ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 169
ಒಂದು ಬೆಳಿಗ್ಗೆ ಜಿ. ಮೂರ್ತಿ ಅವರಿಂದ ಫೋನ್ ಕರೆ ಬಂದಿತು: “ಪ್ರಭುಗಳೇ, ಶೂಟಿಂಗ್ ಡೇಟ್ ಫಿಕ್ಸ್ ಮಾಡಿದೀನಿ ಎಲ್ಲರ availability ನೋಡಿಕೊಂಡು. ಜೂನ್ 18. ನೀವು ಹೂಂ ಅಂದರೆ ಎಲ್ಲಾ ಫೈನಲೈಸ್ ಮಾಡಿಬಿಡ್ತೀನಿ” ಎಂದರು ಮೂರ್ತಿಗಳು. ಜೂನ್ 18 ಅಂದರೆ ಇನ್ನೂ ಒಂದು ವಾರ ಸಮಯ ಇದೆ; ಈಗಾಗಲೇ ಸಾಕಷ್ಟು ದಿನಗಳಿಂದ ಸಂಸರ ಕುರಿತ ನಮ್ಮ ಏಕ ಪಾತ್ರಧಾರಿಯ ಚಲನಚಿತ್ರಕ್ಕೆ ತಯಾರಿ ನಡೆಸುತ್ತಲೇ ಬಂದಿರುವುದರಿಂದ ಜೂನ್ 18 ರಂದು ಆಗಬಹುದು ಎಂದು ನಾನೂ ಸಮ್ಮತಿ ಸೂಚಿಸಿದೆ. 17 ರಂದು ಪೂರ್ತಿ ಸಿದ್ಧತೆಗಳನ್ನು ಮಾಡಿಕೊಂಡು ಒಂದೆರಡು ರಿಹರ್ಸಲ್ ಗಳನ್ನೂ ಮಾಡಿಕೊಂಡು 18ನೆಯ ತಾರೀಖು ಚಿತ್ರೀಕರಣವನ್ನು ಮಾಡುವುದೆಂದು ತೀರ್ಮಾನಿಸಿದೆವು. “ನೀವು ಬೇರೆ ಯಾವ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪಾತ್ರ ಹಾಗೂ ನಿಮ್ಮ performance ಮೇಲೆ ಮಾತ್ರ ನಿಮ್ಮ ಫೋಕಸ್ ಇರಲಿ. ಮಿಕ್ಕಿದ್ದೆಲ್ಲಾ ನಾನು ನೋಡಿಕೋತೀನಿ” ಎಂದು ಭರವಸೆಯನ್ನು ನೀಡಿದರು ಮೂರ್ತಿಗಳು.
ಮುಂದಿನ ಒಂದು ವಾರ ಸಂಪೂರ್ಣವಾಗಿ ಸಂಸರ ಪಾತ್ರ ಹಾಗೂ 55 ಪುಟಗಳ ನನ್ನ ಸಂಭಾಷಣೆಗಳತ್ತ ಮಾತ್ರ ಗಮನ ಹರಿಸುತ್ತಾ ತಯಾರಿಯಲ್ಲಿ ತೊಡಗಿಕೊಂಡೆ. ಹೆಚ್ಚುಕಡಿಮೆ ಇದೇ ಸಂಭಾಷಣೆಗಳಿದ್ದ ನಾಟಕವನ್ನು ಹತ್ತಿಪ್ಪತ್ತು ಬಾರಿ ರಂಗದ ಮೇಲೆ ಅಭಿನಯಿಸಿದ್ದರೂ ರಂಗದ ಮೇಲೆ ಅನಿವಾರ್ಯವಾಗಿಬಿಡುತ್ತಿದ್ದ ತುಸು ಶೈಲೀಕೃತ ಅಭಿನಯಕ್ಕಿಂತಲೂ ಭಿನ್ನವಾಗಿ ಹೆಚ್ಚು ಸಂಯಮದಿಂದ ಅತಿರೇಕವೆಂದಾಗಲೀ ವಿಜೃಂಭಣೆ ಎಂದಾಗಲೀ ಅನ್ನಿಸದಂತೆ ಅಭಿನಯಿಸುವ ದೊಡ್ಡ ಪಾತ್ರಸಂಬಂಧಿ ಹೊಣೆಗಾರಿಕೆ ಹೆಗಲೇರಿತ್ತು.
17 ನೆಯ ತಾರೀಖು ಬೆಳಿಗ್ಗೆಯೇ ಹೊರಟು ಪುಟ್ಟಣ್ಣ ಸ್ಟುಡಿಯೋ ತಲುಪಿದೆ. ಆ ವೇಳೆಗಾಗಲೇ ಮೂರ್ತಿ ಸಾಹೇಬರು ಸಂಸರ ಕೊಠಡಿಯನ್ನು ಸಜ್ಜುಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಸ್ವಾತಂತ್ರ್ಯ ಪೂರ್ವದ ಸಮಯದ ಒಂದಷ್ಟು ಹಿತ್ತಾಳೆ—ತಾಮ್ರದ ಪಾತ್ರೆ ಪರಟಿ; ಆ ಕಾಲದ್ದೆನಿಸುವಂತಿದ್ದ ಟೇಬಲ್ —ಕುರ್ಚಿ ; ಹಳೆಯ ಚಾಪೆ- ಬಟ್ಟೆಬರೆಗಳು; ಲಾಂದ್ರ; ಛತ್ರಿ ಕಡ್ಡಿಗೆ ಚುಚ್ಚಿ ತೂಗುಬಿಟ್ಟಿದ್ದ ಒಂದಷ್ಟು ಪತ್ರಗಳು…ಹೀಗೆ ಸಂಸರ ಕೋಣೆಗೆ ಅಧಿಕೃತತೆಯನ್ನು ತಂದುಕೊಡುವುದರಲ್ಲಿ ಕಲಾನಿರ್ದೇಶಕ ಮೂರ್ತಿ ಗೆದ್ದುಬಿಟ್ಟಿದ್ದರು!
ಇನ್ನು ನಮ್ಮ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಅವರು ಇಡಿಯ ಕೋಣೆಗೆ ಮಂದ ಬೆಳಕಿನ ವ್ಯವಸ್ಥೆಯನ್ನು ನಿಯೋಜಿಸತೊಡಗಿದ್ದರು. ಕಾಲಮಾನದ ದೃಷ್ಟಿಯಿಂದ ನಾವು ಚಿತ್ರವನ್ನು ವರ್ಣದಲ್ಲಿ ತಯಾರಿಸುವಂತಿರಲಿಲ್ಲ. ಹಾಗಾಗಿ ಕಾಲ ಹಾಗೂ ವಿಷಾದ ಪ್ರಧಾನ ಕಥಾವಸ್ತುವಿಗೆ ಹೊಂದಿಕೊಳ್ಳುವಂತಹ ವರ್ಣದಲ್ಲಿ ಚಿತ್ರೀಕರಿಸುವ ವ್ಯವಸ್ಥೆ ಆಗಿತ್ತು. ಒಂದೇ ಶಾಟ್ ನಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಬೇಕಾದ್ದರಿಂದ ದಾಸ್ ಅವರು ನಿಂತಲ್ಲಿ ನಿಲ್ಲದೇ ನನ್ನ ಚಲನವಲನಗಳೊಂದಿಗೆ ಹೊಂದಿಸಿಕೊಂಡು ಓಡಾಡುತ್ತಲೇ ಇರಬೇಕಿತ್ತು.ಕ್ಯಾಮರಾವನ್ನು ತಮ್ಮ ಮೈಗೆ ಕಟ್ಟಿಕೊಂಡು ಓಡಾಡುತ್ತಾ ಚಿತ್ರೀಕರಣ ಮಾಡಲು ಯೋಜಿಸಿದ್ದ ದಾಸ್ ಅವರು ಅದಕ್ಕಾಗಿ ಚೆನ್ನೈನಿಂದ ಕೆಲ ವಿಶೇಷ ಉಪಕರಣಗಳನ್ನು ತರಿಸಿದ್ದರು. ಕೊಠಡಿಯನ್ನು ಸಜ್ಜುಗೊಳಿಸಿ ಬೆಳಕಿನ ವ್ಯವಸ್ಥೆಯನ್ನೂ ಮಾಡಿ ಮುಗಿಸಿದ ಮೇಲೆ ನಾವು ಅಭ್ಯಾಸಕ್ಕೆ ತೊಡಗಿದೆವು. ಸುಮಾರು ಎರಡು ಮೂರು ಬಾರಿ ಚಲನವಲನಗಳೆಲ್ಲವನ್ನೂ ಗುರುತುಮಾಡಿಕೊಂಡು ಅಭ್ಯಸಿಸಿದ ಮೇಲೆ ಕೊಂಚ ಧೈರ್ಯ ಬಂತು. ಮರುದಿನ ಬೆಳಿಗ್ಗೆ ಆದಷ್ಟು ಬೇಗ ಬಂದು ಕೊನೆಗಳಿಗೆಯ ತಯಾರಿಗಳನ್ನು ಮುಗಿಸಿಕೊಂಡು ಚಿತ್ರೀಕರಣಕ್ಕೆ ಧುಮುಕಿಯೇ ಬಿಡುವುದು ಎಂದು ತೀರ್ಮಾನಿಸಿದೆವು.
ಅಂದು ರಾತ್ರಿಯೆಲ್ಲಾ ಸಂಸರ ಮಾತುಗಳೇ ಮನಸ್ಸಿನಲ್ಲಿ ಮೊಳಗುತ್ತಿದ್ದುದರಿಂದ ನಿದ್ದೆಯೇನೂ ಸರಿಯಾಗಿ ಬರಲಿಲ್ಲವೆನ್ನಿ. ಆದರೂ ಮರುದಿನ ನಿದ್ರಾಹೀನತೆಯ ಆಯಾಸ ಎಳ್ಳುಕಾಳಿನಷ್ಟೂ ಕಾಣಿಸಿಕೊಳ್ಳದೇ ಹೋದುದಕ್ಕೆ ಸಂಸರ ಆಶೀರ್ವಾದವೇ ಕಾರಣವಿದ್ದಿರಬಹುದು!
ಮರುದಿನ— ಜೂನ್ 18— ಒಂದು ರೀತಿಯಲ್ಲಿ ನನಗೆ ಅಗ್ನಿಪರೀಕ್ಷೆಯಂತಹ ಸವಾಲಿನ ದಿನ. ಹಿಂದಿನ ದಿನವೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರಿಂದ ಹೆಚ್ಚೇನೂ ಕೆಲಸ ಉಳಿದಿರಲಿಲ್ಲ. ಹಾಂ, ಒಂದು ವಿಷಯ ಹೇಳಲು ಮರೆತಿದ್ದೆ: ಒಬ್ಬನೇ ಕಲಾವಿದನ ಹಾಗೂ ಒಂದೇ ಶಾಟ್ ನಲ್ಲಿ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರ ನಮ್ಮದಾಗಬಹುದು, ಹೀಗೆ ನಮ್ಮದೊಂದು ವಿಶ್ವದಾಖಲೆಯಾಗಬಹುದು ಎಂಬೊಂದು ದೂರದ ಆಸೆ ನನ್ನ ಹಾಗೂ ಮೂರ್ತಿಯವರ ಮನಸ್ಸಿನಲ್ಲಿ ಸುಳಿದಿತ್ತು! ಈ ಕುರಿತು ನಾವು ಮಾತಾಡಿಕೊಂಡಿದ್ದೆವು ಕೂಡಾ! ಒಬ್ಬನೇ ಕಲಾವಿದನ ಚಿತ್ರಗಳು ಕೆಲವು ನಮಗೆ ಕಾಣಸಿಗುತ್ತವೆ. ಅಂತೆಯೇ ಒಂದೇ ಶಾಟ್ ನಲ್ಲಿ ಚಿತ್ರೀಕರಿಸಿರುವ ಚಿತ್ರಗಳೂ ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಒಬ್ಬನೇ ಕಲಾವಿದನ ಒಂದೇ ಶಾಟ್ ನಲ್ಲಿ ಚಿತ್ರೀಕರಿಸಿದ ಯಾವ ಚಿತ್ರವೂ ನಮ್ಮ ಗಮನಕ್ಕಂತೂ ಬಂದಿಲ್ಲ! ನನ್ನ ಮಗ ಅನಿರುದ್ಧನೂ ಈ ಕುರಿತಾಗಿ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ‘ಈ ನಿರ್ದಿಷ್ಟ ಮಾದರಿ’ಯ ಯಾವುದೇ ಚಿತ್ರ ಈವರೆಗೆ ಬಂದಿಲ್ಲ..ಅಥವಾ ಆ ಕುರಿತಾಗಿ ಯಾವ ದಾಖಲೆಯೂ ಇಲ್ಲ’ ಎಂದು ಹೇಳಿ ನಮ್ಮ ಕನಸಿಗೆ ನೀರೆರೆದಿದ್ದ. ವಿಶ್ವದಾಖಲೆಯಾಗುವುದಾದರೆ ಒಳ್ಳೆಯದೇ; ಅದರಿಂದ ಒಂದಷ್ಟು ಪ್ರಚಾರ ಸಿಗುತ್ತದೆ’ ಎನ್ನುವುದೇನೋ ದಿಟವೇ ಆದರೂ ನನಗೆ ಪ್ರಾರಂಭದಿಂದಲೂ ಸಂಸರನ್ನು ಕುರಿತ ನನ್ನ ನಾಟಕ ಹಾಗೂ ಈಗಿನ ಈ ಚಿತ್ರ—ಎರಡೂ ಒಂದು ರೀತಿಯಲ್ಲಿ, ನನ್ನನ್ನು ಬಹುವಾಗಿ ಕಾಡುತ್ತಾ ನನ್ನ ಭಾವಕೋಶದ ಭಾಗವೇ ಆಗಿಬಿಟ್ಟಿರುವ ಸಂಸರಿಗೆ ಅರ್ಪಿಸುವ ಶ್ರದ್ಧಾಂಜಲಿಯೇ ಆಗಿತ್ತು.
ಏನೇ ಆದರೂ ‘ನಾವು ಒಂದೇ ಶಾಟ್ ನಲ್ಲಿ ಚಿತ್ರೀಕರಿಸುತ್ತಿದ್ದೇವೆ’ ಎಂಬುದಕ್ಕೆ ಸಾಕ್ಷಿಯಾಗಿ ಇಡೀ ಚಿತ್ರೀಕರಣದ ಪ್ರಕ್ರಿಯೆಯನ್ನು ಮತ್ತೊಂದು ಕ್ಯಾಮರಾದಲ್ಲಿ ಚಿತ್ರೀಕರಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೆವು.
ಈಗಾಗಲೇ ಹೇಳಿರುವಂತೆ ಬೇರೆ ಪಾತ್ರಗಳು ಚಿತ್ರದಲ್ಲಿ ಕಾಣಿಸಿಕೊಳ್ಳದೇ ಹೋದರೂ ಸಂಸರಿಗೆ ಆಪ್ತರಾಗಿದ್ದ—ಪರಿಚಿತರಾಗಿದ್ದ ಕೆಲವರ ಧ್ವನಿಗಳು ಕೇಳಿಸುತ್ತವೆ. ಆ ಧ್ವನಿಗಳನ್ನು ಅಂತಿಮವಾಗಿ ಬೆಸೆಯುವ ಕೆಲಸ ಡಬ್ಬಿಂಗ್ ಸಮಯದಲ್ಲೇ ಆಗುವುದಿದ್ದರೂ ಚಿತ್ರೀಕರಣದ ಸಮಯದಲ್ಲಿ ತೆರೆಮರೆಯ ಆ ವ್ಯಕ್ತಿಗಳೊಂದಿಗೆ ನಾನು ಸಂಭಾಷಣೆ ನಡೆಸಲು ಸಹಾಯವಾಗುವಂತೆ ಆ ಪಾತ್ರಗಳ ಮಾತುಗಳನ್ನು ಒಬ್ಬರು ಹೇಳಬೇಕಲ್ಲಾ, ಆ ಜವಾಬ್ದಾರಿಯನ್ನು ನಮ್ಮ ಸಹನಿರ್ದೇಶಕರೂ ಉತ್ಸಾಹಿ ತರುಣರೂ ಆದ ಶ್ರೀಹರ್ಷ ಮಂಜುನಾಥ್ ಅವರು ವಹಿಸಿಕೊಂಡಿದ್ದರು. ನಮ್ಮ ಛಾಯಾಗ್ರಾಹಕರಾದ ದಾಸ್ ಅವರು ಎಲ್ಲವನ್ನೂ ಮತ್ತೊಮ್ಮೆ ಪರೀಕ್ಷಿಸಿ ನೋಡಿ ಎಲ್ಲವೂ ಸರಿಯಾಗಿದೆಯೆಂದು ಖಾತ್ರಿಪಡಿಸಿಕೊಂಡು ‘ನಾನು ಚಿತ್ರೀಕರಣಕ್ಕೆ ಸಿದ್ಧ’ ಎಂದು ಘೋಷಿಸಿದರು! ವಾಸ್ತವವಾಗಿ ನನಗಿಂತಲೂ ದಾಸ್ ಅವರಿಗಿದ್ದ ಸವಾಲು ದೊಡ್ಡದಿತ್ತು! ನಾನೊಂದು ವೇಳೆ ಸಂಭಾಷಣೆಯಲ್ಲಿ ಎಡವಿದರೂ ಹೇಗೋ ತೂಗಿಸಿಕೊಂಡು ಹೋಗಿ ನಂತರ ಡಬ್ಬಿಂಗ್ ನಲ್ಲಿ ಸರಿಪಡಿಸಿಕೊಳ್ಳಬಹುದು ; ಆದರೆ ದಾಸ್ ಅವರು ಎಡವಿದರೆ ಬೇರೆ ದಾರಿಯೇ ಇಲ್ಲ! ಮತ್ತೆ ಮೊದನಿಂದಲೇ ಚಿತ್ರೀಕರಣ ಆರಂಭಿಸಬೇಕು! ಏಕೆಂದರೆ ಒಂದೇ ಶಾಟ್ ನಲ್ಲಿ ಚಿತ್ರೀಕರಣ ಆಗಬೇಕು! ಹಾಗಾಗಿ ಎಲ್ಲವನ್ನೂ ಮತ್ತೆ ಮತ್ತೆ ಪರೀಕ್ಷಿಸಿ ನೋಡಿಕೊಂಡು ಸರಿಯಿದೆಯೆಂದು ಖಾತ್ರಿ ಪಡಿಸಿಕೊಂಡು ಚಿತ್ರೀಕರಣ ಆರಂಭಿಸಲು ಸಿದ್ಧರಾದೆವು. ದಾಸ್ ಅವರು ಕೊಂಚ ಸ್ಥೂಲಕಾಯದವರೇ ಆದರೂ ಮಹಾ ಚಟುವಟಿಕೆಯ ಛಾಯಾಗ್ರಾಹಕ! ‘ರೆಡಿ ರೆಡಿ’ ಎನ್ನುತ್ತಾ ಎಲ್ಲರಲ್ಲೂ ಸ್ಫೂರ್ತಿ ತುಂಬುತ್ತಾ ಕ್ಯಾಮರಾವನ್ನು ತಮ್ಮ ಮೈಗೆ ಬಿಗಿದು ಕಟ್ಟಿಕೊಂಡು ಸಿದ್ಧರಾದರು! ಮೂರ್ತಿಯವರು ಸ್ಟ್ಯಾಂಡ್ ಬೈ ಸೂಚನೆ ಕೊಟ್ಟು “action” ಎಂದು ಘೋಷಿಸುತ್ತಲೇ ಚಿತ್ರೀಕರಣ ಆರಂಭವಾಗಿಯೇಬಿಟ್ಟಿತು. ಸಂಸರು ಕೋಣೆಯ ಬಾಗಿಲನ್ನು ತೆರೆದುಕೊಂಡು ಭಯ ಗಾಬರಿಗಳಲ್ಲಿ ಒಳಬಂದು ಬಾಗಿಲು ಮುಚ್ಚಿ ನಡುಗುತ್ತಾ ಕೂರುವುದರೊಂದಿಗೆ ಪ್ರಾರಂಭವಾಗುವ ಚಿತ್ರ ನಿಧಾನವಾಗಿ ಅವರ ಸ್ವಗತಗಳ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಚಿತ್ರೀಕರಣ ಸರಾಗವಾಗಿ ಸಾಗುತ್ತಿತ್ತು. ಸುಮಾರು ಒಂದು ತಾಸು ಕಳೆದಿರಬಹುದು, ಇದ್ದಕ್ಕಿದ್ದಂತೆ ಕ್ಯಾಮರಾ ನಿಂತುಹೋಯಿತು! ಕಟ್ ಕಟ್ ಎನ್ನುತ್ತಾ ದಾಸ್ ಅವರು ಕ್ಯಾಮರಾವನ್ನು ಕೆಳಗಿಳಿಸಿದರು. ಒಂದೇ ಸಮನೆ ಅಷ್ಟು ಹೊತ್ತು ಚಾಲನೆಯಲ್ಲಿದ್ದುದರಿಂದ ಅತಿ ಶಾಖವಾಗಿ ಕ್ಯಾಮರಾ ನಿಂತುಹೋಗಿದೆ! ಕೂಡಲೇ ದೊಡ್ಡದೊಂದು ಫ್ಯಾನ್ ತರಿಸಿ ಚಲಾಯಿಸಿ ಕ್ಯಾಮರಾವನ್ನು ತಣಿಸುವ ಕೆಲಸ ಆರಂಭವಾಯಿತು. ಮೂಲದೇವರೇ ಮುನಿಸಿಕೊಂಡರೆ ಉತ್ಸವ ಸಾಗುವುದಾದರೂ ಎಂತು?! ಸುಮಾರು ಒಂದು ತಾಸಿನ ನಂತರ ಕ್ಯಾಮರಾ ಸಹಜಸ್ಥಿತಿಗೆ ಮರಳಿದ ಮೇಲೆ ಮತ್ತೆ ಚಿತ್ರೀಕರಣವನ್ನು ಮೊದಲಿನಿಂದ ಪ್ರಾರಂಭಿಸಿದೆವು. ಮುಕ್ತಾಯದ ಹಂತದಲ್ಲಿ ಕ್ಯಾಮರಾ ಹೀಗೆ ಮುನಿಸಿಕೊಂಡಿದ್ದರೂ ಮೊದಲಿನಿಂದಲೇ ಚಿತ್ರೀಕರಣ ಆರಂಭಿಸಬೇಕಾಗುತ್ತಿತ್ತು ಅನ್ನಿ! ಮುಂದಿನ ಪ್ರಯತ್ನ ಯಶಸ್ವಿಯಾಗಿ ಆಗಲಿ ಎಂದು ಮನಸ್ಸಿನಲ್ಲೇ ಪ್ರಾರ್ಥನೆಗಳನ್ನು ಸಲ್ಲಿಸುತ್ತಾ ಚಿತ್ರೀಕರಣವನ್ನು ಪುನರಾರಂಭಿಸಿದೆವು. ಮುನ್ನೆಚ್ಚರಿಕೆಯ ಕ್ರಮವಾಗಿ ಫ್ಯಾನ್ ಅನ್ನು ಚಲಾಯಿಸುತ್ತಲೇ ಇದ್ದೆವು! ಅರ್ಧ ತಾಸು ಕಳೆಯಿತು…ಒಂದು ತಾಸು…ಅತ್ಯಂತ ಸರಾಗವಾಗಿ ಚಿತ್ರೀಕರಣ ಸಾಗುತ್ತಿದೆ…ಸಂಸರೇ ಸ್ಫೂರ್ತಿಯ ಸೆಲೆಯಾಗಿ ನನ್ನ ಬೆಂಬಲಕ್ಕೆ ನಿಂತು ಮುನ್ನಡೆಸುತ್ತಿದ್ದಾರೆ ಎನ್ನುವ ಭಾವದಲ್ಲಿ ನಾನು ಅಭಿನಯಿಸುತ್ತಿದ್ದೆ. ಒಂದೂವರೆ ತಾಸೂ ಕಳೆಯಿತು..ಚಿತ್ರದ ಕೊನೆಯ ಭಾಗ… ಸಂಸರು ವಿಷವನ್ನು ಕುಡಿದು ನರಳುತ್ತಾ ಹಳಹಳಿಸುತ್ತಾ ಕೊನೆಗೆ ‘ಸಾಯುತ್ತಿದ್ದೇನೆ’ ಎಂಬ ನೆಮ್ಮದಿಯ ಭಾವದಲ್ಲಿ ಉಸಿರು ಚೆಲ್ಲುವ ದೃಶ್ಯ ಭಾಗ…ಅದೂ ಮುಗಿಯಿತು! ಮುಗಿಯುತ್ತಿದ್ದಂತೆ ಇಡೀ ತಂಡದವರು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ಅರೆ! ನಾವು ಮಾಡಿದ್ದೇವೆ! ಒಬ್ಬನೇ ಕಲಾವಿದನ, ಒಂದೇ ಶಾಟ್ ನ ಚಿತ್ರವನ್ನು ನಾವು ಮಾಡಿ ಮುಗಿಸಿದ್ದೇವೆ!!
ಬಹುಶಃ ವಿಶ್ವದಾಖಲೆಯಾಗಬಹುದಾದ ಚಿತ್ರವನ್ನು ಪೂರ್ಣಗೊಳಿಸಿದ್ದೇವೆ!
ಅದೊಂದು ಅದ್ಭುತ ಗಳಿಗೆ. ಆ ಗಳಿಗೆಯ ಸಂಭ್ರಮವನ್ನು, ಸಂತಸವನ್ನು ವರ್ಣಿಸಲು ಶಬ್ದಗಳು ಸಾಲವು. ಅದೊಂದು ಅವರ್ಣನೀಯ ಅನುಭವ. ಮೂರ್ತಿಯವರಂತೂ ದೊಡ್ಡ ಹೊರೆ ಇಳಿದವರಂತೆ ಕಂಬಕ್ಕೊರಗಿ ಕಣ್ಣುಮುಚ್ಚಿ ಕುಳಿತುಬಿಟ್ಟಿದ್ದರು. 103 ನಿಮಿಷಗಳ ಒಂದೇ ಶಾಟ್ ಅನ್ನು ಸತತವಾಗಿ ಚಿತ್ರೀಕರಿಸಿದ ದಾಸ್ ಅವರೂ ಸಹಾ ದಣಿದು ಉಸ್ಸೆಂದು ಕುಳಿತು ಗಾಳಿ ಹಾಕಿಕೊಳ್ಳುತ್ತಿದ್ದರು. ಎಲ್ಲಾ ತಂತ್ರಜ್ಞರೂ ಎಲ್ಲಾ ಸಹಾಯಕರೂ ಸಹಾ ಒಂದು ವಿಶಿಷ್ಟ ಅನುಭವಕ್ಕೆ ಪಾತ್ರರಾದ ರೀತಿಯಲ್ಲಿ ಆನಂದಿಸುತ್ತಿದ್ದರು.
ಚಿತ್ರದ ಹೆಸರು ‘ಬಿಂಬ—ಆ ತೊಂಬತ್ತು ನಿಮಿಷಗಳು’ ಎಂದಾದರೂ ಚಿತ್ರದ ಪೀಠಿಕೆ ಹಾಗೂ ಉಪಸಂಹಾರದ ಭಾಗಗಳೂ ಸೇರಿಕೊಂಡು ಒಟ್ಟು ಚಿತ್ರದ —ಅಂದರೆ ಆ ಒಂದು ಚಿತ್ರಿಕೆಯ ಅವಧಿ 103 ನಿಮಿಷಗಳಾಗಿದ್ದವು! ಚಿತ್ರೀಕರಣದ ನಂತರ ಶೀರ್ಷಿಕೆಗಳನ್ನು ಜೋಡಿಸುವುದರ ಹೊರತಾಗಿ ಸಂಕಲನದ ವಿಶೇಷ ಕೆಲಸಗಳೇನೂ ಇರಲಿಲ್ಲ. ಶೀರ್ಷಿಕೆಗಳನ್ನು ಜೋಡಿಸಿ ಕಲರ್ ಗ್ರೇಡಿಂಗ್ ಇತ್ಯಾದಿ ತಾಂತ್ರಿಕ ಕೆಲಸಗಳನ್ನೂ ಮುಗಿಸಿ ಡಬ್ಬಿಂಗ್ ಪ್ರಾರಂಭಿಸಿದೆವು. ನಾನು ಎರಡು ದಿನಗಳ ಸಮಯ ತೆಗೆದುಕೊಂಡು ಇಡೀ ಚಿತ್ರದ ಡಬ್ಬಿಂಗ್ ಮುಗಿಸಿದೆ. ತೆರೆಮರೆಯ ಅದೃಶ್ಯ ಧ್ವನಿಗಳಾಗಿ ನಮಗೆ ಸಹಕರಿಸಿದವರು ಆತ್ಮೀಯ ರಂಗಬಂಧುಗಳಾದ ಶ್ರೀನಿವಾಸ ಮೇಷ್ಟ್ರು, ಬಿ.ವಿ.ರಾಜಾರಾಂ ಹಾಗೂ ಸುಚೇಂದ್ರ ಪ್ರಸಾದ್. ಸಂಸರ ಅಣ್ಣನ ಮಗನ ಪಾತ್ರಕ್ಕೆ ಧ್ವನಿ ನೀಡಿದವನು ಮಗರಾಯ ಅನಿರುದ್ಧ. ಈ ಎಲ್ಲ ಕಲಾವಿದರ ಧ್ವನಿಯ ಬಲದಿಂದ ನಮ್ಮ ಚಿತ್ರಕ್ಕೆ ಒಂದು ವಿಶೇಷ ಘನತೆ ಒದಗಿಬಂದಿತು. ಇಷ್ಟಾದ ನಂತರ ಸಂಪೂರ್ಣ ಚಿತ್ರದ ಪ್ರತಿಯೊಂದನ್ನು ತೆಗೆದುಕೊಂಡು ಪ್ರವೀಣ್ ಗೋಡಖಿಂಡಿಯವರ ಮನೆಗೆ ಹೋದೆವು. ಅವರೇ ಸಂಗೀತ ಸಂಯೋಜಿಸುವುದೆಂದೂ ಕೇವಲ ಕೊಳಲನ್ನು ಮಾತ್ರವೇ ಹಿನ್ನೆಲೆ ಸಂಗೀತಕ್ಕೆ ಬಳಸುವುದೆಂದೂ ಮೊದಲೇ ನಿರ್ಧಾರವಾಗಿತ್ತು. ನಾನು ಹಾಗೂ ಮೂರ್ತಿ, ಗೋಡಖಿಂಡಿಯವರೊಂದಿಗೆ ಕುಳಿತು ಅವರ ಮನೆಯಲ್ಲೇ ಅವರೊಟ್ಟಿಗೇ ಚಿತ್ರವನ್ನು ನೋಡಿ ಯಾವ ಯಾವ ಸಂದರ್ಭಗಳಿಗೆ ಯಾವ ಯಾವ ರಾಗಗಳ ಛಾಯೆಯಲ್ಲಿ ಸಂಗೀತ ಸಂಯೋಜಿಸಬಹುದೆಂಬುದರ ಕುರಿತಾಗಿ ಅವರೊಂದಿಗೆ ಚರ್ಚಿಸಿ ಚಿತ್ರವನ್ನು ಅವರ ಮಾಂತ್ರಿಕ ಕೈಗಳಿಗೊಪ್ಪಿಸಿ ಬಂದೆವು!
ನಾಲ್ಕಾರು ದಿನಗಳಲ್ಲೇ ‘ಸಂಗೀತ ಸಂಗತಗೊಂಡಿದೆ’ ಎಂದು ಗೋಡಖಿಂಡಿಯವರು ಸಂದೇಶ ಕಳಿಸಿದರು! ಅವರ ಮನೆಗೆ ಹೋಗಿ ಅವರೊಟ್ಟಿಗೆ ಮತ್ತೊಮ್ಮೆ ಸಂಗೀತ ಮಿಳಿತಗೊಂಡ ಚಿತ್ರವನ್ನು ನೋಡಿದೆವು. ನಿಜಕ್ಕೂ ಅದ್ಭುತವಾದ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಿದ್ದರು ಪ್ರವೀಣ್ ಗೋಡಖಿಂಡಿಯವರು. ಅವರ ಬಳಿಯಿರುವ ವಿಶೇಷ ವೇಣುವೊಂದನ್ನೇ ಬಳಸಿ ಇಡೀ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು ಗೋಡಖಿಂಡಿಯವರು. ಆದರೆ ಸಂಗೀತ ಅದೆಷ್ಟು ಪರಿಣಾಮಕಾರಿಯಾಗಿ ಪ್ರಭಾವಿಯಾಗಿ ಚಿತ್ರದೊಂದಿಗೆ ಬೆಸೆದಿತ್ತೆಂದರೆ ‘ಒಂದೇ ವಾದ್ಯದ ಸಂಗೀತ’ವೆಂದು ಕ್ಷಣಮಾತ್ರಕ್ಕೂ ಅನಿಸುತ್ತಿರಲಿಲ್ಲ. ಅಷ್ಟರ ಮಟ್ಟಿನ ವೈವಿಧ್ಯತೆ ಪ್ರವೀಣ್ ಅವರ ಮಾಂತ್ರಿಕ ವೇಣುನಾದದಲ್ಲಿತ್ತು. ‘ವಿಶ್ವದ ಶ್ರೇಷ್ಠ ಸಂಗೀತಗಾರರಲ್ಲೊಬ್ಬರು ನಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ’ ಎನ್ನುವುದಕ್ಕಿಂತ ಹೆಗ್ಗಳಿಕೆಯ ಸಂಗತಿ ಬೇರೇನು ಇರಲು ಸಾಧ್ಯ?!
ನಂತರ ಚಿತ್ರದ ಸಂಭಾಷಣೆಗಳಿಗೆ ಇಂಗ್ಲೀಷ್ ಉಪಶೀರ್ಷಿಕೆಗಳನ್ನು ಜೋಡಿಸುವ ಕೆಲಸವೂ ಪೂರ್ಣಗೊಂಡಿತು. ರಂಜನಿ ಹಾಗೂ ಅನಿರುದ್ಧ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ರಾಧಿಕೆಯೂ ಪ್ರತಿನಿತ್ಯವೂ ಲಂಡನ್ ನಿಂದ ಫೋನ್ ಮಾಡಿ ಚಿತ್ರದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಳು. ಪೂರ್ಣರೂಪದಲ್ಲಿ ಸಿದ್ಧವಾದ ಚಿತ್ರದ ಪ್ರತಿಯೊಂದನ್ನು ತಂದು ಮನೆಯಲ್ಲಿ ರಂಜನಿ ಹಾಗೂ ಮಗನೊಂದಿಗೆ ನೋಡಲು ವಿಶೇಷ ಪ್ರದರ್ಶನ ಏರ್ಪಡಿಸಿ ಮೂರ್ತಿಗಳು ಹಾಗೂ ಒಂದಿಬ್ಬರು ಗೆಳೆಯರನ್ನೂ ಆಹ್ವಾನಿಸಿದೆ! ಎಲ್ಲರಿಗೂ ಚಿತ್ರ ತುಂಬಾ ಇಷ್ಟವಾಯಿತು. ಮೊದಲೇ ಭಾವಜೀವಿಯಾದ ರಂಜನಿಯಂತೂ ಅತ್ತು ಕಣ್ಣು ಕೆಂಪಗಾಗಿಸಿಕೊಂಡಿದ್ದಳು. ಎಲ್ಲರೂ ಹೊರಟಮೇಲೆ ಅನಿರುದ್ಧ, “ಡ್ಯಾಡಿ, ನೀನು ಬೇಜಾರು ಮಾಡಿಕೊಳೊಲ್ಲ ಅಂದ್ರೆ ಒಂದು ಮಾತು ಹೇಳ್ತೀನಿ” ಅಂದ. ‘ಖಂಡಿತ ಬೇಜಾರು ಮಾಡಿಕೊಳ್ಳೋದಿಲ್ಲ..ಹೇಳೋ ಪುಟ್ಟಣ್ಣಾ’ ಎಂದೆ ನಾನು. ಸ್ವಲ್ಪ ನಿಧಾನವಾಗಿ ಮಾತುಗಳನ್ನು ಜೋಡಿಸಿಕೊಂಡು ಅನಿರುದ್ಧ ಹೇಳಿದ:
“ಫಿಲ್ಮ್ ತುಂಬಾ ಚೆನ್ನಾಗಿ ಬಂದಿದೆ. ಆದರೆ ಒಂದು ಪ್ರಾಬ್ಲಂ ಇದೆ ಡ್ಯಾಡಿ.”






0 Comments