ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೆಸರಿನ ಆ ಚುಟುಕು ಬರೆದ ಹಾಳೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

26

ಜಗವ ಗೆಲ್ಲು ನೀನು ಜ
ಯದ ಗೀತೆ ಮೊಳಗಲಿ ಸು
ಲಕ್ಷಣೆ ಸುಗುಣೆ ಮಹಾಲ
ಕ್ಷ್ಮಿಯೇ ಮಂಗಳವಾಗಲಿ ನಿನಗೆ

ಹೀಗೆ ಬರೆದಿದ್ದ ಹಾಳೆಯನ್ನು ಕೈಯಲ್ಲಿ ಹಿಡಿದುಕೊಂಡು ಅಚ್ಚರಿ ಆನಂದದಿಂದ ನೋಡುತ್ತಾ ನಿಂತುಬಿಟ್ಟಿದ್ದೆ. ಮೊದಲಿಗೆ ಇದೇನು ಎಂದು ಹೊಳೆದಿರಲಿಲ್ಲ. ಯಾವುದೋ ಕವಿತೆಯ ಒಂದು ನುಡಿ ಮಾತ್ರ ಇದೆ, ಇದನ್ನ್ಯಾಕೆ ಬರೆದು ಇವರು ನನಗೆ ಓದಲು ಕೊಟ್ಟರು ಎಂದುಕೊಂಡಿದ್ದೆ. ಹಾಗೆಯೇ ಅದನ್ನು ಅವರಲ್ಲಿ ಕೇಳಿದೆ ಸಹ. ಇದನ್ನು ಬರೆದು ಮಂಚದ ಮೇಲೆ ಅರೆಮಲಗಿ ವಿಶ್ರಮಿಸುತ್ತಿದ್ದವರು ಮತ್ತು ಅವರ ಪಾದದ ಬಳಿ ಕುಳಿತ, ಮಂಚಕ್ಕಂಟಿಕೊಂಡಂತೆ ನಿಂತ ಇಬ್ಬರು ನನ್ನ ಈ ಗೊಂದಲವನ್ನು ಕಂಡು ಆನಂದಿಸುತ್ತಿದ್ದರು.

ನಂತರ ನಗುತ್ತಾ ಆ ಸಾಲುಗಳ ಮೊದಲ ಅಕ್ಷರಗಳನ್ನು ಗಮನಿಸು ಜಯಲಕ್ಷ್ಮಿ ಎಂದರು ಬರೆದವರು. ಓದಿದೆ. ಅದು ನನ್ನ ಹೆಸರು! ಆ ಹೊತ್ತಿನ ನನ್ನ ಅಚ್ಚರಿ ಆನಂದ ಈಗಲೂ ನನಗೆ ನೆನಪಿದೆ. ದೋಟಿಹಾಳದಲ್ಲಿ ಬಿಟ್ಟರೆ ಮದುವೆಯಾಗಿ ಗಂಡನಮನೆಗೆ ಬರುವವರೆಗೂ ಎಲ್ಲೂ (ಕಾಲೇಜಿನಲ್ಲೂ ಸಹ!) ನನ್ನನ್ನು ಜಯಲಕ್ಷ್ಮಿ ಎಂದು ಜನ ಸಂಬೋಧಿಸುತ್ತಿರಲಿಲ್ಲ. ಪಪ್ಪಿ ಎಂದೇ ಕರೆಯುವುದನ್ನು ಕೇಳಿ ಅಭ್ಯಾಸವಾಗಿತ್ತು. ಈಗ ಜಯಲಕ್ಷ್ಮಿ ಎನ್ನುವ ಹೆಸರನ್ನು ಇಷ್ಟು ಚೆಂದ ಮಾಡಿ ಚುಟುಕು ಬರೆದಿದ್ದನ್ನು ಕಂಡು ಆ ಕ್ಷಣ ನನ್ನ ಹೆಸರಿನ ಮೇಲೆ ನನಗೇ ಪ್ರೀತಿ ಹುಟ್ಟಿಬಿಟ್ಟಿತ್ತು! ಈಗೆಲ್ಲ ಈ ಥರದ ಚುಟುಕುಗಳು ಸರ್ವೇಸಾಮಾನ್ಯ ಅನ್ನುವಂತಿರಬಹುದು. ಆದರೆ ನನಗದು ಆಗ ಹೊಸತು. ಹಾಗೆ ಚುಟುಕು ಬರೆದಿದ್ದವರು ಸಾವಿನ ಮನೆಯ ಹೊಸ್ತಿಲಲ್ಲಿ ನಿಂತವರೆಂದು ಅವರಿದ್ದ ಸ್ಪೆಷಲ್ ವಾರ್ಡಿಗೆ ಹೋದ ಯಾರೂ ಊಹಿಸಲು ಸಾಧ್ಯವಿಲ್ಲದಷ್ಟು ಲವಲವಿಕೆ, ನಗು ತುಂಬಿರುತ್ತಿತ್ತು ಅಲ್ಲಿ.

ಕ್ಯಾನ್ಸರ್ ಆಗಿತ್ತು ಅವರಿಗೆ. ಇಂಜಿನಿಯರ್ ಆಗಿದ್ದ ಅವರಿಗೆ ಅಂದಾಜು ನನ್ನದೇ ವಯಸ್ಸಿನ ಮಕ್ಕಳಿಬ್ಬರಿದ್ದರು. ಬಹುಶಃ ಅವರು ಗುಲ್ಬರ್ಗಾದವರಾಗಿದ್ದರು ಅಂದುಕೊಳ್ಳುತ್ತೇನೆ, ಈಗ ಸರಿಯಾಗಿ ನೆನಪಾಗುತ್ತಿಲ್ಲ. ಹೆಂಡತಿ ಸತತ ಅವರ ಜೊತೆಗೇ ಇದ್ದರು. ಮಕ್ಕಳಿಬ್ಬರೂ ವಾರಕ್ಕೊಮ್ಮೆ ಊರಿಂದ ಬಂದು ಅಪ್ಪ ಅಮ್ಮನ ಜೊತೆಗೆ ನಗುನಗುತ್ತಾ ಸಮಯ ಕಳೆಯುತ್ತಿದ್ದರು. ಗಂಡನೆದುರಿಗೆ ತಪ್ಪಿಯೂ ಕಣ್ಣೀರು ಹಾಕದ ಆ ಮಹಿಳೆ ಆಚೆ ಬಂದಾಗ ತಡೆಯಲಾಗದೆ ಒಂದು ಮೂಲೆಯಲ್ಲಿ ನಿಂತು ಬಿಕ್ಕುತ್ತಿದ್ದರು. ನಾನಿದ್ದ ವಿಂಗಿನಲ್ಲೇ ಅವರ ವಾರ್ಡೂ ಇತ್ತಾದ್ದರಿಂದ ಕನ್ನಡದ ನಂಟು ಬೆಳೆದಿತ್ತು. 

ಹೌದು ನಾನು ಒಳರೋಗಿಯಾಗಿ ಸೊಲ್ಲಾಪುರದ ವಾಡಿಯಾ ಆಸ್ಪತ್ರೆ ಸೇರಿದ್ದೆ. ಬಿಜಾಪುರದಲ್ಲಿ ಯಾವ ವೈದ್ಯರಿಗೂ ಅಂತ್ಯ ಹತ್ತದ ನನ್ನ ಕಾಯಿಲೆಯನ್ನು ಡಾಕ್ಟರ್ ಮೆಹತಾ ಪತ್ತೆ ಹಚ್ಚಿದ್ದರು. ಅಲ್ಲಿಯವರೆಗೆ ನ್ಯಮೋನಿಯಾ ಎಂದೇ ಬಗೆದು ಚಿಕಿತ್ಸೆ ಕೊಡಲಾಗುತ್ತಿತ್ತು. ಎಲ್ಲಾ ಪರೀಕ್ಷೆಗಳನ್ನು ಮಾಡಿದ್ದ ಬಿಜಾಪುರದ ವೈದ್ಯರುಗಳಿಗೆ ಸ್ಪೂಟಮ್ (ಎಂಜಲು) ಪರೀಕ್ಷೆ ಮಾಡಲು ಯಾಕೆ ತೋಚಿರಲಿಲ್ಲವೋ.. ಡಾ. ಮೆಹತಾ ಆ ಪರೀಕ್ಷೆ ಮಾಡುವ ಮೂಲಕ ನನಗೆ ಲಂಗ್ಸ್ ಟ್ಯೂಬರ್ಕ್ಯುಲಸ್ ಇರುವುದನ್ನು ಪತ್ತೆ ಹಚ್ಚಿದ್ದರು. ಮತ್ತದು ತಿಂಗಳು ಕಾಲ ಆಸ್ಪತ್ರೆಯಲ್ಲೇ ಇರಬೇಕಾದ ಅನಿವಾರ್ಯತೆಯ ಉಲ್ಬಣಾವಸ್ಥೆಯನ್ನು ತಲುಪಿತ್ತು.

ಸೊಲ್ಲಾಪುರದ ವಾಡಿಯಾ ಆಸ್ಪತ್ರೆ ಒಂದು ಚಾರಿಟೇಬಲ್ ಆಸ್ಪತ್ರೆ. ರೇಲ್ವೆ ಸ್ಟೇಶನ್ನಿಗೆ ಸಮೀಪದಲ್ಲಿದೆ. ಆಗಲೇ ಅಂದರೆ ೩೦ ವರ್ಷಗಳ ಹಿಂದೆಯೇ ಅಗಾಧ ಕಟ್ಟಡವನ್ನು ಹೊಂದಿದ್ದ ಆ ಆಸ್ಪತ್ರೆಯ ವಿಂಗ್ ಒಂದರ ನಾಲ್ಕನೇ ಮಹಡಿಯ ಒಂದು ಪ್ರತ್ಯೇಕ ವಾರ್ಡಿನಲ್ಲಿದ್ದ ತಿಂಗಳ ಕಾಲವೂ ಬದುಕಿನ ಅನೇಕ ಮಗ್ಗುಲುಗಳ ಪರಿಚಯವಾಯಿತು ಜೊತೆಗೆ ಭಯಂಕರ ನೋವೆಂದರೆ ಹೇಗಿರಬಹುದು ಎನ್ನುವುದರ ಸಾಕ್ಷಾತ್ ಅನುಭವ! ಅಂಥ ಹೊತ್ತಿನ ನನ್ನವ್ವನ ತ್ಯಾಗ, ಸಹನೆ, ಅಸಹಾಯಕತೆಗಳನ್ನು ನಾನೆಂದೂ ಮರೆಯಲಾರೆ.

ನನ್ನ ದೊಡ್ಡ ತಂಗಿ ಅದೇ ಸಮಯದಲ್ಲಿ ದೊಡ್ಡವಳಾಗಿದ್ದು. ಅಂಥಾ ಸೂಕ್ಷ್ಮ ಸಮಯದಲ್ಲಿ ಮಗಳೊಂದಿಗೆ ಇರಲಾಗುತ್ತಿಲ್ಲ ಎನ್ನುವ ಅವ್ವನ ತೊಳಲಾಟ ಸ್ಪಷ್ಟವಾಗೇ ಕಾಣಿಸುತ್ತಿತ್ತು ನನಗೆ. ಸಣ್ಣ ತಮ್ಮ ಬಾಪು (ಅವನಿಲ್ಲ ಈಗ) ಆಗ ಐದನೇ ತರಗತಿಯಲ್ಲಿದ್ದ. ರಾಷ್ಟ್ರೀಯ ಮಟ್ಟದಲ್ಲಿ ವಾಲಿಬಾಲ್ ಪಂದ್ಯವಾಡಲು ಸೆಲೆಕ್ಟ್ ಆಗಿದ್ದ ಅವನು, ಅದಕ್ಕಾಗಿ ಅದೇ ಸಮಯದಲ್ಲಿ ದೆಹಲಿಗೆ ಹೊರಟುನಿಂತಿದ್ದ. ಮಗನನ್ನು ರೇಲ್ವೆ ಸ್ಟೇಶನ್ ವರೆಗೆ ಹೋಗಿ ಹಾರೈಸಿ ಬೀಳ್ಕೊಡಲು ಬಿಜಾಪುರಕ್ಕೆ ಹೋಗಬೇಕು ಎನ್ನುವ ಸಹಜ ಕಾತರ ಅವ್ವನದು, ಆದರೆ ಹೋಗಲಾರದ ಅಸಹಾಯಕತೆಯಲ್ಲಿ ಅವರನ್ನು ಕಟ್ಟಿ ಹಾಕಿದ್ದ ನನ್ನ ದರಿದ್ರ ರೋಗ… ಅಲ್ಲಿ ಸ್ಟೇಶನ್ನಿನಲ್ಲಿ ಇವನಂತೆ ಸೆಲೆಕ್ಟ್ ಆಗಿ ದೆಹಲಿ ಹೊರಟು ನಿಂತಿದ್ದ ಮುಸ್ಲಿಮ್ ಹುಡುಗನೊಬ್ಬನ ತಾಯಿ, ಬಾಪುನ ಜೊತೆಗೆ ಅಪ್ಪ ಅವ್ವ ಬಂದಿಲ್ಲದಿರುವುದರ ಕಾರಣ ತಿಳಿದ ಮೇಲೆ ಅವನಿಗೂ ಒಂದು ಹೂವಿನ ಹಾರ ತರಿಸಿ, ಕೊರಳಿಗೆ ಹಾಕಿ ಶುಭ ಹಾರೈಸಿ ಬೀಳ್ಕೊಟ್ಟಿದ್ದು ನಮ್ಮನೆಯವರ್ಯಾರೂ ಮರೆಯಲಾಗದ ಘಟನೆ. ಪರಿಚಿತರಲ್ಲ ಏನಲ್ಲ ನಾವು ಅವರಿಗೆ. ಆದರೂ ಅದೆಂಥಾ ನಿರ್ಮಲ ವಿಶಾಲ ಮಾತೃ ಹೃದಯ ಅವರದು! ಇಂದಿಗೂ ಆ ತಾಯಿಯನ್ನು ನೆನೆದಾಗೆಲ್ಲ ಮನಸು ಮೂಕವಾಗಿ ವಂದಿಸುತ್ತದೆ ತಲೆಬಾಗಿ. 

ತಂಗಿ ದೊಡ್ಡವಳಾಗಿದ್ದಾಗಿನ ಸಂದರ್ಭ ಮತ್ತು ತಮ್ಮ ರಾಷ್ಟ್ರೀಯ ಮಟ್ಟದಲ್ಲಿ ಆಡಲು ಹೊರಟಾಗಿನ ಅಮೂಲ್ಯ ಸಂದರ್ಭದಲ್ಲಿ ನನ್ನವ್ವ ನನ್ನಿಂದಾಗಿ ಅವರೊಂದಿಗೆ ಇರಲಾಗಲಿಲ್ಲ ಎನ್ನುವ ಪಶ್ಚಾತಾಪ ಇವತ್ತಿಗೂ ಆಗಾಗ ನನ್ನನ್ನು ಸತಾಯಿಸುತ್ತಿರುತ್ತದೆ…

ಸಿನಿಮಾದಲ್ಲೂ ತೋರಿಸದ ಸಹನೆ ನಮ್ಮವ್ವಾರದ್ದು. ಅಡ್ಮಿಟ್ ಆದ ಮೇಲೆ ನಿತ್ಯ ೩-೪ ಇಂಜೆಕ್ಷನ್, ಮಾತ್ರೆಗಳು, ಸಲೈನ್ ಮೂಲಕವೂ ಔಷಧಿ ಆರಂಭಗೊಂಡ ಮೇಲೆ ಮಗ್ಗಲು ಹೊರಳುವುದು ದೂರದ ಮಾತು, ಮೈಮೇಲಿನ ಬಟ್ಟೆ, ಭುಜ ತುಸುವೇ ಅಲುಗಿದರೂ, ಉಸಿರನ್ನು ಜೋರಾಗಿ ಒಳಗೆಳೆದುಕೊಂಡರೂ ಪ್ರಾಣಹೋಗುವಂಥ ನೋವು ಪಕ್ಕಡಿಯೊಳಗೆ. ಅಂಥಾ ಭಯಂಕರ ನೋವಿನಿಂದಾಗಿ, ಔಷಧಿಗಳ ಪರಿಣಾಮದಿಂದ ಕರಗಿದ ಕಫವನ್ನು ಹೊರಹಾಕಲೆಂದು ಮಗ್ಗುಲು ಹೊರಳಲು ಕನಿಷ್ಟ ಅರ್ಧ ಗಂಟೆಯಾದರೂ ಬೇಕಾಗುತ್ತಿತ್ತು.

ಸಣ್ಣ ಕೆಮ್ಮೂ ಅಗಾಧ ನೋವುಂಟು ಮಾಡುತ್ತಿತ್ತು. ನರಕವದು. ನಂತರ ಮತ್ತೆ ಮರಳಿ ಸೀದಾ ಮಲಗುವ ಧೈರ್ಯವಾಗುತ್ತಿರಲಿಲ್ಲ. ಆದರೆ ಹಾಗೆ ಮಾಡದೆ ವಿಧಿ ಇರಲಿಲ್ಲ. ಇದರ ನಡುವೆ ವೈದ್ಯರು ಆಗಾಗ ಎದ್ದು ನಡೆದಾಡಲು ಸೂಚಿಸಿದ್ದರಾದರೂ, ನನ್ನ ಅವಸ್ಥೆ ಕಂಡು ಮರುಕದಿಂದ ಒತ್ತಾಯಿಸುತ್ತಿರಲಿಲ್ಲ. ನನಗೆ ಇದಕ್ಕೂ ಹೆಚ್ಚಿನ ಹಿಂಸೆಯಾಗುತ್ತಿದ್ದುದು ದಿನಕ್ಕೆ ಐದಾರು ಬಾಟಲಿ ತುಂಬುತ್ತಿದ್ದ ಕಫವನ್ನು ನಮ್ಮವ್ವ ಅದಕ್ಕೆಂದೇ ಇದ್ದ ಬಚ್ಚಲಿಗೆ ಹೋಗಿ ಚೆಲ್ಲಿ ಆ ಬಾಟಲಿಯನ್ನು ಸ್ವಚ್ಛ ಮಾಡಿ ತಂದಿಡುತ್ತಿದ್ದುದು. ನಿತ್ಯವೂ ಅಷ್ಟಷ್ಟು ಕಫ ಹೊರಬೀಳುತ್ತಿದ್ದುದ್ದನ್ನು ಕಂಡು ಬೆರಗಾಗಿದ್ದೆ ನಾನು. ನನ್ನಿಂದಾಗಿ ಅವ್ವ ಎಂಥಾ ಗಲೀಜು ಕೆಲಸವನ್ನು ಮಾಡಬೇಕಾಗುತ್ತಿದೆಯಲ್ಲ ಎನಿಸಿ ಅವಮಾನವೆನಿಸುತ್ತಿತ್ತು, ಸಂಕೋಚದಿಂದ ಮನಸು ಮುದುಡಿ ಹೋಗುತ್ತಿತ್ತು.

ಇನ್ನು ಮುಂದೆ ವೈದ್ಯರು ಹೇಳಿದಂತೆ ಉಗುಳದೆ ಸುಮ್ಮನಿರಬೇಕು ಎಂದು ಸುಮ್ಮನಿದ್ದಾಗಲೆಲ್ಲ ಆಗಾಗ ಬರುತ್ತಿದ್ದ ನರ್ಸ್ ಗದರಿಸಿ ಕಫ ಹೊರಹಾಕಲು ಒತ್ತಾಯಿಸುತ್ತಿದ್ದಳು. ಮೌನವಾಗಿ ಅಳುತ್ತಿದ್ದೆ. ನೋಡಿದವರು ಎದೆಯ ನೋವಿನಿಂದ ಅಳುತ್ತಿದ್ದೆನೆಂದು ತಿಳಿದು ‘ಇನ್ನ ಸ್ವಲ್ಪ ದಿನ ಅಷ್ಟ, ಎಲ್ಲಾ ಸರಿ ಹೋಕ್ಕತಿ, ಧೈರ್ಯಾ ತೊಗೊ’ ಎಂದು ಸಮಾಧಾನಿಸುತ್ತಿದ್ದರು. ಆ ಸ್ವಲ್ಪ ದಿನ ಬೇಗ ಮುಗಿಯಲಿ ಎಂದು ನಾನು ನಿತ್ಯ ಪ್ರಾರ್ಥಿಸುತ್ತಿದ್ದೆ. ಹದಿನೈದು ಇಪ್ಪತ್ತು ದಿನಗಳಲ್ಲಿ ಹಾಸಿಗೆಯಿಂದ ನಾನೇ ಎದ್ದು ಓಡಾಡುವಂತಾದಾಗ ನಾನು ಮೊದಲು ಮಾಡಿದ ಕೆಲಸ ಅವ್ವಾನ್ನ ಕಫ ಚೆಲ್ಲುವ ಕೆಲಸದಿಂದ ಮುಕ್ತಗೊಳಿಸಿದ್ದು. ಆಗಲೂ ಅವ್ವ ನನಗೆ ರೆಸ್ಟ್ ಮಾಡಲು ಹೇಳಿ ತಾವೇ ಸ್ವಚ್ಛ ಮಾಡಲು ಮುಂದಾಗುತ್ತಿದ್ದರಾದರೂ ಆದಷ್ಟು ಅವರನ್ನು ತಡೆದು ನಾನೇ ಎತ್ತಿ ಹಾಕಿ ಬರುತ್ತಿದ್ದೆ. 

 ನಿಂಬಾಳ ಮುತ್ತ್ಯಾ (ನನ್ನ ತಂದೆಯ ತಂದೆ) ನಾನು ಆಸ್ಪತ್ರೆಯಲ್ಲಿದ್ದಷ್ಟು ದಿನವೂ ನನ್ನ ಜೊತೆಗಿದ್ದರು. ನಿಂಬಾಳದಿಂದ ರತ್ನವ್ವವ್ವ (ಪಂಡಿತ ಕಾಕಾರ ಪತ್ನಿ) ನಿತ್ಯವೂ ಬೆಳಗಾಗೇ ಎದ್ದು ಮೂರೂ ಹೊತ್ತಿಗಾಗುವಷ್ಟು ಚಪಾತಿ, ಪಲ್ಯ ಮಾಡಿ, ಹಾಲು, ಮೊಸರು ಚಟ್ನಿಪುಡಿಗಳೊಂದಿಗೆ ಬುತ್ತಿ ಕಟ್ಟಿಕೊಟ್ಟರೆ, ಅದನ್ನು ಕಾಕಾ ಆರರ ಲೋಕಲಲ್ಲಿ ಸೊಲ್ಲಾಪುರಕ್ಕೆ ನಿತ್ಯ ಕೆಲಸಕ್ಕೆಂದು ಬರುವವರೊಡನೆ ಕಳುಹಿಸಿಕೊಡುತ್ತಿದ್ದ. ರೇಲ್ವೆಸ್ಟೇಷನ್ ನಮ್ಮ ತೋಟದ ಮನೆಯಿಂದ ಮೂರೂವರೆ ಕಿಲೋಮೀಟರ್ ದೂರ. ಆಗೆಲ್ಲ ಮನೆಯಲ್ಲಿ ಬೈಕ್ ಗೀಕ್ ಏನಿರಲಿಲ್ಲ. ಒಂದೋ ಎತ್ತಿನ ಬಂಡಿ ಹೂಡಬೇಕು ಇಲ್ಲವೇ ಕಾಲ್ನಡಿಗೆಯಲ್ಲಿ ಅಷ್ಟು ದೂರ ನಡೆದು ಬಂದು ಬುತ್ತಿ ಕೊಟ್ಟು ಮತ್ತೆ ನಡೆದೇ ಮರಳಬೇಕು. ಸ್ಟೇಶನ್ನಿಗೆ ಹೋಗಿ ಹತ್ತು ಗಂಟೆಗೆ ಸೊಲ್ಲಾಪುರ ತಲುಪುತ್ತಿದ್ದ ಆ ರೈಲಿನಿಂದ ಆಸ್ಪತ್ರೆಗೆ ನಮ್ಮ ಮುತ್ತ್ಯಾ ಬುತ್ತಿ ತರುತ್ತಿದ್ದರು. 

ಬಹುಶಃ ನನ್ನವಸ್ಥೆ ನೋಡಿ ನಾನು ಬದುಕುಳಿಯುವುದಿಲ್ಲ ಎಂದೇ ಸುದ್ದಿಯಾಗಿತ್ತು ಅನಿಸುತ್ತೆ, ಸಂಬಂಧಿಕರು ಸೊಲ್ಲಾಪುರಕ್ಕೆ ಬಂದು ನನ್ನನ್ನು ನೋಡಿ ಹೋಗತೊಡಗಿದ್ದರು. ಅಪ್ಪಾ ಪ್ರತೀ ಭಾನುವಾರ ತಪ್ಪದೇ ಬರುತ್ತಿದ್ದರು. ಮೊದಲ ಸಲ ನಾನು ಅಪ್ಪಾರ ಕಣ್ಣಲ್ಲಿ ನೀರು ಕಂಡಿದ್ದು ಸೊಲ್ಲಾಪುರದಲ್ಲಿದ್ದಾಗಲೇ! ತುಂಬಾ ಬಡಕಲಾಗಿದ್ದ ನನ್ನ ಕೈಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು, ‘’ಪಪ್ಪಾ, ಇದೇನವಾ, ಕೈ ಅನ್ನೂವು ಹಗರ ಹತ್ತಿಯಂಗ ಆಗ್ಯಾವ” ಎಂದು ಕಣ್ಣುತುಂಬಿಕೊಂಡ ಕ್ಷಣವಿದೆಯಲ್ಲ, ಆಗ ‘ಹಾಗಾದರೆ ನಾನು ಇನ್ನು ಹೆಚ್ಚು ಬದುಕುವುದಿಲ್ಲವಾ?’ ಎಂದು ಹೆದರಿಕೆಯಾಗುವ ಬದಲು ಅಪ್ಪನ ಪ್ರೀತಿಯ ಸವಿಯನ್ನುಂಡ ತೃಪ್ತಿ ಅನುಭವಿಸುತ್ತಿತ್ತು ಮನಸ್ಸು. 

ತುಂಬಾ ನೋವಿದ್ದಾಗ ಹಾಸಿಗೆಯಲ್ಲಿ ಹೊರಳಲೂ ಆಗದಂತೆ ಬಿದ್ದುಕೊಂಡಿರುತ್ತಿದ್ದವಳು, ತುಸು ಚೈತನ್ಯ ಮೈಗೂಡುತ್ತಲೇ ಎದ್ದು ಆಸ್ಪತ್ರೆಯ ಕಾರಿಡಾರುಗಳಲ್ಲಿ ಓಡಾಡುತ್ತಿದ್ದೆ. ಜೋಲಿ ಹೋಗಿ ನಾನು ಬಿದ್ದರೇನು ಗತಿ ಎಂದು ಅವ್ವ ಆತಂಕಪಡುತ್ತಿದ್ದರೆ, ಎದುರಾದ ಇತರ ಪೇಶಂಟುಗಳ ಕಡೆಯವರು ನನ್ನನ್ನು ನಿಲ್ಲಿಸಿ, “ಕಿಸ್ಕೊ ಅಡ್ಮಿಟ್ ಕಿಯಾ ಹೈ ಇದರ್? “ಇಲ್ಲಿ ಯಾರನ್ನ ಅಡ್ಮಿಟ್ ಮಾಡೀರವ್ವಿ?” ಎಂದು ಕೇಳುತ್ತಿದ್ದರು. ಆಗೆಲ್ಲ ನಾನು ರೋಗಿಯಂತೆ ಕಾಣುತ್ತಿಲ್ಲವೆಂದು ತಿಳಿದು ಖುಷಿಯಾಗುತ್ತಿತ್ತು. ನಾನೇ ಪೇಶಂಟ್ ಎಂದಾಗ ಎದುರಿನವರ ಮುಖದಲ್ಲಿ ಕಾಣುತ್ತಿದ್ದ ಅಚ್ಚರಿ ಕಂಡು ಇನ್ನಷ್ಟು ಹುರುಪುಗೊಳ್ಳುತ್ತಿದ್ದೆ. 

ಹಾಗೇ ಅಡ್ಡಾಡುತ್ತಾ ವಾರ್ಡುಗಳಲ್ಲಿ ಇಣುಕುತ್ತಾ ಹೋಗುತ್ತಿದ್ದಾಗಲೇ ಇಂಜಿನಿಯರ್ ಕವಿಗಳ ವಾರ್ಡಲ್ಲಿ ಇಣುಕುವ ಮೂಲಕ ಅವರ ಪರಿಚಯವಾಯಿತು. ಅವರಿಂದಾಗಿ ಎಲ್ಲರ ಹೆಸರಿನಲ್ಲೂ ಕವಿತೆ ಕಟ್ಟುವ ಹುಚ್ಚು ಹತ್ತುವ ಮೂಲಕ ಅಷ್ಟರ ಮಟ್ಟಿಗೆ ನನ್ನ ನೋವನ್ನು ಮರೆಯಲು ಸಾಧ್ಯವಾಗುತ್ತಿತ್ತು. ಪದಗಳನ್ನು ಹುಡುಕಲು ನಾನು ತಿಣುಕುತ್ತಿದ್ದೆ. ನನ್ನ ಮೂಲಕ ಈ ಕವಿತೆ ಕಟ್ಟುವ ಹೊಸಬಗೆಯನ್ನು ಅರಿತಿದ್ದ ಅಪ್ಪಾ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ತುಂಬಾ ಚೆನ್ನಾಗಿ ಹೆಸರಿನ ಚುಟುಕುಗಳನ್ನ ಬರೆಯಲು ತೊಡಗಿದರು. ಎಷ್ಟೋ ವರುಷಗಳವರೆಗೆ ನನ್ನ ಹೆಸರಿನ ಆ ಚುಟುಕು ಬರೆದ ಹಾಳೆ ನನ್ನ ಬಳಿ ಇತ್ತು.

ಒಂದು ದಿನ ಆಸ್ಪತ್ರೆಯಲ್ಲಿ ಹೆಣ್ಣುಮಗಳೊಬ್ಬಳು ಜೋರಾಗಿ ಕಿರುಚುತ್ತಿರುವ ಧ್ವನಿ ಇಡೀ ಆಸ್ಪತ್ರೆಯ ಗೊಡೆಗೋಡೆಗೂ ತಾಗಿ ಪ್ರತಿಧ್ವನಿಸತೊಡಗಿತು. ನನ್ನ ಕೈಕಾಲು ನಡುಗತೊಡಗಿದವು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: