ಕಬ್ಬಿಣ ಕಾಂತವಾಗುವ ಕಥಾಹಂದರದ ಕಾಂತಾರ…

ಗೊರೂರು ಶಿವೇಶ್

ಸ್ಟಾರ್ ನಟರಿಲ್ಲದೆ ದುಬಾರಿ ವೆಚ್ಚವಿಲ್ಲದೆ ,ಪ್ಯಾನ್ ಇಂಡಿಯಾ ಕಲ್ಪನೆ ಇಲ್ಲದೆ, ಜನಪ್ರಿಯ ಕನ್ನಡದ ದಾಟಿಯನ್ನು ಬಿಟ್ಟು ಪ್ರಾದೇಶಿಕ ಕರಾವಳಿ ಭಾಷೆಯನ್ನು ಬಳಸಿ ಕನ್ನಡ ಚಿತ್ರ ಒಂದು ಹೆಸರು ಮಾಡಿರುವುದು ಅಷ್ಟೇ ಅಲ್ಲದೆ ಬಿಡುಗಡೆಯಾದ ಒಂದೇ ವಾರಕ್ಕೆ ಸುಮಾರು 50 ಕೋಟಿಯ ಬಳಿಗೆ ಬಂದು ನಿಂತು ನೂರು ಕೋಟಿ ದಾಟುವ ವರ್ಷದ ಮತ್ತೊಂದು ಚಿತ್ರವಾಗುವ  ಸುದ್ದಿ ಮಾಡುತ್ತಿದೆ . ಬುಕ್‌ಮೈಶೋನಲ್ಲಿ ಚಿತ್ರಗಳ ಟಿಕೆಟ್ ಬಿಸಿ ದೋಸೆಯಂತೆ ಖರ್ಚಾಗುವುದು ಅಷ್ಟೇ ಅಲ್ಲ ಇದುವರೆಗಿನ ಚಿತ್ರಗಳ ರೇಟಿನಲ್ಲಿ ಶೇಕಡ 99 ಅನ್ನು ದಾಖಲಿಸಿದ ಮೊಟ್ಟಮೊದಲ ಚಿತ್ರವೆಂಬ ಖ್ಯಾತಿಗೂ ಅದು ಪಾತ್ರವಾಗಿದೆ ಅದುವೇ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ.

ಕಾಂತಕ್ಷೇತ್ರ ,ಕಾಂತತ್ವ ಪ್ರೌಢಶಾಲೆಯವರಗೆ ವಿಜ್ಞಾನವನ್ನು ಅಧ್ಯಯನ ಮಾಡಿರುವ ಯಾವುದೇ ವಿದ್ಯಾರ್ಥಿಗೆ ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗೆ ಚೆನ್ನಾಗಿ ಪರಿಚಯವಿರುವ ಅಯಸ್ಕಾಂತಕ್ಕೆ ಸಂಬಂಧಿಸಿದ ಎರಡು ಪದಗಳು. ಇಂಗ್ಲಿಷ್ ನಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ ಮತ್ತು ಮ್ಯಾಗ್ನೆಟಿಸಂಗೆ ಸಮವಾದ ಸಂಸ್ಕೃತದ ಮೂಲದಿಂದ ಆಯ್ಕೆ ಮಾಡಿದ ಪದಗಳಿವು. ನೈಸರ್ಗಿಕವಾಗಿ ದೊರೆಯುವ ಅಯಸ್ಕಾಂತದಿಂದ ಉಕ್ಕಿನ ಮೊಳೆಯನ್ನು ಅಥವಾ ಉಕ್ಕಿನ ಸರಳನ್ನು ಉಜ್ಜಿದಾಗ ಅದು ತಾತ್ಕಾಲಿಕ ಕಾಂತವಾಗಿ ಮಾರ್ಪಡುತ್ತದೆ .ಮುಂದುವರೆದು ಸ್ಥಾಯಿ    ವಿದ್ಯುತ್ ಎಂದು ಕರೆಯಲ್ಪಡುವ ಸ್ಟಾಟಿಕ್ ಎಲೆಕ್ಟ್ರಿಸಿಟಿಯಲ್ಲಿ ಎಲೆಕ್ಟ್ರೋ ಮ್ಯಾಗ್ನೆಟ್ ಎಂಬ ಪದವು ವಿದ್ಯುತ್ತನ್ನು ಹರಿಸುವುದರ ಮೂಲಕ ಉಕ್ಕು ಕಾಂತವಾಗಿ ಮಾರ್ಪಡುವುದನ್ನು ಕೂಡ ವಿವರಿಸುತ್ತದೆ. ಇರಲಿ ಉದ್ದೇಶ ಅದಲ್ಲ ಸಾಧಾರಣ ಕಬ್ಬಿಣ ಕೂಡ ಅಯಸ್ಕಾಂತದ ಸಂಪರ್ಕಕ್ಕೆ ಬಂದು ಅಯಸ್ಕಾಂತವಾಗಿ ಮಾರ್ಪಡುವುದು ಒಂದು ಅಂಶವಾದರೆ ಮತ್ತೊಂದು ಅಂಶ ಈ ಅಯಸ್ಕಂತವು ತನ್ನ ನಿರ್ದಿಷ್ಟ ವ್ಯಾಪ್ತಿಯಲ್ಲಿ ಅಥವಾ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನ ಬೀರುವುದು ಮತ್ತು ಆ ಪ್ರಭಾವಲಯದೊಳಗೆ ಬಂದ ಕಾಂತಿಯ ವಸ್ತುಗಳು ಅದರ ಪ್ರಭಾವಕ್ಕೆ ಒಳಗಾಗುವುದು ಇದನ್ನು ಕಾಂತಕ್ಷೇತ್ರ ಎನ್ನಲಾಗುತ್ತದೆ. ಪ್ರೌಢ ಶಾಲೆಯಲ್ಲಿ ಇದನ್ನು ಪ್ರಯೋಗಗಳ ಮೂಲಕ ಕೂಡ ತೋರಿಸಲಾಗುತ್ತದೆ. ಇನ್ನು ಸಾಹಿತ್ಯಕವಾಗಿ ಹೇಳುವುದಾದರೆ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ  ಕೂಡ ಆದರ್ಶ ಗುಣಗಳುಳ್ಳ ಅಸಮಾನ್ಯರ ಸಂಪರ್ಕಕ್ಕೆ ಬಂದ ಜನಸಾಮಾನ್ಯರು ಆ ಗುಣಗಳನ್ನು ಪಡೆಯುತ್ತಾ ಹೋಗುವುದನ್ನು ತಿಳಿಸುತ್ತಾ ಹೋಗುವ ಒಂದು ಅದ್ಭುತ ಕೃತಿ . ಅದೇ ರೀತಿ ಚಿತ್ರದಲ್ಲೂ ಕಾಡನ್ನು ಕಡಿಯುವ ಕಾಡುಪ್ರಾಣಿಗಳನ್ನು ಬೇಟೆಯಾಡುವ ವ್ಯಕ್ತಿ ಒಬ್ಬ ಮುಂದೆ ಕಾಡನ್ನು ಸಂರಕ್ಷಿಸುವ ದೈವವಾಗಿ ಮಾರ್ಪಡುವುದು ಚಿತ್ರದ ವಿಶೇಷವಾಗಿ ಮೂಡಿ ಬಂದಿದೆ.

ಕಾಂತರಾ ಪದದ ಹಿನ್ನೆಲೆ ಕಾಡು ಎಂಬ ಪದದಿಂದ ಬಂದಿದೆ ಎಂದೂ, ಇದೊಂದು ನಿಗೂಢ ಕಾಡಿನ ಹಿನ್ನೆಲೆ ಹೊಂದಿದ ಕಥೆಗಳ ಚಿತ್ರ. ಹಾಗಾಗಿ ಇದೊಂದು ದಂತಕತೆಯೆಂದು   ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂತಹ ಕಟ್ಟು ಕಥೆಗಳು ಮುಂದೆ ಜನಪದ ಕಥೆಗಳಾಗಿ ಮಾರ್ಪಡುತ್ತವೆ. ಈ ಚಿತ್ರವನ್ನು ರಚಿಸಿ ನಿರ್ದೇಶಿಸಿರುವ ರಿಷಭ್ ಶೆಟ್ಟಿ ತಮ್ಮ ಹಿಂದಿನ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರದ ಮೂಲಕ ಕರಾವಳಿ ಕರ್ನಾಟಕದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕನ್ನಡ ಶಾಲೆಗಳ ಪುನರುತ್ಥಾನದ ಕುರಿತು ಚರ್ಚಿಸಿದರೆ ಇಲ್ಲಿ  ಈ ಚಿತ್ರ ಕರಾವಳಿ ಪ್ರದೇಶದ ಸಂಸ್ಕೃತಿ ಜನಪದ ಹಿನ್ನೆಲೆ ಹಾಗೂ ಆಚರಣೆಯ ಹಿನ್ನೆಲೆಯಲ್ಲಿ ಕಾಡು ಮತ್ತು ಮನುಷ್ಯರ ನಡುವಿನ ಸಾವಯವ ಸಂಬಂಧ  ಕುರಿತಾಗಿ ಹೇಳಿದ್ದಾರೆ.

ಮಲೆನಾಡು ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡವನ್ನು ಒಳಗೊಂಡ ಕರಾವಳಿ ಹಿನ್ನೆಲೆಯ ಜನಪದ ಬದುಕನ್ನು ಕಟ್ಟಿಕೊಟ್ಟಿರುವ ಈ ಚಿತ್ರ ವಿಶ್ವದ ಎಲ್ಲಾ ಸಂಸ್ಕೃತಿಗಳು ಈ ರೀತಿಯ ಆಚರಣೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಅಳವಡಿಸಿಕೊಂಡಿರುವುದರಿಂದ ಇದು ಎಲ್ಲರಿಗೂ ರುಚಿಸುತ್ತದೆ ಎಂದು ಚಿತ್ರದ ಪ್ರೋಮೊನಲ್ಲಿ ಹೇಳಿಕೊಂಡಿತ್ತು. ಚಿತ್ರವನ್ನು ವೀಕ್ಷಿಸಿದವರಿಗೆ ಕರಾವಳಿ ಹಿನ್ನಲೆಯ ಕ್ರೀಡೆಗಳಾದ ಕಂಬಳ, ಕೋಳಿಯಂಕ ಮತ್ತು ಅವರು ನಂಬುವ ದೈವಗಳು, ಪಂಜುರ್ಲಿ ಕುರಿತಾದ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕಾಗಿ ವಿಶೇಷವೆನಿಸುತ್ತದೆ . ಆಯಾ ಪ್ರದೇಶದ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆಯನ್ನು ಹೊಂದಿದ ಅರೆ ಮಲೆನಾಡು ಸಂಸ್ಕೃತಿಯನ್ನು ಬಿಂಬಿಸಿದ್ದ ಭೂತಯ್ಯನ ಮಗ ಅಯ್ಯು ಹಳೆ ಮೈಸೂರು ಪ್ರಾಂತ್ಯದ ಅದರಲ್ಲೂ ಮಲೆ ಮಾದೇಶ್ವರ ಹಿನ್ನೆಲೆಯ ಜನುಮದ ಜೋಡಿ ನಂತರ ಬಹಳ ವರ್ಷಗಳ ನಂತರ ಕಾಂತಾರ ಚಿತ್ರ ಬಿಡುಗಡೆಯಾಗಿ ಅದೇ ಮಟ್ಟದ ಯಶಸ್ಸನ್ನು ಪಡೆಯುವತ್ತ ಮುನ್ನುಗುತಿದೆ.

ಚಿತ್ರದ ಕಾಲಘಟ್ಟ 3 ಹಂತದಲ್ಲಿ ಇದ್ದು ಮೊದಲ ನೂರು ವರ್ಷಗಳ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿರುವ  ಕಾರಣ ಚಿತ್ರಕೊಂದು  ಓಟ ದಕ್ಕಿದೆ. ತನ್ನ ನೆಮ್ಮದಿಗಾಗಿ ಭೂಮಿಯನ್ನು ಬಿಟ್ಟು ಕೊಡುವ ವಾಗ್ದಾನ ಮಾಡುವ ಧಣಿ ಅಂತೆಯೇ ಭೂದಾನ ಮಾಡಿ ನೆಮ್ಮದಿ ಪಡೆಯುತ್ತಾನೆ. ಆದರೆ ಅವರ ಮುಂದಿನ ತಲೆಮಾರಿನವರು ಈ ರೀತಿ ಕೊಟ್ಟ ಭೂಮಿಯನ್ನು ಹಿಂಪಡೆಯಲು ನಡೆಸುವ ಹುನ್ನಾರ ಮುಂದಿನ ಕಥಾ ಭಾಗ.

ಭೂತಾರಾದನೆ ಮತ್ತು ಭೂತಕೋಲ ಹಿನ್ನೆಲೆಯ ಚಿತ್ರದ ನಾಯಕ ದೈವ ನರ್ತಕ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು ಮತ್ತು ಅವರು ನಂಬುವ ದೈವ ಪಂಜುರ್ಲಿ ಬಡತನ ಮತ್ತು ಸಿರಿತನರ ನಡುವೆ ಸಂಬಂಧ ಕಲ್ಪಿಸುವ ಶಕ್ತಿಯಾಗಿದೆ. ಪ್ರಕೃತಿ ಮತ್ತು ಪುರುಷರ ನಡುವೆ ಸಮನ್ವಯತೆಯ ರೂಪವಾಗಿ ಎರಡನ್ನು ಕಾಪಾಡುತ್ತದೆ. ಹಾಗಾಗಿ ಪಂಜುರ್ಲಿ ಇಲ್ಲಿ ಕಾಡಿನ ನಿಗೂಢತೆಯ ಸಂಕೇತವಾಗಿದೆ.

ದೈವ ನರ್ತಕ ಕುಟುಂಬದ ಹಿನ್ನೆಲೆಯಿಂದ ಬಂದರೂ ನಾಯಕ ಈಗಾಗಲೇ  ಧೂಮಪಾನ ಕುಡಿತ ಜೂಜು, ಬೇಟೆ ಹೀಗೆ ಹತ್ತು ಹಲವು ವ್ಯಸನಗಳಿಂದ ಕೂಡಿದ್ದರೂ ಆತ ದಣಿಗಳ ಸಮಾಜ ವಿರೋಧಿ ಚಟುವಟಿಕೆಗಳಿಗೆ ಆತ ಸಹವರ್ತಿ ಅವರೆಲ್ಲ ಚಟುವಟಿಕೆಗಳ ಸಹಚರ.ಆಗಾಗ್ಗೆ  ಕನಸಿನಲ್ಲಿ ಮತ್ತು ಕಾಡಿನಲ್ಲಿ ಆತನಿಗೆ ಆಗುವ ಅತಿಂದ್ರಿಯ ಅನುಭವಗಳನ್ನು ಆತ ಬಿಡಿಸಿ ಹೇಳಲಾರ. ಕಾಡಿನ ಒತ್ತುವರಿಯನ್ನು ಬಿಡಿಸಲು ಬರುವ ಫಾರೆಸ್ಟ್ ಆಫೀಸರ್ ಹಾಗೂ ನಾಯಕ ಶಿವಣ್ಣನ ನಡುವೆ ನಡೆಯುವ ಹೋಯ್ ಕೈಗಳೇ ಚಿತ್ರದ ಮೊದಲಾರ್ಧವಾಗಿದ್ದು ಅಹಂನ ಸುತ್ತಲೂ ಸುತ್ತುವ ಮಲಯಾಳಂನ ಅನೇಕ ಚಿತ್ರಗಳನ್ನು ನೆನಪಿಸುತ್ತದೆ.

ಒಮ್ಮೆ ಕಾಡಿನೊಳಗೆ ಸಂಚರಿಸುವಾಗ ಪಂಜುರ್ಲಿಯ ಕಾಂತ ಕ್ಷೇತ್ರದೊಳಗೆ ನಾಯಕ ಪ್ರವೇಶಿಸಿದಾಗ ಅವನಿಗಾಗುವ ಅತೀಂದ್ರಿಯ ಅನುಭವಗಳ ಡ್ರೋನ್ ಶಾಟ್‌ನ ಚಿತ್ರೀಕರಣ  ಗಮನಿಸಿದಾಗ ಅದು ಕಾಂತಕ್ಷೇತ್ರದ ರೀತಿ ಭಾಸವಾಗುವ ಚಿತ್ರಣ ಮಾಡುವುದರ ಮೂಲಕ ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ಆ ಕ್ಷೇತ್ರದೊಳಗೆ ಪ್ರವೇಶಿಸಿದೊಡನೆ ತಾನು ದೈವಿಕ ಗುಣಗಳನ್ನು ಪಡೆಯುವ ಈ ಅಂಶ ಇತ್ತೀಚೆಗೆ ಕರಾವಳಿ ಹಿನ್ನೆಲೆಯಿಂದ ಬಂದ ಬಹುತೇಕ ನಟರು ನಿರ್ದೇಶಕರು ಅಲ್ಲಿನ ಕಂಬಳ, ಹುಲಿ ಕುಣಿತ, ಕೋಳಿ ಅಂಕ, ಅಲ್ಲಿನ ದೈವರಾದನೆ ಇವುಗಳನ್ನು ತಮ್ಮ ಚಿತ್ರದಲ್ಲಿ ಪ್ರತಿಬಿಂಬಿಸಿ ಜನಪ್ರಿಯಗೊಳಿಸಿರುವಂತೆ ಇಲ್ಲಿಯೂ ಕೂಡ ಅದನ್ನು ಸಮರ್ಥವಾಗಿ ಹಿಡಿದಿಡಲಾಗಿದೆ.

ಚಿತ್ರದಲ್ಲಿ ಮೆಚ್ಚಬೇಕಾದ ಅಂಶಗಳೆಂದರೆ ಹೊಂಬಾಳೆಯಂಥ ದೊಡ್ಡ ಬ್ಯಾನರ್ ನ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನಾಗಿಸಲು ಅನೇಕ ನಿರ್ದೇಶಕರು ತೆಲುಗಿನ ಹೀರೋಯಿನ್ ತಮಿಳಿನ ಕಮಿಡಿಯನ್ ಹಿಂದಿಯ ವಿಲನ್ ಎಲ್ಲ ಭಾಷೆಗಳಿಗೂ ಸಲ್ಲುವ ಡಾನ್ಸರ್ ಗಳನ್ನು ಕರೆತಂದು ದೊಡ್ಡ ಬಜೆಟ್ ನ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ದುಡ್ಡನ್ನು ದೋಚಲು ಹೊರಟ ಅನೇಕ ನಿರ್ಮಾಪಕರಿಗೆ ಮಾದರಿಯಾಗುವಂತೆ ಈ ಚಿತ್ರದಲ್ಲಿ ಸ್ಥಳೀಯ ಅದರಲ್ಲೂ ಕರಾವಳಿ ಹಿನ್ನೆಲೆಯ ಕಲಾವಿದರನ್ನು ಈ ಚಿತ್ರದಲ್ಲಿ  ಬಳಸಿರುವುದು ತಮ್ಮ ಎರಡು ಚಿತ್ರದಲ್ಲಿ ಕರಾವಳಿಯ ಅಪ್ಪಟ ಭಾಷೆಯನ್ನೇ ಸಿನಿಮಾ ಭಾಷೆಯಾಗಿ ಬಳಸಿರುವುದು ಪ್ರಯೋಗದ  ಹಾಗೂ ಚಿತ್ರದ ಧನಾತ್ಮಕ ಅಂಶವಾದರೂ ಇತ್ತೀಚೆಗೆ ಬರುತ್ತಿರುವ ಎಲ್ಲಾ ಈ ಕರಾವಳಿ ಹಿನ್ನೆಲೆಯ ನಿರ್ದೇಶಕರು ಅದೇ ಅದೇ ನಟರುಗಳನ್ನು ಬಳಸಿಕೊಳ್ಳುತ್ತಿರುವುದು ಇಂಥ ಪ್ರಾದೇಶಿಕ ಹಿನ್ನೆಲೆಯ ಚಿತ್ರಗಳಿಗೆ ಸರಿಯನ್ನಬಹುದಾದರು ಹರಿಕಥೆ ಅಲ್ಲ ಗಿರಿಕಥೆ ಅಂತಹ ಚಿತ್ರಗಳಿಗೆ ಬೇರೆ ನಟರುಗಳನ್ನು ಪ್ರಯತ್ನಿಸಬಹುದಿತ್ತು ಎನ್ನಿಸದಿರಲಾರದು.

ವೇಗವಾಗಿ ಮಾತನಾಡಿದಾಗ ದಕ್ಷಿಣ ಕನ್ನಡದ ಭಾಷೆಯನ್ನು ಅನುಸರಿಸುವುದು ಕೂಡ ತುಸು ಕಷ್ಟ. ತುಳು ಭಾಷೆ  ಮಿಶ್ರಿತ ಪಾಡ್ದನಗಳನ್ನು  ಕನ್ನಡದಲ್ಲಿ ಅಡಿಭಾಷೆಯಾಗಿ ತೋರಿಸಿದರಾದರು ಸಿಂಗಲ್ ಥಿಯೇಟರ್ ಗಳಲ್ಲಿ ಅದು ಸ್ಕ್ರೀನ್ ಇಂದ ಕೆಳಗೆ ಜಾರಿ ಓದಿಕೊಳ್ಳಲು ಅದು ಕಷ್ಟ ಸಾಧ್ಯವಾಗಿತ್ತು ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದ ಕಾರಣಕ್ಕಾಗಿ ಈ ಸಿಂಗಲ್ ಸ್ಕ್ರೀನ್ಗಳಲ್ಲಿ ಕಿವಿಗಡಚಿಕ್ಕುವ ಸದ್ದನ್ನಷ್ಟೇ ಕೇಳಬಹುದೇ ಹೊರತು ಮಾತುಗಳನ್ನು ಕಷ್ಟಪಟ್ಟು ಆಲಿಸಬೇಕಾದ ಪರಿಸ್ಥಿತಿ.

ಚಿತ್ರದ ಕ್ಲೈಮ್ಯಾಕ್ಸ್ ಚಿತ್ರವನ್ನು ಗೆಲ್ಲಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪಾತ್ರವೇ ತಾನಾಗಿ ಬಿಟ್ಟಿರುವ ರಿಷಬ್ ಶೆಟ್ಟರ  ಜೊತೆಗೆ ಅಚ್ಚುತ್ ಕುಮಾರ್ ಮತ್ತು ಕಿಶೋರ್, ಸಪ್ತಮಿ ಗೌಡರ ರವರ ಪೂರಕ ಅಭಿನಯ. ಅಜಯ್ ಎಸ್ ಲೋಕನಾಥ್ ರವರ ಸಂಗೀತ ಅರವಿಂದ್ ಕಶ್ಯಪರ ಛಾಯಾಗ್ರಹಣ ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. 

‍ಲೇಖಕರು Admin

October 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: