ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಮರಳಿ ಮರಳಿ ರಂಗನತಿಟ್ಟಿಗೆ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

4

ದೂರದೂರದ ಬಹುದೂರದ ಊರುಗಳಿಂದ ದೇಶಗಳಿಂದ ನಿರಂತರವಾದ ವಲಸೆ ನಡೆದೇ ಇದೆ ಚರಿತ್ರೆಯ ಪುಟಗಳಲ್ಲಿ… ಮನುಷ್ಯರಿಂದ ಹಿಡಿದು ಪ್ರಾಣಿ, ಹಕ್ಕಿಗಳ ತನಕ. ಯಾವ ಹಕ್ಕಿಗಳೂ ತಾನು ವಲಸೆ ಹೋದ ಜಾಗ ಹಿಡಿದು ಆಳಿದ್ದು, ಅಳಿವಿಗೆ ತಳ್ಳಿದ್ದು ಉಂಟೆ. ಹೆಚ್ಚೆಂದರೆ ಅವಧಿ ಮೀರಿ ಇನ್ನೂ ನಾಲ್ಕು ದಿನ ಉಳಿದು ಹೋದಾವು, ಕೆಲವು ಮಾತ್ರ ಅಲ್ಲಿಯೇ ಉಳಿದಾವು. ಉಳಿದಂತೆ ತಮ್ಮ ಸಂತತಿಗಳನ್ನು ಬೆಳೆಸಿಕೊಂಡು ಸೈಬೀರಿಯಾ, ಮಂಗೋಲಿಯಾ… ಹೀಗೆ ಎಲ್ಲಿಂದ ಬಂದವೋ ಅಲ್ಲಿಗೆ ಮರಳಿ ಮರುಪಯಣ. ಆದರೆ ಮನುಷ್ಯರ ವಿಚಾರದಲ್ಲಿ ಹೀಗೆ ಇದೆಯೇ? ಇರಲಿ ಬಿಡಿ, ಮನುಷ್ಯ ಪ್ರಪಂಚದ ಅಮಾನುಷ ದುರಂತವಿದು, ತಿಳಿದರೂ ತಿಳಿವು ತಂದುಕೊಳ್ಳದೆ ತಾನಾಗಿಯೇ ತಂದುಕೊಂಡ ತಳ್ಳಂಕ.

ನನ್ನೂರು ಮಂಡ್ಯಕ್ಕೆ ತೀರಾ ಹತ್ತಿರದ ಹಕ್ಕಿತಾಣ ರಂಗನತಿಟ್ಟು. ಹಕ್ಕಿಗಳ ವಲಸೆ ಹಕ್ಕಿಗಳ ಸುರಕ್ಷಿತ ತಾಣ, ಪಕ್ಷಿಧಾಮ. ಹಿಂದೆ ಮೂರ‍್ನಾಲ್ಕು ಸಲ ಅಲ್ಲಿಗೆ ಹೋಗಿದ್ದೆ. ಆದರೆ ಕೇವಲ ನೋಡುಗಳಾಗಿ ಹೋಗಿದ್ದೆ, ಕ್ಯಾಮೆರಾ ಗಿಮೆರಾ ಎಂತದ್ದೂ ಇರಲಿಲ್ಲ ಕೈಯೊಳಗೆ. ಆಗಿನ ನನ್ನ ಅಳತೆಗೆ ಕ್ಯಾಮೆರಾ ಒಂದು ಮಾಯಾಪೆಟ್ಟಿಗೆ. ಅದು ನನ್ನ ಕೈಯಳತೆಗೆ ಇರಲಿ ಕನಸಿನಲ್ಲೂ ನನ್ನ ಕೈಗೆ ಸಿಗುವಂತಿರಲಿಲ್ಲ. ದಡದಲ್ಲಿ ನಿಂತೋ, ದೋಣಿಯಲ್ಲಿ ಕುಳಿತೋ ರಂಗನತಿಟ್ಟನ್ನು ನೋಡಿದ್ದೆ. ನೋಡಿದ ಸ್ಥಳಗಳ ಪಟ್ಟಿಯಲ್ಲಿ ನಾನೂ ರಂಗನತಿಟ್ಟು ನೋಡಿದ್ದೆ ಎಂದು ಸೇರಿಸಿದ್ದೆ ಅಷ್ಟೆ. ಯಾವ ಹಕ್ಕಿ ಅಂತಾ ಕೇಳಿದರೆ ರಂಗನತಿಟ್ಟಿನ ಗೇಟು ದಾಟುವಷ್ಟರಲ್ಲಿ ಮರವೆಯಂಚಿಗೆ ಸೇರಿರುತ್ತಿತ್ತು. 

ಅದಿರಲಿ, ಮನೆಯಂಗಳದಲ್ಲಿ ಕುಳಿತು ಹಕ್ಕಿ ನೋಡುತ್ತಿದ್ದಾಗಲೂ ಕಾಗೆ, ಗುಬ್ಬಿ ಬಿಟ್ಟರೆ ಬುಲ್‌ಬುಲ್ ಒಂದೇ ಗೊತ್ತಾಗಿದ್ದುದು. ಅದೂ ಬುಲ್‌ಬುಲ್ ನನ್ನ ಮನೆ ಮುಂಬಾಗಿಲಿನ ಎದುರೇ ಕ್ರೋಟನ್ ಗಿಡದಲ್ಲಿ ಗೂಡುಕಟ್ಟಿ ಸಂತಾನ ಬೆಳೆಸುತ್ತಿದ್ದ ಕಾರಣ, ಪೂರ್ಣಚಂದ್ರ ತೇಜಸ್ವಿಯವರ ಸುಸ್ಮಿತಾ ಮತ್ತು ಹಕ್ಕಿಮರಿ ಪಾಠ ಮಾಡಿದ್ದ ಕಾರಣ. ಮನೆಯಿಂದ ಈಚೆಗೆ ಬರುವಾಗಲೆಲ್ಲ ಕಣ್ಣಿಗೆ ಬೀಳುತ್ತಿದ್ದ ಕಾರಣ ಅದು ಬುಲ್‌ಬುಲ್ ಎಂದು ತಿಳಿದುಬಿಟ್ಟಿತ್ತು. ಅದಕ್ಕೆ ಪಿಕಳಾರ ಎಂಬ ಕನ್ನಡ ಹೆಸರೂ ಇದೆ ಎನ್ನುವುದೂ ಗೊತ್ತಿರದ ಕನ್ನಡ ಮೇಡಂ ನಾನಾಗಿದ್ದೆ. ಪಿಕಳಾರ ಗೊತ್ತಿಲ್ಲ ಅಂತಲ್ಲ, ಆದರೆ ಬುಲ್‌ಬುಲ್ ಹಕ್ಕಿಯೇ ಪಿಕಳಾರ ಅನ್ನೋದು ಗೊತ್ತಿರಲಿಲ್ಲ. ಏಕೆಂದರೆ ಪಾಠ ಮಾಡುವಾಗ ಗಿಳಿ, ಗೊರವಂಕ, ಪಿಕಳಾರ ಕೇಳಿದ್ದೆ, ಆದರೆ ಕರ್ವಾಲೋ ಕಾದಂಬರಿಯ ಪ್ಯಾರನ ತರ ಕಾಣ್ತದೆ ಆದರೆ ಕಾಣಕಿಲ್ಲ ಅಂದಂತೆ ನನಗೆ ಗೊತ್ತಿತ್ತು ಆದರೆ ಗೊತ್ತಿರಲಿಲ್ಲ ಅಷ್ಟೆ.

ಬಾಡಿಗೆಮನೆಯ ಭಂಗಗಳನ್ನು ದಾಟಿ ಸ್ವಂತದ ಮನೆಗೆ ಬಂದೆ. ಭಂಗ ಅಂದೆ ಅಲ್ಲವೆ. ಭಂಗ ಅಂದರೆ ಏನು ಬಂತು ಗೊತ್ತಾ. ನನ್ ಗಂಡ ಸ್ವಲ್ಪ ಖೈಡ್ ಮನುಷ್ಯ. ಅವನ ಮೂಗಿನ ನೇರಕ್ಕೆ ಸತ್ಯ ಅಂತಾ ಕಂಡದ್ದನ್ನು ಮುಖಕ್ಕೆ ಹೊಡೆದ ಹಾಗೆ ಹೇಳಿ ಅದೇ ತರಹಕ್ಕೆ ಬದುಕಿದವ. ನಾವು ಬಾಡಿಗೆಗಿದ್ದ ಮನೆ ಆತನ ಗೆಳೆಯನೂ ಆದ ತಂಗಿಯ ಭಾವನ ಮಾವನ ಮನೆ. ಸ್ವಲ್ಪ ಕಾಲ ಕಳೆದ ಬಳಿಕ ಮನೆಯನ್ನು ರೆಂಟ್ ಕಂಟ್ರೋಲಿಗೆ ಹಾಕಿಬಿಟ್ಟ ನನ್ನವ. ತಂಗಿಯ ಭಾವನಿಗೆ ಮಾವನ ವರಾತ. ಆತ ನನ್ನ ಮೇಸ್ಟ್ರೂ ಹೌದು, ಸಹೋದ್ಯೋಗಿಯೂ ಹೌದು. ಒಂದು ದಿನ ಕಾಲೇಜಿನಲ್ಲಿ ಇದ್ದಾಗ “ಅಲ್ಲಮ್ಮಾ ಹಕ್ಕಿಪಕ್ಷಿಗಳೆಲ್ಲಾ ಗೂಡು ಕಟ್ಟಿಕೊಳ್ಳುತ್ತವೆ, ನಿಮಗೇನ್ರಮ್ಮ ಆಗಿರೋದು” ಎಂದು ಸ್ಟಾಫ್ ರೂಮಿನಲ್ಲಿ ರೇಗಿದ ಮಾತು ಮನಸ್ಸಿನಲ್ಲಿ ಕೂತು ಹಠಕ್ಕೆ ಬೀಳುವಂತಾಗಿ ಸ್ವಂತದ ಮನೆಯನ್ನು ಮಾಡಿಕೊಂಡಿದ್ದೆ. ಒಂದೊಂದು ಸಲ ಆತ ರೇಗಿದ್ದು ಒಳ್ಳೆಯದಾಯಿತು ಅನ್ನಿಸುತ್ತಿರುತ್ತದೆ, ಬುದ್ಧಿ ಬರಲು ಹೀಗೆ ತಿವಿದು ಮೇಲೆತ್ತಲು ಸನ್ನೆಗೋಲು ಬೇಕು. 

ಸ್ವಂತದ ಮನೆಗೆ ಬಂದಾಗ ಪಕ್ಕದ ಮನೆಯ ಕಾಂಪೌಂಡಿನಲ್ಲಿ ಮಾವು, ನೇರಳೆ, ಆಲ ಸೇರಿದಂತೆ ಹಲವು ಮರಗಳು ಹತ್ತಾರು ವರ್ಷಗಳ ಕಾಲ ಹಾಗೆಯೆ ಇದ್ದವು. ಹಲವು ಹತ್ತು ಹಕ್ಕಿಗಳ ಇನಿದನಿ ಕಿವಿಗೆ ಬೀಳುತ್ತಲೇ ಇದ್ದವು. ಕೂಗನ್ನು ಹಿಂಬಾಲಿಸಿ ನೋಡಲು ಹೋಗಿರಲಿಲ್ಲವಾದ್ದರಿಂದ ಕಣ್ಣಿಗೆ ಬಿದ್ದಿರಲಿಲ್ಲ. ಹತ್ತಿರದಲ್ಲಿದ್ದರೂ ಲಕ್ಷ್ಯವೇ ಇರದ ಅವಸರದ ಬದುಕಿನ ನಾಗಾಲೋಟದಲ್ಲಿದ್ದೆ. ನೋಡುವ ಕಣ್ಣಿದ್ದರೂ ನೋಡಬಹುದಾದದ್ದನ್ನು ನೋಡದ ಮಂದಮತಿಯವಳಾಗಿದ್ದೆ. ನಿಜ ಹೇಳಬೇಕೆಂದರೆ ರಜಾ ಇದ್ದ ದಿನ ಮಧ್ಯಾಹ್ನ ಕಣ್ಣು ನಿದ್ದೆ ಹತ್ತಿಸಿಕೊಳ್ಳುವಾಗ ಹಕ್ಕಿಗಳ ದನಿಯೆ ಕಿರಿಕಿರಿ ಆಗುತ್ತಿದೆ ಎಂದು ಬೈದುಕೊಂಡ ದಿನಗಳೂ ಅವಾಗಿದ್ದವು.

ಆ ಮನೆ ಮಾರಾಟ ಮಾಡಿದರು. ಕೊಂಡವರು ದೊಡ್ಡ ಅಪಾರ್ಟೆಮೆಂಟ್ ಕಟ್ಟಲು ವಿದ್ಯುತ್ ಗರಗಸದಿಂದ ಕ್ಷಣಾರ್ಧದಲ್ಲಿ ಮರಗಳನ್ನು ಉರುಳಿಸಿದುದನ್ನು ನೋಡಿ ಮನಸ್ಸು ಮುದುಡಿತ್ತು. ಹಕ್ಕಿಗಳು ನನ್ನ ಬದುಕಿನ ಭಾಗವಾದ ಮೇಲೆ ಅನ್ನಿಸುತ್ತಲೇ ಇದೆ, ಇರುತ್ತಿದೆ – ಆ ಮರಗಳೆಲ್ಲಾ ಹಾಗೆ ಇದ್ದಿದ್ದರೆ, ಆ ಹಕ್ಕಿಗಳೆಲ್ಲ ನೇರಳೆ, ಆಲ, ಮಾವು ಸೀಬೆಗಳಿಗೆ ಬಂದಿದ್ದರೆ ಇದ್ದಲ್ಲಿಂದಲೇ ದೊಡ್ಡ ಲೆನ್ಸ್ ಹಾಕಿ ಚಿತ್ರವಾಗಿಸಿ ಕಟ್ಟಿ ಹಾಕಬಹುದಿತ್ತಲ್ಲಾ ಎಂದು. ಈಗ ಆ 42 ಮನೆಗಳ ಅಪಾರ್ಟ್ಮೆಂಟೆಂಬ ಮಹಾ ಗೋಡೆ ಹಾರಿಬರುವ ಹಕ್ಕಿಗಳು ಮುಂದೆ ಹಾರಿಹೋಗಲೂ ಆಗದ ತಡೆಗೋಡೆ ಆಗಿವೆ. ಮಹಾ ಪೆಡಂಭೂತದ ಹಾಗೆ ಆಕಾಶಕ್ಕೆದ್ದು ನಿಂತ ನವನಾಗರೀಕತೆಯ ಅಪಾರ್ಟ್ಮೆಂಟ್ ಹಕ್ಕಿಗಳಿರಲಿ ನಮ್ಮ ಅಂಗಳಕ್ಕೆ ನಾವೇ ಇಳಿಯಲೂ ಹಲವು ಕಣ್ಣುಗಳ ಕಾವಲಿರುತ್ತದೆ.

ಪಾಠ ಮಾಡುವಾಗ ಲಕ್ಷ್ಮೀಶನ ಜೈಮಿನಿ ಭಾರತದಲ್ಲೋ, ಆಂಡಯ್ಯನ ಕಬ್ಬಿಗರ ಕಾವದಲ್ಲೋ ಕುವೆಂಪು ಕೃತಿಯಲ್ಲೋ ಹತ್ತಾರು ಹಕ್ಕಿಗಳ ಹೆಸರು ಹೇಳಿ ಹೇಳಿ ಪಾಠ ಶಿಷ್ಯರ ಮಸ್ತಿಸ್ಕಕ್ಕೆ ಮಕ್ಕಿಕಾಮಕ್ಕಿ ವರ್ಗಾಯಿಸುತ್ತಿದ್ದ ನನಗೆ ಹಕ್ಕಿಗಳ ಬಗ್ಗೆ ಪ್ರ್ಯಾಕ್ಟಿಕಲ್ ಜ್ಞಾನವೇ ಶೂನ್ಯ ಎನಿಸುವಷ್ಟಿತ್ತು. ತೇನೆ ಯಾವುದು, ಕಾಜಾಣ ಯಾವುದು ಗೊತ್ತೇ ಇರದ ಸಿಟಿಯಲ್ಲಿ ಬೆಳೆದ ಬುಕ್ಕಿಷ್ ಹುಳು ನಾನು. ಅಪ್ಪನ ಊರಿಗೆ ಹೋದರೂ ಒಂದು ದಿನವೂ ಇರದಿದ್ದವಳು ನಾನು. ಏಕೆಂದರೆ ಗದ್ದೆಲಿಂಗಯ್ಯ ಎಂಬ ಹೆಸರಿದ್ದ ಅಪ್ಪ ಇದ್ದ ಒಂದಿಷ್ಟನ್ನು ಬೆಂಗಳೂರು ಸಿಟಿಯಲ್ಲಿ ಮನೆ ಕಟ್ಟಲು ಮಾರಿಕೊಂಡು ಗದ್ದೆ ಹೊಲಗಳೇನೂ ಇಲ್ಲದೆ, ಸಿಟಿಗಳಲ್ಲಿ ವಾಸ ಮಾಡುತ್ತಾ ಮಾಡುತ್ತಾ ತನ್ನ ಬದುಕು ಮುಗಿಸಿದವ. ಅಮ್ಮನ ಹಳ್ಳಿಯಲ್ಲಿ ರಜಾ ದಿನಗಳಲ್ಲಿ ಇದ್ದೆನಾದರೂ ಒಂದು ದಿನವಾದರೂ ಒಂದಾದರೂ ಹಕ್ಕಿಯನ್ನು ನೋಡಿದ ಚಿತ್ರವೇ ಚಿತ್ತಕ್ಕೆ ಸುಳಿಯುವುದಿಲ್ಲ, ಹಕ್ಕಿ ದನಿ ಕೇಳಿದ ನೆನಪೂ ಇಲ್ಲ. 

ನಿವೃತ್ತಿಯ ನಂತರ ಮನೆಯಂಗಳದಲ್ಲಿ ಸನ್‌ಬರ್ಡ್ ಬಂದಾಗ ಅಲ್ಲಿಯತನಕ ಆ ಹೆಸರೇ ಕೇಳಿರದಿದ್ದ ನನಗೆ ಹೀಗೊಂದು ಹೆಸರಿನ ಹಕ್ಕಿ ಇದೆ ಎನ್ನುವುದೇ ಮಹಾ ಸೋಜಿಗವಾಗಿತ್ತು. ಸನ್‌ಬರ್ಡ್ ಸ್ಕೂಟರಿನ ಕನ್ನಡಿ ಕುಕ್ಕುತ್ತಿದ್ದಾಗ ಇದೇನು ಪಿಕಳಾರ ಹೀಗಿದೆ ಎಂದು ಪೆದ್ದುಪೆದ್ದಾಗಿ ಅಂದುಕೊಂಡಿದ್ದೆ. ಅದರ ಚಿತ್ರ ಹಿಡಿದು ಫೇಸ್‌ಬುಕ್ಕಿನಲ್ಲಿ ಹಾಕಿದಾಗ ಕಿರಿಯ ಗೆಳತಿಯೊಬ್ಬಳು `ಮೇಡಂ ಇದು ಸನ್‌ಬರ್ಡ್’ ಎಂದು ನನ್ನ ಅಜ್ಞಾನಕ್ಕೆ ಕನ್ನಡಿ ಹಿಡಿದು ತೋರಿಸಿದ್ದಳು. ಅರವತ್ತರ ಹೊಸ್ತಲಿನಲ್ಲೂ ನಾಲ್ಕು ಹಕ್ಕಿಗಳ ಜ್ಞಾನವಿಲ್ಲದ ಪಕ್ಕಾ ಪರದೇಶಿ ದರವೇಶಿಯಾಗಿದ್ದೆ. ಆಯಾ ಕಾಲದ ತಿಳಿವಳಿಕೆ ಆಯಾ ಕಾಲಕ್ಕೆ ತಾನೆ.ಏನು ಮಾಡೋದು ನನ್ನದೇ ಆದ ಬೇರೆ ಫೀಲ್ಡಿನಲ್ಲಿ ಸಂಪೂರ್ಣವಾಗಿ ಮುಳುಗಿಯೇ ಹೋಗಿದ್ದೆನಲ್ಲ ನಾನು.

ಹೀಗೆ ಇದ್ದಾಗ ತಾನೇ ಮಾಯಕದ ಸೆಳೆತ. ಹಕ್ಕಿಯ ಹಂಬಲಕೆ ಹಟ್ಟಿ ಮರೆಸುವ ಸೆಳೆತ. ದೂರ ದೂರ ಬಹುಬಹು ದೂರಕೆ ಹಕ್ಕಿಗಾಗಿ ಹೋಗುವ ಮುನ್ನ ಹತ್ತಿರದ ಹಕ್ಕಿ ನೆಲೆಗಳಿಗೆ ಹೊರಟುನಿಂತೆ. ಹಿಂದೆಂದೋ ಹೋಗಿದ್ದ ರಂಗನತಿಟ್ಟಿಗೆ ಈಗ ಹಲವು ಸಲ ಹೋದೆ. ಕುಳಿತೆ, ತಿರುಗಾಡಿದೆ, ದೋಣಿಯಲ್ಲಿ ಅಲೆ ಅಲೆದಾಡಿದೆ. ಕೇಳುವಾಗ ಅಲ್ಲಿ ಪೆಲಿಕಾನ್, painted stork, open billed stork, Spoon billed stork ಹೀಗೆ ಮುಖ್ಯವಾದ ನಾಲ್ಕೈದು ಹಕ್ಕಿಗಳ ಹೆಸರು ಕಿವಿಗೆ ಬೀಳುತ್ತಿತ್ತು. ಆದರೆ ಅಲ್ಲಿ ಹಕ್ಕಿಗಳ ಮಹಾನ್ ಪ್ರಪಂಚವೇ ಇತ್ತು. ಕಾಮನ್ ಆಗಿ ಕಾಣುವ ಹಕ್ಕಿಗಳೂ ಕಾಣುವ ನೋಟ ಬದಲಾದಾಗ ಅಸಾಮಾನ್ಯವಾಗಿಯೇ ಕಾಣುತ್ತವೆ ಎನ್ನುವುದಂತೂ ಸತ್ಯ.

ಬೃಹದ್ಗಾತ್ರದ spot billed ಹೆಜ್ಜಾರ್ಲೆಗಳು ಗಾಳಿಯಲ್ಲಿ ತೇಲುತೇಲುತ್ತಾ ಬಂದು ಥಟಕ್ಕನೆ ನೀರಿನತ್ತ ಬಾಗಿ ಕೊಕ್ಕು ಚಾಚಿ ನೀರು ಹೀರಿಕೊಳ್ಳುತ್ತಾ ಮತ್ತೆ ಮೇಲೆ ಚಿಮ್ಮಿ ನಭ ಸೇರುವ ನೋಟ ಸೇರದು ಯಾರಿಗೆ. ಸ್ವರ್ಗದ ತೇರು ಇಳಿದಿದೆ ಈ ಧರೆಗೆ. ಯಾರೋ ದೇವತೆಯು ಈ ನೆಲದಲ್ಲಿ ಇಳಿದು ನೀರಿನ ಮೇಲೆ ಮೋಹಕ ಬರೆಹ ಬರೆದಂತೆ ಕಾಣುತ್ತಿತ್ತು. ಓ… ಲೋಕವೆ ಎಲ್ಲಿಟ್ಟಿದ್ದೆ ಈ ಸೊಬಗನ್ನೆಲ್ಲಾ, ಈ ಕಣ್ಣಿದ್ದು ಏನೇನನ್ನೋ ನೋಡಿದ್ದೇನೆ, ನೋಡುತ್ತಿದ್ದೇನೆ ಎಂದುಕೊಂಡಿದ್ದ ಈ ಕುರುಡಿ ಏನನ್ನೂ ನೋಡಿಯೇ ಇರಲಿಲ್ಲವಲ್ಲ. ಕಳೆದ ಕಾಲ ಕಳೆದೇ ಹೋಯಿತು. ಹಿಡಿದು ತರಲಾರೆ, ಆದರೆ ಉಳಿದ ಕಾಲ ನನಗೆ ಗೊತ್ತಿಲ್ಲ, ಬುತ್ತಿಯಲ್ಲಿ ಎಷ್ಟು ದಿನ ಉಳಿದಿದೆ ಎಂದು. ಆದರೆ ಇರುವಷ್ಟು ದಿನ ಹಕ್ಕಿಯಾಗಬೇಕು, ಹಕ್ಕಿ ಹಿಂದೆ ಹೋಗಬೇಕು. ಅಮಲು ನಶೆ ಏರಿದ ಮೇಲೆ… ಪರ್ಪಂಚ ಅಂದ್ರೆ ಹಕ್ಕಿ, ಹಕ್ಕಿ ಅಂದ್ರೆ ನನ್ ಪರ್ಪಂಚ. 

ರಂಗನತಿಟ್ಟಿನಂತಹ ರಂಗನತಿಟ್ಟಿನಲ್ಲಿ ದೊಡ್ಡಗಾತ್ರದ Painted stork ಮೇಲೆ ಬೀಳುವ ಕಿರಣದಲ್ಲಿ ಬಿಳಿಯ ರೆಕ್ಕೆಗಳಂಚಿನಲ್ಲಿ ಪಚ್ಚೆ ಹಸಿರ ಬೆಡಗು, ಪುಚ್ಛಗಳ ತುದಿಗೆ ಹಚ್ಚಿದ ತಿಳಿಗುಲಾಬಿ ಬಣ್ಣದ ಸೊಬಗು ಮಿರಿಮಿರಿ ಮಿಂಚುವಾಗ ಸ್ವರ್ಗ ಬೇರೆಲ್ಲೋ ಇಲ್ಲ, ಇಲ್ಲೇ ಇದೆ ಎನಿಸಿತು. ಆ ನೀಳಕಾಲುಗಳ ಕ್ಯಾಟ್‌ವಾಕ್, ಉದ್ದಾನುದ್ದದ ಹಳದಿಯ ಕೊಕ್ಕು, ನೀರಿಗಾಗಿ ಚಾಚಿದ ಕೊಕ್ಕಿಗೆ ಬಂದ ನೀರನ್ನು ಕೊಕ್ಕನ್ನು ಆಕಾಶಕ್ಕೆತ್ತಿ ಕುಡಿಯುವಾಗ ತೊಟ್ಟಿಕ್ಕುತ್ತಿದ್ದ ನೀರು ಎಲ್ಲವೂ ಮನಸ್ಸನ್ನು ಸೆಳೆದುಬಿಟ್ಟಿತು. ಪಾಪ ಅನ್ನಿಸುತ್ತಿದ್ದುದ್ದು open billed stork ಅಂದರೆ ಬಾಯ್ಕಳಕ ನೀರು ಕುಡಿಯಲು ಎತ್ತಿದ್ದರಲ್ಲಿ ಕುಡಿಯುವಷ್ಟರಲ್ಲಿ ಅರ್ಧವೆಲ್ಲಾ ಕೆಳಗೆ ಸೋರಿ ಹೋಗುತ್ತಿದ್ದಾಗ. ಛೇ ಛೇ…ಓ ದೇವರೆ ಹೀಗೇಕೆ ಸೃಷ್ಟಿಸಿದೆ ಎಂದು ಸಂಕಟವೂ ಆಗುತ್ತಿತ್ತು. ಚಮಚ ಕೊಕ್ಕಿನ ಬಾಯ್ಕಳಕದ ಚಂದವೊ ಚಂದ… ಹಾವುಗೊರಳ ಕೊಕ್ಕರೆ ಮುನ್ಚಾಚಿದ ಕೊರಳು ಅದೆಷ್ಟು ಮೋಹಕ. ನೀರಿನಲ್ಲಿ ನೆನೆದ ಕಡ್ಡಿಗಳನ್ನು ಆರಿಸಿ ಗೂಡಿಗಾಗಿ ಒಯ್ಯುತ್ತಿದ್ದ ಹಕ್ಕಿಗಳ ಹಾರುವಿಕೆಯೆ ಚಂದ. ಅಲ್ಲಲ್ಲಿ ರಿವರ್‌ಟರ್ನ್ಗಳು, ನೀರುಕಾಗೆಗಳು, ಕೊಕ್ಕರೆಗಳು, ಗೋವಕ್ಕಿಗಳು ಹೀಗೆ ಹಕ್ಕಿಗಳ ದೊಡ್ಡ ಸಂತೆಯೇ ಅಲ್ಲಿತ್ತು. ಕಲರವವೂ ದೂರ ದೂರದವರೆಗೂ ಕೇಳುತ್ತಲೇ ಇತ್ತು. ಈ ನೀರಹಕ್ಕಿಗಳು ಬಂಡೆಯ ಮೇಲೆ ವಿಶ್ರಮಿಸುತ್ತಿದ್ದರೆ, ಅಥವಾ ನೀರ್ಗುಡಿಯಲು ನೀರಿಗಿಳಿದರೆ ಅತಿ ಸನಿಹದಲ್ಲೇ ಮೊಸಳೆಗಳನ್ನೂ ಕಾಣಬಹುದು. ಬಂಡೆಯ ಮೇಲೋ ಅಥವಾ ಕೈಯ್ಯಳತೆಯಲ್ಲಿದ್ದ ಕಿರುದ್ವೀಪಗಳಲ್ಲೋ ಮೈಚಾಚಿ ಮಲಗಿದ ಅಥವಾ ನೀರಿಗಿಳಿದ ಮೊಸಳೆಗಳಿಂದ ಹಕ್ಕಿಗೆ ಆತಂಕವಿಲ್ಲವೆ ಎನ್ನುವುದೂ ನನ್ನ ಆತಂಕ.

 ಈ ಪಕ್ಷಿಧಾಮದ ಕೆಲವು ಬಂಡೆಗಲ್ಲುಗಳಲ್ಲಿ ಮಣ್ಣು ಹೊತ್ತು ಗೂಡು ಕಟ್ಟಿಕೊಂಡು ಸಂತಾನ ಬೆಳೆಸುವ ಅಂಬರಗುಬ್ಬಿಗಳೂ ಕಣ್ಣಿಗೆ ಬೀಳುತ್ತವೆ, ಬೀಳುತ್ತವೆ ಎನ್ನುವುದಕ್ಕಿಂತ ಬೀಳಿಸಿಕೊಳ್ಳುವುದಕ್ಕೆ ನಾವೇ ತಿಣುಕಾಡಬೇಕಾಗುತ್ತದೆ. ಮೊದಲೇ ಈ swallowಗಳ ಸ್ಪೀಡ್ ಅತಿಯೋ ಅತಿ. ಅದರಲ್ಲೂ ತಮ್ಮ ಗೂಡಿಗೆ ಬರುವಾಗ, ಹೊರತೆರಳುವಾಗ ಮಿಂಚಿನಂತೆ ಸಂಚರಿಸುತ್ತವೆ. ಆ ನುಗ್ಗುವ ವೇಗಕ್ಕೆ ಅಷ್ಟು ಅಸಂಖ್ಯ ಸಂಖ್ಯೆಯಲ್ಲಿರುವ ಗೂಡುಗಳಲ್ಲಿ ತನ್ನದೇ ಗೂಡಿಗೆ ಕರೆಕ್ಟಾಗಿ ಹೇಗೆ ಹೋಗುತ್ತದೆ ಎನ್ನುವುದೇ ನನಗೆ ಬಲು ಸೋಜಿಗದ ಸಂಗತಿ. ಇದು ನನ್ನ ಬಹಳ ಹಿಂದಿನ ನೆನಪೊಂದಕ್ಕೆ ಪಾತಾಳಗರಡಿ ಹಾಕಿ ಕೆಣಕುತ್ತದೆ. ಮಂಡ್ಯದಲ್ಲಿ ಸ್ಲಮ್ಮಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನಗಳಿಗೆ ಕಡಿಮೆ ವೆಚ್ಚದ ಮನೆಗಳನ್ನು ಕಟ್ಟಿಸಿಕೊಟ್ಟರೂ ಅವರು ಆ ಮನೆಗಳಿಗೆ ಹೋಗದೆ ಕಾಡಿಸುತ್ತಿದ್ದ ಕಾಲವೊಂದಿತ್ತು. ಒಮ್ಮೆ ಕೆಲವರನ್ನು ಸೇರಿಸಿ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಡಲು ಜಿಲ್ಲಾಧಿಕಾರಿಗಳು ಆಯೋಜಿಸಿದ್ದ ಒಂದು ಸಭೆಗೆ ನಾನೂ ಆಹ್ವಾನಿತಳಾಗಿದ್ದೆ. ಆ ಸಭೆಯಲ್ಲಿ ಸ್ಲಂನಿವಾಸಿಗಳು ಹೊಸಮನೆಗಳಿಗೆ ಹೋಗಲು ತಮಗಾಗದ್ದಕ್ಕೆ ಕೊಟ್ಟ ಕಾರಣಗಳಲ್ಲಿ ಒಂದು -ಆ ಮನೆಗಳೆಲ್ಲಾ ಒಂದೇ ತರಹಕ್ಕೆ ಇವೆ. ನಾವೋ ಸಂಜೆ ಕುಡಿದೇ ಮನೆಗೆ ಬರುವುದು. ಆದ್ದರಿಂದ ನಮ್ಮ ಮನೆ ಯಾವುದು ಎಂದು ಗೊತ್ತಾಗದೆ ಪಕ್ಕದ ಮನೆಗೆ ಹೋಗಿಬಿಟ್ಟರೆ ಕಷ್ಟ, ಅದಕ್ಕೆ ನಾವು ಆ ಮನೆಗಳಿಗೆ ಹೋಗುವುದಿಲ್ಲ. ಇವತ್ತಿಗೆ ನೆನಪಾದರೂ ಆಹಾ! ಎಂತಹ ಅದ್ಭುತ ಆಲೋಚನೆ, ಇದ್ದ ಜಾಗ ಬಿಡಲಾರದ್ದಕ್ಕೆ ಎಂಬ ಬೆರಗಿದೆ. ಆದರೆ ಈ ಹಕ್ಕಿಗಳು ತಮ್ಮದೇ ಗೂಡಿನೊಳಕ್ಕೆ ಜೆಟ್ ವೇಗದಲ್ಲಿ ಹೋಗುವ ಬರುವ ಪರಿ ಅನನ್ಯ. ಸ್ಲಂ ನಿವಾಸಿಗಳ ಅಸಲಿ ಕಾರಣ, ಅವರ ಸ್ಲಮ್ಮುಗಳು heart of the cityಯಲ್ಲಿ ಇದ್ದವು. ಪಟ್ಟಭದ್ರರು ಅವರನ್ನು ಅಲ್ಲಿಯೇ ಉಳಿಸಿಕೊಂಡು ತಮ್ಮ ಮತಬ್ಯಾಂಕುಗಳನ್ನು ಭದ್ರಪಡಿಸಿಕೊಳ್ಳುವ ಸಂಚುಗಳೂ ಇದ್ದವು. ಕೆಲವರನ್ನು ಅಲ್ಲಿಂದ ಒಕ್ಕಲೆಬ್ಬಿಸಿದರೂ ಅವರು ಬಿಟ್ಟ ಜಾಗಕ್ಕೆ ಬೇರೆಯವರು ಬಂದು ಖಾಯಮ್ಮಾದರು. ಎಷ್ಟೆ ಹೊಸ ಮನೆ ಕಟ್ಟಿಸಿಕೊಟ್ಟರೂ ಮುಗಿಯಲಾರದ ಅಕ್ಷಯ ನಿಧಿಯಂತೆ ವೃದ್ಧಿಸುತ್ತಲೇ ಇದೆ.

ಒಮ್ಮೆ ಮಾತ್ರ ಕಣ್ಣಿಗೆ ಬಿದ್ದ ಗಂಡು brown morphನ ರಾಜದಂಡೆ ಮತ್ತೆ ಮತ್ತೆ ರಂಗನತಿಟ್ಟಿಗೆ ಹೋದಾಗಲೆಲ್ಲಾ ಹುಡುಕಿಸುತ್ತಲೇ ಇತ್ತು. ಅಲ್ಲಲ್ಲಿ ಹಾರಿ ಜೊತೆಗೆ ಕರೆದೊಯ್ಯುತ್ತದೆ ನೀಲಿಯ ಪುಟ್ಟದೇವತೆ tickles blue flycatcher. ಬಾಲದ ಬೀಸಣಿಗೆ ಬೀಸಿ ಬರುವ fan tailed flycatcher ಬೇಸಿಗೆಯಲ್ಲೂ ತಂಪನುಣಿಸುತ್ತದೆ. ಪುಟ್ಟಬಟ್ಟಲಿನ ಗೂಡುಕಟ್ಟಿ ಮರಿ ಮಾಡಲು ಕೂತಿದ್ದ ಈ ಬೀಸಣಿಗೆ ಬಾಲದವರು ಬಾಲ ಬೀಸಿ ಬೀಸಿ ಕರೆಯುತ್ತಲೆ ಇರುತ್ತಾರೆ. 

ಇಡೀ ರಂಗನತಿಟ್ಟಿನ ಎಲ್ಲ ಹಕ್ಕಿಗಳ ತೂಕ ಒಂದಾದರೆ ನನ್ನ ಪಾಲಿಗೆ ಒಳಗಿನ ಕೊಳಕ್ಕೆ ಬರುತ್ತಿದ್ದ ಕಿರುಮಿಂಚುಳ್ಳಿಯೇ ಒಂದು ತೂಕ. ಅದರ ಕೂಗು, ಅದರ ಚುರುಕುತನ ಅದರ ಚೆಲುವು ಎಂದೂ ಮರೆಯಾಗದಂತೆ ಎದೆಯಲ್ಲಿ imprint ಆಗಿದೆ. ಸಾವಿರ ತೆತ್ತು ದೋಣಿಯಲ್ಲಿ ಏಕಾಂಗಿ ಪಯಣಿಗಳಾಗಿ ಸೆರೆಹಿಡಿದ ಹಕ್ಕಿಗಳ ನೂರಾರು ಚಿತ್ರಗಳಷ್ಟೆ ಚೆಲುವಾಗಿ ಕಾಣುತ್ತಿದ್ದುದು ಈ ನೀರ್ಗೊಳದ ತಾವರೆಯಲ್ಲಿ ಹೂವಾಗಿ ಮುದ್ದಾಗಿ ಜೀವಚೈತನ್ಯ ಮೂಡಿಸಿ ಕಣ್ಸೆಳೆಯುತ್ತಿದ್ದ ಈ ಮಿಂಚುಳ್ಳಿ… ಮಳ್ಳಿಮಳ್ಳಿ ಮಿಂಚುಳ್ಳಿ ಬಾ ಬಾರೊ ಬಾರೆ ಎಂದು ಕ್ಯಾಮೆರಾ ಹಿಡಿದು ಕಾಯುತ್ತಿದ್ದಾಗ ಪುಳುಕ್ಕನೆ ಕಂಡು ಬಂದು ಎದೆಯ ನಾಲ್ಕು ಬೀಟ್ಸ್ ಮಿಸ್ಸಾಗಿಸಿ ಎಳೆದು ಕಟ್ಟಿ ಹಾಕಿಬಿಡುತ್ತಿತ್ತು. ಒಣಗಿದ ದೇಟಿನ ಮೇಲೆ, ಎಲೆಯಂಚಿನಲ್ಲಿ ಎಲ್ಲೆಂದರಲ್ಲಿ ಕುಳಿತು ಕಿರುಮೀನು ಹಿಡಿದು ಮೆಲ್ಲುತ್ತಿದ್ದ ಪರಿ ಕಣ್ಣಿನಲ್ಲಿ ಕ್ಯಾಮೆರಾದಲ್ಲಿ ಸೇರುತ್ತಿದ್ದವು. 

ಕಿರು ಮಿಂಚುಳ್ಳಿಯಂತೆ ಮತ್ತೆ ಮತ್ತೆ ಕಣ್ಣಿಗೆ ಬಿದ್ದು ಚಿತ್ರ ತೆಗೆಸಿಕೊಂಡದ್ದು pied kingfisher. ಕರಿಬಿಳಿ ಬಣ್ಣದ ಈ ಮಿಂಚುಳ್ಳಿ ಆಕಾಶದಲ್ಲೇ ನಿಂತಲ್ಲಿ ನಿಂತು ನೀರಿನಲ್ಲಿ ಇರುವ ಮೀನಿಗೆ ಗುರಿಯಿಡುವ ಧನುರ್ಧಾರಿ ಅರ್ಜುನನ ರೀತಿ. ಸಮ ಪ್ರಮಾಣದಲ್ಲಿ ಕಪ್ಪಿಗೆ ಬಿಳುಪೋ ಅಥವಾ ಬಿಳುಪಿಗೆ ಕಪ್ಪೋ ಸೇರಿದ ಚಂದದ ಗರಿಗರಿಯಾದ ಗರಿಯ ಹಕ್ಕಿ ರಂಗನತಿಟ್ಟಿನಲ್ಲಿ ಪದೇ ಪದೇ ಕಾಣಸಿಗುತ್ತದೆ. ಹೆಮ್ಮಿಂಚುಳ್ಳಿ ಇಲ್ಲಿದೆ ನೋಡಿ ಬನ್ನಿ ಎಂದು ಕರೆದುಕೊಂಡು ಹೋದ ದೋಣಿಯವನು ಗಿಡಗಂಟೆಗಳ ಪೊದೆಯೊಳಗೆ ಅದೋ ಅಲ್ಲಿ ಎಂದು ತೋರಿಸಿದ. ನನ್ನ ಕ್ಯಾಮೆರಾ ಲೆನ್ಸಿಗೆ ಅಡ್ಜೆಸ್ಟ್ ಆಗಲಿಲ್ಲ. ನನ್ನ ಕಣ್ಣಿನ ಲೆನ್ಸಿಗೂ ಸರಿಯಾಗಿ ಕಾಣಲಿಲ್ಲ. ಅಲ್ಲಿ ಇದ್ದುದಂತೂ ನಿಜ, ಅಷ್ಟೇ ಅಲ್ಲ ನನ್ನ ಕ್ಯಾಮೆರದ ಕಣ್ಣಿಗೂ ತಪ್ಪಿಸಿಕೊಂಡಿತು ಎನ್ನುವುದೂ ನಿಜ. ಇನ್ನು ಬಿಳಿಯೆದೆಯ ಗದ್ದೆ ಮಿಂಚುಳ್ಳಿಯಂತೂ ಸದಾ ಸಿಕ್ಕೇ ಸಿಗುತ್ತದೆ.

ಈ ಎಲ್ಲವನ್ನೂ ಹಿಡಿಯುತ್ತಿದ್ದುದು 100-400 mmನಲ್ಲಿ. 600 mm ಕೈಗೆ ಬಂದ ಮೇಲೆ ರಂಗನತಿಟ್ಟಿಗೆ ಹೋದದ್ದು ಕಡಿಮೆ. ಏಕೆಂದರೆ ದೂರ ದೂರದೂರಿನ ಪಯಣಗಳಲ್ಲಿ ಮುಳುಗಿಹೋಗಿದ್ದೆ, ಜೊತೆಗೆ ಸರ್ಕಾರ ಮರುಪರಿಷ್ಕರಿಸಿದ ಕ್ಯಾಮೆರಾದ ಬೋಟಿನ ಪಯಣದ ದರಗಳು ಬೆಚ್ಚಿಬೀಳಿಸುತ್ತವೆ. ಅಷ್ಟೆಲ್ಲಾ ತೆತ್ತು ಪಯಣಿಸಿದ ಬಳಿಕ ಒಳ್ಳೆಯ ಫೋಟೊ ಆಗೇ ಆಗುತ್ತದೆ ಎನ್ನುವ ಭರವಸೆಯೂ ಬೇಕಲ್ಲ. 600 mmನಲ್ಲಿ ಎರಡು ಮೂರು ಸಲ ತೆಗೆದಿದ್ದೇನೆ. ಬೋಟು ಸವಾರಿಯಲ್ಲಂತೂ ಅದನ್ನು ಹಿಡಿದು ತೆಗೆಯುವ ಧೈರ್ಯ, ಬಲ ಎರಡೂ ನನಗಿಲ್ಲ. ಆದ್ದರಿಂದ ದಡದಲ್ಲಿ ತೆಗೆದ ಚಿತ್ರಗಳು ಮಾತ್ರ ಇವೆ. ಈಗೀಗ ರಂಗನತಿಟ್ಟಿನ ಹೊರಗೆ ಸುತ್ತಾಡುತ್ತಾ ಇತರ ಕೆಲವು ಹಕ್ಕಿಗಳನ್ನು ಆಗಾಗ್ಗೆ ತೆಗೆಯುತ್ತಿರುತ್ತೇನೆ. ತೀರಾ ಇತ್ತೀಚೆಗೆ ಅಂದರೆ 2022ರಲ್ಲಿ ಒಮ್ಮೆ ಟಿಕೇಟು ಕೊಂಡು ಒಳಗೂ ಹೋದೆ. ಕ್ಯಾಮೆರಾಗೆ ಒಳಗೆ ಟಿಕೇಟು ತಗೊಳ್ಳಿ ಅಂದರು. ಆದರೆ ಕಾರ್ ನಿಲ್ದಾಣದ ಬಳಿಯ ಪುಟ್ಟ ಕೊಳಕ್ಕೆ ಬಳಸಿ ಬರಬೇಕಿತ್ತು. ಜೊತೆಗೆ ಅದರಲ್ಲಿ ಕಿರುಮಿಂಚುಳ್ಳಿ ಬರುವುದಿಲ್ಲ ಎಂದೂ ಹೇಳಿದ ಮೇಲೆ ಒಳಹೋದ ಸ್ಪೀಡಿನಲ್ಲೇ ಹೊರಗೆ ಬಂದು ಸುತ್ತಿನ ಆವರಣದಲ್ಲಿ ಕಂಡವನ್ನು ಹಿಡಿಯುವ ಪ್ರಯತ್ನ ಮಾಡಿದೆ.

ಆದರೂ ಮಾಯಾಲೋಕ ಮಾಯಾಲೋಕವೆ. ಅದು ಮನಸಿನಾಳದಲ್ಲಿ ಸೇರಿ ಚಿತ್ರವಾಗುತ್ತಲೇ ಇದೆ. ಚಿತ್ರವಾದ ಮಿಂಚುಳ್ಳಿಗಳೊ ಎದೆಗಿಳಿದವೊ, ಸಣ್ಣಕೂಗು ಹಾಕಿ ಮೈಮನಕ್ಕೆ ಪುಳಕ ಹುಟ್ಟಿಸಿದ ಮಿಂಚುಳ್ಳಿ ಚಿತ್ತಾರವೋ ಇನ್ನೂ ಭೇದವೆಣಿಸಿ ಬೇರೆ ಮಾಡಲಾರೆ. ಚಿತ್ರವೊಂದು ಹೊರಗೆ ಬಂದಿತು, ಇನ್ನೊಂದು ಆತ್ಮಕ್ಕಿಳಿಯಿತು. ಇನ್ನೂ ಕಣ್ಮುಚ್ಚಿದರೆ ಅರಳಿಸಿದರೆ ಮಿಂಚುಳ್ಳಿಯ ಬಳ್ಳಿಯಲ್ಲಿ ನಾನು ಸೇರಿ ಹೋಗಿದ್ದೇನೆ.

ಮಿಂಚುಳ್ಳಿಗಳ ಮೋಹ ಅದೆಂತಹ ಪರಿಯಲ್ಲಿ ನನ್ನನ್ನು ಎಳೆದುಕೊಂಡಿತೆಂದರೆ ಅವನ್ನು ಹುಡುಕಿಕೊಂಡು ಊರಾದ ಊರೆಲ್ಲಾ ಅಲೆಯುತ್ತಲೇ ಇದ್ದೇನೆ. ಲಡಾಖಿನ ದೂರದ ಹ್ಯಾನ್ಲೆಯಲ್ಲಿ ಈ ಕಿರು ಮಿಂಚುಳ್ಳಿ ಕಂಡಾಗ ಕೂಗಿಕೊಂಡೆ ಮಿಂಚುಳ್ಳಿ ಅಲ್ಲಿದೆ ಎಂದು. ನನ್ನ ಹಕ್ಕಿಮಗಳು ಖುಷ್ಬೂ ಹಿತವಾಗಿಯೇ ಗದರಿಸಿದಳು “ಅಮ್ಮಾ ಎಷ್ಟು ಫೋಟೊ ತೆಗೆದಿರಬಹುದು ಇದರದ್ದು, ಆದರೂ ಅದರ ಹಿಂದೆ ಬೀಳುವುದು ಬಿಡುವುದಿಲ್ಲ” ಎಂದು. ಆದರೇನು ಮಾಡಲಿ? ಮಿಂಚುಳ್ಳಿಗಳೆ ನೀವು ಹೀಗೇಕೆ ನನ್ನ ಬದುಕಿನ ಭಾಗವಾಗಿಬಿಟ್ಟಿರಿ, ನೂರಾರು ಸಲ ನೋಡಿದರೂ ಹೊಸದೆಂಬಂತೆ ಮತ್ತೆ ಮತ್ತೆ ಬಂದು ಸೆಳೆದುಕೊಳ್ಳುತ್ತೀರಿ ಹೇಳಿ ಗೆಳೆಯರೆ. ನಿಮ್ಮ ನೀಳ ಕೊಕ್ಕಿನಂಚಿನಲ್ಲಿ ನನ್ನನ್ನೂ ಎತ್ತಿಕೊಂಡು ನಿಮ್ಮೊಳಗೆ ಒಂದಾಗಿಸಿಕೊಂಡುಬಿಡಿ… ಯಾರಿಗೆ ಬೇಕು ಈ ಲೋಕ…ಸಾಕಾಗಿದೆ, ಆ ನಿಮ್ಮ ಬಣ್ಣದ ಮಾಯದ ಲೋಕ ಬೇಕಾಗಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: