ಶಿಲಾತಪಸ್ವಿ ಡಾ ಶೀಲಾಕಾಂತ ಪತ್ತಾರ…

ಚಂದ್ರಶೇಖರ ಹೆಗಡೆ

ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಶಿಲೆಗಳೊಡನಾಡಿ ದಿವಂಗತ ಡಾ‌. ಶೀಲಾಕಾಂತ ಪತ್ತಾರರವರ ನುಡಿನಮನ ಸಭೆಯಲ್ಲಿ

ಯಾವುದೀ ಪ್ರವಾಹವು?
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು?

ಎಂಬ ಜಿ ಎಸ್ ಶಿವರುದ್ರಪ್ಪನವರ ಹಾಡನ್ನು ಮಹಾಂತೇಶ ಈಳಗೇರರವರು ಹಾಡುತ್ತಿರುವುದನ್ನು ಕೇಳಿ ಶಿಲಾತಪಸ್ವಿ ಡಾ. ಶೀಲಾಕಾಂತ ಪತ್ತಾರರವರ ನೆನಪುಗಳು ಅಲ್ಲಿದ್ದ ಎಲ್ಲರೆದೆಯೊಳಗೂ ಉಕ್ಕಿ ಬಂದವು.‌ ಈ ಹಾಡನ್ನು ಅಲ್ಲಿ ಹಾಡುವುದಕ್ಕೂ ಒಂದು ಕಾರಣವಿದೆ. ಈ ಗೀತೆ ಇತಿಹಾಸಕಾರರಾದ ಡಾ. ಶೀಲಾಕಾಂತ ಪತ್ತಾರರವರ ಅಚ್ಚುಮೆಚ್ಚಿನ ಗೀತೆಯಾಗಿದ್ದಲ್ಲದೇ ಈ ಹಾಡನ್ನು ಪದೇ ಪದೇ ಕೇಳಿ ತಲ್ಲೀನರಾಗಿ ಆನಂದಿಸುತ್ತಿದ್ದರೆಂಬ ಸಂಗತಿ ಹೊರಜಗತ್ತಿಗೆ ಅಷ್ಟಾಗಿ ತಿಳಿದಿಲ್ಲ.

ಈ ಹಾಡಿನಲ್ಲಿಯ ಗುಡಿ ಗೋಪುರ ಪ್ರತಿಮೆಗಳ ಸಾಲು, ಮುಖವಾಡ ತೊಟ್ಟ ಮನುಷ್ಯನ ಬಯಲಾಟ, ಸಿ. ಅಶ್ವಥ್ ಅವರ ರಾಗಸಂಯೋಜನೆ ಹೀಗೆ ಹಲವಾರು ಕಾರಣಗಳಿಂದಾಗಿ ಈ ಹಾಡು ಗುರುವರ್ಯ ಪತ್ತಾರರವರನ್ನು ಸೆಳೆದಿರಬಹುದು. ಆದರೆ ಇಂದು ಇದೇ ಹಾಡನ್ನು ಅವರ ಸಾವಿನ ಸಂದರ್ಭದಲ್ಲಿಟ್ಟು ಕೇಳಿದಾಗ ಹೊರಡುವ ಕರುಳು ಹಿಂಡುವ ಧ್ವನಿಯೇ ಕರುಣಾಜನಕ. ನಿಜ ಈಗ ಬಂದ ಪ್ರವಾಹವು ಇತಿಹಾಸಕಾರರು, ವಿದ್ವಾಂಸರು, ಕಲ್ಲೋಜ ಎಂಬ ಬಿರುದನ್ನು ಪಡೆದವರು ಎಂದು ಯಾರನ್ನೂ ಯಾವ ಪದವಿಯನ್ನೂ ನೋಡದೆ ಮನೆ ಮನಗಳನ್ನು ಕೊಚ್ಚಿಕೊಂಡು ಹೋಗುವುದರಲ್ಲಿಯೆ ಅನಭಿಷಕ್ತತೆಯನ್ನು ಮೆರೆಯುತ್ತಿರುವುದು ಕಾಲನ ಎಂತಹ ವ್ಯಂಗ್ಯವಾದ ಹಾಗೂ ಕ್ರೂರವಾದ ವರ್ತನೆ ಅಲ್ಲವೇ ? ವರ್ತಮಾನದ ತಲ್ಲಣಗಳನ್ನು ಅತ್ಯಂತ ವಿಕಟವಾಗಿ ಹಾಗೂ ಅಷ್ಟೇ ಪ್ರಖರವಾಗಿ ಪ್ರಕಟಿಸುತ್ತಿರುವ ಕವಿತೆಯ ಒಳನೋಟವು ಮೊನ್ನೆ ಅಕ್ಟೋಬರ್ ೨ ರಂದು ನಮ್ಮನ್ಮಗಲಿದ ನಾಡಿನ ಖ್ಯಾತ ಸಂಶೋಧಕರಾದ ಡಾ. ಶೀಲಾಕಾಂತ ಪತ್ತಾರರವರನ್ನು ತನ್ನಂತರಂಗದಲ್ಲಿ‌ ಸ್ಮರಿಸುವಂತಿರುವುದು ಕಾಕತಾಳೀಯವಾಗಿರಲಾರದು.

ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ರಕ್ಷಿಸಿ ಗೌರವಿಸಬೇಕು ಎಂದು ಹೇಳಿದ ಗಾಂಧೀಜಿಯವರ ಜಯಂತಿಯಂದೇ ಇತಿಹಾಸಕಾರರೂ, ಸಂಶೋಧಕರೂ, ಸಂಸ್ಕೃತಿ ಅಧ್ಯಯನಕಾರರಾಗಿ‌ ಮನೆಮಾತಾಗಿದ್ದ ಗುರುವರ್ಯ ಡಾ. ಶೀಲಾಕಾಂತ ಪತ್ತಾರರವರು ಅಗಲಿದ್ದು ನಾಡಿನ ಸಂಶೋಧನಾಕ್ಷೇತ್ರಕ್ಕೆ ಭರಿಸಲಾಗದ ನಷ್ಟ. ಕನ್ನಡ ಹಾಗೂ ಇಂಗ್ಲೀಷ ಭಾಷೆಗಳರಡರಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿರುವುದು ಅವರ ಪಾಂಡಿತ್ಯದ ಆಳಗಲಕ್ಕೆ ನಿದರ್ಶನ. ಬಾದಾಮಿ ಶಿಲ್ಪಕಾಶಿ, ಕರ್ನಾಟಕ ಸಾಂಪ್ರದಾಯಿಕ ಶಿಲ್ಪಕಲೆ, ಪಟ್ಟದಕಲ್ಲು ದರ್ಶನ, ಬಾದಾಮಿ ಚಾಲುಕ್ಯ ಶಿಲ್ಪಕಲೆ, ಬಾದಾಮಿ ಚಾಲುಕ್ಯರ ಅಲಂಕಾರ ಶಿಲ್ಪಗಳು, ದಿ ಸಿಂಗಿಂಗ್‌ ರಾಕ್ಸ್‌ ಆಫ್‌ ಬಾದಾಮಿ, ದಿ ವಿಶನ್‌ ಆಫ್‌ ಮೌನೇಶ್ವರ ಮೊದಲಾದ ಕೃತಿಗಳನ್ನು ರಚಿಸಿ ಕಲೆ, ಇತಿಹಾಸ ಹಾಗೂ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ʼಕಲ್ಲೋಜʼ ಇವರಿಗೆ ಸಲ್ಲಿಸಿದ ಅಭಿನಂದನಾ ಗ್ರಂಥದ ಹೆಸರು. ‘ಬಾದಾಮಿ; ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಲ್ಲಿಸಿ ಡಿ.ಲಿಟ್. ಪದವಿಯನ್ನು ಪಡೆದಿರುವ ವಿಶಿಷ್ಟ ಸಾಧನೆ ಗುರುಗಳಾದ ಡಾ. ಶೀಲಾಕಾಂತ ಪತ್ತಾರರವರದು. ಬಾದಾಮಿಯನ್ನು ಮೈಸೂರಿನಂತೆ ಸಾಂಸ್ಕೃತಿಕ ನಗರಿಯನ್ನಾಗಿ ಮಾಡಬೇಕೆಂಬ ಅವರ ಹಂಬಲ ಅದಮ್ಯವಾಗಿತ್ತಲ್ಲದೇ ಅದರ ಸಾಕಾರಕ್ಕಾಗಿ ಹಲವಾರು ಯೋಜನೆಗಳನ್ನೂ ಹಾಕಿಕೊಂಡಿದ್ದರು.

ಪ್ರಯಾಣಿಕರಿಲ್ಲದೆ ಸೊರಗುತ್ತಿರುವ ಕುದುರೆಗಾಡಿ ಸಾರಥಿಗಳಿಗೆ ತಮ್ಮ ರಥವನ್ನು ಚಾಲುಕ್ಯರ ರಾಜಧಾನಿ ಬಾದಾಮಿಯ ಇತಿಹಾಸ ಹಾಗೂ ಪರಂಪರೆಗೆ ತಕ್ಕಂತೆ ಹೇಗೆ ಉನ್ನತೀಕರಿಸಿಕೊಳ್ಳಬೇಕು, ರಥಿಕರೂ ರಾಜಪರಂಪರೆಗೆ ಹೊಂದುವಂತೆ ಹೇಗೆ ತಮ್ಮ ವೇಷಭೂಷಣಗಳನ್ನು ಬದಲಾಯಿಸಿಕೊಂಡು ಅಪರೂಪದ ವೈಭವೋಪೇತ ಪ್ರಯಾಣಕ್ಕೆ ಪ್ರಯಾಣಿಕರನ್ನು ಆಕರ್ಷಿಸಬೇಕು ಎಂಬುದರ ತರಬೇತಿಯನ್ನು ಹಮ್ಮಿಕೊಂಡಿದ್ದರು.‌ ಆ ಮೂಲಕ ಪ್ರವಾಸಿಗರೆಲ್ಲರಿಗೂ ಇಲ್ಲಿಯ ಕಲೆ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಗಳ ಪರಿಚಯವನ್ನು ಮಾಡಿಕೊಡುವುದರ ಜೊತೆಗೆ ಟಾಂಗಾ ಚಾಲಕರ ಬದುಕನ್ನೂ ಉದ್ಧರಿಸಬೇಕೆನ್ನುವ ದೂರದೃಷ್ಟಿಯ ಯೋಜನೆಯನ್ನು ಜಾರಿಗೆ ತಂದಿದ್ದರು.

ನಂತರ ಟಾಂಗಾ ಚಾಲಕರ ನಿರಾಸಕ್ತಿಯೋ ಅಥವಾ ಪ್ರಯಾಣಿಕರ ನಿರುತ್ಸಾಹವೋ ಈ ಯೋಜನೆ ಅಷ್ಟೊಂದು ಸಫಲವಾಗಲಿಲ್ಲ ಎಂಬ ಕೊರಗು ಡಾ. ಶೀಲಾಕಾಂತ ಪತ್ತಾರರವರನ್ನು ಕೊನೆಯವರೆಗೂ ಕಾಡಿತ್ತು. ನಾವು ನಿರ್ಲಕ್ಷ್ಹದಿಂದ ಕಾಣುವ ಕನಿಷ್ಠ ಶಿಲೆಯನ್ನೂ ಮಾತನಾಡಿಸಿ ಇತಿಹಾಸವನ್ನು ಕೆದಕುವ ಅವರಲ್ಲಿನ ಸಂಶೋಧಕ ಪ್ರಜ್ಣೆಯು ಬಾದಾಮಿ, ಐಹೊಳೆ, ಪಟ್ಡದಕಲ್ಲು ಮುಂತಾದ ಈ ಭಾಗದ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಕುರಿತಾದ ನಾಡವರ ನಿರಭಿಮಾನವನ್ನು ದೂರವಾಗಿಸಿ, ಅವರಲ್ಲಿ ಐತಿಹಾಸಿಕ ಪ್ತಜ್ಞೆಯನ್ನು ಜಾಗೃತಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿ.ಎಂ.ಶ್ರೀಯವರು ವಿಜಯಪುರದಲ್ಲಿಳಿದ ತಕ್ಷಣ ವಚನಗುಮ್ಮಟವಾಗಿದ್ದ ಡಾ. ಫ. ಗು. ಹಳಕಟ್ಟಿಯವರನ್ನು ಭೇಟಿಯಾದಂತೆ, ಬಾದಾಮಿಗೆ ಬರುವ ವಿದೇಶಿಗರಾಗಲಿ, ನಾಡಿನ, ರಾಷ್ಡ್ರದ ಪ್ರಮುಖ ವ್ಯಕ್ತಿಯೇ ಆಗಲಿ ಅವರು ಮೊದಲು ದರ್ಶನ ಮಾಡುತ್ತಿದ್ದುದು ಇದೇ ಕಲ್ಲೋಜ ಡಾ. ಶೀಲಾಕಾಂತ ಪತ್ತಾರರವರನ್ನು ಎಂಬುದು ಬಹುಜನರಿಗೆ ತಿಳಿಯದ ವಿಷಯ. ಹೇಗೆ ಗಾಂಧೀಜಿಯವರಿಗೆ ವೈಷ್ಣವ ಜನತೋ ತೇನೇ ಕಹಿಯೇ ಜೆ ಅವರಿಗಿಷ್ಡವಾಗಿದ್ದ ಗೀತೆಯಾಗಿತ್ತೋ ಹಾಗೆ ಡಾ. ಶೀಲಾಕಾಂತ ಪತ್ತಾರರವರಿಗೆ ರಾಷ್ಟ್ರಕವಿ ಜಿ.ಎಸ್ ಎಸ್ ರವರ ಈ ಗೀತೆ ಬಹಳ ಅಚ್ಚುಮೆಚ್ವಿನದಾಗಿತ್ತು.

ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆಗಳು ತೇಲುತಿವೆ
ದೀಪವಾರಿ, ತಂತಿ ಹರಿದು
ವಾದ್ಯವೃಂದ ನರಳುತಿದೆ
ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಮುರಿದಿವೆ

ಹೌದು. ಗೀತೆಯೇ ರಾಗಿಸುವಂತೆ ಡಾ. ಶೀಲಾಕಾಂತರವರಂತಹ ಗುಡಿಗೋಪುರದ ಮೇರುವ್ಯಕ್ತಿತ್ವಗಳು ಉರುಳುತಿರುವ ದುರಂತ ಕಾಲವಿದು. ಇಂತಹ ಸೂತಕದ ನೆರಳಿನಲ್ಲಿ ಯಾವ ವಾದ್ಯವೃಂದವು ತಾನೇ ನರಳಲಾರದೇ ಹಾಡೀತು ? ಯಾವ ತಂತಿಯ ಕೊರಳು ತಾನೇ ಬಿಕ್ಕಳಿಸದೇ ಇದ್ದೀತು ? ಇಂತಹ ವಿದ್ವಾಂಸರೊಂದಿಗಿನ ಈ ಜಗದ ಸಂವಹನದ ಸೇತುವೆಗಳನ್ನು ಮುರಿದು ಹಾಕಿದ ವಿಧಿಯನ್ನು ಅದೆಷ್ಟು ಶಪಿಸಿದರೂ ಸಾಲದು ಎನ್ನುವುದನ್ನ ಕವಿತೆ ಹೇಗೆ ತಣ್ಣಗೆ ಪಿಸುಗುಡುತ್ತಿದೆ ಎಂಬುದನ್ನು ಗಮನಿಸಿ.

ಭಯ-ಸಂಶಯ- ತಲ್ಲಣಗಳ
ಕಂದರಗಳು ತೆರೆದಿವೆ
ಮುಖ ಮುಖವೂ ಮುಖವಾಡವ
ತೊಟ್ಟು ನಿಂತ ಹಾಗಿದೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ

ಡಾ. ಶೀಲಾಕಾಂತರ ಭೌತಿಕ ಕಣ್ಮರೆಯಿಂದ ಸಂಶೋಧನಾಕ್ಷೇತ್ರದ ಕುರಿತಾದ ಭವಿಷ್ಯದ ತಲ್ಲಣ- ಸಂಶಯಗಳು ಬಾಯಿ ತೆರದು ಕಾಯುವಂತಾಯಿತು. ಹೆಸರಿಗೆ ತಕ್ಕಂತೆ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಪಾಲಿಸಿ ಶೀಲದಲ್ಲಿಯೂ ಕಾಂತಿಯುಕ್ತರಾಗಿದ್ದ ಡಾ. ಶೀಲಾಕಾಂತ ಪತ್ತಾರರವರು ಈ ಭಾಗದ ಐತಿಹಾಸಿಕ ಪರಂಪರೆಯನ್ನು ಶೋಧಿಸಿ ಕಟ್ಡಿದವರು. ಗುರುವರ್ಯರನ್ನು ಹೊತ್ತೊಯ್ದ ವಿಧಿಯ ವರ್ತನೆಯಲ್ಲಿ ಹೃದಯ ಕಾಣದಾಗಿರುವುದು ಅದರ ವಿದ್ರೋಹದ ಗುಣವನ್ನು ಬಯಲು ಮಾಡಿದೆ.

ಸುಧಾ ಆಡುಕಳರವರು ಕನ್ನಡಕ್ಕೆ ಅನುವಾದಿಸಿರುವ. ಎಮಿಲಿ ಡಿಕನ್ಸನ್ ಳ ಕವಿತೆಯ ಸಾಲುಗಳಿವು
( ಕೃಪೆ : ಅವಧಿ ಮ್ಯಾಗಜೀನ್)

ಕರುಣೆಯಿಂದಲೇ ಸಾವಿನ ಬಂಡಿ ನನ್ನೆದುರು ಬಂದು ನಿಂತಿತು
ಯಾಕೆಂದರೆ ನಾನು ಸಾವಿಗಾಗಿ ಎಂದೂ ಕಾಯುತ್ತಿರಲಿಲ್ಲ
ಇಬ್ಬರೂ ಗಾಡಿಯೇರಿ ನಡೆದೆವು… ನಾನು ಮತ್ತು ಸಾವು!….
ಸಾವಿನ ಒಳ್ಳೆಯತನಕ್ಕೆ ಕರಗಿಹೋಗಿ ಗೆಳೆತನ ಮಾಡಿಬಿಟ್ಟೆ

ಈ ಕವಿತೆ ಶೀಲಾಕಾಂತ ಪತ್ತಾರರವರು ವಿಧಿವಶರಾಗಿರುವ ಈ ಸಂದರ್ಭಕ್ಕೂ ಮಾರ್ಮಿಕವಾಗಿ ಅನ್ವಯವಾಗುತ್ತಿರುವುದು ಸೋಜಿಗವನ್ನುಂಟು ಮಾಡುತ್ತದೆ. ಏಕೆಂದರೆ ಪತ್ತಾರ ಗುರುಗಳು ಡಿಕನ್ಸನ್ ಳಂತೆ ಎಂದೂ ಸಾವಿಗಾಗಿ ಕಾದವರಲ್ಲ. ಸಾವು ಅವರನ್ನು ಆವರಿಸಿಕೊಳ್ಳುವ ಸಂದರ್ಭದಲ್ಲಿಯೂ ಅವರು ಒಂದು ಮಹತ್ವದ ಗ್ರಂಥದ ಬರವಣಿಗೆಯಲ್ಲಿ ತೊಡಗಿದ್ದರೆಂಬುದು ಅವರ ಅದಮ್ಯ ಶೋಧನೆಯ ಜೀವನಪ್ರೀತಿ ಹಾಗೂ ಕರ್ತೃತ್ವ ಶಕ್ತಿಯನ್ನು ದರ್ಶಿಸುವಂತೆ ಮಾಡುತ್ತದೆ. ಇದೇ ಕವಿತೆಯ ಮುಂದುವರಿದ ಭಾಗವನ್ನು ಗಮನಿಸಿ-

ಮಾಡಿನವರೆಗೂ ಹೂತುಹೋದ ಮನೆಯೆದುರು ಬರೆದಿತ್ತು
‘ಇವು ಶತಮಾನಗಳು’
ಶತಮಾನವೀಗ ದಿನಕ್ಕಿಂತಲೂ ಕಡಿಮೆ ಅನಿಸಿತು

ನಿಜ. ನಿರಂತರವಾಗಿ ತಮ್ಮನ್ನು ಒಂದಿಲ್ಲೊಂದು ಸಂಶೋಧನೆ ಹಾಗೂ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ ಗುರುವರ್ಯ ಡಾ. ಶೀಲಾಕಾಂತರವರಿಗೆ ಶತಮಾನದಂತಹ ವ್ಯಾಪಕ ಕಾಲಜಾಲವೂ ಕ್ಷಣಿಕವೆಂದೆನಿಸಿರುವುದರಲ್ಲಿ ಅಚ್ಚರಿಯೇನಿಲ್ಲ. ಹೊರಗೆ ಹೊರಟರೆ ಸಾಕು, ಹೆಗಲಲ್ಲೊಂದು ಸದಾ ನೇತಾಡುವ ಬಟ್ಟೆಯ ಚೀಲ, ಗರಿಗರಿಯಾಗಿ ಎಣ್ಣೆಯಲ್ಲಿ‌ ನೆನೆಸಿ ಬಾಚಿದ ಬೆಳ್ಳಿತಂತಿಯಂತಹ ಕೇಶರಾಶಿಯ ಶಿಸ್ತಿನ ಬೈತಲೆ, ಸಲೀಸಾಗಿ ಹಗುರ ಹೆಜ್ಜೆಗಳನಿಟ್ಟು ಸಾಗುವ ಗಂಭೀರವಾದ ನಡಿಗೆ, ಅಷ್ಟೇ ಘನಗಾಂಭೀರ್ಯದ ವದನಾರವಿಂದ, ಸಡಿಲವಾಗಿ ಮೈಗೆ ಹೊಂದುವ ಸರಳ ಅಂಗಿ, ಅದಕ್ಕೆ ಜೊತೆಯಾಗುವ ಪ್ಯಾಂಟು, ಇವಿಷ್ಟು ಡಾ.. ಪತ್ತಾರರವರ ಸರಳ ಬದುಕಿನ ವೇಷಭೂಷಣಗಳು.

ಇತಿಹಾಸ ಹಾಗೂ ಸಂಶೋಧನೆಯ ಮೇಲೆ ನೂರಾರು ಉಪನ್ಯಾಸಗಳನ್ನು ನೀಡಿ ನಾಡಿನಾದ್ಯಂತ ಸಂಚಿರಿಸುತ್ತಿದ್ದ ಗುರುವರ್ಯರು ಅಕ್ಷರಶಃ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ವಿಶ್ವಕೋಶವೇ ಆಗಿದ್ದರು. ಉಪನ್ಹಾಸವಿರಲಿ ಅತಿಥಿ ಭಾಷಣವಿರಲಿ ಅಥವಾ ಅಧ್ಯಕ್ಷತೆಯ ಗೌರವವಿರಲಿ ಯಾವ ಪಾತ್ರವಿದ್ದರೂ, ಓಡಾಟಕ್ಕೆ ಮಾತ್ರ ಸಾರ್ವಜನಿಕ ವಾಹನಗಳನ್ನೇ ನೆಚ್ಚಿಕೊಂಡಿದ್ದ ಸರಳಾತಿಸರಳ, ವಿರಳಾತಿವಿರಳ ಅಪರೂಪದ ವ್ಯಕ್ತಿತ್ವ ಗುರುಗಳದು. ಕಾಲವನ್ನೇ ಹಿಂದಿಕ್ಕುವುದರಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದ ಗುರುಗಳ ಸಮಯಪ್ರಜ್ಞೆ ಆದರ್ಶಪ್ರಾಯವಾಗಿತ್ತು. ಅವರ ನಂತರ ಮುಂದೇನು ಎಂಬುದರತ್ತ ಒಂದು ಕ್ಷಣ ಚಿತ್ತಗೊಟ್ಟರೆ ಎದೆಯ ಮುಂದೆ ಸಿಡಿಲು ಬಡಿದ ಹಾಗೆ ಶೂನ್ಯವೊಂದು ಆವರಿಸಿಕೊಂಡುಬಿಡುತ್ತದೆ.

‍ಲೇಖಕರು Admin

October 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: