ಬಸವರಾಜ ಕೋಡಗುಂಟಿ ಅಂಕಣ – ಕರ‍್ನಾಟಕದ ಬಾಶೆಗಳು – ಸಂಕೀರ‍್ಣ ನಿರಿಗೆ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ಕರ‌್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ ಇನ್ನು ಮುಂದೆ ಪರಿಚಯಿಸಲಾಗುವುದು.

31

ಮೊದಲು, ಇತಿಹಾಸ ಕಾಲ, ಬರವಣಿಗೆ ಕಾಲ ಮೊದಲಾಗುವುದಕ್ಕಿಂತ ಮೊದಲು ಇಂದು ಕನ್ನಡ ಬಾಶೆ ತಮಿಳು, ತೆಲುಗು ಇಂತ ದೊಡ್ಡ ಬಾಶೆಗಳು ಮತ್ತು ತೊದ, ಕೋತ, ತುಳು, ಕೊಡವ, ಇರುಳ, ಮಲಯಾಳಂ, ಕುಳು, ಕೊರಗ, ಕೊರಚ ಇಂತ ಹಲವಾರು ಬಾಶೆಗಳೊಂದಿಗೆ ಒಡನಾಡಿಕೊಂಡು ಬದುಕಿದ್ದಿತು. ಇದಕ್ಕೆ ಅದ್ಯಯನಗಳು ಸಾಕಶ್ಟು ಆದಾರಗಳನ್ನು ಕೊಡುತ್ತವೆ. ಹರಪ್ಪ ನಾಗರಿಕತೆ ಜೊತೆಗೆ ವ್ಯಾಪಾರ ಸಂಬಂದವನ್ನೂ ಹೊಂದಿದ್ದಿತು. ಅಂದರೆ, ಹರಪ್ಪದ ಬಾಶೆಯ ಸಂಪರ‍್ಕವೂ ಇದ್ದಿತು. ಅಸೋಕನಿಗಿಂತ ಮೊದಲೆ ಉತ್ತರದ ಪ್ರಾಕ್ರುತವು ಕರ‍್ನಾಟಕದ ಪರಿಸರಕ್ಕೆ ಪರಿಚಯವಾಗಿದ್ದಿರಬೇಕು, ಪರಿಚಯವಾಗಿತ್ತು.

ಕರ‍್ನಾಟಕ ತಿಳಿದ ಇತಿಹಾಸದ ಕಾಲದಿಂದಲೂ ಬಹುಬಾಶಿಕ ಪರಿಸರವಾಗಿಯೆ ಇದೆ. ಬಾಶಾ ಬಳಕೆಗೆ ಇತಿಹಾಸ ನಮಗೆ ದೊರೆಯುವುದು ಮವುರ‍್ಯ ದೊರೆ ಅಸೋಕನ ಶಾಸನಗಳಿಂದ. ಅಸೋಕ ಉತ್ತರದ ಸಂಸ್ಕ್ರುತ ಬಾಶೆಯ ದ್ವನಿವಿಗ್ನಾನದ ಸಹಾಯದಿಂದ ಪೂರ‍್ವದ ಪಾಲಿ ಬಾಶೆಗೆ ರೂಪಿಸಿದ ಲಿಪಿಯನ್ನು ದಕ್ಶಿಣದ ಕನ್ನಡ ಮಾತಾಡುವ ಪ್ರದೇಶದಲ್ಲಿ ಕೊರೆಸುತ್ತಾನೆ. ಇದೆ ಸುಮಾರು ಕಾಲಕ್ಕೆ ಗ್ರೀಕಿನ ಸಂಪರ‍್ಕವೂ ಈ ನೆಲದೊಂದಿಗೆ ಇತ್ತು ಎನ್ನುವುದಕ್ಕೆ ವೆಗ್ಗಳ ಆದಾರಗಳಿವೆ. ಹೀಗೆ ಕರ‍್ನಾಟಕ ಪರಿಸರದ ಇತಿಹಾಸ ಆರಂಬವಾಗುವುದು ಬಹುಬಾಶಿಕತೆಯೊಂದಿಗೆ. ಇತಿಹಾಸ ಕಾಲದ ಆರಂಬದಲ್ಲಿ ಸುಮಾರಾಗಿ ಕರೆಯುವ ಕರ‍್ನಾಟಕ ಎಂಬ ಪ್ರಾದೇಶಿಕ ಪರಿಸರದಲ್ಲಿ ಕನ್ನಡ, ತೆಲುಗು, ತಮಿಳು, ತುಳು, ಕೊಡವ, ತೊದ, ಕೋತ, ಕುಳು, ಕೊರಚ, ಮಲಯಾಳಂ, ಇರುಳ ಇವುಗಳು ಬದುಕಿದ್ದವು ಮತ್ತು ಹರಪ್ಪದ ಬಾಶೆ, ಪ್ರಾಕ್ರುತ, ಪಾಲಿ, ಗ್ರೀಕು ಇವುಗಳ ಸಂಪರ‍್ಕವು ಒದಗಿದ್ದಿತು. ತುಸು ಕಾಲದಲ್ಲಿಯೆ ಸಂಸ್ಕ್ರುತವೂ ಇತ್ತ ಬರುತ್ತದೆ. ಇವುಗಳೊಂದಿಗೆ ಇಂದಿಗೆ ಲೆಕ್ಕಕ್ಕೆ ಸಿಗದಂತೆ ಕಳೆದುಹೋಗಿರಬಹುದಾದ ಬಾಶೆಗಳೆಶ್ಟೊ ತಿಳಿಯದು. ಅಂತೆಯೆ ಈ ನೆಲದ ಮೂಲಕ ಹಾದು ಹೋಗಿ ತಮ್ಮ ಗುರುತುಗಳನ್ನು ಉಳಿಸಹೋಗಿರಬಹುದಾದ ಬಾಶೆಗಳೆಶ್ಟೊ ತಿಳಿಯದು. 

ಅಸೋಕನ ನಂತರ ಶಾತವಾಹನರ ಕಾಲಕ್ಕೆ ಪ್ರಾಕ್ರುತ ಈ ನೆಲದಲ್ಲಿ ದೊಡ್ಡದಾಗಿ ಬೆಳೆಯುತ್ತದೆ. ಮುಂದೆ ಕನ್ನಡ-ಪ್ರಾಕ್ರುತಗಳ ನಂಟು ಮರಾಟಿ ಎಂಬ ಬಾಶೆ ಹುಟ್ಟುವುದಕ್ಕೆ ಕಾರಣವಾಗುತ್ತದೆ. ಆನಂತರ ಸಂಸ್ಕ್ರುತ ಕನ್ನಡದೊಂದಗಿನ ದೊಡ್ಡ ನಂಟನ್ನು ಪಡೆದುಕೊಳ್ಳುತ್ತದೆ. ಮುಂದೆ ಅರಾಬಿಕ್ ಮತ್ತು ಪರ‍್ಶಿಯನ್ ಬಾಶೆಗಳು ಕನ್ನಡದ ಹತ್ತಿರಕ್ಕೆ ಬರುತ್ತವೆ. ಕನ್ನಡ ಮತ್ತು ಪರ‍್ಶಿಯನ್ ಬಾಶೆಗಳ ನಂಟಿನಲ್ಲಿ ಹುಟ್ಟಿದುದೆ ಉರ‍್ದು. 

ನಡುಗಾಲದ ಉದ್ದಕ್ಕೂ ವಿವಿದ ಪ್ರಾಕ್ರುತಗಳು ಕರ‍್ನಾಟಕದೊಂದಿಗೆ ನಂಟನ್ನು ಹೊಂದಿದ್ದವು. ಈ ಪ್ರಾಕ್ರುತಗಳು ಇಂದಿನ ಉತ್ತರದ ಆದುನಿಕ ಬಾಶೆಗಳಾಗಿ ಬೆಳೆದು ಈ ಬಾಶಿಕ ನಂಟಿನ ಸಂಪರ‍್ಕ ಇನ್ನಶ್ಟು ಬಹುತ್ವತೆಯನ್ನು ಪಡೆದುಕೊಳ್ಳುತ್ತದೆ. ಉತ್ತರದ ಮರಾಟಿ, ಕೊಂಕಣಿಯಿಂದ ಮೊದಲಾಗಿ ಗುಜರಾತಿ, ಬೆಂಗಾಲಿ, ಓಡಿಯಾ, ಪಂಜಾಬಿ, ರಾಜಸ್ತಾನಿ, ಮಾರ‍್ವಾರಿ, ಲಂಬಾಣಿ, ಹಿಂದಿ ಮತ್ತು ಹಿಂದಿಯ ಹಲವಾರು ಬಗೆಗಳು, ಆಸ್ಸಾಮಿ, ನೇಪಾಲಿ, ಸಿಂದಿ ಹೀಗೆ ಹಲವಾರು ಬಾಶೆಗಳು ಈ ನೆಲದ ನಂಟಿಗೆ ಒದಗುತ್ತವೆ. ಆದುನಿಕ ಕಾಲದಲ್ಲಿ ಈ ಬಹುತ್ವದ ನಂಟು ಇನ್ನೂ ಅಗ್ಗಲಿಸಿಕೊಳ್ಳುತ್ತ ಬೆಳೆಯುತ್ತದೆ. ಬಿಹಾರಿ, ಮಯ್ತಿಲಿ ಮೊದಲಾದ ಹಿಂದಿಯ ಹಲವಾರು ಬಗೆಗಳು, ಮದ್ಯಪ್ರದೇಶದ ಕಾಂದೇಶಿ ಪ್ರದೇಶ ಮತ್ತು ಬಾಶಾಗುಂಪಿಗೆ ಸೇರುವ ಹಲವು ಬಗೆಗಳು, ರಾಜಸ್ತಾನಿ ಗುಂಪಿನ ಹಲವು ಬಗೆಗಳು ಮಾತ್ರವಲ್ಲದೆ ಪಂಜಾಬಿ, ಓಡಿಯಾ ಮೊದಲಾದ ಬಾಶೆಗಳ ವಿವಿದ ಬಗೆಗಳೂ ಇಲ್ಲಿಗೆ ಹರಿದುಬರುತ್ತದೆ. ನಡುಗಾಲದಲ್ಲಿ ಕರ‍್ನಾಟಕಕ್ಕೆ ರಂಗನ್ನು ತಂದ ಇನ್ನೊಂದು ಮಹತ್ವದ ಬಾಶೆ ಯಾವುದೊ ಒಂದು ಆಪ್ರಿಕಾದ ಬಾಶೆ. ಅದು ಇಂದು ಕಳೆದುಹೋಗಿದೆ. ಆ ಬಾಶೆಯನ್ನು ಹೊತ್ತು ತಂದ ಸಿದ್ದಿಗಳು ಇಂದು ನಮ್ಮೊಡನೆ ನಮ್ಮ ಕೊಂಕಣಿ, ಕನ್ನಡ ಬಾಶೆಗಳನ್ನು ಮಾತಾಡಿಕೊಂಡು ಕಾರವಾರ ಪರಿಸರದಲ್ಲಿ ಬದುಕಿದ್ದಾರೆ. 

ಕನ್ನಡದ ಒಳನುಡಿಗಳಾಗಿ ಈಗ ಬೆಳೆದಿರುವ ಹಲವು ಬಗೆಯ ಕುರುಬಗಳು, ನಾಯ್ಕಗಳು, ಬಡಗ, ಸೋಲಿಗ, ಹವ್ಯಕ ಮೊದಲಾದವು ಕರ‍್ನಾಟಕ ಪರಿಸರದಲ್ಲಿ ಬದುಕಿವೆ. ನಿಲಗಿರಿ ಪರಿಸರದಲ್ಲಿ ವಿವಿದ ಕುರುಬ, ನಾಯ್ಕ ಸೇರಿ ಇನ್ನೂ ಹಲವು ಬಾಶೆಗಳು, ಬಾಶಾಬಗೆಗಳು ಬದುಕಿವೆ. ತಮಿಳಿನ ಹತ್ತಿರದ ಸಂಕೇತಿ, ಅರುವುಮು ಮೊದಲಾದವು, ತೆಲುಗಿನ ಹತ್ತಿರದ ಚೆಂಚು, ವಡರಿ ಮೊದಲಾದವು, ಮರಾಟಿಯ ಹತ್ತಿರದ ಆರೆ, ಪಾರ‍್ದಿ, ಕೋಳಿ ಮೊದಲಾದವು, ಮಲಯಾಳಂಗೆ ಹತ್ತಿರದ ಯರವ, ಪಣಿಯ ಮೊದಲಾದವು, ಕೊಂಕಣಿಗೆ ಹತ್ತಿರದ ನವಾಯಿತಿ, ಕುಡುಬಿ ಮೊದಲಾದವು ಇಂದು ಕನ್ನಡದೊಂದಿಗೆ ನಂಟನ್ನು ಹೊಂದಿ ಬದುಕಿವೆ, ವಿಶೇಶವೆಂದರೆ ಇವೆಲ್ಲ ಕರ‍್ನಾಟಕದಲ್ಲಿ ಬದುಕನ್ನು ರೂಪಿಸಿಕೊಂಡಿವೆ.

ಆದುನಿಕಪೂರ‍್ವ ಕಾಲದಲ್ಲಿ ಯುರೋಪಿನ ಕೆಲವು ಬಾಶೆಗಳು ಹೀಗೆ ಕರ‍್ನಾಟಕಕ್ಕೆ ಬರುತ್ತವೆ. ಇಂಗ್ಲೀಶು ಇವುಗಳಲ್ಲಿ ಮಹತ್ವದ ಬಾಶೆ. ಸಾಮಾಜಿಕ ಮಹತ್ವವನ್ನು ಪಡೆದುಕೊಂಡು ಪ್ರತಿಶ್ಟೆಯನ್ನೂ ಪಡೆದುಕೊಂಡು ಬಳಕೆಯಾಗುತ್ತಿರುವ ಇಂಗ್ಲೀಶು ಸಾಕಶ್ಟು ಕನ್ನಡದ ಪ್ರಬಾವಕ್ಕೊಳಗಾಗಿ ಕನ್ನಡದ ರಚನೆಯನ್ನು ಪಡೆದುಕೊಳ್ಳುತ್ತಿದೆ.

ಸ್ವಾತಂತ್ರದ ನಂತರದ ಬಾರತದಲ್ಲಿ ಟಿಬೆಟನ್ ಈ ನೆಲಕ್ಕೆ ಬರುವ ದೊಡ್ಡ ಬಾಶೆ. ಹಾಗೆಯೆ ಮಣಿಪುರಿ ಒಳಗೊಂಡು ಹಲವು ಈಶಾನ್ಯದ ಬಾಶೆಗಳೂ ಇತ್ತ ಬರುತ್ತವೆ. 

ಇವುಗಳ ಜೊತೆಗೆ ಬೆಂಗಳೂರು, ಮಂಗಳೂರು ನಗರಗಳಲ್ಲಿ ಕಂಡುಬರುವ ಹಲವಾರು ಬಾಶೆಗಳ ಮಾತುಗರು, ನಾಡಿನೆಲ್ಲೆಡೆ ವಲಸಿಗರಾಗಿ ಹರಿದಾಡುತ್ತಾ ಈ ನೆಲಕ್ಕೆ ಬಹುತ್ವದ ಸುಗಂದವನ್ನು ಚೆಲ್ಲವರಿಯುತ್ತಾ ಅಲೆಯುತ್ತಿರುವ ಅಲೆಮಾರಿಗಳ ಬಾಶೆಗಳು, ಕೂಲಿ ಮೊದಲಾಗಿ ಹಲಬಗೆಯ ಕೆಲಸಗಳಿಗೆ ಬರುತ್ತಿರುವವರ ಬಾಶೆಗಳು, ವಿಬಿನ್ನ ಕಾರಣಗಳಿಗೆ ಜಗತ್ತಿನ ಮೂಲೆಮೂಲೆಗಳ ನಂಟಿನಿಂದ ಬೆಸೆದುಕೊಳ್ಳುತ್ತಿರುವ ಬಾಶೆಗಳು ಹೀಗೆ ಕರ‍್ನಾಟಕದ ಬಹುತ್ವದ ಮೆರುಗು ಮೆರೆಯರಿಯದೆ ಮೆರೆಯುತ್ತಿದೆ. ಬೆಂಗಳೂರಿನ ಹಲವಾರು ಬಗೆಯ ಸಂಕೀರ‍್ಣ ಕೆಲಸಗಳು, ಮಂಗಳೂರು ಮತ್ತು ಇನ್ನಿತರ ಬಂದರು ಪ್ರದೇಶಗಳಲ್ಲಿನ ಸಾಗರವ್ಯಾಪಾರದ ಕೆಲಸಗಳು, ಕರಾವಳಿಯಲ್ಲಿನ ಸಂಕೀರ‍್ಣ ಬಗೆಯ ಕೆಲಸಗಳು, ಬಳ್ಳಾರಿಯ ಗಣಿ ಕೆಲಸಗಳು ಮೊದಲಾದವುಗಳಲ್ಲಿ ಕೆಲಸ ಮಾಡಲು ವಲಸೆ ಬಂದಿರುವವರ ಹಲವಾರು ಬಾಶೆಗಳು ಇಲ್ಲಿವೆ. ಬಳ್ಳಾರಿಯ ತೋರಣಗಲ್ಲು, ಕಲಬುರಗಿಯ ಶಹಬಾದ ಇವು ಕಯ್ಗಾರಿಕೆ ಕಾರಣವಾಗಿ ಸಂಕೀರ‍್ಣ ಬಹುಬಾಶಿಕ ಪರಿಸರಗಳಾಗಿ ಕಂಗೊಳಿಸುತ್ತವೆ. 

ಈ ಅಂಕಣದಲ್ಲಿ ಇದುವರೆಗೆ ಕರ‍್ನಾಟಕದ ಪ್ರತಿ ಜಿಲ್ಲೆಯನ್ನು ಬಾಶಿಕವಾಗಿ ಅರಿತುಕೊಳ್ಳುವ ಪ್ರಯತ್ನ ಮಾಡಲಾಯಿತು. ಇದಕ್ಕೆ ಮೂಲಬೂತವಾಗಿ ಆದರಿಸಿದ್ದು ಸರಕಾರದ ಜನಗಣತಿ ವರದಿಯನ್ನು. 

ಇನ್ನು, ಕರ‍್ನಾಟಕದ ಬಾಶೆಗಳನ್ನು ಹಿಡಿದುಕೊಂಡು ಪ್ರತಿಯೊಂದು ಬಾಶೆ ಹೇಗೆ, ಎಲ್ಲಿ ಮತ್ತು ಎಶ್ಟು ಪಸರಿಸಿಕೊಂಡಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುವುದು. ಇದರಲ್ಲಿ 2011ರ ಜನಗಣತಿ ಕೊಟ್ಟಿರುವ ಮಾಹಿತಿಯನ್ನು ಬಳಸಿಕೊಂಡು ಬಾಶೆಗಳನ್ನು ಪಟ್ಟಿಸಿಕೊಂಡಿದೆ. 

ಜನಗಣತಿಯಲ್ಲಿ ಕೆಲವನ್ನು ಬಾಶೆಗಳೆಂದು ಪರಿಗಣಿಸಿ, ಇನ್ನೂ ಹಲವನ್ನು ಆ ಕೆಲ ಬಾಶೆಗಳ ಒಳಗೆ ತಾಯ್ಮಾತುಗಳು ಎಂದು ಮಾತ್ರ ಪರಿಗಣಿಸಿ ವರದಿಸುವುದು ಇದೆ. ಆದರೆ, ಇಲ್ಲಿ ತಾಯ್ಮಾತುಗಳನ್ನು ಬಾಶೆಗಳೆಂದು ಪರಿಗಣಿಸಿದೆ. ಆ ಬಾಶೆಗಳು ಕರ‍್ನಾಟಕದ ಯಾವ ಬಾಗದಲ್ಲಿ ಎಶ್ಟು ಪಸರಿಸಿವೆ ಎಂಬುದನ್ನು ಇಲ್ಲಿ ತೋರಿಸಲಾಗುವುದು. ಇದು ಕರ‍್ನಾಟಕವನ್ನು ಸರಿಯಾಗಿ ಮತ್ತು ಹತ್ತಿರದಿಂದ ಅರ‍್ತ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. 

ಬಾರತ ಸರಕಾರವು ಜನಗಣತಿಯನ್ನು ವರದಿ ಮಾಡುವಾಗ ಹತ್ತು ಸಾವಿರ ಸಂಕೆಯನ್ನು ಅತ್ಯಂತ ಮುಕ್ಯವಾಗಿ ಪರಿಗಣಿಸುತ್ತದೆ. ಆದ್ದರಿಂದ ಇಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ತಾಯ್ಮಾತುಗಳನ್ನು/ಬಾಶೆಗಳನ್ನು ಪಟ್ಟಿಸಿದೆ. ಈ ಎಲ್ಲ ಬಾಶೆಗಳನ್ನು ಪರಿಚಯಿಸಲಾಗುತ್ತದೆ. ಇವುಗಳ ಜೊತೆಗೆ ಇನ್ನು ಕೆಲವು ಬಾಶೆಗಳನ್ನು ಬಿನ್ನ ರೀತಿಯಲ್ಲಿ ಪರಿಚಯಿಸಲಾಗುವುದು.

ಇದು ಕರ‍್ನಾಟಕದಾಗ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಬಾಶೆಗಳ ಪಟ್ಟಿ. ಇಂತಾ ಇಪ್ಪತ್ತಯ್ದು ಬಾಶೆಗಳು ಇವೆ.

ಕ್ರಸಂ ಬಾಶೆ ಮಾತುಗರು %

ಕೋಟಿಗೂ ಹೆಚ್ಚು ಮಂದಿ ಮಾತುಗರು ಇರುವ ಬಾಶೆ

1 ಕನ್ನಡ 4,06,22,836 66.490%

ಕೋಟಿಗಿಂತ ಕಡಿಮೆ ಮತ್ತು ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳು

2 ಉರ‍್ದು 66,17,850 10.832%

3 ತೆಲುಗು 35,65,618 5.836%

4 ತಮಿಳು 21,01,032 3.438%

5 ಮರಾಟಿ 20,13,090 3.294%

6 ತುಳು 15,92,915 2.607%

7 ಲಂಬಾಣಿ 10,00,071 1.636%

ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳು

8 ಹಿಂದಿ 8,71,809 1.426%

9 ಕೊಂಕಣಿ 7,64,196 1.220%

10 ಮಲಯಾಳಂ 7,45,903 1.266%

11 ಗುಜರಾತಿ 1,14,616 0.187%

12 ಕೂರ‍್ಗಿ/ಕೊಡಗು 1,10,508 0.180%

13 ಮಾರ‍್ವಾರಿ 1,00,214 0.164%

ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳು 

14 ಬೆಂಗಾಲಿ 87,889 0.143%

15 ಓಡಿಯಾ 63,917 0.104%

16 ಆರೆ 50,339 0.082%

17 ಟಿಬೆಟನ್ 27,544 0.045%

18 ಯರವ 26,536 0.043%

19 ಪಂಜಾಬಿ 25,910 0.042%

20 ರಾಜಸ್ತಾನಿ 24,087 0.039%

21 ಇಂಗ್ಲೀಶು 23,227 0.038%

22 ನೇಪಾಲಿ 19,263 0.031%

23 ಕುರುಬ/ಕುರುಂಬ 15,674 0.025%

24 ಸಿಂದಿ 14,923 0.024%

25 ನವಾಯಿತ್ 12,775 0.020%

ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಅಯ್ದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳು 

26 ಆಸ್ಸಾಮಿ 9,724 0.015%

27 ಕುಡುಬಿ 9,053 0.014%

28 ಕುಳು (ಕೊರವ) 8,385 0.013%

29 ಬೋಜ್ಪುರಿ 7,675 0.012%

ಅಯ್ದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳು

30 ಸವುರಾಶ್ಟ್ರಿ 4,399 0.007%

31 ಮಣಿಪುರಿ 4,073 0.006%

32 ಕಾಶ್ಮೀರಿ 2,972 0.004%

33 ಬಿಲಿ/ಬಿಲೋಡಿ 2,621 0.004%

34 ಕಚ್ಚಿ 2,008 0.003%

35 ಮಯ್ತಿಲಿ 1,757 0.002%

36 ಸಂಸ್ಕ್ರುತ 1,218 0.001%

37 ಅರಾಬಿಕ್/ಅರ‍್ಬಿ 1,159 0.001%

38 ಗೊಂಡಿ 1,012 0.001% 

ಸಾವಿರಕ್ಕಿಂತ ಕಡಿಮೆ ಮಂದಿ ಇರುವ ಹಲವು ಬಾಶೆಗಳು ದಾಕಲಾಗಿವೆ. ಇವುಗಳನ್ನು ಒಟ್ಟಿಗೆ ಒಂದು ಬರಹದಲ್ಲಿ ಮಾತಾಡಲಾಗುವುದು. ಇದರೊಟ್ಟಿಗೆ ಇತರ ಎಂಬ ಗುಂಪಿನಲ್ಲಿ ನಾಲ್ಕು ಲಕ್ಶಕ್ಕೂ ಹೆಚ್ಚು ಮಂದಿ ಅಂದರೆ ಕನಿಶ್ಟ ನಲವತ್ತಕ್ಕೂ ಹೆಚ್ಚು ಬಾಶೆಗಳು ಅಡಕಗೊಂಡಿವೆ. ಇವುಗಳನ್ನು ಪ್ರತ್ಯೇಕವಾಗಿ ಮಾತಾಡಲಾಗುವುದು. ಇದರಲ್ಲಿ ಬಾಶೆಗಳನ್ನು ಪರಿಚಯಿಸಿಕೊಳ್ಳುವಾಗ ಆ ಬಾಶೆಯ ಜನಗಣತಿಯ ವರದಿಯನ್ನು ಮೊದಲು ತೋರಿಸಿದೆ. ಅದು ಇನ್ನೊಂದು ಬಾಶೆಯ ಒಳಗೆ ದಾಕಲಾಗಿದ್ದರೆ ಆ ಬಾಶೆ, ಅದರೊಳಗೆ ದಾಕಲಾದ ಆ ತಾಯ್ಮಾತು ಇವುಗಳ ಸಾಂಕಿಕ ವಿವರಣೆಯನ್ನು ಕೊಟ್ಟಿದೆ.  ಆನಂತರ ತಾಯ್ಮಾತುಗಳೆಂದು ದಾಕಲಾದ ಬಾಶೆಗಳನ್ನು ಮಾತಿಗೆತ್ತಿಕೊಂಡಿದೆ. ಇಲ್ಲಿ ತಾಯ್ಮಾತುಗಳೆಂದು ದಾಕಲಾದ ‘ಬಾಶೆ’ಗಳನ್ನು ಸಕಾರಣ ಬಾಶೆ ಎಂದು ಪರಿಗಣಿಸಿದೆ. ರಾಜ್ಯದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾದ ಬಾಶೆಗಳನ್ನು ಪ್ರತ್ಯೇಕವಾಗಿ ಚರ‍್ಚಿಸಿದೆ. ಪ್ರತಿಯೊಂದು ಬಾಶೆಯ ಜಿಲ್ಲಾವಾರು ಮಾಹಿತಿಯನ್ನು ಕೊಟ್ಟು, ಇದನ್ನು ಒಂದು ನಕಾಶೆಯಲ್ಲಿ ತೋರಿಸಿದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: