ಶ್ರೀನಿವಾಸ ಪ್ರಭು ಅಂಕಣ – ವಾಚಿಕಾಭಿನಯಕ್ಕೆ ಇರುವ ಬೆಲೆ ಇಷ್ಟೇನೇ?!…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

69

ದೂರದರ್ಶನ ಕೇಂದ್ರದಲ್ಲಿ ನಾನು ಕೆಲಸಕ್ಕೆ ಸೇರುತ್ತಿದ್ದಂತೆಯೇ ಮದುವೆಗೆ ಸಂಬಂಧಗಳು ಬರತೊಡಗಿದವು. ವಾಸ್ತವವಾಗಿ ಆ ನಿಟ್ಟಿನಲ್ಲಿ ನಾನು ಯೋಚನೆಯನ್ನೇ ಮಾಡಿರಲಿಲ್ಲ. ಆದರೆ ಮನೆಯಲ್ಲಿ ಅಣ್ಣ—ಅಮ್ಮ ನನ್ನ ಮದುವೆಯ ಕುರಿತಾಗಿ ಮಾತಾಡತೊಡಗಿದರು: “ನಿನಗಾಗಲೇ 29 ವರ್ಷ ಆಗಿಹೋಯಿತು..ಈಗಲೇ ತಡ ಅನ್ನುವ ಹಾಗೇ ಆಗಿದೆ..ಒಳ್ಳೆಯ ಸಂಬಂಧ ಬಂದರೆ ಆರೆಂಟು ತಿಂಗಳಲ್ಲಿ ಮದುವೆ ಶಾಸ್ತ್ರ ಮುಗಿಸಿಬಿಡೋಣ”. “ಅಯ್ಯೋ! ಈಗ ಕೆಲ ತಿಂಗಳುಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದೇನೆ! ಮದುವೆ ಅಂದರೇನು ಹುಡುಗಾಟವೇ? ನೀವುಗಳು ಅಪೇಕ್ಷೆ ಪಡುವಂತೆ ಬಂಧು ಮಿತ್ರರನ್ನೆಲ್ಲಾ ಕರೆದು ಛತ್ರದಲ್ಲಿ ಮದುವೆಯಾಗುವುದೆಂದರೆ ಸಾಕಷ್ಟು ಖರ್ಚಿನ ಬಾಬತ್ತು…ಅದನ್ನು ಭರಿಸುವಷ್ಟು ಆರ್ಥಿಕ ಕ್ಷಮತೆಯಾದರೂ ನನಗೆಲ್ಲಿದೆ? ಮದುವೆಗಾಗಿ ಒಂದಿಷ್ಟು ಹಣ ಕೂಡಿಟ್ಟುಕೊಳ್ಳಲು ಸಮಯಾವಕಾಶವಾದರೂ ಬೇಡವೇ? ದಯವಿಟ್ಟು ಈಗಲೇ ಮದುವೆಯಾಗೆಂದು ಒತ್ತಾಯಿಸಬೇಡಿ” ಎಂದು ನಾನೂ ಸಾಕಷ್ಟು ಸಮಜಾಯಿಷಿ ನೀಡಲು ಪ್ರಯತ್ನಿಸಿದೆ.

ವಾಸ್ತವವಾಗಿ ಅದೆಲ್ಲಕ್ಕಿಂತಲೂ ಮುಖ್ಯವಾಗಿ ಮದವೆಗಿನ್ನೂ ನಾನು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ. ಅಣ್ಣ—ಅಮ್ಮನಿಗೋ ನಾನು ಮತ್ತೇನಾದರೂ ಮನಸ್ಸು ಬದಲಾಯಿಸಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ನಾಟಕ—ಸಿನಿಮಾ ಎಂದು ಹೊರಟುಬಿಡುತ್ತೇನೋ ಎಂಬ ಆತಂಕ ಕಾಡುತ್ತಿತ್ತೆಂದು ತೋರುತ್ತದೆ..ಮದುವೆಯಾಗಿಬಿಟ್ಟರೆ ಹೊಣೆ—ಕರ್ತವ್ಯಗಳ ನಿರ್ವಹಣೆಯ ಕಾರಣಕ್ಕಾಗಿಯಾದರೂ ಕೆಲಸ ಬಿಡುವ ಯೋಚನೆ ಮಾಡಲಾರ; ಜೊತೆಗೆ ಮನೆಯ ಕೊನೆಯ ಮದುವೆ.. ಇದೊಂದು ಶುಭಕಾರ್ಯ ನೆರವೇರಿಬಿಟ್ಟರೆ ನಮ್ಮ ಜವಾಬ್ದಾರಿಗಳೂ ತೀರಿದಂತಾಗುತ್ತದೆ ಅನ್ನುವ ರೀತಿಯಲ್ಲಿ ಅವರ ಆಲೋಚನಾ ಲಹರಿ ಸಾಗುತ್ತಿತ್ತು! ಅಕ್ಕಂದಿರು—ಭಾವಂದಿರೂ ಸಹಾ ಅಣ್ಣ—ಅಮ್ಮನಿಗೆ ಬೆಂಬಲವಾಗಿಯೇ ನಿಂತರು. ಕುಮಾರಣ್ಣಯ್ಯನಂತೂ “ಖರ್ಚು ವೆಚ್ಚದ ಬಗ್ಗೆ ನೀನು ತಲೆ ಕೆಡಿಸಿಕೊಳ್ಳಬೇಡ.. ಮದುವೆಗಾಗಿ ನೀನು ಸಾಲ ಸೋಲ ಮಾಡಿಕೊಳ್ಳುವ ಅಗತ್ಯವೂ ಇಲ್ಲ.. ನೀನು ಮದುವೆಯಾಗುವ ಹುಡುಗಿಯನ್ನು ಆರಿಸಿಕೊಳ್ಳುವುದಷ್ಟೇ ನಿನ್ನ ಜವಾಬ್ದಾರಿ. ಮುಂದಿನದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ.. ಜೊತೆಗೆ ಅಕ್ಕ ಭಾವಂದಿರಿದ್ದಾರೆ..ನಿನಗೆ ಯಾವ ಚಿಂತೆಯೂ ಬೇಡ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ.

ಇಂಥ ಎಲ್ಲ ಸಂದರ್ಭಗಳನ್ನು ನೆನೆದಾಗಲೂ ನನ್ನ ಹೃದಯ ತುಂಬಿ ಬರುತ್ತದೆ. ಹಿಂದೆಲ್ಲಾ ಸಂಕಟ—ಒದ್ದಾಟಗಳ ಹೊತ್ತಿನಲ್ಲಿ ‘ನನ್ನದು ತಗಡು ಅದೃಷ್ಟ’ ಎಂದು ನನ್ನನ್ನು ನಾನೇ ತಮಾಷೆ ಮಾಡಿಕೊಂಡಿದ್ದುಂಟು. ಆದರೆ ಹೀಗೆ ಪ್ರೀತಿಯ ಮಳೆಗರೆವ, ‘ಎಂಥ ಹೊತ್ತಿನಲ್ಲೂ ನಾವು ನಿನ್ನೊಂದಿಗಿದ್ದೇವೆ’ ಎಂದು ಭರವಸೆ ತುಂಬುವ ಸೋದರ ಸೋದರಿಯರನ್ನು ಪಡೆದಿರುವ ನನಗಿಂತ ಅದೃಷ್ಟಶಾಲಿಗಳು ಯಾರಾದರೂ ಇರಲು ಸಾಧ್ಯವೇ?

ಒಟ್ಟಿನಲ್ಲಿ ನನ್ನ ಮದುವೆಯ ಕುರಿತಾದ ಮಾತುಕತೆಗಳು ತ್ವರಿತಗತಿಯಲ್ಲೇ ಆರಂಭವಾದವು.

ಒಂದು ಸಂಜೆ ದೂರದರ್ಶನ ಕೇಂದ್ರದಲ್ಲಿ ಕೆಲಸದಲ್ಲಿ ಮಗ್ನನಾಗಿದ್ದ ಹೊತ್ತಿನಲ್ಲೇ ಒಂದು ಫೋನ್ ಕರೆ ಬಂತು. ಕಛೇರಿಯ duty room ಗೆ ಹೋಗಿ ಕರೆಯನ್ನು ಸ್ವೀಕರಿಸಿ ‘ಹಲೋ..ಯಾರು ಮಾತಾಡ್ತಿರೋದು?’ ಎಂದೆ. ಆ ಬದಿಯಿಂದ ಒಬ್ಬ ವ್ಯಕ್ತಿ ಉತ್ತರಿಸಿದರು: “ನಮಸ್ಕಾರ ಪ್ರಭುಗಳೇ..ನಾನು ಬಾಬು ಅಂತ… ಈಶ್ವರಿ ಪ್ರೊಡಕ್ಷನ್ಸ್ ನ ಮ್ಯಾನೇಜರ್.” ಅರೆ! ನಾಡಿನ ಪ್ರಸಿದ್ಧ ಚಿತ್ರ ನಿರ್ಮಾಣ ಸಂಸ್ಥೆ ಈಶ್ವರಿ ಪ್ರೊಡಕ್ಷನ್ಸ್ ನ ಮ್ಯಾನೇಜರ್! ಬಹುಶಃ ಯಾವುದೋ ಪಾತ್ರಕ್ಕೆ ನನ್ನನ್ನು ಆರಿಸಿರಬಹುದು! ಆ ಸಂಬಂಧದ ಮಾತುಕತೆಗಾಗಿ ಫೋನ್ ಮಾಡಿದ್ದಾರೆ ಎಂಬ ಆಲೋಚನೆ ಸುಳಿದು ಒಂದು ಕ್ಷಣ ರೋಮಾಂಚಿತನಾದೆ.ಆದ ಸಂತಸವನ್ನು ಹತ್ತಿಕ್ಕಿಕೊಂಡು, “ಹೇಳಿ ಸರ್” ಎಂದೆ.ಬಾಬು ಮುಂದುವರಿಸಿದರು: “ಸರ್, ಒಂದು ಮುಖ್ಯವಾದ ವಿಷಯ ಮಾತಾಡಬೇಕಿತ್ತು..ನಮ್ಮ ಕಂಪನಿಯಿಂದ ‘ಸಾವಿರ ಸುಳ್ಳು’ ಅಂತ ಒಂದು ಹೊಸ ಚಿತ್ರ ಸಿದ್ಧವಾಗಿದೆ.. ನಮ್ಮ ಯಜಮಾನರಾದ ವೀರಾಸ್ವಾಮಿಗಳ ಮಗ ರವಿಚಂದ್ರನ್ ಅವರೇ ಹೀರೋ. ಅವರಿಗೆ ಕಂಠದಾನ ಮಾಡೋದಕ್ಕೆ ಸಾಧ್ಯವಾ ಅಂತ ಕೇಳೋದಕ್ಕೇ ಫೋನ್ ಮಾಡಿರೋದು..ಸಿ.ಆರ್.ಸಿಂಹ ಅವರು ನಿಮ್ಮ ಹೆಸರನ್ನ ಸೂಚಿಸಿದರು.ಅವರೂ ನಮ್ಮ ಪಿಕ್ಚರ್ ನಲ್ಲಿ ಪಾತ್ರ ಮಾಡಿದಾರೆ..ರವಿಚಂದ್ರನ್ ಸರ್ ಗೆ ಡಬ್ಬಿಂಗ್ ಮಾಡೋದಕ್ಕೆ ನಿಮಗೆ ಆಸಕ್ತಿ ಇದೆಯಾ?”.
ಪಾತ್ರ ನಿರ್ವಹಿಸಲು ಆಹ್ವಾನಿಸುತ್ತಿಲ್ಲವೆಂದು ಖಚಿತವಾದಂತೆ ಉತ್ಸಾಹವೂ ಜರ್ರೆಂದು ಇಳಿದುಹೋಯಿತು.

ಡಬ್ಬಿಂಗ್ ಮಾಡುವುದು ಆ ಕ್ಷಣಕ್ಕೆ ಏಕೋ ಅಷ್ಟು ಆಕರ್ಷಣೀಯ ಕೆಲಸವೆಂದು ಅನ್ನಿಸಲಿಲ್ಲ. ಯಾರಿಗೋ ಕಂಠದಾನ ಮಾಡುವುದೆಂದರೆ ತೆರೆಮರೆಯ ಕೆಲಸ.. ಅದನ್ನು ಗುರುತಿಸುವವರಾದರೂ ಯಾರು? ಮಾಡಿದರೆ ಹಣಕ್ಕಾಗಿ ಮಾಡಬೇಕಷ್ಟೇ.. ಎಂದೆಲ್ಲಾ ಮನಸ್ಸಿನಲ್ಲಿ ಆಲೋಚನೆಗಳು ಹರಿಯತೊಡಗಿದವು. ಮತ್ತೆ ಬಾಬು ಅವರೇ ಮುಂದುವರಿಸಿದರು: “ನೀವೇನೂ ಉತ್ತರ ಕೊಡಲಿಲ್ಲ.. ನಿಮಗೆ ಆಸಕ್ತಿ ಇದ್ದರೆ ಈಗಲೇ ಚಾಮುಂಡೇಶ್ವರಿ ಸ್ಟುಡಿಯೋಗೆ ಬನ್ನಿ.. ನಿಮ್ಮ ಧ್ವನಿ ರವಿ ಸರ್ ಗೆ ಹೊಂದಿಕೆಯಾಗುತ್ತಾ ಅಂತ ಒಮ್ಮೆ ಟೆಸ್ಟ್ ಮಾಡಿ ನೋಡಿ ಸರಿ ಹೊಂದುತ್ತೆ ಅನ್ನೋದಾದರೆ ಕೆಲಸ ಶುರು ಮಾಡಬಹುದು”. “ಆಯ್ತು ಸರ್.. ಇನ್ನು ಹದಿನೈದು ನಿಮಿಷದಲ್ಲಿ ಅಲ್ಲಿರ್ತೀನಿ” ಎಂದು ಹೇಳಿ ಫೋನ್ ಕೆಳಗಿಟ್ಟೆ. ಮರುಕ್ಷಣದಲ್ಲೇ ಸಿ.ಆರ್.ಸಿಂಹ ಅವರಿಂದಲೂ ಫೋನ್ ಬಂತು! “ಪ್ರಭೂ,ನಾನೇ ನಿನ್ನ ಹೆಸರು ಸೂಚಿಸಿದೆ.. ಹಿಂದೆ ಅವರಿಗೆ ಒಂದಿಬ್ಬರು ವಾಯ್ಸ್ ಕೊಟ್ಟಿದಾರೆ..ಆದರೆ ಯಜಮಾನರಿಗೂ ರವಿ ಅವರಿಗೂ ಅಷ್ಟು ಸಮಾಧಾನ ಇಲ್ಲ.. ನಾನು ನಿನ್ನ ನಾಟಕಗಳನ್ನ ನೋಡಿದೀನಲ್ಲಾ, ನಿನ್ನ ಧ್ವನಿ ರವಿ ಅವರಿಗೆ ಹೊಂದಬಹುದು ಅನ್ನಿಸಿತು.. ಹೋಗಿ ಒಂದು ಟೆಸ್ಟ್ ಕೊಟ್ಟುಬಿಟ್ಟು ಬಾ..ಅವರಿಗೆ ಒಪ್ಪಿಗೆಯಾಗಿಬಿಟ್ಟರೆ ಮುಂದೆ ನೀನೇ ಅವರ ಖಾಯಂ ಧ್ವನಿ ಆಗಿಬಿಡ್ತೀಯಾ..ಒಳ್ಳೇ ಸಂಭಾವನೇನೂ ಸಿಗುತ್ತೆ..ಏನಿಲ್ಲಾಂದರೂ ಒಂದು ಎಂಟು ಹತ್ತಕ್ಕೆ ಮೋಸವಿರೋಲ್ಲ” ಅಂದರು ಸಿಂಹ. ಎಂಟು ಹತ್ತು ಸಾವಿರ! ನಿಜಕ್ಕೂ ದೊಡ್ಡ ಮೊತ್ತವೇ! ಅನುಮಾನವೇ ಇಲ್ಲ! ಸಿಂಹ ಅವರಿಗೆ ಧನ್ಯವಾದಗಳನ್ನರ್ಪಿಸಿ ಸೀದಾ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋದೆ. ಅಲ್ಲಿ ತಾಂತ್ರಿಕ ವರ್ಗದವರು ನನಗಾಗಿ ಕಾಯುತ್ತಿದ್ದರು.

ಸಾವಿರ ಸುಳ್ಳು ಚಿತ್ರದ ಸಹ ನಿರ್ದೇಶಕರು ನನ್ನನ್ನು ಸ್ವಾಗತಿಸಿ ಡಬ್ಬಿಂಗ್ ಸ್ಟುಡಿಯೋದ ಒಳಗೆ ಕರೆದುಕೊಂಡು ಹೋದರು.ಒಳಗೆ ಹೋಗುತ್ತಿದ್ದಂತೆ ನೆನಪೊಂದು ನುಗ್ಗಿ ಬಂತು:ಅರೆ! ಹೌದು! ಈ ಸ್ಟುಡಿಯೋಗೆ ಒಂದು ವರ್ಷದ ಹಿಂದಷ್ಟೇ ಡಬ್ಬಿಂಗ್ ಸಲುವಾಗಿಯೇ ಬಂದಿದ್ದೆ! ಹಾಗೆ ನನ್ನನ್ನು ಅಲ್ಲಿಗೆ ಕರೆಸಿದ್ದು ಮಣಿರತ್ನಂ ಅವರ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅಭಿನಯಿಸಿದ್ದ ಅನಿಲ್ ಕಪೂರ್ ಅವರಿಗೆ ನನ್ನ ಧ್ವನಿ ಹೊಂದುತ್ತದೆಯೇ ಎಂದು ಪರೀಕ್ಷಿಸುವುದಕ್ಕಾಗಿ. ಪ್ರಸಿದ್ಧ ನಟ—ನಿರ್ದೇಶಕ—ರಂಗಕರ್ಮಿ ಜಿ.ವಿ.ಶಿವಾನಂದ್—ನಮ್ಮೆಲ್ಲರ ಪ್ರೀತಿಯ ಮಾಮಯ್ಯ—ನನ್ನನ್ನು ಅಲ್ಲಿಗೆ ಧ್ವನಿ ಪರೀಕ್ಷೆಗಾಗಿ ಕರೆಸಿದ್ದು. ಇಂದು ಶ್ರೇಷ್ಠ ನಿರ್ದೇಶಕರೆಂದು ಪ್ರಸಿದ್ಧರಾಗಿರುವ ಮಣಿರತ್ನಂ ಅವರ ಮೊಟ್ಟಮೊದಲ ಚಿತ್ರ ‘ಪಲ್ಲವಿ ಅನುಪಲ್ಲವಿ’. ಮಣಿರತ್ನಂ ಅವರು ತಮಗೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶಿವಾನಂದ್ ಮಾಮಯ್ಯನವರಿಂದ ನನ್ನ ರಂಗಭೂಮಿಯ ಹಿನ್ನೆಲೆಯನ್ನು ಕೇಳಿ ತಿಳಿದು, ಕರೆಸಿ ತಾವೇ ಖುದ್ದು ಧ್ವನಿ ಪರೀಕ್ಷೆ ನಡೆಸಿದ್ದರು.ಆದರೆ ಅನಿಲ್ ಕಪೂರ್ ಅವರಿಗೆ ನನ್ನ ಧ್ವನಿ ಹೊಂದಿಕೆಯಾಗದು ಎಂದು ಅವರಿಗೆ ಅನ್ನಿಸಿದ್ದರಿಂದ ನಾನು ನಿರಾಶನಾಗಿ ಮರಳಬೇಕಾಯಿತು. ಅಂದು ಹಾಗಾಯಿತು, ಇಂದು ಹೇಗಾಗುವುದೋ ಎಂಬ ಅಳುಕಿನಿಂದಲೇ, ಪರೀಕ್ಷಾರ್ಥವಾಗಿ ಸಿದ್ಧ ಪಡಿಸಿಟ್ಟುಕೊಂಡಿದ್ದ ನಾಲ್ಕಾರು ಸಂಭಾಷಣೆಯ ತುಣುಕುಗಳಿಗೆ ನನ್ನ ಧ್ವನಿಯನ್ನು ಹೊಂದಿಸಿ ಮಾತನಾಡಿದೆ.ಸ್ಟುಡಿಯೋ ಇಂಜಿನಿಯರ್ ಕೋದಂಡಪಾಣಿ ಹಾಗೂ ಸಹ ನಿರ್ದೇಶಕರೆಲ್ಲರೂ ನನ್ನ ಧ್ವನಿ ರವಿ ಅವರಿಗೆ ತುಂಬಾ ಚೆನ್ನಾಗಿ ಹೊಂದುತ್ತದೆಂದು ಅಭಿಪ್ರಾಯ ಪಟ್ಟರು.ಇನ್ನೂ ದೊಡ್ಡವರು ನೋಡಿ ಒಪ್ಪಿಗೆ ಮುದ್ರೆ ನೀಡುವುದು ಬಾಕಿ ಉಳಿದಿತ್ತು. ನಾನು ನನ್ನ ಕೆಲಸ ಮುಗಿಸಿ “ಯಾವುದಕ್ಕೂ ಫೋನ್ ಮಾಡಿ ವಿಷಯ ತಿಳಿಸಿ” ಎಂದು ಮ್ಯಾನೇಜರ್ ಬಾಬು ಅವರಿಗೆ ತಿಳಿಸಿ ಆಫೀಸಿಗೆ ಹೊರಟುಹೋದೆ. ಆಫೀಸ್ ತಲುಪಿ ಅರ್ಧ ತಾಸಿನೊಳಗೇ ಬಾಬು ಅವರ ಫೋನ್ ಸಂದೇಶ ಬಂದಿತು: “ನನ್ನ ಧ್ವನಿ ರವಿಚಂದ್ರನ್ ಅವರಿಗೂ ವೀರಾಸ್ವಾಮಿ ಅವರಿಗೂ ಒಪ್ಪಿಗೆಯಾಗಿದೆ! ಮರುದಿನದಿಂದಲೇ ಡಬ್ಬಿಂಗ್ ಕೆಲಸ ಶುರು ಮಾಡಬೇಕು!” ಸಧ್ಯ, ಹಿಂದಿನ ಧ್ವನಿ ಪರೀಕ್ಷೆಯಂತೆ ನಿರಾಶೆಯಾಗಲಿಲ್ಲವಲ್ಲಾ ಎಂದು ಸಮಾಧಾನವಾದರೂ ತುಂಬಾ ಖುಷಿಯೂ ಏನಾಗಲಿಲ್ಲ ಎನ್ನುವುದಂತೂ ಸತ್ಯ.ಇರಲಿ. ಅಂತೂ ಮರುದಿನದಿಂದ ಡಬ್ಬಿಂಗ್ ಕೆಲಸ ಶುರುವಾಗಿಯೇ ಬಿಟ್ಟಿತು.

ಆಗಿನ ಡಬ್ಬಿಂಗ್ ವ್ಯವಸ್ಥೆ ಇಂದಿನಂತಿರಲಿಲ್ಲ.ಇಂದು ಹತ್ತಾರು ಧ್ವನಿ ಮುದ್ರಣ ಪಥಗಳು ಲಭ್ಯವಿದ್ದು ಕಲಾವಿದರ ಧ್ವನಿ ಜೋಡಣೆ ಕಾರ್ಯವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮಾಡಿಕೊಳ್ಳಬಹುದು. ಆದರೆ ಅಂದು ಕೇವಲ ಒಂದೋ ಎರಡೋ ಧ್ವನಿ ಮುದ್ರಣ ಪಥಗಳು (voice recording tracks) ಮಾತ್ರವೇ ಲಭ್ಯವಿದ್ದು ಒಂದು ದೃಶ್ಯದಲ್ಲಿರುವ ಎಲ್ಲಾ ಕಲಾವಿದರೂ ಒಟ್ಟಿಗೇ ಸ್ಟುಡಿಯೋದಲ್ಲಿದ್ದು ಅಗತ್ಯಾನುಸಾರ ಮೈಕ್ ಮುಂದೆ ಬಂದು ನಿಂತು ಮಾತನಾಡಿ ಧ್ವನಿ ಜೋಡಣೆ ಕಾರ್ಯ ಪೂರೈಸಬೇಕಿತ್ತು. ನಾನು ಮೊದಲ ದಿನ ಸ್ಟುಡಿಯೋಗೆ ಹೋಗುವ ವೇಳೆಗಾಗಲೇ ಅಲ್ಲಿ ಕಲಾವಿದರ ದಂಡೇ ನೆರೆದಿತ್ತು! ಲೋಕೇಶ್, ಮಂಜುಳಾ, ಬಾಲಣ್ಣ,ಸಿ.ಆರ್.ಸಿಂಹ, ಲೀಲಾವತಿ,ಸುಂದರ ರಾಜ್…ಎಲ್ಲರೂ ಸ್ಟುಡಿಯೋದಲ್ಲಿ ಆಸೀನರಾಗಿದ್ದಾರೆ! ಇವರುಗಳ ಜೊತೆಗೆ ನುರಿತ ಡಬ್ಬಿಂಗ್ ಕಲಾವಿದೆ ಗಾಯತ್ರಿ ಪ್ರಭಾಕರ್! ಗಾಯತ್ರಿಯವರು ಚಿತ್ರದ ನಾಯಕಿ ರಾಧಾ ಅವರಿಗೆ ಕಂಠದಾನ ಮಾಡುವವರಿದ್ದರು.

ರಂಗಭೂಮಿಯಿಂದಾಗಿ ಅದಾಗಲೇ ನನಗೆ ಆತ್ಮೀಯರಾಗಿದ್ದ ಸುಂದರ ಹಾಗೂ ಸಿಂಹ ಅವರು ಉಳಿದೆಲ್ಲಾ ಕಲಾವಿದರ ಪರಿಚಯವನ್ನೂ ನನಗೆ ಮಾಡಿಕೊಟ್ಟರು. ಅಂದಿನಿಂದ ಸುಮಾರು ಒಂದು ವಾರ ಡಬ್ಬಿಂಗ್ ಕಾರ್ಯ ಎಡೆಬಿಡದೆ ಸಾಗಿತು. ಆ ವೇಳೆಗಾಗಲೇ ಒಂದೆರಡು ಸಂದರ್ಭಗಳಲ್ಲಿ ಭೇಟಿಯಾಗಿ ಪರಿಚಿತರಾಗಿದ್ದ ಸಹೃದಯಿ ಕಲಾವಿದೆ ಗಾಯತ್ರಿ ಪ್ರಭಾಕರ್, ಡಬ್ಬಿಂಗ್ ಗೆ ಸಂಬಂಧ ಪಟ್ಟ ಹಾಗೆ ಅನೇಕ ಸಂಗತಿಗಳನ್ನೂ ಸೂಕ್ಷ್ಮಗಳನ್ನೂ ತಿಳಿಸಿಕೊಟ್ಟು ಸಹಕರಿಸಿದರು. ನಾನು ಒಂದೆರಡು ದಿನ ರಜೆ ಹಾಕಿ ಮತ್ತೊಂದೆರಡು ದಿನ ಹತ್ತಿರದಲ್ಲೇ ಇದ್ದ ಆಫೀಸಿಗೆ ಹೋಗಿ ಬಂದು ಮಾಡಿಕೊಂಡು ಹೇಗೋ ಡಬ್ಬಿಂಗ್ ಕೆಲಸ ಮುಗಿಸಿದೆ.ನಡುನಡುವೆ ಬಂದು ನೋಡಿಕೊಂಡು ಹೋಗುತ್ತಿದ್ದ ರವಿಚಂದ್ರನ್ ಅವರು “ನಿಮ್ಮ ಧ್ವನಿ ನನಗೆ ತುಂಬಾ ಚೆನ್ನಾಗಿ ಮ್ಯಾಚ್ ಆಗ್ತಿದೆ” ಎಂದು ಸಂತಸ ವ್ಯಕ್ತಪಡಿಸಿದ್ದು ನನ್ನ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು. ಆದರೆ ಮುಂದೆ ಪ್ರತಿ ಚಿತ್ರಕ್ಕೂ ಹೀಗೆ ಒಂದೊಂದು ವಾರ ಡಬ್ಬಿಂಗ್ ಗೆ ಬರ ಬೇಕಾಗುವುದಾದರೆ ಆಫೀಸ್ ಕೆಲಸ ಹೇಗೆ ನಿಭಾಯಿಸುವುದು ಎಂಬ ಚಿಂತೆಯೂ ತೀವ್ರವಾಗಿ ಕಾಡತೊಡಗಿತು.ಸಮಯ ಬಂದಾಗ ನೋಡಿಕೊಂಡರಾಯಿತೆಂದು ಸುಮ್ಮನಾಗಿಬಿಟ್ಟೆ.
ಡಬ್ಬಿಂಗ್ ಕೆಲಸ ಮುಗಿದ ಮೇಲೆ ಬಾಬು ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿ ಪ್ರೀತಿಯಿಂದ ಅಪ್ಪಿಕೊಂಡು ಕೈಕುಲುಕಿ “ಇದು ನಿಮ್ಮ ಸಂಭಾವನೆ” ಎಂದು ಹೇಳಿ ಚೆಕ್ ಒಂದನ್ನು ನನ್ನ ಕೈಗಿತ್ತರು. ಸಂಭಾವನೆಯ ವಿಚಾರವಾಗಿ ಮೊದಲೇ ಏನೂ ಮಾತಾಡಿರಲಿಲ್ಲವಾದ್ದರಿಂದ ‘ಎಷ್ಟಿರಬಹುದು’ ಎಂಬ ಕುತೂಹಲ ಸಹಜವಾಗಿಯೇ ನನ್ನನ್ನು ಕಾಡುತ್ತಿತ್ತು. ಕಾತರ—ಕುತೂಹಲಗಳಿಂದ,ಸಿಂಹ ಅವರ ಪ್ರೋತ್ಸಾಹದಾಯಕ ಊಹಾತ್ಮಕ ಮೊತ್ತದ ನಿರೀಕ್ಷೆಯಿಂದ ಚೆಕ್ ಅನ್ನು ಬಿಡಿಸಿ ನೋಡುತ್ತೇನೆ—1500 ರೂಪಾಯಿಗಳು! ಉತ್ಸಾಹ ಸಂಭ್ರಮಗಳೆಲ್ಲಾ ಸರ್ರನೆ ಇಳಿದುಹೋಗಿ ಪರಮ ನಿರಾಸೆ ಆವರಿಸಿಕೊಂಡು ಬಿಟ್ಟಿತು.ಬಹುಶಃ ಸಿಂಹ ಅವರಿಗೂ ಆಗಿನ ಡಬ್ಬಿಂಗ್ ಕಲಾವಿದರ ಸಂಭಾವನೆಯ ಕುರಿತಾಗಿ ಮಾಹಿತಿ ಇರಲಿಲ್ಲವೆಂದು ತೋರುತ್ತದೆ..ಕೊಂಚ ವಿಪರೀತವೆನ್ನುವಂತೆಯೇ ನನ್ನಲ್ಲಿ ಆಸೆ ಮೊಳೆಯಿಸಿಬಿಟ್ಟಿದ್ದರು! ಆದರೂ ಒಂದು ವಾರದ ಪೂರ್ಣ ದುಡಿಮೆಗೆ 1500 ರೂಪಾಯಿ ಯಾವುದೇ ಕೋನ—ಯಾವುದೇ ದಿಕ್ಕಿನಿಂದಲೂ ತೀರಾ ಕಡಿಮೆ ಎಂದು ನನ್ನ ಮನಸ್ಸು ಚೀರಿ ಚೀರಿ ಹೇಳತೊಡಗಿತು! ನನ್ನ ಬೇಸರ—ಅಸಹನೆಗಳನ್ನು ತೋರಗೊಡದೆ ಹೇಗೋ ಸಾವರಿಸಿಕೊಂಡು,”ನಾನು ಚೆಕ್ ತೆಗೆದುಕೊಳ್ಳುವುದಿಲ್ಲ ಬಾಬು..ಕ್ಯಾಶ್ ವ್ಯವಸ್ಥೆ ಮಾಡಿ..ತಡವಾದರೂ ಚಿಂತೆಯಿಲ್ಲ” ಎಂದಷ್ಟೇ ಹೇಳಿ ನನ್ನ ಸುವೇಗಾ ಏರಿ ಹೊರಟುಬಿಟ್ಟೆ.

ಮರುದಿನ ಬೆಳಿಗ್ಗೆ ನಿರೀಕ್ಷಿಸಿದ್ದಂತೆಯೇ ಆಫೀಸ್ ನಲ್ಲಿದ್ದಾಗ ಬಾಬು ಅವರ ಕರೆ ಬಂತು. ನಾನು ಬಾಬು ಅವರಿಗೆ ನೇರವಾಗಿ ಹೇಳಿಬಿಟ್ಟೆ: “ನನಗೆ ನನ್ನ ಕೇಂದ್ರದ ಕೆಲಸಗಳನ್ನು ಬಿಟ್ಟು ಹೀಗೆ ವಾರಗಟ್ಟಲೆ ಡಬ್ಬಿಂಗ್ ಗಾಗಿ ಸಮಯ ನೀಡುವುದು ಸಾಧ್ಯವೇ ಇಲ್ಲದ ಮಾತು..ಜೊತೆಗೆ ಈ ಡಬ್ಬಿಂಗ್ ನಂತಹ ಅತ್ಯಂತ ಪ್ರಮುಖವಾದ ಕೆಲಸಕ್ಕೆ ನೀವು ನೀಡುವ ಸಂಭಾವನೆಯಂತೂ ನಾಚಿಕೆಯಾಗುವಷ್ಟು ಕಡಿಮೆ..ದಯವಿಟ್ಟು ನನ್ನನ್ನು ಬಿಟ್ಟುಬಿಡಿ..ಬೇರೆ ಯಾರನ್ನಾದರೂ ಹುಡುಕಿಕೊಳ್ಳಿ.ಈಗ ಮಾಡಿರುವ ಕೆಲಸವನ್ನು ಪ್ರೀತಿಯಿಂದ ಮಾಡಿದ್ದೇನೆ ಎಂದು ತಾವು ಭಾವಿಸಿಕೊಳ್ಳಬಹುದು..ಯಾವುದೇ ಸಂಭಾವನೆ ನೀಡುವ ಅಗತ್ಯವಿಲ್ಲ.”

ಇಷ್ಟು ಹೇಳಿ ಫೋನ್ ಇಟ್ಟುಬಿಟ್ಟೆ. ಅರ್ಧ ತಾಸಿನೊಳಗೆ ಬಾಬು ಅವರು ನಮ್ಮ ಕೇಂದ್ರಕ್ಕೇ ಬಂದರು.”ಏನು ಪ್ರಭುಗಳೇ ಹಾಗೆ ಹೇಳಿಬಿಟ್ಟಿರಿ! ಎಷ್ಟೆಷ್ಟೋ ಹುಡುಕಿ ಪ್ರಯತ್ನಿಸಿದ ಮೇಲೆ ಒಂದು ಹೊಂದಿಕೆಯಾಗುವ ಧ್ವನಿ ಸಿಕ್ಕಿದೆ ಅಂತ ಎಲ್ಲರೂ ಖುಷಿಯಾಗಿದೀವಿ! ನಿಮ್ಮ ಸಮಯಕ್ಕೆ ಹೊಂದಿಸಿಕೊಂಡು ಡಬ್ಬಿಂಗ್ ಮಾಡೋಣ..ಚಿಂತೆ ಮಾಡಬೇಡಿ..ಯಾವ ಕಾರಣಕ್ಕೂ ಬಿಟ್ಟುಹೋಗೋ ಮಾತಾಡಬೇಡಿ” ಎಂದೆಲ್ಲಾ ಹೇಳಿ ಕೊನೆಗೆ ಮೂರು ಸಾವಿರ ರೂಪಾಯಿಗಳನ್ನು ನನ್ನ ಕೈಗಿತ್ತು,”ಡಬ್ಬಿಂಗ್ ಕೆಲಸಕ್ಕೆ ಇಷ್ಟು ಸಂಭಾವನೆ ಕೊಡ್ತಿರೋದು ಇದೇ ಮೊದಲು..ಸಮಾಧಾನವೇ?” ಎಂದರು. ಯಾಕೋ ಮಾತು ಮುಂದುವರೆಸಲು ಇಷ್ಟವಾಗಲಿಲ್ಲ. “ಆಯ್ತು ಬಿಡಿ” ಎಂದಷ್ಟೇ ಹೇಳಿ ಅವರನ್ನು ಕಳಿಸಿಕೊಟ್ಟೆ. ಆದರೂ ಮನಸ್ಸಿನ ಚಿಂತೆ—ಬೇಸರಗಳು ದೂರವಾಗಲಿಲ್ಲ.

ನಮ್ಮ ಚಿತ್ರರಂಗವಾದರೂ ಎಷ್ಟು ವಿಚಿತ್ರ! ಯಾವುಯಾವುದಕ್ಕೋ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ.. ಹೊಡೆದಾಟದ ದೃಶ್ಯಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಪುಡಿಗಟ್ಟಿಸಿ ನಾಯಕನನ್ನು ವಿಜೃಂಭಿಸಲು ಲಕ್ಷಗಳು ನೀರುಪಾಲಾಗಿರುತ್ತವೆ..ನಾಯಕಿಯ ತರಹೇವಾರಿ ಬಟ್ಟೆಗಳಿಗೆ,ಕೊನೆಗೆ ಚಪ್ಪಲಿಗಳಿಗೇ ಸಾವಿರ ಸಾವಿರಗಳು ಮುಳುಗಿರುತ್ತವೆ..ಲೆಕ್ಕಕ್ಕೆ ಬರದೇ ಸೋರಿಹೋಗುವ ಲಕ್ಷಗಳಿಗೆ ಮಿತಿಯೇ ಇಲ್ಲ…ಆದರೆ ಪಾತ್ರಗಳಿಗೆ ತಮ್ಮ ಧ್ವನಿಯ ಮೂಲಕ ಜೀವ ತುಂಬುವ ಕಲಾವಿದರಿಗೆ ಸಂಭಾವನೆ ಕೊಡುವಾಗ ಮಾತ್ರ ಎಲ್ಲಿಲ್ಲದ ಪಿಸುಣತನ ಆವರಿಸಿಕೊಂಡು ಬಿಡುತ್ತದಲ್ಲಾ!! ಯಾಕೆ ಹೀಗೆ? ವಾಚಿಕಾಭಿನಯಕ್ಕೆ ಇರುವ ಬೆಲೆ ಇಷ್ಟೇನೇ?! ಹೀಗೆಲ್ಲಾ ತಲೆಯ ತುಂಬಾ ಪ್ರಶ್ನೆಗಳು..ಉತ್ತರ ಸಿಗದ ಪ್ರಶ್ನೆಗಳು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: