ಮಾತು ಜ್ಯೋತಿರ್ಲಿಂಗವಾದಾಗ ಕಿವಿ ಹಣತೆಯಲ್ಲದೆ ಮತ್ತೇನು?

ರಾಜಕುಮಾರ ಮಡಿವಾಳರ

 

ಗೋ.ವಾ ನಮನ..

ಮುಂದ ಮುಂದ ಹೋದ
ಹಿಂದ ನೋಡದ..

ಹಾಡು ಹಾಡಿನಿಂದ ಹೋಗಿ ಹಾಳಾಗಿ ನೀ! ಈಗಲೂ
ಅವ್ವ ದಿನಕ್ಕೊಮ್ಮೆ ನನ್ನ ಬೈಯ್ಯುವ ಪರಿ ಇದು.
‘ಹಾಡಿಲ್ಲದವನ ಎದೆ ಸುಡುಗಾಡು’ ಕಣವಿಯರ ಮಾತನ್ನ ಪ್ರಾಮಾಣಿಕವಾಗಿ ಎದೆಗಿಳಿಸಿಕೊಂಡವನು ನಾನು. ಈ ಹಾಡುಗಳು ಕೆಣಕ್ತಾವು, ಕುಣಿತಾವು, ಕುಣಸ್ತಾವು, ನಗಸ್ತಾವು, ನಗ್ತಾವು, ಸಿಕ್ಕಂಗ ಮಾಡಿ ಓಡಿ ಹೊಕ್ಕಾವು, ಹೊದ್ವಲ್ಲಾ ಅಂದ್ರ ಹೊಳ್ಳಿಬಂದ ಮತ್ತ ಎದ್ಯಾಗ ಹೊಕ್ಕೊತಾವು, ಕಾಡ್ತಾವು, ಹಾಡ್ತಾವು! ಈ ಹಾಡುಗಳ ಲೆಕ್ಕ ಇಟ್ಟವರ್ಯಾ ರು?

ಅದು ನಾಗಮಂಡಲ (ಕಾಕಾ ಗೋಪಾಲ ವಾಜಪೇಯಿ ಪಾಲಿಗೆ ಅಕ್ಷರಶಃ ನಾಗಮಂಡಲ!), ಕಾಕಾ ಗೋವಾ ಬರೆದ ಹಾಡುಗಳಲ್ಲಿ ಒಂದು ಕುಲ್ಡವತ್ತಿ ರಾಣೀನ ಮುಟ್ಟಿ ಮುಟ್ಟಿ ನೋಡಿ ರಾಣಿಯ ಅಂದ ಚೆಂದವನ್ನು ಕಣ್ತುಂಬಿಕೊಂಡು ಹಾಡಿ ಹೊಗಳುವ ಹಾಡು.

 

 

ಶುರುವಾಗುವುದೇ ‘ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲೀಗಿ’ ಅಂತಾ ಈ ಸಾಲು ಬರೆಯೋದಕ್ಕೆ ವಾಜಪೇಯಿ ಅಂತಹ ಕವಿ ಬೇಕಾಗಿಲ್ಲ, ಇದರಲ್ಲಿ ವಾಜಪೇಯಿತನವೂ ಇಲ್ಲ! ಇದರ ಮುಂದಿನ ಸಾಲುಗಳಿವೆಯಲ್ಲ ಅಲ್ಲಿ ಗೋವಾ ರಿಂಗಣಿಸುತ್ತಾರೆ ನಾದಾನ್ನ ತಾನಾಗಿ ಅನರಣಿಸುತ್ತಾರೆ, ಬ್ಯಾರೆ ವಾದ ಯಾಕ ಬೇಕ ಯಾರವಾದಕ್ಕೂ ಆಸ್ಪದ ಕೊಡದ ಅಜಾತಶತೃ ಕವಿ ಕಂಗೊಳಿಸುತ್ತಾರೆ.

ಮುಟ್ಟಿದರ ಒಂದ್ವಾಸನಿ ನಿನ್ನ ಮುಡಿದರ ಒಂದ್ವಾಸನಿ- ಹೀಗೆ ಸಾಲು ಹಿಡಿದಿಡುತ್ತೆ. ಆದರೂ ಇದರ ಹಿಂದಿನ ಕಥೆ ಬಿಚ್ಚಿಕೊಳ್ಳುತ್ತಾ ಒಬ್ಬ ಕುರುಡಿಯಾಗಿ ನೋಡು ಅನ್ನುತ್ತೆ! ಕಣ್ಣಿದ್ದವನಿಗೆ ಹೂ ಮುಟ್ಟಿದಾಗ ಗಿಡದೊಟ್ಟಿಗೆ ಎಲೆಯಾದಿಯಾಗಿ ಜೀವಂತ ಕಾಣುವುದು ಬೇರೆ, ಮುಡಿದಾಗ ಆ ಹೆಣ್ಣಿನ ಜೀವಂತಿಕೆ ಸಹಿತ ತನ್ನ ಇರುವಂತಿಗೆ ಇಮ್ಮಡಿಸುವುದು ಬೇರೆ! ಇಲ್ಲಿ ಹಾಡುಗಾರ್ತಿ ಕುರುಡಿ ಆಕೆ ಚೆಂದ ಹೊಗಳಲು ಹೇಗೆ ಸಾಧ್ಯ ಅದಕ್ಕಾಗಿ ವಾಸನೆ-ಪರಿಮಳ ಗ್ರಾಣಿಸುವ ಮೂಲಕ ಕಣ್ಣಿದ್ದವರ ಕಣ್ಣಿಗೆ ಕಟ್ಟುವ ನೈಪುಣ್ಯ ಮೇಳವಿಸುವಂತೆ ಹಾಡುತ್ತಾಳೆ. ಕುಲ್ಡವತ್ತಿ ರಾಣಿಯನ್ನ ಮುಟ್ಟುವ ಬೆರಳ ತುದಿಯಾಗಿ ವಾಜಪೇಯಿ ಆಘ್ರಾಣಿಸುತ್ತಾರೆ-ಕಾಣಿಸುತ್ತಾರೆ!.

ಬರಿ ಸವಿಮಾತಿನ ಜೇನ ಉಣತಿ- ನನ್ನಂತೆ ಅಥವ ನನಗಿಂತ ಹೆಚ್ಚು ಹಾಡು ಬಲ್ಲವರು ನೀವು, ಇದುವರೆಗೆ ಕಿವಿಯನ್ನ ಹಣತೆಗೆ ಹೋಲಿಸಿದ ಕವಿಯುಂಟೆ ಕನ್ನಡದಲ್ಲಿ?! ಹಣತೆ, ಬೆಳಕು, ಬೆಳದಿಂಗಳಾದಿಯಾಗಿ ಮುಂತಾದ ಉಪಮೆಗಳೆಲ್ಲ ಕಣ್ಣು ಕೋರೈಸುವ ಕಣ್ಣಿಗೆ ಸಂಬಧಿಸಿದವು. ಇಡಿ ಹಾಡನ್ನ ಕವಿ ರಾಣಿಯ ಚೆಲುವಿನಲ್ಲಿ ಸಾಧಿಸಿದ ತಾಧ್ಯಾತ್ಮವನ್ನ ಕುಲ್ಡವತ್ತಿಯ ಕುರುಡಿನಲ್ಲೂ ಗೆದ್ದದ್ದು! ಕುರುಡರಿಗೆ ಕಣ್ಣೆರಡು ಬಿಟ್ಟು ಮೈಯೆಲ್ಲ ಕಣ್ಣು! ಹಾಗೆಯೆ ಕಿವಿ ಕೂಡ ಕಣ್ಣೆ! ರಾಣಿಯ ಮಾತಿನಿಂದ, ಕೇಳುತ್ತಲೇ ಇರಬೇಕೆನುವಂತಹ ಮಾತಿನಿಂದ, ರಾಣಿಯ ಜೇನಿನಂತಹ ಸವಿಮಾತನ್ನೇ ಕೇಳಿದ ಕುಲ್ಡವ್ವ ತನ್ನ ಕಿವಿಯಿಂದ ಕೇಳಿ ಕೇಳಿ ಎಂತದೋ ದೇದಿಪ್ಯ ಅನುಭವಿಸಿರಬೇಕು, ತನ್ನಂತೆ ಪರರ ಬಗೆದಳೋ? ರಾಣಿಯ ಕಿವಿಕೂಡ ಜೋಡಿ ಹಣತೆಯಂತೆಯೆ ಕಾಣುತ್ತಾಳೆ! ಮಾತು ಜ್ಯೋತಿರ್ಲಿಂಗವಾದಾಗ ಕಿವಿ ಹಣತೆಯಲ್ಲದೆ ಮತ್ತೇನು?

ಒಂದು ಹಾಡು ಒಂದಿಡಿ ರಾತ್ರಿ ಕೇಳಿಸಿಕೊಂಡು ಎರಡು ಹಗಲು ಮತ್ತೊಂದು ರಾತ್ರಿ ಕಾಡಿದ್ದು-ಕಾಡುತ್ತಿರುವುದು ಇಷ್ಟು, ಬಿಟ್ಟುಕೊಂಡಷ್ಟು ತೆರೆದುಕೊಳ್ಳುವ ಹಾಡು ಕೊಟ್ಟವರು ಗೋಪಾಲ ವಾಜಪೇಯಿ, ತುಂಬ ಸಕಾರಾತ್ಮಕ ಚಿಂತನೆಯ, ಆತ್ಮಚೆಲುವಿಕೆಯ ಮನುಷ್ಯ ಮೊನ್ನೆ ಇದ್ದಕ್ಕಿದ್ದ ಹಾಗೆ ಹೋದಾಗ ಕಾಕಾನ ಈ ಹಾಡು ಕೇಳಿ ಮುಗಿಯುತ್ತಿರುವ ಹೊತ್ತಿಗೆ ಮುಂದ ಮುಂದ ಹೋದ ಹಿಂದ ನೋಡದ.. ಅಜ್ಜನ ಈ ಹಾಡು ನೆನಪಾಗಿ ಕಾಡುತ್ತಿದೆ. ಹಾಡು ಬಿಟ್ಟು ಹೋದವರಲ್ಲಿ ಏನೆಂದು ಕೇಳಲಿ ಆ ಹಾಡೆ ಅವರ ಹಾರೈಕೆ ನನಗೆ.

‍ಲೇಖಕರು avadhi

September 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: