‘ತುಂಬುಗಾಯಿನಾ… ಎಣ್ಣಿಗಾಯಿನಾ?’

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ನಮ್ಮ ಎಣ್ಣೆಗಾಯಿ ಉಣ್ಣೂಮುಂದೆಲ್ಲ ನನಗ ನಮ್ಮಮ್ಮ (ಅಮ್ಮನ ಅಮ್ಮಗೂ ಅಮ್ಮ ಅಂತನೇ ಕರೀತಾರ್ರಿ) ಎಲ್ಲಾರಿಗೆ ನೀಡಿದ ಮ್ಯಾಲೆ, ಅದೇ ಪಲ್ಯೆ ಮಾಡಿದ್ದ ಬಾಣಲಿಯೊಳಗ ಅನ್ನ, ತುಪ್ಪ, ಹುಣಸಿತೊಕ್ಕು ಹಾಕಿ, ಕಲಿಸಿ ಕೊಡ್ತಿದ್ರು. ಹಿಂಗ ಕಲಸನ್ನ ತಿನ್ನೂ ಖುಷಿನೇ ಬ್ಯಾರೆ ಇರ್ತದ.

ನೀವೆಲ್ಲ ಭಾಳಾದ್ರ ಹೊರಗ ರೊಟ್ಟಿಯೂಟ ಮಾಡಾಕ ಹೋದಾಗಷ್ಟೆ ಎಣ್ಣಿಗಾಯಿ ತಿಂತೀರಿ. ಆದ್ರ ಹಿಂಗ ಬೊಗೊಣಿಯೊಳಗ ಹಾಕ್ಕೊಂಡು ಕಲಿಸಿದ ಕಲಸನ್ನ ತಿಂದಿರಲಿಕ್ಕಿಲ್ಲ. ಮತ್ತ ಎಣ್ಣಿಗಾಯಿ ಅಂದ್ರ ಬರೇ ಕೆಂಪುಕೆಂಪು ಸೇಂಗಾ ಪುಡಿಯೊಳಗ ನೀಲಿತಿಮಿಂಗಿಲಿನ್ಹಂಗ ಕಾಣುವ ಪಲ್ಯನ ನೆನಪಾಗ್ತದಲ್ಲ… 

ಈ ಕಡೆ ಬರ್ರಿ ನೀವು.. ಊರು ಬದಲಾದಂಗ ಬಣ್ಣಾನೂ ಬದಲಾಗ್ತದ. ವಿಜಯಪುರ, ಗದಗ, ಬಾಗಲಕೋಟೆಯೊಳಗ ಹಚ್ಚಹಸರು ನೀರಾಗ ಕರಿಎಮ್ಮಿ ಮಲಗಿದ್ಹಂಗ ಕಾಣುವ ಬಣ್ಣದ ಪಲ್ಯನೂ ಮಾಡ್ತಾರ. ಅವರು ಸೇಂಗಾ ಪುಡಿಗೆ ಹಸಿಮೆಣಸು, ಕೊತ್ತಂಬರಿ ಹೆಚ್ಗಿ ಹಾಕಿ ಪುಡಿ ಮಾಡ್ಕೊಂಡಿರ್ತಾರ. ಹಂಗಾಗಿ ಇದಕ್ಕ ಹಸಿರು ಬಣ್ಣದ ಎಚ್ಚ ಬರ್ತದ. 

ಇಂಥ ಬಣ್ಣದ ಎಣ್ಣೆಗಾಯಿಯೊಳಗ ಒಂದಷ್ಟು ಗುರೆಳ್ಳು (ಹುಚ್ಚೆಳ್ಳು) ಪುಡಿ ಹಾಕಿದ್ರಂತೂ ಭಾಳ ಚಂದ ಕಾಣ್ತದ. ಚಂದನೆಯ ಹುಡುಗಿಯ ಕೆನ್ನೆ ಮತ್ತು ಕತ್ತಿನ ಮೇಲಿರುವ ಮಚ್ಚೆಯ ಹಂಗ. ಸೇಂಗಾಪುಡಿ, ಅದಕ್ಕ ಹುಣಶಿಹಣ್ಣು, ಮೊಸರು, ಹೆಚ್ಚಿದ ಉಳ್ಳಾಗಡ್ಡಿ, ಜೀರಗಿಪುಡಿ ಹಾಕಿ ಮಾಡಿದ ಪುಡಿಯನ್ನು ತುಂಬಿ ಮಾಡಿರೂದು ಸಾಮಾನ್ಯಗೆ ಎಲ್ಲಾರೂ ತಿಂದಿರ್ತೀರಿ. 

ಆದ್ರ  ನೀವು ತಿಂದಿದ್ದು ಯಾವುದೂ ಎಣ್ಣೆಗಾಯಿ ಅಲ್ಲವೇ ಅಲ್ಲ… ಗಾಬರಿ ಆಯ್ತು? ಆದ್ರ ಖರೇನೆ. ನೀವು ತಿಂದಿದ್ದು ಎಣ್ಣೆಗಾಯಿ ಅಲ್ಲ. ಎಣ್ಣಿಗಾಯಿ ಅಂದ್ರ ಅದಕ್ಕ ನೀರು ಮುಟ್ಟಿಸುವುದೇ ಇಲ್ಲ. ಏನಿದ್ರೂ ಎಣ್ಣಿಯೊಳಗೆ ಕಾರುಬಾರು. ಪಕ್ಕಾ ಎಣ್ಣಿಗಾಯಿ ತಿನ್ನಬೇಕಂದ್ರ ರಾಯಚೂರು, ರಾಯಚೂರು ಜಿಲ್ಲೆಯ ಮಾನ್ವಿ, ಮಸ್ಕಿ ಕಡೆಗೆ ಹೋಗಬೇಕು.

ಅಲ್ಲಿ, ಇದಕ್ಕ ಕರದಬದನಿಕಾಯಿ ಅಂತಾರ. ಒಳ್ಳಾಗ ಹುರದಿದ್ದ ಸೇಂಗಾ ಕುಟ್ಟಿ, ಅದನ್ನ ಗಂಟು ಕಟ್ತಾರ. ಅದೊಂಚೂರು ಎಣ್ಣಿಬಿಡ್ತದ. ಹಿಂಗ ಕುಟ್ಟೂಮುಂದನೆ ಹರಳುಪ್ಪು, ಜೀರಗಿ, ಕರಿಬೇವು, ಬೆಳ್ಳುಳ್ಳಿ ಹಾಕಿ ಕುಟ್ಟಿರ್ತಾರ. ಈ ಪುಡಿಗೆ ಹುಣಶಿಹಣ್ಣು ನೆನಿಯುವಷ್ಟೆ ನೀರು ಹಾಕಿ, ನೆನಸಿರ್ತಾರ. ಈ ಹುಳಿ ಹಿಂಡಿದ್ರ ಅದು ಗೊಜ್ಜಿನ್ಹಂಗ ಆಗ್ತದ.

ಆಮೇಲೆ ಬದನಿಕಾಯಿ ಹೆಚ್ಚೂದ ದೊಡ್ಡ ಕೆಲಸ. ಯಾಕಂದ್ರ ಒಳಗ ಹುಳಾ ಅದಾವಿಲ್ಲ ನೋಡ್ಕೊಂತ ಹೆಚ್ಬೇಕು. ಒಂದರಾಗ ನಾಲ್ಕು ಭಾಗ ಮಾಡಿ, ಪ್ರತಿ ಭಾಗನೂ ಇಣುಕಿ ನೋಡಬೇಕು. ಒಂದು ಸಣ್ಣ ತೂತು ಕಾಣಿಸಿದ್ರೂ ಅದರೊಳಗ ಹುಳಾ ಅದ ಅಂತನೆ ಅರ್ಥ. ಹಂಗಾಗಿ ಹೆಚ್ಚೂಮುಂದ ಅಗ್ದಿ ಎಚ್ಚರದಾಗ ನೋಡಿ, ನೀರಾಗ ಹಾಕಬೇಕು. ಇಲ್ಲಾಂದ್ರ ಬದನಿಕಾಯಿ ಒಳಮೈ ಪೂರ್ತಿ ಕರಿಯಾಗ್ತದ.

ಇವು ಹಿಂಗ ನೀರಾಗ ತೇಲಾಡುಮುಂದ ಒಂದೊಂದೆ ತಗದು ಮಸಾಲಿ ತುಂಬ್ತಾರ. ಹಂಗ ಮಸಾಲಿ ತುಂಬುಮುಂದ ಬಾಯಿ ಅಗಲಾಗಿರ್ತದ. ಅದ್ಹಂಗೆ ಕರದ್ರ ಇಡೀ ಮಸಾಲಿ ಎಣ್ಣಿಯೊಳಗ ಹರಡುವ ಅಪಾಯ ಭಾಳ. ಅದಕ್ಕ ಮಸಾಲಿತುಂಬಿದ ಕೂಡಲೇ, ಸಣ್ಣ ಕೂಸಿಗೆ ಸೆರಲ್ಯಾಕ್‌ ತಿನಿಸಿ, ತುಟಿ ಒರಸ್ತಾರಲ್ಲ.. ಅಷ್ಟೇ ಕಾಳಜಿಲೆ ಇದರ ಬಾಯಿನೂ ಒರಸಿ, ಒಪ್ಪ ಮಾಡ್ತಾರ. ಇಡೀ ಪುಡಿ ಬದನಿಕಾಯಿಯೊಳಗೇ ಇರಬೇಕು.

ಹಿಂಗ ಆಗಿರೂದನ್ನ.. ಅಗ್ದಿ ಪ್ರೀತಿಯಿಂದ ಬಾಣಲೆಯೊಳಗ ಬಿಡ್ತಾರ. ಎಣ್ಣಿ ಕಾಯ್ದಿರಬೇಕು. ಅಗ್ದಿ ಬಜ್ಜಿ ಕರದಂಗ ಕರದು, ತೆಗೀತಾರ. ಇನ್ನೊಂದು ಬಾಣಲಿಯೊಳಗ ಹಾಕಿ ಪಟ್ನೆ ಮುಚ್ಚಿಡ್ತಾರ. ಆ ಕರದಿರುವ ಹೊಗಿಯೊಳಗ ಇವು ಉಮಗೊಳ್ತಾವ. ಉಮಗೊಳ್ಳೂದು ಅಂದ್ರ ಹೊಗಿಯುಣ್ಣೂದು. ಹೊಗಿಯುಣ್ಕೊಂತ ಮೆತ್ಗ ಆಗೂದು.

ಇಂಥ ಎಣ್ಣಿಗಾಯಿನ್ನ ಬುತ್ತಿಗೆ ಕಟ್ಟಿಕೊಡ್ತಾರ. ಇದು ಕೆಡೂದಿಲ್ಲ. ಹಾಳಾಗೂದಿಲ್ಲ. ರುಚಿನೂ ಹೆಚ್ಗಿ. ಅದೇ ನಮ್ಮ ಕಲಬುರ್ಗಿ, ಬೀದರ್ ಕಡೆ ಬರ್ರಿ. ಸೇಂಗಾ ಪುಡಿಯನ್ನು ಎಳ್ಳಿನ ಪುಡಿ ಜೊತಿಗೆ ಬೆರೆಸಿ ಸಣ್ಣಗೆ ಅರೀತಾರ. ಬ್ಯಾರೆಕಡೆ ಬರೆಯ ಬೆಳ್ಳುಳ್ಳಿ ಹಾಕಿದ್ರ, ಈ ಕಡೆಗೆ ಬೆಳ್ಳುಳ್ಳಿ ಜೊತಿಗೆ ಶುಂಠಿನೂ ಹಾಕ್ತಾರ. ಹಂಗೆ ಒಣ ಮಸಾಲಿ ಅಬ್ಬರನೂ ಇರ್ತದ. ಏನಿರಲಿಲ್ಲಂದ್ರ ಯಾಲಕ್ಕಿ, ಚಕ್ಕೆ ಅಂತೂ ಇದ್ದೇ ಇರ್ತದ. ಇಲ್ಲಿ ಬಿಳಿ ಎಳ್ಳಿನಕಾರುಬಾರು ಹೆಚ್ಚು. ನಿಜಾಮ್‌ ಮತ್ತು ಬಹಮನಿ ರಾಜರ ಪ್ರಭಾವ ಇದು. ಯಾವುದೇ ರಸ ಇರುವ ಪಲ್ಯ ಮಾಡಿದರೂ ಒಣ ಮಸಾಲೆಗಳು ಇದ್ದೇ ಇರ್ತಾವ.

ಹಿಂಗಾಗಿ ಬೀದರ್‌ ಮತ್ತು ಗುಲ್ಬರ್ಗದೊಳಗ ತುಂಬಿದ ಬದನಿಕಾಯಿಯಷ್ಟೇ ತುಂಬಿದ ಮೆಣಸಿನಕಾಯಿನೂ ಫೇಮಸ್‌. ತುಂಬಿದ ಮೆಣಸಿನಕಾಯಿಗೆ ಸೇಂಗಾ ಬಳಸೂದೆ ಇಲ್ಲ. ಒಣಕೊಬ್ಬರಿ ಮತ್ತು ಬಿಳಿ ಎಳ್ಳಿನ ಮಿಶ್ರಣಕ್ಕ ದೊಡ್ಪತ್ರೆ, ಯಾಲಕ್ಕಿ, ಲವಂಗ, ಚಕ್ಕೆಯ ಮಸಾಲಿ ಪುಡಿ ಮಸ್ತ್‌ ಹಾಕಿರ್ತಾರ. ಇದು ಬಿರಿಯಾನಿ ಜೊತಿಗೆ, ಖಿಚ್ಡಿ ಜೊತಿಗೆ ತಿನ್ನಾಕ ಬಲು ರುಚಿ ಇರ್ತದ. ಬಿಳ್ಳಿ ಎಳ್ಳು ಕೊಬ್ಬು ಕರಗಸ್ತದ ಅಂತಾರ. ಅದಕ್ಕ ಮಾಂಸದೂಟ ಇದ್ದಾಗ ಈ ಮಿರ್ಚಿಕಾ ಸಾಲನ್‌ ಇದ್ದೇ ಇರ್ತದ.

ಬದನಿಕಾಯಿ ಅಂತ್ಹೇಳಿ ಶುರುಮಾಡಿ, ಹಸಿಮೆಣಸಿನಕಾಯಿಗೆ ಯಾಕ ಬಂದ್ವಿ ಅನ್ಕೊಬ್ಯಾಡ್ರಿ.. ಮತ್ತ ಹೊಳ್ಳಿ ಬದನಿಕಾಯಿಗೆ ಬರೂನಂತ. ಎಣ್ಣಿಗಾಯಿ ಅಂದ್ರ ಮಾನವಿಕಡೆ ಮಾಡ್ತಾರಲ್ಲ ಅದೇ ಎಣ್ಣಿಗಾಯಿ. ನಾವು ನೀವು ಎಣ್ಣಿಗಾಯಿ ಹೆಸರನಾಗ ಉಣ್ಣೂದು ತುಂಬುಗಾಯಿ. 

ಹಿಂಗ ತುಂಬುಗಾಯಿ ಮಾಡಾಕ, ವಿಜಯಪುರದಾಗ ಬೆಕ್ಕಿನಮಾರಿ ಬದನಿಕಾಯಿ ತರ್ತಾರ. ಬೆಕ್ಕಿನ ಮಾರಿ ಬದನಿಕಾಯಿ ಅಂದ್ರ ಎಳೀ ಹಸಿರು ಮತ್ತು ಬಿಳಿ ಬಣ್ಣದ ದುಂಡನೆಯ ಬದನಿಕಾಯಿ. ಅವುಗಳ ದೇಟು ಹಿಡಿದು ನೋಡಿದಾಗ, ಮೇಲ್ಮುಖ ಥೇಟ್‌ ಬೆಕ್ಕಿನ ಮಾರಿ ಕಂಡಂಗ ಕಾಣ್ತದ. ಈ ಬದನಿಕಾಯಿ ಚೂರೆಚೂರು ಹುಳಿಮಧುರ ಇರ್ತದ. ಅದರೊಳಗ ತುಂಬುಗಾಯಿ ಮಾಡಿದ್ರ ರುಚಿನೇ ಭಾಳ ಛೊಲೊ.

 ತುಂಬಗಾಯಿ, ಎಣ್ಣಿಗಾಯಿ ಎರಡಕ್ಕಿಂತಲೂ ಅತಿ ಹೆಚ್ಚು ಜನಪ್ರಿಯ ಹೋಳುಗಾಯಿ. ಮನ್ಯಾಗ ಹೋಳಿಗಿ ಮಾಡಿದ್ರ, ಈ ಹೋಳುಗಾಯಿ ಬೇಕೆಬೇಕು. ಬದನಿಕಾಯಿ, ಉಳ್ಳಾಗಡ್ಡಿ ಎರಡೂ ಸಮಪ್ರಮಾಣದಾಗ ತೊಗೊಂಡು, ಉದ್ದುದ್ದ ಹೆಚ್ಚಿ ಹಾಕ್ತಾರ. ಈ ಎರಡನ್ನೂ ಎಣ್ಣಿಯೊಳಗ ತಾಳಸ್ಕೊಂತ ಅದಕ್ಕ ಒಂಚೂರು ಮಸಾಲಿ ಖಾರ ಹಾಕಿ ಬೇಯಿಸ್ತಾರ. 

ಈ ಮಸಾಲಿ ಖಾರದ ರುಚಿನೇ ಬ್ಯಾರೆರಿ. ದಕ್ಷಿಣದ ಕಡೆ ಬರೆ ಸಾಂಬಾರ್‌ ಪುಡಿ ಮಾಡಿದ್ವಿ ಅಂತಾರ. ನಮ್ಮಕಡೆ ಮಸಾಲಿ ಖಾರ ಮಾಡಿದ್ರ, ಎಲ್ಲಾದಕ್ಕೂ ಅದನ್ನೇ ಹಾಕೂದು. ಕೆಂಪು ಗುಂಟೂರು ಮತ್ತು ಬ್ಯಾಡಗಿ ಮೆಣಸಿನಕಾಯಿ ಸಮಪ್ರಮಾಣದಾಗ ಕಲಸ್ತಾರ. ಖಾರ, ಬಣ್ಣ ಎರಡೂ ಇರಲಿ ಅಂತ. ಈ ಪುಡಿಗೆ ಹವೇಜು (ಧನಿಯಾ ಬೀಜ), ದೊಡ್ಪತ್ರೆ, ಕಲ್ಲುಹೂ, ಲವಂಗ, ದೊಡ್ಡಮೊಗ್ಗೆ, ಮೊಗ್ಗು, ನಾಗರೆಲಿ, ಚಕ್ಕಿ, ಶಾಜೀರಗಿ, ಜೀರಗಿ,  ಹಿಂಗ ಒಂದೆರಡಲ್ಲ ಮೂವತ್ತು ಮಸಾಲಿ ಕೂಡಿಸಿ ಪುಡಿ ಮಾಡ್ತಾರ. 

ಹವೇಜು, ದೊಡ್ಪತ್ರೆ ಸ್ವಲ್ಪ ಹೆಚ್ಚಿನ ಪ್ರಮಾಣದಾಗ ಇದ್ರ ಉಳದವೆಲ್ಲ ತೊಲಿ ಲೆಕ್ಕದಾಗ. ಅಂದ್ರ ಹತ್ತು, ಇಪ್ಪತ್ತು ಗ್ರಾಮಿನ ಲೆಕ್ಕದಾಗ ಕೂಡಸ್ತಾರ. ಹಿಂಗ ಈ ಪುಡಿಯನ್ನ ಕೆಂಪುಖಾರದ ಜೊತಿಗೆ ಬೆರಸ್ತಾರ. ಇಷ್ಟೇ ಆದ್ರ ಮಸಾಲಿ ಖಾರದ ಸಂಭ್ರಮ ಮುಗಿಯೂದಿಲ್ಲ. ಈ ಎಲ್ಲ ಮಸಾಲಿಗಳನ್ನೂ ಒಂದೊಂದಾಗಿ ಹುರಿಬೇಕು. ಒಂದಷ್ಟು ಉರಿ ಹೆಚ್ಚಿಟ್ಟು, ಇನ್ನಷ್ಟು ಉರಿ ಕಡಿಮಿ ಮಾಡು, ಒಂದಷ್ಟು ಒಲಿ ಆರಿಸಿ ಹುರಿಯೂದು ಇರ್ತದೆ.

ಆಮೇಲೆ ಸಾಕಷ್ಟು ಈರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ಕೊತ್ತಂಬರಿ ಇವನ್ನೂ ಖಮ್ಮಂಗ, ಘಮ್ಮಂತ ಹುರಕೊಬೇಕು. ಅದೆಲ್ಲ ಮುದ್ದಿಯಾಗಿ ಒಂದು ಚಂಡಿನಂತಾಗ್ತದ. ಈ ಚೆಂಡನ್ನು ಕೂಡಿಸಿ, ಮತ್ತ ಆ ಖಾರದ ಪುಡಿ ಜೊತಿಗೆ ಹಾಕಿ ಕುಟ್ತಾರ. ಖಾರ ಕುಟ್ಟುವ ಗಿರಣಿನೇ ಇರ್ತದ. ಇಷ್ಟಿಷ್ಟೆ ಮಸಾಲಿ ಒಗದು, ಕುಟ್ಟಿ ಅದು ಚಂದಗೆ ಬೆರತದೋ ಇಲ್ಲೋ ನೋಡಾಕ ಅಲ್ಲೇ ಸಾಣಗಿ ಹಿಡಿಯೂದು, ಮತ್ತ ಕುಟ್ಸೂದು. ಹಿಂಗ ಕುಟ್ಟಿದ ಮಸಾಲಿಖಾರದ ರುಚಿನೇ ಬ್ಯಾರೆ.

ಇಂಥ ಮಸಾಲಿ ಖಾರ ಹಾಕಿ ಹುರೀತಾರ. ಹಿಂಗಾಗಿ ಈ ಕಡೆಯ ತುಂಬುಗಾಯಿ ಇರಲಿ, ಎಣ್ಣಿಗಾಯಿ ಇರಲಿ, ಬೆರಳು ಚೀಪುಹಂಗಷ್ಟೆ ಅಲ್ಲ, ಉಂಡ ಮ್ಯಾಲೂ ಕೈ ವಾಸ್ನಿ ನೋಡ್ಕೊಳ್ಳುಹಂಗ ಆಗ್ತದ.

ಎಲ್ಲ ಶುಭಕಾರ್ಯದೊಳಗೂ ಬದನಿಕಾಯಿ ಎದ್ದು ಕಾಣ್ತದ. ಮೊದಲು ಇದನ್ನ ನಂಜು ಅಂತ ಉಣ್ತಿರಲಿಲ್ಲ. ಬಾಣಂತಿಯರಿಗೆ ಈಗಲೂ ಕೊಡೂದಿಲ್ಲ. ಗರ್ಭಿಣಿಯರಿಗೂ. ಆದ್ರ ಹಂಗಂತ ಇದಿಲ್ಲದ ಸೀಮಂತ, ನಾಮಕರಣ, ನಿಶ್ಚಯ ಕಾರ್ಯ, ಮದಿವಿ ಯಾವುದೂ ನಡಿಯೂದಿಲ್ಲ.

ಹೋಳು ತಿನ್ನದವರು ಎಸರು ತಿಂತಾರ. ಎಸರಿಲ್ಲದೆ, ಹೆಸರಿಲ್ಲದೆ ಸಮಾರಂಭನೆ ನಡಿಯೂದಿಲ್ಲ. ಹೌದು. ಚೂರು ನಂಜಿರಬೇಕು. ಜೀವನದೊಳಗ. ಇಲ್ಲಾಂದ್ರ ಅತಿಮಧುರ ಜೀವನ ಅನ್ನೂಹಂಗಾದ್ರ ಬದುಕಿದ್ವಿ ಅನ್ನಾಕ ಗುರುತೆಲ್ಲಿ ಉಳೀತದ.

ಸಿಹಿ, ಹುಳಿ, ಸಪ್ಪೆಯನ್ನುಣ್ಣುವಾಗ, ಚೂರು ನಂಜಿರಲಿ, ತಡಿಯುವ ಶಕ್ತಿ ಬರ್ತದ ಅಂತನ್ನೂ ಸಲ್ಯಾಗ ಬದನಿಕಾಯಿಗೆ ಬಿಡೂದಿಲ್ಲ. ಹಿಂಗ ಸಂಯಮ ಮತ್ತು ಒಳಗೊಳ್ಳುವಿಕೆಯ ಪಾಠ ಹೇಳುವ ಈ ಬದನಿಕಾಯಿ ತಿನ್ನೂಮುಂದ ಇದು ತುಂಬುಗಾಯಿನಾ.. ಎಣ್ಣೆಗಾಯಿನಾ ಅಂತ ಖಾತ್ರಿ ಮಾಡ್ಕೊರಿ

‍ಲೇಖಕರು ಅನಾಮಿಕಾ

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಇದನ್ನು ಓದಿದ ಮೇಲೆ ಅರ್ಜೆಂಟಾಗಿ ತಿನ್ನಬೇಕಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: