ಶಿಲೆಯಲ್ಲಿ ಅರಳಿದ ಪ್ರೇಮ ಕಾವ್ಯ

ಗಿರಿಜಾ ಶಾಸ್ತ್ರಿ

 

ಹಳೆಯ ಕಾಲದ ಹಾಡುಗಳು ದೂರದ ಎಲ್ಲಿಂದಲೋ ಗಾಳಿಯಲ್ಲಿ ತೇಲಿಬರುತ್ತಿದ್ದರೆ ಅದರ ವಿಶಿಷ್ಟವಾದ ಮಾಧುರ್ಯದಲ್ಲಿ ಒಂದು ರೀತಿಯ ನೋವು ಬೆರೆತಿರುತ್ತದೆ. ಯಾಕೆಂದರೆ ಕೇವಲ ರೇಡಿಯೋ ಅಥವಾ ಟ್ರಾನ್ಸಿಸ್ಟರ್‌ಗಳು ಮಾತ್ರ ಇದ್ದಂತಹ ನಮ್ಮ ಶಾಲಾ-ಕಾಲೇಜಿನ ದಿನಗಳಿಗೆ ಸೇರಿದಂತಹ ಹಾಡುಗಳವು,

ವಿಲಿಯಮ್ ಬ್ಲೇಕ್ ಹೇಳುವ (ಸಾಂಗ್ಸ್ ಆಫ್ ಇನೋಸೆನ್ಸ್) ಸ್ವಚ್ಛಂದ ಛಂದದ ಹಕ್ಕಿಗಳ ಲೋಕದೊಳಗೆ ಹಾಸು ಹೊಕ್ಕಾಗಿ ಸೇರಿಬಿಟ್ಟ ಹಾಡುಗಳ ಕಾಲವದು. ಈಗ ಇಳಿವಯಸ್ಸು ಸಮೀಪಿಸುತ್ತಿರುವ ಕಾಲದಲ್ಲಿ ಅವು ‘ಗಾಳಿ ಹೆಜ್ಜೆ ಹಿಡಿದು’ ಬಂದು ನಮ್ಮ ಕಿವಿತಾಗಿತೆಂದರೆ ಒಳಗೆ ಬೆಚ್ಚಗೆ ಅವಿತುಕೊಂಡಿರುವ ನೂರಾರು ಲೋಕಗಳು ಅನಾಮತ್ತಾಗಿ ತೆರೆದುಕೊಂಡು ಬಿಡುತ್ತವೆ.

ಅಷ್ಟೇ ಅಲ್ಲ ನಮ್ಮ ಕಿಟಕಿ ಸರಳುಗಳಾಚೆ ಇಣಕುವ ಗಿಡ-ಮರಗಳೂ ಅದರ ಲಯಕ್ಕೆ ತಕ್ಕಂತೆ ತೊನೆದಾಡುತ್ತವೆ. ಅವು ಹಾಗೆ ಗಾಳಿಯಲ್ಲಿ ತೇಲಿ, ಗಿಡಗಂಟಿ ದಾಟಿ ಬಂದು ಮುಟ್ಟುವುದು ನಮ್ಮ ಕಿವಿಗಳನ್ನು ಮಾತ್ರವಲ್ಲ. ಬದಲಾಗಿ, ಪಂಚೇಂದ್ರಿಯಗಳ ಬಾಗಿಲು ತಟ್ಟಿ, ರೂಪ, ರಸ, ಗಂಧ, ಸ್ಪರ್ಶಗಳಲ್ಲಿ ನಮ್ಮೊಳಗೆ ಮೈದಳೆಯುವ ಬಗೆ ಮಾತ್ರ ಬೆರಗು ಹುಟ್ಟಿಸುವಂತಹುದು. ಈ ಬೆರಗೇ ನಮ್ಮೊಳಗೆ ಸುಮಧುರ ನೋವಿಗೆ ಕಾರಣವಾಗುತ್ತದೆ. ಸುಮಧುರ -ಯಾಕೆಂದರೆ ಅವು ನಮ್ಮ ಬಾಲ್ಯಕಾಲ ಸಂಗಾತಿಗಳು, ಆದರೆ ಈಗ ಆ ಬಾಲ್ಯಕಾಲ ಎನ್ನುವುದು ಕಳೆದು ಹೋಗಿ, ಕೇವಲ ನೋವನ್ನು ಮಾತ್ರ ಉಳಿಸಿಬಿಟ್ಟಿದೆ. ಬದುಕಿಗೆ ರಿವರ್ಸ್ ಗೇರ್ ಎನ್ನುವುದು ಇಲ್ಲವಾದ್ದರಿಂದ ಆ ಕೆಲಸವನ್ನು ಇಂತಹ ಕ್ಲಾಸಿಕ್ ಎನ್ನಬಹುದಾದ ಹಾಡುಗಳು ಮಾಡುತ್ತಿವೆ.

ಆಗ್ರಾದ ತಾಜ್‍ಮಹಲ್ ಮುಂದೆ ನಿಂತಾಗ ನನ್ನ ಕಿವಿಯೊಳಗೆ ತೂರಿಬಂದುದು ‘ತಾಜ್‍ಮಹಲ್’ (೧೯೬೩) ಸಿನಿಮಾದ ಹಾಡುಗಳು. ‘ಜೊ ವಾದಾ ಕಿಯಾ ವೋ ನಿಭಾನಾ ಪಡೇಗಾ’ (ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು) ಎನ್ನುವ ರಫಿ ಮತ್ತು ಲತಾ ಹಾಡಿರುವ ಸಾಲು, ಸಿನಿಮಾದಲ್ಲಿ ಇದು ರಾಜ, ತನ್ನ ಪ್ರೇಯಸಿಗೆ ಮಾತ್ರ ಹೇಳಿದುದಲ್ಲ. ಶಹಜಹಾನನ ಪ್ರೀತಿಯ ಹೆಂಡತಿ ಮಮತಾಜ್ ಮರಣ ಶಯ್ಯೆಯಲ್ಲಿ ಮಲಗಿದಾಗ ತನ್ನ ನೆನಪಿಗಾಗಿ ಒಂದು ಸ್ಮಾರಕ ಕಟ್ಟಬೇಕೆಂದು ಕೇಳಿಕೊಂಡಳಂತೆ.

 

 

ಅವಳಿಗೆ ಕೊಟ್ಟ ವಚನವನ್ನು ತಾಜ್‍‍‍‍‍‍ಮಹಲ್‌ನ್ನು ಕಟ್ಟುವುದರ ಮೂಲಕ ಲೋಕದ ಅನೇಕ ಅದ್ಭುತಗಳಲ್ಲಿ ಒಂದಾದ ಸ್ಮಾರಕ ನಿರ್ಮಿಸಿ ರಾಜ ವಚನವನ್ನು ಪೂರೈಸಿದ. ‘ಜೋ ವಾದಾಕಿಯಾ ವೋ ನಿಭಾನಾ ಪಡೇಗಾ’ ಹಾಡಿನ ಸಾಲು ಅವನ ವಚನದ ನಿಭಾವಣೆಗೆ ಪ್ರತೀಕವಾಗಿ ನಿಂತಿದೆ. ಇದು ಅವನು ಚರಿತ್ರೆಗೆ ಕೊಟ್ಟ ಪ್ರೇಮ ಜಗತ್ತಿನ ಉತ್ಕೃಷ್ಟ ಕೊಡುಗೆ. ಆದುದರಿಂದಲೇ ತಾಜ್‍ಮಹಲ್ ಇಡೀ ಲೋಕವನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ವಿದೇಶೀ ಪ್ರಣಯಿಗಳಿಗಂತೂ ಅವರ ಪ್ರಣಯ ಚೇಷ್ಟೆಗಳಿಗೆ ಇದು ಸೊಗಸಾದ ಹಿನ್ನೆಲೆಯನ್ನು ಒದಗಿಸುತ್ತದೆ. ವಾಸ್ತುಶಿಲ್ಪಿಗಳಿಗೆ, ಪುರಾತತ್ವ ಶೋಧಕರಿಗಂತೂ ಸಂಶೋಧನೆಯ ಆಗರ. ಸೌಂದರ್ಯಾರಾಧಕರಿಗೆ ಬಿಳಿ ಶಿಲೆಯಲ್ಲಿ ಅರಳಿದ ಕಮಲದ ಕಿರೀಟ. (ಉರ್ದುವಿನಲ್ಲಿ ತಾಜ್ ಎಂದರೆ ಮುಕುಟ)

‘ಪ್ರೇಮಿ ತನ್ನ ಪ್ರಿಯತಮೆಗಾಗಿ ಹೂಹಾಸಿಗೆಯನ್ನು ಹಾಸಿದ್ದಾನೆ. ಆದರೆ ಅವುಗಳಿಗೆ ನೋವಾಗಬಹುದೆಂದು ಅವಳು ಹೂಗಳನ್ನು ತುಳಿಯದ ಹಾಗೆ ನಿಧಾನ ನಡೆದು ಬರುತ್ತಿದ್ದಾಳೆ. “ಪಾಂವ್ ಚೂಲೇ ನೇ ದೋ ಫೋಲೋಂಕಾ ಇನಾಯತ್ ಹೋಗಿ…. ರ‍್ನಾ ಹಮ್ ಕೋ ನಹೀ ಇನಕೋ ಭೀ ಶಿಕಾಯತ್ ಹೋಗಿ” (ನಿನ್ನ ಪಾದಗಳನ್ನು ಹೂಗಳು ಚುಂಬಿಸಲಿ ಬಿಡು ಪಾವನವಾಗಲಿ ಅವು, ಇಲ್ಲದಿದ್ದರೆ ನಾನು ಮಾತ್ರವಲ್ಲ ನಿನ್ನ ಮೇಲೆ, ಅವುಗಳೂ ಕೋಪಗೊಳ್ಳಬಹುದು) ‘ಇತ್ನಾ ರುಕ್ ರುಕ್ ಕೆ ಚಲೋಗಿ ತೊ ಕಯಾಮತ್ ಹೋಗಿ’ (ನೀನು ಇಷ್ಟು ಮಂದ ಗತಿಯಿಂದ ತಡೆ ತಡೆದು ನಡೆದು ಬರುತ್ತಿದ್ದರೆ ಪ್ರಳಯವಾಗಿಬಿಡಬಹುದು!), ಎನ್ನುತ್ತಾನೆ ನಾಯಕ.

ಸಾಹಿರ್ ಲೂಧಿಯಾನ್ವಿ ರಚನೆಯ ಮಹಮದ್ ರಫಿ ಮತ್ತು ಲತಾ ಹಾಡಿರುವ ಈ ಹಾಡು ಶಹಜಹಾನ್ ಮಮತಾಜಳಿಗೆ ಹಾಸಿದ ಬಿಳಿ ಅಮೃತ ಶಿಲೆಯ ನುಣುಪಾದ ನಡೆಮುಡಿಯ ಹಾಸುಗಳು. ಇಲ್ಲಿ ಮಮತಾಜಳಂತೆಯೇ ನಿಧಾನಗತಿಯಿಂದ ನಯವಾಗಿ ಎಚ್ಚರವಾಗಿ ನಡೆಯಬೇಕು. ಅಷ್ಟು ನುಣುಪಾದ ಬಿಳಿ ಹಾಸುಗಳು. ಯಾಕೆಂದರೆ ಇವು ಮಮತಾಜ್‌ಳ ನಾಜೂಕು ಕಾಲುಗಳಿಗೆ ಹೇಳಿ ಮಾಡಿಸಿದವು. ಅದಕ್ಕೆ ಒಳಗೆ ಚಪ್ಪಲಿ ಧರಿಸಿ ಹೋಗುವ ಹಾಗಿಲ್ಲ ಚಪ್ಪಲಿ, ಬೂಟುಗಳ ಮೇಲೆಯೇ ಧರಿಸಿಕೊಳ್ಳಬಹುದಾದ ಪ್ಲಾಸ್ಟಿಕ್ ಕಾಲುಚೀಲಗಳನ್ನು ಇಡಲಾಗಿದೆ. ೧೦ ರೂಪಾಯಿ ಕೊಟ್ಟು ಅವುಗಳನ್ನು ಧರಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಬರಿಗಾಲಲ್ಲಿ ಒಳ ಹೋಗಬೇಕು. ಎಷ್ಟೆಂದರೂ ಅದು ಪ್ರೇಮ ಮಂದಿರ.

ತಾಜಮಹಲ್‍‍ನ್ನು ನೋಡಬೇಕೆಂದರೆ ನಿನ್ನ ಜೊತೆಯೇ ಎಂದು ಹಟತೊಟ್ಟು ಎರಡು ಸಲ ದೆಹಲಿಗೆ ಹೋದಾಗಲೂ ಆಗ್ರಾಕ್ಕೆ ಹೋಗದೆ ಮರಳಿ ಬಂದಿದ್ದ ಗಂಡ. ಕಾಲ ಕಳೆದು ಹೋಗಿತ್ತು. ಈಗ ಇಳಿವಯಸ್ಸಿನಲ್ಲಿ ಮಂಡಿನೋವು, ಸಂಧಿವಾತದಿಂದ ಕುಂಟುತ್ತಾ ಆಗ್ರಾ ನೋಡಲು ಬಂದಿದ್ದೆವು. ಇದು ಸಕಾಲವಲ್ಲ ಆದರೂ.. ತಾಜ್‍ಮಹಲ್ ಪ್ರವೇಶ ದ್ವಾರದಲ್ಲಿ ಹಲವಾರು ಪೊಲೀಸರ ಕಾವಲು ಪಡೆ.

”ಹೋಗಲಿ ಬಿಡು ಅವರು ಅಂದು ಪ್ರೀತಿಸಿದ್ದರಿಂದ ಎಷ್ಟೊಂದು ಜನರ ಬದುಕಿಗೆ ಈಗ ದಾರಿಯಾದರೂ ಆಗಿದೆಯಲ್ಲ”. ಹುಸಿ ನಗೆ ನಕ್ಕ. ಯಾವಾಗಲೂ ಮಾರ್ಕ್ಸಿಸ್ಟ್ ಕಣ್ಣುಗಳಿಂದ ನೋಡಿದರೆ ತಾಜ್‍ಮಹಲಿನ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಿಲ್ಲ. ಆ ಮಾರ್ಕ್ಸನ್ನು ಒಂದುಗಳಿಗೆ ಪಕ್ಕಕ್ಕಿಡು ಮಾರಾಯ. ೫೦೦ ವರುಷಗಳಿಂದ ಕಾಲನ ಯಾವ ಪ್ರಕೋಪಕ್ಕೂ ಜಗ್ಗದೆ ಹೇಗೆ ಭವ್ಯವಾಗಿ ನಿಂತಿದೆ? ಮುನಿಸು ನನಗೆ.

”ಇದು ಬೆವರು ರಕ್ತ ಶಿಲೆಗಳಲ್ಲಿ ಅರಳಿದ ಪ್ರೇಮ ಕಾವ್ಯ” ಈಗ ಪರವಾಗಿಲ್ಲವಾ?
”ಇದನ್ನು ಒಪ್ಪಬಹುದೇನೋ” ತಲೆಯಾಡಿಸಿದೆ.

 

 

ಅಷ್ಟರಲ್ಲಿ ಸರ್ ಸರ್ ಪಚ್ಚಾಸ್ ರುಪೈಯಾ ಏಕ್, ದೋಸೌ ರುಪೈಯಾ ಪಾಂಚ್ ಎನ್ನುತ್ತಾ ಫೋಟೋ ಗ್ರಾಫರುಗಳು ಮುತ್ತಿಕೊಂಡರು. ಒಬ್ಬನಂತೂ ನಾನಾ ಭಂಗಿಯಲ್ಲಿ ಕೈಕಾಲು ತಿರುಗಿಸಿ ನಿಲ್ಲಲು ಹೇಳಿದ.

”ನಾವೇನು ನವ ಪ್ರೇಮಿಗಳಲ್ಲ.. ಬೂಢೇ ಪ್ರೇಮಿಗಳು (ಆಗಳೋ ಮೇಣ್ ಈಗಳೋ ಸಾಗುದುರೆಗಳು!) ಸರಳವಾಗಿ ತೆಗೆ ಸಾಕು” ಎಂದು ಗದರಿದ್ದಕ್ಕೆ ಸುಮ್ಮನಾದ. ತಾಜ್‍ಮಹಲನ್ನು ಕೈಯಲ್ಲಿ ಹಿಡಿದುಕೊಂಡಿರುವ ಹಾಗೆ ಫೋಟೋ ತೆಗೆಯುತ್ತೇನೆಂದ. ನನಗೆ ರೇಗಿ ಹೋಯಿತು. ನಿನ್ನ ಗಿಮಿಕ್ಕೆಲ್ಲಾ ಬೇಡ ಎಂದೆ. ಅದರ ವೈಶಾಲ್ಯತೆಯ ಎದುರಿಗೆ ನಾವು ಬೆಂಕಿಪೊಟ್ಟಣಗಳು! ಭವ್ಯತೆಯ ಮುಂದೆ ಕುಬ್ಜರು ! ಅಂಥ ಭವ್ಯ ಕಲಾಕೃತಿಯನ್ನು ಆಟದ ಸಾಮಾನಿನಂತೆ ಕೈಯಲ್ಲಿ ಹಿಡಿದು ನಿಲ್ಲಬೇಕಂತೆ! ಫೋಟೋಗಳ ಹಾವಳಿಯಲ್ಲಿ ಭೂಮಾನುಭೂತಿಯೊಂದು ಹೇಗೆ ನಾಶವಾಗಿಬಿಡುತ್ತದೆ. ಮನುಷ್ಯನ ಅಹಂಕಾರಕ್ಕೆ ಮಿತಿಯೆಂಬುದೇ ಇಲ್ಲ.

ಪಾಪ ಈ ಮೊಬೈಲ್ ಹಾವಳಿಯಿಂದಾಗಿ ಅವರಿಗೂ ಸಂಪಾದನೆ ಕಡಿಮೆಯಾಗಿ ಬಿಟ್ಟಿದೆ.. ಹೋಗಲಿ ಬಿಡು ಪಾಪ ಅವರೂ ಬದುಕಿಕೊಳ್ಳಲಿ.. ಅವರ ಕೈಯಲ್ಲಿ ಯಾಕೆ ಜಗಳ? ನಕ್ಷತ್ರಿಕರ ಹಾಗೆ ಬೆನ್ನಟ್ಟಿ ಬಂದು ಏನೇನೋ ಫೋಟೋಷಾಪ್ ಮಾಡಿ ನಾವು ಇರುವುದಕ್ಕಿಂತ ಸುಂದರವಾಗಿ ತೋರಿಸಿ ಹಣ ಕೀಳುತ್ತಾರೆ. ಇವರನ್ನು ಸುಮ್ಮನೆ ಬಿಡಬೇಕಾ?

ಎಲ್ಲರಿಗೂ ಪ್ರೇಮದ ಜೊತೆಗೆ ಗುರುತಿಸಿಕೊಳ್ಳುವುದೆಂದರೆ ಎಷ್ಟು ಇಷ್ಟ ಅಲ್ಲವಾ? ನನಗೆ ಅಚ್ಚರಿ. ಪ್ರೇಮದ ಜೊತೆಗೋ? ಸಮಾಧಿಯ ಜೊತೆಗೋ? ಇಲ್ಲ ಪ್ರೇಮ ಸಮಾಧಿಯ ಜೊತೆಗೋ? ಪ್ರೇಮದ ಸಮಾಧಿ ಅಲ್ಲ. ಪ್ರೇಮಕ್ಕೆ ಸಾಧನವಾದವರ ಸಮಾಧಿಯಷ್ಟೆ. ನಿಜ ಜೀವನದಲ್ಲಿ ಪ್ರೇಮ ಶಾಶ್ವತವಾಗಿರುತ್ತದೋ ಇಲ್ಲವೋ ತಿಳಿಯದು, ಆದರೆ ಅದರ ಸ್ಮಾರಕವಂತೂ ಅಮರ.

‘ಸೂರ್ಯ ಚಂದ್ರರ ಬೆಳಕು ಇರುವವರೆಗೂ ನಮ್ಮ ಪ್ರೇಮಕ್ಕೆ ಭಂಗ ಬರದು’ ಎಂದು ಮಮತಾಜ್ ಪಾತ್ರದ ಬೀನಾ ರಾಯ್ ಶಹಜಹಾನ್ ಪಾತ್ರದ ಪ್ರದೀಪ್ ಕುಮಾರನಿಗೆ (ಜೋ ವಾದಾ ಕಿಯಾ) ಚರಿತ್ರೆಯಲಿ ಅಮರ ಕಥೆಯ ಛಾಪನ್ನೊತ್ತಿದ ಹಾಗೆ ಹೇಳುವ ಸಾಲುಗಳಂತೂ ತಾಜ್ ಮಹಲಿನ ಅಮರತ್ವಕ್ಕೆ ಪ್ರತೀಕವಾಗಿದೆ. ಇನ್ನೊಂದು ಹಾಡಿನಲ್ಲ್ಲಿ “ಜೊ ಬಾತ್ ತುಜಮೇ ಹೈಂ ತೇರೀ ತಸವೀರ್ ಮೇ ನಹೀಂ” (ನಿನ್ನೊಳಗಿರುವ ವೈಶಿಷ್ಟ್ಯ ನಿನ್ನ ಚಿತ್ರದೊಳಗಿಲ್ಲ) ಎಂದು ಶಹಜಾನ್ ಮಮತಾಜಳಿಗೆ ಹೇಳುತ್ತಾನೆ. ಆದರೆ ನಿಜವಾಗಿ ಶಹಜಾನ ಮಮತಾಜರ ಪ್ರೇಮವನ್ನೂ ಮೀರಿದುದು ಸ್ಮಾರಕ. ಸ್ಮಾರಕವನ್ನೂ ಮೀರಿದುದು ಪ್ರೇಕ್ಷಕರ ಕಲ್ಪನೆ. ಕಲೆಯ ಸಾರ್ಥಕತೆಯೇ ಅದು, ಒಂದನ್ನೊಂದು ಮೀರಿಸುವ ರೂಪಕಗಳಾಗಿ ಬೆರಗು ಹುಟ್ಟಿಸುವಂತಹದ್ದು. ಈ ಬೆರಗು ಹಾಡಿನೊಳಗೆ ಬೆರೆತಾಗ ತೆರೆದುಕೊಳ್ಳುವ ರೊಮ್ಯಾಂಟಿಕ್ ಲೋಕವೇ ಬೇರೆ.

ತಾಜಮಹಲ್ ಮತ್ತು ಶಹಜಹಾನನ ಅರಮನೆಯ ಮಧ್ಯೆ ಯಮುನೆ ಹರಿಯುತ್ತಾಳೆ. ತನ್ನ ಕೊನೆಯ ದಿನಗಳಲ್ಲಿ ಆಗ್ರಾದ ಅರಮನೆಯೊಳಗೇ ಬಂದಿಯಾದ ಶಹಜಹಾನ ದೂರದಲ್ಲಿ ಕಾಣುವ ತಾಜಮಹಲನ್ನೇ ನೋಡುತ್ತಾ, ರತ್ನಖಚಿತ ಅರಮನೆಯ ಕಂಭಗಳ ಮೇಲೆ ಮೂಡುತ್ತಿದ್ದ ಅದರ ಪ್ರತಿಬಿಂಬವನ್ನೇ ಕಾಣುತ್ತಾ ಕೊನೆಯುಸಿರೆಳೆದನಂತೆ. ಅವನ ಮರಣಾನಂತರ ಒಂದು ನಾವೆಯಲ್ಲಿ ಸಾಗಿಸಿ ತಾಜಮಹಲಿನಲ್ಲಿ ಮಮತಾಜಳ ಬದಿಗೆ ಸಮಾಧಿ ಮಾಡಲಾಯಿತೆಂದು ಕಥೆಯಿದೆ.

ಅಲ್ಲಿಗೆ ಭೇಟಿಕೊಡುವ ಪ್ರತಿ ಪ್ರೇಕ್ಷಕರ ಗ್ರಹಿಕೆಗೆ ತಕ್ಕಂತೆ ತಾಜ್‌ಮಹಲ್ ತನ್ನ ಪ್ರತಿಬಿಂಬವನ್ನು ಬಿಟ್ಟುಕೊಡುತ್ತಾ ತನ್ನ ಇರವನ್ನು ಸಾರ್ಥಕಗೊಳಿಸಿಕೊಳ್ಳುತ್ತಿದೆ. ಕೆಲವರು ಅದರ ಪ್ರೇಮಪ್ರತಿಬಿಂಗಳನ್ನು ಎದೆಯಲ್ಲಿಟ್ಟುಕೊಂಡು ವಿಸ್ಮಯ ಹಾಗೂ ಭಾರವಾದ ಮನಸ್ಸಿನಿಂದ ತೆರಳಿದರೆ ಇನ್ನೂ ಕೆಲವರು ಪ್ರವಾಸದ ಉಲ್ಲಾಸದಿಂದ ಮರಳುತ್ತಾರೆ.
ಇದನ್ನು ನಿರ್ಮಿಸಲು ಇಪ್ಪತ್ತು ಸಾವಿರ ಕಾರ್ಮಿಕರು ಮತ್ತು ಒಂದುಸಾವಿರ ಆನೆಗಳನ್ನು ಬಳಸಲಾಯಿತೆಂಬ ಐತಿಹ್ಯವಿದೆ. ಇಂತಹ ಅಪ್ರತಿಮ ಸೌಂದರ್ಯವೊಂದನ್ನು ಪಟ್ಟಬಧ್ರ ಹಿತಾಸಕ್ತಿಯ ಕಣ್ಣಿನಿಂದ ನೋಡಹೋದರೆ, ಈ ಅದ್ಭುತ ವಾಸ್ತಶಿಲ್ಪ, ಅನನ್ಯ ಪ್ರೇಮ ಮರೆಯಾಗಿಬಿಡುತ್ತದೆ.

ಹೊರಗೆ ರಣ ಬಿಸಿಲಲ್ಲಿ ಬಂದಾಗ ಯಾವುದೋ ಒಂದು ಸಣ್ಣ ಟೀ ಅಂಗಡಿ. ಮುರುಕಲು ಕುರ್ಚಿ ಮೇಲೆ ಕುಳಿತಾಗ ‘ತಾಜಮಹಲ್’ ನ ರಫೀ ಮತ್ತು ಲತಾರವರನ್ನು ಮತ್ತೆ ರೀವೈಂಡ್ ಮಾಡಿದೆ. ಕೇಳುಗರ ಮನದೊಳಗಿನ ಅನೂಹ್ಯ ಲೋಕಕ್ಕೆ ಲಗ್ಗೆ ಹಾಕುವ ಕಾವ್ಯಾತ್ಮಕತೆ ಮತ್ತು ಮಾಧುರ್ಯ ಎರಡನ್ನೂ ಏಕಕಾಲಕ್ಕೆ ಉಣಬಡಿಸುವ ಇಂತಹ ಹಾಡುಗಳನ್ನು ಕೇಳುವುದರ ಮೂಲಕ ಬದುಕನ್ನೂ ಕೂಡ ಹೀಗೆ ರೀವೈಂಡ್ ಮಾಡಿಕೊಳ್ಳಬಹುದೆನಿಸಿತು.

“ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜದುಃಖ ಮರೆಸಬಹದೆ?” ಎಂದು ಬೇಂದ್ರೆ ಹೇಳಿದ್ದಾರೆ ನಿಜ. ಆದರೆ ಇಂತಹ ವೈಯಕ್ತ್ತಿಕ ದುಃಖವೊಂದು ಸಾರ್ವಜನಿಕವಾಗಿ ಸಾರ್ವಕಾಲಿಕವಾಗುವುದು ಕಲೆಯ ವೈಶಿಷ್ಟ್ಯ !! ಅಳಿದ ಮೇಲೆ ಉಳಿಯುವುದೆಂದರೆ ಇದೇ ಅಲ್ಲವೇ?

‍ಲೇಖಕರು Avadhi Admin

September 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ಸಂಗನಗೌಡ

    ಉತ್ತಮವಾದ ನೆರೇಷನ್ ನನಗೆ ಎಲ್ಲಲ್ಲೋ ಕರೆದುಕೊಂಡು ಹೋಯಿತು

    ಪ್ರತಿಕ್ರಿಯೆ
  2. T S SHRAVANA KUMARI

    ಸುಂದರ ಬರಹ. ತುಂಬಾ ಖುಷಿ ಆಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: