ಶಿಶುನಾಳ ಶರೀಫರ ‘ಗಿರಣಿ ವಿಸ್ತಾರ ನೋಡಮ್ಮ’ ; ಕಾರ್ಮಿಕ ಚಳವಳಿ ಹಿನ್ನೆಲೆಯಲ್ಲಿ..

ಡಾ ವಡ್ಡಗೆರೆ ನಾಗರಾಜಯ್ಯ

‘ಗಿರಣಿ ವಿಸ್ತಾರ ನೋಡಮ್ಮ’ ಪದ್ಯವು ಶಿಶುನಾಳ ಶರೀಫರ ಮಹತ್ವದ ರಚನೆಗಳಲ್ಲೊಂದು. ಆಧುನಿಕ ಕಾಲದ ಕೈಗಾರೀಕರಣದ ಕೊಡುಗೆಯಾದ ಗಿರಣಿಯ ರೂಪಕದ ಮೂಲಕ ಮಾನವನ ದೇಹವನ್ನು ಗಿರಣಿಯೊಂದಿಗೆ ಸಮೀಕರಿಸಿ ಅಧ್ಯಾತ್ಮಿಕ ಸ್ತರಗಳಲ್ಲಿ ಆಧುನಿಕ ಬದುಕಿನ ವಿದ್ಯಮಾನಗಳ ಅರ್ಥವನ್ನು ವ್ಯಂಜಿಸಿದ್ದಾರೆ. .ದೇಹವನ್ನು ಯಂತ್ರದೊಂದಿಗೆ ಸಮೀಕರಿಸಿರುವುದರ ಹಿನ್ನೆಲೆಯಲ್ಲಿ ವಸಾಹತುಶಾಹಿಯ ಕೈಗಾರೀಕರಣದ ರಾಜಕಾರಣವನ್ನು ಪರಿಶೀಲಿಸಬೇಕಾಗುತ್ತದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ್ ೭ರಂದು ಜನಿಸಿದ ಶರೀಫರು, ಓಡಾಡಿದ ಒಡನಾಡಿದ ಉತ್ತರ ಕರ್ನಾಟಕದ ಸೀಮೆಯಲ್ಲಿ ಹತ್ತಿ ಗಿರಣಿಗಳು ಬಂದ ಪರಿಣಾಮವಾಗಿ ಚರಕ ರಾಟೆ ತಕಲಿಗಳಿಂದ ಲಡಿನೂಲು ತೆಗೆಯುವ ಜೇಡರ ಕಾಯಕದ ಪರಿಕರಗಳು ಪಲ್ಲಟಗೊಂಡವು. ಕೈಮಗ್ಗದಲ್ಲಿ ವಸ್ತ್ರಗಳನ್ನು ನೇಯುತ್ತಿದ್ದ ದೇಶೀಯ ತಂತ್ರಜ್ಞಾನದ ಜಾಗಕ್ಕೆ ಆಗಿನ ಧರಣಿಪತಿಯಾದ ವಿಕ್ಟೋರಿಯಾ ರಾಣಿಯು ಕರುಣತೋರಿ ಚೀನಾದಿಂದ ಗಿರಣಿಯನ್ನು ಆಮದು ಮಾಡಿಕೊಂಡು ತನ್ನ ಅಧೀನದಲ್ಲಿದ್ದ ದ್ರವೀಡ ನಾಡಿನಲ್ಲಿ ಅಳವಡಿಸಿದ ಆಧುನಿಕ ಜ್ಞಾನವು ನಮ್ಮವರಿಗೆ ಘನತರವಾದ ಚೋದ್ಯವಾಗಿ ಕಾಣಿಸುತ್ತದೆ.

ಇಂತಹ ಚೋದ್ಯಕ್ಕೆ ಬೆರಗಾದ ಶರೀಫರು ‘ಶರಣೆ ಕೂಡಮ್ಮ’ ಎಂದು ತನ್ನ ಸಂಗಾತಿಯ ಬಳಿ ಬಿನ್ನವಿಸಿಕೊಳ್ಳುತ್ತಾರೆ.’ಶರಣೆ ಕೂಡಮ್ಮ’ ಎಂದಾಗ ಇಲ್ಲಿ ಶರೀಫರು ಹೇಳುವುದು ಅನ್ಯ ದೇಶದ ವಿಕ್ಟೋರಿಯಾ ರಾಣಿಯು ಆಮದು ಮಾಡಿಕೊಂಡಿರುವ ಬಿಳಿಯರ ಜ್ಞಾನವು ನಮ್ಮ ದ್ರವೀಡ ಕರಿ ನೆಲದಲ್ಲಿ ಕಸಿಗೊಂಡು ಬೆರೆಯಬೇಕೆಂಬ ಇಂಗಿತ ಒಂದು ಕಡೆಯಾದರೆ, ನಮ್ಮ ಶರೀಫರ ಸಂಗಾತಿ ಶರಣೆಯೂ ಸಹ ಕಾಲದ ಬದಲಾವಣೆಯ ಹೊಸ ನೀರಿನೊಂದಿಗೆ ಕೂಡಬೇಕೆಂಬ ಕರೆಯೂ ವ್ಯಕ್ತವಾಗಿದೆ.

ಕಾಲದ ಪ್ರಭಾವಗಳು ವಿಶ್ವಾತ್ಮಕ ನೆಲೆಯಲ್ಲಿ ವಿಕಸನಗೊಳ್ಳುವುದು ತುಂಬಾ ಕಷ್ಟಕರವಾದ ಸಂಗತಿ ಮತ್ತು ಅಷ್ಟೇ ದೀರ್ಘಕಾಲೀನ ಪ್ರಕ್ರಿಯೆಯಾಗಿದೆ, ಮನುಷ್ಯನು ತನ್ನ ದೇಹವನ್ನು ಗಿರಣಿಯಂತೆಯೇ ಒಂದು ಯಂತ್ರವೆಂದು ಭಾವಿಸಿದಾಗ ಆತನ ಸೃಜನಶೀಲ ಹಂಬಲಗಳು ಕ್ರಮೇಣವಾಗಿ ಕ್ಷಯಗೊಳ್ಳುತ್ತವೆ. ಹೀಗೆ ಸೃಜನಶೀಲತೆಯನ್ನು ನೀಗಿಕೊಂಡು ತಾನೂ ಒಂದು ಯಂತ್ರವಾಗಿ ತನ್ನ ಅಸ್ತಿತ್ವವನ್ನು ಕುಗ್ಗಿಸಿಕೊಳ್ಳುವ ಹಾಗೂ, ಹೊಸ ಜ್ಞಾನದೊಂದಿಗೆ ಕೂಡಿ ಬೆರೆಯುವ ಯಾಂತ್ರಿಕ ಕೆಲಸವನ್ನು ಅಧ್ಯಾತ್ಮಾನುಭೂತಿಯ ಪ್ರಜ್ಞೆಯ ಸ್ತರದಲ್ಲಿ ಯಂತ್ರದ ಮೂರ್ತ ಕಲ್ಪನೆಗಳಿಂದ ಅತೀತಗೊಳಿಸುವ ಆತ್ಮ ಚೈತನ್ಯವನ್ನಾಗಿ ರೂಪಾಂತರಿಸಿಕೊಳ್ಳುವ ಬಗೆಯನ್ನು ಶರೀಫರು ಈ ಪದ್ಯದ ಮೂಲಕ ಶೋಧಿಸಿದ್ದಾರೆ.

ಇಲ್ಲಿಯವರೆಗಿನ ಕಾಲಯಾನದಲ್ಲಿ ತಾನು ಕಾಣದಿದ್ದ ಹತ್ತಿ ಗಿರಣಿಯನ್ನು ಮೊದಲಿಗೆ ಕಂಡ ಶರೀಫರು ಆ ಯಂತ್ರದ ಕಾರ್ಯ ವೈಖರಿಯನ್ನು ಗಮನಿಸುತ್ತಾರೆ. ಜಲ ಅಗ್ನಿ ವಾಯು ಒಂದಾಗಿ ನೆಲದಿಂದ ಗಗನಕ್ಕೆ ಹೊಗೆ ಉಗುಳುವ ಗಿರಣಿಯ ದೊಡ್ಡ ಚಿಮಣಿಯನ್ನು, ವಾಯುಮಂಡಲದಲ್ಲಿ ಚೆಲುವಾದ ಕುಂಭಸಾಲು ಪೇರಿಸಿದಂತೆ ಗಿರಣಿಯಿಂದ ಹೊರಹೊಮ್ಮಿ ಕಾಣಿಸುವ ಹೊಗೆಯ ಬಿಂಬವನ್ನು, ಚಕ್ರದ ತಿಗರಿಯಿಂದ ತಾನುಗಟ್ಟಳೆ ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿದ್ದ ಬಟ್ಟೆಯನ್ನು, ಯಂತ್ರದೊಂದಿಗೆ ಯಾಂತ್ರಿಕವಾಗಿ ದುಡಿಯುತ್ತಿದ್ದ ಮಾನವರ ದೇಹಗಳನ್ನು ಹೀಗೆ ಗಿರಣಿಯ ಸುತ್ತಲ ಎಲ್ಲವನ್ನೂ ನಿರುಕಿಸಿ ನೋಡಿದ ಶರೀಫರು, ಹೊರಗಿನ ಗಿರಣಿಯೊಂದಿಗೆ ತನ್ನದೇ ದೇಹವೆಂಬ ಗಿರಣಿಯ ಒಳಾಯಗಳನ್ನು ಅಂತರ್ವಿಚಕ್ಷಿಯಾಗಿ ನೋಡಿಕೊಂಡಾಗ ಆದ ಅನುಭವವು ಸಮಾಜೋ ಅಧ್ಯಾತ್ಮದ ಅನುಭೂತಿಯಾಗಿ ದಕ್ಕುತ್ತದೆ.

ಆ ಅನುಭವವನ್ನು ಶರೀಫರು ಅಧ್ಯಾತ್ಮಿಕ ಪರಿಭಾಷೆಯಲ್ಲಿ ‘ಗಿರಣಿ ವಿಸ್ತಾರ ನೋಡಮ್ಮ’ ಪದ್ಯದ ಮೂಲಕ ಕಟ್ಟಿ ಕೊಟ್ಟಿದ್ದಾರೆ.—-
ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||
ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||
ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||
ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||
ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||
ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ ಶರೀಫರು, ಶಿಕ್ಷಕ ವೃತ್ತಿಯನ್ನು ಬಿಟ್ಟು ಆಧ್ಯ್ಶಾತ್ಮದ ಚಿಂತನೆಯಲ್ಲಿ ತೊಡಗಿಸಿಕೊಂಡು ಗುರು ಗೋವಿಂದಭಟ್ಟರಿಂದ ಶಿಶುಮಗನ ದೀಕ್ಷೆ ಪಡೆದ ಬಳಿಕ ತಮ್ಮ ಜೀವನವನ್ನು ಸಂಪೂರ್ಣ ಆಧ್ಯಾತ್ಮ ಸಾಧನೆಗೆ ಮುಡುಪಿಡುತ್ತಾರೆ. ಇಂತಹ ಅಧ್ಯಾತ್ಮಿಕ ಪ್ರಯಾಣದಲ್ಲಿ ಶರೀಫರು ಹಾಡಿದ ಪದಗಳು ಉತ್ತರ ಕರ್ನಾಟಕದ ಆಡುಭಾಷೆಯ ಶೈಲಿಯಲ್ಲಿ ನುಡಿಮೈ ಪಡೆದುಕೊಂಡಿವೆ.

ಮನುಷ್ಯನ ಶ್ರಮ ಮತ್ತು ಸೃಜನಶೀಲ ಪ್ರತಿಭೆಯನ್ನೊಳಗೊಂಡ ಪಾರಂಪರಿಕ ದೇಶಿ ತಂತ್ರಜ್ಞಾನದ ತಿಗರಿ ಕಲೆಯನ್ನು ಪಲ್ಲಟಗೊಳಿಸಿ ಉದ್ಯಮಪತಿಗಳ ಕೈಗಳಲ್ಲಿ ಮಾರುಕಟ್ಟೆ ಜ್ಞಾನವಾಗಿ ಉನ್ನಯನಗೊಂಡ ಗಿರಣಿ ವಿದ್ಯೆಯು ಜನ ಸಾಮಾನ್ಯರನ್ನು ಕೇವಲ ದುಡಿಯುವ ಯಂತ್ರಗಳನ್ನಾಗಿ ಮಾರ್ಪಡಿಸಿಕೊಂಡಿತು. ಆಧುನಿಕ ಯಂತ್ರ ಮತ್ತು ಸೃಜನಶೀಲರಾಹಿತ್ಯ ದೈಹಿಕ ಶ್ರಮದ ಮಿಶ್ರಣದಲ್ಲಿ ‘ಆಧುನಿಕ ಗಿರಣಿಯ ವಿದ್ಯೆ’ ಯ ಎದುರು ದುಡಿಯುವ ವರ್ಗಗಳು ಬೇರುಗಳ ಬಲ ಕಳೆದುಕೊಂಡು ಬಾಡುವ ಸಸ್ಯಗಳಂತಾದರು. ಇಂತಹ ಕರುಣಾಜನಕ ಸಂಕಟವನ್ನು ಕಣ್ಣಾರೆ ಕಂಡ ಶರೀಫರು, ‘ಒಳಗೊಂದು ಬೇರೆ ಆಕಾರ ತಿಳಕೋ ಚಮತ್ಕಾರ…. ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು’ ಎಂದು ಹೊರಗಿನ ಕ್ಲೇಶ ನಿವಾರಿಸಿಕೊಳ್ಳಲು ಒಳಗಿನ ಅಂತರಂಗದ ಸೂತ್ರಧಾರನನ್ನು ಕಾಣುವ ಬಗೆಯನ್ನು ತಿಳಿಸಿಕೊಡುತ್ತಾರೆ. ಒಳಗಿನ ಸೂತ್ರಧಾರನಿಗೆ ಹೊರಗಿನ ಲೌಕಿಕದ ಕೇಡುಗಳು ಬಾಧಿಸಲಾರವು.

ಹೊರಗೆ ಗಿರಣಿ ಮಾಲೀಕರು ಹತ್ತಿಯ ಉತ್ಪನ್ನಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿರುವಾಗಲೇ ಇಂತಹ ಮಾರುಕಟ್ಟೆ ಜ್ಞಾನದ ಅರಿವಿಲ್ಲದ ಜನರ ಬಗ್ಗೆ ಪ್ರಭುತ್ವ ತೋರಿಸುವ ನಿರ್ಲಕ್ಷ್ಯದಿಂದ ದೇಶದ ಸಾವಿರಾರು ಕಾರ್ಮಿಕರು ತಮ್ಮ ವೃತ್ತಿ ಕಲಾನೈಪುಣ್ಯಗಳಿಂದ ನಿರ್ವಸತಿಗರಾದರು. ಪಾರಂಪರಿಕ ದುಡಿಮೆಯ ನೆಲೆಗಳನ್ನು ನೀಗಿಕೊಂಡು ಗಿರಣಿಯ ಕರೆಗೆ ಓಗೊಟ್ಟ ಕಾರ್ಮಿಕನ ಅನಿವಾರ್ಯ ಬಡತನದ ಬಂಗ ಬಾಳಾಟ, ತೀವ್ರ ವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸವಾಲುಗಳಿಗೆ ಅಷ್ಟೇ ಅವಸರದಿಂದ ಒಡ್ಡಿಕೊಳ್ಳುತ್ತಿರುವ ಬಡ ಕೂಲಿಕಾರರ ಬದುಕಿನ ಹೋರಾಟದ ರೋಧನೆಗಳು ಮುಂತಾದ ವಿಷಾದ ಗೀತೆಗಳೆಲ್ಲವೂ ಗಿರಣಿಯ ಸೈರನ್ ಶಬ್ದದಲ್ಲಿ ಕರಗಿಹೋಗಿ ಬಂಡವಾಳಶಾಹಿಗಳ ಕಿವಿಗಳಿಗೆ ಕೇಳಿಸುವುದಿಲ್ಲ. ಅಂತಹ ಪಾಡು ಕಂಡು ಮರುಗಿದ ಶರೀಫರು, ‘ಅಲ್ಲಿ ಬರದಿಟ್ಟರಳಿ ಹಿಂಜಿ ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ’ ಎಂದು ಹೇಳುವ ಮೂಲಕ ಮಾಲಿಕರ ಎದೆಗಳಲ್ಲಿ ಕಾರ್ಮಿಕರ ಸಾಮಾಜಿಕ ನ್ಯಾಯದ ಆಗ್ರಹದ ಧ್ವನಿಯು ಮೊಳಗುವಂತೆ ಮಾಡುತ್ತಾರೆ.

ದುಡಿಯುವ ಬಡ ಜನರ ಮತ್ತು ಮಕ್ಕಳ ಜೀವನದ ಸಾವಧಾನವನ್ನಾಗಲೀ, ನೆಮ್ಮದಿಯನ್ನಾಗಲೀ, ನಿರಾಳವನ್ನಾಗಲೀ ನಾವು ಇದ್ದಕ್ಕಿದ್ದಂತೆ ಧುತ್ತೆಂದು ಅವತರಿಸಿದ ಆಧುನಿಕ ಗಿರಣಿ ಉದ್ಯಮದಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲದ ಮಾತು. ಯಾಕೆಂದರೆ ಉದ್ಯಮವೆಂಬುದು ಲಾಭ ನಷ್ಟ ಲೆಕ್ಕಾಚಾರಗಳ ಸಂಗತಿ. ‘ಪರಮಾನೆಂಬುವ ಪಟ್ಟೇವೋ ಅಲ್ಲೆ ಮಾರಾಟಕಿಟ್ಟೇವೋ’ ಎಂಬ ಶರೀಫರ ಮಾತು ಇಂತಹ ಮಾರುಕಟ್ಟೆ ರಾಜಕಾರಣವನ್ನು ಬಯಲುಗೊಳಿಸಿ ತೋರಿಸಿದೆ. ಪುರುಷರನ್ನು ಮಾತ್ರವಲ್ಲದೆ ವಿಶೇಷವಾಗಿ ಈ ಆಧುನಿಕ ಗಿರಣಿ ಯಂತ್ರವು ಮಹಿಳೆಯರನ್ನು ಮತ್ತು ಮಕ್ಕಳನ್ನು ದುಡಿದು ಹಣ ಸಂಪಾದಿಸುವ ಕಡೆಗೆ ಸೆಳೆಯುವ ಕುರೂಪ ತಂತ್ರವನ್ನು ಅಂತಸ್ತಗೊಳಿಸಿಕೊಂಡಿದೆ. ಗಿರಣಿಯು ಮಹಿಳೆಯನ್ನು ಸೆಳೆದುಕೊಂಡ ಪರಿಣಾಮವಾಗಿಯೇ ಶರೀಫರು, ‘ಶರಣಿ ಕೂಡಮ್ಮ’ ಎಂದು ಮಹಿಳೆಯನ್ನು ಸಂಬೋಧಿಸಿ ಹಾಡಿದ್ದಾರೆ. ಅಷ್ಟಲ್ಲದೆಯೇ ಇದು ವಿಕ್ಟೋರಿಯಾ ಮಹಾರಾಣಿಯಿಂದ ಭಾರತಕ್ಕೆ ಆಮದಾಗಿ ಬಂದು ಇಲ್ಲಿನ ಸ್ಥಳೀಯರ ಮೇಲೆ ಹೇರಲ್ಪಟ್ಟ ಹೊಸ ತಂತ್ರಜ್ಞಾನ.
ಶರೀಫರಿಗೆ ಇಂತಹ ಆಧುನಿಕ ತಂತ್ರಜ್ಞಾನದ ಕೇಡು ಅರಿವಾದ ಕಾರಣದಿಂದಲೇ ಬಾಹ್ಯದ ಯಂತ್ರದ ಬದಲಾಗಿ ಅಂತರಂಗದ ಯಂತ್ರವನ್ನು ಕಂಡುಕೊಳ್ಳಲು ಹೇಳುತ್ತಾರೆ. ‘ಗಿರಣಿ ವಿಸ್ತಾರ ನೋಡಮ್ಮ’ ಪದ್ಯವು ಮೊದಲ ಬಾರಿಗೆ ಸಾಮಾನ್ಯರ ಬದುಕಿನಲ್ಲಿ ಗಿರಣಿ ಕಲೆಯ ಹೊಸ ಜ್ಞಾನವು ಪ್ರಧಾನ ವಸ್ತುವಾಗಿ ಪ್ರವೇಶ ಪಡೆದು ಸೃಷ್ಟಿಸಿದ ತಲ್ಲಣವನ್ನು ಅನುಭಾವದ ನೆಲೆಯಲ್ಲಿ ಅಭಿವ್ಯಕ್ತಿಸಿದ ಪದ್ಯ. ಆಧುನಿಕ ತಂತ್ರಜ್ಞಾನವು ಪ್ರವೇಶಿಸಿದ ಪರಿಣಾಮವಾಗಿ ಆದಿಮವಾದ ದೇಶಿ ಜ್ಞಾನಗಳು ದಿಕ್ಕೆಟ್ಟು ದಾರಿ ತಪ್ಪಿದ ಬಗ್ಗೆ ಹಾಗೂ ದುಡಿಯುವ ಕುಶಲಕರ್ಮಿ ಜನರ ಪಾರಂಪರಿಕ ಜ್ಞಾನದ ನೆಲೆಗಳು ಭಗ್ನಗೊಂಡ ಬಗ್ಗೆ ನಮ್ಮನ್ನು ಆಲೋಚನೆಗೆ ಹಚ್ಚುವ ಶಕ್ತಿಶಾಲಿ ಪದ್ಯವಿದು. ಆಧುನಿಕ ಮಾನವನ ನಾಗರಿಕ ಜೀವನದ ಹಲವು ಸ್ಥಿತ್ಯಂತರಗಳನ್ನು ಬಿಂಬಿಸುವ ಹಾಗೂ ವಿಜ್ಞಾನ-ತಂತ್ರಜ್ಞಾನದ ಜೀವವಿಕಾಸದ ಚರಿತ್ರೆಯ ಪುಟಗಳನ್ನು ಗುರುತಿಸುವ ಅಪೂರ್ವ ಪದ್ಯವಿದು. ಈ ಪದ್ಯ ಶರೀಫರು ವರ್ತಮಾನದ ವಿದ್ಯಮಾನಗಳಿಗೆ ತೋರಿದ ಪ್ರತಿರೋಧದಂತೆ ಕಾಣಿಸದೆ. ವರ್ತಮಾನದ ಪ್ರಭಾವದೊಂದಿಗೆ ಅನುಸಂಧಾನದಂತೆಯೂ ಕಾಣಿಸುತ್ತಿದೆ.

ದೇಸಿ ಸಂಸ್ಕೃತಿಗೆ, ಆರ್ಥಿಕತೆಗೆ, ಕೃಷಿ ವ್ಯವಸ್ಥೆಗೆ ಭಾರಿ ಆಘಾತವನ್ನುಂಟುಮಾಡುತ್ತಿರುವ ಹಾಗೂ ಭೋಗ ವಿಲಾಸಿ ಸರಕು ಸಂಸ್ಕೃತಿ ವಿಜೃಂಭಿಸುತ್ತಿರುವ ಈಗಿನ ಸಂದರ್ಭದಲ್ಲಿಯೂ ಶರೀಫರ ಈ ಪದ್ಯ ಪ್ರಸ್ತುತವಾಗಿದೆ. ವಸಾಹತುಶಾಹಿ ಬ್ರಿಟಿಷರ ಆಧುನಿಕ ತಂತ್ರಜ್ಞಾನದ ವಿರುದ್ಧ ಗಾಂಧೀಜಿ ಚರಕದ ಮಹತ್ವವನ್ನು ಸಾರಿ ಹೇಳಿದರು, ಹೊಸ ಯಂತ್ರಾಧಾರಿತ ವ್ಯವಸ್ಥೆಯ ತಂತ್ರಜ್ಞಾನ ಮತ್ತು ಆರ್ಥವ್ಯವಸ್ಥೆಯ ವಿರುದ್ಧ ಗಾಂಧೀಜಿಯರು ತೋರಿಸಿದ ವಿರುದ್ಧ ಪ್ರತಿರೋಧವಿದು.

ಕೊಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆಯಾದ 1818 ರ ಮರುವರ್ಷ 1819 ರಲ್ಲಿ ಹುಟ್ಟಿದ ಶರೀಫರು, ತಂತ್ರಜ್ಞಾನದ ಹಿಂಸೆಯನ್ನು ದಂಗೆಕೋರ ಅಧ್ಯಾತ್ಮದ ಮೂಲಕ ನೀಗಿಕೊಂಡವರು. ಗಾಂಧೀಜಿಯದ್ದೂ ಇದೇ ಅಧ್ಯಾತ್ಗ ದಾರಿಯ ಶೋಧ. ಆಧುನಿಕ ಬಂಡವಾಳವಾದದ ಬೃಹತ್ ತಂತ್ರಜ್ಞಾನದ ಎದುರು ದೇಶೀಯವಾದ ಬಡವರ ಚರಕವನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿ ಸರಳ ಆರ್ಥಿಕತೆಯ ಲಾಂಛನವನ್ನಾಗಿ ಪ್ರತಿಪಾದಿಸಿದವರು.

ಭಾರತದ ನೆಲದಲ್ಲಿ ಗಾಂಧೀಜಿ ಮೊದಲಿನ ಸತ್ಯಾಗ್ರಹವನ್ನು ೧೯೧೮ರ ಅಹಮದಾಬಾದ್ ಗಿರಣಿ ಕಾರ್ಮಿಕರ ಸತ್ಯಾಗ್ರಹದ ಮೂಲಕ ಪ್ರಾರಂಭಿಸಿ ನಂತರದಲ್ಲಿ ಎಲ್ಲಾ ದೇಶಿ ಉತ್ಪಾದನಾ ರಚನೆಗಳ ಎಲ್ಲಾ ಕಾರ್ಮಿಕರನ್ನು ಸಂಘಟಿಸಲು ಮುಂದಾಗುತ್ತಾರೆ. ಮುಂಬೈಯ ಜವಳಿ ಕಾರ್ಮಿಕರ ಮುಷ್ಕರಕ್ಕೆ ಕಮ್ಯೂನಿಸ್ಟರು ನಾಯಕತ್ವ ನೀಡಿದ ಸಂದರ್ಭದಲ್ಲಿ ಗಿರಣಿ ಕಾರ್ಮಿಕರು ಕೆಂಪು ಧ್ವಜವನ್ನು ತಮ್ಮ ಹೋರಾಟದ ಲಾಂಛನ ಧ್ವಜವಾಗಿ ಸ್ವೀಕರಿಸಿದರು. ಮುಂದೆ ಕಲ್ಕತ್ತಾದ ಸೆಣಬಿನ ಮಿಲ್ಲುಗಳ ಕಾರ್ಮಿಕರು ಇದೇ ಕೆಂಪು ಧ್ವಜ ಹಿಡಿದು ಕಮ್ಯೂನಿಸ್ಟರ ನಾಯಕತ್ವದಲ್ಲಿ ಚಳವಳಿಗಳನ್ನು ಸಂಘಟಿಸತೊಡಗಿದರು.

ಬಂಡವಾಳಶಾಹಿ ರಾಜಕಾರಣವು ಯಾವತ್ತಿಗೂ ದುಡಿಯುವ ವರ್ಗಗಳಿಗೆ ತೆಳುಭಾವನೆಗಳ ಅನೈತಿಕ ಆಮಿಷ ಒಡ್ಡಿ ಮಸಲತ್ತು ನಡೆಸುತ್ತಿರುತ್ತದೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುವ ಕೆಲವು ಅವಕಾಶವಾದಿ ಮನಸ್ಸುಗಳು ದುಡಿಯುವ ಜನರ ಐಕ್ಯತೆಗೆ ಭಂಗ ತಂದು ಅವರನ್ನು ಪರಸ್ಪರ ವಿಭಜಿಸಿ ಉದ್ಯಮಿಗಳೊಂದಿಗೆ ಕೈಜೋಡಿಸಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತವೆ. ಬಂಡವಾಳಶಾಹಿಗಳ ಇಂತಹ ಮಸಲತ್ತಿನೊಂದಿಗೆ ಧಾರ್ಮಿಕ ಕೋಮುವಾದಿ ರಾಜಕಾರಣವು ಅನೈತಿಕ ಕೂಡಾವಳಿ ಮಾಡಿಕೊಂಡ ಪರಿಣಾಮ ಇವತ್ತು ಭಾರತದ ಸಾಂಸ್ಕೃತಿಕ ನಕಾಶೆಯನ್ನು ಬದಲಾಯಿಸಿಬಿಟ್ಟಿದೆ. ಆಗಿನ ಕಾಲದಲ್ಲಿ ಎಲ್ಲೆಲ್ಲೂ ಕಾಣಬರುತ್ತಿದ್ದ ಗಾಂಧಿ ಟೋಪಿಯಾಗಲೀ, ಚರಕದ ಲಾಂಛನವಾಗಲೀ, ಕೆಂಬಾವುಟ ಹಿಡಿದ ಕಮ್ಯುನಿಷ್ಟ್ ಹೋರಾಟದ ಕಾರ್ಮಿಕರ ಲಾಂಛನಗಳಾಗಲೀ ಕ್ಷೀಣಿಸಿ, ಆ ಜಾಗದಲ್ಲಿ ಕೇಸರಿ ಬಾವುಟಗಳು, ಹುಸಿ ಪೊರಕೆ ಮತ್ತು ಕನ್ನಡಕ ಲಾಂಛನಗಳು ಮೆರೆಯುತ್ತಿರುವುದು ನಮ್ಮ ಕಾಲದ ದುರಂತ ವ್ಯಂಗ್ಯ.

‘ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ!’ ಈಗ ನಾವು ಕೇಸರಿ ದೇವಾಂಗದ ರಾಜಕಾರಣವನ್ನು ಶಿಶುನಾಳ ಶರೀಫರು ತೋರಿಸಿಕೊಟ್ಟ ಯಾವ ಅಧ್ಯಾತ್ಮಿಕ ನೆಲೆಸೆಲೆಗಳಿಂದ ನೀಗಿಕೊಳ್ಳಬೇಕು?! ಯೋಚಿಸಿರಿ…

‍ಲೇಖಕರು Admin

May 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: