ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 2…

ಮೂಲ : ರೋ ಆಲ್ಡ್ ಡಾಲ್
ಅನುವಾದ : ಶೀಲಾ ಪೈ

ರೋ ಆಲ್ಡ್ ಡಾಲ್ (೧೯೧೬-೧೯೯೦) ಬ್ರಿಟಿಷ್ ಬರಹಗಾರ.  ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡವರು. ಮೊದಲು ಬರೆದ ಹನ್ನೆರಡು ಸಣ್ಣಕಥೆಗಳು ಯುದ್ಧದ ಅನುಭವಗಳನ್ನು ಆಧರಿಸಿದ್ದವು. ಮುಂದೆ ಮಕ್ಕಳಿಗಾಗಿ ಬರೆದ “ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ”, “ಮೆಟಿಲ್ಡಾ”, “ಬಿ ಎಫ್ ಜಿ”, “ದಿ ಮ್ಯಾಜಿಕ್ ಫಿಂಗರ್”, “ಜೇಮ್ಸ್ ಅಂಡ್ ದಿ ಜಯಂಟ್ ಪೀಚ್” ಜಗತ್ತಿನ್ನೆಲ್ಲೆಡೆಯ ಮಕ್ಕಳು ಓದಿ ಮೆಚ್ಚಿದ ಪುಸ್ತಕಗಳು.   ದೊಡ್ಡವರಿಗಾಗಿ ಬರೆದ “ಟೇಲ್ಸ್ ಆಫ್ ದಿ ಅನ್ಎಕ್ಸ್ಪೆಕ್ಟೆಡ್” ಕಥಾಸಂಕಲನದ ಪ್ರತಿಯೊಂದು ಕಥೆಯೂ ವಿಶಿಷ್ಟ ಕಥಾವಸ್ತು, ನಿರೂಪಣೆಯ ಜೊತೆಗೆ ಅನಿರೀಕ್ಷಿತ ತಿರುವುಗಳಿಂದ ಕೂಡಿದ್ದು ಕ್ಲಾಸಿಕ್ ಕಥೆಗಳ ಸಾಲಿಗೆ ಸೇರಿಸಲ್ಪಟ್ಟಿವೆ. ಪ್ರಸ್ತುತ “ಸ್ಕಿನ್” ಕಥೆಯನ್ನು ಈ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. 

ಡ್ರಿಯೋಲಿ ಎಂದು ಕರೆಯಲ್ಪಡುವ ಮುದುಕ, ಚಿತ್ರದ ಗ್ಯಾಲರಿಯ ಕಿಟಕಿಯಲ್ಲಿ ಪ್ರದರ್ಶಿತವಾಗಿದ್ದ ಚಿತ್ರವನ್ನು ನೆಟ್ಟನೆ ನೋಟದಿಂದ ನೋಡುತ್ತಾ ಸಮ್ಮೋಹಿತನಂತೆ ನಿಂತುಬಿಟ್ಟಿದ್ದ. ಎಷ್ಟು ಹಿಂದೆ ನಡೆದದ್ದು ಇದೆಲ್ಲಾ – ಹಿಂದಿನ ಜನ್ಮದಲ್ಲಿ ನಡೆದಿತ್ತೇನೋ ಅನಿಸುವಂಥವು. 

ಮತ್ತೆ ಆ ಹುಡುಗ? ಎಲ್ಹೋಗಿದ್ದ ಅವನು? ಅವನಿಗೀಗ ನೆನಪಾಗುತಿತ್ತು, ಯುದ್ದದಿಂದ, ಮೊದಲ ಯುದ್ಧದಿಂದ ಹಿಂತಿರುಗಿ ಬಂದಾಗ ಅವನ ನೆನಪಾಗಿ ಜೋಸಿ ಯನ್ನು ಕೇಳಿದ್ದ “ಎಲ್ಲಿ ನನ್ನ ಪುಟ್ಟ ಕಾಲ್ಮಿಕ್?”

“ಅವ ಹೋಗಿಯಾಯ್ತು, ಎಲ್ಲೀಂತ ಗೊತ್ತಿಲ್ಲ, ಡೀಲರನೊಬ್ಬ ಬಂದು ಚಿತ್ರ  ಬಿಡಿಸೋಕ್ಕೆಂತ ಸೆರೆಟ್‌ಗೆ ಕಳ್ಸಿದ್ದಾನೆ ಅಂತ ಯಾರೋ ಹೇಳಿದ್ರು.“

“ಅವನು ವಾಪಾಸ್ ಬರ್ಲಿಕ್ಕೂ ಸಾಕು” 

“ಯಾರಿಗ್ಗೊತ್ತು ಬಂದ್ರೂ ಬಂದ” 

ಅದೇ ಕೊನೆ ಅವನ ಬಗ್ಗೆ ಮಾತಾಡಿದ್ದು. ಅದರ ನಂತರ ಜಾಸ್ತಿ ನಾವಿಕರಿದ್ದ, ವ್ಯಾಪಾರ ಚೆನ್ನಾಗಿದ್ದ ಲುಅವರ್‌ಗೆ ವಾಸಕ್ಕೆ ಹೋಗಿದ್ದ. ಲುಅವರ್ ನೆನಪಾದಂತೆ ಮುದುಕನ ಮುಖದ ಮೇಲೆ ನಗು ಮೂಡಿತು. ಯುದ್ಧಗಳ ನಡುವಣ ಒಳ್ಳೆಯ ದಿನಗಳು, ಬಂದರಿನ ಪಕ್ಕದ ಚಿಕ್ಕ ಅಂಗಡಿ, ದೊಡ್ಡ ಕೋಣೆಗಳು ಮತ್ತು ಬೇಕಾದಷ್ಟು ಕೆಲಸ, ಕೈ ಮೇಲೆ ಚಿತ್ರಗಳನ್ನು ಹಾಕಿಸಿಕೊಳ್ಳಲು ಪ್ರತಿದಿನ ಮೂರು, ನಾಲ್ಕು, ಐದು ನಾವಿಕರು ಬರುತ್ತಿದ್ದರು, ಅವು ನಿಜಕ್ಕೂ ಒಳ್ಳೆಯ ದಿನಗಳೇ. 

ಆಮೇಲೆ ಎರಡನೇ ಯುದ್ಧ ಶುರುವಾಯಿತಲ್ಲ, ಜೋಸಿಯ ಕೊಲೆ, ಜರ್ಮನ್ನರ ಬರುವಿಕೆಯ ಜೊತೆ ಅವನ ಕಸುಬು ನಿಂತೇ ಹೋಗಿತ್ತು . ಅದರ ನಂತರ ಯಾರಿಗೂ ಕೈಮೇಲೆ ಚಿತ್ರಗಳು ಬೇಕೆನಿಸಿರಲಿಲ್ಲ. ಬೇರೆ ಕೆಲಸ ಹುಡುಕಿಕೊಳ್ಳುವ ವಯಸ್ಸೂ  ಅವನದಾಗಿರಲಿಲ್ಲ. ಅಸಹಾಯಕತೆಯಿಂದಲೇ ಪ್ಯಾರಿಸ್‌ನಂತಹ ದೊಡ್ಡ ಊರಿನಲ್ಲಾದರೂ ಪರಿಸ್ಥಿತಿ ಬದಲಾಗಬಹುದೆಂಬ ಸಣ್ಣ ಆಸೆಯಿಂದ ಬಂದಿದ್ದ. ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ. 

ಅವನ ಕಸುಬನ್ನು ಯುದ್ದದ ನಂತರ ಮತ್ತೆ ಶುರು ಮಾಡುವ ಶಕ್ತಿಯಾಗಲಿ ಉಮೇದಿಯಾಗಲಿ ಅವನಲ್ಲಿರಲಿಲ್ಲ .ಭಿಕ್ಷೆ ಬೇಡುವುದು ಇಷ್ಟವಿಲ್ಲದ ಅವನಂತಹ ಮುದುಕನಿಗೆ ಏನು ಮಾಡಬೇಕೆಂದು ಯೋಚಿಸುವುದೇ ಕಷ್ಟವಾಗಿತ್ತು, ಜೀವವನ್ನಂತೂ ಹಿಡಿದಿರಬೇಕಲ್ಲ?

ಚಿತ್ರವನ್ನು ದಿಟ್ಟಿಸಿ ನೋಡುತ್ತಲೇ ಅಂದುಕೊಂಡ, ಅದು ನನ್ನ ಪುಟ್ಟ ಕಾಲ್ಮಿಕ್, ಇಂತಹ ಒಂದು ಚಿಕ್ಕ ವಸ್ತು ಅದೆಷ್ಟು ಬೇಗ ಹಳೆಯದ್ದನ್ನೆಲ್ಲ ನೆನಪಿಸುತ್ತದೆ. ಕೆಲ ಕ್ಷಣಗಳ ಹಿಂದೆ ಅವನಿಗೆ ತನ್ನ ಬೆನ್ನ ಮೇಲೊಂದು ಟ್ಯಾಟೂ ಇದೆಯೆನ್ನುವುದು ನೆನಪಿನಲ್ಲೇ ಇರಲಿಲ್ಲ. ಅದರ ಬಗ್ಗೆ ಯೋಚಿಸದೆ ಯುಗಗಳೇ ಕಳೆದುಹೋಗಿದ್ದವು. ಮುಖವನ್ನು ಕಿಟಕಿಗಾನಿಸಿ ಗ್ಯಾಲರಿಯೊಳಗೆ ನೋಡಿದ. ಗೋಡೆಗಳ ಮೇಲೆ ಅದೇ ಕಲಾವಿದನ ಕುಂಚದಿಂದ ಮೂಡಿದವು ಎನಿಸುವಂತಹ ಇನ್ನೂ ಬಹಳಷ್ಟು ಚಿತ್ರಗಳಿದ್ದವು. ಸಾಕಷ್ಟು ಜನರು ಅಡ್ಡಾಡುತ್ತಿದ್ದರು. ಅದೊಂದು ವಿಶಿಷ್ಟ ಪ್ರದರ್ಶನವೇ ಇರಬೇಕೆಂದೆನಿಸಿತು. 

ಅಚಾನಕ್ಕಾಗಿ, ಡ್ರಿಯೋಲಿ ತಿರುಗಿದವನೇ ಗ್ಯಾಲರಿಯ ಬಾಗಿಲು ತಳ್ಳಿ ಒಳ ಹೊಕ್ಕ. 

ದೊಡ್ಡದೊಂದು ಹಾಲಿನಲ್ಲಿ ವೈನಿನ ಬಣ್ಣದ ರತ್ನಗಂಬಳಿ ಹಾಸಲಾಗಿತ್ತು. ಅಬ್ಬಾ ಎಂತ ಚಂದದ ಬೆಚ್ಚನೆಯ ಜಾಗ! ಕೈಗಳಲ್ಲಿ ಕ್ಯಾಟಲಾಗ್ ಹಿಡಕೊಂಡು ಸಭ್ಯ ಸುಸಂಸ್ಕೃತ ಜನರು ಚಿತ್ರಗಳನ್ನು ನೋಡುತ್ತಾ ಅಡ್ಡಾಡುತ್ತಿದ್ದರು. ಡ್ರಿಯೋಲಿ ಹಿಂಜರಿಕೆಯಿಂದ ಬಾಗಿಲ ಬಳಿಯೇ ನಿಂತುಕೊಂಡು ಮುಂದೆ ಹೋಗಿ  ಈ ಜನರೊಡನೆ ಬೆರೆಯುವಷ್ಟು ಧೈರ್ಯ ತನ್ನಲ್ಲಿದೆಯೇ ಎಂದು ಯೋಚಿಸುತ್ತಿದ್ದ. ತನ್ನ ಧೈರ್ಯ ಒಗ್ಗೂಡಿಸಿಕೊಳ್ಳುವ ಮುನ್ನವೇ ಪಕ್ಕದಲ್ಲಿ ದನಿಯೊಂದು ಕೇಳಿಸಿತು “ಏನ್ಬೇಕು ನಿಂಗೆ?”

ಮಾತನಾಡಿಸಿದವ ಕಪ್ಪನೆಯ ಕೋಟನ್ನು ಧರಿಸಿದ್ದ. ಧಡೂತಿ, ಕುಳ್ಳಗೆ ಇದ್ದವನ ಮುಖ ಬೆಳ್ಳಗಿತ್ತು . 

ಡ್ರಿಯೋಲಿ  ಸ್ತಬ್ಧನಾಗಿ ನಿಂತ 

“ದಯವಿಟ್ಟು ನನ್ನ ಗ್ಯಾಲರಿಯಿಂದ ಹೊರಗೆ ಹೋಗು” ಅವನಂದ .

 “ನಾನು ಚಿತ್ರಗಳನ್ನು ನೋಡಬಾರ್ದಾ?”

“ಹೊರಗೆ ಹೋಗು ಅಂತ ಹೇಳ್ತಾ ಇದ್ದೇನೆ”

ಡ್ರಿಯೋಲಿ  ನಿಂತೇ ಇದ್ದವನಿಗೆ ಇದ್ದಕ್ಕಿದ್ದ ಹಾಗೆ ಅದಲ್ಲಿಂದಲೋ ಸಿಟ್ಟು ಒತ್ತಿಕೊಂಡು ಬಂತು. 

“ಇಲ್ಲಿ ತೊಂದ್ರೆ ಕೊಡ್ಬೇಡ.. ಬಾ ನೀನು ಈ ಕಡೆ”  ಹೇಳುತ್ತಾ ತನ್ನ ದಪ್ಪನೆಯ ಮುಂಗೈಯನ್ನು ಡ್ರಿಯೋಲಿಯ  ತೋಳ ಮೇಲೆ  ಹಾಕಿ ಅವನನ್ನು ಬಾಗಿಲ ಕಡೆಗೆ ತಳ್ಳಲಾರಂಭಿಸಿದ . 

ಅಷ್ಟು ಸಾಕಾಯಿತು. “ತೆಗೆ ನಿನ್ನ ದರಿದ್ರ ಕೈಗಳನ್ನು” ಡ್ರಿಯೋಲಿ ಕಿರಿಚಿದ. ಉದ್ದದ ಗ್ಯಾಲರಿಯಿಡೀ ಅವನ ದನಿ ನಿಚ್ಚಳವಾಗಿ ರಿಂಗಣಿಸಿತು, ಎಲ್ಲ ತಲೆಗಳು ಒಂದೆಡೆ ತಿರುಗಿದವು. ಆಶ್ಚರ್ಯ ಸೂಸುವ ಮುಖಗಳು ಹಾಲಿನುದ್ದಕ್ಕೂ ಶಬ್ದ ಮಾಡಿದ ಮನುಷ್ಯನ್ನನ್ನು ದಿಟ್ಟಿಸಿ ನೋಡಿದವು, ಕೆಲಸದವನೊಬ್ಬ ಸಹಾಯಕ್ಕೆ ಓಡಿ ಬಂದ, ಇಬ್ಬರೂ ಸೇರಿ ಡ್ರಿಯೋಲಿಯನ್ನು ಬಾಗಿಲಿನೆಡೆಗೆ ನೂಕಲಾರಂಭಿಸಿದರು. ಎಲ್ಲರೂ ಸುಮ್ಮನೆ ನಿಂತು ಈ ನೂಕಾಟ ನೋಡುತ್ತಿದ್ದರು. ಮುಖಗಳಲ್ಲಿನ ಭಾವ  “ಎಲ್ಲವೂ ಸರಿ ಹೋಗುತ್ತದೆ, ಅವರು ನೋಡಿಕೊಳ್ಳುತ್ತಿದ್ದಾರೆ” ಎನ್ನುವಂತಿತ್ತು . 

“ನನ್ನ ಹತ್ರಾನೂ”  ಡ್ರಿಯೋಲಿ ಕಿರಿಚೋದಕ್ಕೆ ಶುರು ಮಾಡಿದ “ನನ್ನ ಹತ್ರಾನೂ ಈ ಕಲಾವಿದ ರಚಿಸಿದ ಚಿತ್ರವಿದೆ, ಅವನು ನನ್ನ ಗೆಳೆಯನಾಗಿದ್ದ, ಅವನು ಕೊಟ್ಟ ಚಿತ್ರ ನನ್ನ ಹತ್ರ ಇದೆ “

“ಹುಚ್ಚ’

“ತಲೆ ಸರಿಯಿಲ್ಲದವ, ಬಾಯಿಗೆ ಬಂದಂತೆ  ಬೊಗಳ್ತಾ ಇದ್ದಾನೆ” 

“ಪೊಲೀಸ್‌ನ ಕರೀರಿ” 

ಅಚಾನಕ್ಕಾಗಿ ಮೈಯನ್ನು ತಿರುಚಿ ಡ್ರಿಯೋಲಿ ಇಬ್ಬರಿಂದಲೂ ತಪ್ಪಿಸಿಕೊಂಡು ಯಾರಾದರೂ ನಿಲ್ಲಿಸುವ ಮೊದಲೇ ಗ್ಯಾಲರಿಯುದ್ದಕ್ಕೂ ಓಡುತ್ತ ಕಿರುಚಲಾರಂಭಿಸಿದ “ತೋರಿಸ್ತೀನಿ! ತೋರಿಸ್ತೀನಿ! ತೋರಿಸ್ತೀನಿ”. ತನ್ನ ಮೈಮೇಲಿನ ಕೋಟು ಕಳಚಿದ, ನಂತರ ಜ್ಯಾಕೆಟ್, ಅಂಗಿ ಕಳಚಿ ಬರಿಯ ಬೆನ್ನು ಜನಕ್ಕೆ  ಕಾಣಿಸುವಂತೆ ತಿರುಗಿ ನಿಂತ . 

“ಇಲ್ಲಿದೆ ನೋಡಿ” ಏದುಸಿರು ಬಿಡುತ್ತ ಕಿರಿಚಿದ “ಕಾಣಿಸ್ತಾ  ಇದ್ಯಾ ಇಲ್ಲಿದೆ!”

ತಕ್ಷಣ ಪೂರ್ತಿ ನಿಶಬ್ಧ ಕೋಣೆಯಲ್ಲಿ, ಮಾಡುತ್ತಿದ್ದುದನ್ನು ಬಿಟ್ಟು ಪ್ರತಿಯೊಬ್ಬನೂ ಆಶ್ಚರ್ಯ ದಿಗ್ಭ್ರಮೆಯಿಂದ ಸ್ತಬ್ಧರಾಗಿಬಿಟ್ಟಿದ್ದರು. ಟ್ಯಾಟೂ ಚಿತ್ರವನ್ನು ಅವರೆಲ್ಲ ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ಅದು ಇನ್ನೂ ಹಾಗೆಯೆ ಇದ್ದಿತು, ಬಣ್ಣಗಳು ಮೊದಲಿನಂತೆಯೇ ಢಾಳಾಗಿದ್ದವು, ಆದರೆ ಮುದುಕನ ಸೊರಗಿದ ಬೆನ್ನು, ಚೂಪಾಗಿದ್ದ ಭುಜದ ಎಲುಬುಗಳಿಂದಾಗಿ ಚಿತ್ರವು ನೆರಿಗೆಗಳಿಂದ ಕೂಡಿ ಅಪ್ಪಚ್ಚಿಯಾದಂತೆ ಕಾಣಿಸುತಿತ್ತು. 

ಯಾರೋ ಅಂದರು “ಮೈ ಗಾಡ್, ಅವನದ್ದೇ ಇದು”

ಸಂಭ್ರಮ ಪೂರಿತ ದನಿಗಳ ಸದ್ದಿನೊಂದಿಗೆ ನೆರೆದವರು ಮುಂದೆ ಬಂದು ಮುದುಕನನ್ನು ಸುತ್ತುವರೆದರು. 

“ಅನುಮಾನವೇ ಇಲ್ಲ”

“ಅವನ ಆರಂಭದ ದಿನಗಳ ಶೈಲಿ, ಅಲ್ವಾ?”

“ಇದು ಅದ್ಭುತ ಅದ್ಭುತ”

“ನೋಡು, ಸಹಿ ಮಾಡಿದ್ದಾನೆ”

“ಸ್ವಲ್ಪ ಭುಜ ಮುಂದೆ ಬಗ್ಗಿಸು, ಗೆಳೆಯ, ಚಿತ್ರ ಸಪಾಟಾಗಿ ಕಾಣಲಿ”

“ಅಜ್ಜ, ಇದನ್ನು ಯಾವಾಗ ಮಾಡಿದ್ದು?”

“೧೯೧೩ ರಲ್ಲಿ” ಡ್ರಿಯೋಲಿ ಹಿಂತಿರುಗದೆ ಹೇಳಿದ “೧೯೧೩ರ ಶರದೃತುವಿನಲ್ಲಿ”

“ಸೂಚಿನ್‌ಗೆ ಟ್ಯಾಟೂ ಮಾಡೋದು ಯಾರು ಹೇಳ್ಕೊಟ್ರು?’

“ನಾನು” 

“ಮತ್ತೆ ಹೆಂಗಸು?”

“ನನ್ನ ಮಡದಿ” 

ಗ್ಯಾಲರಿಯ ಮಾಲೀಕ ಗುಂಪನ್ನು ಪಕ್ಕಕ್ಕೆ ಸರಿಸುತ್ತ  ಡ್ರಿಯೋಲಿಯ ಹತ್ತಿರ ಬರಲಾರಂಭಿಸಿದ. ಶಾಂತ ಹಾಗೂ ಗಂಭೀರವಾಗಿ ತುಟಿಗಳನ್ನು ಮಾತ್ರ ಅರಳಿಸುತ್ತ ಅವನಂದ “ಮಹೋದಯ, ನಾನದನ್ನು ಕೊಳ್ಳುತ್ತೇನೆ” ಬಾಯಿ ಅಲುಗಾಡುವಾಗ ಮುಖದ ಮೇಲಣ ಬೊಜ್ಜು ಅಲ್ಲಾಡುವುದನ್ನು ಡ್ರಿಯೋಲಿ ನೋಡಿದ. “ನಾನು ಅದನ್ನು ಕೊಳ್ಳುತ್ತೇನೆ ಅಂದೆ”. 

“ಅದು ಹೇಗೆ ಸಾಧ್ಯ?” ಡ್ರಿಯೋಲಿ ಮೆಲುವಾಗಿ ಕೇಳಿದ . “ನಿಂಗೆ ಇನ್ನೂರು ಸಾವಿರ ಫ್ರಾಂಕುಗಳನ್ನ ಕೊಡ್ತೇನೆ” ಡೀಲರನ ಕಪ್ಪು ಕಣ್ಣುಗಳು ಕಿರಿದಾಗಿದ್ದವು, ಅವನ ಅಗಲವಾದ ಮೂಗಿನ ಹೊಳ್ಳೆಗಳು ಕಂಪಿಸುತಿದ್ದವು. 

“ಒಪ್ಕೋಬೇಡ” ಗುಂಪಿನಲ್ಲಿನ ಯಾರೋ ಮೆಲುದನಿಯಲ್ಲಂದರು “ಇಪ್ಪತ್ತು ಪಟ್ಟು ಹೆಚ್ಚು ಬೆಲೆಬಾಳುತ್ತದೆ.”

ಡ್ರಿಯೋಲಿ  ಮಾತನಾಡಲೆಂದು ಬಾಯಿ ತೆರೆದ, ಶಬ್ದಗಳು ಹೊರಡಲಿಲ್ಲ. ಬಾಯಿ ಮುಚ್ಚಿದ, ಮತ್ತೆ ತೆರೆದ ನಿಧಾನಕ್ಕೆ ಕೇಳಿದ “ನಾನು ಮಾರೋದು ಹೇಗೆ?”  ಕೈಗಳನ್ನು ಮೇಲಕ್ಕೆತ್ತಿ  ಕೆಳಹಾಕಿದ

 “ಮಿಸ್ಟರ್, ಮಾರೋದು ಹೇಗೆ ಸಾಧ್ಯ?” ಅವನ ದನಿಯಲ್ಲಿ ಎಲ್ಲಿಲ್ಲದ ವಿಷಾದವಿತ್ತು . 

“ಹ್ಞೂ”  ಗುಂಪಿನಲ್ಲಿದ್ದವರು ಹೇಳುತ್ತಿದ್ದರು “ಹೇಗೆ ಮಾರೋದು ಅವನು? ಅವನ ದೇಹದ್ದೇ ಭಾಗ ಅದು!”

“ಇಲ್ಕೇಳು” ಡೀಲರ್ ಹತ್ತಿರ ಬಂದ “ನಾನು ಸಹಾಯ ಮಾಡ್ತೀನಿ, ನಿನ್ನನ್ನ ಶ್ರೀಮಂತನನ್ನಾಗಿ ಮಾಡ್ತೀನಿ. ನಾವಿಬ್ರೂ ಈ ಚಿತ್ರದ ವಿಷ್ಯ ಏನಾದ್ರೂ ಏರ್ಪಾಡು ಮಾಡೋಣ, ಅಲ್ವಾ?”

ಡ್ರಿಯೋಲಿ ಆತಂಕದಿಂದ ಅವನನ್ನೇ ನೋಡಿದ “ಹೇಗೆ ಕೊಳ್ಳಲಾಗುತ್ತದೆ ಮಿಸ್ಟರ್? ಕೊಂಡ ಮೇಲೆ ಎಲ್ಲಿ ಇಡ್ತೀರಿ ನೀವು? ಏನು ಮಾಡ್ತೀರಿ? ಇವತ್ತು? ನಾಳೆ?” 

“ಆಹ್ ಎಲ್ಲಿಡೋದು? ಹಾಂ ಎಲ್ಲಿಡೋದು ಅದನ್ನ, ಎಲ್ಲಿಡಬೋದು ನಾನು? ನೋಡೋಣ… ಬೆಳ್ಳನೆ ದಪ್ಪ ಬೆರಳುಗಳಿಂದ ಮೂಗನ್ನು ಸವರುತ್ತಾ ಅವನಂದ ”ನಾನು ಹೇಳೋದಂದ್ರೆ, ಚಿತ್ರ ತಗಂಡ್ರೆ ಅದರ ಜೊತೆ ನಿನ್ನನ್ನೂ ತಗೋಬೇಕು ಅದೇ ಕಷ್ಟಕ್ಕಿಟ್ಟುಕೊಂಡಿರೋದು” ಮತ್ತೆ ಮೂಗು ಸವರುತ್ತ “ನೀನು ಸಾಯೋ ತನಕ ಚಿತ್ರಕ್ಕೆ ಬೆಲೆಯಿಲ್ಲ. ಎಷ್ಟು ವರ್ಷ ನಿಂಗೆ ಗೆಳೆಯ?”

“ಅರುವತ್ತೊಂದು”

“ಅರೋಗ್ಯ ಅಷ್ಟೇನೂ ಚೆನ್ನಾಗಿರ್ಲಿಕ್ಕಿಲ್ಲ ಅಲ್ವಾ?” ಮೂಗಿನ ಮೇಲಿನ ಕೈ ತೆಗೆದು ಡೀಲರ್ ಡ್ರಿಯೋಲಿಯನ್ನು, ನಿಧಾನಕ್ಕೆ ರೈತನೊಬ್ಬ ಮುದಿ ಎತ್ತನ್ನ ನೋಡುವಂತೆ ಮೇಲಿಂದ ಕೆಳಕ್ಕೆ ನೋಡಿದ.  

“ನಂಗಿಷ್ಟವಿಲ್ಲ ಇದೆಲ್ಲ, ನಿಜಕ್ಕೂ ಮಿಸ್ಟರ್ ನಂಗಿಷ್ಟ ಇಲ್ಲ” 

ಬದಿಗೆ ಸರಿಯುವಾಗ ಎಡವಿ  ಉದ್ದನೆಯ ಮನುಷ್ಯನೊಬ್ಬನ ತೆಕ್ಕೆಯೊಳಗೆ ಬಿದ್ದ, ಅವ ತನ್ನ  ಕೈಗಳನ್ನು ಮುಂದೆ ಮಾಡಿ ಹಗೂರ ಇವನ ಭುಜಗಳನ್ನು ಹಿಡಕೊಂಡ. ಸುತ್ತು ನೋಡಿದ ಡ್ರಿಯೋಲಿ ಸಾರಿ ಅಂದ. ತನ್ನ ಹಳದಿ ಬಣ್ಣದ ಗವಸು ತೊಟ್ಟ ಕೈಗಳಿಂದ ಅವನು ಮುದುಕನ ನಗ್ನ ಭುಜದ ಮೇಲೆ ಅಪ್ಯಾಯತೆಯಿಂದ ತಟ್ಟುತ್ತ  ಮುಗುಳ್ನಕ್ಕ. 

“ನಾ ಹೇಳೋದ ಕೇಳು ಫ್ರೆಂಡ್” ಮುಖದ ಮೇಲೆ ಇನ್ನೂ ಮಾಸದ ನಗುವಿನೊಂದಿಗೆಯೇ ಅವನಂದ “ನಿನಗೆ ಈಜೋದು , ಸೂರ್ಯಸ್ನಾನ ಮಾಡೋದು ಇಷ್ಟಾನ?”

ತುಸು ಅಚ್ಚರಿಯಿಂದಲೇ ಡ್ರಿಯೋಲಿ  ಅವನೆಡೆ  ನೋಡಿದ. 

“ನಿಂಗೆ ಒಳ್ಳೆ ಊಟ ಕೆಂಪು ವೈನ್ ಅಂದ್ರೆ ಇಷ್ಟಾನ?” ಅವನಿನ್ನೂ ನಗುತ್ತಲೇ ಇದ್ದ. ಚಂದದ  ಬೆಳ್ಳಗಿನ ದಂತಪಂಕ್ತಿಯ ನಡುವೆ ಚಿನ್ನದ ಬಣ್ಣ ಹೊಳೆಯುತ್ತಿತ್ತು.  

ಗವಸು ತೊಟ್ಟ ಕೈಗಳನ್ನು  ಡ್ರಿಯೋಲಿಯ ಭುಜದ ಮೇಲಿಟ್ಟುಕೊಂಡೇ ಅನುನಯಿಸುವ ದನಿಯಲ್ಲಿ ಅವನು ಮಾತನಾಡುತ್ತಿದ್ದ “ಅಂತದೆಲ್ಲ ಇಷ್ಟಾನ ನಿಂಗೆ?” 

“ಅಹ್ ಹೌದು”  ಬಹಳ ಆಶ್ಚರ್ಯದಿಂದಲೇ ಡ್ರಿಯೋಲಿ ಉತ್ತರಿಸಿದ “ಖಂಡಿತ”

“ಮತ್ತೆ ಚಂದದ ಹುಡುಗಿಯರು?”

“ಯಾಕಿಲ್ಲ?”

“ಬೀರು ತುಂಬಾ ನಿನ್ನಳತೆಗೆ ತಕ್ಕ ಹಾಗೆ ಹೊಲಿಸಿದ ಸೂಟ್ ಶರ್ಟುಗಳು?” 

“ನಿನ್ಹತ್ರ ಬಟ್ಟೆಬರೆ ಸ್ವಲ್ಪ ಕಡಿಮೆ ಇದ್ದಹಾಗೇ ಅನಿಸ್ತಾ ಇದೆ” 

ಡ್ರಿಯೋಲಿ  ಈ ನಯನಾಜೂಕಿನ ಮನುಷ್ಯನನ್ನು ನೋಡುತ್ತಲೇ ಇದ್ದ ಮುಂದೇನು ಹೇಳುವವನಿದ್ದಾನೋ ಎಂದು. “ನಿನ್ನ ಕಾಲಿಗೆಂದೇ ಯಾವತ್ತಾದರೂ ಶೂಸ್ ಮಾಡಿಸಿಕೊಂಡಿಯ?”

“ಇಲ್ಲ”

 “ಮಾಡಿಸ್ಕೊಳ್ಳೊದಿಷ್ಟಾನ?

“ಉಮ್ …”

“ದಿನ ಬೆಳಗ್ಗೆ ನಿಂಗೆ ಶೇವ್ ಮಾಡಿ ಕೂದಲು ಟ್ರಿಮ್ ಮಾಡುವ ಆಳು?”

ಡ್ರಿಯೋಲಿ ಬಾಯಿಬಿಟ್ಟು ನಿಂತು ಕೇಳುತ್ತಿದ್ದ 

“ನಿನ್ನ ಕೈ ಮ್ಯಾನಿಕ್ಯೂರ್ ಮಾಡಲು ಚಂದದ ಹುಡುಗಿ?”

ಗುಂಪಿನಲ್ಲಿ ಸಣ್ಣಗೆ ನಗೆ. 

“ಬೆಳಗ್ಗೆ ಹಾಸಿಗೆಯ ಬಳಿಯ ಬೆಲ್ ಬಾರಿಸಿದೊಡನೆ ಟಿಫನ್ ತರುವ ಹೆಣ್ಣಾಳು? ಇದೆಲ್ಲ ನಿಂಗಿಷ್ಟಾನ  ಫ್ರೆಂಡ್? ಏನಂತೀ ನೀನು?” 

ಡ್ರಿಯೋಲಿ ಸುಮ್ಮನೆ ನಿಂತು ಅವನತ್ತ ನೋಡಿದ. 

“ನೋಡು, ಕಾನ್‌ನ ಬ್ರಿಸ್ಟಲ್ ಹೋಟೆಲಿನ ಮಾಲೀಕ ನಾನು. ನಾನು ನಿನ್ನನ್ನು ಕರೀತಾ ಇದ್ದೀನಿ ಇಡೀ ಜೀವನ ನನ್ನ ಅತಿಥಿಯಾಗಿ ಐಷಾರಾಮಿ ಜೀವನ ನಡೆಸಬೋದು ನೀನು” ಕೇಳುಗನಿಗೆ ಮುಂಬರಲಿರುವ ಆರಾಮದಾಯಕ ಜೀವನದ ಕಲ್ಪನೆ ಮಾಡಿಕೊಳ್ಳಲು ಸಮಯ ನೀಡುತ್ತಾ ಮಾತು ನಿಲ್ಲಿಸಿದ . 

“ನಿನಗಿರೋ ಒಂದೇ ಕೆಲಸ ಅಥವಾ ಖುಷಿ ಅನ್ನಬಹುದೇನೋ ಅದು ನನ್ನ ಬೀಚ್‌ನಲ್ಲಿ ನನ್ನ ಅತಿಥಿಗಳೊಂದಿಗೆ, ಸೂರ್ಯ ಸ್ನಾನ ಮಾಡೋದು, ಈಜೋದು, ಕಾಕ್ ಟೇಲ್ ಕುಡಿಯೋದು. ಹೀಗೆ, ಏನಂತೀಯಾ?”

ಉತ್ತರವಿಲ್ಲ.   

“ನಿಂಗೆ ಅರ್ಥವಾಗಲ್ಲ, ನೋಡು ಸೂಚಿನ್‌ನ  ಈ ಅದ್ಭುತ ಚಿತ್ರ ನೋಡಲು ಎಲ್ಲ ಅತಿಥಿಗಳಿಗೂ ಅವಕಾಶ ಸಿಗತ್ತೆ. ನೀನೂ ಪ್ರಖ್ಯಾತನಾಗ್ತೀಯ, ಜನ ಹೇಳ್ತಾರೆ “ನೋಡು ಆ ಮನುಷ್ಯನ ಬೆನ್ನ ಮೇಲೆ ಹತ್ತು ಮಿಲಿಯನ್ ಫ್ರಾಂಕುಗಳಿವೆ”  ಏನಂತೀ ಖುಷಿನಾ?”

ಹಳದಿ ಗವಸು ಹಾಕಿಕೊಂಡಿದ್ದ ಉದ್ದ ಮನುಷ್ಯನನ್ನು ಡ್ರಿಯೋಲಿ ನೋಡಿದ. ಅವನಿಗೆ ಇದೆಲ್ಲವೂ ತಮಾಷೆಯೇ ಎನ್ನಿಸಿತು.

“ಕೇಳೋಕೆ ತಮಾಷೆಯಾಗಿದೆ, ಆದ್ರೆ ನೀವು ನಿಜ ಹೇಳ್ತಾಯಿದ್ದೀರ?” 

“ಖಂಡಿತ ನಿಜ”

ಡೀಲರ್ ಮಧ್ಯ  ಬಾಯಿ ಹಾಕಿದ, “ನೋಡು ಅಜ್ಜ, ನಮ್ಮ ಸಮಸ್ಯೆಗೆ ಒಂದು ಪರಿಹಾರವಿದೆ. ನಾನು ಚಿತ್ರ ಕೊಂಡ್ಕೋತೀನಿ, ನಿನ್ನ ಚರ್ಮದ ಮೇಲಿನ ಚಿತ್ರವನ್ನು ಕೀಳೋಕ್ಕೆ ಸರ್ಜನ್ ಒಬ್ಬನನ್ನು ಕರೀತೀನಿ, ಆಮೇಲೆ ನೀನು ಸ್ವತಂತ್ರನಾಗಿ ನಾನು ಕೊಡುವ ಹಣದಿಂದ ಖುಷಿಯಾಗಿರ್ಬೋದು.”

“ಬೆನ್ನ ಮೇಲೆ ಚರ್ಮ ಇಲ್ದೇ ?”

“ಓಹ್ ಹಾಗಲ್ಲ, ನಿಂಗೆ ಅರ್ಥ ಆಗಿಲ್ಲ. ನಿನ್ನ ಬೆನ್ನ ಮೇಲೆ ಸ್ಕಿನ್ ಗ್ರಾಫ್ಟಿಂಗ್ ಮಾಡಿ ಹೊಸ ಚರ್ಮ ಹಾಕಲಾಗತ್ತೆ, ಭಾಳ ಸುಲಭ ಅದು“

“ಹೌದ ಹಾಗೆ ಮಾಡೋಕ್ಕಾಗತ್ತಾ?”

“ಯಾಕಾಗಲ್ಲ?”

“ಅಸಾಧ್ಯ” ಗವಸು ಹಾಕಿದವನೆಂದ “ಆ ತರಹದ ಆಪರೇಷನ್ ಮಾಡಿಸಿಕೊಳ್ಳೋದಕ್ಕೆ  ಅವನು ಮುದುಕನಾಗಿದ್ದನೆಅವನು ಸತ್ತೇ ಹೋಗ್ತಾನೆ, ನೀನು ಸಾಯ್ತಿ ನನ್ನ ಫ್ರೆಂಡ್”

“ಸಾಯ್ತೀನಾ?” 

“ಮತ್ತೆ? ಜೀವಂತವಾಗಿರೋದು ಸಾಧ್ಯನೇ ಇಲ್ಲ, ಚಿತ್ರ ಮಾತ್ರ ಸಿಗತ್ತೆ”

“ಅಬ್ಬಾ ದೇವರೇ!”  ಡ್ರಿಯೋಲಿ ಕಿರಿಚಿದ. ಅವನನ್ನು ನೋಡುತ್ತಿದ್ದ ಜನರತ್ತ ದಿಗ್ಭ್ರಮೆಯಿಂದ ನೋಡ್ತಾ ಇದ್ದ. ಗುಂಪಿನ ಹಿಂದುಗಡೆಯಿಂದ ಮೌನವನ್ನು ಭೇದಿಸುತ್ತ ದನಿಯೊಂದು ಕೇಳಿಸಿತು “ಸಾಕಷ್ಟು ದುಡ್ಡು ಕೊಟ್ಟರೆ ಈಗಲೇ ಸಾಯಲು ಒಪ್ಪಿಗೆ ಕೊಡಬಹುದೇನೋ ಈತ ಯಾರಿಗ್ಗೊತ್ತು?”

ಗುಂಪಿನಲ್ಲಿ ಮುಸಿನಗು .

ಡೀಲರ್ ಅಶಾಂತನಾಗಿ ರತ್ನಗಂಬಳಿಯ ಮೇಲೆ ಕಾಲು ಅಲ್ಲಾಡಿಸುತ್ತಿದ್ದ. 

ಹಳದಿ ಗವಸು ತೊಟ್ಟ ಕೈ ಡ್ರಿಯೋಲಿಯ ಭುಜ ತಟ್ಟಿತು “ಬಾ”  ದೊಡ್ಡದಾಗಿ ನಗುತ್ತ ಹೇಳಿದ “ನಾವಿಬ್ಬರೂ ಹೊರಗೆ ಊಟಕ್ಕೆ ಹೋಗೋಣ, ಮಾತಾಡ್ತಾ ಊಟ ಮಾಡಿದ್ರೆ ಚೆನ್ನಾಗಿರತ್ತೆ, ಹಸಿವಾಗಿದ್ಯಾ ನಿಂಗೆ? ಏನಂತೀ?”

ಡ್ರಿಯೋಲಿ ಹುಬ್ಬುಗಂಟಿಕ್ಕಿ ಅವನನ್ನೇ ನೋಡಿದ. ಅವನಿಗೆ ಈ ಮನುಷ್ಯನ ಉದ್ದ ಕತ್ತು, ಮಾತಾಡುವಾಗ ಅದನ್ನು  ಹಾವಿನಂತೆ ಅಲ್ಲಾಡಿಸೋದು ಇಷ್ಟವಾಗಲಿಲ್ಲ. “ರೋಸ್ಟ್ ಡಕ್ ಮತ್ತು ಶಂಬರ್ತನ್”, ಅವನು ಬಾಯಿಯಿಂದ ಹೊರಹಾಕಿದ ಪದಗಳಲ್ಲಿ ರಸ ಒಸರುತ್ತಿತ್ತು “ಆಮೇಲೆ ಬೇಕಾದ್ರೆ ಲಘುವಾದ ನೊರೆಭರಿತ ಸೂಫ್ಲೇ.”  ಡ್ರಿಯೋಲಿಯ ಕಣ್ಣುಗಳು ಮೇಲಿನ ಛಾವಣಿ ನೋಡುತ್ತಿದ್ದವು, ತುಟಿಗಳು ಸಡಿಲವಾಗಿ ಒದ್ದೆಯಾದವು. ಪಾಪದ ಮುದುಕನ ಬಾಯಲ್ಲಿ ಜೊಲ್ಲು ಸುರಿಯುವುದು ಎಲ್ಲರಿಗೂ ಕಾಣಿಸುವಂತಿತ್ತು.

“ಡಕ್ ಯಾವ ಥರ ಇಷ್ಟ ನಿಂಗೆ, ಹೊರಗಡೆ ಕಂದು ಬಣ್ಣವಿದ್ದು ಕುರುಕುರಿಯಾಗಿಯೋ ಅಥವಾ… “ 

“ನಾನು ಬರ್ತೀನಿ”  ಡ್ರಿಯೋಲಿ ತಟ್ಟನೆ ಹೇಳಿ ಅಂಗಿ ಎಳಕೊಂಡು ತಲೆ ತೂರಿಸಿಕೊಳ್ಳಲಾರಂಭಿಸಿದ. 

“ಸ್ವಲ್ಪ ಕಾಯಿ ನಂಗೋಸ್ಕರ, ಬಂದೆ “. ಮುಂದಿನ ನಿಮಿಷದಲ್ಲಿ ಗ್ಯಾಲರಿಯಿಂದ ಅವನ ಹಿತೈಷಿಯೊಂದಿಗೆ ಮಾಯವಾಗಿಬಿಟ್ಟ . 

ಕೆಲವೇ ವಾರಗಳೊಳಗೆ, ಸೂಚಿನ್ ಬಿಡಿಸಿದ ಹೆಣ್ಣಿನ ತಲೆಯ ಅದ್ಭುತ ಚಿತ್ರವೊಂದು ಚಂದದ ಚೌಕಟ್ಟು, ಹೊಸ ಮೆರುಗಿನೊಂದಿಗೆ ಬೆನೋಸ್ ಐರಿಸ್‌ನಲ್ಲಿ ಮಾರಾಟಕ್ಕೆ ಬಂತು. ಇದು ಮತ್ತು ಕಾನ್‌ನಲ್ಲಿ ಬ್ರಿಸ್ಟಲ್ ಎಂಬ ಹೋಟೆಲೇ  ಇಲ್ಲವೆನ್ನುವ ವಿಷಯ ಸ್ವಲ್ಪ ಆಶ್ಚರ್ಯವನ್ನುಟಂಟುಮಾಡುವುದರ  ಜೊತೆಗೆ ಮುದುಕನ ಅರೋಗ್ಯ ಚೆನ್ನಾಗಿರಲಿ, ಹಾಗೂ ಎಲ್ಲಿದ್ದರೂ ಚಂದದ ಹುಡುಗಿಯೊಬ್ಬಳು ಅವನ ಕೈಯ ಉಗುರುಗಳನ್ನು ಮ್ಯಾನಿಕ್ಯೂರ್ ಮಾಡುತ್ತಿರಲಿ, ಮತ್ತೆ ಕೆಲಸದಾಕೆಯೊಬ್ಬಳು ಬೆಳಗಿನ ಹೊತ್ತು ಅವನಿಗೆ ಹಾಸಿಗೆಯ ಬಳಿ ಉಪಹಾರ ತಂದುಕೊಡುತ್ತಿರಲಿ ಎಂದು ಹಾರೈಸುವಂತೆ ಮಾಡಿತು. 

। ಮುಕ್ತಾಯ ।

‍ಲೇಖಕರು Admin

November 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: