ಶೂ ಬಿಚ್ಚಿ, ಹೊಸಿಲನ್ನು ಕೈಯಿಂದ ಮುಟ್ಟಿ ಹಣೆಗಿಟ್ಟು ನಮಸ್ಕರಿಸಿದೆ..

kalimuttu-nallatambi

ಕಾಳಿಮುತ್ತು ನಲ್ಲತಂಬಿ 

ಷಹನಾಯ್ ಎಂಬ ಒಂದು ಸಂಗೀತ ವಾದ್ಯ ಇದೆ ಎಂಬುದು ಜಗತ್ತಿನ ಅನೇಕರಿಗೆ ತಿಳಿದು ಬಂದಿರುವುದು ಉಸ್ತಾದ್ ಬಿಸ್ಮಿಲ್ಲಾಖಾನ್ ಅವರಿಂದ. ನಮ್ಮ ದೇಶದ ಹಿರಿಮೆ ಗರಿಮೆಗಳನ್ನು ಜಗತ್ತಿಗೆ ಕೊಂಡೊಯ್ದ ಅನೇಕ ರಾಯಬಾರಿಗಳಲ್ಲಿ ಅವರೂ ಒಬ್ಬರು.

bismilla-khan-kalimuttu-nallatambi3 ಇದೇ ತಿಂಗಳು ಐದರಿಂದ ಹನ್ನೊಂದರವರೆಗೆ ಲಲಿತ ಕಲಾ ಅಕಾಡೆಮಿಯ ವತಿಯಿಂದ ವಾರಣಾಸಿಯಲ್ಲಿ ಆಯೋಜಿಸಲ್ಪಟ್ಟಿದ್ದ ಚಿತ್ರಕಲಾ ಮತ್ತು ಫೋಟೋಗ್ರಾಫರ್ ಕ್ಯಾಂಪಿಗೆ ಭಾರತದ ಸುಮಾರು 40 ಚಿತ್ರಕಲಾಕಾರರು, 10 ಫೋಟೋಗ್ರಾಫರ್ ಗಳು ಬಂದಿದ್ದರು. ಅದರಲ್ಲಿ ಫೋಟೋಗ್ರಾಫರಾಗಿ ಭಾಗವಹಿಸುವ ಅವಕಾಶ ನನಗೆ ದೊರಕಿತು.

ಅಲ್ಲಿದ್ದ ಐದು ದಿನಗಳಲ್ಲಿ ಒಂದು ದಿನ ಬಿಸ್ಮಿಲ್ಲಾಖಾನ್ ಅವರ ಮನೆಯನ್ನು ಹುಡುಕಿಕೊಂಡು ನಾನು ಗೆಳೆಯರಾದ ಮಂಜುನಾಥ ಇಬ್ಬರೂ ಹೊರಟೆವು. ಒಬ್ಬ ಆಟೋದವನನ್ನು ಕೇಳಿದಾಗ ‘ಆಯಿಯೇ ಸಾಬ್, ಹಂ ಛೋಡ್ದೇಂಗೆ’ ಎಂದು ಕರೆದೊಯ್ದು, ಗದೋಲಿಯಾ ಬಳಿಯಿರುವ ಚೌಕಿನ ಒಂದು ಸಣ್ಣ ಓಣಿಯಲ್ಲಿರುವ ಅವರ ಮನೆಗೆ ದಾರಿ ಹೇಳಿದನು. ನಾವು ಹೋಗಿ ಅವರ ಮನೆಯ ಮುಂದೆಯೇ ನಿಂತಿದ್ದರೂ ನಾನು ಊಹಿಸಿಕೊಂಡಿದ್ದ ಭವ್ಯ ಬಂಗಲೆ ಕಾಣಲಿಲ್ಲ. ಮತ್ತೊಬ್ಬರನ್ನು ಕೇಳಿದಾಗ ನೀವು ನಿಂತಿರುವುದೇ ಅವರ ಮನೆಯ ಮುಂದೆ ಎಂದು ಹೇಳಿದರು.

ನಾವು ಅವರ ಮನೆಯ ಬಾಗಿಲಲ್ಲಿ ನಿಂತು ಕರೆದಾಗ ಮಧ್ಯವಯಸ್ಕರೊಬ್ಬರು ಬಂದರು. ಅವರಿಗೆ ನಾವು ಬೆಂಗಳೂರಿನಿಂದ ಬಂದಿರುವುದಾಗಿಯೂ, ಬಿಸ್ಮಿಲ್ಲಾ ಖಾನ್ ಅವರ ಮನೆಯನ್ನು ನೋಡಬೇಕೆಂದೂ ಹೇಳಿದಾಗ ಹಸನ್ಮುಖರಾಗಿ ನಾನು ಅವರ ಮಗ, ಒಳಗೆ ಬನ್ನಿ ಎಂದರು. ಹೊಸಿಲ ತುಳಿಯ ಹೋದವನು ಒಂದು ಅರೆ ಕ್ಷಣ ನಿಂತೆ. ನನ್ನ ಶೂ ಬಿಚ್ಚಿ, ಹೊಸಿಲನ್ನು ಕೈಯಿಂದ ಮುಟ್ಟಿ ಹಣೆಗಿಟ್ಟು ನಮಸ್ಕರಿಸಿದೆ.

ಒಬ್ಬ ಮಹಾನ್ ವ್ಯಕ್ತಿಯ ಮನೆಗೆ ಇದೇ ಮೊದಲ ಬಾರಿ ಹೋಗುವುದು. ಮನೆಯ ಒಳಗೆ ಹೋಗಿ ಕುಳಿತಾಗ ಕಿವಿಗೆ ಕೇಳಿಸಿದ್ದು ಷಹನಾಯಿಯ ಸುನಾದ. ಯಾರು ನುಡಿಸುತ್ತಿರುವಂತೆ ಕಾಣಿಸಲಿಲ್ಲ. ಅಲ್ಲಿಯ ಗೋಡೆ ಬಾಗಿಲುಗಳೇ ಪ್ರತಿಧ್ವನಿಸುತ್ತಿರಬೇಕು. ಸುತ್ತಮುತ್ತ ಕಣ್ಣಾಯಿಸಿದಾಗ ಗೋಡೆಯ ತುಂಬಾ ದೇಶ ವಿದೇಶಗಳ ಪ್ರಮುಖರೊಂದಿಗೆ ಬಿಸ್ಮಿಲ್ಲಾಖಾನರ ಫೋಟೋಗಳು. ಎಲ್ಲಿ ಕುಸಿದು ಹೋಗುವುದೋ ಎಂಬಂತಿದ್ದ ಆ ಮನೆಯ ಗೋಡೆಗಳಿಗೆ ಆ ಫೋಟೋಗಳೇ ಆದಾರಕೊಟ್ಟು ನಿಲ್ಲಿಸಿದಂತಿತ್ತು.

ಅವರ ನಾಲ್ಕನೆಯ ಮಗ ಖಾಜಿಂಹಸನ್, ಮೊಮ್ಮಕ್ಕಳಾದ ವಾಲಿ ಹಸನ್, ನಜೀರ್ ಅಬ್ಬಾಸ್ ಇವರೊಂದಿಗೆ ಬಿಸ್ಮಿಲ್ಲಾ ಖಾನರ ಬಗ್ಗೆ ಒಂದಿಷ್ಟು ಮಾತು. ಟೀ ತೆಗೆದುಕೊಳ್ಳಿ ಎಂದಾಗ ನಾವು ಸಂಕೋಚದಿಂದ ಬೇಡ ಎಂದರೂ ತಂದು ಕೊಡುತ್ತಾ ಅವರ ಒಬ್ಬ ಮೊಮ್ಮಗ ಹೇಳಿದ್ದು ‘ಮೆಹಮಾನ್ ಭಗವಾನ್ ಹೋತಾ ಹೈ’. ನನ್ನಿಂದ ಅರಿಯದೆ ಬಂದ ಮಾತು ‘ಭಗವಾನ್ ಕಿ ಘರ್ ಮೇ ಹಂ ಮೆಹಮಾನ್ ಹೈ’. ಅವರ ಅನುಮತಿಯಿಂದ ಕೆಲವು ಫೋಟೋಗಳನ್ನು ತೆಗೆದುಕೊಂಡು ಬಂದೆವು.

ಹಿಂತಿರುವಾಗ ರಸ್ತೆಯ ಮೂಲೆಯಲ್ಲಿ ಕಂಡಿತು ಆ ಬೀದಿಯ ಹೆಸರು, ‘ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮಾರ್ಗ್.’ ಅಡ್ಡ ರಸ್ತೆ ಎಂದೂ ಸಹ ಹೇಳಲಾಗದ ಆ ಓಣಿಯನ್ನು ಮಾರ್ಗ ಎಂದು ಕರೆದದ್ದು ಸೂಕ್ತ ಎಂದು ಕಂಡಿತು. ಅಲ್ಲಿಂದ ಅವರ ಮೂರನೆಯ ಮಗನಾದ ಜಮೀರ್ ಹುಸೈನ್ ಮನೆಗೆ ಹೋದೆವು. ಅಲ್ಲಿ ಅವರನ್ನು, ಅವರ ಮಗ ಅಫಾಕ್ ಹೈದಾರ್, ಮೊಮ್ಮಗಳು ಮೆಹನಾಜ್ ಅವರ ಬೇಟಿಯಾಯಿತು.

bismilla-khan-kalimuttu-nallatambi2ಜಮೀರ್ ಹುಸೈನ್ ಅವರ ವಯಸ್ಸು ಸುಮಾರು 70ರ ಆಸುಪಾಸಿರಬಹುದು. ಅವರು ನಮಗಾಗಿ ಕೆಲವು ತುಕಡಗಳನ್ನು ನಾವು ಕೇಳದೆಯೇ ಹಾಡಿತೋರಿಸಿದರು. ಅದನ್ನು ನಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡೆವು. ಅಲ್ಲಿಯೂ ಚಾಯ್ ಬಂದಿತು. ಬೇಡ ಎಂದರೂ ಕೇಳಲಿಲ್ಲ. ಮನೆಗೆ ಬಂದವರಿಗೆ ಟೀ ಕೊಡದೆ ಕಳಿಸಬಾರದೆಂದು ಬಿಸ್ಮಿಲ್ಲಾಖಾನರು ಅವರ ಮಕ್ಕಳಿಗೆ ಆಗಾಗ ಹೇಳುವರೆಂದು ಜಮೀರ್ ಹುಸೈನ್ ಹೇಳಿದರು. ಬೀಳ್ಕೊಡುವಾಗ ಅವರ ಕೈಗಳನ್ನು ಎತ್ತಿ ನಮ್ಮ ಹಣೆಗೆ ಮುಟ್ಟಿಸಿಕೊಂಡು ಹೊರಟೆವು.

ಗಂಗೆಯ ದಡದಲ್ಲಿ ಕುಳಿತು ಒಮ್ಮೊಮ್ಮೆ ಅವರು ಷಹನಾಯಿ ನುಡಿಸುವರಂತೆ. ಆ ನಾದಕ್ಕೆ ಗಂಗೆ ಬಳುಕುತ್ತ ಕುಣಿಯುತ್ತ ಹರಿದಿರಬೇಕು. ಬನಾರಸಿನ ಬಾಲಾಜಿ ಮಂದಿರದಲ್ಲಿ ಅವರ ಷಹನಾಯಿ ಸುಪ್ರಭಾತಗಳನ್ನು ಹಾಡುತ್ತಿದ್ದವಂತೆ. ಲಕ್ಷ್ಮಿ ಶ್ರೀನಿವಾಸರು ‘ಇನ್ನೂ ನುಡಿಸಲಿ ಕೇಳುವ ‘ಎಂದು ಅರೆ ನಿದ್ರೆಯಲ್ಲಿ ಮಂದಹಾಸ ಬೀರುತ್ತ ಮಲಗೇ ಇದ್ದಿರಬಹುದು.

ಅಮೇರಿಕದ ಶ್ರೀಮಂತರೊಬ್ಬರು ಅಮೇರಿಕದಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪಿಸುವ ಸಲುವಾಗಿ ಅವರಿಗೆ ಮನೆ ಮತ್ತು ನಾಗರೀಕತ್ವದ ಆಫರ್ ಕೊಟ್ಟಾಗ ‘ಅಲ್ಲಿ ಗಂಗೆ ಹರಿಯುತ್ತಾಳೆಯೆ, ನನ್ನ ಕಾಶಿ ವಿಶ್ವನಾಥ ಇದ್ದಾನೆಯೇ?’ ಎಂದು ಹೇಳಿ ನಿರಾಕರಿಸಿದರಂತೆ. ಗಂಗೆ ಪುಣ್ಯಮಾಡಿದ್ದಳು.

ಇರಾನಿನಲ್ಲೊಮ್ಮೆ ಕೆಲವರು ‘ಸಂಗೀತ ಮುಸಲ್ಮಾನ ಧರ್ಮಕ್ಕೆ ಬಾಹಿರವಾದುದು ಅದನ್ನು ನೀವು ಹೇಗೆ ಅಭ್ಯಾಸ ಮಾಡುತ್ತಿರುವಿರಿ’ ಎಂದಾಗ ಅವರ ಷಹನಾಯಿಯಲ್ಲಿ ನಮಾಜಿನ ಕೆಲವು ಸಾಲುಗಳನ್ನು ನುಡಿಸಿ ತೋರಿಸಿದರಂತೆ. ಅದನ್ನು ಕೇಳಿದ ಅವರು ಮೌನದಿಂದ ದಂಗಾದದ್ದು ಮಾತ್ರವಲ್ಲ ನಂತರ ಅವರ ಹೆಸರಿನಲ್ಲಿ ಒಂದು ದೊಡ್ಡ ಸಭಾಂಗಣವನ್ನೇ ಟೆಹರಾನಿನಲ್ಲಿ ಕಟ್ಟಿದರು.

ವಾರಣಾಸಿಯಿಂದ ಮನೆಗೆ ಬಂದಾಗ ಬೆಳಗಿನ ಜಾವ 4 ಗಂಟೆ. ಬಂದವನೇ ನನ್ನಲ್ಲಿದ್ದ ಬಿಸ್ಮಿಲ್ಲಾ ಖಾನ್ ಷಹನಾಯಿ ವಾದನದ ಡಿಸ್ಕ್ ತೆಗೆದು ಕೇಳಿದೆ. ರಾಗ ಮಾಲ್ಕೌಂಸಿನ ಕೆಲವು ರಾಗಗಳನ್ನು ಕೇಳುತ್ತಿದ್ದಾಗ ಆ ರಾಗದ ಆಧಾರಿತ ಹಲವು ಹಿಂದಿ ಸಿನಿಮಾ ಹಾಡುಗಳ ನೆನಪಾಯಿತು. ‘ಆದಾ ಹೈ ಚಂದ್ರಮಾ ರಾತ್ ಆದಿ, ರಹನ ಜಾಯೆ ತೇರಿಮೆರಿ ಬಾತ್ ಆದಿ’.

bismilla-khan-kalimuttu-nallatambi7

bismilla-khan-kalimuttu-nallatambi4

bismilla-khan-kalimuttu-nallatambi5

bismilla-khan-kalimuttu-nallatambi6

‍ಲೇಖಕರು Admin

December 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಬ್ಯೂಟಿಫುಲ್ ಸರ್

    ಪ್ರತಿಕ್ರಿಯೆ
  2. anupama prasad

    ಆಪ್ತ ಬರಹ. ಬಿಸ್ಮಿಲ್ಲಾ ಖಾನರ ಮನೆಯೊಳಗೆ ಕುಳಿತ ಅನುಭೂತಿ ದೊರೆಯಿತು.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: