ಮುಂಬಯಿ ಎನ್ನುವುದು ಮಾಯಾನಗರಿ

ಶ್ರೀನಿವಾಸ ಜೋಕಟ್ಟೆ

ಅವಧಿಯ ಮುಂದಿನ ‘ಸಂಡೆ ಸ್ಪೆಷಲ್’ ಮುಂಬೈಗೆ ಮೀಸಲು, ನೀವೇ ಈ ಸಂಚಿಕೆಯ ಎಡಿಟರ್…ಎಂದು ಬಹುಕಾಲದ ಮಿತ್ರರಾದ ಜಿ .ಎನ್. ಮೋಹನ್ ರು  ವಾರದ ಹಿಂದೆ ಕಾಲ್ ಮಾಡಿದಾಗ ಒಂದು ಕ್ಷಣ ವಿಸ್ಮಯ.

ಅದಕ್ಕೂ ಒಂದು ಕಾರಣ ಇದೆ. ಆ ಕ್ಷಣಕ್ಕೆ ಜಯಂತ ಕಾಯ್ಕಿಣಿಯವರು ಬಹಳ ಹಿಂದೆ ಬರೆದ ‘ಮುಂಬೈಗೆ ಬಂದು ಹೋಗುವ ದುಷ್ಯಂತರು….’ಎಂಬರ್ಥದ ಲೇಖನ ವೊಂದುಕಣ್ಣಮುಂದೆ ಹಾದು ಹೋಯಿತು. ಮುಂಬೈಯ ಹಲವಾರು ಕನ್ನಡ ಸಂಘ ಸಂಸ್ಥೆಗಳು ಇಲ್ಲಿ ನಡೆಸುವ ಕನ್ನಡ ಕಾರ್ಯಕ್ರಮಗಳಿಗೋ ಅಥವಾ ಕನ್ನಡ  ಸಮ್ಮೇಳನಗಳಿಗೋ ಒಳನಾಡಿನ ಅನೇಕ ಗಣ್ಯರನ್ನು, ಉಪನ್ಯಾಸಕ್ಕೋ, ಉದ್ಘಾ ಟನೆಗೋ , ಅಧ್ಯಕ್ಷತೆಗೋ ಮುಂಬೈಗೆ ಕರೆಸುತ್ತಾರೆ.

ಇಲ್ಲಿಗೆ ಬಂದವರೆಲ್ಲ ಏನೇನೋ ‘ದೊಡ್ಡ ದೊಡ್ಡ’ ಘೋಷಣೆ’ ಗಳನ್ನು ಮಾಡಿ, ಮುಂಬೈ ಕನ್ನಡಿಗರಿಗೆ  ಸ್ವಲ್ಪ ‘ಆಸೆ’ ತೋರಿಸಿ,ಕರ್ನಾಟಕ  ಸರ ಕಾರದ ಜೊತೆ  ಮಾತಾಡಿ ನಿಮಗೇನಾದರೂ ಸಹಾಯವಾಗುವಂತೆ ಮಾಡಲು ಪ್ರಯತ್ನಿಸುತ್ತೇವೆ…… ಎಂದೆಲ್ಲ  ಹೇಳಿ ತಮ್ಮ ಊರಿಗೆ ಹೋದವರು ಅನಂತರ  ಮುಂಬೈ ಕನ್ನಡಿಗರನ್ನು ಮರೆತು ಬಿಡುವುದೇ ಹೆಚ್ಚು !( ಕೆಲವರು ಅಪವಾದ ಇದ್ದಾರೆ).

ಇಂಥ ದೃಶ್ಯಗಳ ನಡುವೆ ಬಹುಶಃ ಇಲ್ಲಿಯ ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ (ನನಗೆ ತಿಳಿದಂತೆ) ಹಾಜರಾಗದ ಜಿ ಎನ್ ಮೋಹನ್ ಅವರು ಮುಂಬೈ ಕನ್ನಡಿಗರ  ಮೇಲಿನ ಪ್ರೀತಿಯಿಂದ  ಅವಧಿ ವೆಬ್ ಮೆಗಜಿನ್ ನ ಸಂಡೇ ಸ್ಪೆಷಲ್ ಗೆ ಮುಂಬೈಯನ್ನು ಆಯ್ಕೆ ಮಾಡಿರುವುದು  ನನಗೆ ಆ ಕ್ಷಣಕ್ಕೆ ವಿಸ್ಮಯವಾಯಿತು. ಅದಕ್ಕಾಗಿ ಮೊದಲಿಗೆ ಮುಂಬಯಿ ಕನ್ನಡಿಗರ ಪರವಾಗಿ ಮೋಹನ್ ಅವರಿಗೆ , ‘ಅವಧಿ’ ತಂಡಕ್ಕೆ ನನ್ನ  ವಂದನೆಗಳು.

ನಾವೆಲ್ಲ ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವವರು. ಈ ಕೊರೊನಾ ಕಾಲದಲ್ಲಿ  ನಮ್ಮಂಥವರು ( ನಮ್ಮಂಥವರು ಯಾಕೆ, ಜನರೂ ಕೂಡಾ ತಾವೆಲ್ಲ  ಪತ್ರಿಕೆಗಳು ಇಲ್ಲದಿದ್ದರೂ  ಬದುಕಲು ಕಲಿತಿದ್ದೇವೆ ಅನ್ನಲು ಶುರು ಮಾಡಿದ್ದಾರೆ. ಎಲ್ಲ ಮೊಬಯಿಲ್ ನಲ್ಲೇ ಬರುವಾಗ ಪತ್ರಿಕೆಗಳ ಅಗತ್ಯವೇನು?) ಪ್ರಿಂಟ್ ಮೀಡಿಯಾದಲ್ಲಿ ಉತ್ಸಾಹ ಕಳಕೊಳ್ಳುತ್ತಿರುವ ಈ ದಿನಗಳಲ್ಲಿ ‘ಅವಧಿ’ ಯ ಸಂಡೆಸ್ಪೆಶಲ್ ನ  ಸಂಪಾದಕನನ್ನಾಗಿಸಿ ಬಹಳ ದೊಡ್ಡ ಜವಾಬ್ದಾರಿಯನ್ನು  ಜಿ.ಎನ್ ಮೋಹನ್ ಅವರು ನನಗೆ ವಹಿಸಿರುವುದು ಪರೋಕ್ಷವಾಗಿ ನನ್ನ  ಕೆಲವು ಅನಿಸಿಕೆಗಳನ್ನು ಹೊರಹಾಕಲು ಒಂದು ವೇದಿಕೆ ದೊರೆತಂತೆಯೂ ಹೌದು!

ನನ್ನ ಪ್ರೀತಿಯ ಕಾದಂಬರಿಕಾರ ಯಶವಂತ ಚಿತ್ತಾಲರನ್ನು ಉದಯವಾಣಿ ಸಾಪ್ತಾಹಿಕಕ್ಕೆ  ನಾನು 1990 ರಲ್ಲಿ ಸಂದರ್ಶನ ಮಾಡಿದಾಗ (ನಾನು  ಯಾವುದಾದರೂ ಪತ್ರಿಕೆಗೆ ಸೇರುವ ಅಂದಾಜು ಮಾಡುತ್ತಿದ್ದೇನೆ  ಅಂದಿದ್ದೆ ಅವರಲ್ಲಿ.) ಅವರು ಹೇಳಿದ ಒಂದು ಮಾತು  ಈ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳುತ್ತೇನೆ : 

“ಸುದ್ದಿ ಪತ್ರಿಕೆಗಳಿಂದ ನಿಮಗೆ ಗೊತ್ತಿಲ್ಲದ ಸುದ್ದಿಗಳನ್ನೇ ಸಾಹಿತ್ಯದ ಸಾಮಗ್ರಿಗಳನ್ನಾಗಿ ಮಾಡುತ್ತೀರಿ, ನಿಮ್ಮ ಕೃತಿಗಳಲ್ಲಿ ಅನುಭವಗಳ ಬದಲು ಸುದ್ದಿಯಾಗಿ ವಿದ್ರೂಪಗೊಂಡ ಭಾವನೆ ಉಪಯೋಗಿಸುತ್ತೀರಿ . ಪತ್ರಿಕೆಗಳು ನಮಗೆ ಕೇವಲ ಮಾಹಿತಿ ಕೊಡುತ್ತವೆ, ಅಭಿಪ್ರಾಯ ಕೊಡುತ್ತವೆ , ಅಷ್ಟೇ. ಈ  ಎರಡೂ ನಮ್ಮ ಸ್ವತಂತ್ರವಾಗಿ ವಿಚಾರ ಮಾಡುವ, ಸ್ವತಂತ್ರ ವಾಗಿ ಭಾವಿಸುವ ಶಕ್ತಿಗಳ ಮೇಲೆ ದುಷ್ಟ ಪರಿಣಾಮ ಮಾಡಬಲ್ಲವು…. “

ಉದಯವಾಣಿಯಲ್ಲಿ ಬಂದ ಈ ಮಾತನ್ನು ಅನಂತರ ಪ್ರಜಾವಾಣಿ  ಪತ್ರಿಕೆಯೂ ತನ್ನ ‘ನಾಲ್ಕೂ ನಿಟ್ಟಿನಿಂದ’ ಇದರಲ್ಲೂ ಪ್ರಕಟಿಸಿದಾಗ ನಾನು ಆಶ್ಚರ್ಯ ಪಟ್ಟಿದ್ದಿದ್ದೆ.   

 ಸ್ವಲ್ಪ ಖಾಸಗಿ ಆದರೂ ಕೆಲವನ್ನು ಹೇಳಲೇ ಬೇಕೆನಿಸಿದೆ. ಜಿ.ಎನ್.ಮೋಹನ್ ಅವರು ತೊಂಬತ್ತರ ದಶಕದಿಂದಲೂ ನನಗೆ ಪರಿಚಿತರು. ನನಗೆ  ‘ಮೋಹನ್ ಅಂದ್ರೆ  ಕ್ಯೂಬಾ’. ಮುಂಬೈಗೆ ತಾತ್ಕಾಲಿಕವಾಗಿ ಐದು ವರ್ಷಗಳ ಕಾಲ ವಿದಾಯ ಹೇಳಿ ಮಂಗಳೂರಿಗೆ ತೆರಳಿದ್ದ ಸಂದರ್ಭಲ್ಲಿ (2000-2004) ಮಂಗಳೂರಲ್ಲಿ ನಾವು ಅನೇಕ ಕಾರ್ಯಕ್ರಮಗಳಲ್ಲಿ ಭೇಟಿ ಯಾಗುತ್ತಿದ್ದೆವು.

ಅವರು ಈಟಿವಿ ಆಫೀಸ್ ನಲ್ಲಿ ಸಿಗುತ್ತಿದ್ದುದು ಅಪರೂಪ. ಹೊರಗಡೆ  ಕಾರ್ಯಕ್ರಮಗಳಲ್ಲೇ ಹೆಚ್ಚು ಇರುತ್ತಿದ್ದರು. 2010ರಲ್ಲಿ ಒಮ್ಮೆ ವಿಜಯಕರ್ನಾಟಕದ ಅವರ ‘ಮೀಡಿಯಾ ಮಿರ್ಚಿ’ ಅಂಕಣದಲ್ಲಿ ‘ಲವ್ ಎಂದರೆ ಯಾರೂ ಬಿಡಿಸದ ಬಂಧನ’ ಲೇಖನದ ಕೊನೆಗೆ ‘ಬುಕ್ ಟಾಕ್’ ನಲ್ಲಿ ‘ಮಂಗಳೂರಿನ ಜೋಕಟ್ಟೆಯ ಹುಡುಗ…..’ ಎಂದು ನನ್ನ ಕುರಿತು ಒಂದೆರಡು ಒಳ್ಳೆಯ ಮಾತನ್ನು ಹೇಳಿರುವುದು ಕೂಡಾ  ನನಗೆ ಬಹಳ ತಡವಾಗಿ ತಿಳಿದುಬಂದಿತ್ತು.

ಅವರ ಪ್ರೀತಿಯನ್ನು ಎಲ್ಲಿದ್ದರೂ ನೆನಪಿಸಿಕೊಳ್ತಾ ಇರ್ತೇನೆ. ಕೊರೊನಾ ಕಾಲದ ಲಾಕ್ಡೌನ್ ದಿನಗಳಲ್ಲಿ ಅವರು ಫೇಸ್ಬುಕ್ ನಲ್ಲಿ ಬರೆಯುತ್ತಿದ್ದ ಅನೇಕ ಮಹತ್ವಪೂರ್ಣ ಲೇಖನಗಳನ್ನು ವಾಟ್ಸಪ್ ನಲ್ಲಿ  ಕಳುಹಿಸುತ್ತಿದ್ದರು. ನಾನು ಫೇಸ್ಬುಕ್ ಬಳಸದ  ವ್ಯಕ್ತಿ. ಅಂತಹ ಒಳ್ಳೆಯ ಲೇಖನಗಳನ್ನು ಓದುವುದರಲ್ಲಿ ವಂಚಿತನಾಗುವ ಸಾಧ್ಯತೆಯನ್ನು ಅವರು ತಪ್ಪಿಸಿದ್ದು ನನ್ನ ಅದೃಷ್ಟವೇ.

ಮೊದಲಿಗೇ ಹೇಳುತ್ತೇನೆ- ನಾನು ಬಹಳ ಕಾಲ ಕೈಯಲ್ಲೇ ಲೇಖನ ಕಥೆ ಕವಿತೆ ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಾ ಬಂದವ. ಎಂಭ ತ್ತರ ದಶಕದಲ್ಲಿ ಕಂಪ್ಯೂಟರ್ ಬರತೊಡಗಿ  ಕಚೇರಿಗಳಲ್ಲಿ ನೌಕರಿಗಳು ಕಡಿಮೆಯಾ ಗುತ್ತವೆ ಎನ್ನುವ ಚರ್ಚೆ  ಕಾಣಿಸಿದಾಗ ‘ನಮ್ಮ ಕಾರ್ಮಿಕರ ನೋವಿಗೆ ಕಂಪ್ಯೂಟರ್ ಕಾವು’ ಎಂದು 1987 ರಲ್ಲಿ ಜರಗಿದ ಮೂರನೆಯ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ‘ನಂದಿನಿ’ ಗ್ರಂಥ ದಲ್ಲಿ  ನಾನು ಕವಿತೆ ಬರೆದದ್ದೂ ಇದೆ. 

ನಿಜ ಹೇಳ ಬೇಕೆಂದರೆ ಇತ್ತೀಚಿನ ನಾಲ್ಕೈದು ವರ್ಷಗಳಿಂದ ಟಚ್ ಸ್ಕ್ರೀನ್  ಸೆಲ್ ಫೋನ್ ಕೈಯಲ್ಲಿ ಹಿಡಿದಿದ್ದೇನೆ. ಈ ಲೆಕ್ಕಾಚಾರದಲ್ಲಿ ನಾನು ಆಧುನಿಕ ಓಟದಲ್ಲಿ ಸ್ವಲ್ಪ ಹಿಂದುಳಿದ ವ್ಯಕ್ತಿ!

ಸಂಪಾದಕನ ಕೆಲಸ ನನಗೇನೂ ಹೊಸತಲ್ಲ. ಮುಂಬೈಯಲ್ಲಿನ ಕಳೆದ ನಾಲ್ಕು ದಶಕಗಳ ಲ್ಲಿ ಏಳೆಂಟು ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಹಲವಾರು ಜವಾಬ್ದಾರಿಗಳನ್ನು ವಹಿಸಿದವ ನಾನು. ದೈನಿಕ, ವಾರಪತ್ರಿಕೆ, ಮಾಸಿಕಗಳಲ್ಲಿ  ಇಲ್ಲಿ ಕೆಲಸ ಮಾಡಿದ್ದೇನೆ. 2005ರಿಂದ ಅರ್ಥಾತ್ ಕಳೆದ 15 ವರ್ಷ ಗಳಿಂದ ಕರ್ನಾಟಕ ಸಂಘ, ಮುಂಬಯಿ  ಇದರ ಮಾಸಿಕ ‘ಸ್ನೇಹ ಸಂಬಂಧ’ದ ಸಂಪಾ ದಕನಾಗಿದ್ದೇನೆ.

ತೊಂಬತ್ತರ ದಶಕದಲ್ಲಿ ಐದಾರು ವರ್ಷಗಳ ಕಾಲ ಲಂಕೇಶ್ ಪತ್ರಿ ಕೆಗೆ, ಪ್ರಿಯಾಂಕ ಮಾಸಿಕಕ್ಕೆ, ಮತ್ತು ಕರಾವಳಿ ಅಲೆ ದೈನಿಕಕ್ಕೆ ಮುಂಬೈ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಮುಂಬೈಯ ಒಂದು ವಾರಪತ್ರಿಕೆಯಲ್ಲಿದ್ದಾಗ (1996 -97 ರಲ್ಲಿ) ಹಲವು ಬಾರಿ ಹದಿನಾರು  ಪುಟಗಳಲ್ಲಿ ಹದಿನಾಲ್ಕು ಪುಟಗಳನ್ನು ನಾನೊಬ್ಬನೇ ಬೇರೆ ಬೇರೆ ಹೆಸರಲ್ಲಿ ಬರಹಗಳನ್ನು  ತುಂಬಿಸಿದ್ದೂ ಇದೆ.

ಎಂಭತ್ತರ ದಶಕದಲ್ಲಿ ಕರ್ನಾಟಕದಲ್ಲಿಯೂ ಖ್ಯಾತಿಪಡೆದಿದ್ದ ಮುಂಬೈಯ ಮಾಸಿಕ ತಾಯಿನುಡಿಯ ದೀಪಾವಳಿ ವಿಶೇಷಾಂಕಗಳಲ್ಲಿ ,ಹಾಗೂ  ತೊಂಭತ್ತರ  ದಶಕದಲ್ಲಿಯೂ ಮುಂಬಯಿಯ   ಹಲವಾರು ದೀಪಾವಳಿ ವಿಶೇಷಾಂಕಗಳ,  ಯುಗಾದಿ ವಿಶೇಷಾಂಕಗಳ  ನಿರ್ವಹಣೆಯ ಜವಾಬ್ದಾರಿಗಳನ್ನು ಸ್ವೀಕರಿಸಿದ್ದೆ. ಮುಂಬೈಯ ಕನ್ನಡ ದೈನಿಕ  ಕರ್ನಾಟಕ ಮಲ್ಲ’ದಲ್ಲಿ 2005ರಿಂದ ಸಂಪಾದಕೀಯ ಬಳಗದಲ್ಲಿರುವ ನನಗೆ  ಇದೀಗ ಅವಧಿಯ ಮುಂಬೈ ಕುರಿತ  ಸಂಡೇ ಸ್ಪೆಷಲ್  ಸಂಚಿಕೆಗೆ ಸಂಪಾದಕನ ಜವಾಬ್ದಾರಿಯನ್ನು  ಜಿ ಎನ್ ಮೋಹನ್ ಅವರು  ವಹಿಸಿದ ಸುಸಂದರ್ಭದಲ್ಲಿ ಹಳೆಯದನ್ನೆಲ್ಲ ಮತ್ತೆ ನೆನಪಿಸುವಂತಾದೆ.

ಚಿತ್ತಾಲ, ಬಲ್ಲಾಳ, ಸನದಿ, ನಾಡಕರ್ಣಿ, ಕಾಯ್ಕಿಣಿ ,ಕುಲಕರ್ಣಿ……… ಇಂಥಹ ಪ್ರಮುಖ  ಸಾಹಿತಿಗಳ ಈ  ಮುಂಬೈಯಲ್ಲಿ ಈಗಲೂ ಸಾಹಿತ್ಯಕೃಷಿ ಹುಲುಸಾಗಿ ಬೆಳೆಯುತ್ತಿದೆ. ಈ ಸಂಚಿಕೆಯಲ್ಲಿ ಆದಷ್ಟು ಹೊಸಮುಖಗಳಿಗೆ ಅದರಲ್ಲೂ ಸಾಹಿತ್ಯಕ್ಷೇತ್ರದಲ್ಲಿ ಹೆಚ್ಚು ಸಕ್ರಿಯ ಇರುವವರಿಗೆ ಆದ್ಯತೆ ನೀಡಿದ್ದೇನೆ.

ಮುಂಬೈಯ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಇಲ್ಲಿನವರು ಬರೆಯುವುದಕ್ಕಿಂತ  ಒಳ ನಾಡಿನವರೇ ಬರೆದರೆ ಉತ್ತಮ ಎಂದು ಅನಿಸಿದಾಗ ಕಂಡದ್ದು ಹಿರಿಯ ವಿಮರ್ಶಕ ಡಾ. ಬಿ .ಜನಾರ್ದನ ಭಟ್. ಇದಕ್ಕೂ ಒಂದು ಕಾರಣ ಇದೆ . ಎರಡು ದಶಕದ ಹಿಂದೆ ‘ದಕ್ಷಿಣ ಕನ್ನಡದ ಶತಮಾನದ ಕವಿತೆಗಳು’ ಗ್ರಂಥ ಸಂಪಾದನೆಯ ಸಮಯದಿಂದ ಮುಂಬೈಯ ಲೇಖಕರ ಕೃತಿಗಳನ್ನು ಅವರು ಗಮನಿಸುತ್ತಾ ಬಂದಿದ್ದಾರೆ.

ಹಲವು ಬಾರಿ ಮುಂಬೈಯ ಸೆಮಿನಾರುಗಳಲ್ಲಿ ಅವರು ಭಾಗವಹಿಸಿದ್ದಾರೆ. “ಮುಂಬೈ ಕನ್ನಡ ಸಾಹಿತ್ಯ ಕ್ಷೇತ್ರ ಒಂದು ಪ್ರತ್ಯೇಕ ಅಸ್ಮಿತೆ ಉಳ್ಳದ್ದು. ಇಂಗ್ಲಿಷ್ ಸಾಹಿತ್ಯ ಅಂದರೆ ಇಂಗ್ಲೆಂಡಿನಲ್ಲಿ ಬರೆದದ್ದು ಮಾತ್ರ ಅಲ್ಲ ಹೇಗೆಯೋ, ಹಾಗೆಯೇ ಕನ್ನಡ ಸಾಹಿತ್ಯ ಅನ್ನೋದು ಕರ್ನಾಟಕದೊಳಗಿನ ಸಾಹಿತ್ಯ ಮಾತ್ರವಲ್ಲ ಮುಂಬೈ ಕನ್ನಡ ಸಾಹಿತ್ಯವೂ ಸೇರಿದ ಸಾಹಿತ್ಯ” ಎಂದಿದ್ದಾರೆ ಡಾ. ಬಿ. ಜನಾರ್ದನ ಭಟ್.

ಮುಂಬೈಯ ಹಿರಿಯ ಕಾದಂಬರಿಕಾರ, ಕಥೆಗಾರ ,ಇತ್ತೀಚೆಗಷ್ಟೇ ‘ತೆಂಕನಿಡಿಯೂರಿನ ಕುಳುವಾರಿಗಳು’ ಕಾದಂಬರಿಯ ಮೂಲಕ ಸುದ್ದಿಯಾದ ” ಗೋಕುಲವಾಣಿ ” ಮಾಸಿಕದ ಸಂಪಾದಕ ಡಾ. ವ್ಯಾಸರಾವ್ ನಿಂಜೂರ್ 

ಅವರಿಗೆ 80 ತುಂಬಿದೆ . ಈ ನಿಟ್ಟಿನಲ್ಲಿ ನಿಂಜೂರ್ ಕುರಿತಂತೆ ಯಾರು ವಿಶೇಷ ಲೇಖನ  ಬರೆಯುತ್ತಾರೆ ಎಂದಾಗ ಕಂಡದ್ದು ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ .ಎನ್. ಉಪಾಧ್ಯ. ಕನ್ನಡ ವಿಭಾಗದ ಪ್ರಕಾಶನದಿಂದ ( ಲೇ.ರಮಾ ಉಡುಪ) ನಿಂಜೂರ್  ಅವರ  ಬದುಕು-ಬರಹದ ಕೃತಿಯನ್ನೂ ಅವರು ಪ್ರಕಟಿಸಿರುವರು.

ಮುಂಬಯಿ ಎನ್ನುವುದು ಮಾಯಾನಗರಿ.

ಕನಸುಗಳನ್ನು ಹಿಡಿದುಕೊಂಡು ಪ್ರತೀದಿನ ಸಾವಿರಾರು ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಾರೆ. ಮುಂಬೈ ಕಭೀ ಸೋತೀ ನಹೀ

ಎಂದು ನಾನೇ ಕರ್ನಾಟಕದ ಪತ್ರಿಕೆ ಯೊಂದಕ್ಕೆ ಅಂಕಣ ಬರೆದದ್ದಿದೆ. ಆದರೆ ಈ ಕೊರೊನಾ ಕಾಲದಲ್ಲಿ ಮುಂಬೈ ಕೂಡ ನಿದ್ದೆ ಮಾಡಿತ್ತು. ಮುಂಬೈಯನ್ನು ನಮ್ಮ ಬರಹಗಾರರು ಆರಂಭದಿಂದಲೂ ಹೇಗೆ ಸ್ವೀಕರಿಸಿದರು ಎನ್ನುವುದನ್ನು ಯಾರಿಂದ ಬರೆಸಬೇಕು ಎಂದಾಗ ಹೊಳೆದದ್ದು ರಾಜೀವ ನಾರಾಯಣ ನಾಯಕ ಮತ್ತು ಕಲಾ ಭಾಗವತ್.

ಇಲ್ಲಿ ಇವರಿಬ್ಬರು ಮುಂಬೈ ಬಗ್ಗೆ ಬರೆದ  ಆತ್ಮೀಯ  ಲೇಖನಗಳಿವೆ. ಕೊರೊನಾ ಕಾಲದ ಮುಂಬಯಿ ಬದುಕು ಹಾಗೂ ನಂತರದ ದೃಶ್ಯಗಳನ್ನು  ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಇವರು ಬರೆದರೆ, “ಮಾತು -ಸಂಬಂಧಗಳ ಬೆಸೆವ ಸೇತುವೆಯಾಗಲಿ” ಎಂದಿದ್ದಾರೆ ಮುಂಬಯಿ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪೂರ್ಣಿಮಾ ಸುಧಾಕರ ಶೆಟ್ಟಿ. 

ಕಥೆಯೊಂದು ಇಲ್ಲದಿದ್ದರೆ ಸಂಚಿಕೆ ಪೂರ್ಣ ಗೊಳ್ಳದು ಎಂದು ಭಾವಿಸುವಾಗ ಕಂಡವರು “ಅವರೆಲ್ಲ ದೇವರಾಗಿದ್ದಾರೆ” ಸಂಕಲನದ ಮೂಲಕ ಗಮನಸೆಳೆದ ಹೇಮಾ ಸದಾನಂದ ಅಮೀನ್.

ಮುಂಬೈಯಲ್ಲಿ ಕವಿಗಳು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ .ಡಾ.ವ್ಯಾಸರಾವ್ ನಿಂಜೂರ್ ಅವರೊಮ್ಮೆ “ಮುಂಬಯಿಯಲ್ಲಿ ಕಲ್ಲು ಹೊಡೆದರೆ ಕವಿಯ ಮನೆಗೆ ಬೀಳುವಷ್ಟು ಕವಿತೆಗಳ ರಚನೆಯಾಗುತ್ತಿದೆ” ಎಂದದ್ದಿದೆ. ಹಾಗಾಗಿ ಕವಿಗಳ ಆಯ್ಕೆ ಕಷ್ಟದ ಸಂಗತಿ.

ಎಲ್ಲ ಹೊಸಮುಖಗಳಿಗೆ  ಅವಕಾಶ ಕೊಟ್ಟರೆ ಮುಂಬೈ ಕವಿತೆಗಳ ತುಲನೆ ಕಷ್ಟಸಾಧ್ಯ ಎಂದು ಕೆಲವು ಹಿರಿಯ ಕವಿಗಳ ಜೊತೆ ಉದಯೋನ್ಮುಖರ ಕವಿತೆಗಳನ್ನೂ ಆಹ್ವಾನಿಸಿದೆ.( ಇನ್ನೂ ಹಲವಾರು ಪ್ರಮುಖ ಕವಿಗಳಿದ್ದಾರೆ ಎನ್ನುವುದನ್ನು ಇಲ್ಲಿ ವಿನಮ್ರನಾಗಿ  ಹೇಳಬಯಸುವೆ. ಯಾಕೆಂದರೆ ಕ.ಸಾ.ಪ.ಮಹಾರಾಷ್ಟ್ರ ಘಟಕ ಪ್ರಕಟಿಸಿದ ‘ಶತದಳ ಪದ್ಮ’ ಸಂಕಲನದಲ್ಲಿ  ಮಹಾರಾಷ್ಟ್ರದ 117 ಕವಿಗಳ ಕವನಗಳಿವೆ.) ವಿ.ಎಸ್ ಶ್ಯಾನ್ ಬಾಗ್, ನಳಿನಾ ಪ್ರಸಾದ್, ಅನಿತಾ ಪಿ. ಪೂಜಾರಿ ತಾಕೊಡೆ, ಸಾ.ದಯಾ , ಅಮಿತಾ ಭಾಗವತ್, ರಜನಿ ತೋಳಾರ್, ಮತ್ತು ಸುಜಾತಾ ಯು. ಶೆಟ್ಟಿ  ಅವರ ವೈವಿಧ್ಯಮಯ ಕವನಗಳಿವೆ.

ಸುಮಾರು 23 ವರ್ಷಗಳ ಕಾಲ ಮುಂಬೈಯಲ್ಲಿದ್ದು  ಕಳೆದ ಎರಡು ದಶಕದಿಂದ  ಬೆಂಗಳೂರಿನಲ್ಲಿದ್ದರೂ  ಜಯಂತ ಕಾಯ್ಕಿಣಿ ಅವರು ಯಾವತ್ತೂ ನಮಗೆ ಮುಂಬೈ ಕನ್ನಡಿಗರೇ ಆಗಿರುವರು. ಅವರ ‘ಒಂದು ಮಧ್ಯಾಹ್ನ ಫೇರಿವಾಲಾ’ ಕವನವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.
ಗಿರಿಜಾ ಶಾಸ್ತ್ರಿಯವರು  ಕವಯಿತ್ರಿ ಮಾತ್ರವಲ್ಲ, ಗಮನಾರ್ಹ ವಿಮರ್ಶಕಿಯಾಗಿಯೂ ಗುರುತಿಸಿ ಕೊಂಡಿದ್ದಾರೆ.ಅವರ ಒಂದು ಲೇಖನ ಈ ಸಂಚಿಕೆಯಲ್ಲಿದೆ.

88 ತುಂಬಿದ ಹಿರಿಯ ಸಾಹಿತಿ ,ಮುಂಬಯಿಗೆ  ಅತ್ತಿಮಬ್ಬೆ ಪ್ರಶಸ್ತಿ ತಂದು ಕೊಟ್ಟಿರುವ, ‘ಸೃಜನಾ’ ಲೇಖಕಿಯರ ಬಳಗದ  ರೂವಾರಿ ಡಾ.ಸುನೀತಾ ಎಂ ಶೆಟ್ಟಿ ಅವರನ್ನು ನಾನೇ ಸಂದರ್ಶನ  ಮಾಡಿದ್ದೇನೆ.

 ಈ ಸಂಚಿಕೆ ಮುಂಬೈ ಕನ್ನಡ ಸಾಹಿತ್ಯ ಲೋಕ, ಮುಂಬೈ ಬದುಕಿನ ಬಗೆಗಿನ‌  ಕಿರುನೋಟ. ಕೊರೊನಾ ಆಘಾತದಿಂದ ಕನ್ನಡಿಗರು ಇನ್ನೂ ಇಲ್ಲಿ ಪೂರ್ಣ ಚೇತರಿಸಿಲ್ಲ. ಕನ್ನಡಿಗರ ಹೊಟೇಲ್ ಉದ್ಯಮಗಳು ಮತ್ತೆ ಹಿಂದಿನಂತೆ ಎದ್ದು ನಿಲ್ಲಲು ಸಮಯ ಬೇಕು.ಅನಂತರವೇ ಇಲ್ಲಿ ಕನ್ನಡ ಸಂಘ ಸಂಸ್ಥೆಗಳು ಎಂದಿನಂತೆ  ತಮ್ಮ ಕಾರ್ಯಕ್ರಮಗಳನ್ನು  ನಡೆಸಲು ಸಾಧ್ಯ ಆಗಬಹುದು. 

ಮುಂಬಯಿಯನ್ನು  ಅವಧಿಯ ಸಂಡೆ ಸ್ಪೆಶಲ್ ಸಂಚಿಕೆಗೆ  ಆಯ್ಕೆ ಮಾಡಿದ ‘ಅವಧಿ’ ತಂಡಕ್ಕೆ ಮತ್ತೊಮ್ಮೆ  ವಂದನೆಗಳು.

ಮುಂಬೈಗೆ ನಾನು ಬಂದು ಇಪ್ಪತ್ತೈದು ವರ್ಷಗಳಾದಾಗ (2007) ಸಂಯುಕ್ತ ಕರ್ನಾಟಕದಲ್ಲಿ “ಮುಂಬೈ ಕಭಿ ಸೋತೀ ನಹೀ” ಅಂಕಣದಲ್ಲಿ ಹೇಳಿದ್ದ ಒಂದು ಮಾತನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬ ಹುದೇನೋ:-

“ನಾನು ಮುಂಬೈಗೆ ಬಂದ ಎಂಬತ್ತರ ದಶಕದ ಆರಂಭದಲ್ಲಿ ಕರ್ನಾಟಕದ ವಿಮರ್ಶಕರು ಮುಂಬೈಯ ಸಾಹಿತ್ಯಲೋಕವನ್ನು ಹೇಳುವಾಗ ಒಂದೇ ವಾಕ್ಯದಲ್ಲಿ ಚಿತ್ತಾಲ ಬಲ್ಲಾಳ ಸನದಿ ಕುಲಕರ್ಣಿ ನಾಡಕರ್ಣಿ ಕಾಯ್ಕಿಣಿ ಎನ್ನುತ್ತಾ ಇಲ್ಲಿಗೇ ಹೆಚ್ಚಾಗಿ ನಿಲ್ಲಿಸುತ್ತಿದ್ದರು. ಎರಡೂವರೆ ದಶಕಗಳ ನಂತರವೂ ಕರ್ನಾಟಕದ ವಿಮರ್ಶಕರು ಮುಂಬೈ ಸಾಹಿತ್ಯ ವನ್ನು ಹೇಳುವಾಗ ಅದೇ ಸಾಲು ಹೇಳಿ ಕಾಯ್ಕಿಣಿಯವರಲ್ಲಿಗೇ ನಿಲ್ಲಿಸುತ್ತಿದ್ದರು!”

ಅಂದರೆ ಮುಂಬೈಯಲ್ಲಿ ಆನಂತರದ ಸಾಹಿತ್ಯ ಬೆಳವಣಿಗೆಯನ್ನು ಒಳನಾಡಿ ನವರು ಗಮನಿಸುವುದೇ ಇಲ್ಲ ಯಾಕೆ? ಈ ಕರ್ನಾಟಕದ ವಿಮರ್ಶಕರಿಗೆ ಕಾಯ್ಕಿಣಿಯವರ ನಂತರದ ಮುಂಬೈ ಸಾಹಿತ್ಯವನ್ನು ಯಾಕೆ ನೋಡಲಾಗುತ್ತಿಲ್ಲ? ಅಂದರೆ ಮುಂಬಯಿ ಸಾಹಿತ್ಯ ಕೃತಿಗಳು ಒಳನಾಡಿನ ಅನೇಕ ವಿಮರ್ಷಕರನ್ನು ಸರಿಯಾಗಿ ತಲುಪುತ್ತಿಲ್ಲ ಎಂದೇ ಹೇಳಬೇಕು.

ಇದೀಗ ಮುಂಬೈಯ ಸಾಹಿತ್ಯ ಹಬ್ಬಕ್ಕೆ ಅವಕಾಶ ನೀಡಿದ ‘ಅವಧಿ’ ಮತ್ತು ಜಿ ಎನ್ ಮೋಹನ್ ರನ್ನು ಅಭಿನಂದಿಸುತ್ತಾ ಮುಂದಿನ ದಿನಗಳಲ್ಲಿ ವಿಮರ್ಶಕರು ಮುಂಬೈಯ ಈಗಿನ ಸಾಹಿತ್ಯ ಬೆಳವಣಿಗೆಯನ್ನೂ ಗಮನಿಸುವಂತಾದರೆ ಈ ಪುಟ್ಟ ಪ್ರಯತ್ನ ಸಾರ್ಥಕ ಪಡೆಯಬಹುದು.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lalitha siddabasavayya

    ನಿಜ, ಜೋಕಟ್ಟೆಯವರು ನಮ್ಮ ಕಿರಿದುಗೊಂಡ ನೋಟವನ್ನು ಎತ್ತಿ ತೋರಿಸಿದ್ದಾರೆ. ಮುಂಬಯಿಯ ಕನ್ನಡ ಬರಹಗಾರರೆಂದರೆ ಬಲ್ಲಾಳ , ಚಿತ್ತಾಲ ದ್ವಯರು , ಜಯಂತ್ ,ಮಿತ್ರಾ , ನಾಡಕರ್ಣಿ , ಹೊಸಬರಲ್ಲಿ ಗಿರಿಜಾ ,, ಇನ್ನೊಂದೆರಡು ಹೆಸರಷ್ಟೇ ಬಾಯಿಗೆ ಬರುವುದು. ಈ ತಪ್ಪು ತಿದ್ದಿಕೊಳ್ಳಲೇ ಬೇಕಾದ್ದು. ಈ ಸಂಪಾದಕೀಯ ಮತ್ತು ಸಂಚಿಕೆ ಬಹಳಷ್ಟು ವಾಸ್ತವಗಳನ್ನು‌ ಕಾಣಿಸಿದೆ. ಮೋಹನ್ ಮತ್ತು ‌ಜೋಕಟ್ಟೆಯವರಿಗೆ ಕೃತಜ್ಞತೆಗಳು.

    ಹೀಗೆಯೇ ತಮಿಳು ನಾಡು, ಸಮಗ್ರಾಂಧ್ರ, ಕೇರಳ ,ದೆಹಲಿಯ ಪ್ರಸಕ್ತ ಪರಿಸ್ಥಿತಿಯನ್ನು ಬಿಂಬಿಸುವ ವಿಶೇಷ ಸಂಚಿಕೆಗಳು ಬರಲೆಂದು ಕೋರುವೆನು.

    ಪ್ರತಿಕ್ರಿಯೆ
  2. D.M.Nadaf

    “ಮುಂಬೈ ಕಭೀ ಸೋತೀ ನಂಹಿ”
    ಎಂಬುದನ್ನು ಕಣ್ಣಾರೆ ನಾನು ಕೂಡ ನೋಡಿರುವೆ.ನಾವೆಲ್ಲ ಊಟ ಮಾಡಿ ಮಲಗಲು ಸಿದ್ಧ ರಾದಾಗ ನಮ್ಮ ಮಾವ ಸ್ನಾನ ಮಾಡಿ ರ್ಯಾಲಿ ಫ್ಯಾನ್ ಕಾರ್ಖಾನೆಗೆ ರಾತ್ರಿ ಪಾಳಿ ಕೆಲಸಕ್ಕೆ ಹೋಗುತ್ತಿದ್ದರು.
    ಸುಮ್ಮನೆ ನೋಡಲೆಂದು ನಾನು ಜತೆಗೆ ಹೋದರೆ ತುಂಬು ತುಳುಕುತ್ತಿದ್ದ ಲೋಕಲ್ ಟ್ರೈನ್ ಹಗಲಿನ ಹಾಗೆ ಬೆಳಕು ಸೂಸುವ ನೀಯಾನ್ ದಾರಿದೀಪ ಗಳು ನಡುರಾತ್ರಿಯಲ್ಲಿ ನದಿಯ ಅಲೆ ಗಳು ಸಮುದ್ರಕ್ಕೆ ನುಗ್ಗುವಂತೆ ನಗರಕ್ಕೆ ಹೈವೇ ಮೂಲಕ ನುಗ್ಗುವ ಭೀಮಕಾಯದ ಕಂಟೇನರ್ ಗಳು.
    ಇಂಥ ಮುಂಬೈ ಯನ್ನೂ ಮಲಗಿಸಿದ ಕರೂನ
    ಈ ಶತಮಾನದ ಮಹಾ ಮಹಾ ಮಾರಿಯೇ .
    ಮುಂಬೈ ಕನ್ನಡ ಸಂಘಗಳು ನಾನಲ್ಲಿ ಇದ್ದಷ್ಟು ದಿನ ನನ್ನ ಅಂತರಾವಲೋಕನದ ತಾಣಗಳು.
    ಜೋಕಟ್ಟೆ ಯವರ ಸಂಪಾದಕೀಯ ಇದನ್ನೆಲ್ಲ ನೆನಪಿಸಿತು.
    ಅವರಿಗೆ ಧನ್ಯವಾದಗಳು
    ಡಿ. ಎಂ.ನದಾಫ
    ಅಫಜಲಪುರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: