ಅವಳಲ್ಲ.. ‘ಅವನು’

5

ಏಪ್ರಿಲ್ 23 ಷೇಕ್ಸ್ ಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನ.

ಈ ಸಂದರ್ಭದಲ್ಲಿ ‘ಅವಧಿ’ಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಪ್ರಕಟಿಸುತ್ತಿದ್ದೇವೆ…..

ಉದಯ್ ಇಟಗಿ

ನಿನ್ನೆಯ ಸಂಚಿಕೆಯಿಂದ…

ಅದರಲ್ಲಿ ಅವ ಏನೇನೋ ಹೇಳಿದ್ದ. ಆದರೆ ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು… ತಪ್ಪಾಗಿದ್ದರೆ ಕ್ಷಮಿಸಿ.. ಏಕೆಂದರೆ ನನಗೆ ಕಾವ್ಯದ ಬಗ್ಗೆ ಏನೂ ತಿಳಿಯದು. ಹೂಂ.. ಅವ ಹೇಳಿದ್ದ: ಬೇಸಿಗೆಯ ಹಗಲಿನ ಸೌಂದರ್ಯ ಕೂಡ ಕ್ಷಣಿಕವಾದುದು.. ಏಕೆಂದರೆ ಬೇಸಿಗೆಯ ಸೂರ್ಯ ಕಣ್ಣುಮುಚ್ಚಾಲೆಯಾಡುತ್ತ ಒಮ್ಮೊಮ್ಮೆ ಹೆಚ್ಚು ಹೊಳೆಯುತ್ತಾನೆ.. ಒಮ್ಮೊಮ್ಮೆ ಮಂಕಾಗಾಗುತ್ತಾನೆ… ಒಮ್ಮೊಮ್ಮೆ ತನ್ನ ಹೊಂಬಣ್ಣ ಕಳೆದುಕೊಂಡು ಕಳೆಗುಂದುತ್ತಾನೆ.. ಅವನಲ್ಲಿ ಏರುಪೇರು ಇರುತ್ತೆ. ಆದರೆ ನಿನ್ನ ಸೌಂದರ್ಯ ಹಾಗಲ್ಲ… ಅದಕ್ಕಿಂತ ಹೆಚ್ಚಿನದು… ಸದಾ ಒಂದೇ ತೆರನಾಗಿರುವಂಥದ್ದು… ಶಾಶ್ವತವಾಗಿರುವಂಥದ್ದು… ನಶ್ವರದ ವಸ್ತುಗಳಿಗೆ ನಿನ್ನ ಹೋಲಿಸುವದು ಬೇಡ.. ಹಾಗೆಂದೇ ನಿನ್ನನ್ನು ಹಾಗೂ ನಿನ್ನ ಸೌಂದರ್ಯವನ್ನು ಈ ಕವನದಲ್ಲಿ ಹಿಡಿದಿಡುತ್ತಿದ್ದೇನೆ… ಅದು ನಿನ್ನ ಸೌಂದರ್ಯದಂತೆ ಈ ಕವನವೂ ಕೂಡ ಈ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ…

ಅಬ್ಬಾ ಏನು ವರ್ಣನೆ? ಏನು ಆ ಪದಗಳ ಜೋಡಣೆ? ಅಬ್ಬಬ್ಬಾ ಹೇಳಲಿಕ್ಕಾಗದು. ಯಾವತ್ತೂ ಯಾವ ಕವನಗಳನ್ನೂ ಓದದ ನನ್ನಂಥವಳಿಗೂ ಕೂಡ ಆ ಸಾನೆಟ್ ಇಷ್ಟವಾಯಿತೆನ್ನಿ. ಅದೇನೋ ಹೇಳ್ತಾರಲ್ಲ..ಕಚಗುಳಿ..ಚಗುಳಿ… ಹಾಂ, ಅದೇ.. ಕಚಗುಳಿ ಇಟ್ಟ ಅನುಭವವಾಯಿತು ನನಗೆ ಅದನ್ನು ಓದಿದ ಮೇಲೆ. ಒಂದು ಕ್ಷಣ ನನ್ನ ಗಂಡನ ಬಗ್ಗೆ ಅಭಿಮಾನ ಮೂಡಿತು. ಆದರೆ ಮರುಕ್ಷಣ ಅನುಮಾನ ಕಾಡಿತು. ಇದು… ಇದು ನಿಜಕ್ಕೂ ನನ್ನ ಕುರಿತು ಬರೆದಿದ್ದೆ? ಇಲ್ಲ… ಇಲ್ಲ ಇರಲಿಕ್ಕಿಲ್ಲ… ಏಕೆಂದರೆ ನಾನು ಅವ ಹೇಳುವಷ್ಟು ಸುಂದರವಾಗಿಲ್ಲ.. ಮೇಲಾಗಿ ನಾನು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ಡವಳು……

ಅಲ್ಲದೇ ಆ ವಿಷಯ ಅವನನ್ನು ಬಾಧಿಸುತ್ತಲೇ ಇತ್ತು. ಅವನ ಕಣ್ಣಿಗೆ ಹೇಗೆ ತಾನೆ ರೂಪವತಿಯಾಗಿ ಕಂಡೇನು? ಹಾಗಾದರೆ ಇನ್ಯಾರು? ಅಂದರೆ..ಅಂದರೆ ಅವನ ಜೀವನದಲ್ಲಿ ಮತ್ತೊಂದು ಹೆಣ್ಣಿನ ಪ್ರವೇಶವಾಗಿದಿಯೆ? ಅವನದನ್ನು ನನಗೆ ಗೊತ್ತಿಲ್ಲದಂತೆ ನಿಭಾಯಿಸುತ್ತಿದ್ದಾನೆಯೇ? ಏನಾದರಾಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದುಕೊಂಡು ಕೆಲಸ ಮುಗಿಸಿ ಅವನಿರುವಲ್ಲಿಗೆ ಬಂದೆ. ಕವಿ ಇನ್ನೂ ಅದೇ ಸಾನೆಟ್ ನ್ನು ಗುನುಗುನಿಸುತ್ತಲೇ ಇದ್ದ.

ಅರೆ ಕ್ಷಣ ತಡೆದು “ಹೇಳು…ಆವತ್ತು ಲಂಡನ್ ಸೇತುವೆಯ ಮೇಲೆ ‘ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?’ ಎಂದು ನನ್ನ ಕೇಳಿದೆಯೆಲ್ಲ, ಅದೆ ತಾನೆ ಈ ಸಾನೆಟ್? ಆದರೆ ಇದರಲ್ಲಿರುವ ಆ ‘ಬೇಸಿಗೆಯ ಹಗಲು’ ನಾನಲ್ಲ ಅಂತಾ ನನಗೆ ಚೆನ್ನಾಗಿ  ಗೊತ್ತು.  ಅದು ಇನ್ಯಾವಳನ್ನೋ ಕುರಿತು ಬರೆದಿದ್ದು. ಹೇಳು ಯಾರವಳು?” ಎಂದು ನೇರವಾಗಿ ಕೇಳಿದೆ.

ಕವಿ ಕೆಮ್ಮತೊಡಗಿದ. ಗಾಳಿಯಲ್ಲಿ ತನ್ನೆರಡೂ ಕೈ ಬೀಸುತ್ತಾ ಏನೋ ಹೇಳಲು ಹೊರಟ. ಉಸಿರೇ ಹೊರಡುತ್ತಿಲ್ಲ. ಮುಖವೆಲ್ಲ ಕೆಂಪಾಯಿತು. ಕೊನೆಗೂ ಸಾವರಿಸಿಕೊಂಡು ನಾಚುತ್ತಾ ಉಸುರಿದ “ಅದು…ಅದು…‘ಅವಳ’ಲ್ಲ. ‘ಅವನು’ ”

“ಅವನು…? ಅಂದರೆ…?” ನನಗೆ ನಂಬಲಾಗಲಿಲ್ಲ.

“ಅಂದರೆ ಅವನು ನನ್ನ ಗೆಳೆಯ. ಬರಿ ಗೆಳೆಯನಲ್ಲ. ಜೀವದ ಗೆಳೆಯ!”

“ಮತ್ತೆ ಇದು ಹುಡುಗಿ ಮೇಲೆ ಬರೆದಿರೊ ತರ ಇದೆ”

“ಹಾಗೆ ಅನ್ಕೊ… ಆದರೆ ನಾನದನ್ನು ಬರೆದಿದ್ದು ಅವನ ಮೇಲೆಯೇ, ಅವನು ಈ ವರ್ಣನೆ ಕೇಳಿ ಈ ಕೋಟು ಕೊಟ್ಟ” ಎಂದು ಉಬ್ಬಿದ.

“ಹಾಗಾದರೆ ಅದು ಒಳ್ಳೆ ಸಾನೆಟ್”

“ಯಾಕೆ?” ಕೇಳಿದ ಮಿ ಷೇಕ್ಸ್ ಪಿಯರ್

“ಯಾಕೆಂದರೆ ಇದು ಒಳ್ಳೇ ಕೋಟು!”

ಚಣ ಬಿಟ್ಟು ಕೇಳಿದೆ: “ಹಾಗಾದರೆ ನಿನ್ನ ಬೀರುವಿನಲ್ಲಿ ಇರುವ ಡ್ರೆಸ್ಸುಗಳೆಲ್ಲ ಸಾನೆಟ್ಟಿನಿಂದಲೇ ಬಂದವೆ?”

ಮಿಸ್ಟರ್ ಸ್ಮೈಲ್ ನಾಚಿ ಕೆಂಪಾಗಿ ನಿಂತ. ಮಹಾನ್ ನಾಚಿಕೆಗಾರ! ಆ ನಾಚಿಕೆಯಲ್ಲಿ ಮುಗ್ಧತೆಯಿತ್ತೋ, ತಪ್ಪು ಮಾಡಿ ಸಿಕ್ಕಿಕೊಂಡವನ ಭಯವಿತ್ತೋ! ಕಡೆಗೂ ತಡೆತಡೆದು ಹೇಳಿದ, “ಸಾನೆಟ್ ಬರೆದಿದ್ದು ಬರೀ ಬಟ್ಟೆಗೋಸ್ಕರ ಅಲ್ಲ, ಆದರೆ ಸಾನೆಟ್ ಬರೆದಾಗೆಲ್ಲ ಒಂದೊಂದು ಕೋಟು ಸಿಕ್ಕಿದ್ದು ನಿಜ!”

“ಓ! ಹಾಗಾದರೆ ನಿನಗೆ ಇಷ್ಟೆಲ್ಲ ದುಡ್ಡು ಕೊಡುವ ಆ ನಿನ್ನ ‘ಅವನು’, ನಿನ್ನ ಸಾಕೋ ಆ ಪೇಟ್ರನ್ನು ಶ್ರೀಮಂತನಿರಬೇಕು” ಅಂದೆ.

“ಪೇಟ್ರನ್ ಅನ್ನಬೇಡ, ನನ್ನ ಹೆನ್ರಿ, ನನ್ನ ಹೆನ್ರಿ ರಿಜ್ಲಿ, ಸೌತಾಂಪ್ಟನ್” ಎಂದ.

“ಓಹ್! ಹೆನ್ರಿ ನಿನ್ನ ಆಶ್ರಯದಾತ!”

“ಪ್ಲೀಸ್, ಯ್ಯಾನಿ, ಅವನು ಬರೀ ಆಶ್ರಯದಾತ ಅಲ್ಲ”

“ಹಾಂ, ಅವನು ಬೇಸಿಗೆಯ ಹಗಲಿನ ಥರ!” ಎಂದು ತಿವಿದೆ.

“ಅಷ್ಟು ಮಾತ್ರವಲ್ಲ ಇಳೆಯ ಹೊಸ ಆಭರಣ ಅವನು, ಅವನ ಅಂದ ಸಿರಿ ವಸಂತದ ಸನ್ನೆ. ನಾ ಅವನೊಳಿರುವಂತೆ, ಅವನು ನನ್ನೊಳಗೆ” ಎಂದೇನೋ ಕಾವ್ಯಮಯವಾಗಿ ಹೇಳಿದ.

ಹೀಗಿರುವಾಗ ಒಂದು ದಿನ ಮಿ. ಷೇಕ್ಸ್ ಪಿಯರ್ ನನ್ನ ಕಣ್ಣಿಗೆ ಪಟ್ಟಿ ಕಟ್ಟಿ “ಬಾ ತಮಾಷೆ ತೋರಿಸುತ್ತೇನೆ” ಎಂದು ಮನೆಯ ಮಹಡಿಗೆ ಕರಕೊಂಡು ಹೋದ. “ಕಣ್ಣು ಬಿಡು” ಅಂದ. ಕಣ್ಣುಬಿಟ್ಟರೆ ಅಲ್ಲೊಂದು ದೊಡ್ಡ ಹಾಸಿಗೆ. “ಇದೇ ನಮ್ಮ ಪ್ಲೇಹೌಸ್” ಅಂದ, ನನ್ನ ಹುಚ್ಚುಕವಿ.

ನಾನೆಂದೂ ಪ್ಲೇಹೌಸಿಗೆ ಹೋದವಳಲ್ಲ. “ಇಲ್ಲೇನು ಮಾಡುವದು?” ಅಂದರೆ, “ಆಡುವದು” ಅಂದ.

“ಆಮೇಲೇನಾಯಿತು ಗೊತ್ತ?” ಅವನು “ಓ ಮೈ ಲವ್, ಓ ಮೈ ಲೈಫ್” ಅಂದ. ನಾನೂ “ಓ ಮೈ ಲೈಫ್, ಓ ಮೈ ಲವ್” ಅಂದೆ.

ಇಲ್ಲಿಂದ ಮುಂದೆ ನಡೆದದ್ದನ್ನೆಲ್ಲ ಇದ್ದದ್ದು ಇದ್ದಂತೆ ಹೇಳಿಬಿಡುವೆ. Let me die if I lie.

ಅವತ್ತು ಹಾಸಿಗೆಯ ಮೇಲೆ ಒಂದು ಸಣ್ಣ ಆಟ ಆದಮೇಲೆ ಕೇಳಿದೆ, “ಈ ಹಾಸಿಗೆಗೆ ಎಷ್ಟು ಸಾನೆಟ್ಸ್ ಆಯ್ತು?”

“ಸಾನೆಟ್ಸ್? ನೋ, ನೋ, ಎರಡೇ ಎರಡು ಪದ್ಯಕ್ಕೆ ಈ ಹಾಸಿಗೆ ಸಿಕ್ತು” ಅಂದ ಹೆಮ್ಮೆಯಿಂದ.

“ಅಬ್ಬ! ಹಾಗಾದರೆ ಉದ್ದನೆ ಪದ್ಯಗಳೇ ಇರಬೇಕು!”

ಸರ್ ಸ್ಮೈಲ್ ಎದ್ದ. “ಇರು, ತೋರಿಸ್ತೇನೆ” ಎಂದು ಎರಡು ದಪ್ಪ ರಟ್ಟಿನ ಪುಸ್ತಕ ತಂದ. ಒಂದರ ಮೇಲೆ “Venus and Adonis” ಅಂತ ಬರೆದಿತ್ತು. ಇನ್ನೊಂದರ ಮೇಲೆ “The Rape of Lucrece” ಅಂತ ಇತ್ತು. “ಲೂಕ್ರಿಸ್ ನ ರೇಪ್ ಮಾಡಿದೋರು ಯಾರು? ಗಂಡಸೋ ಹೆಂಗಸೋ?” ಅಂದೆ. “Sextus Tarquinis” ಅಂದ. “ಸೆಕ್ಸ್ಟಸ್! ಹೆಸರೇ ಬೊಂಬಾಟಾಗಿದೆ.” ಅಂದೆ. ಮಿ. ಷೇಕ್ಸ್ ಪಿಯರ್ ಮುಖ ಊದಿಸಿಕೊಂಡು “ಆ ಸೆಕ್ಸ್ಟಸ್ ಒಬ್ಬ ವಿಲನ್” ಅಂದ “ಆದರೇನಂತೆ! ಆ ಹೆಸರಿನ ಸೌಂಡೇ ಎಷ್ಟು ಲವ್ಲಿಯಾಗಿದೆ!” ಅಂದೆ.

“ಅದಿರಲಿ, ಆ ಇನ್ನೊಂದು ಪದ್ಯದಲ್ಲಿ ರೇಪ್ ಮಾಡೋರು ಯಾರು? ವೀನಸ್ ನ ಆಡೋನಿಸ್ ರೇಪ್ ಮಾಡ್ತಾನೋ ಅಥವಾ ಆಡೋನಿಸ್ ನ ವೀನಸ್?” ಎಂದೆ. ತಲೆ ಚಚ್ಚಿಕೊಳ್ಳುತ್ತಾ ಷೇಕ್ಸ್ ಪಿಯರ್ ಅವನ ಪದ್ಯಗಳ ಕತೆಯೆಲ್ಲ ಹೇಳಿದ. “ಇವೇನು ಪದ್ಯಗಳೋ! ಇದರ ತುಂಬಾ ಲಂಪಟರು, ರೇಪ್ ಮಾಡೋದು, ರೇಪ್ ಮಾಡೋಕೆ ಟ್ರೈ ಮಾಡೋದು, ಓಡಿಹೋಗೋದು…..ಇಷ್ಟೇ” ಅಂದೆ.

ಸುಮ್ಮನೆ ಥಣ್ಣಗೆ ಹಾಸಿಗೆಯ ಮೇಲೊರಗಿ “ಹೆನ್ರಿ ರಿಜ್ಲಿ” ಅಂದೆ. “ಎಸ್?” ಎಂದ ಷೇಕ್ಸ್ ಪಿಯರ್.

“ಆ ಎರಡು ಪದ್ಯಕ್ಕೆ ಹೆನ್ರಿ ನಿನಗೆ ಇಷ್ಟು ದೊಡ್ಡ ಹಾಸಿಗೆ ಕೊಟ್ಟನೆ?”

“ಇಲ್ಲ, ಇಲ್ಲ. ಅವನು ದುಡ್ಡು ಕೊಟ್ಟ. ನಾನು ಹಾಸಿಗೆ ಕೊಂಡೆ!” ಎಂದ ಮಳ್ಳನ ಹಾಗೆ.

ಯಾಕೋ ಏನೋ, ಇದ್ದಕ್ಕಿದ್ದಂತೆ ನನ್ನ ಮೂಗು ಹಾಸಿಗೆಯೆನ್ನೆಲ್ಲ ಮೂಸತೊಡಗಿತು! “ಈ ಹಾಸಿಗೇಲಿ……ಈ ಹಾಸಿಗೇಲಿ ‘ಅವನು’ ಮಲಗಿದ್ದನ?” ಅಂತ ಪಿಸುಗುಟ್ಟಿದೆ. ಮಿ. ಷೇಕ್ಸ್ ಪಿಯರ್ ಸುಮ್ಮನಿದ್ದ. ಹಾಗೆ ಸುಮ್ಮನಿದ್ದರೆ “ಹೂಂ” ಎಂದನೆಂದೇ ಅರ್ಥ! “ಓ ಜೀಸಸ್” ಅನ್ನುತ್ತಾ, ಮೆಲ್ಲಗೆ “ಅದಕ್ಕೆ…..ಎಷ್ಟು ಕೊಟ್ಟ?” ಅಂದೆ. “ಒಂದು ಸಾವಿರ ಪೌಂಡ್” – ಕೊನೆಗೂ ಷೇಕ್ಸ್ ಪಿಯರ್ ಬಾಯಿಬಿಟ್ಟ.

/ಉಳಿದದ್ದು ನಾಳೆಗೆ/

‍ಲೇಖಕರು Avadhi Admin

April 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: