ರಂಗ ಗಾರುಡಿಗ ಕಾರಂತರ ನೆನೆದು…

ಸಂಪಿಗೆ ತೋಂಟದಾರ್ಯ

 

ಕಾರಂತರರಿಗೆ ರಂಗ ನಮನ

ಅವರು ಎನ್.ಎಸ್.ಡಿ. ಪದವಿ ಪಡೆದ ಮೇಲೆ ಕರ್ನಾಟಕದಲ್ಲಿ ‌ ಮೊದಲು ನಡೆಸಿದ ಶಿಬಿರ ನನಗೆ ಗೊತ್ತಿರುವ ಹಾಗೆ ನಮ್ಮ ಕರ್ನಾಟಕ ವಿ.ವಿ.ದಲ್ಲಿ‌ ೧೯೭೦-೭೧ ರ ಅವಧಿಯಲ್ಲಿ. ಶ್ರೀರಂಗರ ‘ಕತ್ತಲೆ‌ ಬೆಳಕು”, ಚಂಪಾ ಅವರ ‘ಗುರ್ತಿನವರು’, ನ.ರತ್ನ‌ ಅವರ ‘ಎಲ್ಲಿಗೆ’ , ಪಿ .ಲಂಕೇಶ್ ಅವರ ‘ಸಿದ್ಧತೆ’ ನಾಟಕಗಳನ್ನು ಕಲಿಸಿದ್ದರು.

ವಿ.ವಿ.ದ‌ ಗಾಂಧಿ ಭವನದಲ್ಲಿ ಇವನ್ನು ಮೂರು ದಿನಗಳ ಕಾಲ ಪ್ರದರ್ಶಿಸಲಾಯಿತು. ಕತ್ತಲೆ ಬೆಳಕು ನಾಟಕದಲ್ಲಿ ನಾನು ಮುಖ್ಯ ಪಾತ್ರವೊಂದಾದ ನಾಟಕ ಕಂಪನಿ ನಿರ್ದೇಶಕನ ಪಾತ್ರ ಮಾಡಿದ್ದೆ . ನನ್ನ‌ ಜೊತೆ ಅನಿತಕುಮಾರ, ಜಯರಾಮ, ಮುರಿಗೆಪ್ಪ, ಚನ್ನಣ್ಣ ವಾಲೀಕಾರ ಇತರರು ಅಭಿನಯಿಸಿದ್ದರು. ಸಿದ್ಧತೆಯಲ್ಲಿ ಸ್ವತಃ ಕಾರಂತರು, ಯಮುನಾಮೂರ್ತಿ, ಮತ್ತು ಪಂಡಿತ ಅವರ ಜೊತೆ ಅಭಿನಯಿಸಿದ್ದರು. ಗುರ್ತಿನವರು ನಾಟಕದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಮಾಲತಿ ಪಟ್ಟಣಶೆಟ್ಟಿ, ಚಂಪಾ, ಮತ್ತು ಇತರರು ( ನಾನೂ ಸೇರಿ ) ಅಭಿನಯಿಸಿದ್ದರು.

‘ಎಲ್ಲಿಗೆ’ಯಲ್ಲಿ ಯಾರ್ಯಾರು ಪಾತ್ರ ವಹಿಸಿದ್ದರು ಮರೆತು ಹೋಗಿದೆ. ಯಮುನಾ ಮೂರ್ತಿ ಅವರ ಮಗ ದೀಪು ಮಾಡಿದ್ದು ನೆನಪಿದೆ. ಇದು ಯಶಸ್ವಿಯಾಗಿ ಜರುಗಿದ್ದರಿಂದ ಕಾರಂತರು ನಮ್ಮ ವಿ.ವಿ. ಕಲಾವಿದರನ್ನೇ ಒಟ್ಟುಗೂಡಿಸಿ ಒಂದು ಕಲಾತಂಡ ಕಟ್ಟಲು ಉಮೇದು ಮಾಡಿದರು. ಡಾ.ಶಾಂತಿನಾಥ ದೇಸಾಯಿಯವರ ಕೋಣೆಯಲ್ಲಿ ಸಭೆ ಸೇರಿ ತಂಡ ಪ್ರಾರಂಭ ಮಾಡಲಾಯಿತು. ನಾವೆಲ್ಲಾ ಅಲ್ಲಿ ಸೇರಿದ್ದೆವು. ಚೆನ್ನವೀರ ಕಣವಿಯವರ ಸಲಹೆ ಮೇರೆಗೆ ತಂಡಕ್ಕೆ ‘ಅಂತರಂಗ ನಾಟಕ ಕೂಟ’ ಎಂದು ಹೆಸರಿಡಲಾಯಿತು.

ಸಿ.ಪ. ಮತ್ತು ಚಂಪಾ ಸಂಚಾಲಕರು, ನಾನು ಮುರಿಗೆಪ್ಪ, ಅನಿತ ಕುಮಾರ ನಾಟಕ ನಿರ್ಮಾಣದ ಹೊಣೆ ಹೊತ್ತೆವು. ಮೊದಲ ನಾಟಕ ಲಂಕೇಶರ ‘ತೆರೆಗಳು’. ಕಾರಂತರೇ ನಿರ್ದೇಶನ ಮಾಡುತ್ತಿದ್ದರು. ಆದರೆ ಏನೋ ತುರ್ತು ಕೆಲಸ ಬಂದಿದ್ದರಿಂದ ಮುಖ್ಯ ಪಾತ್ರದಲ್ಲಿದ್ದ ನನಗೆ ನಿರ್ದೇಶನದ ಹೊಣೆ ವಹಿಸಿ ಹೋದರು. ನಾಟಕದಲ್ಲಿ ಮುರಿಗೆಪ್ಪ, ಪಂಡಿತ, ಸತ್ಯನಾರಾಯಣ ಅಣತಿ ಪಾತ್ರ ವಹಿಸಿದ್ದರು. ನಾಟಕ ಪ್ರದರ್ಶನದ ದಿನ ಲಂಕೇಶರೂ ಬಂದಿದ್ದರು. ನಾಟಕ ತುಂಬಾ ಯಶಸ್ವಿಯಾಯಿತು. ಲಂಕೇಶರು ಮೆಚ್ಚಿಕೊಂಡರು.

ನಂತರ ಕಾರಂತರು‌ ಬೆಂಗಳೂರಿನಲ್ಲಿ ಚರಿತ್ರಾರ್ಹ ಶಿಬಿರ ಮಾಡಿ ಈಡಿಪಸ್, ಹಯವದನ, ಜೋಕುಮಾರ ಸ್ವಾಮಿ ನಾಟಕ ಪ್ರದರ್ಶನ ಮಾಡಿಸಿದ್ದರು. ಇದಾದ ಮೇಲೆ ನನಗೆ ಅವರ ಸಂಪರ್ಕ ಇರಲಿಲ್ಲ.
ನಾನು ಚಂಪಾ ಅವರ ‘ಗೋಕರ್ಣದ ಗೌಡಶಾನಿ’ ನಾಟಕ ನಿರ್ದೇಶಿಸಿ, ಅದರಲ್ಲಿನ ಭಾಗವತ ( ಕಾರಂತರ ?) ಪಾತ್ರ ಮಾಡಿದೆ. ಅದು ಧಾರವಾಡದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಆ ನಾಟಕದಲ್ಲಿ ಹಯವದನ, ಜೋಕುಮಾರಸ್ವಾಮಿ ನಾಟಕಗಳ ಮತ್ತು ಕಾರ್ನಾಡರು, ಕಂಬಾರರು ಮತ್ತು ಕಾರಂತರ ಕುರಿತ ವಿಮರ್ಶೆ ನಾಟಕ ರೂಪ ಪಡೆದಿತ್ತು.

ನಂತರ ನಾನು ಕಾರಂತರ ನಿರ್ದೇಶನದ ಸತ್ತವರ ನೆರಳು ಕುರಿತು  ‘ತಂಗಳು ನಾಟಕಕ್ಕೆ ನಿರ್ದೇಶನದ ಒಗ್ಗರಣೆ’ ಎಂದು ನಾಟಕದ ವಿಮರ್ಶೆ ಮಾಡಿ ಬರೆದಿದ್ದೆ. ಹಲವಾರು ವರ್ಷಗಳ ತರುವಾಯ ಅವರು ಯಾವುದೋ ಕಾರಣಕ್ಕಾಗಿ ಧಾರವಾಡಕ್ಕೆ ಬಂದಿದ್ದಾಗ ನನ್ನನ್ನು ಕರೆಸಿಕೊಂಡು ಮಾತನಾಡಿದ್ದರು. ನಂತರ ಇಬ್ಬರೂ ಕುರ್ತು ಕೋಟಿ ಅವರ ಮನೆಗೆ ಹೋದೆವು. ಅವರಿಗೆ ಧಾರವಾಡದಲ್ಲಿ ನಾಟಕ ತಂಡ ಕಟ್ಟುವ ಯೋಚನೆ ಇತ್ತು. ಆದರೆ ಅವರು ನಂತರ ಸಂಪರ್ಕಿಸಲೇ ಇಲ್ಲ.

ಇಷ್ಟು ಅವರ ಕುರಿತ ನೆನಪು.

ಹಾಂ, ಮರೆತಿದ್ದೆ. ಎಪ್ಪತ್ತರ ದಶಕದಲ್ಲಿ ತೇಜಸ್ವಿಯವರ ಕಥೆ ನಿಗೂಢ ಮನುಷ್ಯರು ಸಿನಿಮಾ ಮಾಡಲು ಬಯಸಿದ್ದರು. ತೇಜಸ್ವಿ ಒಪ್ಪಿಗೆ ಕೊಟ್ಟಿದ್ದರು. ಆದರೆ, ಮುಂದೆ ತೇಜಸ್ವಿಯವರು ಪಾತ್ರಧಾರಿಗಳನ್ನೂ ಸೂಚಿಸಿದಾಗ ಹಿಂದೆ ಸರಿದರು. ನಾನು ತೇಜಸ್ವಿಯವರಿಗೆ ನಿಮ್ಮ ಷರತ್ತು ತಪ್ಪು. ಸಿನಿಮಾದಲ್ಲಿ ಎಲ್ಲವೂ ನಿರ್ದೇಶಕನದೇ ಆಯ್ಕೆ, ಅವನು ಸ್ವತಂತ್ರ ಎಂದಿದ್ದೆ. ತೇಜಸ್ವಿ ಸೂಚಿಸಿದ್ದ ನಟರಲ್ಲಿ ನಾನು, ಶ್ರೀಧರ ಕಲಿವೀರ ಇದ್ದೆವು!.

‍ಲೇಖಕರು avadhi

September 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: