ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್

 ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ ಅಭಿಮಾನ ಪಟ್ಟಿದ್ದೇನೆ. ನನ್ನ ಗ್ರಹಿಕೆಯ ಪ್ರಕಾರ ಮುಂಬಯಿಯ ಕನ್ನಡ ಸಾಹಿತ್ಯ ಕ್ಷೇತ್ರ ಒಂದು ಪ್ರತ್ಯೇಕ ಅಸ್ಮಿತೆ ಉಳ್ಳದ್ದು. ಇಂಗ್ಲಿಷ್ ಸಾಹಿತ್ಯ ಅಂದರೆ ಇಂಗ್ಲೆಂಡಿನಲ್ಲಿ ಬರೆದದ್ದು ಮಾತ್ರ ಅಲ್ಲ ಹೇಗೆಯೋ, ಹಾಗೆಯೇ ಕನ್ನಡ ಸಾಹಿತ್ಯ ಅನ್ನುವುದು ಕರ್ನಾಟಕದೊಳಗಿನ ಸಾಹಿತ್ಯ ಮಾತ್ರವಲ್ಲ, ಮುಂಬಯಿ ಕನ್ನಡ ಸಾಹಿತ್ಯವೂ ಸೇರಿದ ಸಾಹಿತ್ಯ.

ಇಂಗ್ಲಿಷ್ ಸಾಹಿತ್ಯವನ್ನು ಕಲಿಯುವವರು ಅಮೇರಿಕದ (ಇಂಗ್ಲಿಷ್) ಸಾಹಿತ್ಯವನ್ನು ಒಂದು ಪ್ರತ್ಯೇಕ ಪತ್ರಿಕೆಯಾಗಿ ಕಲಿಯುತ್ತಾರೆ. ಹಾಗೆಯೇ ಕಾಮನ್‌ವೆಲ್ತ್ ಇಂಗ್ಲಿಷ್ ಸಾಹಿತ್ಯ, ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್ ಎಂಬ ಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಾರೆ. ಹಾಗೆಯೇ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಹೊರನಾಡ ಕನ್ನಡ ಸಾಹಿತ್ಯ ಎಂಬ ಪತ್ರಿಕೆಯನ್ನು ಇಟ್ಟರೆ ಅದರ ಬಹುಪಾಲು ಮುಂಬಯಿ ಕನ್ನಡ ಸಾಹಿತಿಗಳ ಬರಹಗಳೇ ಆಗಿರುತ್ತವೆ. (ಚೆನೈ ಕೊಡುಗೆ ಹಿಂದೆ ಸಾಕಷ್ಟಿದ್ದರೂ, ಅಲ್ಲಿ ಮುಂಬಯಿಯಲ್ಲಿರುವಂತೆ ಒಂದು ಜೀವಂತ ಸಾಹಿತ್ಯ ಪರಂಪರೆಯಿಲ್ಲ. ಕಾಸರಗೋಡಿನಲ್ಲಿ ಸಣ್ಣಮಟ್ಟಿಗೆ ಇದೆ).

 ಮುಂಬಯಿ ಕನ್ನಡ ಸಾಹಿತ್ಯ ಲೋಕದ ಜತೆಗೆ ನನ್ನ ಸಂಬಂಧ ಪ್ರಾರಂಭವಾದದ್ದು ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಮೂಲಕ. ಈಗ ಅದು ಸ್ಥಿರವಾಗಿರುವುದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷರಾಗಿರುವ ಡಾ. ಜಿ. ಎನ್. ಉಪಾಧ್ಯರ ಮೂಲಕ. ಕ್ರಿ.ಶ. ೨೦೦೦ ದಲ್ಲಿ ನಾನು ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’ ಪುಸ್ತಕ ಸಂಪಾದಿಸುತ್ತಿದ್ದಾಗ ಜೋಕಟ್ಟೆಯವರು ನನಗೆ ಕವಿತೆಗಳ ಆಯ್ಕೆಗೆ ಸಹಾಯ ಮಾಡುತ್ತಿದ್ದರು. ಅದಕ್ಕಾಗಿ ಕೆಲವು ದಿನಗಳನ್ನು ಅವರು ನನ್ನ ಮನೆಯಲ್ಲಿಯೇ ಕಳೆದಿದ್ದರು.

ಈ ಸಂದರ್ಭದಲ್ಲಿ ಅವರು ಮುಂಬಯಿಗೆ ಸಾಕಷ್ಟು ಪ್ರಾತಿನಿಧ್ಯ ಸಿಗುವ ಹಾಗೆ ನೋಡಿಕೊಂಡರು. ಅವರಲ್ಲದಿದ್ದರೆ ಮುಂಬಯಿಯ ಕವಿಗಳನ್ನು ನಾನು ಗಮನಿಸುವ ಸಾಧ್ಯತೆ ಕಡಿಮೆಯಿತ್ತು. ಆ ಕಾಲಘಟ್ಟದ ನಂತರದ ಎರಡು ದಶಕಗಳಲ್ಲಿ ಮುಂಬಯಿಯಲ್ಲಿ ಹಲವರು ಯುವಪೀಳಿಗೆಯ ಪ್ರತಿಭಾವಂತ ಕವಿಗಳು ಬರೆಯುತ್ತಿದ್ದಾರೆ. ಅವರ ಕಾವ್ಯದ ಬಗ್ಗೆ ಓದುವ, ಬರೆಯುವ ಅವಕಾಶ ನನಗಾಗಿದೆ. ಕತೆ ಹಾಗೂ ವಿಮರ್ಶೆಯ ಕ್ಷೇತ್ರದಲ್ಲೂ ಹೊಸಪೀಳಿಗೆಯ ಸಾಹಿತಿಗಳು ತೊಡಗಿಕೊಂಡಿದ್ದಾರೆ.

ಜೋಕಟ್ಟೆ ಮತ್ತು ಸಮಾನ ಮನಸ್ಕರಿರುವ ಗೋರೆಗಾಂವ್ ಕರ್ನಾಟಕ ಸಂಘ, ಕರ್ನಾಟಕ ಸಂಘ, ಮಾಟುಂಗ ಮತ್ತು ಬಿಲ್ಲವರ ಎಸೋಸಿಯೇಶನ್ ನಡೆಸಿದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಮುಂಬಯಿ ವಿ.ವಿ.ಯ ಕನ್ನಡ ವಿಭಾಗದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ದತ್ತಿ ಉಪನ್ಯಾಸ ನೀಡಿದ್ದೇನೆ. ಈ ಎಲ್ಲ ಕಾರ್ಯಕ್ರಮಗಳನ್ನು ನೋಡುವಾಗ ನನಗೆ ಮುಂಬಯಿ ಕನ್ನಡಿಗರ ಬಗ್ಗೆ ಹೆಮ್ಮೆಯಾಗುವುದರ ಜತೆಗೆ, ಇಂತಹ ಬದ್ಧತೆ ಕರ್ನಾಟಕದೊಳಗೆ ಕಾಣಸಿಗದ ಬಗ್ಗೆ ಸಖೇದಾಶ್ಚರ್ಯವಾಗಿದೆ.

ಮುಂಬಯಿಯ ಸಾಹಿತಿಗಳ ಬರವಣಿಗೆಯನ್ನು ಗಮನಿಸಿದರೆ ಹಟ್ಟಿಯಂಗಡಿ, ಚಿಟಗುಪ್ಪಿ, ಕ.ವೆಂ.ಶಾಸ್ತ್ರಿ, ಚುರಮುರಿ, ಹಾವನೂರ, ಕಲ್ಲೂರ, ದಿನಕರ ದೇಸಾಯಿ, ಡಿ.ಕೆ.ಮೆಂಡನ್ ಮುಂತಾದವರನ್ನು ಮುಂಬಯಿಯ ಆದ್ಯ ಸಾಹಿತ್ಯ ನಿರ್ಮಾಣಕಾರರು ಅಥವಾ ನವೋದಯ ಸಾಹಿತಿಗಳು ಎಂದು ಗುರುತಿಸಬಹುದು.

ಚಿತ್ತಾಲ, ಬಲ್ಲಾಳ, ದೇವರಗೆಣ್ಣೂರ, ನಿಂಜೂರು, ಕಾಯ್ಕಿಣಿ, ಸನದಿ, ಕಾರ್ನಾಡ್, ಸುನೀತಾ ಶೆಟ್ಟಿ, ಜಿ.ಎನ್. ಉಪಾಧ್ಯ, ಮಿತ್ರಾ ವೆಂಕಟರಾಜ್, ಶ್ಯಾಮಲಾ ಮಾಧವ, ಶ್ರೀನಿವಾಸ ಜೋಕಟ್ಟೆ, ಜಿ.ವಿ. ಕುಲಕರ್ಣಿ, ಜಿ.ಡಿ. ಜೋಷಿ, ಎಂ.ಬಿ. ಕುಕ್ಯಾನ್, ಶಿಮುಂಜೆ ಪರಾರಿ, ಕೋಡು ಭೋಜ ಶೆಟ್ಟಿ, ಬಿ. ಎಸ್. ಕುರ್ಕಾಲ್, ತುಳಸಿ ವೇಣುಗೋಪಾಲ್, ಕರುಣಾಕರ ಶೆಟ್ಟಿ, ಎಚ್. ಬಿ. ಎಲ್. ರಾವ್ (ಸಂಘಟನೆ) ಮುಂತಾದವರನ್ನು ಒಳಗೊಂಡ ಒಂದು ಸುದೀರ್ಘ ಅವಧಿಯ ಸುವರ್ಣಯುಗ ಈಗಷ್ಟೆ ಮುಗಿಯುತ್ತಿದೆ ಅನಿಸುತ್ತದೆ. ಬಹುಶಃ ಇದನ್ನು ಇನ್ನೂ ಉಪವಿಭಾಗ ಮಾಡಿಯೂ ಅಭ್ಯಾಸ ಮಾಡಬಹುದೆನಿಸುತ್ತದೆ.

ಕಳೆದ ದಶಕದ ಸಾಹಿತ್ಯವನ್ನು ಮೂರನೆಯ ಘಟ್ಟವನ್ನಾಗಿ ಪರಿಗಣಿಸಬಹುದಾಗಿದೆ. ರಾಜೀವ ನಾಯಕ್, ಗಿರಿಜಾ ಶಾಸ್ತ್ರಿ, ಮಮತಾ ರಾವ್, ಜಿ. ಪಿ. ಕುಸುಮಾ, ಪೂರ್ಣಿಮಾ ಶೆಟ್ಟಿ, ಅನಿತಾ ಪೂಜಾರಿ ತಾಕೊಡೆ, ಹೇಮಾ ಸದಾನಂದ ಅಮೀನ್, ಶಾರದಾ ಅಂಚನ್, ಗೋಪಾಲ ತ್ರಾಸಿ, ಶಿಮಂತೂರು ಚಂದ್ರಹಾಸ ಸುವರ್ಣ, ಕೆ. ಗೋವಿಂದ ಭಟ್, ಗಂಗಾಧರ ಪಣಿಯೂರು ಮುಂತಾದವರು ಮುಂಬಯಿಯ ಮೂರನೆಯ ಘಟ್ಟದ ಮುಖ್ಯ ಸಾಹಿತಿಗಳು.

ಇವರ ಜತೆಗೆ ನಿಂಜೂರು, ಮಿತ್ರಾ ವೆಂಕಟರಾಜ್‌ರಂತಹ ಹಿರಿಯ ಸಾಹಿತಿಗಳು, ಈಗ ಮಧ್ಯವಯಸ್ಸಿನಲ್ಲಿರುವ ಜೋಕಟ್ಟೆ, ಜಿ. ಎನ್. ಉಪಾಧ್ಯ, ಈಶ್ವರ ಅಲೆವೂರು, ವಿ. ಎಸ್. ಶ್ಯಾನುಭಾಗ್‌ರಂತಹ (ಆಗ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರಕ್ಕೆ ಬಂದವರಿವರು) ಸುವರ್ಣ ಯುಗದ ಸಾಹಿತಿಗಳು ಕೂಡ ಬಹಳ ಸಕ್ರಿಯರಾಗಿರುವ ಒಂದು ವಿಶಿಷ್ಟ ಘಟ್ಟ ಇದು. ಕರ್ನಾಟಕದೊಳಗಿನ ಸಾಹಿತ್ಯ ಕ್ಷೇತ್ರ ಜಾತಿ ಆಧಾರದಲ್ಲಿ, ಎಡ-ಬಲ ಪಂಥಗಳ ಆಧಾರದಲ್ಲಿ ಚೂರಾಗಿರುವಾಗ ಮುಂಬಯಿ ಸಾಹಿತ್ಯ ಕ್ಷೇತ್ರ ಒಂದು ಬಗೆಯ ಸಾಹಿತ್ಯಿಕ ನಿಷ್ಠೆಯಿಂದ ಬೆಳೆಯುತ್ತಿದೆ.

ಮುಂಬಯಿ ಸಾಹಿತಿಗಳ ಕೃತಿಗಳಿಗೆ ಮುಂಬಯಿಯ ವಿಮರ್ಶಕರಿಂದಲೇ ಸಮೀಕ್ಷೆಯ ಗೌರವವೂ ಸಿಗುತ್ತಿದೆ, ಮತ್ತು ಅದನ್ನು ಪ್ರಕಟಿಸಲು ಮುಂಬಯಿಯ ದಿನಪತ್ರಿಕೆ ಹಾಗೂ ಮಾಸಪತ್ರಿಕೆಗಳು ನೆರವಾಗುತ್ತಿವೆ. ಅವು ಕತೆ ಹಾಗೂ ಕವಿತೆಗಳನ್ನೂ ಪ್ರಕಟಿಸುತ್ತಾ ಸಾಹಿತ್ಯವನ್ನು ಬೆಳೆಸುತ್ತಿವೆ. ಜತೆಗೆ ಮುಂಬಯಿ ವಿಶ್ವವಿದ್ಯಾಲಯದ ಸಾಹಿತ್ಯಿಕ ವಿಚಾರ ಸಂಕಿರಣಗಳು, ಸಂಘ ಸಂಸ್ಥೆಗಳ ಕವಿಗೋಷ್ಟಿಗಳು ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿವೆ.

ಈ ಸನ್ನಿವೇಶ, ಒಂದು ಶತಮಾನದ ಹಿಂದಿನ ಮಂಗಳೂರು ಕೇಂದ್ರದ ನವೋದಯ ಸಾಹಿತ್ಯವನ್ನು ನೆನಪಿಸುವಂತಿದೆ.
ಮುಂಬಯಿ ಸಾಹಿತ್ಯ ಇನ್ನು ಮುಂದೆ ಸ್ವಲ್ಪ ಕಠಿಣವಾದ ವಿಮರ್ಶೆಯ ಪರೀಕ್ಷೆಯನ್ನು ಎದುರಿಸಿ ವಿಶ್ವಮಾನ್ಯವಾಗುವ ಕಡೆಗೆ ಸಾಗಬೇಕಾಗಿದೆ. ಡಾ. ಜಿ. ಎನ್. ಉಪಾಧ್ಯರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಈ ಕೆಲಸವನ್ನು ಮಾಡುತ್ತಿರುವುದನ್ನು (ಉದಾಹರಣೆಗೆ ಕವಿಗಳು ಓದಿದ ಕವಿತೆಗಳ ನಿರ್ದಾಕ್ಷಿಣ್ಯ ಮೌಲ್ಯಮಾಪನ) ನಾನು ಗಮನಿಸಿದ್ದೇನೆ.

ಇತರ ಸಮೀಕ್ಷಕರೂ ಆ ನಿಟ್ಟಿನಲ್ಲಿ ಸರಿಯಾದ ಮೌಲ್ಯಮಾಪನಕ್ಕೆ ಮುಂದಾಗಬೇಕು. ಯುವ ಸಾಹಿತಿಗಳು ತಮ್ಮ ಬರವಣಿಗೆಗೆ ಶ್ಲಾಘನೆಯನ್ನಷ್ಟೆ ಬಯಸದೆ, ವಿಮರ್ಶೆಯ ಅಗ್ನಿಪರೀಕ್ಷೆಯನ್ನು ಹಾದು ಬರುವ ಎದೆಗಾರಿಕೆಯನ್ನು ತೋರಬೇಕು.

ಈಗಿನ ಯುವ ಸಾಹಿತಿಗಳ ಬರವಣಿಗೆ ಕರ್ನಾಟಕದೊಳಗಿನ ಪತ್ರಿಕೆಗಳಲ್ಲಿಯೂ ಹೊಸ ಉತ್ಸಾಹವನ್ನು ಹುಟ್ಟಿಸಿದೆ ಎಂದರೆ ಅವರ ಬರವಣಿಗೆಯ ಸತ್ವ ಅರ್ಥವಾದೀತು. ಅದನ್ನು ಸರಿಯಾಗಿ ಗ್ರಹಿಸುವ ಅಧ್ಯಯನ ನಡೆಯಬೇಕು.

ಈ ಬಗೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕೆಲವು ಸಂಶೋಧನೆಗಳು ನಡೆದಿವೆ. ಡಾ. ಜಿ. ಎನ್. ಉಪಾಧ್ಯರ ‘ಮುಂಬೈ ಕನ್ನಡ ಜಗತ್ತು’ ಎಂಬ ಬಿಡಿ ಲೇಖನಗಳ ವ್ಯವಸ್ಥಿತ ಜೋಡಣೆಯ ಸಂಕಲವಿದೆ. ಇವನ್ನೆಲ್ಲ ಗಮನಿಸಿಕೊಂಡು ಒಂದು ಮುಂಬಯಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಕೆಲಸ ಆಗಬೇಕು. ಅದರಿಂದಾಗಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅದನ್ನೊಂದು ಪತ್ರಿಕೆಯಾಗಿ ಅಭ್ಯಾಸ ಮಾಡುವುದಕ್ಕೆ ಅನುಕೂಲವಾದೀತು.

ಕನ್ನಡ ಸಾಹಿತ್ಯದಲ್ಲಿ ವಿಮರ್ಷಕರಾಗಿ ಕತೆಗಾರರಾಗಿ ಕಾದಂಬರಿಕಾರರಾಗಿ ತಮ್ಮದೇ ಛಾಪು ಬೀರಿರುವ ಡಾ.ಬಿ.ಜನಾರ್ಧನ್ ಭಟ್ ಸೇವಾನಿವೃತ್ತ ಪ್ರಾಂಶುಪಾಲರು. ಭಾರತೀಸುತ ಪ್ರಶಸ್ತಿ, ,ವರ್ಧಮಾನ ಪ್ರಶಸ್ತಿ, ವಸುದೇವಭೂಪಾಲಂ ಪ್ರಶಸ್ತಿ ,ವಿ.ಎಂ.ಇನಾಂದಾರ್ ಪ್ರಶಸ್ತಿ ಪಡೆದಿರುವರು.72 ಕೃತಿಗಳನ್ನು ಪ್ರಕಟಿಸಿದ್ದಾರೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

೧ ಪ್ರತಿಕ್ರಿಯೆ

  1. Ahalya Ballal

    ಮುಂಬಯಿ ಕನ್ನಡ ಸಾಹಿತ್ಯಕ್ಕೆ ಸಹೃದಯತೆಯಿಂದ ಸ್ಪಂದಿಸಿದ್ದಕ್ಕಾಗಿ ವಂದನೆ, ಜನಾರ್ಧನ್ ಭಟ್ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: