ಕನ್ನಡದ ಸಶಕ್ತ ಅಭಿವ್ಯಕ್ತಿ ‘ಮೂರನೇ ಕಣ್ಣು’

 

 

 

 

 

 

ವಸುಂಧರಾ ಕೆ.ಎಂ.

 

ಓದುವುದು ಏತಕ್ಕಾಗಿ..? ಮಕ್ಕಳು,ವಿದ್ಯಾರ್ಥಿ, ಪರೀಕ್ಷಾರ್ಥಿಗಳು ಓದುವುದು ಜ್ಞಾನಾರ್ಜನೆಗಾಗಿ, ಪರೀಕ್ಷೆಗಾಗಿ, ಉದ್ಯೋಗಕ್ಕಾಗಿ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಮೇಲಿನ ಉದ್ದೇಶ ಹೊರತುಪಡಿಸಿ, ಆ ಮೂರೂ ವರ್ಗಕ್ಕೆ ಸೇರದೇ ಇರುವವರು ಓದುವುದು ಏಕೆ? ತಮ್ಮ ಬುದ್ಧಿಮತ್ತೆಯನ್ನು ಮತ್ತೂ  ಹರಿತಗೊಳಿಸಲು, ಆನಂದಿಸಲು, ನೆಮ್ಮದಿಗಾಗಿ, ಹವ್ಯಾಸಕ್ಕೆ   ಓದುಬಹುದು. ಹೀಗೆ ಓದುವ ಎರಡನೇ ಗುಂಪಿನಲ್ಲಿ ವಿಭಿನ್ನ ಅಭಿರುಚಿಯುಳ್ಳ ಓದುಗರಿರುತ್ತಾರೆ. ಅವರು ಆಯ್ದುಕೊಳ್ಳುವ ಪುಸ್ತಕವೂ ಅವರ ಅಭಿರುಚಿಗೆ ಪೂರಕವಾಗಿರುತ್ತವೆ.

ನನ್ನ ಓದೂ ಸಹ ಇದಕ್ಕೆ ಹೊರತಾಗಿಲ್ಲ. ವಿಜ್ಞಾನ ಮತ್ತು ವೈಚಾರಿಕತೆಗೆ ಸಂಬಂಧಿಸಿದ ಲೇಖನ, ಪ್ರವಾಸ ಸಾಹಿತ್ಯ, ಕತೆ, ಲಘು ಬರಹ, ಪ್ರಬಂಧ, ಕಾವ್ಯ, ಅಂಕಣ ಬರಹ, ಹೊಸ ಬಗೆಯ ಕೃತಿಗಳನ್ನು  ಆರಿಸಿಕೊಂಡು ಓದುವುದರಲ್ಲಿ  ನನಗೆ ಬಹಳ ಆಸಕ್ತಿ.

ಇಂತಹದ್ದೇ ಆಸ್ಥೆಯಲ್ಲಿ ಇತ್ತೀಚೆಗೆ ಓದಿದ ಒಂದು ಕೃತಿ ನನ್ನ  ಚಿತ್ತಾಪಹರಿಸಿತು. ಆ ಕೃತಿಯ ಬಗ್ಗೆ ನಾನಿಲ್ಲಿ ಹೇಳಲೇಬೇಕಿದೆ. ಏಕೆಂದರೆ, ಇದು ಕನ್ನಡದ ಒಂದು ಚೆಂದದ ಪುಸ್ತಕವಾಗಿದ್ದು, ನಿಮ್ಮ ಮುಂದಿನ ಓದಿಗಾಗಿ ಆರಿಸಿಕೊಳ್ಳುವ ಸಲುವಾಗಿ ನನ್ನ ಒಂದು ಪೂರ್ವ ಪೀಠಿಕೆ ;

ಮಿತ್ರರಾದ ‘ವಿನಯ್ ಬಿಳಗುಂಬ’ ಚಾಮರಾಜ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಶಿಷ್ಟವಾಗಿ ಆಯೋಜಿಸಿದ್ದರು. ಅದರಲ್ಲಿ ಕೇವಲ ಆರು ಮಂದಿಯ ಕವಿಗೋಷ್ಠಿಯೂ ಒಂದು. ಅಲ್ಲಿ ನನಗೂ ಅವಕಾಶವಿತ್ತು. ನನ್ನನ್ನು ಹೊರತುಪಡಿಸಿ ಅದರಲ್ಲಿದ್ದ ಪ್ರಸಿದ್ಧರೆಂದರೆ, ಭಾರತೀದೇವಿ, ಚಿದಾನಂದ ಸಾಲಿ ಹಾಗೂ ಸ್ವಾಮಿ ಪೊನ್ನಾಚಿ. ಭಾರತಿ ಬಿಟ್ಟರೆ ನನಗೆ ಹೊಸ ಪರಿಚಯ ಸಾಲಿ ಹಾಗೂ ಪೊನ್ನಾಚಿ.

 

ಚಿದಾನಂದ ಸಾಲಿ

 

ಚಿದಾನಂದ ಸಾಲಿ ಎಂಬ ಹೆಸರು ಈ ಮೊದಲೇ  ಕನ್ನಡ ಸಾಹಿತ್ಯ ಲೋಕದಲ್ಲಿನ ಅವರ ಕೃಷಿ ಹಾಗೂ ಸಾಧನೆಯಿಂದ ನನ್ನ ಕಿವಿಗೆ ಬಿದ್ದಿತ್ತು.  ವೈಯಕ್ತಿಕವಾಗಿ ಪರಿಚಯವಾದದ್ದು ಚಾಮರಾಜನಗರದಲ್ಲಿಯೇ. ಅಂದು ವೇದಿಕೆಯ ಮೇಲೆ ಅವರು ವಾಚಿಸಿದ ‘ಮಗಳನ್ನು ಕುರಿತ ಗಜ಼ಲ್’ ಜನಮನ್ನಣೆಗೆ ಪಾತ್ರವಾಗಿ ಒನ್ಸ್ಮೋರ್ ಕೂಗಿಗೆ ಶರಣಾಗಿ ಮತ್ತೊಮ್ಮೆ ವಾಚಿಸಿದಾಗಲೂ ಅಮೋಘ ಕರತಾಡನ ಗಿಟ್ಟಿಸಿ ಮನಸೂರೆಗೊಂಡಿತು.

ಹಾಗೆ ಪರಿಚಯವಾದ ಸಾಲಿಯವರೊಂದಿಗಿನ ಸ್ನೇಹ ಮುಂದುವರೆದು, ಒಂದೆರಡು ಪುಸ್ತಕ ವಿನಿಮಯ, ಆಗಾಗ್ಗೆ ಫೋನಿನಲ್ಲಿ ವಿಶ್ವಾಸದ ಮಾತುಕತೆ ಆಡುವವರೆಗೆ ಬೆಳೆದಿದೆ. ಹಾಗೆಯೇ ರಾಮನಗರ ಜಿಲ್ಲೆಯ ಸಹೃದಯಿ ಸ್ನೇಹಿತರನ್ನೊಳಗೊಂಡ ಪುಸ್ತಕ ಮಂಥನದಲ್ಲಿಯೂ ಸಾಲಿಯವರ “ಧರೆಗೆ ನಿದ್ರೆಯು ಇಲ್ಲ” ಎಂಬ ಕಥಾ ಸಂಕಲನವನ್ನು ವಿಶೇಷವಾಗಿ ಓದಿ ಚರ್ಚಿಸಲಾಗಿದೆ.

ಬಹಳ ಹಿಂದೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಸಾಲಿಯವರು ಬರೆದ ‘ಮೂರನೇ ಕಣ್ಣಿಗೆ ನೂರಾರು ಗಾಯ’ ಪ್ರಬಂಧವು ನನಗೆ ಅವರ ಬರವಣಿಗೆಯ ಸಾಧ್ಯತೆಯ ವಿರಾಟ್ ದರ್ಶನ ಮಾಡಿಸಿತು.

ಈಗ  ‘’ಮೂರನೇ ಕಣ್ಣು’’ ಎಂಬ ಹೆಸರಿನಿಂದಲೇ ಸಾಲಿಯವರ ಪ್ರಬಂಧಗಳ ಸಂಕಲನ  ‘ಪಲ್ಲವ ಪ್ರಕಾಶನ’ದಿಂದ ಹೊರಬಂದಿದೆ. ಕೃತಿಯ ಆರಂಭದಲ್ಲಿರುವ ಶ್ರೀ ನಾಗೇಶ್ ಹೆಗಡೆಯವರ ಸುದೀರ್ಘ ಮುನ್ನುಡಿಯು ಕೃತಿಯನ್ನು ಓದುವ ಮೊದಲೇ ಮೋಹಿಸುವಂತೆ ಮಾಡಿಬಿಡುವಷ್ಟು ಚೆಂದ ಬಂದಿದೆ. ಹಾಗಾಗಿ ಈ ಪ್ರಬಂಧ ಸಂಕಲನವನ್ನು ಹೊಸದಾಗಿ ಓದುವವರು, ಎಲ್ಲಾ ಪ್ರಬಂಧಗಳನ್ನು ಮೊದಲು ಓದಿ ಅನಂತರ ಕಡೆಯಲ್ಲಿ ಮುನ್ನುಡಿಯನ್ನು ಓದಬೇಕೆಂದು ಹೇಳಲಿಚ್ಚಿಸುತ್ತೇನೆ. ಏಕೆಂದರೆ, ಮುನ್ನುಡಿ ಓದಿದ ಮೇಲೆ ಪುನಃ ಮೊದಲಿನಿಂದ ಎಲ್ಲಾ ಲೇಖನಗಳನ್ನು  ಓದಬೇಕೆಂದು ಇಚ್ಛೆ ಮೂಡಿಸುವಂತೆ ಮುನ್ನುಡಿ ಬಂದಿದೆ.

ಒಟ್ಟು 12 ಪ್ರಬಂಧಗಳಿರುವ ಈ ಸಂಕಲನ ತನ್ನ ವಸ್ತು ವಿವಿಧತೆ, ಲೇಖಕರ ಅಸಾಧಾರಣ ಗ್ರಹಿಕೆ, ನಿರೂಪಣಾ ಕೌಶಲ,ಭಾಷಾ ಹಿಡಿತ, ಅಭಿವ್ಯಕ್ತಿ ಶೈಲಿಯಿಂದಾಗಿ ಓದುಗರನ್ನು  ನಿಸ್ಸಂಶಯವಾಗಿ ಮರಳು ಮಾಡುತ್ತದೆ.

ಸಾಲಿಯವರ ಲೇಖನಿಯು ಜೀವನಾನುಭವ ಎನ್ನುವ ಮಸಿಯನ್ನು ಕುಡಿದಿದೆಯೇನೋ ಎಂಬಂತೆ ಅವರು ಪ್ರಸ್ತುತಪಡಿಸುವ ಪ್ರಬಂಧಗಳು ತಮ್ಮ ವಿಷಯ ವೈವಿಧ್ಯದೊಂದಿಗೆ ಅವರು ಕಂಡಿರುವ ಈ ನೆಲದ ಜನ ಜೀವನವನ್ನು  ಯಥಾವತ್ ಚಿತ್ರಿಸುತ್ತವೆ. ಹಾಗೆಯೇ ಕನ್ನಡ ಸೇರಿದಂತೆ ತೆಲಗು, ಹಿಂದಿ, ಇಂಗ್ಲೀಷ್ ಭಾಷೆಗಳ ಮೇಲಿರುವ ಅವರ ಪ್ರಭುತ್ವಕ್ಕೆ  ಮತ್ತು ಸಾಲಿಯವರ ಓದಿನ ವಿಸ್ತಾರಕ್ಕೆ, ಜನರೊಂದಿಗಿನ ವಿಶಾಲ ಒಡನಾಟದ ವ್ಯಾಪ್ತಿಗೆ,  ವಿಮರ್ಶಾ ಮನಸ್ಥಿತಿಗೆ ಸಾಕ್ಷಿಯಾಗುತ್ತವೆ. ಅದರ ಕೆಲವು ಸ್ಯಾಂಪಲ್ಸ್.,

“ಹಳ್ಳಿಯ ಚಾದಂಗಡಿ ಎಂದರೆ ಅದು ಚಾದಂಗಡಿ ಮಾತ್ರವೇ ಎಂಬುದನ್ನು ನಿಮ್ಮಂತೆ ನಾನೂ ಒಪ್ಪುವೆ. ಅದು ಆ ಹಳ್ಳಿಯ ಸಮಗ್ರ ರಾಜಕೀಯ,ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಭಾಷಿಕ ಮತ್ತಿತರೆ ಎಲ್ಲಾ ಇಕಗಳ ಒಳಸುಳಿಗಳ ಮರ್ಮಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡ ಒಂದು ನಿಗೂಢ ಶಾಂತ ಸರೋವರ” ( ಚಾದಂಗಡಿಯಲ್ಲಿ ಹಸಿದ ನೊಣ) ‘ಇಸಂ’ ಗಳ ಬಗ್ಗೆ ಕೇಳಿದವರಿಗೆ ‘ಇಕ’ ಎಂಬ ಕನ್ನಡದ್ದೇ ಹೊಸ ಪ್ರಯೋಗ ಸೆಳೆಯುತ್ತದೆ.

“ಮನ್ಸೂರರು ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ಹಾಡನ್ನು ಹಾಡುತ್ತ ‘ ನಾನೊಂದು’ ಪದವನ್ನು ‘ನಾ…ನೊಂದು’ ಎಂದು ಆಲಾಪದಲ್ಲಿ ಹಿಗ್ಗಲಿಸಿದಾಗ ಅದು ಪಟ್ಟಣಶೆಟ್ಟರಿಗೆ ನಾನು ನೊಂದು ಕನಸ ಕಂಡೆ ಎಂಬಂತೆ ಕೇಳಿಸಿತಂತೆ !” ( ಏಸೊಂದು ಹಾಡುಗಳು ಹಾದಿಗುಂಟ)ಇಲ್ಲಿ ನಿರೂಪಿತವಾಗಿರುವ ಪ್ರಸಂಗದಿಂದ ಓದಿನಿಂದ ಅರಿತುಕೊಳ್ಳುವ ಒಂದು ಭಾವವು ಹಾಡಿನಲ್ಲಿ ಹೇಗೆ ಭಿನ್ನವಾಗುತ್ತದೆ ಎಂಬುದನ್ನು ಅರಿಯಬಹುದು. ಹೀಗೆ ಹಲವು ಸಾಧ್ಯತೆಗಳನ್ನು  ಕಟ್ಟಿಕೊಡುವುದೇ ಈ ಪುಸ್ತಕದ ಹೆಗ್ಗಳಿಕೆ.

”ಇತ್ತೀಚೆಗೆ ಪಟ್ಟಣಗಳಲ್ಲಿ ಜಾತಿ ಕೇಳುವ ಹೊಸ ಹೊಸ ವಿಧಾನಗಳು ಹುಟ್ಟಿಕೊಂಡಿರುವುದನ್ನು ನೀವು ಗಮನಿಸಿರಬಹುದು. ಮೊದಲಿಗೆ ಅವರು ನಿಮ್ಮ ಹೆಸರು ಕೇಳುತ್ತಾರೆ. ನಂತರ ಸರ್ನೇಮು. ಯಾರಾದರೂ ಸರ್ನೇಮು ಬದಲಿಗೆ ಇನಿಷಿಯಲ್ಲುಗಳನ್ನು ನೇತಾಕಿಕೊಂಡಿದ್ದರೆ ಅವುಗಳ ಅರ್ಥಕೇಳುತ್ತಾರೆ. ಇಷ್ಟು ಹೊತ್ತಿಗೆ ಅವರಿಗೆ ಸಣ್ಣಗೆ ವಾಸನೆ ಹೊಡೆದಿರುತ್ತದೆ. ಅಲ್ಲಿಗೂ ಯಾವುದೇ ಹಿಂಟು ಸಿಗಲಿಲ್ಲವೆಂದರೆ ‘ ಅಂದ್ರೆ ಸರ್ ನೀವು ವೆಜುಟೇರಿಯನ್ನಾ?’ ಎಂಬ ಪ್ರಶ್ನೆ ತೂರಿ ಬರುತ್ತದೆ. ಅದು ಅವರ ಬತ್ತಳಿಕೆಯಲ್ಲಿಯ ಬ್ರಹ್ಮಾಸ್ತ್ರ”.  ಎಂದು ಬರೆಯುತ್ತಾ, ಜಾತಿಗ್ರಸ್ಥ ಭಾರತೀಯ ಸಮಾಜ ತಡವಾಗಿಯಾದರೂ ಪರವಾಗಿಲ್ಲ, ತನ್ನ ಹುಸಿ ಅಹಮಿಕೆಯನ್ನು ಕಳಚಿಟ್ಟು, ಮೂಲದ ಮುಗ್ಧತೆಯಲ್ಲಿ ತನ್ನ ನಿಧಿ ತುಂಬಿದ ಕತ್ತಲ ಮೂಲೆಗಳನ್ನು ಅಪ್ಪಿಕೊಳ್ಳಲು ಮುಂದಾಗಬೇಕಿದೆ. ಎನ್ನುವ ಬರಹದ ಸಾಲುಗಳಲ್ಲಿ ಭಾರತಕ್ಕೆ ನಿಜವಾಗಿ ಬೇಕಿರುವುದು ಏನೆನ್ನುವ ಕುರಿತು ಓದುಗರನ್ನು ಚಿಂತನೆಗೆ ಹಚ್ಚುತ್ತದೆ.

ಇನ್ನುಳಿದಂತೆ ..,

ಸುಖದ ನೆಪದಲ್ಲಿ ಬಾಲ್ಯವ ನೆನೆದು
ರಸ್ತೆ ಮೇಲೆ ಬಸ್ಸಿನಲ್ಲಿ ದೃಶ್ಯ ವೈಭವ!
ಚಾದಂಗಡಿಯಲ್ಲಿ ಹಸಿದ ನೊಣ..
ಮಾತು ಮಾತು ಮಾತು ಮಾತು..
ಮೀಂಗುಲಿಗನ ಈಸಿನ ಕನಸು
ಒಂದು ಕಣ್ಣು ಬರೆದ ಮತ್ತೊಂದರ ಚಿತ್ರ
ಮುಗಿಯದ ಆಟಕೆ ಮೊದಲಾಗಿ…
ಏಸೊಂದು ಹಾಡುಗಳು ಹಾದಿಗುಂಟ
ಜಾಕಿ ಎಂಬ ಸೂತಕ
ಗುರು ಕರುಣೆಯ ವರ ತಾಗಿ
ಮೂರನೇ ಕಣ್ಣಿಗೆ ನೂರಾರು ಗಾಯ!
ನಿದ್ದಿ ಮಾಡಲಿಬೇಕು ಜಗದೊಳಗ !

ಎಂಬ ಈ ಮೇಲಿನ 12 ಪ್ರಬಂಧಗಳನ್ನು ಪುಸ್ತಕವಾಗಿಸಿ ಕೈಯಲ್ಲಿಡಿದುಕೊಂಡು ಓದುವುದಿದೆಯಲ್ಲಾ..! ಅದರ ಅನುಭವವನ್ನು ಹೇಗೆ ವಿವರಿಸುವುದೋ ತಿಳಿಯುತ್ತಿಲ್ಲ.  ನಾನಂತೂ ಓದುವಾಗಲೆಲ್ಲಾ ಕನ್ನಡ ಭಾಷೆಯ ಸಹಜ ಸೌಂದರ್ಯಕ್ಕೆ, ಲೇಖಕ ಅದನ್ನು ಬಳಸಿಕೊಂಡಿರುವ ಜಾಣ್ಮೆಗೆ, ಪ್ರಬಂಧದಲ್ಲಿ ಕಟ್ಟಿಕೊಟ್ಟಿರುವ ಸೊಬಗಿಗೆ ಮರುಳಾಗಿ ಹೋಗಿದ್ದೇನೆ. ಲಲಿತ ಪ್ರಬಂಧಗಳೆಂದರೆ ಕೇವಲ ಲಘು ಬರಹಗಳಲ್ಲ. ಅವುಗಳೊಳಗೆ  ಘನ ವಿಚಾರಗಳನ್ನು  ಸ್ಪಷ್ಟವಾಗಿ ಕಟ್ಟಿಕೊಡಬಹುದು, ವಿಮರ್ಶೆಗೆ ಅವಕಾಶ ಕಲ್ಪಿಸಬಹುದು, ಪ್ರಶ್ನಿಸಬಹುದು,  ಓದುಗರನ್ನು ಜಾಗೃತಗೊಳಿಸಬಹುದು, ನಮ್ಮ ನೆನಪಿನಾಳಕ್ಕೆ ಇಳಿದು ಹೋಗಿ ಬರಬಹುದು…. ಎಂಬುದಕ್ಕೆಲ್ಲಾ  ‘ಮೂರನೇ ಕಣ್ಣು’ನ್ನು ನಿಸ್ಸಂಶಯವಾಗಿ ಉದಾಹರಿಸಬಹುದು.

ಘನ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಗಳು ಈ ಪುಸ್ತಕವನ್ನು ಕನ್ನಡದ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆಯ ಮಾದರಿಯಾಗಿ ಅಭ್ಯಸಿಸುವುದಕ್ಕೆ ಪರಿಗಣಿಸಬೇಕಾಗಿ ನಾನು ಹೆಮ್ಮೆಯಿಂದ ಶಿಫಾರಸ್ಸು ಮಾಡುತ್ತೇನೆ. ಕನ್ನಡ ಪ್ರೇಮಿಗಳು ತಮ್ಮ ವೈಯಕ್ತಿಕ ಪುಸ್ತಕ ಸಂಗ್ರಹದಲ್ಲಿ ಈ ಪುಸ್ತಕವನ್ನು ಕೊಂಡು ಓದಿನ ಸುಖ ಸವಿಯುವುದಕ್ಕಾಗಿ ಓದಲು ಇಟ್ಟುಕೊಳ್ಳುವುದು ಅವಶ್ಯ ಎಂದೂ ಅಭಿಪ್ರಾಯ ಪಡುತ್ತೇನೆ.

ಕೊನೆಯ ಮಾತಾಗಿ ಸಾಲಿಯವರೇ, ಕನ್ನಡಕ್ಕೊಂದು ಚೆಂದದ, ಸಹಜ ಸೊಬಗಿನ ಕೃತಿಯನ್ನು  ಕೊಟ್ಟಿರುವುದಕ್ಕಾಗಿ ನಿಮಗೆ ವಂದನೆಗಳನ್ನು ಈ ಬರಹದ ರೂಪದಲ್ಲಿ ಹೇಳಲಿಚ್ಚಿಸಿದ್ದೇನೆ. ಅಭಿನಂದನೆಗಳು.

‍ಲೇಖಕರು avadhi

September 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: