ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಾಕುಮಾರಿ ಕವಿತೆ – ನೀಳ ರಾತ್ರಿ…

ಶಾಂತಾಕುಮಾರಿ

ರಾತ್ರಿಯ ಕೊನೆಯ ಶಿಲ್ಕನ್ನೂ
ಮುಗಿಸಿ ಕುಳಿತಿದ್ದೆ ಹಸಿವು ನೀಗಿರಲಿಲ್ಲ
ಕತ್ತಲನ್ನೂ ಬಸಿದು ಕುಡಿಯುವ
ಅತೀವ ಹಸಿವು ಅಗಾಧ ಸಂಕಟ
ಕಣ್ಣರೆಪ್ಪೆ ಒಂದನ್ನೊಂದು ಮುಟ್ಟದಂತೆ
ಕಾಯುತ್ತಲೇ ಇದ್ದೆ…
ಮಂಜು ಬೀಳುತ್ತಲೇ ಇತ್ತು ನಿಂತ ಕಾಲುಗಳು
ಮರಗಟ್ಟುವಂತೆ…ಹೃದಯವೂ ಜೋಮು
ಗಾಳಿ ಮರಗಳು ಸುಂಯ್ಯೋ ಎಂದು ಸಾವಿರ
ನಿಟ್ಟುಸಿರುಗಳ ಅತ್ತಿಂದಿತ್ತ ತೂಗುತಿತ್ತು
ಆಗಷ್ಟೇ ಅರಳಿದ ರಾತ್ರಿರಾಣಿ ಹೂವಿನ
ಪರಿಮಳಕ್ಕೆ ಹಾವುಗಳು ಸೋತು ಉಸ್ಸೆಂದು
ಉಸಿರ ಹೊರಡಿಸಿ ಸಂಭವಿಸುವ ಯಾವುದೊ
ಮಹೋನ್ನತ ಗಳಿಗೆಗೆ ನಾಲಿಗೆ ಚಾಚುತ್ತಿದ್ದವು
ಹಕ್ಕಿಗಳು ಗೂಡುಗಳಲ್ಲಿ ಮಗ್ಗಲು ಬದಲಿಸಲು
ಹೆದರಿದಂತೆ ಉಕ್ಕುಕ್ ಉಕ್ಕುಕ್ ಎಂದು ದನಿ
ಹೊರಡಿಸಿದ ಮರಿಗಳಿಗೆ ಪುಕ್ಕ ಹೊದೆಸಿದವು

ಅವಳಿಗೆ ಸೋಜಿಗವಾಯಿತು!
ಇಡೀ ಜಗತ್ತು ಕತ್ತಲಿಗೆ ಕಾದಿಹುದೇ …
ಕತ್ತಲ ಬಯಕೆ ಅಥವಾ ಕತ್ತಲಿಗೆ ಬಯಕೆ?
ಇಡೀ ಕತ್ತಲಿಗೆ ಗೊತ್ತಿರದ ತಳಮಳ ಆತಂಕ
ನಿರೀಕ್ಷೆ ಹಪಹಪಿ ಭೀತಿ ಜೊತೆಯಲ್ಲಿ ಬೆಚ್ಚನೆ ಭಾವ
ಎಲ್ಲಿಯೋ ದನಿಯೊಂದು ಗುನುಗುತ್ತಿರುವ ತೇವ
ಇದು ಮುಗಿಯಲೇಬಾರದೆಂಬ ಹುಸಿಯಾಸೆ
ಮುಗಿಯಬೇಕೆಂಬ ತೀವ್ರ ವ್ಯಗ್ರ ತುಡಿತ
ಕಲ್ಲರಳಿ ಹೂವಾಗುವ ಸಮಯ ಕತ್ತಲ ಕೊನೆಯ
ಆಶಾಕಿರಣವೂ ಬೆಳಕಾಗುವ ಹೊತ್ತು
ಇಡೀ ಕತ್ತಲ ಆಪೋಶನ ತೆಗೆದುಕೊಂಡಂತೆ
ಹಸಿವು ಮುಗಿದಿತ್ತು ಸೂರ್ಯ ಕೆನ್ನಾಲಿಗೆಯ ಚಾಚಿ
ಗೂರಲು ಮುದುಕ ತುಫಕ್ಕನೆ ಉಗುಳಿದಂತೆ ಕಫ
ಬೆಳಕು ಚೆಲ್ಲಿದ…
ಇನ್ನು ಕಣ್ಣ ರೆಪ್ಪೆ ಅಂಟಿಸಬೇಕು..
ಉದ್ದಾನುದ್ದ ಮಲಗಿದ ನನ್ನ ನೆರಳನ್ನು ಕಣ್ಣೊಳಗಿರಿಸಿ
ಮತ್ತೆಂದೂ ಬೆಳಕ ನೋಡದಂತೆ!!

‍ಲೇಖಕರು Admin

6 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading