ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ಅದೇ ನಮ್ಮ ಪ್ರಚಂಡ ಯಶಸ್ಸಲ್ಲವೇ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 170

ಅನಿರುದ್ಧ ‘ಒಂದು ಪ್ರಾಬ್ಲಂ ಇದೆ’ ಎಂದಾಗ ಒಂದು ಕ್ಷಣ ಗಾಬರಿಯೇ ಆಯಿತು. ಅಷ್ಟು ಮುತುವರ್ಜಿಯಿಂದ ಮಾಡಿದ್ದೇವೆ, ಆದರೂ ಏನು ಸಮಸ್ಯೆಯಾಗಿದೆ ಎಂದು ಆತಂಕವೇ ಆಯಿತು. ಅನಿರುದ್ಧನಿಗೆ ಸಮಾಧಾನವಾಗದೇ ಹೋಗಿದ್ದ ವಿಷಯ ಉಪಶೀರ್ಷಿಕೆಗಳದ್ದು!(sub titles) ಕೆಲವು ಕಡೆಗಳಲ್ಲಿ ವಾಕ್ಯರಚನೆಯಲ್ಲಿ ದೋಷವಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಅನುವಾದದಲ್ಲಿ ಹಾಗೂ ಅರ್ಥಸಂವಹನದಲ್ಲಿಯೇ ತೊಡಕಿದೆ ಎಂದು ಅನಿರುದ್ಧ ನುಡಿದಾಗ ‘ಈ ವಿಷಯದ ಕುರಿತಾಗಿ ನಾವು ವಿಶೇಷ ಗಮನವನ್ನೇ ಹರಿಸಿರಲಿಲ್ಲ’ ಎಂಬುದು ಅರಿವಿಗೆ ಬಂದು ಮತ್ತಷ್ಟು ಕಸಿವಿಸಿಯಾಯಿತು. “ತೀರಾ ಆಭಾಸಗಳಿಲ್ಲದಿದ್ದರೆ ಸುಮ್ಮನಾಗಿಬಿಡೋಣ…ಈಗ ಪೂರ್ತಿ ಕೆಲಸ ಆಗಿಹೋಗಿದೆ…ಮತ್ತೆ ಬದಲಾಯಿಸಬೇಕೆಂದರೆ ಸಮಯ ಹಾಗೂ ಹಣ ಎರಡೂ ಖರ್ಚಾಗುತ್ತದೆ” ಎಂದು ನಾನಂದರೆ ಅನಿರುದ್ಧ ಒಪ್ಪಬೇಕಲ್ಲಾ! “ಇಲ್ಲ ಡ್ಯಾಡಿ..ಹಾಗೆಲ್ಲಾ ಕಾಂಪ್ರಮೈಸ್ ಮಾಡಿಕೊಳ್ಳೋದಕ್ಕೆ ಆಗೋಲ್ಲ…international festivals ಗೆಲ್ಲಾ ಕಳಿಸೋದಕ್ಕೆ plan ಮಾಡ್ತಿದೀವಿ..ಈ ವಿಷಯದಲ್ಲಂತೂ ಕಾಂಪ್ರಮೈಸ್ ಬೇಡವೇ ಬೇಡ..ನಾನೇ ಖುದ್ದಾಗಿ ಮನೇಲಿ ಕೂತು ತಪ್ಪುಗಳನ್ನ ತಿದ್ದಿ ಎಲ್ಲಾನೂ ಪರಿಷ್ಕರಿಸಿ ಕೊಡ್ತೀನಿ.. ಇನ್ನೊಂದು ಸಲ ಪೋಸ್ಟ್ ಮಾಡಿಸಿಬಿಡಿ” ಎಂದು ಅನಿರುದ್ಧ ಖಚಿತ ದನಿಯಲ್ಲಿ ಹೇಳಿದಾಗ ನನಗೂ ಅವನ ಮಾತು ಸರಿ ಎನ್ನಿಸಿತು. ತಕ್ಷಣವೇ ಮೂರ್ತಿಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. “ಅಯ್ಯೋ ಆಗಲಿ ಬಿಡಿ ಪ್ರಭುಗಳೇ..ಪುಟ್ಟಣ್ಣ ಹೇಳಿದ ಮೇಲೆ ಮುಗೀತು…ಆ ಕೆಲಸ ಆಗಲೇಬೇಕು” ಎಂದು ಅವರು ಹೇಳಿದ ಮೇಲೆ ಮನಸ್ಸು ಹಗುರವಾಯಿತು.

ಈ ವೇಳೆಗಾಗಲೇ ಪುಟ್ಟಣ್ಣ(ಅನಿರುದ್ಧ) ಸೌಂಡ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಯಶಸ್ವಿಯಾಗಿ ಮುಗಿಸಿದ್ದನಷ್ಟೇ ಅಲ್ಲ, ಪ್ರಪ್ರಥಮ rank ಗಳಿಸಿ ನಮ್ಮ ಸಂತಸವನ್ನು ನೂರ್ಮಡಿಸಿದ್ದ! ಅನಂತರ ಅವನ ಗಮನ ಹರಿದದ್ದು D J ವೃತ್ತಿಯ ಕಡೆಗೆ! ಈಚಿನ ದಿನಗಳಲ್ಲಿ ಒಳ್ಳೆಯ ಡಿ ಜೆ ಗಳಿಗೆ ಅಪಾರ ಬೇಡಿಕೆಯಿದೆ. ತನಗೆ ಪ್ರಾಣಪ್ರಿಯವಾದ ಸಂಗೀತ ಕ್ಷೇತ್ರದಲ್ಲಿಯೇ ವಿಹರಿಸುತ್ತಾ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಕೈತುಂಬಾ ಹಣವನ್ನೂ ಸಂಪಾದಿಸಲು ಸಾಧ್ಯವಾಗುವುದಾದರೆ ಯಾಕೆ ಆ ನಿಟ್ಟಿನಲ್ಲಿ ಪ್ರಯತ್ನಿಸಬಾರದು ಎಂಬುದು ಅವನ ಆಲೋಚನೆ. ನಮಗೂ ಇದರಲ್ಲಿ ಬಾಧಕಗಳೇನೂ ಕಾಣದೆ ಅಸ್ತು ಎಂದೆವು. ಇಂದಿರಾನಗರದ ಶಾಲೆಯೊಂದರಲ್ಲಿ ನಾಲ್ಕಾರು ತಿಂಗಳ ಕೋರ್ಸ್ ಅನ್ನು ಯಶಸ್ವಿಯಾಗಿ ಮುಗಿಸಿ ಡಿ ಜೆ ವೃತ್ತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಕೆಲವು ಪ್ರಮುಖ ಕ್ಲಬ್ ಗಳಲ್ಲಿ ಸಹಾಯಕ ಡಿ ಜೆ ಆಗಿ ಕೆಲಸ ಮಾಡಲೂ ಆರಂಭಿಸಿದ ಅನಿರುದ್ಧ! ಈ ವೃತ್ತಿಯಲ್ಲಿದ್ದ ಒಂದೇ ತೊಡಕೆಂದರೆ ಅವನ ಕೆಲಸ ಶುರುವಾಗುತ್ತಿದ್ದುದೇ ರಾತ್ರಿ 8 ಗಂಟೆಯ ವೇಳೆಗೆ! ತಡರಾತ್ರಿ 12—1 ಗಂಟೆಯವರೆಗೆ ಸಂಗೀತಪ್ರಿಯ ಗ್ರಾಹಕರನ್ನು ಕುಣಿಸುವ ಸಂಗೀತವನ್ನು ಎಡೆಬಿಡದೆ , ಸುಲಲಿತವಾಗಿ ಸಾದರಪಡಿಸುವ ಜವಾಬ್ದಾರಿ ಅವನದಾಗಿತ್ತು. ಅದಕ್ಕಾಗಿ ತಾಸುಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ರೆಟ್ರೋ, ಪಾಪ್ , ಜಾಜ಼್, ಆಫ್ರೋ ಮೊದಲಾದ ಬಗೆಬಗೆಯ ಮಾದರಿಯ ಸಂಗೀತದ ಜನಪ್ರಿಯ ಹಾಡುಗಳನ್ನೆಲ್ಲಾ ತನ್ನ ಪೆನ್ ಡ್ರೈವ್ ಗೆ ವರ್ಗಾಯಿಸಿಕೊಂಡು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ. ಯಾವ ವಿಷಯದಲ್ಲೂ ಹೊಂದಾಣಿಕೆ— ಕಾಂಪ್ರಮೈಸ್— ಅನ್ನುವುದು ಅವನ ಜಾಯಮಾನಕ್ಕೇ ಬಂದುದಲ್ಲ. ಪ್ರತಿಯೊಂದೂ ‘ಪರ್ಫೆಕ್ಟ್’ ಆಗಿರಬೇಕು, ‘ಫ್ಲಾಲೆಸ್ ‘ ಆಗಿರಬೇಕು ಅನ್ನುವುದು ಅವನ ಸಿದ್ಧಾಂತ. ಅವನ ಈ ಮನೋಧರ್ಮದಿಂದಾಗಿಯೇ ಕೇವಲ 3-4 ವರ್ಷಗಳ ಅವಧಿಯಲ್ಲಿ ಅನಿರುದ್ಧ ಅಲಿಯಾಸ್ ಡಿ ಜೆ ಮಂತ್ರ (D J MNTRA) ಬೆಂಗಳೂರಿನಲ್ಲಿ ಒಬ್ಬ ಪ್ರಮುಖ ಡಿ ಜೆ ಆಗಿ ಪ್ರಸಿದ್ಧನಾಗಲು ಸಾಧ್ಯವಾಗಿರುವುದು ಅನ್ನುವುದರಲ್ಲಿ ಅನುಮಾನವೇ ಇಲ್ಲವೆನ್ನಿ.

ಇಂಥ ಮಗರಾಯ ನಮ್ಮ ಚಿತ್ರದ ಉಪಶೀರ್ಷಿಕೆಗಳಲ್ಲಿ ತಪ್ಪುಗಳು ನುಸುಳಿವೆ ಎಂದರೆ ಸುಮ್ಮನಿದ್ದಾನೆಯೇ! ಎರಡು ಮೂರು ದಿನಗಳು ತನ್ನ ಬಿಡುವಿನ ಸಮಯದಲ್ಲೆಲ್ಲಾ ಕಂಪ್ಯೂಟರ್ ಮುಂದೆ ಕುಳಿತುಕೊಂಡು ತಪ್ಪುಗಳನ್ನು ಸರಿಪಡಿಸತೊಡಗಿದ. ಕ್ಲಿಷ್ಟವಾದ ಸಂಭಾಷಣೆಗಳಿದ್ದಾಗ ನನ್ನನ್ನೂ ಜೊತೆಯಲ್ಲಿ ಕೂರಿಸಿಕೊಂಡು ಮಾತುಗಳ ಅರ್ಥವನ್ನು ಸರಿಯಾಗಿ ಗ್ರಹಿಸಿ ಇಂಗ್ಲೀಷ್ ನ ಉಪಶೀರ್ಷಿಕೆಗಳನ್ನು ಸಿದ್ಧಪಡಿಸಿದ. ನಂತರ ಮತ್ತೊಮ್ಮೆ ಸ್ಟುಡಿಯೋದಲ್ಲಿ ಚಿತ್ರದ ಮೂಲಪ್ರತಿಗೆ ಉಪಶೀರ್ಷಿಕೆಗಳನ್ನು ಹೊಂದಿಸುವ ಕೆಲಸವನ್ನು ಮಾಡಿ ಮುಗಿಸಿದೆವು. ಎಲ್ಲ ಕೆಲಸ ಮುಗಿದ ಮೇಲೆ ಇಡೀ ಚಿತ್ರವನ್ನು ಮತ್ತೊಮ್ಮೆ ನೋಡಿ ‘ಅಬ್ಬಾ! ಈಗ ಎಲ್ಲಾ ಪರ್ಫೆಕ್ಟ್ ಆಗಿದೆ ‘ ಎಂದು ಅನಿರುದ್ಧ ಹೇಳಿದಮೇಲೇ ನಮಗೂ ಮನಸ್ಸು ಹಗುರವಾಯಿತು. ಈಗ ನಮ್ಮ ಚಿತ್ರದ ಉಪಶೀರ್ಷಿಕೆಗಳಲ್ಲಿ ವ್ಯಾಕರಣ ಸಂಬಂಧಿಯಾದ ಅಥವಾ ಅರ್ಥಸಂಬಂಧಿಯಾದ ಒಂದೇ ಒಂದು ತಪ್ಪೂ ಇಲ್ಲ ಎಂದು ನಾನು ಧೈರ್ಯವಾಗಿ ಎದೆ ತಟ್ಟಿಕೊಂಡು ಹೇಳಬಲ್ಲೆ! ಥ್ಯಾಂಕ್ಯೂ ಪುಟ್ಟಣ್ಣಾ!!

ಇಷ್ಟಾದ ನಂತರ ನಮ್ಮ ಚಿತ್ರವನ್ನು ಸೆನ್ಸಾರ್ ಮಾಡಿಸುವ ಪ್ರಕ್ರಿಯೆಯೂ ನಡೆಯಿತು. ಸೆನ್ಸಾರ್ ಮಂಡಳಿಯ ಅನುಮೋದನೆ ಸಿಕ್ಕ ಬಳಿಕ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕಳಿಸುವ ಕೆಲಸವನ್ನೂ ಆರಂಭಿಸಿದೆವು. ಹಾಗೆಯೇ ನಮ್ಮ ಚಿತ್ರ ರಾಷ್ಟ್ರೀಯ ಹಾಗೂ ವಿಶ್ವದಾಖಲೆಗಳನ್ನು ಸ್ಥಾಪಿಸುವ ಸಾಧ್ಯತೆಗಳಿದ್ದುದರಿಂದ ಆ ನಿಟ್ಟಿನಲ್ಲಿಯೂ ಚಿಂತಿಸತೊಡಗಿದೆವು. ಈ ಎಲ್ಲಾ ಯೋಚನೆ— ಯೋಜನೆಗಳನ್ನು ರೂಪಿಸುತ್ತಾ ಕಾರ್ಯಗತಗೊಳಿಸಲು ಅಪಾರವಾಗಿ ಶ್ರಮಿಸಿದವನು ಅನಿರುದ್ಧ. ಚಿತ್ರೋತ್ಸವಗಳಿಗೆ ಹಾಗೂ ವಿಶ್ವದಾಖಲೆಗಳನ್ನು ಗುರುತಿಸಿ ಪ್ರಚುರಪಡಿಸುವ ಸಂಸ್ಥೆಗಳಿಗೆ ಅಗತ್ಯ ವಿವರ ಹಾಗೂ ದಾಖಲೆಗಳನ್ನು ಕಳಿಸಿಕೊಟ್ಟದ್ದೂ ಆಯಿತು.

ಕೆಲ ದಿನಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯವರು “ಒಬ್ಬನೇ ಕಲಾವಿದನ, ಒಂದೇ ಶಾಟ್ ನಲ್ಲಿ ಚಿತ್ರಿಸಿದ ರಾಷ್ಟ್ರದ ಪ್ರಥಮ ಚಿತ್ರ” ಎಂದು ನಮ್ಮ ಚಿತ್ರವನ್ನು ಗುರುತಿಸಿ ದಾಖಲಿಸಿಯೇಬಿಟ್ಟರು! ಕೆಲದಿನಗಳಲ್ಲೇ ಪ್ರಮಾಣ ಪತ್ರ ಪದಕಗಳೂ ನಮ್ಮ ಕೈಸೇರಿದವು. ಅಲ್ಲಿಗೆ ಯಶಸ್ಸಿನ ಒಂದು ಗರಿ ಮುಡಿಗೇರಿದಂತಾಯಿತು. ನಮ್ಮ ಮುಖ್ಯ ಗುರಿ ಇದ್ದದ್ದು ಗಿನ್ನಿಸ್ ವಿಶ್ವದಾಖಲೆಯದ್ದು! ಆ ದಾಖಲೆ ನಮ್ಮ ಚಿತ್ರಕ್ಕೆ ದೊರೆತುಬಿಟ್ಟರೆ ವಿಶ್ವವ್ಯಾಪಿ ಪ್ರಚಾರ ದೊರಕಿಬಿಡುತ್ತದೆ, ಚಿತ್ರವನ್ನು ಹತ್ತಾರು ಕಡೆ ಪ್ರದರ್ಶಿಸಲು ಸುಲಭವಾಗುತ್ತದೆ ಎನ್ನುವುದು ನಮ್ಮ ಆಲೋಚನೆ. ಆದರೆ ಹಲವಾರು ದಿನಗಳು ಕಳೆದರೂ ಸಂಬಂಧಪಟ್ಟವರಿಂದ ಯಾವುದೇ ಸಂದೇಶ ಬಾರದಿದ್ದಾಗ ಕೊಂಚ ಆತಂಕವಾಯಿತು. ಅನಿರುದ್ಧ ನೇರವಾಗಿ ಅಲ್ಲಿನ ಅಧಿಕಾರಿಗಳನ್ನೇ ಸಂಪರ್ಕಿಸಿದಾಗ ನಮಗೆ ನಿರಾಸೆಯುಂಟುಮಾಡಿದ ಸುದ್ದಿ ಬಂದಿತು: “ಗಿನ್ನಿಸ್ ದಾಖಲೆಗೆ ಕೇವಲ ಒಂದು ವಿಭಾಗದ ಸಾಧನೆಯನ್ನು ಮಾತ್ರ ಗಮನಿಸುತ್ತೇವೆ! ಎರಡು ಮೂರು ವಿಭಾಗಗಳ ಕೂಡು ದಾಖಲೆಯನ್ನು ನಾವು ಪರಿಗಣಿಸುವುದಿಲ್ಲ! ಒಂದೇ ಶಾಟ್ ನಲ್ಲಿ ಚಿತ್ರಿಸಿದ ಚಿತ್ರ ಎಂದು ದಾಖಲೆಯಾಗಬಹುದು; ಅಥವಾ ಒಬ್ಬನೇ ಕಲಾವಿದನ ಅಭಿನಯದ ಚಿತ್ರ ಎಂದು ದಾಖಲೆಯಾಗಬಹುದು; ಆದರೆ ಈ ಎರಡೂ ವಿಭಾಗಗಳಲ್ಲಿ ಈಗಾಗಲೇ ದಾಖಲೆ ಬರೆದಿರುವ ಚಿತ್ರಗಳಿವೆ; ಅವುಗಳಿಗಿಂತಲೂ ಹೆಚ್ಚಿನ ಅವಧಿಯ ಚಿತ್ರವನ್ನು ಮಾತ್ರ ನಾವು ಹೊಸ ದಾಖಲೆಯೆಂದು ಸ್ವೀಕರಿಸುತ್ತೇವೆಯೇ ಸಿವಾಯಿ ಕಡಿಮೆ ಅವಧಿಯದ್ದಲ್ಲ; ನಿಮ್ಮ ಚಿತ್ರದ ಅವಧಿ ಎರಡೂ ವಿಭಾಗಗಳಲ್ಲಿ ದಾಖಲೆ ಬರೆದಿರುವ ಚಿತ್ರಗಳಿಗಿಂತ ಕಡಿಮೆ ಇರುವುದರಿಂದ ನಿಮ್ಮ ಚಿತ್ರವನ್ನು ಪರಿಗಣಿಸಲಾಗದು”— ಇಷ್ಟು ಸ್ಪಷ್ಟೀಕರಣವನ್ನು ಅವರು ನೀಡಿದ ಮೇಲೆ ನನಗೆ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಛೆ! ಈ ಸಂಗತಿಗಳನ್ನು ಪೂರ್ವಭಾವಿಯಾಗಿ ತಿಳಿದುಕೊಂಡಿದ್ದರೆ ಆ ನಿಟ್ಟಿನಲ್ಲಿಯೇ ಪ್ರಯತ್ನ ಪಡಬಹುದಿತ್ತು! ವಾಸ್ತವವಾಗಿ ಸಂಸರ ಬದುಕಿನ ಅನೇಕ ಪ್ರಸಂಗಗಳನ್ನು ನನಗೆ ಚಿತ್ರದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ; ಈ ದಾಖಲೆಯ ಕಾರಣಗಳಿಗಾಗಿಯೇ ಅವನ್ನು ಸೇರಿಸಿಕೊಂಡು ಚಿತ್ರದ ಅವಧಿ ಹೆಚ್ಚುವಂತೆ ಸುಲಭವಾಗಿ ಮಾಡಬಹುದಿತ್ತು! ಆದರೆ ಈಗ ಕಾಲ ಮಿಂಚಿಹೋಗಿದೆ!! ಮಾಡುವುದಾದರೂ ಏನು! ರಾಷ್ಟ್ರದಾಖಲೆಗೇ ತೃಪ್ತಿ ಪಟ್ಟುಕೊಳ್ಳಬೇಕು ಅಷ್ಟೇ ಎಂದುಕೊಂಡು ನಾನೂ ಮೂರ್ತಿಗಳೂ ನಿಟ್ಟುಸಿರಿಟ್ಟೆವು. ಆದರೆ ಅನಿರುದ್ಧನ ಲೆಕ್ಕಾಚಾರ ಬೇರೆಯದೇ ಇತ್ತು! “ಅಷ್ಟೊಂದು ನಿರಾಶನಾಗಬೇಡ ಡ್ಯಾಡಿ…U R F— UNIVERSAL RECORDS FORUM ಅಂತ ಇನ್ನೊಂದು ಸಂಸ್ಥೆ ಇದೆ…ಅವರೂ ಕೂಡಾ ಹೀಗೆ ದಾಖಲೆ ಬರೆಯುವಂಥ ಚಿತ್ರಗಳಿದ್ದರೆ ಅವನ್ನ ಗುರುತಿಸಿ ಪ್ರಶಸ್ತಿ ನೀಡ್ತಾರೆ..ನಾವು ಅಲ್ಲಿಗೆ ನಮ್ಮ ಚಿತ್ರವನ್ನ ಕಳಿಸಿ ನೋಡೋಣ” ಎಂದವನು ನುಡಿದಾಗ ಹೊಸ ಆಸೆ ಮತ್ತೆ ಗರಿಗೆದರಿತು. ಕೂಡಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದೆವು. ಒಂದೆರಡು ದಿನಗಳಲ್ಲೇ U R F ಸಂಸ್ಥೆಯ ಪದಾಧಿಕಾರಿಗಳಿಂದ ಉತ್ತರ ಬಂತು: “ನಿಮ್ಮ ಚಿತ್ರವನ್ನು DIVERGENT ವಿಭಾಗದಲ್ಲಿ ದಾಖಲೆಗಾಗಿ ನಮ್ಮ ಸಂಸ್ಥೆ ಪರಿಶೀಲಿಸುತ್ತಿದೆ…ನಮ್ಮ ಸಂಶೋಧನಾ ತಂಡದವರು ಈ ಕುರಿತಾಗಿ ಪರಿಶೀಲನೆ ನಡೆಸುತ್ತಾರೆ…ಕೆಲವಾರು ದಿನಗಳಲ್ಲೇ ನಿಮ್ಮನ್ನು ಮತ್ತೆ ಸಂಪರ್ಕಿಸುತ್ತೇವೆ” ಎಂಬ ಅವರ ಸಂದೇಶವನ್ನು ನೋಡಿ ಭರವಸೆ ಮತ್ತಷ್ಟು ಹೆಚ್ಚಿತು! “ನಾನು ಈಗಾಗಲೇ ಸ್ಟಡಿ ಮಾಡಿರುವ ಹಾಗೆ ಹೀಗೆ ಹಲವಾರು ವಿಭಾಗಗಳಲ್ಲಿ (ಏಕ ಪಾತ್ರ,ಏಕ ಚಿತ್ರಿಕೆ, ಏಕ ವಾದ್ಯ ಹಾಗೂ ಏಕ ಸ್ಥಳ!) ವಿಕ್ರಮ ಬರೆಯುವ ಯಾವುದೇ ಚಿತ್ರ ಇದುವರೆಗೆ ಬಂದಿಲ್ಲ..ತುಂಬಾ ಹೋಪ್ ಇದೆ ನನಗೆ” ಎಂದು ಅನಿರುದ್ಧ ಹೇಳಿದಾಗ ಮತ್ತಷ್ಟು ಖುಷಿ! ಇದಾದ ಒಂದು ತಿಂಗಳಿಗೆ URF ಸಂಸ್ಥೆಯವರಿಂದ ಬಹು ನಿರೀಕ್ಷಿತ ಸಂದೇಶ ಬಂದೇಬಿಟ್ಟಿತು: “ಅಭಿನಂದನೆಗಳು! ಕೂಲಂಕುಷವಾಗಿ ಪರಿಶೀಲಿಸಿದ ನಂತರ ನಮ್ಮ ಸಂಶೋಧನಾ ವಿಭಾಗದವರು ನಿಮ್ಮ ಚಿತ್ರವನ್ನು DIVERGENT ವಿಭಾಗದಲ್ಲಿ ವಿಶ್ವದಾಖಲೆ ಬರೆಯಲು ಅರ್ಹ ಚಿತ್ರ ಎಂದು ಘೋಷಿಸಿದ್ದಾರೆ! ನಿಮ್ಮ ಊರಿಗೇ ಬಂದು ನೀವು ಆಯೋಜನೆ ಮಾಡಿದ ಸ್ಥಳದಲ್ಲಿ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡುತ್ತೇವೆ…ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು!”

ಈ ಸಂದೇಶವನ್ನು ನೋಡಿ ನಮ್ಮ ಸಂತಸಕ್ಕೆ ಪಾರವೇ ಇಲ್ಲದಂತಾಗಿಹೋಯಿತು! ಕೊಂಚವೂ ತಡಮಾಡದೇ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದ ಸಭಾಂಗಣವನ್ನು ಒಂದು ಭಾನುವಾರದಂದು ಕಾದಿರಿಸಿ URF ಸಂಸ್ಥೆಯವರಿಗೆ ಧನ್ಯವಾದ ಪೂರ್ವಕವಾಗಿ ಸುದ್ದಿ ತಲುಪಿಸಿದೆವು.

ನಿಗದಿತ ದಿನದಂದು ದೊಡ್ಡಸಂಖ್ಯೆಯಲ್ಲಿ ನೆರೆದಿದ್ದ ಬಂಧು ಮಿತ್ರರ ಸಮ್ಮುಖದಲ್ಲಿ URF ಸಂಸ್ಥೆಯ ಪದಾಧಿಕಾರಿಗಳು ನನ್ನನ್ನೂ ಮೂರ್ತಿಯವರನ್ನೂ ವೇದಿಕೆಗೆ ಆಹ್ವಾನಿಸಿ ಪ್ರಶಸ್ತಿ ಫಲಕಗಳನ್ನೂ ಮೆಡಲು ಸ್ಮರಣಿಕೆಗಳನ್ನೂ ನೀಡಿ ಗೌರವಿಸಿ “ಬಿಂಬ—ಆ ತೊಂಬತ್ತು ನಿಮಿಷಗಳು” ಚಲನ ಚಿತ್ರ ಒಂದು ವಿನೂತನ ವಿಶ್ವದಾಖಲೆಯನ್ನು ನಿರ್ಮಿಸಿದೆ”— ಎಂದು ಘೋಷಿಸಿದಾಗ ಸಭೆಯಲ್ಲಿ ಪ್ರಚಂಡ ಕರತಾಡನ. ಸಭಾ ಕಾರ್ಯಕ್ರಮದ ನಂತರ ಚಿತ್ರಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಅದಾದ ಮೇಲೆ ನಡೆದ ಅರ್ಥಪೂರ್ಣ ಸಂವಾದದಲ್ಲಿ ಪ್ರೇಕ್ಷಕರು ಉತ್ಸಾಹದಿಂದ ಭಾಗವಹಿಸಿ ಅಪಾರ ಮೆಚ್ಚುಗೆಯನ್ನು ಸೂಚಿಸಿದರು.

‘ಬಿಂಬ’ ದ ಯಶೋಗಾಥೆ ಇಲ್ಲಿಗೇ ಮುಗಿಯಲಿಲ್ಲ. ರಾಜಾಸ್ಥಾನದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಂಬ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ದೊರೆಯಿತು! ನಂತರದಲ್ಲಿ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯವರು ಅತ್ಯುತ್ತಮ ಸಂಭಾಷಣೆಯ ಪ್ರಶಸ್ತಿ ನೀಡಿ ಗೌರವಿಸಿದರು.ಹಲವಾರು ಚಿತ್ರೋತ್ಸವಗಳಿಗೆ ನಾವು ನಮ್ಮ ಚಿತ್ರವನ್ನು ಕಳಿಸಿದ್ದರೂ ಒಂದೆರಡು ಪ್ರತಿಷ್ಠಿತ ಉತ್ಸವಗಳಲ್ಲಿ ಆಯ್ಕೆಯಾಗದೇ ಹೋದದ್ದು ನಿರಾಸೆಯನ್ನು ತಂದರೂ ಫ್ರಾನ್ಸ್ , ಕೊರಿಯಾ ಇನ್ನಿತರ ದೇಶಗಳ ಉತ್ಸವಗಳಲ್ಲಿ ಪಾಲ್ಗೊಂಡು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು ‘ಬಿಂಬ’. ಹೆಚ್ಚಿನ ಪ್ರಚಾರ ಮಾಡಿ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡುವಷ್ಟು ಆರ್ಥಿಕ ಕ್ಷಮತೆ ಇರಲಿಲ್ಲವಾಗಿ ನಾನೂ ಮೂರ್ತಿಯವರೂ ಆ ಕುರಿತಾಗಿ ಯೋಚಿಸಲೂ ಇಲ್ಲ! ಆದರೆ ಆಸಕ್ತರು ಯಾರೇ ಕೇಳಿದರೂ ಅವರ ಊರಿಗೆ ಹೋಗಿ ಚಿತ್ರಪ್ರದರ್ಶನವನ್ನು ಆಸಕ್ತ ಪ್ರೇಕ್ಷಕರಿಗೆ ನೀಡಿ ಒಂದು ಸಂವಾದವನ್ನೂ ನಡೆಸಿಬರುತ್ತಿದ್ದೆ. ಒಂದು ವಿಷಯವನ್ನು ಹೇಳಲು ಮರೆತಿದ್ದೆ: ವಿಶ್ವದಾಖಲೆಯ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭಕ್ಕೆ ಎಲ್ಲ ವಾಹಿನಿಗಳವರನ್ನೂ ಪತ್ರಿಕೆಗಳವರನ್ನೂ ಆಹ್ವಾನಿಸಿದ್ದೆವು. ನನಗೆ ತಿಳಿದ ಮಟ್ಟಿಗೆ ಯಾವುದೇ ವಾಹಿನಿಯವರೂ ಸಮಾರಂಭಕ್ಕೆ ಬಂದು ಚಿತ್ರೀಕರಿಸಿಕೊಂಡು ಸುದ್ದಿಯನ್ನು ಪ್ರಸಾರ ಮಾಡಿದಂತೆ ಕಾಣಲಿಲ್ಲ! ಈ ವಿಶ್ವದಾಖಲೆ ಅಷ್ಟು ಮಹತ್ವದ್ದೇನಲ್ಲ ಎಂದವರಿಗೆ ಅನ್ನಿಸಿದ್ದಿರಬಹುದು! ಇರಲಿ. ಆದರೆ ಎಲ್ಲ ಪತ್ರಿಕೆಯವರೂ ಬಂದು ಸಮಾರಂಭದಲ್ಲಿ ಭಾಗವಹಿಸಿ ತಂತಮ್ಮ ಪತ್ರಿಕೆಗಳ ಪುರವಣಿ ವಿಭಾಗದಲ್ಲಿ ನಮ್ಮ ಚಿತ್ರದ ಕುರಿತಾಗಿ ವಿಶೇಷ ಲೇಖನಗಳನ್ನೇ ಪ್ರಕಟಿಸಿದರು—ಅದೂ ಹಲವಾರು ಚಿತ್ರಗಳ ಸಹಿತ!! ಕೆ.ಎಸ್.ದಕ್ಷಿಣಾಮೂರ್ತಿ ಎಂಬ ಪ್ರಸಿದ್ಧ ಪತ್ರಕರ್ತರು ಚಿತ್ರವನ್ನು ನೋಡಿ ಮನಸಾರೆ ಮೆಚ್ಚಿಕೊಂಡಿದ್ದಲ್ಲದೇ The week ಎಂಬ ಪ್ರಸಿದ್ಧ ವಾರ ಪತ್ರಿಕೆಯಲ್ಲಿ ಒಂದು ವಿಶೇಷ ಲೇಖನವನ್ನೇ ನಮ್ಮ ಚಿತ್ರದ ಕುರಿತಾಗಿ ಬರೆದು ಪ್ರಕಟಿಸಿದರು! ಇವೆಲ್ಲವೂ ಒಂದು ರೀತಿಯಲ್ಲಿ ನಮಗೆ ಅತೀವ ಸಮಾಧಾನ ಹಾಗೂ ತೃಪ್ತಿಗಳನ್ನು ನೀಡಿದ ಸಂಗತಿಗಳು.

ಆದರೆ ಎಲ್ಲವೂ ಸಂತಸದ ಸಂಗತಿಗಳೇ ಆಗಿಬಿಟ್ಟರೆ ಅದೆಂಥ ಬದುಕು..? ಸಂತಸ ಸಂಭ್ರಮಗಳ ಹೂಗಳ ಜೊತೆಗೆ ಕುಟುಕಿ ಕಾಡುವ ಮುಳ್ಳುಗಳೂ ಇರಲೇಬೇಕಲ್ಲಾ!

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ಭಾಗವಹಿಸಲು ನಮ್ಮ ಬಿಂಬ ಚಿತ್ರಕ್ಕೆ ಅವಕಾಶವನ್ನು ನಿರಾಕರಿಸಿಬಿಟ್ಟರು! ಈ ಸುದ್ದಿಯನ್ನು ಕೇಳಿ ನಾನು ನಖಶಿಖಾಂತ ಉರಿದುಹೋದೆ.

ಇರಬಹುದು…ಒಂದು ಸಿನೆಮಾ ಆಗಿ ನಮ್ಮ ಚಿತ್ರದಲ್ಲಿ ಕೆಲ ತಾಂತ್ರಿಕ ಕೊರತೆಗಳಿದ್ದಿರಬಹುದು…ಸಿನಿಮೀಯತೆಗಿಂತ ನಾಟಕೀಯತೆ ಮೇಲುಗೈ ಸಾಧಿಸಿರಬಹುದು..ಆದರೆ ನಮ್ಮ ಚಿತ್ರಕ್ಕೆ ಒಂದು ಸಾಂಸ್ಕೃತಿಕ ಮಹತ್ವವಿದೆ..ಸ್ವಾತಂತ್ರ್ಯಪೂರ್ವದ ಒಬ್ಬ ಶ್ರೇಷ್ಠ ನಾಟಕಕಾರರ ಬದುಕಿನ ಅನಾವರಣವಿದೆ ಈ ಚಿತ್ರದಲ್ಲಿ…ಯಾವ ವಿಶೇಷ ತಾಂತ್ರಿಕ ಮೆರುಗು ಅಬ್ಬರ ಆಡಂಬರಗಳಿಲ್ಲದೆಯೂ ಒಂದು ಗಾಢ ಅನುಭವವನ್ನು ಕಟ್ಟಿಕೊಡುವ ಚಿತ್ರ ಎಂದು ನಾಡಿನ ಉದ್ದಾಮ ಸಾಹಿತಿಗಳೆಲ್ಲಾ ಶ್ಲಾಘಿಸಿದ್ದಾರೆ…ಆದರೂ ಯಾಕೋ ಚಿತ್ರೋತ್ಸವದ ಜ್ಯೂರಿ ಮಹೋದಯರಿಗೆ ನಮ್ಮ ಚಿತ್ರ ಹಿಡಿಸಲೇ ಇಲ್ಲ! ಒಬ್ಬ ಮಹಾನುಭಾವರಂತೂ “ಯಾರೋ ಒಬ್ಬ ಹುಚ್ಚ ಕೋಣೆಯೊಳಗೆ ತನ್ನನ್ನು ತಾನೇ ಬಂಧಿಸಿಕೊಂಡು ಬಡಬಡಿಸುವ ಈ ಚಿತ್ರ ನನ್ನ ಆಯ್ಕೆಯಲ್ಲ” ಎಂದರು! ಹುಚ್ಚನ ಬಡಬಡಿಕೆ ನಿಜ; ಆದರೆ ಆ ‘ಹುಚ್ಚ’ ಯಾರು? ಕನ್ನಡಕ್ಕೆ ಹಲವಾರು ಶ್ರೇಷ್ಠ ನಾಟಕಗಳನ್ನು ನೀಡಿದ ಸಂಸ! ಪಾಪ, ಆ ಮಹಾಶಯರಿಗೆ (ಬಹುಶಃ ಇನ್ನೂ ಹಲವಾರು ಜೂರಿ ನಾಮಾಂಕಿತರಿಗೆ) ಸಂಸರ ಪರಿಚಯ—ಪರಿಚಯವಿರಲಿ, ಹೆಸರಾದರೂ ತಿಳಿದಿತ್ತೋ ಇಲ್ಲವೋ! ನನಗನ್ನಿಸಿದ್ದಿಷ್ಟೇ: ನಮ್ಮ ಚಿತ್ರಕ್ಕೆ ಪ್ರವೇಶವನ್ನು ನಿರಾಕರಿಸಿ ಅವರುಗಳು ಅವಮಾನಿಸಿದ್ದು ನನ್ನನ್ನಾಗಲೀ ಮೂರ್ತಿಯವರನ್ನಾಗಲೀ ಅಲ್ಲ; ಕನ್ನಡದ ಒಬ್ಬ ಮೇರು ನಾಟಕಕಾರರನ್ನು. ಬಿಡಿ. ಈ ಕುರಿತು ಸಾಕಷ್ಟು ಚರ್ಚೆ ಮಾತುಕತೆಗಳು ನಡೆದವು…ಆ ವಿವರಗಳಿಗೆ ನಾನಿಲ್ಲಿ ಹೋಗುವುದಿಲ್ಲ. ಕೊನೆಗೆ ಚಿತ್ರೋತ್ಸವದ ನಿರ್ದೇಶಕರಾಗಿದ್ದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಪದಾಧಿಕಾರಿಗಳಾಗಿದ್ದ ವಿದ್ಯಾಶಂಕರ್ ಅವರ ಸಮಯೋಚಿತ ಸಹಕಾರ ಹಾಗೂ ಪ್ರೋತ್ಸಾಹದಿಂದಾಗಿ ಎರಡು ಪ್ರದರ್ಶನಗಳಿಗೆ ಅವಕಾಶ ದೊರೆಯಿತು. ಕಿಕ್ಕಿರಿದು ನೆರೆದಿದ್ದ ಸಹೃದಯರು ಚಿತ್ರವನ್ನು ಅಪಾರವಾಗಿ ಮೆಚ್ಚಿಕೊಂಡರು; ಸಂಸ ಕವಿಗಳ ದುರಂತ ಬದುಕಿನ ಕಥನವನ್ನು ತೆರೆಯ ಮೇಲೆ ಕಂಡು ಹನಿಗಣ್ಣಾದರು.

ಸಾಕಲ್ಲವೇ! ನಮ್ಮ ಚಿತ್ರ ಸಹೃದಯರ ಮನಸ್ಸನ್ನು ಗೆದ್ದಿತೆಂದರೆ ಅದೇ ನಮ್ಮ ಪ್ರಚಂಡ ಯಶಸ್ಸಲ್ಲವೇ!!

‍ಲೇಖಕರು Admin

15 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading