ದೇವನೂರು ಮಹಾದೇವರಿಗೆ ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಿಸಲಾಗಿದೆ.
ಹಿರಿಯ ವಿಮರ್ಶಕರಾದ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ದೇವನೂರರ ‘ಒಡಲಾಳ’ ಕುರಿತು ಬರೆದ ಬರಹ ಇಲ್ಲಿದೆ.
‘ಅಭಿನವ ಪ್ರಕಾಶನ’ ಪ್ರಕಟಿಸಿದ ಅನುಸಂಧಾನದಲ್ಲಿ ಇದು ಪ್ರಕಟವಾಗಿದೆ.
-ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ
ಸಮಕಾಲೀನ ಸಂದರ್ಭದಲ್ಲಿ ಸೃಜನಶೀಲ ಲೇಖಕನೊಬ್ಬ ಎದುರಿಸಬಹುದಾದ ಸಮಸ್ಯೆಗಳು ಸಾಹಿತ್ಯದ ಮೂಲಭೂತ ತಿಳಿವಳಿಕೆಗಳ ನಮ್ಮ ಅರಿವನ್ನು ಹಿಗ್ಗಿಸುವ ಸಾಧ್ಯತೆಯಿರುವುದರಿಂದ ಆ ಬಗ್ಗೆ ಚಿಂತಿಸುವ ಅಗತ್ಯವಿದೆ.
ಒಂದು ವರ್ಗದಿಂದ ಬಂದ ಲೇಖಕ ತನ್ನ ವರ್ಗದ ಸಾಮಾಜಿಕ ಪರಿಸ್ಥಿತಿ ಮತ್ತು ಚೌಕಟ್ಟಿಗೆ ಬದ್ಧನಾಗಿರುತ್ತಾನೆ. ಆದರಿಂದ ಆತ ತಪ್ಪಿಸಿಕೊಳ್ಳುವುದು ಸುಲಭ ಸಾಧ್ಯವಿಲ್ಲ. ಪ್ರತಿಯೊಬ್ಬ ಲೇಖಕನೂ ಸೃಷ್ಟಿಕ್ರಿಯೆಯ ಸಂದರ್ಭದಲ್ಲಿ ಇಂಥ ಮಿತಿಗಳನ್ನು ಮೀರಲು ಪ್ರಯತ್ನಿಸುತ್ತಾನಾದರೂ ಆ ಪ್ರಯತ್ನಗಳೇ ಕೃತಿಯ ನೆಲೆಯನ್ನೂ ನಿರ್ಧರಿಸುವ ಸಾಧನಗಳಾಗಿಬಿಡುತ್ತವೆ.
ನನ್ನ ಮಾತುಗಳನ್ನು ಹೀಗೆ ವಿವರಿಸಬಹುದು:
ಮೇಲುವರ್ಗದ ಒಬ್ಬ ಲೇಖಕ ಕೆಳವರ್ಗದವರ ಬದುಕನ್ನು ಕುರಿತು ಬರೆಯುವಾಗ ಎದುರಿಸಬೇಕಾದ ಸಮಸ್ಯೆಯನ್ನು ಗಮನಿಸಿ, ಮೇಲುವರ್ಗದ ಲೇಖಕ ಸ್ವಯಂಪ್ರೇರಣೆಯಿ೦ದ ಕೆಳವರ್ಗದ ಮಟ್ಟಕ್ಕೆ ಇಳಿದುಬಂದು ಮೇಲುವರ್ಗವನ್ನು – ಅಂದರೆ ತನ್ನನ್ನು – ಪ್ರತಿಭಟಿಸಿ ಬರೆಯುವುದರ ವಿರೋಧ ಅವನ ವ್ಯಕ್ತಿತ್ವದಲ್ಲೇ ಇರುತ್ತದೆ. ಎಷ್ಟೇ ಆದರೂ ಆತ ಮೇಲಿನ ಸಮಾಜದ ಒಂದು ಭಾಗ. ತನ್ನ ವ್ಯಕ್ತಿತ್ವದಲ್ಲೇ ಇರುವ ವಿರೋಧವನ್ನು ಗೆದ್ದು ನಂತರ ಆತ ಸಾಮಾಜಿಕ ಪ್ರತಿಭಟನೆಯ ಬರವಣಿಗೆಗೆ ಸಿದ್ಧವಾಗಬೇಕಾಗುತ್ತದೆ. ಹೀಗಾಗಿ ಅವನ ಬರವಣಿಗೆಯಲ್ಲಿ ಸಾಮಾಜಿಕ ಹೋರಾಟಕ್ಕಿಂತ ಅಂತರ೦ಗದ ವೈಯಕ್ತಿಕ ಹೋರಾಟ ಮುಖ್ಯವಾಗಿಬಿಡುವುದು ಅನಿವರ‍್ಯವಾಗುತ್ತದೆ. ಲೇಖಕನ ನಿಷ್ಠುರ ವಾಸ್ತವಿಕತೆ ಇದನ್ನೂ ಮೀರಿ ನಿಲ್ಲಬಹುದಾದ ಸಾಧ್ಯತೆಯನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಕೆಳವರ್ಗದ ಲೇಖಕನೊಬ್ಬನಲ್ಲಿ ಇಂಥ ಸಮಸ್ಯೆಯೇ ಬರುವುದಿಲ್ಲವೆಂಬುದು ನನಗೆ ಮುಖ್ಯ. ಈ ದೃಷ್ಟಿಯಿಂದ ಸಾಮಾಜಿಕ ಪ್ರತಿಭಟನೆಯಲ್ಲಿ ಆತನ ವ್ಯಕ್ತಿತ್ವ ಅಖಂಡವಾಗಿ ಕ್ರಿಯಾಶೀಲವಾಗಿರುತ್ತದೆ.

ಅಂದರೆ –
ದೇವನೂರ ಮಹಾದೇವ ಅವರಂಥ ಲೇಖಕರು ಕೆಳವರ್ಗದ ಬದುಕನ್ನು ಕುರಿತು ಬರೆಯುವಾಗಲೂ, ಮೇಲುವರ್ಗದ ಲೇಖಕನೊಬ್ಬ ಆ ಬಗ್ಗೆ ಬರೆಯುವಾಗಲೂ ಇರುವ ಮೂಲಭೂತ ವ್ಯತ್ಯಾಸವನ್ನು ಈ ಹಿನ್ನೆಲೆಯಲ್ಲಿ ನಾವು ಗಮನಿಸಬೇಕಾಗುತ್ತದೆ. ಮೇಲುವರ್ಗದ ಲೇಖಕನಿಗೆ ತನ್ನಲ್ಲೇ ಇರುವ ವಿರೋಧವನ್ನು ಗೆದ್ದುಕೊಳ್ಳುವ ಕ್ರಿಯೆ ಮುಖ್ಯವಾದರೆ, ದೇವನೂರರಂಥ ಲೇಖಕನಿಗೆ ಇತಿಹಾಸದ ನೋವಿನ, ಅಪಮಾನದ, ಕ್ರೋಧದ ಹಿನ್ನೆಲೆ ಇರುವುದರಿಂದ ಸಹಜವಾಗಿ ಅವರ ಬರವಣಿಗೆ ಸಾಮಾಜಿಕವಾಗಿ ಹೆಚ್ಚು ತೀವ್ರತೆಯಿಂದ ಕೂಡಿರುತ್ತದೆ.
ಇದು ಕೆಳವರ್ಗದ ಬದುಕನ್ನು ಕುರಿತು ಬರೆಯುವಾಗ ದೇವನೂರರಂಥ ಲೇಖಕರಿಗಿರುವ ಒಂದು ಪ್ರಮುಖ ಇತ್ಯಾತ್ಮಕ ಅಂಶ. ಆದರೆ ಇದೇ ಕೃತಿಯ ತರ-ತಮವನ್ನು ನಿರ್ದೇಶಿಸುವ ಮಾಪನವಾಗಲಾರದೆಂಬುದನ್ನು ನಾವು ಮರೆಯುವಂತಿಲ್ಲ. ಇಲ್ಲಿ ನಾನು ಬರವಣಿಗೆಯ ಸಾಧ್ಯತೆಗಳನ್ನು ಕುರಿತು ಮಾತ್ರ ವಿವರಿಸುತ್ತಿದ್ದೇನೆ.
ಏಕೆಂದರೆ ಸಾಹಿತ್ಯ ಭಾಷೆಯ ಮೂಲಕವೇ ಸಂಭವಿಸಬೇಕಾದ ಕ್ರಿಯೆಯಾದುದರಿಂದ ಸೂಕ್ಷ್ಮಗಳನ್ನು ಒಳಗೊಳ್ಳದ ಭಾಷೆ ಭಾಷಣವಾಗಿಬಿಡುತ್ತದೆ; ಸೂಕ್ಷ್ಮ ಸಂವೇದನಾಶೀಲತೆಯಿಲ್ಲದ ಹಾಗೂ ಸಾಹಿತ್ಯಕ್ಕಿರುವ ತನ್ನದೇ ಆದ ಶಿಸ್ತನ್ನು ಗ್ರಹಿಸದ ಲೇಖಕ ಉತ್ತಮ ಕೃತಿಯನ್ನು ಸೃಷ್ಟಿಸಲಾರ. ಆದ್ದರಿಂದಲೇ ಬದುಕಿನ ನಿಜ’ಗಳನ್ನು ಅರಿಯಬಯಸುವ ಲೇಖಕ ಭಾಷೆಯನ್ನು ಅತ್ಯಂತ ಎಚ್ಚರದಿಂದ ಬಳಸಿಕೊಳ್ಳುವುದು ಅನಿವರ‍್ಯವಾಗುತ್ತದೆ. ಈ ದೃಷ್ಟಿಯಿಂದ ನವ್ಯ ಸಾಹಿತ್ಯ ನಮಗೆ ಕಲಿಸಿದ ಭಾಷೆಯ ಬಗೆಗಿನ ಎಚ್ಚರ ಹಾಗೂ ಸಾಹಿತ್ಯದ ಬಗೆಗಿನ ಶಿಸ್ತು ಮಹತ್ವಪೂರ್ಣವಾದುದು. ದೇವನೂರ ಮಹಾದೇವ ಅವರು ನವ್ಯ ಸಾಹಿತ್ಯದಿಂದ ಪಡೆಯಬೇಕಾದಷ್ಟನ್ನು ಪಡೆದು, ತನ್ನ ಪರಿಸರದ ಅನುಭವ ಪ್ರಪಂಚದಿ೦ದ ಶ್ರೀಮಂತರಾಗಿ ಹೊಸಕಾಣ್ಕೆ’ಯ ಬೆಳಕಿನಲ್ಲಿ ಬರೆಯುತ್ತಿರುವ ಶಕ್ತ ಲೇಖಕರಲ್ಲೊಬ್ಬರು.
ಅವರ ಕಿರುಕಾದಂಬರಿ ಒಡಲಾಳ’ ದೇವನೂರು ಕಥಾಸಂಕಲನದ ನಂತರ ಪ್ರಕಟಗೊಂಡಿರುವ ಒಂದು ಮುಖ್ಯ ಕೃತಿ. ದೇವನೂರರ ಬರವಣಿಗೆಯ ಮುಖ್ಯಗುಣ -ವಿವರಗಳ ತಳಹದಿಯಿಂದ ಕೃತಿ ಕಟ್ಟುವಂಥದು’, ತಾವು ಕಂಡು೦ಡ ಬದುಕಿನ ಒಳವಿವರಗಳನ್ನು ದೇವನೂರರು ಸಮರ್ಪಕವಾಗಿ ಹಿಡಿದಿಡಬಲ್ಲರು. ಹೀಗೆ ಹಿಡಿದಿಡುವಾಗ ದೇವನೂರರು ಭಾಷೆಯನ್ನು ಬಳಸಿಕೊಳ್ಳುವ ರೀತಿ ಮುಖ್ಯವಾದುದು. ತನ್ನ ಜನಾಂಗದ ನುಡಿಗಟ್ಟನ್ನು ಅದರ ಎಲ್ಲ ಬನಿಯೊಂದಿಗೆ ಬಳಸಿಕೊಳ್ಳುವ ಕ್ರಮದಲ್ಲಿಯೇ – ಅವರು ಇದುವರೆಗೆ ನಾವು ಕಂಡಿರದ ಹೊಸ ಜಗತ್ತೊಂದನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ. ಒಂದು ಜನಾಂಗದ ಭಾಷೆಯ ಜೊತೆಗೇ ಅನೇಕ ಅಂಶಗಳು ಅವಿಭಾಜ್ಯವಾಗಿ ಬೆರೆತುಕೊಂಡಿರುತ್ತದೆ. ಶಕ್ತ ಲೇಖಕನೊಬ್ಬ ಭಾಷೆಯ ಈ ಸಾಧ್ಯತೆಗಳನ್ನು ಶೋಧಿಸಿದಾಗ ಸಹಜವಾಗಿ ಅದರೊಟ್ಟಿಗೇ ಆ ಜನಾಂಗದ ಒಳಬದುಕಿನ ಅನೇಕ ವಿವರಗಳು ಮೈ ತಾಳುತ್ತವೆ. ಒಡಲಾಳದಲ್ಲಿ ಇಂಥ ವಿವರಗಳು ದಟ್ಟವಾಗಿ ಹರಡಿಕೊಳ್ಳುತ್ತಲೇ ಕತೆ ಒಂದು ಆಕೃತಿಯನ್ನು ಪಡೆದುಕೊಳ್ಳುತ್ತದೆ.
ಒಡಲಾಳದಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಮೊದಲನೆಯದು ಸಾಕವ್ವ ತನ್ನ ಹುಂಜವನ್ನು ಕಳೆದುಕೊಂಡು ಅದನ್ನು ಹುಡುಕುವ ಹಿನ್ನೆಲೆಯಲ್ಲಿ ಆಕೆಯ ಸಂಸಾರದ ಚಿತ್ರ ನೀಡುವಂಥದಾದರೆ, ಎರಡನೆಯ ಭಾಗದಲ್ಲಿ ಎತ್ತಪ್ಪನ ಕಡಲೇಕಾಯಿ ಕಳ್ಳತನವಾಗಿ ಪಿ.ಸಿ. ರೇವಣ್ಣನ ನೇತೃತ್ವದಲ್ಲಿ ಪೊಲೀಸರು ಅದನ್ನು ಪತ್ತೆಹಚ್ಚುವ ಪ್ರಸಂಗದ ಚಿತ್ರಣವಿದೆ.
ಈ ಎರಡೂ ಭಾಗಗಳಿಗಿರುವ ಸಂಬ೦ಧವನ್ನು ಗಮನಿಸಿ:
ಮೊದಲನೆಯ ಭಾಗದಲ್ಲಿ ಸಾಕವ್ವನ ಹುಂಜ ಕಳ್ಳತನವಾಗಿದೆ; ಎರಡನೆಯ ಭಾಗದಲ್ಲಿ ಎತ್ತಪ್ಪನ ಕಡಲೇಕಾಯಿ ಕಳ್ಳತನವಾಗಿದೆ. ಸಾಕವ್ವನ ಹುಂಜ ಕಳ್ಳತನವಾಗಿರುವುದು ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಅದೊಂದು ಸಂಗತಿಯೇ ಅಲ್ಲ. ಏಕಾಂಗಿಯಾಗಿ ಸಾಕವ್ವ ತನ್ನ ಜೀವಧಾತು’ವೆನ್ನಿಸಿದ್ದ ಹುಂಜವನ್ನು ಹುಡುಕುತ್ತಾಳೆ. ಅವಳ ಈಹುಡುಕಾಟ’ ಸಹ ಉಳಿದವರ ನಗೆಗೆ ವಸ್ತುವಾಗುತ್ತದೆ. ಅವಳ ಹಟ್ಟಿಯವರಿಗೂ ಅದು ಗಂಭೀರ ವಿಷಯವಲ್ಲ. ಸಾಕವ್ವನ ಹುಡುಕಾಟ’ವನ್ನು ಮಹಾದೇವ ಅವರು ವಿಷಾದದ ದನಿಯ ವಿನೋದಪೂರ್ಣಲಯದಲ್ಲಿ ಚಿತ್ರಿಸುವುದರ ಮೂಲಕ ಸಾಕವ್ವನ ಸಂಕಟವನ್ನೂ ಅದು ಉಳಿದವರ ವಿನೋದಕ್ಕೆ ಒಳಗಾಗುವ ರೀತಿಯನ್ನೂ ಒಂದೇ ಬಿಂದುವಿನಲ್ಲಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಎತ್ತಪ್ಪನ ಕಡಲೇಕಾಯಿಯ ಕಳ್ಳತನದ ಪ್ರಸಂಗ ಮಾತ್ರ ಒಂದು ಮುಖ್ಯ ಘಟನೆಯಾಗುತ್ತದೆ. ಪೊಲೀಸ್ ವ್ಯವಸ್ಥೆ ಈ ಬಗ್ಗೆ ವಹಿಸುವ ಆಸ್ಥೆ ವಿಶೇಷ ರೀತಿಯದು. ಇಡೀ ಕೇರಿಯ ಗಮನವನ್ನು ಸೆಳೆದುಕೊಳ್ಳುವ ಈಘಟನೆ’ ಮೊದಲ ಭಾಗದ ಐರನಿಯೆಂಬ೦ತೆ ಕಾದಂಬರಿಯ ರಚನೆಯಿದೆ.
ಎರಡೂ ಪ್ರಸಂಗಗಳಲ್ಲಿ ಕಳೆದುಹೋಗಿರುವ ಮಾಲು ಪತ್ತೆಯಾಗುವುದಿಲ್ಲ. ಆದರೆ ಎತ್ತಪ್ಪನಿಗೆ ಆ ಬಗ್ಗೆ ಸ್ಪಷ್ಟವಾದ, ದೃಢವಾದ ಭರವಸೆ ಸಿಗುತ್ತದೆ; ಸಾಕವ್ವ ಇದ್ದ ಮತ್ತೊಂದು ಹುಂಜವನ್ನೂ ಕಳೆದುಹೋದ ಹುಂಜದ ಜೊತೆಗೆ ಕಳೆದುಕೊಂಡು ಎಲ್ಲರ ನಗೆಪಾಟಲಿಗೆ ಗುರಿಯಾಗುತ್ತಾಳೆ.
ಈ ಎರಡೂ ಘಟನೆಗಳ ಹಿಂದಿರುವ ಒಂದು ಮುಖ್ಯ ಅಂಶ ಗಮನಿಸಬೇಕಾದಂಥದು. ಕಳ್ಳತನವಾದ ಕಡಲೇಕಾಯಿ ಎತ್ತಪ್ಪನಿಗೆ ಬದುಕಿನ ಅನಿವರ‍್ಯ ಅಗತ್ಯವೇನಲ್ಲ. ಆತ ಊರಿನ ಭಾರೀ ಕುಳ. ಆತನ ವಾಸದ ಮನೆಯಿರಲಿ, ದನದ ಹಟ್ಟಿಯೇ ಸುತ್ತಮುತ್ತಲಿನ ಊರಿನಲ್ಲಿ ಎಲ್ಲೂ ಇಲ್ಲದಷ್ಟು ದೊಡ್ಡದು; ನಡೀತ ಇದ್ರೂವೆ ಮುಗಿದಂಥದು. ಅಲ್ಲಿರೋ ದನ ಎಮ್ಮೆ ಆನೆಯಂಥವು. ಇವೆಲ್ಲ ದುಡಿದು ಬೆವರಿಳಿಸಿ ರಕ್ತ ಬಸಿದು ಸಂಪಾದನೆ ಮಾಡಿದ್ದೇನಲ್ಲ; ಗುಡ್ಡೆ ಹಾಕಿರೋ ಬಡ್ಡಿ ದುಡ್ಡಲ್ಲಿ ಒಂದು ಸಿವುರು. (ಒಡಲಾಳ, ಪುಟ ೨೮). ಆದರೆ ಸಾಕವ್ವನ ಸಂಗತಿ ಹಾಗಲ್ಲ. ಕಳೆದುಹೋಗಿರುವ ಹುಂಜವನ್ನು ಸಾಕವ್ವ ಜೀವಕ್ಕಿಂತ ಹೆಚ್ಚಾಗಿ ಜೋಪಾನ ಮಾಡಿರುತ್ತಾಳೆ. ಕತೆಯ ಹಂದರದಲ್ಲಿ ಅದು ಒಂದು ರೀತಿ ಅವಳ ಜೀವಧಾತು’. ಹೀಗಿದ್ದರೂ ಕಾದಂಬರಿಯ ಒಟ್ಟು ಪರಿಣಾಮದಲ್ಲಿ ಸಾಕವ್ವನಜೀವ’ಕ್ಕಿಂತ ಎತ್ತಪ್ಪನ ಬಡ್ಡಿಯ ದುಡ್ಡಿನ ಒಂದು ಸಿವುರು’ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದು ಒಡಲಾಳ ಪ್ರಕಟಿಸುವ ಸಾಮಾಜಿಕ ದುರಂತ ವ್ಯಂಗ್ಯ. ಕಾದ೦ಬರಿಯ ಮತ್ತೊಂದು ನೆಲೆ – ಎತ್ತಪ್ಪನ ಕಡಲೇಕಾಯಿಯನ್ನು ಕದಿಯುವವನು ಸಾಕವ್ವನ ಮಗ ಕಾಳಣ್ಣ. ಅವನು ಅದನ್ನು ಕದಿಯುವುದು ಸಂಸಾರದ ಹಸಿವನ್ನು ಹಿಂಗಿಸಿಕೊಳ್ಳುವುದಕ್ಕಾಗಿ. ಅವರದು ಅಸಾಧ್ಯ ಹಸಿವು. ಎತ್ತಪ್ಪನ ಹಟ್ಟಿಯ ಕಡಲೆಕಾಯಿಯಿರಲಿ, ಆತನ ದನದ ಹಟ್ಟಿಯ ಆನೆ ಥರದ ಎಮ್ಮೆಯನ್ನೂ ಬೇಡುವಂಥ ಹಸಿವು ಅವರದು. ದುಡಿದು ತಿನ್ನಲು – ಅವರ ದುಡಿಮೆಯನ್ನು ಕೇಳುವವರಿಲ್ಲ, ಕಾಳಣ್ಣನ ತಂಗಿ ಗೌರಮ್ಮನ ಈ ಮಾತುಗಳನ್ನು ಗಮನಿಸಿ:ಕೆಲಸಕ್ಕೆ ಕರೆದ್ರಲ್ವಣ್ಣ ಹೋಗದು. ನಾವೂನು ಮೆಲ್ಬಿದ್ದು ಮೇಗಲ ಕೇರೀನೆಲ್ಲ ತಿರಿಕಂಡು ಬಂದ್ವಿ, ನೀ ಯಾರ ಅನ್ನೋರಿಲ್ಲ’ (ಒಡಲಾಳ ಪುಟ ೧೫). ಇಂಥ ಸ್ಥಿತಿಯಲ್ಲಿ ಕಾಳಣ್ಣ ಕಡಲೇಕಾಯಿ ಕದಿಯುತ್ತಾನೆ.
ಹೊತ್ತು ತಂದ ಮೂಟೆ ಕಡಲೇಕಾಯಿಯನ್ನು ತಿಂದು ಮುಗಿಸುವುದು ಸಾಧ್ಯವೇ ಇಲ್ಲವೆಂಬುದು ಪಿ.ಸಿ. ರೇವಣ್ಣನಂಥವರ ನಂಬಿಕೆ. ಆದರೆ ಸಾಕವ್ವನ ಸಂಸಾರದ ಹಸಿವು ಶತಶತಮಾನಗಳ ಹಸಿವು. ಬೆಂಕಿಯ ಮುಂದೆ ಕುಳಿತಾಗ ಸಿಪ್ಪೆ ಬೆಂಕಿಗೆ, ಕಾಳು ಹೊಟ್ಟೆಗೆ, ಕದ್ದುತಂದ ಕಡಲೇಕಾಯಿಯ ವಾಸನೆ ಸಹ ಉಳಿಯುವುದಿಲ್ಲ. ರೇವಣ್ಣನಂಥವರ ಕಲ್ಪನೆಗೆ ಸಹ ಮೀರಿದ ಈ ಹಸಿವನ್ನು ದೇವನೂರರ ಅನುಭವ ಪ್ರಪಂಚ ಮಾತ್ರ ಗ್ರಹಿಸಬಲ್ಲುದು. ಇಂಥ ಹಸಿದ ಹೊಟ್ಟೆಗಳ ಮೇಲೆ ಪೊಲೀಸರ ದಬ್ಬಾಳಿಕೆ ನಡೆಯುತ್ತದೆ. ವ್ಯವಸ್ಥೆ ಹಸಿದ ಹೊಟ್ಟೆಗಳ ಬಗ್ಗೆ ಯೋಚಿಸಲಾರದು; ಕಳ್ಳರನ್ನು ಹಿಡಿಯುವ ಸಂಭ್ರಮದಲ್ಲಿ ಸಡಗರಪಡುತ್ತದೆ. ಈ ಐರನಿ – ಒಡಲಾಳ ಪ್ರಕಟಿಸುವ ಮತ್ತೊಂದು ನೆಲೆ.
ಈ ಎಲ್ಲದರ ಹಿಂದೆ ಕೆಳವರ್ಗದಿಂದ ಗಟ್ಟಿಯಾದ ಪ್ರತಿಭಟನೆ ಗರಿಗಟ್ಟುತ್ತಿರುವ ಸೂಚನೆಯೂ ಕಾದಂಬರಿಯಲ್ಲಿದೆ. ಗುರುಸಿದ್ದನ ಆಲೋಚನಾರೀತಿಯಲ್ಲಿ ಇದು ಸ್ಪಷ್ಟ ಕಾಣಿಸುತ್ತದೆ. ತಗಡೂರಿನ ಹೋಟೆಲಿನಲ್ಲಿ ದುಡ್ಡು ಕೊಟ್ಟು ದೋಸೆ ಟೀ ಕೇಳುವ ಪ್ರಸಂಗವನ್ನು ಆತ ಸಹಜವಾಗಿ ತನ್ನವರಿಗೆ ಹೇಳಿದರೂ ಸಾಮಾಜಿಕ ಬದಲಾವಣೆಯ ಗತಿಯನ್ನು ನಾವಿಲ್ಲಿ ಗ್ರಹಿಸಬಹುದು. ದೇವನೂರರು ಈ ಪ್ರಸಂಗವನ್ನೇ ವೈಭವಿಸದೆ – ಆದರೆ ಕಾದಂಬರಿಯ ಒಟ್ಟು ಪರಿಣಾಮದಲ್ಲಿ ಮುಖ್ಯವಾಗುವಂತೆ – ವರ್ಣಿಸುವುದು ಗಮನಿಸಬೇಕಾದ ಸಂಗತಿ. ಅದರ ಜೊತೆಗೆ ಪೊಲೀಸ್ ಇನ್ಸ್ಪೆಕ್ಟರು ಪುಟಗೌರಿಯನ್ನು ವಿಚಾರಿಸುವ ಈ ಸಂದರ್ಭವನ್ನು ಗಮನಿಸಿ:
ಇನ್ಸ್ಪೆಕ್ಟರ್ ತಿರುಗಾಡುತ್ತಿದ್ದವರು ನಿಂತು ಪುಟಗೌರಿ ಕಡೆ ಬೆರಳು ತರ‍್ಸಿ ಹೇ ಹುಡ್ಗಿ ಬಾ ಇಲ್ಲಿ’ ಎಂದರು. ಪುಟಗೌರಿ ಕಣ್ಣೆತ್ತಿ ನೋಡಿ ಕಣ್ಣ ಇಳಿಸಿ ನಿಂತAತೆ ನಿಂತಳು. ಸಾಹೇಬರು ಈ ಗುಡುಗಿಕೊಂಡರು. ಪುಟಗೌರಿ ಈಗ ಬಂದು ನಿಂತು ನಡುಗಿದಳು. ಲೇ ಹುಡ್ಗಿ ನಿಜ ಹೇಳು ನಿಂಗೇನು ಮಾಡೊಲ್ಲ ಪುಟಗೌರಿ ತುಟಿ ಕಚ್ಚಿಕೊಂಡಳು. ಕಡ್ಲೆಕಾಯಿ ಮೂಟೆ ಎಲ್ಲಿ? ಪುಟಗೌರಿ ಬಾಯಿ ಬಿಡಲಿಲ್ಲ ಮಾತಾಡು..! ಪುಟಗೌರಿ ಮಾತಾಡಲಿಲ್ಲ. ಮಾತಾಡು ಚಿನಾಲಿ..! ಪುಟಗೌರಿ ಬಾಯ್ಗೆ ಸೆರಗು ತುರುಕಿಕೊಂಡಳು. ಇನ್ಸ್ಪೆಕ್ಟರ್ ರೂಲುಗೋಲು ಪುಟಗೌರಿ ಗಲ್ಲವನ್ನು ಸವರುತ್ತಿತ್ತು. ಪುಟಗೌರಿ ಮಾತುಗಳೂ ಹೊಟ್ಟೆ ಒಳಗೆ ಅವಿತುಕೊಳ್ಳುತ್ತಿದ್ದುವು. ಗುರುಸಿದ್ದು ಇನ್ಸ್ಪೆಕ್ಟರ ದುರುಗುಟ್ಟಿ ನೋಡುತ್ತಿದ್ದನು. ಸಾಹೇಬರು ರೂಲುಗೋಲನ್ನು ಪುಟಗೌರಿ ಗಲ್ಲದಿಂದ ತಗದು ಗುರುಸಿದ್ಧನ ಕಣ್ದಿಕ್ಕೆ ಚಾಚಿಮಗ ನೋಡದ ನೋಡು ನೋಡದ, ಕಣ್ಗುಡ್ಡೆ ಮೀಟಾಕ್ತೀನಿ.. ಹೇ..!’ ಎಂದು ಹಲ್ಲು ನೊರಗುಟ್ಟಿದರು. ಗುರುಸಿದ್ದು ನೋಟಕ್ಕೆ ಸಾಹೇಬರ ಒಂದೆರಡು ರೋಮಗಳು ಅಳುಕು ಪಟ್ಟಿದ್ದುವು (ಒಡಲಾಳ ಪುಟ ೪೮).
ಗುರುಸಿದ್ದುನ ಈ ತೀಕ್ಷ್ಣ ನೋಟದ ಪ್ರತಿಭಟನೆ ವ್ಯವಸ್ಥೆಯನ್ನು ಅಲ್ಲಾಡಿಸುವ ಶಕ್ತಿಯುಳ್ಳದ್ದೆಂಬ ಸೂಚನೆ ಇಲ್ಲಿದೆ. ಒಡಲಾಳದಲ್ಲಿ ಸಾಕವ್ವ ಹಾಗೂ ಆಕೆಯ ಮೊಮ್ಮಗ ಶಿವೂನ ಸಂವಾದದ ಚಿತ್ರವೊಂದಿದೆ.
ಈ ಸಂದರ್ಭದಲ್ಲಿಯೇ ಅದನ್ನೂ ಗಮನಿಸಬಹುದು:
ಸಾಕವ್ವ ಮುಸ್ಸಂಜೆಯ ಕತ್ತಲಿನಲ್ಲಿ ತನ್ನ ಹುಂಜವನ್ನು ಹುಡುಕಲು ಹೊರಟು ಜೊತೆಗೆ ತನ್ನ ಮೊಮ್ಮಗ ಶಿವೂನನ್ನು ಕರೆಯುತ್ತಾಳೆ. ಆತ ತನಗೆ ಹೆದರಿಕೆ ಅನ್ನುತ್ತಾನೆ. ತಾನಿರುವಾಗ ಹೆದರಿಕೆಯೇಕೆಂದು ಹೇಳಿದ ಸಾಕವ್ವ ಸಾವಿಗೂ ಸಹ ತಾನು ಹೆದರುವಂಥವಳಲ್ಲ ಎನ್ನುತ್ತಾಳೆ. ಸಾವಿಗೇ ಆಹ್ವಾನ ನೀಡುವಂಥವಳು ಅವಳು. ಏಕೆಂದರೆ ಆಕೆ ನರಲೋಕದಲ್ಲಿ ಪಟ್ಟ ಕಷ್ಟಕ್ಕಿಂತ ಹೆಚ್ಚಾಗಿ ಯಮಲೋಕದಲ್ಲಿ ಇನ್ನೆಂಥ ಶಿಕ್ಷೆ ಕೊಟ್ಟಾರು?
ಇವಳ ಧರ‍್ಯಕ್ಕೆ ಮೆಚ್ಚಿದ ಯಮಧರ್ಮ ವರಕೇಳಲು ಹೇಳಿದರೆ ಸಾಕವ್ವ ಕೇಳುತ್ತಾಳೆ: ನೋಡು ಸ್ವಾಮಿ. ನನ್ನ ಮೊಮ್ಗೂಸು ನರಲೋಕದಲ್ಲಿ ರಾಜ್‌ಭಾರ ಮಾಡುವಂಥ ವರಕೊಡು. ಅಷ್ಟು ಸಾಕು ಅಂತೀನಿ’ (ಒಡಲಾಳ ಪುಟ ೨೧) ಗುರುಸಿದ್ದುವಿನ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾಕವ್ವನ ಈ ಆಸೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಒಂದು ರೀತಿಯಲ್ಲಿ ಕಾದಂಬರಿಯ ಒಳಲಯದಲ್ಲಿ ಪ್ರಕಟವಾಗುವಒಡಲಾಳ’ದ ಆಶಯವಿದು ಅನ್ನಿಸುತ್ತದೆ.
ಬರವಣಿಗೆಯ ಒಟ್ಟು ಹದದಲ್ಲಿ ಹೆಚ್ಚಿನ ಸಂಯಮವನ್ನು ಪ್ರಕಟಿಸಿರುವ ಮಹಾದೇವ ಅವರು ಕಾದಂಬರಿಯ ಕಡೆಯ ಭಾಗದಲ್ಲಿ ಪೊಲೀಸರ ದಬ್ಬಾಳಿಕೆಯ ಸನ್ನಿವೇಶದಲ್ಲಿ ಸಾಕವ್ವನ ಸಂಸಾರದ ಸ್ಥಿತಿಯನ್ನು ವರ್ಣಿಸುವಾಗ ವಿವರಗಳಲ್ಲಿ ಹೆಚ್ಚು ಉತ್ಸುಕರಾದಂತೆ ಕಂಡುಬರುತ್ತದೆ. ಹೀಗಾಗಿ ಮೊದಲ ಭಾಗದಲ್ಲಿ ಧ್ವನಿಪೂರ್ಣವಾಗಿ ಮೂಡಿಬಂದ ಸಾಕವ್ವನ ಸಂಸಾರದ ಸ್ಥಿತಿಯ ಚಿತ್ರ ಇಲ್ಲಿ ವಾಚ್ಯವಾಗಿದೆ ಅನ್ನಿಸುತ್ತದೆ.






0 Comments