ಅಟಲ್ ಸುರಂಗದೊಂದಿಗೆ ಮಣ್ಣಾದ ರೋಹ್ತಂಗ್ ತಿರುವುಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಎಂಟೊಂಭತ್ತು ವರ್ಷಗಳ ಹಿಂದಿನ ಮಾತು. ನಾವೊಂದು ನಾಲ್ಕು ಜನ ಹೆಗಲಿಗೆ ಇಷ್ಟು ದಪ್ಪ  ಬ್ಯಾಗೇರಿಸಿಕೊಂದು ಹಿಮಾಚಲದ ಲಕ್ಷುರಿ ಹೆಸರಿನ  ಸರ್ಕಾರಿ ಬಸ್ಸಿನ ಮುರಿದ ಲಗಡಾಸು ಸೀಟಿನಲ್ಲಿ ದೇವರ ದಯದಿಂದ ಸೊಂಟ ಮುರಿಸಿಕೊಳ್ಳದೆ ಮನಾಲಿಯಲ್ಲಿಳಿದು, ಫ್ರೆಶ್ಶಾಗಿ, ಎತ್ತರೆತ್ತರದ ಸೂಜಿಮೊನೆಯ ದಟ್ಟಾರಣ್ಯದ ನಟ್ಟನಡುವಿನ ಸೋಲಂಗ್ ಎಂಬ ಪಕ್ಕಾ ಕಮರ್ಶಿಯಲ್ ಕಣಿವೆಯೊಂದು ಸಂಜೆಯಾಗುತ್ತಿದ್ದಂತೆ ರಂಗೇರುವ ಪರಿಯನ್ನು ನೋಡುತ್ತಾ ನಿಂತಿದ್ದೆವು.

(ನಮ್ಮ ಕರ್ನಾಟಕದ ಸಾಮಾನ್ಯ ಬಸ್ಸೂ ಕೂಡ ಇದರ ಮುಂದೆ ಎಷ್ಟು ಲಕ್ಷುರಿಯಸ್ಸಾಗಿದೆ ಅನ್ನೋದೊಂದು ಬೇರೆಯದೇ ಕಥೆ, ಅದಿಲ್ಲಿ ಬೇಡ ಬಿಡಿ) ಹಿಮಾಚಲಿ ಡ್ರೆಸ್ಸು ಹಾಕಿ ಯಾಕ್ ಮೇಲೇರಿ ಕುಳಿತು ರೊಮ್ಯಾಂಟಿಕ್ ಪೋಸ್ ಕೊಡುವ ದಂಪತಿಗಳು, ಅಂಥಾ ಹೇಳಿಕೊಳ್ಳುವ ಚಳಿ ಇಲ್ಲದಿದ್ದರೂ, ಮೆಲೇರಿದಂತೆ ಚಳಿ ಹೆಚ್ಚಾಗುತ್ತದೆ ಎನ್ನುತ್ತಾ ಬಾಡಿಗೆ ಜಾಕೆಟ್ಟುಗಳನ್ನು ಹಾಕಿಕೊಳ್ಳಿರೆಂದು ಅರಿಯದವರ ಹಾದಿ ತಪ್ಪಿಸುವ ವ್ಯಾಪಾರಿಗಳು, ಹೊಸ ಊರಿಗೆ ಬಂದ ಉಮೇದಿನಲ್ಲಿ ಸಿಕ್ಕಸಿಕ್ಕ ತಿಂಡಿಗಳನ್ನು ಬಾಯಿಗಿಡುವ ಮಂದಿ, ಪ್ಯಾರಾಗ್ಲೈಡಿಂಗಿನಲ್ಲಿ ಲ್ಯಾಂಡಿಂಗ್ ಗೊತ್ತಾಗದೆ, ಜೊತೆಗಿದ್ದ ಮಾರ್ಗದರ್ಶಕನೇ ಆರಾಮಾಗಿ ಲ್ಯಾಂಡಿಂಗ್ ಮಾಡಿಸುತ್ತಾನೆಂದು ಗೊತ್ತಿದ್ದೂ ಗೊತ್ತಿದ್ದೂ ಎಡವಟ್ಟು ಮಾಡಿಕೊಂಡು ಟೆನ್ಶನ್ ನಲ್ಲಿ ಕಾಲು ಉಳುಕಿಸಿಕೊಂಡು ಸೈಡಿನಲ್ಲಿ ಕೂತು ಕಾಲು ತಿಕ್ಕುತ್ತಿರುವ ಕೆಲವರು, ಎಲ್ಲೆಲ್ಲಿಂದಲೋ ಬಂದ ಉಣ್ಣೆಯ ದಿರಿಸುಗಳನ್ನು ಇಲ್ಲಿಯದೇ ಪಕ್ಕಾ ಲೋಕಲ್ ಮಾಲೆಂದು ಕಥೆ ಕಟ್ಟುವ ಹೊಟ್ಟೆಪಾಡಿನ ವ್ಯಾಪಾರಿಗಳು… 

ಹೀಗೆ ವಿಚಿತ್ರವಾದ ಜನಜಾತ್ರೆಯೇ ಅಲ್ಲಿ ನಿರ್ಮಾಣಗೊಂಡಿತ್ತು. ವರ್ಷದ 12 ತಿಂಗಳುಗಳೂ ಕೂಡಾ ಪ್ರವಾಸಿಗರಿಂದ ಗಲಗಲವಾಗಿರುವ ಈ ಕಣಿವೆ ಮೊನ್ನೆ ಮಾತ್ರ ಅಕ್ಷರಶಃ  ಖಾಲಿ ಬಿದ್ದಿತ್ತು. ಇದು ಅದೇ ಮನಾಲಿಯ  ಸೋಲಂಗ್ ಹೌದಾ ಎನ್ನುವಷ್ಟು! ಕೊರೋನ ಎಂಬ ಕಣ್ಣಿಗೆ ಕಾಣದ ಜೀವಿಯೊಂದು ಪ್ರವಾಸೋದ್ಯಮವೂ ಸೇರಿದಂತೆ ಪ್ರಪಂಚವನ್ನೇ ಅಲುಗಾಡಿಸಿಬಿಟ್ಟ ಪರಿ ಇದು.

ಅಂದು ನಾವು ಎರಡು ಜೋಡಿಯಾಗಿ ಕಂಡ ಮೇಲಂತೂ ಯಾಕ್ ಮೇಲೆ ಕೂರಿಸಲು ಇವು ಪಕ್ಕಾ ಮಿಕಗಳೆಂದು ಸ್ಕೆಚ್ಚು ಹಾಕಿ ನಮ್ಮನ್ನು ಬಲಿಹಾಕಲು  ನಾಲ್ಕು ಸಾರಿ ಬೇರೆಬೇರೆಯವರು ಬಂದು ಒತ್ತಾಯಿಸಿ ವಿಫಲರಾಗಿ ಬರಿಗೈಲಿ ಹಿಂತಿರುಗಿದ್ದರು. ನಾವು ಮಾತ್ರ ವರ್ಷದ ಹಿಂದೆ ಶಂಕುಸ್ಥಾಪನೆಗೊಂಡು ಹಾಗೇ ಅಲ್ಲಲ್ಲಿ ಬೋರ್ಡು ಹೊತ್ತು ನಿಂತಿದ್ದ ಆ ಸುರಂಗ ಮಾರ್ಗದ ಬಗ್ಗೆ ಘನ ಗಂಭೀರವಾಗಿ ಮಾತಾಡುತ್ತಾ ನಿಂತಿದ್ದೆವು. 

ಹತ್ತು ವರ್ಷದ ಪ್ರಾಜೆಕ್ಟ್ ಅಂತೆ! ಈಗಲೇ ಒಂದೆರಡು ಕಿಮೀಗಳಷ್ಟು ಪರ್ವತವನ್ನು ಕೊರೆದಾಗಿದೆ. ಪರ್ವತ ಕೊರೆಯುವ ಕಾರ್ಮಿಕರ ಸಂಕಷ್ಟಗಳು, ಪ್ರಕೃತಿ ಹಠಾತ್ ನೀಡುವ ಸವಾಲುಗಳು, ಚಳಿಗಾಲದಲ್ಲಿ ಭೂಗರ್ಭದೊಳಗಿನ ಮೈನಸ್ ನಲ್ವತ್ತರ ಮೇಲಿನ ಉಷ್ಣತೆಯ ಕಷ್ಟಗಳು… ಹೀಗೆ ವಿಚಾರ ಹಲವಿತ್ತು. ಇನ್ನುಳಿದ ಒಂಭತ್ತು ವರ್ಷಗಳಲ್ಲಿ ಒಟ್ಟು ಒಂಭತ್ತು ಕಿಮೀಗಳಷ್ಟು ಇಂಥ ಬೃಹತ್ ಪರ್ವತಗಳ ಹೊಟ್ಟೆ ಕೊರೆಯಲಾಗುತ್ತದೆ, ಆ ಹೊಟ್ಟೆಯೊಳಗೆ ಹರಿವ ಗುಪ್ತಗಾಮಿನಿಗಳೆಷ್ಟೋ… ಮಣ್ಣಿನಾಳದಲ್ಲಿ ಇಳಿದ ಬೃಹತ್ ಮರಗಳ ಬೇರುಗಳೆಷ್ಟೋ…

ಇವೆಲ್ಲಕ್ಕೂ ಈ ಹೊಟ್ಟೆ ಬಗೆವ ಕಾರ್ಯದಿಂದ ಉಂಟಾಗಬಹುದಾದ ಶಾಶ್ವತ ಹಾನಿಯ ಲೆಕ್ಕಾಚಾರ ಕೈಗೆಟುಕದಂತಾಗಿ ಒಂದು ಬಗೆಯ ವಿಚಿತ್ರ ವೇದನೆಯಾಗಿತ್ತು.  ಇಷ್ಟು ದೊಡ್ಡ ಹಿಮಾಲಯದ  ಹೊಟ್ಟೆಗೇ ಪೆಟ್ಟು ನೀಡುವ ಮನುಷ್ಯನ ಅಭಿವೃದ್ಧಿ ಎಂಬ ತೀರದ ದಾಹಕ್ಕೆ ಖುಷಿಪಡಲೋ ಸಂಕಟಪಡಲೋ ಅರಿವಾಗದೇ ಮರುದಿನದ ರೋಹ್ತಂಗಿನ  ಸುದೀರ್ಘ ಪಯಣಕ್ಕೆ ಅಣಿಯಾಗಲು ಅಲ್ಲಿಂದ ಕಾಲ್ಕಿತ್ತಿದ್ದೆವು.

ಕೆಲವೊಮ್ಮೆ ಊಹಿಸಿಯೂ ನೋಡದ ವಿಚಿತ್ರ ಎಂದರೆ ಇದೇ. ಅಂದು ಹಾಗೆ ನಿಂತು ನೋಡಿದ, ಮಾತಾಡಿದ ಸುರಂಗ ಮಾರ್ಗ ನಿನ್ನೆಯಷ್ಟೇ ಸಾರ್ವಜನಿಕ ಬಳಕೆಗೆ ತೆರೆದಿದೆ, ಕಾಕತಾಳೀಯವೆಂಬಂತೆ ಈ ಕೊರೋನ ಕಾಲದಲ್ಲೂ ಉದ್ಘಾಟನೆಯ ದಿನ ಅಲ್ಲೇ ಪಕ್ಕದ ಊರೊಂದರಲ್ಲೇ ನಾನಿದ್ದೇನೆ ಎಂಬುದು ವಿಚಿತ್ರ ಸಂಬಂಧವೊಂದನ್ನು ಹುಟ್ಟುಹಾಕಿದಂತಿತ್ತು. ಇಷ್ಟು ಹತ್ತಿರದಲ್ಲೇ ಇದ್ದಾಗ ಸುರಂಗದೊಳಗಾಗಿ  ಹೋಗದಿದ್ದರೆ ಹೇಗೆ? ಅಂದುಕೊಳ್ಳುತ್ತಾ ಮನಾಲಿ ದಾರಿಯೆಡೆಗೆ ಕಾರು ತಿರುಗಿಸಿದ್ದೆವು.

‘ಆತ್ಮನಿರ್ಭರ ಭಾರತ’ದ ಸಾಲು ಸಾಲು ಫ್ಲೆಕ್ಸ್ ಗಳ ನಡುವಿನ ಹೆಬ್ಬಾವಿನಂಥಾ ರಸ್ತೆಯಂಚಿಗೆ ಸ್ವಾಗತಿಸುವ ಅಟಲ್ ಸುರಂಗ ಮಾರ್ಗ ಅತ್ಯಾಧುನಿಕವೇನೋ ಸರಿಯೇ. ಆದರೆ, ಅಂದು ನಿಂತು ನೋಡಿದ್ದ ಅದೇ ದಾರಿಬದಿಯಲ್ಲಿ, ನಾನೀಗ ಅದೇ ಹಿಮಾಲಯದ  ಗರ್ಭದಿಂದಾಗಿ ಅಂದು ಹೋದ ಅದೇ ಜಾಗಕ್ಕೆ, ಅಂದು ಅನುಭವಿಸದ ಕಷ್ಟಗಳಾವುದನ್ನೂ ಅನುಭವಿಸದೆ ಆರಾಮವಾಗಿ ಸುಖಾಸೀನವಾಗಿ ಹೋಗುತ್ತಿರುವೆ ಎಂಬ ಯೋಚನೆಯೊಂದು ಬಂದು ತಳಮಳವಾಯಿತು.

ಅಂದು ಬೆಳಗಿನ ಜಾವ ಎದ್ದು ಬಿದ್ದು ಹತ್ತಿಕೊಂಡು ಸೂರ್ಯೋದಯವ ನೋಡುತ್ತಾ ಹಾವಿನಂತೆ ತೆವಳುವ ಸಾಲುಸಾಲು ವಾಹನಗಳ ಜೊತೆಯಲ್ಲಿ, ಎದುರು ಬರುವ ವಾಹನಕ್ಕೆ ಸೈಡು ಬಿಡಲು ಹರಸಾಹಸ ಪಡುವ, ಉಸಿರು ಬಿಗಿ ಹಿಡಿದು ಕೂತು ಸುತ್ತಲೂ ಕಣ್ತುಂಬುವ ಮನೋಹರ ದೃಶ್ಯವನ್ನು  ಕ್ಯಾಮರಾದಲ್ಲಿ ಸೆರೆಹಿಡಿಯಲು ಕಸರತ್ತು ಮಾಡುತ್ತಾ ರೋಹ್ತಂಗ್ ಪಾಸ್ ತಲುಪುವ ಅನುಭವವೇ ಬೇರೆಯಾಗಿತ್ತು. ಆ ನಯನ ಮನೋಹರ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಆದರೆ ಮೊನ್ನೆ ಪುಸಕ್ಕೆಂದು ಮನಾಲಿ ದಾಟಿಕೊಂಡು, ಅದೇ ಸೋಲಂಗಿನ ಮೂಲಕವಾಗಿ 10,000 ಅಡಿಗೆ ಮೇಲ್ಪಟ್ಟ ವಿಶ್ವದ ಅತೀ ಉದ್ದದ ಸುರಂಗ ಮಾರ್ಗವಾಗಿ ನೀವೀಗ ಹೋಗುತ್ತಿದ್ದೀರಿ ಎಂಬ ಸ್ವಾಗತಗಳನ್ನೆಲ್ಲ ದಾಟಿಕೊಂಡು, ರೋಹ್ತಂಗ್ ಗರ್ಭದ ದಾರಿಯಾಗಿ, ಸುಮ್ಮನೆ ಕೂತು ಗಿರಿಶಿಖರಗಳನ್ನೆಲ್ಲ ನೋಡುವ ಸುಖವಿರದೆ, 9 ಕಿಮೀ ಮುಗಿಸಿ ಹೊರಬಂದಾಗ, ಎಡಕ್ಕೆ ತಿರುಗಿದರೆ ಲೇಹ್, ಬಲಕ್ಕೆ ತಿರುಗಿದರೆ ಸ್ಫಿತಿ ಬೋರ್ಡು ಕಂಡು, ಅರೆ, ಇಷ್ಟು ಬೇಗ ಇಲ್ಲಿ ತಲುಪಿಬಿಟ್ಟೆವಾ ಎನಿಸಿ ಆಶ್ಚರ್ಯವಾಯಿತೇ ಹೊರತು ಅದು  ರೋಮಾಂಚಕಾರಿಯಾಗಲಿಲ್ಲ.

ನಾವು ಯಾವತ್ತೂ ಉದ್ಧಾರ ಆಗುವುದಿಲ್ಲ ಕಣ್ರೀ ಅಂತ ಮಾತಾಡಿಕೊಳ್ತೀವಲ್ಲ! ಅದು ನಿಜ ಅನಿಸಿದ್ದು ಇಲ್ಲಿಯೇ. ಸುರಂಗ ಮಾರ್ಗ ಸಾರ್ವಜನಿಕ ಸೇವೆಗೆ ಮುಕ್ತವಾಗಿ 24 ಗಂಟೆಯಾಗಿದೆಯಷ್ಟೇ, ಸಾಲು ಸಾಲು ಮೂರು ಅಪಘಾತಗಳು! ಜನರ ಸೆಲ್ಫೀ ಹುಚ್ಚು, ಸುರಂಗದೊಳಗೆ ಅಲ್ಲಲ್ಲಿ ವಾಹನ ನಿಲ್ಲಿಸಬೇಡಿ ಎಂಬ ಮಾರ್ಗಸೂಚಿಗಳಿದ್ದರೂ ಜನರ ಸ್ವೇಚ್ಛೆಗೆ ಕಡಿವಾಣವೇ ಇರಲಿಲ್ಲ.

ಕಾರಿನ ಮೇಲ್ಛಾವಣಿ ತೆರೆದ ವೇಗವಾದ ಜಾಲಿ ಡ್ರೈವ್ ಗಳು ನೋಡಿದಾಗ, ಇಲ್ಲಿಂದ ನೆಮ್ಮದಿಯಾಗಿ  ಬದುಕಿಬಂದರೆ ಸಾಕಪ್ಪಾ ಅನಿಸಿದ್ದು ಸುಳ್ಳಲ್ಲ. ಹೀಗೆ ರೊಹ್ತಂಗ್ ನ ತಿರುವುಗಳಲ್ಲೂ ಅಂದು ಅನಿಸಿರಲಿಲ್ಲ.

ಅಂದ ಹಾಗೆ ಇವೆಲ್ಲವುಗಳನ್ನೂ ಬದಿಗೊತ್ತಿ ನೋಡಿದರೆ, ದಿನನಿತ್ಯದ ವ್ಯವಹಾರಕ್ಕೆ, ಪರ್ವತನಾಡಿನ ಮಂದಿಗೆ ಈ  ಅಟಲ್ ಸುರಂಗ ಮಾರ್ಗ ವರವೆಂಬುದು ನಿಜವೇ.  ಪ್ರವಾಸಿಗರಿಗೂ! ಲಡಾಕ್, ಸ್ಪಿತಿಗೆ ಹೋಗುವವರ ಅಮೂಲ್ಯ 5-6 ಗಂಟೆಗಳನ್ನಿದು ಉಳಿಸುತ್ತದೆ. ಟ್ರಾಫಿಕ್ ಇಲ್ಲದೆ, ಸಾಧಾರಣ ದಿನಗಳಲ್ಲೂ, ಪಾಸ್ ದಾಟಿಕೊಂಡು 116 ಕಿಮೀ ದೂರದ ಗ್ರಂಫು ಸೇರಲು ಮೊದಲಾದರೆ, 5-6 ಗಂಟೆಗಳು ಬೇಕು. 

ಹಾಗಾಗಿ, ಮನಾಲಿಯಿಂದ ಹೊರಡುವ ಬಸ್ಸುಗಳೆಲ್ಲ, ಬೆಳ್ಳಂಬೆಳಗ್ಗೆ 4 ಗಂಟೆಗೆಲ್ಲ ಶುರುವಾಗಿ ಬಿಡುತ್ತಿತ್ತು.  ಅದೇ ಈಗ ಈ ಸುರಂಗದಿಂದಾಗಿ ಸುಮಾರು 78 ಕಿಮೀ ದಾರಿ ಕ್ರಮಿಸುವುದು ಕಡಿಮೆಯಾಗುವುದಲ್ಲದೆ, ಭಾರೀ ಸಮಯದ ಉಳಿತಾಯವಾಗಿ ಒಂದೇ ಗಂಟೆಯಲ್ಲಿ ರೊಹ್ತಂಗ್ ದಾಟಿ ಮುಂದೆ ಹೋಗಿಯಾಗಿರುತ್ತದೆ. 

ವಿಶೇಷವೆಂದರೆ, ಈ ಸುರಂಗ ಮಾರ್ಗ ಮಳೆ, ಚಳಿ, ಬೇಸಗೆಗಳ ಹಂಗಿಲ್ಲದೆ, ವರ್ಷದ 12 ತಿಂಗಳುಗಳಲ್ಲೂ ಲಡಾಕ್ ಮತ್ತು ಸ್ಪಿತಿ ಕಣಿವೆಗೆ ಸಂಪರ್ಕವನ್ನು ಒದಗಿಸುತ್ತದೆ!

ನನಗಿನ್ನೂ ಚೆನ್ನಾಗಿ ನೆನಪಿದೆ. ಐದನೇ ಅಥವಾ ಆರನೇ ಕ್ಲಾಸಿನಲ್ಲಿದ್ದೆ. ಅಪ್ಪನ ಜೊತೆಗೆ ಪುತ್ತೂರಿನಿಂದ ಹಾಸನ ರೈಲು ಹತ್ತಿದ್ದೆ. 57 ಸುರಂಗಗಳನ್ನು ದಾಟಿಕೊಂಡು ಹೋಗುವ ಆ ಕಾಡಿನ ದಾರಿಯೇ ಒಂದು ಅತ್ಯದ್ಭುತ ಅನುಭವ. ಮಳೆಗಾಲದ ಪಯಣವಾದ್ದರಿಂದ ಹಸಿರಿಗೆ ಇನ್ನ್ನೂ ಜೀವ ಬಂದು, ರಮ್ಯಲೋಕವಾಗಿ ಕಂಡಿತ್ತು. ಅದೊಂದು ಕನಸಿನ ಹಾಗೆ! ಆಗ ನನ್ನ ಕೈಲಿ ಕ್ಯಾಮರಾವಿಲ್ಲದಿದ್ದರೂ ಕಣ್ಣ ಕ್ಯಾಮರದೊಳಗೆ ಸೆರೆಹಿಡಿದ ಕ್ಷಣಗಳ ಒಂದೊಂದು ಫ್ರೇಮು ಕೂಡಾ ಈಗಲೂ ನೆನಪಿದೆ.

ಅದಾಗಿ ಸ್ವಲ್ಪ ಕಾಲದಲ್ಲಿ ನಿಂತಿದ್ದ ರೈಲು ಸೇವೆ ಬಹಳ ಕಾಲದ ನಂತರ ಮತ್ತೆ ಆರಂಭವಾಯ್ತು. ಮತ್ತೊಮ್ಮೆ ಈ ಮಾರ್ಗವಾಗಿ ಹೋಗಬೇಕಲ್ಲ ಎಂದು ರೈಲು ಹತ್ತಿದ್ದ ನನಗೆ ನಿರಾಸೆಯಾಗಿತ್ತು. ಮತ್ತೆ ನಾ ಅದೇ ಕಿಟಕಿಗೊರಗಿ ಕುಳಿತರೂ ಅಂದಿನ ದಟ್ಟಾರಣ್ಯ ಮತ್ತೆ ಕಾಣಲೇ ಇಲ್ಲ!

ಹಳೆಯ ದಾರಿಗಳು, ಹಳೆಯ ಕಟ್ಟಡ, ಆ ಕಟ್ಟಡದ ಮಾಸಲು ಬಣ್ಣ,  ಹಳೇ ಅಂಗಡಿ, ಆ ಅಂಗಡಿಯ ಬದಿಯ ಮುರುಕು ಬೆಂಚು, ಅಲ್ಲಿ ಚಹಾ ಮಾಡಿಕೊಟ್ಟು ನಾಲ್ಕು ಪ್ರೀತಿಯ ಮಾತಾಡುವ ಮುದುಕ… ಹೀಗೆ ಹಳೆಯ ನೆನಪುಗಳು ಬೆಸೆಯುವ ಬಂಧವೇ ಹಾಗೆ. ಹೊಸದು ಬಂದರೂ ಹಳೆಯದರ ಗಂಧ ಅಳಿಸುವುದು ಕಷ್ಟ.

ರೋಹ್ತಂಗ್ ಕೂಡಾ ಹಾಗೆಯೇ! ಅದು ಕೇವಲ ದಾರಿಯಲ್ಲ. ಪ್ರತಿ ಪಯಣಿಗನ ಲೇಹ್, ಸ್ಪಿತಿಗಳೆಡೆಗಿನ ಅಳಿಸಲಾಗದ ಬಂಧ. ಎಂತೆಂಥ ಸುರಂಗಗಳು ಬಂದರೂ, ಸಮಯ, ಸಂಬಂಧ, ದಾರಿ ಸುಲಭವಾದಷ್ಟೂ ಪಯಣಿಗನ ಅನುಭವ ಮಾತ್ರ ಕಡಿಮೆಯಾಗುತ್ತಾ ಹೋಗುತ್ತದೆ. ಕಷ್ಟಕ್ಕೆ ಸಿಗುವ ಫಲ ದೊಡ್ಡದು!

‍ಲೇಖಕರು ರಾಧಿಕ ವಿಟ್ಲ

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸುಮತಿ

    ರಾಧಿಕಾ ಅವರಿಗೆ ನಮಸ್ಕಾರ.
    ಲೇಖನದಲ್ಲಿ ಗೊಂದಲಗಳಿವೆ. 10 ವರ್ಷದ ಹಿಂದೆ ಹೇಗಿತ್ತೋ ಹಾಗೇ ಇರಬೇಕಿತ್ತೆ ..ಬದಲಾಗಬಾರದಿತ್ತೆ..
    ದಾರಿ ,ಸುರಂಗದ ಮಾರ್ಗದಿಂದ ಕಷ್ಟ ಆಗಿದೆಯೇ.. ಪ್ರಯಾಣದ ಅನುಭವ ಮುಂಚಿನ ಹಾಗೇ 6- 8 ಗಂಟೆ ಇರಬೇಕಾಗಿತ್ತೆ..
    ಸೈನಿಕರಿಗೆ ಇದರಿಂದ ಒಳ್ಳೆಯದಾಗುತ್ತದೆಯೋ ಇಲ್ಲವೋ..
    ಅಲ್ಲಿ ಕುಸಿದು ಬೀಳುವ ರಸ್ತೆಗಳಲ್ಲಿ ಸಂಚಾರ ಆನಂದ ತರುತ್ತಿತ್ತೆ..

    ಪ್ರವಾಸಿ ಯ ಆನಂದಕ್ಕಾಗಿ ಪ್ರಯಾಣದ ಅನುಭೂತಿ ಗಾಗಿ ಆ ಜನ ಹಾಗೇ ಹಾಗೆ ಇರಬೇಕೆ..
    ಅಭಿವೃದ್ಧಿ versus ಪ್ರಕೃತಿ ವಾದ ವಿವಾದ ಇಂದು ನಿನ್ನೆಯದಲ್ಲ. ಆದರೆ ಜನಜೀವನ, ಓಡಾಟ ದ ಅನುಕೂಲ, ಸ್ಥಳೀಯ ಜೀವನ, ಸಮುದಾಯಗಳು ಮತ್ತು ಬದುಕು ಇವನ್ನೂ ನೋಡಬೇಕಾಗುತ್ತದೆ. ಸಮತೋಲನ ಕಾಪಾಡಬೇಕಾಗುತ್ತದೆ. ಅದು ಅಲ್ಲಿ ಆಗಿದೆಯೋ ಇಲ್ಲವೋ ..ಎಷ್ಟು ಜನ ಇದರಿಂದ ಬದುಕು ಕಳೆದುಕೊಂಡರು
    ಅಥವಾ ಗಳಿಸಿದರು ಎಂಬುದು ಮುಖ್ಯ ಅಲ್ಲವೇ..
    ನಾನು ಹತ್ತು ವರ್ಷದ ಹಿಂದೆ ಹೋದ ಅನುಭವ ಇವತ್ತು ಇಲ್ಲ, ರೋಮಾಂಚನ ತರಲಿಲ್ಲ ಎನ್ನುವುದು ಯಾಕೋ ಹಿತ ತರಲಿಲ್ಲ. ಪ್ರವಾಸದ ಅನುಭವದ ಜೊತೆ ಅಲ್ಲಿನ ಸುರಂಗ ಮಾರ್ಗ ಜನಜೀವನದ ಮೇಲೆ ಮಾಡಿದ ಪರಿಣಾಮ ಗಳ ಮೇಲೆ ಬೆಳಕು ಚೆಲ್ಲಿದ್ದರೆ ಚೆನ್ನಾಗಿರುತ್ತಿತ್ತು.
    ಇದು ಅಭಿಪ್ರಾಯ ಅಷ್ಟೇ.
    Thanku for beautiful photos.

    ಪ್ರತಿಕ್ರಿಯೆ
  2. ರಾಧಿಕಾ ವಿಟ್ಲ

    ಪ್ರತಿಕ್ರಿಯೆಗೆ ಧನ್ಯವಾದಗಳು ಸುಮತಿ ಅವರೇ.
    ನಿಮ್ಮ ಮಾತು 100ಕ್ಕೆ 100 ನಿಜವೇ. ಅವೆಲ್ಲವೂ ತಿಳಿದೇ, ಅದನ್ನೂ ಸೇರಿಸಿಯೇ ಬರೆದಿರುವೆ. ಅಭಿವೃದ್ಧಿ ಗೆ ವಿರೋಧವೆಂಬುದು ಈ ಲೇಖನದ ಆಶಯವೂ ಅಲ್ಲ. ಅದೊಂದು ಬಹಳ ಆಳ ಅಗಲಗಳಿರುವ ಚರ್ಚೆಯೆಂಬುದರ ಅರಿವಿರುವ ಕಾರಣದಿಂದಲೇ ಭಾವನೆಯ ಕೈಗೆ ಇಲ್ಲಿ ಲೇಖನಿ ಕೊಟ್ಟೆ ಅಷ್ಟೇ.

    ಅಭಿವೃದ್ಧಿ ಎಂಬುದು ಮಾನವ ಹುಟ್ಟುಹಾಕಿದ ಅಂತ್ಯವಿಲ್ಲದ ಸರಪಳಿ. ಇದನ್ನೆಲ್ಲ ಒಂದು ಕ್ಷಣಕ್ಕೆ ಪಕ್ಕಕ್ಕಿಟ್ಟು,
    ಹಿಮಾಲಯದ ಗರ್ಭವನ್ನೇ ಕೊರೆದ, ಅದನ್ನು ಅತ್ಯಾಧುನಿಕತೆಯಿಂದ ಸಿಂಗರಿಸಿ, ನಮ್ಮ ಬೆನ್ನು ತಟ್ಟಿಕೊಂಡು, ಅದರೊಳಗಿಂದ ಒಂದೆರಡಲ್ಲ, ಬರೋಬ್ಬರಿ 9 ಕಿಮೀ ಸಾಗಿದಾಗ, ಪರ್ವತಗಳು ಸಾಲಾಗಿ ಕೂತು ಬಿಕ್ಕಿದಂತೆ ಅನಿಸಿದ್ದು ಸುಳ್ಳಲ್ಲ. ಆ
    ದೃಷ್ಟಿಕೋನದಿಂದ ಹೊರಹೊಮ್ಮಿದ ಪಕ್ಕಾ ಭಾವನಾತ್ಮಕ ಲಹರಿಯದು, ಅಷ್ಟೇ. ಹಿಮಾಲಯದ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿರುವ ನನಗೆ, ನೀವು ಹೇಳಿದ ಎಲ್ಲ ವಿಚಾರಗಳ ಅರಿವಿದ್ದೂ ಹೊರಬಿದ್ದ ವಿಷಾದದ ನಿಟ್ಟುಸಿರು ಇದು.
    ಧನ್ಯವಾದಗಳು.
    ರಾಧಿಕಾ ವಿಟ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: