ಅವರು ಸುನೀತಾ ಶೆಟ್ಟಿ

ಶ್ರೀನಿವಾಸ ಜೋಕಟ್ಟೆ

ಕೊರೊನಾ ವಿಜ್ರಂಭಿಸಲು ಆರಂಭಿಸಿದ್ದು  ಚೈತ್ರ ಮಾಸದಲ್ಲಿ ‘ನಾನು ಐವತ್ತಾರು ಕವನ ಬರೆದೆ’ ಎಂದರು ಡಾ.ಸುನೀತಾ ಎಂ. ಶೆಟ್ಟಿ.

“ಮಹಿಳೆಯ ಮಟ್ಟಿಗೆ ಶಿಕ್ಷಣವೊಂದೇ ಅವಳ ಬಾಳಿಗೆ ಬೆಳಕು. ಜಾಗೃತಿ ಅವಳನ್ನು ಕಾಪಿಡುವ ಆಯುಧ” ಈ ಮಾತನ್ನು ಬಹಳ ಸಮಯದಿಂದ ಹೇಳುತ್ತಾ ಬಂದ ಮುಂಬೈ ಲೇಖಕಿಯರ ಬಳಗ ‘ಸೃಜನಾ’ ದ  ರೂವಾ ರಿ ,ಶಿಕ್ಷಣತಜ್ಞೆ  ಡಾ. ಸುನೀತಾ ಎಂ. ಶೆಟ್ಟಿ ಖಾಲ್ಸಾ ಕಾಲೇಜಿನ ಕನ್ನಡ ವಿಭಾಗದ ಸೇವಾ ನಿವೃತ್ತ ಮುಖ್ಯಸ್ಥರು.  ವೀರರಾಣಿ ಅಬ್ಬಕ್ಕ ಪ್ರಶಸ್ತಿ ,ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ….ಇತ್ಯಾದಿ ಪುರಸ್ಕೃತರಾಗಿರುವ ಡಾ. ಸುನೀತಾ ಶೆಟ್ಟಿ ಅವರಿಗೆ ಈಗ 88ರ ಹರೆಯ( ಜನ್ಮ- 1932) .

ಹೆಣ್ಣುಮಕ್ಕಳು ಕಾಲೇಜಿಗೆ ಹೋಗದ ದಿನಗಳಲ್ಲಿ ಹಟತೊಟ್ಟು ಬಹಳ ಕಷ್ಟದಿಂದ ಕಾಲೇಜು ಮೆಟ್ಟಲೇರಿದ   ಸಾಹಸಿ  ಮಹಿಳೆ.  1955 ರಲ್ಲಿ ಮಂಗಳೂರಿನ ಕಳವಾರುನಿಂದ ಮುಂಬೈಗೆ ಬಂದ ಸುನೀತಾ ಶೆಟ್ಟಿಯವರು ವರದಕ್ಷಿಣೆ ನೀಡದೆ ತಾನು  ವಿವಾಹ ವಾಗುತ್ತೇನೆ ಎಂದು ಆ ಕಾಲದಲ್ಲಿ ಪಣತೊಟ್ಟು ,ಗಾಂಧಿ ತತ್ವದ ಆದರ್ಶವಾದಿ ಪೆರಾರ ಮುಂಡಬೆಟ್ಟು ಮಹಾಬಲ ಶೆಟ್ಟಿ ಅವರನ್ನು ಬಾಳಸಂಗಾತಿಯನ್ನಾಗಿಸಿದರು.

ಮಹಾಬಲ ಶೆಟ್ಟಿ ಅವರು ಕಿನ್ನಿಕಂಬಳ ಶಾಲೆಯ ಮಾಜಿ ವಿದ್ಯಾರ್ಥಿ. ಕನ್ನಡದ ಪ್ರಖ್ಯಾತ ಕಥೆಗಾರ ಬಾಗಲೋಡಿ ದೇವರಾಯರು ಇದೇ ಶಾಲೆಯಲ್ಲಿ ಓದಿದವರು .ದೇವರಾಯರ ತಂದೆ ಕೃಷ್ಣರಾಯರು ಅಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಅವರ ವಿದ್ಯಾರ್ಥಿಯೇ ಮಹಾಬಲ ಶೆಟ್ಟಿ.

” ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು” ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿಯನ್ನು ಡಾ.ಸುನೀತಾ ಶೆಟ್ಟಿ ಪಡೆದಿರುವರು . ಹಲವಾರು ವಿದೇಶಗಳನ್ನು ಸುತ್ತಿದ  ಇವರು ಪ್ರವಾಸಪ್ರಿಯರೂ ಕೂಡಾ.

ಮುಂಬೈಯಲ್ಲಿ ಲೇಖಕಿಯರ ಬಳಗ ‘ಸೃಜನಾ’ ಮೂಲಕ ಲೇಖಕಿಯರಿಗೆ ವಿಶೇಷವಾದ ಮನ್ನಣೆಯನ್ನು ತಂದುಕೊಟ್ಟವರು.  “ಹೆಣ್ಣಿನ ಹಾಡೇ ಹಾಡಾಗಿ ಮೂಡಿಬಂದ ನಮ್ಮ ಜನಪದಗೀತೆಗಳಲ್ಲಿ ಅಡಗಿರುವ ಪ್ರತಿಭಟನೆಯ ಧ್ವನಿ ಹೇಗೆ ಪುರುಷ ದ್ವೇಷಿಯಲ್ಲವೋ ಅಂತೆಯೇ ಅನುಭವದ ತೆಕ್ಕೆಯಲ್ಲಿ ಹುದುಗಿರುವ ವೇದನೆಗೆ ಬಾಯಿ ಕೊಟ್ಟರೆ ಅದು ಇನ್ನೊಬ್ಬರನ್ನು ದ್ವೇಷಿಸ ಲಿಕ್ಕಾಗಿಯೇ  ಹುಟ್ಟಿದೆ ಎಂದು ಹೇಳುವುದು ಸರಿಯಾಗದು. ಜಾಗತಿಕ ಸಾಹಿತ್ಯದ ಇತಿಹಾ ಸವೇ ಒಂದು ಅವ್ಯವಸ್ಥೆಯ ವಿರುದ್ಧ ನಡೆದ ಪ್ರಜ್ಞಾವಂತಿಕೆ” ಎನ್ನುವವರು ಇವರು.

 ಲೇಖಕಿಯರ ಸಂಘಟನೆ  ‘ಸೃಜನಾ’ ಮುಂಬಯಿಗೆ ಅಗತ್ಯವೇ? ನನ್ನ ಪ್ರಶ್ನೆ ಮುಂದಿಟ್ಟೆ.

 ಡಾ.ಸುನೀತಾ ಶೆಟ್ಟಿ ಅವರು ತಾಳ್ಮೆಯಿಂದ ನಕ್ಕು ಹೇಳುತ್ತಾರೆ-

 “ಒಳನಾಡಿನ ಜನ ನಮ್ಮನ್ನು ಗುರುತಿಸು ವುದು ಕಡಿಮೆ. ಒಳನಾಡಿನಿಂದ ಬಹಳ ಜನರನ್ನು ನಾವೆಲ್ಲ ಮುಂಬೈಗೆ ಆಮಂತ್ರಿಸುತ್ತೇವೆ. ಆದರೆ ಇಲ್ಲಿನ ಪ್ರತಿಭಾವಂತರನ್ನು ಒಳನಾಡಿನಲ್ಲಿ ಆಮಂತ್ರಿಸುವುದು ಬಹಳ ಕಡಿಮೆ . ನಾನು ಬೇರೆ ಬೇರೆ ಕಡೆ ಉಪನ್ಯಾಸಗಳ ನೀಡಲು  ಸೆಮಿನಾರುಗಳಲ್ಲಿ ಭಾಗವಹಿಸುತ್ತೇನೆ. ಆದರೆ ಸೃಜನಾತ್ಮಕ ನೆಲೆಯಲ್ಲಿ ಮುಂಬೈ ಯಲ್ಲಿ ತುಂಬಾ ಜನ ಬರಹಗಾರರು ಇದ್ದಾರೆ . ಅವರ ಹೆಸರು ಕೂಡ ಒಳನಾಡಿ ನಲ್ಲಿ ಗುರುತಿಸಬೇಕು.

ಮುಂಬೈಯಲ್ಲಿ ನಮ್ಮಷ್ಟಕ್ಕೆ ನಾವು ಸ್ವತಂತ್ರವಾಗಿ ಚರ್ಚಿಸುವ ಹೇಳಿಕೊಳ್ಳುವ ಒಂದು ವೇದಿಕೆ ಅಗತ್ಯವೆನಿಸಿತು. ಸೃಜನಾ ಲೇಖಕಿಯರ ಬಳಗ ಯಾವುದೇ ಪ್ರತಿರೋಧ ರೋಷದಿಂದ ಹುಟ್ಟಿದ್ದಲ್ಲ .ಈಗ ಇಲ್ಲಿ ಲೇಖಕಿಯರ ಸಂಖ್ಯೆ ಬೆಳೆಯುತ್ತಿದೆ. ಅವರವರ ವಿಚಾರಗಳೇನು ಅದನ್ನು ಸ್ವಲ್ಪ ಹೊರಹಾಕಿದರೆ ಒಳಿತು. ಮುಂಬೈಯಲ್ಲಿ ತುಂಬಾ ಪ್ರತಿಭಾವಂತ ಲೇಖಕಿಯರಿದ್ದರೂ ಅವರೆಲ್ಲಾ ಹಿಂದೆ ತೆರೆಮರೆಯಲ್ಲೇ ಇರುತ್ತಿದ್ದರು.

ಹಲವರಿಗೆ ಅವಕಾಶಗಳೂ ಕಡಿಮೆ ಇತ್ತು.  ನಮ್ಮ ನಮ್ಮ ವಿಚಾರಗಳನ್ನು ಎಲ್ಲಾ ಕಡೆ ವೇದಿಕೆಗಳಲ್ಲಿ ಹಂಚಲು ಆಗುವುದಿಲ್ಲ. ಅದಕ್ಕಾಗಿ ನಮ್ಮದೇ ಆದ ಒಂದು ವೇದಿಕೆ ಪ್ರತಿಭಾವಂತರಿಗೆ ಅಗತ್ಯವಿದೆ ಅನ್ನಿಸಿತ್ತು. ಹಾಗೆ ‘ಸೃಜನಾ’ ಬಳಗ  ಹುಟ್ಟಿಕೊಂಡಿತು .ಲೇಖಕಿಯರ ಬಳಗ ಅಂತ ಯಾರೂ ಆಕ್ಷೇಪ ಎತ್ತಿಲ್ಲ. ಎಲ್ಲಾ ಸಂಘ ಸಂಸ್ಥೆಗಳವರು ನಮಗೆ ಸಹಕಾರ ಕೊಡುತ್ತಿದ್ದಾರೆ. ನಮ್ಮಷ್ಟಕ್ಕೆ ನಾವು ಸ್ವತಂತ್ರವಾಗಿ ಹೇಳಿಕೊಳ್ಳುವ ವೇದಿಕೆಯಾಗಿ ಇದನ್ನು ಗುರುತಿಸಲಾಗುತ್ತಿದೆ……”

(ಡಾ. ಸುನೀತಾ ಶೆಟ್ಟಿ ಅವರನ್ನು ಮುಂಬೈ ಆಕಾಶವಾಣಿಯ ಆರ್ಕೈವ್ ಗಾಗಿ ದಿನವಿಡೀ ನಾನು ಕೆಲ ವರ್ಷಗಳ ಹಿಂದೆ ಸಂದರ್ಶನ ಮಾಡಿದ್ದು ಅದು ಸುಮಾರು 50 ವರ್ಷಗಳ ಕಾಲ ಇರುತ್ತದೆಯಂತೆ .)

ಕೊರೋನ ಕಾಲದಲ್ಲಿ ಕಳೆದ ಆರು ತಿಂಗಳಲ್ಲಿ  ಡಾ.ಸುನೀತಾ ಶೆಟ್ಟಿಯವರ

ದಿನಚರಿ ಹೇಗಿತ್ತು ಪ್ರಶ್ನಿಸಿದೆ.

” ನನಗೀಗ 88. ಆದ್ದರಿಂದ ಎಲ್ಲೂ ಹೊರಗಡೆ ಹೋಗಬಾರದು ಎಂದಿದ್ದಾರೆ ನನ್ನ  ಮಕ್ಕಳು. ನನ್ನ ಮನೆಯಲ್ಲೇ ಇದ್ದೇನೆ. ಇಲ್ಲಿ ಸೃಜನಾತ್ಮಕ ನೆಲೆಯಲ್ಲಿ ಹೊಂದಿಸಿಕೊಳ್ಳಲು ಯತ್ನಿಸಿದ್ದೇನೆ. ಕೊರೋನಾ ವಿಜೃಂಭಿಸಿದ್ದು ಚೈತ್ರಮಾಸದಲ್ಲಿ . ಹಾಗೆ ನನಗೆ ಕೋಗಿಲೆಯ ನೆನಪು ತುಂಬಾ ಕಾಡಿತ್ತು.  ನಾನು ಕೊರೊನಾ ಮತ್ತು ಕೋಗಿಲೆ ಎಂಬ ಕವನ ಬರೆದೆ. ಬರೆಯುತ್ತಾ  56 ಕವನಗಳು ಆಯಿತು.  ಸಂಕಲನ ಬರುತ್ತದೆ. ಇದಕ್ಕೆ ‘ಮಧ್ಯಂತರ’ ಅಂತ ಹೆಸರಿಟ್ಟಿದ್ದೇನೆ.

 ಅದೇ ರೀತಿ ನಾನು ಬೇರೆ ಬೇರೆ ಕಡೆ ವಿದೇಶಗಳಿಗೆ  ಪ್ರವಾಸ ಹೋಗಿದ್ದೇನೆ. ಅಲ್ಲಿಯ ಸಂಸ್ಕೃತಿಗೂ ನಮ್ಮ ತುಳು ಸಂಸ್ಕೃತಿಗೆ ಅನೇಕ ಸಾಮ್ಯತೆಗಳಿವೆ. ಬಹುಶಃ ಆ ಕಾಲದಲ್ಲಿ ವಲಸೆ ಸಂಸ್ಕೃತಿಯ ಕಾರಣ ಇರಬಹುದು. ಅವರೆಲ್ಲ ಎಲ್ಲಿ ನೆಲೆನಿಂತರೋ ಅಲ್ಲಿಯೇ ಸ್ಥಾಯಿಯಾಗಿರಬಹುದು. ಅಲ್ಲಿನ ನಂಬಿಕೆಗಳು ,ಕಥೆಗಳು… ಇವನ್ನೆಲ್ಲ ನಮ್ಮ ತುಳು ಸಂಸ್ಕೃತಿಯ ಮುಂದಿಟ್ಟು ಮತ್ತೊಂದು ಕೃತಿ ಬರೆದಿದ್ದೇನೆ. ಹಾಗೆ ಕೊರೊನಾ ಅವಧಿಯ ಆರು ತಿಂಗಳಲ್ಲಿ ಎರಡು ಪುಸ್ತಕಗಳನ್ನು ಬರೆದು  ಈಗ ಅಚ್ಚಿನಲ್ಲಿವೆ….  ಎಂದರು.

 ಮುಂಬಯಿಯ ತುಳು ಕನ್ನಡ ಕಾರ್ಯಕ್ರಮಗಳಲ್ಲಿ ಈ ವರ್ಷದ ಆರಂಭದ ತನಕವೂ ಅವರು ಅನೇಕ ಕಡೆ  ಹಾಜರಾಗಿರುವುದು  ಕಂಡಾಗ ಅವರ ಕನ್ನಡ ಪ್ರೇಮಕ್ಕೆ ಮಾರುಹೋಗದವರಿಲ್ಲ. ಅವರು ಟಿವಿ ಸೀರಿಯಲ್ ಗಳಲ್ಲಿ ಹೆಚ್ಚಾಗಿ ಮಲಯಾಳಂ ಜಾಸ್ತಿ ನೋಡುತ್ತಾರೆ. ಯಾಕೆಂದರೆ ಅಲ್ಲಿನ ಪ್ರಕೃತಿಯ ಆಚಾರ-ವಿಚಾರ ಸಹಜತೆ ಅವರಿಗೆ ತುಂಬಾ ಪ್ರೀತಿಯಂತೆ. ಅವರು ಹೆಚ್ಚಾಗಿ ರಾತ್ರಿಗೆ ಬರೆಯುವುದು.

ಕೆಲ ವರ್ಷಗಳ ಹಿಂದೆ ಮಹಾಬಲ ಶೆಟ್ಟರು ನಮ್ಮಿಂದ ದೂರವಾಗಿದ್ದಾರೆ. ವಿಶೇಷ ಅಂದರೆ ಮಹಾಬಲ ಶೆಟ್ಟರು ಅಪ್ಪಟ ಗಾಂಧಿವಾದಿ . ಧರ್ಮ ದೇವರುಗಳಿಂದ ದೂರವೇ   ನಿಲ್ಲು ತ್ತಿದ್ದವರು. ಆದರೆ ಡಾ.ಸುನೀತಾ ಶೆಟ್ಡಿಯವರ ನಂಬಿಕೆಗೆ  ಅವರೆಂದೂ  ಅಡ್ಡಿ ಪಡಿಸಿಲ್ಲ.

 “ಅವರವರ ವಿಚಾರಗಳು ಅವರವರಿಗೆ. ನನ್ನ ತಾಯಿಗೆ ಸಂಪ್ರದಾಯವಿತ್ತು. ಹಾಗಾಗಿ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ” ಎನ್ನುತ್ತಾರೆ ಡಾ.ಸುನೀತಾ ಶೆಟ್ಟಿ.

ಭೂಮಿ, ಭರತ  ಮತ್ತು ಸತ್ಯಾ ಮೂವರು ಮಕ್ಕಳು ಇವರಿಗೆ.

ನಮ್ಮ ಅನೇಕ ಲೇಖಕರ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ , ಡಾ. ಸುನೀತಾ ಶೆಟ್ಟಿ ಅವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸಿದರು. ಕರ್ನಾಟಕ ಸಂಘ ಮುಂಬೈ ಇಲ್ಲಿಗೆ ತನಗೆ  ಅತ್ತಿಮಬ್ಬೆ ಪ್ರಶಸ್ತಿಗೆ ದೊರಕಿದ ಒಂದು ಲಕ್ಷ ರೂ. ನಗದನ್ನು ಇರಿಸಿ ಪ್ರತಿವರ್ಷ ಒಬ್ಬರು ಪ್ರಸಿದ್ಧ ಸಾಹಿತಿಗೆ  ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಸುನೀತಾ ಮೇಡಮ್ ಅವರು ಮುಂಬೈ ಕನ್ನಡ ಲೇಖಕಿಯರಿಗಾಗಿ “ಸೃಜನಾ ” ಕಟ್ಟಿದ್ದು ಮುಂಬೈನಲ್ಲಿದ್ದೂ ಮಕ್ಕಳನ್ನು‌ ಕನ್ನಡ ಮಾಧ್ಯಮದಲ್ಲಿ ಓದಿಸಿದ್ದು , ಈ ವಯಸ್ಸಿನಲ್ಲಿ ಹೊಸ ಸಂಕಲನ ತರುತ್ತಿರುವುದು – ಎಲ್ಲವೂ ನನಗೆ ಹೊಸ ವಿಷಯಗಳು. ಸಂದರ್ಶನ ಸೊಗಸಾಗಿದೆ. ಇನ್ನೊಂದು ವಿವರವಾದ ಸಂದರ್ಶನವನ್ನೂ ಅವಧಿ ಪ್ರಕಟಿಸಿದರೆ ಬಹಳ ಉಪಯೋಗವಾಗುತ್ತದೆ. ನಮ್ಮ ಲೇಖಕಿಯರ ಸಂಘವೂ ಇತ್ತ ಗಮನ ಹರಿಸಬಹುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: