ಪಠ್ಯಪುಸ್ತಕದ ಪಾಠಗಳೂ.. ಮೇಷ್ಟ್ರ ಸಂಕಟಗಳು..

ರೇಣುಕಾರಾಧ್ಯ.ಎಚ್.ಎಸ್ 

 

ಪಠ್ಯ ಪುಸ್ತಗಳಲ್ಲಿ ಇರುವ ಕೆಲ ಪಠ್ಯಗಳನ್ನು ಪಾಠ ಮಾಡುವಾಗ, ಭಾಷಾ ಮೇಷ್ಟ್ರುಗಳಿಗೆ ಒದಗುವ ಸಂಕಟಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗದು. ಯಾವುದೇ ತರಗತಿಗೆ ಪಠ್ಯ ಆಯ್ಕೆ ಮಾಡಲು ಸರ್ಕಾರದಿಂದ, ಆಯಾ ವಿಷಯದ ಪರಿಣಿತರ ಒಂದು ಪಠ್ಯಪುಸ್ತಕ ಸಮಿತಿಯನ್ನು ನೇಮಿಸುತ್ತೆ.. ಆ ಸಮಿತಿಯು ಆಯಾ ತರಗತಿಯ ವಿದ್ಯಾರ್ಥಿಗಳ ವಯೋಮಾನ, ಮಾನಸಿಕ ಸ್ಥಿತಿ ಮತ್ತು ಬೌದ್ಧಿಕತೆಗೆ ಅನುಗುಣವಾಗಿ ಪಠ್ಯ ಪುಸ್ತಕ ಸಮಿತಿಯ ಸದಸ್ಯರು, ಅಧ್ಯಕ್ಷರು ಪಠ್ಯವನ್ನು ಆಯ್ಕೆ ಮಾಡುತ್ತಾರೆ.

ವಿದ್ಯಾರ್ಥಿಗಳಲ್ಲಿ ಮಾನವೀಯತೆ, ವೈಚಾರಿತೆ, ವೈಜ್ಞಾನಿಕತೆಯನ್ನು ಬೆಳೆಸುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ, ಎಲ್ಲ ಬಗೆಯ ಅಸಮಾನತೆಗಳನ್ನು, ಶೋಷಣೆಯನ್ನು ವಿರೋಧಿಸುವ, ಸಮಾನತೆ ತಿಳಿಸುವ,ಸಮಾಜದಲ್ಲಿ ಸೌಹಾರ್ದತೆ, ಸಹಿಷ್ಣುತೆ, ಸರ್ವಧರ್ಮ ಸಮಾನತೆಯನ್ನು ತಿಳಿಸುವ, ಯುದ್ಧ, ಹಿಂಸಾವಿರೋಧಿ ಆಶಯಗಳನ್ನು ಒಳಗೊಂಡ ಪಠ್ಯಗಳನ್ನೆ, ಪಠ್ಯವಾಗಿ ಇಡಬೇಕೆಂಬ ನಿಯಮವಿದೆ. ಆದರೆ ಕೆಲವೊಮ್ಮೆ ಎಂತಹ ಪಠ್ಯಗಳಿರುತ್ತವೆ ಎಂದರೆ ಆ ಪಠ್ಯಕ್ಕೆ ಸಂಬಂಧಿಸಿದ ವ್ಯಕ್ತಿ, ಧರ್ಮ, ಇನ್ನಿತರ ಹೆಚ್ಚಿನ ವಿಷಯಗಳನ್ನು, ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕೋ, ಬೇಡವೋ ಎಂಬ ಗೊಂದಲ ಕಾಡಿಸುತ್ತದೆ.

ದ್ವಿತೀಯ ಪಿ ಯು ಕನ್ನಡ ಭಾಷಾ ಪಠ್ಯದಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಡುವ ಒಂದು ಪಠ್ಯವನ್ನು ‘ಬದುಕನ್ನು ಪ್ರೀತಿಸಿದ ಸಂತ’ ಅನ್ನುವ ಶೀರ್ಷಿಕೆಯಲ್ಲಿ ಇದೆ.

 

 

ಸಾಮಾನ್ಯ ಯುವಕನೊಬ್ಬ ರಾಷ್ಟಪತಿ ಹುದ್ದೆಗೆ ಏರಿದ ಬಗೆ ನಮ್ಮ ಯುವ ಪೀಳಿಗೆಗೆ ದಾರಿದೀಪ, ಅವರ ಸರಳ, ಸದಾ ಕ್ರಿಯಾಶೀಲವಾಗಿದ್ದ ಅವರ ಬದುಕು ಎಲ್ಲರಿಗೂ ಮಾದರಿ, ಮಕ್ಕಳೊಂದಿಗಿನ ಅವರ ಒಡನಾಟ, ಅಭಿರುಚಿ, ಹಿಡಿದ ಕಾರ್ಯವನ್ನು ಛಲಬಿಡದೆ ಮಾಡಿ ಮುಗಿಸುವ ಅವರ ಬದ್ಧತೆ ಕೂಡ ವಿಶೇಷವಾದದ್ದು ಎಂದೇನೋ ಮಕ್ಕಳಿಗೆ ಹೇಳುತ್ತೇವೆ. ಭಾರತದ ಮೊದಲ ನ್ಯೂಕ್ಲಿಯರ್ ಬಾಂಬ್ ಅನ್ನು  ಸ್ಮೈಲಿಂಗ್ ಆಫ್ ಬುದ್ಧ ಅನ್ನುವ ಶೀರ್ಷಿಕೆಯಡಿ ಪೋಕ್ರಾನ್ ನಲ್ಲಿ ಪರೀಕ್ಷೆ ಮಾಡುವಾಗ ರಾಜಾ ರಾಮಣ್ಣರು, ಅಬ್ದುಲ್ ಕಲಾಂ ರನ್ನು ಕರೆದಾಗ ಕಲಾಂರು, ಆ ಕಾರ್ಯಕ್ರಮದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ ಗೋಧ್ರಾ ಹಿಂಸಾಚಾರ ನಡೆದ ವರ್ಷವೇ ಬಿಜೆಪಿ ರಾಷ್ಟಪತಿ ಅಭ್ಯರ್ಥಿಯನ್ನಾಗಿ ಎ.ಪಿ.ಜೆ. ಅಬ್ದುಲ್ ಕಲಾಂ ರನ್ನು ತನ್ನ ಪಕ್ಷದಿಂದ ಆಯ್ಕೆ ಮಾಡಿದಾಗ ಅದನ್ನು ಒಪ್ಪಿಕೊಂಡಿದ್ದರು. ಇಂಥ ಸೂಕ್ಷ್ಮ ವಿಷಯಗಳನ್ನು ಮಕ್ಕಳಿಗೆ ತಿಳಿಸದೇ ಇರುವುದು ಎಷ್ಟು ಸರಿ. ಒಬ್ಬ ಮೇಷ್ಟ್ರಾಗಿ ಇಂತಹ ವಿಷಯಗಳನ್ನು ವಿದ್ಯಾರ್ಥಿಗಳಿಂದ ಮುಚ್ಚಿಟ್ಟರೆ, ಬೋಧಕತನದಲ್ಲಿ ನೈತಿಕತೆ, ಆತ್ಮಸಾಕ್ಷಿ ಅನ್ನುವುದು ಇರುತ್ತಲ್ಲ. ಅದರ ಕತೆ ಏನು?

ಇದು ಒಂದು ಕತೆಯಾದರೆ. ಮೊನ್ನೆ ಕತೆಗಾರ ಮಂಜುನಾಥ ಲತಾ ಸಿಕ್ಕು ಮೇಷ್ಟ್ರು ಗಳಾದ ನಿಮಗೆ ಮುಂದಿನ ದಿನಗಳು ಇನ್ನೂ ಸಂಕಟದ ದಿನಗಳು ಎಂದರು. ಯಾಕೆಂದೆ. ಮುಂದೆ ಕೆಲ ವರ್ಷಗಳಲ್ಲಿಯೇ ಪ್ರಧಾನಿಗಳಾದ ನರೇಂದ್ರ ದಾಮೋದರ ಮೋದಿಯವರ ಬಗ್ಗೆಯೂ ಪಠ್ಯ, ನಿಮ್ಮ ಪಠ್ಯಪುಸ್ತಕದಲ್ಲಿ ಬಂದೇ ಬರುತ್ತೆ. ಆಗ ಏನ್ ಮಾಡ್ತಿರಾ ? ಅವರನ್ನು ಹಾಡಿ ಹೊಗಳಲೇ ಬೇಕು. ಯಾಕೆಂದರೆ ಪಠ್ಯದಲ್ಲಿ ಅವರ ಬಗೆಗೆ ಪಾಸಿಟಿವ್ ಆದ ಅಂಶಗಳೆ ಪಠ್ಯವಾಗಿರುತ್ತವೆ.

ಅವರು ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಅಧಿಕಾರ ಅವಧಿಯಲ್ಲಿ ಕೈಗೊಂಡ, ಕೆಲ ತಪ್ಪು ತೀರ್ಮಾನಗಳು, ವಿಫಲ ಯೋಜನೆ, ಕಾರ್ಯಕ್ರಮಗಳ ಬಗೆಗೆ ಎಲ್ಲೂ ಉಲ್ಲೇಖ ಇರೊಲ್ಲ. ಆಗ ಒಬ್ಬ ಮೇಷ್ಟ್ರಾಗಿ, ಮೋದಿಯವರ ಬಗ್ಗೆ ಎಲ್ಲವನ್ನೂ ತಿಳಿದ, ಅವರ ಅಧಿಕಾರದ ಅವಧಿಯಲ್ಲಿ ಕೈಗೊಳ್ಳಲಾದ ಎಲ್ಲ ವಿಫಲ ಯೋಜನೆಗಳ ಬಗ್ಗೆ ಗೊತ್ತಿದ್ದೂ ತರಗತಿಯಲ್ಲಿ ಮಕ್ಕಳಿಗೆ ಹೇಳಲಾಗದೆ ಮೌನವಾಗಿರಬೇಕಾಗುತ್ತಲ್ಲ. ಆಗ ನಿಮ್ಮ ಆತ್ಮಸಾಕ್ಷಿ ಕೊಂದುಕೊಂಡೆ ಪಾಠ ಮಾಡಬೇಕಾಗುತ್ತಲ್ಲ ಎಂದರು.

ಅವರು ಹೇಳಿದ್ದ ಮಾತುಗಳಲ್ಲಿ ನೂರಕ್ಕೆ ನೂರರಷ್ಟು ಸತ್ಯವಿತ್ತು.

ಮೇಷ್ಟ್ರುಗಳ ಮುಂದಿನ ದುರ್ದಿನಗಳನ್ನು ನೆನೆಯುತ್ತ, ಅವರನ್ನು ಬೀಳ್ಗೊಟ್ಟು ಮನೆಗೆ ಬಂದವನೆ ತಲೆಗೆ ಕೈ ಕೊಟ್ಟು ಕೂತು ಯೋಚಿಸಲಾರಂಭಿಸಿದೆ.

ಈ ಸರ್ಕಾರಿ ಮೇಷ್ಟ್ರಾಗಿ, ಪಾಠ ಮಾಡೋದು ಅಷ್ಟು ಸಲೀಸಲ್ಲ. ಈ ಮೇಷ್ಟುಗಳ ಸಂಕಟಗಳು ಉಳಿದ ಉದ್ಯೋಗದಲ್ಲಿ ಇರುವವರಿಗೆ ಹೀಗೆ ನೇರವಾಗಿ ಕಾಡಲ್ಲವಲ್ಲ ಏನು ಮಾಡೋದು. ಅಂತಹ ಸಂದರ್ಭದಲ್ಲಿ ಗಾಂಧಿ, ಬಾಬಾ ಸಾಹೇಬರು ಸಹಾಯಕ್ಕೆ ಬಂದೇ ಬರ್ತಾರೆ ಅನ್ನುವ ನಂಬಿಕೆಯಲ್ಲಿ ಮನಸ್ಸು ಗಟ್ಟಿಮಾಡಿಕೊಂಡೆ.

‍ಲೇಖಕರು AdminS

September 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. NA DIVAKAR

    ನನ್ನ ಇತಿಹಾಸದ ಅಧ್ಯಾಪಕರಿದ್ದರು. ಅವರು ವಿಜಯನಗರ ಸಾಮ್ರಾಜ್ಯದ ಬಗ್ಗೆ, ಯೂರೋಪ್ ಇತಿಹಾಸದ ಬಗ್ಗೆ ಪಾಠ ಮಾಡುವಾಗ ಪಠ್ಯ ವಿಷಯವನ್ನು ಹೇಳಿ ಮುಗಿಸಿ ಕಡೆಯ ಹತ್ತು ನಿಮಿಷಗಳಲ್ಲಿ ಇತಿಹಾಸದಲ್ಲಿ ಅಡಗಿರುವ ಕೆಲವು ಸತ್ಯಗಳನ್ನು ಹೇಳುತ್ತಿದ್ದರು. ಇದು ಪಿಯು ಕತೆ. ಪ್ರಾಥಮಿಕ ಶಾಲೆಯಲ್ಲಿ ಇದು ಕಷ್ಟ. ಇನ್ನು ಮೈಮೇಲೆ ಎಗರುವ ತೋಳಗಳು ಸುತ್ತ ಕಾವಲು ಇರುವಾಗ ಇನ್ನೂ ಕಷ್ಟ. ನರಿ ತೋಳಗಳ ನಡುವೆ ಬಾಳುವ ದುರವಸ್ಥೆ ಎದುರಿಸುತ್ತಿದ್ದೇವೆ. ನಿಮ್ಮ ಕಾಳಜಿ ಮತ್ತು ಆತಂಕ ಎರಡೂ ಚರ್ಚೆಗೊಳಗಾಗಬೇಕಾದ ವಿಚಾರಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: