ಶ್ರೀಲಂಕಾ ದಾಳಿ ನಾಗರಿಕ ಜಗತ್ತನ್ನು ಮತ್ತೊಮ್ಮೆ ಎಚ್ಚರಿಸಿದೆ..

ನಾ ದಿವಾಕರ

ಶ್ರೀಲಂಕಾದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ನಾಗರಿಕ ಜಗತ್ತನ್ನು ಮತ್ತೊಮ್ಮೆ ಎಚ್ಚರಿಸಿದೆ. ಈಸ್ಟರ್ ಭಾನುವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಅಮಾಯಕರು ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. 350ಕ್ಕೂ ಹೆಚ್ಚು ಜೀವಗಳು ಇಲ್ಲವಾಗಿವೆ.

ಭಾರತದ ಪುಲ್ವಾಮಾದಲ್ಲಿ 50ಕ್ಕೂ ಹೆಚ್ಚು ಯೋಧರು ಬಲಿಯಾಗಿ ಎರಡು ತಿಂಗಳೂ ಕಳೆದಿಲ್ಲ. ಆಗಲೇ ಮತ್ತೊಂದು ಮಾರಣ ಹೋಮ. ಏಕೆ ಹೀಗಾಗುತ್ತಿದೆ.  ನಮ್ಮ ದೇಶ, ನಮ್ಮ ಅಸ್ತಿತ್ವ , ನಮ್ಮ ಘನತೆ ಮತ್ತು ನಮ್ಮ ಸುತ್ತಲಿನ ಗಡಿರೇಖೆಗಳು ಇವೆಲ್ಲವೂ ಅಬ್ಬರದ ಮಾತುಗಳ ನಡುವೆ ಕಳೆದುಹೋಗುತ್ತಿವೆ. ಆದರೆ ಈ ಗಡಿಗಳನ್ನು ದಾಟಿ ಎಲ್ಲೆಡೆ ವ್ಯಾಪಿಸುತ್ತಿರುವ ಹಿಂಸೆಯ ಒಂದು ಅಯಾಮ ಭಯೋತ್ಪಾದನೆಯ ರೂಪದಲ್ಲಿ ಮನುಕುಲವನ್ನು ಕಾಡುತ್ತಿದೆ.

ಯಾವುದೇ ಭಯೋತ್ಪಾದಕ ದಾಳಿ ನಡೆದರೂ ಕೂಡಲೇ ಎರಡು ಸಂಗತಿಗಳು ಮುನ್ನೆಲೆಗೆ ಬರುತ್ತವೆ. ದಾಳಿ ನಡೆಸಿದ ಸಂಘಟನೆಯ ಅಸ್ಮಿತೆ ಮತ್ತು ದಾಳಿಗೆ ತುತ್ತಾದ ಅಮಾಯಕ ಜನರ ಅಸ್ಮಿತೆ. ಮುಸ್ಲಿಂ ಸಂಘಟನೆಯಿಂದ ದಾಳಿ, ಹಿಂದೂ, ಕ್ರೈಸ್ತ ಅಥವಾ ಸಿಖ್ಖರ ಮಾರಣಹೋಮ. ಅಥವಾ ಕ್ರೈಸ್ತ-ಬೌದ್ಧ ಸಂಘಟನೆಯಿಂದ ದಾಳಿ- ಮುಸ್ಲಿಮರ ಮಾರಣ ಹೋಮ. ಕೆಲವೊಮ್ಮೆ ಮುಸ್ಲಿಂ ಸಂಘಟನೆಯಿಂದ ದಾಳಿ ಮುಸ್ಲಿಮರ ಮಾರಣ ಹೋಮ.

ಇಲ್ಲಿ ದಾಳಿ ನಡೆಸುವ ಮನಸುಗಳು ಮತ್ತು ದಾಳಿಗೆ ತುತ್ತಾಗುವ ಹೃದಯಗಳು ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿಬಿಡುತ್ತವೆ. ಹಾಗಾಗಿಯೇ ಇಂತಹ ದಾಳಿಗಳು ರಾಜಕೀಯ ಪಗಡೆಯ ದಾಳದಂತೆಯೂ ನೆರವಾಗುತ್ತವೆ. ಪುಲ್ವಾಮ, ಗೋದ್ರಾ ಇದೀಗ ಶ್ರೀಲಂಕಾ. ಜಾಗತಿಕ ಭಯೋತ್ಪಾದನೆಯ ಇತಿಹಾಸವನ್ನು ಕೆದಕಿದಾಗ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. ಮೊದಲನೆಯದು ಗತಕಾಲದಿಂದಲೂ ಮತಧರ್ಮಗಳು ಸೃಷ್ಟಿಸಿರುವ ಗೋಡೆಗಳು ಮತ್ತು ನಿರ್ಮಿಸಿರುವ ಬೇಲಿಗಳು.

ಎರಡನೆಯದು ಈ ಗೋಡೆಗಳನ್ನು ಹಾರಿ, ಬೇಲಿಗಳನ್ನು ದಾಟಿ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಸೃಷ್ಟಿಸಿರುವ ಕಂದಕಗಳು ಮತ್ತು ಅಪಾಯಕಾರಿ ಕೂಪಗಳು. ಯಾವ ಮತಧರ್ಮವೂ ತನ್ನ ಮೂಲ ನೆಲೆಯಲ್ಲಿ ಭಯೋತ್ಪಾದನೆಯಂತಹ ಜೀವನಾಶಕ ಚಿಂತನೆಯನ್ನು ಬೋಧಿಸುವುದಿಲ್ಲ. ಆದರೆ ವಾಸ್ತವ ಜಗತ್ತಿನಲ್ಲಿ ಯಾವ ಮತಧರ್ಮವೂ ಹಿಂಸೆ, ಅಸಹಿಷ್ಣುತೆ, ದ್ವೇಷ ಮತ್ತು ಅನ್ಯ ಭಾವದಿಂದ ಹೊರತಾಗಿಲ್ಲ.

ಮತಧರ್ಮಗಳ ಶ್ರೇಷ್ಠತೆಯ ಪರಿಕಲ್ಪನೆ ಗೋಡೆಗಳನ್ನು ನಿರ್ಮಿಸುವ ಇಟ್ಟಿಗೆಗಳಂತೆ ಕಾರ್ಯ ನಿರ್ವಹಿಸುತ್ತವೆ. ಈ ಶ್ರೇಷ್ಠತೆಯ ಪ್ರತಿಪಾದನೆಯ ಪ್ರಕ್ರಿಯೆ ಬೇಲಿಗಳನ್ನು ಸೃಷ್ಟಿಸುತ್ತದೆ. ತಾವಿರುವುದಷ್ಟೇ ಲೋಕ ಎಂಬ ಭಾವನೆ ಬೇಲಿಯಿಂದಾಚೆಗೆ ಕಂದಕಗಳನ್ನು ರೂಪಿಸುತ್ತದೆ.

ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವೇ ಇಲ್ಲ ಎಂದು ಭಾರತದ ಪ್ರಧಾನಮಂತ್ರಿಗಳು ಒಂದೆಡೆ ಹೇಳುತ್ತಾರೆ. ಇಸ್ಲಾಂ ಶಾಂತಿಯನ್ನು ಬೋಧಿಸುವ ಧರ್ಮ ಇಲ್ಲಿ ಹಿಂಸೆಗೆ ಅವಕಾಶವೇ ಇಲ್ಲ ಎಂದು ವಿಶ್ವದ ಅತಿ ಎತ್ತರದ ಮುಸ್ಲಿಂ ಧಾರ್ಮಿಕ ಮುಖಂಡರು ಹೇಳುತ್ತಾರೆ. ಕ್ರೈಸ್ತ ಧರ್ಮದ ಸ್ಥಾಪನೆಯಾಗಿರುವುದೇ ವಿಶ್ವ ಶಾಂತಿಗಾಗಿ ಹಾಗಾಗಿ ಕ್ರೈಸ್ತರಲ್ಲಿ ಯಾವುದೇ ಹಿಂಸಾತ್ಮಕ ಚಿಂತನೆಗೆ ಅವಕಾಶವಿಲ್ಲ ಎಂದು ವ್ಯಾಟಿಕನ್ ಹೇಳುತ್ತದೆ. ಬುದ್ಧ ಶಾಂತಿ ಪ್ರಿಯ ಬೌದ್ಧರು ಯಾವುದೇ ಕಾರಣಕ್ಕೂ ಹಿಂಸಾತ್ಮಕ ಮಾರ್ಗ ಅನುಸರಿಸುವುದಿಲ್ಲ ಎಂದು ಬೌದ್ಧ ಗುರುಗಳು ಹೇಳುತ್ತಾರೆ.

ಆದರೂ ಕ್ರೈಸ್ಟ್ ಚರ್ಚ್, ಶ್ರೀಲಂಕಾ, ಮ್ಯಾನ್ಮಾರ್, ರೋಹಿಂಗ್ಯಾ, ಮಲೆಗಾಂವ್, ಸಂಜೋತ, ಅಜ್ಮೇರ್, ಪೇಷಾವರ, ಪುಲ್ವಾಮ, ಮುಂಬಯಿ, ಗೋದ್ರಾ, ಗುಜರಾತ್ ಸಂಭವಿಸುತ್ತಲೇ ಇದೆ. ಸಿರಿಯಾ, ಲೆಬನಾನ್, ಯೆಮನ್, ಇರಾಕ್, ಆಫ್ಘಾನಿಸ್ತಾನ, ರವಾಂಡ ಸಂಭವಿಸುತ್ತಲೇ ಇರುತ್ತವೆ. ಇಲ್ಲಿ ಭಯೋತ್ಪಾದಕರು ಯಾರು ? ಮತಧರ್ಮ ಯಾವುದು ? ಸತ್ತವರಾರು ? ಹಂತಕರು ಯಾರು ? ಈ ಪ್ರಶ್ನೆಗಳಿಗೆ ಯಾವುದೇ ಧರ್ಮ ಗ್ರಂಥದಲ್ಲೂ ಉತ್ತರ ದೊರೆಯುವುದಿಲ್ಲ. ಸಮಕಾಲೀನ ಇತಿಹಾಸದಲ್ಲಿ ದೊರೆಯುತ್ತದೆ. ಏಕೆಂದರೆ ಭಯೋತ್ಪಾದನೆಯ ಹಿಂದೆ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಮತ್ತು ಆರ್ಥಿಕ ಹಿತಾಸಕ್ತಿಯೂ ಇದೆ ಅಲ್ಲವೇ ?

ಹಿಂಸೆಗೆ ಮತಧರ್ಮ ಎನ್ನುವುದಿಲ್ಲ ಜಾತಿಯೂ ಇಲ್ಲ ವರ್ಣವೂ ಇಲ್ಲ. ಆದರೆ ಜಾತಿಯಲ್ಲಿ, ವರ್ಣದಲ್ಲಿ, ಮತಧರ್ಮದಲ್ಲಿ ಹಿಂಸೆ ಇದೆ ಅಲ್ಲವೇ ? ಇಲ್ಲ ಎಂದು ಹೇಳುವ ಗ್ರಾಂಥಿಕ ಹೇಳಿಕೆಗಳು, ಉಲ್ಲೇಖಗಳು ಹೇರಳವಾಗಿವೆ. ಆದರೆ ಇದೆ ಎಂದು ಹೇಳುವ ಅಕ್ಷರಗಳು ಇತಿಹಾಸದ ಪುಟಗಳಲ್ಲಿ ರಕ್ತದಲ್ಲಿ ಬರೆಯಲ್ಪಟ್ಟಿವೆ. ಈ ಕೆಂಪು ಅಕ್ಷರಗಳನ್ನು ಓದುವ ವ್ಯವಧಾನ ಮತ್ತು ವಿವೇಕ ನಮ್ಮಲ್ಲಿ ಇಲ್ಲವಾಗಿದೆ.

ಸಮಸ್ಯೆ ಇರುವುದು ನಮ್ಮ ಗ್ರಹಿಕೆಯಲ್ಲಿ ಮತ್ತು ನಮ್ಮ ಗ್ರಹಿಕೆಯನ್ನು ರೂಪಿಸುವ ಶಕ್ತಿಗಳಲ್ಲಿ. ನಾವು ಯಾವುದನ್ನು ಭಯೋತ್ಪಾದನೆ ಎಂದು ಗ್ರಹಿಸುತ್ತಿದ್ದೇವೆಯೋ ಅದು ಜಾಗತಿಕ ರಾಜಕಾರಣ ಮತ್ತು ಸಮಾಜೋ ಸಾಂಸ್ಕೃತಿಕ ವ್ಯವಸ್ಥೆಯ ಸಂಚಿನ ಒಂದು ಭಾಗ ಎನ್ನುವುದನ್ನು ಮೊದಲು ಮನನ ಮಾಡಿಕೊಳ್ಳಬೇಕಿದೆ. ನಂತರ ನಾವು ಬಳಸುತ್ತಿರುವ ಭಯೋತ್ಪಾದನೆ ಎನ್ನುವ ಪದದ ಅರ್ಥ ಹಾಗೂ ವ್ಯಾಪ್ತಿಯನ್ನು ಹಿಗ್ಗಿಸಬೇಕು ಎನ್ನುವುದನ್ನೂ ಮನನ ಮಾಡಿಕೊಳ್ಳಬೇಕಿದೆ. ಏಕೆಂದರೆ ಇಂದು ನಾವು ಬಳಸುತ್ತಿರುವ ಭಯೋತ್ಪಾದನೆ ಎನ್ನುವ ಪದದ ಮೂಲ ಇರುವುದು ಪ್ರಭುತ್ವದ ಗ್ರಹಿಕೆಯಲ್ಲಿ. ತನ್ನ ವಿರುದ್ಧ ಬಂಡಾಯ ಹೂಡುವ ಅಥವಾ ದಂಗೆ ಏಳುವ ಯಾವುದೇ ಹಿಂಸಾತ್ಮಕ ಅಭಿವ್ಯಕ್ತಿಯನ್ನು ಭಯೋತ್ಪಾದನೆ ಎಂದೇ ಪ್ರಭುತ್ವ ಭಾವಿಸುತ್ತದೆ. ಸಮಕಾಲೀನ ಸಂದರ್ಭದಲ್ಲಿ ನೋಡಿದಾಗ ಕ್ರಾಂತಿಕಾರಿ ಸಶಸ್ತ್ರ ಹೋರಾಟಗಳನ್ನೂ ಸಹ ಪ್ರಭುತ್ವಗಳು ಭಯೋತ್ಪಾದನೆಯೊಡನೆ ಸಮೀಕರಿಸುವುದನ್ನು ಗಮನಿಸಬಹುದು.

ಈ ಬೌದ್ಧಿಕ ನೆಲೆಯಲ್ಲಿಯೇ ಪ್ರಭುತ್ವ ಶಾಂತಿ, ಸೌಹಾರ್ದತೆ, ಭ್ರಾತೃತ್ವವನ್ನು ಬಯಸುವ ಮತ್ತು ಸಮ ಸಮಾಜಕ್ಕಾಗಿ ಹೋರಾಡುವ ಪ್ರತಿರೋಧದ ದನಿಗಳನ್ನೂ ಭಯೋತ್ಪಾದನೆಯೊಡನೆ ಸಮೀಕರಿಸುವುದನ್ನು ಭಾರತದ ಸಂದರ್ಭದಲ್ಲೇ ಕಾಣುತ್ತಿದ್ದೇವೆ. ನಿರ್ದಿಷ್ಟ ಮತಧರ್ಮಗಳ ಸಾಂಸ್ಕೃತಿಕ ಅಧಿಪತ್ಯಕ್ಕಾಗಿ ಜನಸಮುದಾಯಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವ ಸಮಾಜೋ ಸಾಂಸ್ಕೃತಿಕ ಸಂಘಟನೆಗಳು ರಾಜಕೀಯ ಹಿತಾಸಕ್ತಿಗಳೊಡನೆ ಒಂದಾದಾಗ ಭಯೋತ್ಪಾದನೆ ಇನ್ನೂ ಸಂಕುಚಿತ ಸ್ವರೂಪ ಪಡೆದುಕೊಳ್ಳುತ್ತದೆ. ಆದರೆ ಭಯೋತ್ಪಾದನೆಯ ವ್ಯಾಪ್ತಿ ಮತ್ತು ಹರವು ಹೆಚ್ಚಾಗುತ್ತದೆ. ಅನ್ಯರನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಅನ್ಯರ ಪ್ರತಿಯೊಂದು ಪ್ರತಿರೋಧದ ದನಿಯೂ ಭಯೋತ್ಪಾದನೆಯ ಸಂಕೇತವಾಗಿ ಕಂಡುಬರುತ್ತದೆ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಸಂಘಪರಿವಾರದ ಅಧಿಕಾರ ರಾಜಕಾರಣದಲ್ಲಿ ಇದನ್ನು ನೇರವಾಗಿಯೇ ಕಾಣುತ್ತಿದ್ದೇವೆ.

ಆದರೆ ಪ್ರಭುತ್ವದ ಗ್ರಹೀತವೇ ಸಾರ್ವತ್ರಿಕವಾಗಬೇಕೆಂದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಭಯೋತ್ಪಾದನೆಯ ಮರುವ್ಯಾಖ್ಯಾನ ಅಗತ್ಯವಾಗಿದೆ. ಮಲೆಗಾಂವ್ ಬಾಂಬ್ ಸ್ಪೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಥಾಕುರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವುದೂ ಅಷ್ಟೇ ಅಗತ್ಯ ಎನಿಸುತ್ತದೆ.  ಹಿಂದೂಗಳು ಎಂದೂ ಭಯೋತ್ಪಾದಕರಾಗುವುದಿಲ್ಲ, ಇದು ನಾಗರಿಕತೆಯ ಪ್ರಶ್ನೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಸಾಧ್ವಿ ಪ್ರಜ್ಞಾ ಅವರ ಉಮೇದುವಾರಿಕೆಯನ್ನು ಸಾಂಕೇತಿಕ ಎಂದು ಬಣ್ಣಿಸುವುದೇ ಅಲ್ಲದೆ ಭಯೋತ್ಪಾದನೆಯನ್ನೂ ಸಹ ಜಾತಿ ವ್ಯವಸ್ಥೆಯ ಚೌಕಟ್ಟಿಗೆ ಅಳವಡಿಸುವುದನ್ನು ಗಮನಿಸಬೇಕು.

ಹಿಂದೂ ಪರಂಪರೆಯಲ್ಲಿ ಭಯೋತ್ಪಾದನೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಭಯೋತ್ಪಾದನೆಗೂ ರಕ್ತ, ಜನ್ಮ ಮತ್ತು ವಂಶವಾಹಿನಿಯನ್ನು ತಾಳೆ ಹಾಕುವ ವಿಕೃತ ವೈದಿಕ ಜಾತಿ ಪ್ರಜ್ಞೆಯನ್ನು ಪ್ರಧಾನಿ ಮೋದಿ ಹೊರಹಾಕಿದ್ದಾರೆ. “ಅವನು ಭಯೋತ್ಪಾದಕ ಏಕೆಂದರೆ ಅವನು ಮುಸ್ಲಿಂ” ಎಂದು ಕನ್ನಡದ ಲೇಖಕರೊಬ್ಬರು ಹೇಳಿದ್ದುದು ಇಲ್ಲಿ ನೆನಪಾಗುತ್ತದೆ.  ಸಾಧ್ವಿ ಪ್ರಜ್ಞಾ ಸಿಂಗ್ ಅವರ ಉಮೇದುವಾರಿಕೆ ಸಾಂಕೇತಿಕ ಎನ್ನುವುದೇ ಆದರೆ ಯಾವುದರ ಸಂಕೇತ ? ಭಯೋತ್ಪಾದನೆಯ ಆರೋಪ ಹೊತ್ತವರೂ ಸಂಸದರಾಗಬಹುದು ಎನ್ನುವುದರ ಸಂಕೇತವೋ ಅಥವಾ ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವೇ ಇಲ್ಲ ಎನ್ನುವುದರ ಸಂಕೇತವೋ ?

ಈ ಹಿನ್ನೆಲೆಯಲ್ಲೇ ಭಯೋತ್ಪಾದನೆಯ ಮರುವ್ಯಾಖ್ಯಾನ ಅಗತ್ಯ ಎನಿಸುತ್ತದೆ.  2014ರ ನಂತರ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆದೇ ಇಲ್ಲ ಅಥವಾ ಕಡಿಮೆಯಾಗಿದೆ ಎನ್ನಲಾಗುತ್ತದೆ. ಪುಲ್ವಾಮಾ ಒತ್ತಟ್ಟಿಗಿರಲಿ, ಅದು ಪ್ರಭುತ್ವ ದೃಷ್ಟಿಯ ಭಯೋತ್ಪಾದನೆ. ಈ ದೃಷ್ಟಿಕೋನವನ್ನು ಬದಿಗಿಟ್ಟು ನೋಡಿದಾಗ, ದಾದ್ರಿಯಲ್ಲಿ ಅಕ್ಲಾಖ್‍ನ ಕೊಲೆ, ಊನ ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ, ಪೆಹ್ಲು ಖಾನ್ ಹತ್ಯೆ, ಧಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಮುಂತಾದ ಚಿಂತಕರ ಹತ್ಯೆ ಮತ್ತು  ಗೋರಕ್ಷಣೆಯ ಹೆಸರಿನಲ್ಲಿ ದಿನನಿತ್ಯ ನಡೆಯುತ್ತಲೇ ಇರುವ ಹತ್ಯೆಗಳು, ಜಾತಿ ದೌರ್ಜನ್ಯದ ನೆಲೆಯಲ್ಲಿ ಸಂಭವಿಸುತ್ತಿರುವ ಸಾವುಗಳು ಇವೆಲ್ಲವನ್ನೂ ಏನೆಂದು ವ್ಯಾಖ್ಯಾನಿಸಲು  ಸಾಧ್ಯ ? ಪ್ರಭುತ್ವದ ದೃಷ್ಟಿಯಲ್ಲಿ ಮತ್ತು  ಪ್ರಭುತ್ವ ರೂಪಿಸುವ ಕಾನೂನುಗಳ ದೃಷ್ಟಿಯಲ್ಲಿ ಇವೆಲ್ಲವೂ ಸಮಾಜಘಾತುಕ ಕೃತ್ಯ ಅಥವಾ ಪಾತಕಿ ಕೃತ್ಯಗಳಾಗಿಬಿಡುತ್ತವೆ. ಆದರೆ ಈ ಕೃತ್ಯಗಳಿಗೂ ಪುಲ್ವಾಮಾದಲ್ಲಿ ಬಾಂಬ್ ಸ್ಫೋಟಿಸುವ ಕೃತ್ಯಕ್ಕೂ ಇರುವ ವ್ಯತ್ಯಾಸವಾದರೂ ಏನು ? ಗೋದ್ರಾ ದುರಂತಕ್ಕೂ ಗೋದ್ರಾ ನಂತರದ ನರಮೇಧಕ್ಕೂ ಇರುವ ವ್ಯತ್ಯಾಸವೇನು ?

ಇಲ್ಲಿ ಮಸೂರಗಳು ಹೆಚ್ಚು ಪ್ರಸ್ತುತ ಎನಿಸುತ್ತದೆ. ಪ್ರಭುತ್ವ ತನ್ನದೇ ಆದ ಮಸೂರವನ್ನು ತೊಟ್ಟು ಗಮನಿಸುತ್ತದೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ಭ್ರಾತೃತ್ವವನ್ನು ಬಯಸುವ ಸಾರ್ವಜನಿಕ ಪ್ರಜ್ಞೆಗೆ ಈ ಮಸೂರದ ಅವಶ್ಯಕತೆ ಇಲ್ಲ. ಕಳೆದ ಮೂರು ದಶಕಗಳಲ್ಲಿ ಭಾರತ ಹಿಂಸಾತ್ಮಕ ಧೋರಣೆಗೆ ತವರುಮನೆಯಾಗಿರುವುದು ಸತ್ಯ. ಆದರೆ ಈ ಹಿಂಸಾಕಾಂಡ, ನರಮೇಧ ಮತ್ತು ನರಹತ್ಯೆಗಳನ್ನು ನಾವು ಭಿನ್ನ ಭಿನ್ನವಾದ ಮಸೂರಗಳನ್ನು ತೊಟ್ಟು ನೋಡುತ್ತಿದ್ದೇವೆ. ಕೆಲವು ಭಯೋತ್ಪಾದನೆ ಎನಿಸುತ್ತದೆ, ಕೆಲವು ದೇಶಪ್ರೇಮದ ಸಂಕೇತ ಎನಿಸುತ್ತದೆ, ಕೆಲವು ದುಷ್ಟ ಶಕ್ತಿಗಳ ಸಂಹಾರ ಎನಿಸುತ್ತದೆ, ಇನ್ನು ಕೆಲವು ಅನಿವಾರ್ಯ ಎನಿಸಿಬಿಡುತ್ತದೆ.

ಈ ಅನಿವಾರ್ಯತೆಯ ಹೊಸ ವ್ಯಾಖ್ಯಾನವೇ ಭಾರತದ ಚಿಂತನಶೀಲ ಮನಸುಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಭಾರತದ ಸುರಕ್ಷತೆಗೆ, ಸುಭದ್ರ ಭಾರತದ ನಿರ್ಮಾಣಕ್ಕೆ, ನವ ಭಾರತದ ಮುನ್ನಡೆಗೆ ಕೆಲವು ಸಾವುಗಳು ಅನಿವಾರ್ಯವಾಗಿರುವುದನ್ನು ಕಳೆದ ಐದು ವರ್ಷಗಳಲ್ಲಿ ಕಂಡಿದ್ದೇವೆ. ಹಾಗಾಗಿಯೇ ಸಾಧ್ವಿ ಪ್ರಜ್ಞಾ ಸಿಂಗ್ ಭಯೋತ್ಪಾದಕಿಯಂತೆ ಕಾಣುವುದಿಲ್ಲ. ಸಾಂಕೇತಿಕ ಶಕ್ತಿಯಾಗಿ ಕಾಣುತ್ತಾರೆ.

ಈ ಮಸೂರವನ್ನು ಒಂದು ಇಡೀ ಪೀಳಿಗೆಯೇ ತೊಟ್ಟಿರುವುದು ನಮ್ಮ ಮುಂದಿರುವ ಸವಾಲೂ ಹೌದು ಸಮಸ್ಯೆಯೂ ಹೌದು. ಈಗ ಹೇಳಿ ಭಯೋತ್ಪಾದನೆ ಎಂದರೇನು ?

‍ಲೇಖಕರು Avadhi Admin

April 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: