ಶ್ರೀನಿವಾಸ ಪ್ರಭು ಅಂಕಣ – ನನ್ನ ಮುಖದ ಮೇಲೆ ಒಂದು ಸಣ್ಣ ಗೆಲುವಿನ ನಗು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

66

ಕುಂ ವೀ ಅವರ ಸಣ್ಣಕತೆ ಆಧಾರಿತ ಈ ಕಿರುಚಿತ್ರಕ್ಕೆ ನಾನು ‘ನಿರ್ಜೀವ’ ಎಂದು ನಾಮಕರಣ ಮಾಡಿದ್ದೆ. ನನಗೆ ಸಹಾಯಕ ನಿರ್ದೇಶಕನಾಗಿದ್ದವನು ಕನ್ನಡದ ಹುಡುಗನೇ ಆಗಿದ್ದ ಈಶ್ವರರಾವ್.’ಕಿವುಡ’ನ ಪಾತ್ರಕ್ಕೆ ರಂಗನಾಥರಾವ್ ಹಾಗೂ ಹುಸೇನನ ಪಾತ್ರಕ್ಕೆ ಗುರುದತ್ತ ರಾವ್ ಅತ್ಯಂತ ಸೂಕ್ತ ಆಯ್ಕೆಯಾಗಿದ್ದರು.ಅಷ್ಟೇ ಅಲ್ಲ,ತಮ್ಮ ಪಾತ್ರಗಳಲ್ಲಿ ಸಂಪೂರ್ಣ ತಲ್ಲೀನರಾಗಿ ಸೊಗಸಾಗಿ ಅಭಿನಯಿಸುತ್ತಿದ್ದರು ಕೂಡಾ. ನಮ್ಮ ಸಹಪಾಠಿಗಳೇ ಆಗಿದ್ದ ಕಲಾವಿದ ಸುರೇಶ, ಪ್ರೊಡ್ಯೂಸರ್ ಆಗಿ ಆಯ್ಕೆಯಾಗಿದ್ದ ಎ.ಸತ್ಯನಾರಾಯಣ (ಆಕಾಶವಾಣಿಯಿಂದ ಬಂದವರು) ಹಾಗೂ ಇನ್ನಿತರ ಸ್ಥಳೀಯ ಕಲಾವಿದರು ಉಳಿದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅಂದು ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಸುಸೂತ್ರವಾಗಿ ಚಿತ್ರೀಕರಣ ನಡೆಯಿತು.

ಛಾಯಾಗ್ರಾಹಕ ವಿಜಯ್ ಕೂಡಾ ಈ ಬಾರಿ ಏನೂ ತಪ್ಪುಗಳಾಗದಂತೆ ಬಲು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದ. ‘ಕಿವುಡ’ ಮತ್ತೆ ರುದ್ರಭೂಮಿಗೆ ಬಂದು ಮುಚ್ಚಿದ್ದ ಗುದ್ದನ್ನು ಮತ್ತೆ ಅಗೆದು ತೆಗೆದು ಅಲ್ಲಿ ಶವದ ಮೇಲಿದ್ದ ಹಣ್ಣು ಕಾಯಿಗಳನ್ನು ತೆಗೆದುಕೊಳ್ಳುವ ದೃಶ್ಯವನ್ನು ರಾತ್ರಿಯಲ್ಲಿಯೇ ಚಿತ್ರೀಕರಿಸಬೇಕಿತ್ತು.ಈ ರುದ್ರಭೂಮಿಯ ದೃಶ್ಯದ ಚಿತ್ರೀಕರಣ ನಡೆಸುತ್ತಿದ್ದುದು ಇನ್ಸ್ ಟಿಟ್ಯೂಟ್ ನ ಒಂದು ಬದಿಗಿದ್ದ ವಿಶಾಲ ಬಯಲು ಪ್ರದೇಶದಲ್ಲಿ. ಆ ಬಯಲಿನ ಒಂದು ಬದಿಗೆ ಇದ್ದುದು ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಹಾಸ್ಟೆಲ್. ಸಂಜೆ ಕತ್ತಲಾಗುತ್ತಿದ್ದಂತೆ ನಾವು ಚಿತ್ರೀಕರಣಕ್ಕೆ ಅಣಿಮಾಡಿಕೊಳ್ಳತೊಡಗಿದವು. ಜತೆಜತೆಗೇ ಶುರುವಾಯಿತು ನಾವು ನಿರೀಕ್ಷಿಸಿಯೇ ಇರದಿದ್ದ ಹೊಸ ಸಮಸ್ಯೆ.

ನಮ್ಮ ದೀಪಗಳು ಬೆಳಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಹಾಸ್ಟೆಲ್ ನ ದಿಸೆಯಿಂದ ಅವಹೇಳನಕಾರೀ ಬೈಗುಳಗಳ ಸುರಿಮಳೆ! ನಮಗೆ ಪ್ರಾರಂಭದಲ್ಲಿ ಏನೂ ಸರಿಯಾಗಿ ಅರ್ಥವಾಗಲಿಲ್ಲ. ನಾವು ರಾತ್ರಿಯ ವೇಳೆಯಲ್ಲಿ ಅಲ್ಲಿ ದೀಪಗಳನ್ನು ಬೆಳಗಿಸಿಕೊಂಡು ಚಿತ್ರೀಕರಣ ಮಾಡುತ್ತಿದ್ದುದು ಅವರಿಗೆ ತೊಂದರೆಯನ್ನೂ ಕಿರಿಕಿರಿಯನ್ನೂ ಉಂಟು ಮಾಡುತ್ತಿದ್ದಿರಬಹುದು,ಆ ಕಾರಣಕ್ಕಾಗಿ ಅವರು ನಮ್ಮ ವಿರುದ್ಧ ಕೂಗಾಡುತ್ತಾ ಗದ್ದಲ ಎಬ್ಬಿಸುತ್ತಿದ್ದಾರೆ ಅನ್ನುವುದು ನಮ್ಮ ತಿಳುವಳಿಕೆಯಾಗಿತ್ತು. ‘ತೀರ್ಥಯಾತ್ರೆ’ಯಲ್ಲಿ ರೂಮ್ ನ ಬಾಲ್ಕನಿಯಲ್ಲಿ ಕುಳಿತವರಿಗೆ ಕಣ್ಣುಕುಕ್ಕುವಂತೆ ದೀಪಗಳನ್ನು ಬೆಳಗಿಸಿದರೆ ಕಿರಿಕಿರಿಯಾಗದೇ ಇರುತ್ತದೆಯೇ? ಕೊಂಚ ಹೊತ್ತು ಕಿರುಚಾಡಿ ತಣ್ಣಗಾಗುತ್ತಾರೆಂದು ಭಾವಿಸಿ ನಾವೂ ಚಿತ್ರೀಕರಣ ನಿಲ್ಲಿಸಿ ವಾತಾವರಣ ತಿಳಿಯಾಗಲು ಕಾಯುತ್ತಾ ಕುಳಿತರೂ ಅಂಥ ಲಕ್ಷಣಗಳೇನೂ ಕಾಣಲಿಲ್ಲ.

ಒಮ್ಮೆ ಹೋಗಿ ಮಾತಾಡಿಯೇ ಬರೋಣವೆಂದು ನಾನು ಹೊರಟರೆ, “ನೀವು ಹೋದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ; ಹೋಗಬೇಡಿ” ಎಂದು ಸಂಸ್ಥೆಯ ಕೆಲಸಗಾರರೇ ಬೇಡವೆಂದು ತಡೆದರು! ವಾಸ್ತವವಾಗಿ ನಮ್ಮ ಚಿತ್ರೀಕರಣದಿಂದ ಅವರಿಗೆ ತೊಂದರೆಯೇನೂ ಆಗುತ್ತಿರಲಿಲ್ಲ..ನಮ್ಮ ಚಿತ್ರೀಕರಣ ನಿಲ್ಲಿಸುವುದೂ ಅವರ ಉದ್ದೇಶವೇನೂ ಆಗಿರಲಿಲ್ಲ. ಸಮಸ್ಯೆ ಇದ್ದುದು ಚಿತ್ರೀಕರಣ ಮಾಡುತ್ತಿದ್ದವರು ದೂರದರ್ಶನ ವಿಭಾಗಕ್ಕೆ ಸೇರಿದವರು ಎಂಬ ವಿಚಾರದಲ್ಲಿ! ಅದುವರೆಗೆ ಚಲನಚಿತ್ರ ಮಾಧ್ಯಮಕ್ಕೆಂದೇ ಮೀಸಲಾಗಿದ್ದ ಫಿಲ್ಮ್ ಇನ್ಸ್ ಟಿಟ್ಯೂಟ್ ಕೆಲ ವರ್ಷಗಳಿಂದ ದೂರದರ್ಶನ ತರಬೇತಿಯನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು! ಇದಷ್ಟೇ ಅಲ್ಲದೆ, “ದೂರದರ್ಶನ ಚಲನಚಿತ್ರ ಮಾಧ್ಯಮಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ;ಮನೆಯಲ್ಲೇ ಕುಳಿತು ಮನರಂಜನೆಯ ಅನೇಕ ಕಾರ್ಯಕ್ರಮಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ವೀಕ್ಷಕ ನೋಡಬಹುದಾದರೆ ಆತ ಚಿತ್ರಮಂದಿರಕ್ಕೇಕೆ ಬರುತ್ತಾನೆ, ನೂರಾರು ರೂಪಾಯಿಗಳನ್ನೇಕೆ ವ್ಯಯ ಮಾಡುತ್ತಾನೆ? ಅಂದರೆ ದೂರದರ್ಶನ ಪ್ರಭಾವಶಾಲಿಯಾಗಿ ಬೆಳೆದಷ್ಟೂ ಚಲನಚಿತ್ರರಂಗದ ಬೆಳವಣಿಗೆ ಕುಂಠಿತವಾಗಿ ಬಿಡುತ್ತದೆ” ಎಂಬ ಭಾವನೆ ಆಳವಾಗಿ ಬೇರೂರಿ ದೂರದರ್ಶನ ಮಾಧ್ಯಮದ ಬಗ್ಗೆಯೇ ಅಲ್ಲಿನ ವಿದ್ಯಾರ್ಥಿಗಳಲ್ಲಿ ಒಂದು ಅಸಹನೆಯ—ದ್ವೇಷದ ಭಾವನೆ ಬೆಳೆದುಬಿಟ್ಟಿತ್ತು! ಅಂದು ನಾವು ಎದುರಿಸಿದ ಟೀಕಾ ಪ್ರಹಾರಗಳ ಕೇಂದ್ರ ಬಿಂದುವೂ ಈ ವಿಷಯವೇ ಆಗಿತ್ತು.

“ಮೀಡಿಯಾ ಅಂತೆ ಮೀಡಿಯಾ! ನೀವು ಬಂದು ಅದೇನೇ ತಿಪ್ಪರಲಾಗ ಹೊಡೆದರೂ ಸಿನೆಮಾನ ಮುಟ್ಟೋಕೂ ಆಗೋಲ್ಲ! ಕೂದಲು ಕೊಂಕಿಸೋಕೂ ಆಗೋಲ್ಲ! ಒಂದಿಷ್ಟು ರಾಜಕಾರಣಿಗಳ ಮುಖಕ್ಕೆ ಕ್ಯಾಮೆರಾ ಹಿಡಿದು ಚಮಚಾಗಿರಿ ಮಾಡೋ ನಿಮ್ಮಂಥಾ ಕುನ್ನಿಗಳು ಸಿನೆಮಾಗೆ ಸವಾಲು ಹಾಕೋಕೆ ಬರ್ತಿದೀರಾ” ಇತ್ಯಾದಿಯಾಗಿ ರಂಗುರಂಗಿನ ಬೈಗುಳಗಳೊಂದಿಗೆ ಅರಚುತ್ತಲೇ ಇದ್ದರು ಒಂದಷ್ಟು ವಿದ್ಯಾರ್ಥಿಗಳು. ಪುಣ್ಯವಶಾತ್ ಯಾರೂ ನಮ್ಮ ಸೆಟ್ ತನಕ ಬರುವ ಸಾಹಸ ಮಾಡಲಿಲ್ಲ.. ಅಥವಾ ನಡೆದು ಬರುವ ಸ್ಥಿತಿಯಲ್ಲಿರಲಿಲ್ಲವೋ ಕಾಣೆ.ಒಟ್ಟಿನಲ್ಲಿ ಎರಡು ತಾಸು ನಾವು ಲೈಟ್ ಗಳನ್ನು ಆರಿಸಿ ಚಿತ್ರೀಕರಣ ನಿಲ್ಲಿಸಿ ತಣ್ಣಗೆ ಕುಳಿತುಬಿಟ್ಟೆವು.

ರಾತ್ರಿ ಹನ್ನೊಂದರ ಸುಮಾರಿಗೆ ಅವರ ಆರ್ಭಟ ಅರಚಾಟಗಳು ಕಡಿಮೆಯಾದವು.ಕೂಗಿ ದಣಿದರೋ ಕುಡಿದು ಚಿತ್ತಾದರೋ ಕಾಣೆ..ಒಟ್ಟಿನಲ್ಲಿ ವಾತಾವರಣ ಶಾಂತವಾಯಿತು.ಒಡನೆಯೇ ಕಾರ್ಯೋನ್ಮುಖರಾದ ನಾವು ವಿದ್ಯಾರ್ಥಿನಿಲಯದ ಕಡೆಗೆ ಆದಷ್ಟೂ ಬೆಳಕು ಹಾಯದಂತೆ ಎಚ್ಚರವಹಿಸಿ ಒಂದಿಷ್ಟೂ ಗದ್ದಲ ಮಾಡದೇ ಪಿಸುದನಿಯಲ್ಲೇ ಮಾತಾಡಿಕೊಳ್ಳುತ್ತಾ ಚಿತ್ರೀಕರಣವನ್ನು ಮಾಡಿ ಮುಗಿಸಿದೆವು.ಅದು ಚಿತ್ರದ ಶಿಖರ ಭಾಗವಾದ್ದರಿಂದ ಹೊಂದಾಣಿಕೆ ಮಾಡಿಕೊಂಡು ಚಿತ್ರೀಕರಣ ಮಾಡುವಂತೆಯೂ ಇರಲಿಲ್ಲ.ಎಲ್ಲಕ್ಕಿಂತ ನಮ್ಮ ತಲೆಯ ಮೇಲಿದ್ದ ತೂಗುಕತ್ತಿ ಅಂದಿನಿಂದ ಮೂರೇ ದಿನಕ್ಕೆ ನಮ್ಮ ಚಿತ್ರದ ಪ್ರದರ್ಶನ ನಿಗದಿಯಾಗಿಹೋಗಿತ್ತು! ಚಿತ್ರೀಕರಣ ಮುಗಿಸಿ,ಸಂಸ್ಕರಣವಾಗಿ,ಸಂಕಲನವಾಗಿ,ಹಿನ್ನೆಲೆ ಸಂಗೀತವನ್ನು ಹೊಂದಿಸಿ ಚಿತ್ರ ಸಿದ್ಧಪಡಿಸಬೇಕಿತ್ತು. ಅಂತೂ ಅಂದು ಚಿತ್ರೀಕರಣ ಮುಗಿದಾಗ ಬೆಳಗಿನ ಜಾವ ಮೂರು ಗಂಟೆ. ಕೆಲ ಗಂಟೆಗಳ ವಿಶ್ರಾಂತಿಯ ನಂತರ ಮತ್ತೆ ಮುಂದಿನ ಕೆಲಸಗಳು ಶುರು! ಅದೃಷ್ಟವಶಾತ್ ಈ ಬಾರಿ ಸಂಸ್ಕರಣದ ನಂತರದ ಫಲಿತಾಂಶ ಧನಾತ್ಮಕವಾಗಿದ್ದು ಒಂದು ದೊಡ್ಡ ಭಾರ ಇಳಿದಂತಾಯಿತು.ಚಿತ್ರ ಸಂಕಲನಕ್ಕೆ ನಿಗದಿಯಾಗಿದ್ದವನು ಬೆಂಗಳೂರು ಕೇಂದ್ರಕ್ಕೇ ಆಯ್ಕೆಯಾಗಿದ್ದ ಗುಣಶೇಖರನ್ ಎಂಬಾತ.ಒಂದೇ ಒಂದು ನಿಮಿಷದ ಬಿಡುವೂ ತೆಗೆದುಕೊಳ್ಳದೆ ಪರಮ ನಿಷ್ಠೆಯಿಂದ ಸಂಕಲನ ಕಾರ್ಯವನ್ನು ಮಾಡಿ ಮುಗಿಸಿದ ಗುಣಶೇಖರ.ಅಂದೇ ರಾತ್ರಿ ಶುರುವಾಯಿತು ಹಿನ್ನೆಲೆ ಸಂಗೀತದ ಧ್ವನಿ ಮುದ್ರಣ ಕಾರ್ಯ.ಮರುದಿನ ಮೂರು ಗಂಟೆಗೆ ಸಮಸ್ತ ಅಧ್ಯಾಪಕರು—ಸಹಪಾಠಿಗಳೆದುರು ಚಿತ್ರ ಪ್ರದರ್ಶನ ಆಗಬೇಕು! ಧ್ವನಿ ಮುದ್ರಣದ ಕಾರ್ಯ ವಹಿಸಿಕೊಂಡಿದ್ದವರು ಅಲ್ಲಿನ ಅಧ್ಯಾಪಕರೇ ಆಗಿದ್ದ ಮುಲ್ಲಾ ಅನ್ನುವವರು.ಅವರಿಗೆ ನಮ್ಮ ಕಿರುಚಿತ್ರ ಅದೆಷ್ಟು ಇಷ್ಟವಾಗಿಬಿಟ್ಟಿತೆಂದರೆ “ದಯವಿಟ್ಟು ಅರ್ಜೆಂಟ್ ಮಾಡಬೇಡಿ..ಇದಕ್ಕೆ ಸಾಕಷ್ಟು ಸಮಯ ತೊಗೊಂಡು ಸೂಕ್ತವಾದ ಹಿನ್ನೆಲೆ ಸಂಗೀತದ ತುಣುಕುಗಳನ್ನು ಹುಡುಕಿ ಅದ್ಭುತವಾಗಿ ಮಾಡಿಕೊಡ್ತೀನಿ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು ಮುಲ್ಲಾ ಸಾಹೇಬರು! ಬೆಳಗಿನಜಾವದ ತನಕ ಹಿನ್ನೆಲೆ ಸಂಗೀತವನ್ನು ಹೊಂದಿಸುವ ಕೆಲಸವಾಯಿತು. ಹೇಳಿದಂತೆಯೇ ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿಕೊಟ್ಟಿದ್ದರು ಮುಲ್ಲಾ ಸರ್.

ಮರುದಿನ ಮುಂಜಾನೆಯಿಂದಲೇ ಅಂತಿಮ ಪ್ರಿಂಟ್ ಸಿದ್ಧಪಡಿಸುವ ಕೆಲಸ. ಅಂದೇ ಮತ್ತಿಬ್ಬರು ನಿರ್ದೇಶಕರ ಚಿತ್ರಗಳೂ ಸಿದ್ಧವಾಗಬೇಕು! ನಮಗೆ ನೀಡಿದ್ದ ಸಂಕಲನ ಉಪಕರಣ ಒಂದೇ ಒಂದು! ಸರದಿಯಲ್ಲಿ ತಾಸುಗಳ ಲೆಕ್ಕದಲ್ಲಿ ಕೆಲಸ ಹಂಚಿಕೊಂಡು ಮಾಡುತ್ತಿದ್ದರೂ ಮುಗಿಯುತ್ತಿಲ್ಲ! ಮಧ್ಯಾಹ್ನ ಎರಡು ಗಂಟೆ. ಬಾಂಬೆಯಿಂದ ಮೈಸೂರು ಅಸೋಸಿಯೇಷನ್ ಕಲಾವಿದರೆಲ್ಲರೂ ಒಂದು ಬಸ್ ಮಾಡಿಕೊಂಡು ನಮ್ಮ ಚಿತ್ರ ನೋಡಲು ಬಂದಿಳಿದಿದ್ದಾರೆ! ಸಂಸ್ಥೆಯ ಕಲಾವಿದರೇ ಆಗಿದ್ದ ರಂಗನಾಥರಾವ್ ಹಾಗೂ ಗುರುದತ್ತ ಮುಖ್ಯ ಪಾತ್ರ ನಿರ್ವಹಿಸಿದ್ದಾರೆಂಬ ವಿಶೇಷ ಆಕರ್ಷಣೆ—ಅಭಿಮಾನವೂ ಸೇರಿತ್ತಲ್ಲಾ! ನನಗೋ ಯಾರ ಕಡೆಯೂ ಯಾತರ ಕಡೆಯೂ ಧ್ಯಾಸವಿಲ್ಲ. ಗಂಟೆ ಎರಡೂವರೆ.. ಎರಡೂ ಮುಕ್ಕಾಲು..ಕೆಲಸ ಮುಗಿದಿಲ್ಲ! ಚಿತ್ರಮಂದಿರ ತುಂಬಿಹೋಗಿದೆ! ಗುಣಶೇಖರ ಅಷ್ಟರಲ್ಲಿ ಒಂದು ಸಣ್ಣ ರಾಜಕೀಯ ಮಾಡಿದ:ಯಾದಿಯಲ್ಲಿ ಮೊದಲಿದ್ದ ನಮ್ಮ ಚಿತ್ರವನ್ನು ಕೊನೆಗೆ ವರ್ಗಾಯಿಸಿಬಿಟ್ಟ! ಅಂದರೆ 30 ನಿಮಿಷಗಳ ಹೆಚ್ಚಿನ ಸಮಯ ಸಿಕ್ಕಂತೆ! ಇಂಥ ಅವಸರದ ಸನ್ನಿವೇಶವಿದ್ದಾಗ ಹಾಳಾದ ಸಮಯವೂ ನಾಗಾಲೋಟದಿಂದ ಧಾವಿಸಿಬಿಡುತ್ತದೆ! ಕೊನೆಗೂ ನಮ್ಮ ಸರದಿ ಬಂದೇ ಬಿಟ್ಟಿತು! ಈಗ “ಶ್ರೀನಿವಾಸ ಪ್ರಭು ಅವರ ಕಿರುಚಿತ್ರ ‘ನಿರ್ಜೀವ'” ಎಂದು ಉದ್ಘೋಷವಾಗುತ್ತಿರುವ ಹಾಗೇ ನಾನು—ಗುಣಶೇಖರ ಪ್ರೊಜೆಕ್ಷನ್ ರೂಂಗೆ ಧಾವಿಸುತ್ತಿದ್ದೆವು. ಅಂತೂ ಇಂತೂ ‘ನಿರ್ಜೀವ’ ಚಿತ್ರ ಪ್ರದರ್ಶನ ಆರಂಭವಾಗಿ ನಮಗೂ ಜೀವ ಬಂದಂತಾಯಿತು! ಮುಂದಿನ 20—25 ನಿಮಿಷಗಳು ಚಿತ್ರಮಂದಿರದಲ್ಲಿ ಸೂಜಿ ಬಿದ್ದ ಸದ್ದೂ ಕೇಳುವಷ್ಟು ನೀರವ! ಹೆಚ್ಚು ಮಾತುಗಳಿಲ್ಲದ್ದರಿಂದ ನಾವು ಕನ್ನಡದಲ್ಲಿಯೇ ಚಿತ್ರ ಮಾಡಿದ್ದರೂ ಅನ್ಯಭಾಷಿಕರಿಗೆ ಚಿತ್ರ ಅರ್ಥ ಮಾಡಿಕೊಳ್ಳುವುದು ಒಂದಿಷ್ಟೂ ಕಷ್ಟವಾಗಲಿಲ್ಲ. ಚಿತ್ರ ಮುಗಿಯುತ್ತಾ ಬಂದಂತೆ ನನ್ನೆದೆಯಲ್ಲಿ ಭತ್ತ ಕುಟ್ಟಿದಂತಹ ಅನುಭವ..ಎಂಥ ಪ್ರತಿಕ್ರಿಯೆ ವ್ಯಕ್ತವಾಗುವುದೋ,ಅಧ್ಯಾಪಕರ ಅಭಿಪ್ರಾಯ ಎಂತಿರುವುದೋ ಎಂಬ ಆತಂಕ! ಆ ಎಲ್ಲಾ ಆತಂಕ—ತಲ್ಲಣಗಳನ್ನು ನಿವಾರಿಸುವಂತೆ, ತಮಟೆಯ ಸದ್ದಿನೊಂದಿಗೆ ಚಿತ್ರ ಮುಗಿಯುತ್ತಿದ್ದಂತೆ ಪ್ರಚಂಡ ಕರತಾಡನ!

ಎರಡು ಮೂರು ದಿನಗಳ ಹಗಲಿರುಳ ಕೆಲಸದಿಂದ ಬೆಂದು ಬಸವಳಿದು ಹೋಗಿದ್ದ ನನ್ನ ಮುಖದ ಮೇಲೆ ಒಂದು ಸಣ್ಣ ಗೆಲುವಿನ ನಗು…ಒಂದು ಚಿಕ್ಕ ಸಾಧನೆಯ ತೃಪ್ತಿ!

ವಾಸ್ತವವಾಗಿ ಕುಂ ವೀ ಅವರ ಕತೆಯಲ್ಲಿ ಅಂತರ್ಗತವಾಗಿದ್ದ ಅಂಶಗಳನ್ನೇ ಬಳಸಿಕೊಂಡು ಒಂದೆರಡು ಚಿಕ್ಕ ದೃಶ್ಯಗಳನ್ನು ನಾನು ಸಂಯೋಜಿಸಿದ್ದೆ. ಮೊದಲನೆಯದು ಕಿವುಡ ಮೊದಲು ಗುದ್ದು ತೋಡುವ ಸಂದರ್ಭ. ಹಳ್ಳಿಯಲ್ಲಿ ಸಾವಾದ ಸುದ್ದಿ ಕೇಳಿ ಸಂಭ್ರಮದಿಂದ ರುದ್ರಭೂಮಿಗೆ ಬರುವ ಕಿವುಡ ಉತ್ಸಾಹದಿಂದಲೇ ಗುದ್ದು ತೋಡತೊಡಗುತ್ತಾನೆ. ಅರ್ಧ ಭಾಗದ ಕೆಲಸ ಮುಗಿದಿದೆ..ಕಿವುಡನಿಗೆ ಅಗೆದು ಅಗೆದು ಆಯಾಸ. ಹಾಗೇ ದಣಿವಾರಿಸಿಕೊಳ್ಳಲು ಅರೆತೋಡಿದ್ದ ಗುದ್ದಿನಲ್ಲಿಯೇ ಮುದುಡಿಕೊಂಡು ಮಲಗುತ್ತಾನೆ. ಬಳಲಿದ ಕಣ್ಣಿಗೆ ನಿದ್ದೆ ಮುತ್ತಿಯೇ ಬಿಡುತ್ತದೆ. ಒಂದೆರಡು ಕ್ಷಣಗಳಲ್ಲೇ ಕ್ರಾ ಕ್ರಾ ಕಾಗೆದನಿ! ಗುದ್ದಿನಲ್ಲಿರುವ ಶರೀರ ಶವವೆಂದು ಭಾವಿಸಿ ಮುತ್ತಲು ಬರುವ ಕಾಗೆಹಿಂಡಿನ ಕರ್ಕಶ ದನಿ! ಆ ಸದ್ದಿಗೆ ಎಚ್ಚರಗೊಂಡ ಕಿವುಡ ‘ಹಚಾ ಹಚಾ’ ಎನ್ನುತ್ತಾ ಮೈ ಕೊಡವಿಕೊಂಡು ಮೇಲೆದ್ದು ಮತ್ತೆ ಗುದ್ದು ತೋಡತೊಡಗುತ್ತಾನೆ!

ಎರಡನೆಯದು: ಹುಸೇನ್ ಸಾಬಿ ಕಿವುಡನಿಗೆ ಬಂದಿದ್ದ ಕೂಲಿಯ ದುಡ್ಡನ್ನು ಕಿತ್ತುಕೊಂಡು ಹೋದಮೇಲೆ ಕಿವುಡ ಹತಾಶೆಯಿಂದ ಕುಳಿತಿದ್ದವನು ಇದ್ದಕ್ಕಿದ್ದಂತೆ ಏನೋ ಆವೇಶ ಹೊಕ್ಕವನಂತೆ ರುದ್ರಭೂಮಿಗೆ ಬಂದು ತಾನೇ ಮುಚ್ಚಿದ್ದ ಗುದ್ದನ್ನ ಮತ್ತೆ ತೋಡತೊಡಗುತ್ತಾನೆ. ಹೆಣದ ಮೇಲೆ ಹಾಕಿದ್ದ ಕಾಯಿ ಹೋಳುಗಳು—ಬಾಳೆಯ ಹಣ್ಣುಗಳನ್ನು ತನ್ನ ಪುಟ್ಟವಸ್ತ್ರದಲ್ಲಿ ಕಟ್ಟಿಕೊಳ್ಳುತ್ತಾನೆ. ಇನ್ನೇನು ಎದ್ದು ಹೊರಡಬೇಕು,ಅಷ್ಟರಲ್ಲಿ ಏನೋ ಅನ್ನಿಸಿ ಮತ್ತೆ ಕೂರುತ್ತಾನೆ.ನಿಧಾನವಾಗಿ ಕಟ್ಟಿದ್ದ ಗಂಟು ಬಿಚ್ಚಿ ಒಂದು ಬಾಳೆಯ ಹಣ್ಣನ್ನು ತೆಗೆದು ಮತ್ತೆ ಬಟ್ಟೆಗೆ ಗಂಟು ಕಟ್ಟಿ ನಿಧಾನವಾಗಿ ಹಣ್ಣನ್ನು ಸುಲಿದು ತಿನ್ನತೊಡಗುತ್ತಾನೆ.ಮುಖದಲ್ಲಿ ದೈನ್ಯ ಮಡುಗಟ್ಟಿದೆ.ಶವ…ಪಕ್ಕದಲ್ಲಿ ಹಣ್ಣು ತಿನ್ನುತ್ತಾ ಕುಳಿತಿರುವ ಕಿವುಡ..ದೂರದಲ್ಲೆಲ್ಲೋ ಕೇಳುವ ತಮಟೆಯ ಸದ್ದು ನಿಧಾನಕ್ಕೆ ಹತ್ತಿರಕ್ಕೆ ಬರುತ್ತಾ ಕಿವಿ ತಮಟೆ ಹರಿಯುವಷ್ಟು ಜೋರಾಗುತ್ತದೆ..

ಈ ಎರಡೂ ದೃಶ್ಯಭಾಗಗಳು ಎಲ್ಲರ,ವಿಶೇಷವಾಗಿ ನಮ್ಮ ಅಧ್ಯಾಪಕರ ಮೆಚ್ಚುಗೆಗೆ ಪಾತ್ರವಾದುವು.ಚಾನಿ ಎಂಬ ಒಬ್ಬ ಅಧ್ಯಾಪಕರಂತೂ ಈ ಚಿತ್ರವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕಳಿಸಬೇಕೆಂದು ಮುಕ್ತಕಂಠದಿಂದ ಪ್ರಶಂಸಿಸಿದರು.ನಾನು ನನ್ನ ಕಿರುಭಾಷಣದಲ್ಲಿ ಅರ್ಥಪೂರ್ಣ ಕತೆಯನ್ನು ನೀಡಿದ ಕತೆಗಾರ ಕುಂ ವೀ ಅವರಿಗೆ,ಪ್ರತಿಫಲದ ಅಪೇಕ್ಷೆಯೇ ಇಲ್ಲದೆ ಬಾಂಬೆಯಿಂದ ಬಂದು ಅಮೋಘವಾಗಿ ಅಭಿನಯಿಸಿ ಸಹಕರಿಸಿದ ರಂಗನಾಥ್ ರಾವ್ ಹಾಗೂ ಗುರುದತ್ತರಿಗೆ,ಅದ್ಭುತವಾಗಿ ಸಂಕಲನ ಮಾಡಿದ ಗುಣಶೇಖರನಿಗೆ,ಚಿತ್ರದ ಪ್ರಭಾವವನ್ನು ಮಿಗಿಲಾಗಿಸುವಂತೆ ಧ್ವನಿ ಸಂಯೋಜನೆ ಮಾಡಿದ ಮುಲ್ಲಾ ಅವರಿಗೆ,ಒಮ್ಮೆ ಎಡವಿದರೂ ನಂತರ ಸೊಗಸಾಗಿ ಚಿತ್ರೀಕರಣ ಮಾಡಿಕೊಟ್ಟ ವಿಜಯ್ ಗೆ ಹಾಗೂ ನೆರವಾದ ಎಲ್ಲ ಸಹಪಾಠಿಗಳಿಗೆ ಕೃತಜ್ಞತೆ ಸಲ್ಲಿಸಿದೆ. ಬಾಂಬೆಯಿಂದ ಬಂದಿದ್ದ ಕಲಾವಿದ ಮಿತ್ರರಿಗೂ ಚಿತ್ರ ತುಂಬಾ ಇಷ್ಟವಾಯಿತು.ನಮ್ಮ ತಂಡದ ನಂತರ ತರಬೇತಿಗಾಗಿ ಅಲ್ಲಿಗೆ ಬಂದ ಅನೇಕ ತಂಡಗಳಿಗೆ ನಮ್ಮ ‘ನಿರ್ಜೀವ’ ಚಿತ್ರವನ್ನು ತೋರಿಸಿ ಮೆಚ್ಚಿ ಮಾತಾಡುತ್ತಿದ್ದರಂತೆ ಅಲ್ಲಿನ ಅಧ್ಯಾಪಕ ವರ್ಗದವರು! ಒಟ್ಟಿನಲ್ಲಿ ಚಿತ್ರಮಾಧ್ಯಮದಲ್ಲಿ ನಿರ್ದೇಶಕನಾಗಿ ಇಟ್ಟ ಮೊದಲ ಪುಟ್ಟ ಹೆಜ್ಜೆ, ಪುಟ್ಟದೊಂದು ಗುರುತು ಮೂಡಿಸಲು ಸಾಧ್ಯವಾಯಿತು ಎನ್ನುವುದೇ ಸಮಾಧಾನ—ಸಂತಸಗಳನ್ನು ತಂದುಕೊಟ್ಟ ಸಂಗತಿ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

September 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: