Good Morning ಬಷೀರ್

ಕಥೆಗಾರ ಬಿ ಎಂ ಬಷೀರ್ ಪ್ರತೀ ದಿನ ಆಸಕ್ತರಿಗೆ ಬೆಳ್ಳಂಬೆಳಗ್ಗೆ ಒಂದು ಪುಟ್ಟ ಕಥೆಯನ್ನು ವಾಟ್ಸ್ ಆಪ್ ಮೂಲಕ ಕಳಿಸುತ್ತಿದ್ದಾರೆ.

ಆ ಪುಟ್ಟ ಕಥೆಗಳಲ್ಲಿ ಆಯ್ದ ಕೆಲವು ಇಲ್ಲಿದೆ-

ದಾರಿ

ದೊಡ್ಡ ನಗರವೊಂದರಲ್ಲಿ ಸಂತ ಮತ್ತು ಶಿಷ್ಯರು ದಾರಿ ತಪ್ಪಿದರು. ತಮ್ಮ ಆಶ್ರಮದ ದಾರಿ ಹುಡುಕುತ್ತ ಗಲ್ಲಿ ಗಲ್ಲಿ ಅಲೆದರು. ಕೊನೆಗೆ ಒಂದು ಕಟ್ಟಡದ ಕೆಳಗೆ ಸುಸ್ತಾಗಿ ಬಿದ್ದುಕೊಂಡರು.

ಶಿಷ್ಯ ಕೇಳಿದ “ಗುರುಗಳೇ ಯಾರಲ್ಲಾದರೂ ದಾರಿ ಕೇಳೋಣವೆ?”

ಸಂತ ತಿಳಿ ಹೇಳಿದ “ನಮ್ಮ ಆಶ್ರಮದ ದಾರಿಯನ್ನು ಇನ್ನೊಬ್ಬರಲ್ಲಿ ಕೇಳುವುದು ನಾಚಿಕೆಗೇಡು. ಮೊದಲು ನಮ್ಮನ್ನು ದಾರಿ ತಪ್ಪಿಸಿದ ನಗರದ ಮೋಹದಿಂದ ಬಿಡಿಸಿ ಕೊಳ್ಳೋಣ. ದಾರಿ ತನ್ನಷ್ಟಕ್ಕೆ ತೆರೆದು ಕೊಳ್ಳುತ್ತದೆ”

ಹಸಿವು

ರಮಝಾನ್ ಹತ್ತಿರವಾಗಿದೆ
ನನಗೋ ಭಯವಾಗುತ್ತಿದೆ
ನನ್ನ ಉಪವಾಸ
ಬಡವರ ಹಸಿವಿನ
ಅಣಕವಾಗದಿರಲಿ ದೊರೆಯೇ!

ಉಡುಗೊರೆ

ಬುರ್ಖಾವನ್ನು ಕಂಡರಿಯದ ಪಳ್ಳಿಮ್ಮಾದ
ತಲೆವಸ್ತ್ರ ಕಟ್ಟಿ
ಕೈಯಲ್ಲಿ ಕುಡುಗೋಲು ಹಿಡಿದು
ಕಾಡು,ಗದ್ದೆಯಲ್ಲಿ ದುಡಿದು
ಬೆಳೆಸಿದ ಮಗ
ತುಂಬಾ ಓದಿ, ಕೊಲ್ಲಿ ರಾಷ್ಟ್ರಕ್ಕೆ ಹೋಗಿ
ಮರಳಿ ಬರುವಾಗ ವೃದ್ಧ ತಾಯಿಗೆ
ಉಡುಗೊರೆಯಾಗಿ
ದುಬಾರಿ ಬುರ್ಖಾವೊಂದನ್ನು ತಂದ!

ಉಂಗುರ

ನಾನು ಬರೆಯುತ್ತೇನೆ
ನೀವು ಒಪ್ಪಬೇಕು ಎಂದಲ್ಲ
ನಾನು ಬರೆಯುತ್ತೇನೆ
ನೀವು ತಿರಸ್ಕರಿಸಬೇಕೆಂದೂ ಅಲ್ಲ…
ಶಾಂತ ಸಾಗರದಂತೆ ನಿದ್ರಿಸುವ
ನಿಮ್ಮ ಎದೆಗಡಲಲ್ಲಿ
ನಾನು ಬೀಳಿಸುವ ಸಣ್ಣದೊಂದು ಉಂಗುರ
ಮುಂದೊಂದು ದಿನ
ಮೀನ ಗರ್ಭ ಹರಿದು
ಶಕುಂತಳೆಯ ಕತೆಯಾಗಿ
ಹೊರ ಬರಬಹುದೆನ್ನುವ
ಸಣ್ಣ ಆಸೆಯಷ್ಟೇ ನನ್ನದು

ಹುಂಜದ ಜಂಬ

ಹುಂಜವೊಂದು ಜಂಬದಿಂದ ಆ ಓಣಿಯಲ್ಲಿ ಸಾಗುತ್ತಿತ್ತು. ಸಂತನೂ ಅದೇ ದಾರಿಯಲ್ಲಿ ಮುಂದೆ ನಡೆಯುತ್ತಿದ್ದನು. ಕೋಳಿಗೆ ಸಂತನ ಕಾವಿ ವಸ್ತ್ರ, ಗಡ್ಡ ಎಲ್ಲ ನೋಡಿ ನಗು ಬಂತು. ಸಂತನನ್ನು ಕೋಳಿ ಅಣಕಿಸತೊಡಗಿತು.
‘ಮಹನೀಯರೇ, ಒಂದು ಒಳ್ಳೆಯ ಬಟ್ಟೆಯನ್ನಾದರೂ ಹಾಕಿಕೊಳ್ಳಬಾರದೆ…?’

ಸಂತ ನಕ್ಕು ಮುಂದೆ ಹೋಗುತ್ತಿದ್ದ.
ಕೋಳಿ ಹಿಂಬಾಲಿಸಿತು ‘ನೋಡಿ, ನನ್ನನ್ನಾದರೂ ನೋಡಿ ಕಲಿಯಬಾರದೆ. ಹೊಳೆಯುವ ಗರಿಗಳಿಂದ ಹೇಗೆ ಕಾಣುತ್ತೇನೆ ನೋಡಿ…’
‘ನನ್ನ ಜುಟ್ಟು ನೋಡಿ. ಕಿರೀಟದ ಹಾಗಿದೆ. ನೀವು ತಲೆಗೊಂದು ಮುಂಡಾಸನ್ನಾದರೂ ಕಟ್ಟಬಾರದಿತ್ತೆ ’

ಸಂತ ಮುಂದೆ ನಡೆಯುತ್ತಲೇ ಇದ್ದ.
‘ನನ್ನ ಕಾಲುಗಳನ್ನು ನೋಡಿ. ಪಾದ ನೋಡಿ. ನಾನು ನಡೆಯುವ ಠೀವಿ ನೋಡಿ. ರಾಜಗಾಂಭೀರ್ಯದಿಂದ ನಡೆಯುತ್ತಿದೇನೆ. ನೀವೇಕೆ ಹಾಗೆ ಠೀವಿಯಿಂದ ನಡೆಯಬಾರದು…’

ಅಷ್ಟರಲ್ಲಿ ಒಂದು ಮನೆ ಕಂಡಿತು. ಸಂತ ಆ ಮನೆಯತ್ತ ನಡೆದ.
ಕೋಳಿಗೆ ಮತ್ತೂ ಜಂಬ ‘ಅದು ನನ್ನ ಯಜಮಾನನ ಮನೆ. ಅಲ್ಲಿಗೆ ಭಿಕ್ಷೆಗೆ ಹೋಗುತ್ತಿದ್ದೀರಾ. ಹೋಗಿ… ಹೋಗಿ…’
ಸಂತನನ್ನು ಕಂಡದ್ದೇ ಮನೆಯ ಯಜಮಾನ ಆದರದಿಂದ ಸ್ವಾಗತಿಸಿದ. ಮಧ್ಯಾಹ್ನದ ಊಟಕ್ಕೆ ಕುಳ್ಳಿರಿಸಿದ. ಮನೆಯಲ್ಲಿ ಸಂತನಿಗೆ ಭೂರಿ ಭೋಜನ.

ಯಜಮಾನ ಅಂಗಳದಲ್ಲಿ ಠೀವಿಯಿಂದ ತಿರುಗಾಡುತ್ತಿದ್ದ ಕೋಳಿಯನ್ನು ಹಿಡಿದು ಕತ್ತರಿಸಿದ.
ಸಂತನಿಗೆ ಊಟದ ಬಟ್ಟಲನ್ನು ತಂದಿಡಲಾಯಿತು. ಮಸಾಲೆಯಿಂದ ಘಮಘಮಿಸುವ ಕೋಳಿಯನ್ನೂ ತಂದಿಡಲಾಯಿತು.

ಸಂತ ಈಗ ನಗುತ್ತಿರಲಿಲ್ಲ. ಅವನ ತುಟಿಯಲ್ಲಿ ವಿಷಾದವಿತ್ತು. ಯಜಮಾನನಲ್ಲಿ ಕೇಳಿದ ‘ಈ ಹುಂಜದ ಜಗಮಗಿಸುವ ಗರಿಗಳಿತ್ತಲ್ಲ, ಅದೇನಾಯಿತು?’
ಯಜಮಾನ ವಿನೀತನಾಗಿ ಹೇಳಿದ ‘ಕಸದ ತೊಟ್ಟಿಗೆ ಎಸೆದೆ ಗುರುಗಳೇ’
‘ಈ ಹುಂಜದ ಕಿರೀಟದಂತಹ ಜುಟ್ಟಿತ್ತಲ್ಲ, ಅದೇನಾಯಿತು?’
ಯಜಮಾನ ನುಡಿದ ‘ಅದನ್ನೂ ಕಸದ ತೊಟ್ಟಿಗೆ ಎಸೆದೆ ಗುರುಗಳೇ’
‘ರಾಜಠೀವಿಯಿದ್ದ ಅದರ ಕಾಲುಗಳು?’
‘ಅದನ್ನೂ ಎಸೆದೆ ಗುರುಗಳೇ’
‘ಇದೀಗ ಈ ಕೋಳಿ ತಿನ್ನಲು ಅರ್ಹವಾಯಿತು’ ಎನ್ನುತ್ತಾ ಸಂತ ಅದರ ತೊಡೆ ಭಾಗವನ್ನು ಬಾಯಲ್ಲಿ ಹಾಕಿ ಕರಗಿಸತೊಡಗಿದ.

‍ಲೇಖಕರು avadhi

April 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: