂತೆಯೇ ಕವಯಿತ್ರಿಯವರು ಯಾವ ಹಂಗಿಲ್ಲದೇ ಕಾವ್ಯ ಕಟ್ಟುವಿಕೆಯಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾರೆ ಎಂಬ ಸ್ಪಷ್ಟತೆ ಸಿಗುತ್ತದೆ. ಹೀಗೆಯೇ ಮತ್ತಷ್ಟು ಉತ್ತಮ ಮುಲಾಜಿಲ್ಲದ, ಸಮಾಜಕ್ಕೆ ಮುಲಾಮಾಗುವ ಕವಿತೆಗಳು, ಸಂಕಲನದ ರೂಪದಲ್ಲಿ ಓದುಗರ ಕೈ ಸೇರಲಿ. ಕವಯಿತ್ರಿಯವರ‌ ಸಾಹಿತ್ಯದ ಹಾದಿ ಸುಗಮವಾಗಿರಲಿ, ಕನ್ನಡ ನಾಡಿನ ಭರವಸೆಯ ಕವಯಿತ್ರಿಯ ಸಾಹಿತ್ಯದ ಜೋಳಿಗೆ ಪ್ರಬುದ್ಧ ಕಾವ್ಯಗಳಿಂದ ಭರ್ತಿಯಾಗಲಿ ಎಂಬ ಆಶಯದೊಂದಿಗೆ ನನ್ನ ಅನಿಸಿಕೆಗೆ ವಿರಾಮ‌ ನೀಡುತ್ತೇನೆ.

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: