ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಯನಗೃಹದ ಪ್ರತಿ ವಸ್ತುಗಳೂ ಸಾಕ್ಷಿ..

“ನಾನು ಮಂಡೋದರಿ…”
 ಜಮುನಾ ರಾಣಿ ಹೆಚ್.ಎಸ್

ನಾನು ಯಾರೆಂದು
ನಿಮಗೆ ತಿಳಿದಿರಬೇಕಲ್ಲಾ? ಬಹುಶಃ
ಇಲ್ಲದೆಯೂ
ನಾನು ನಿಮ್ಮಂತೆಯೇ ಸಾಮಾನ್ಯ ಹೆಣ್ಣು
ನನ್ನದು ಕಂಡೂ ಕಾಣದ,
ಹೇಳಿದರೂ ನೆನಪಿನಲ್ಲಿ
ಉಳಿಯದ, ಹಾಗೆ ಬಂದು…
ಹೀಗೆ ಕಣ್ಮರೆಯಾಗುವ ಪಾತ್ರ
ರಾಮಾಯಣವೆಂಬ ಮಹಾಕಾವ್ಯದಲ್ಲಿ!

ಲಂಕಾಧಿಪತಿಗೆ
ಯಾರೋ ತಂದು ಕಟ್ಟಿದ ಬರಿಯ ಹೆಣ್ಣಲ್ಲ ನಾನು
ಅಪರೂಪದ ಸೌಂದರ್ಯವತಿಯಾಗಿಯೇ
ಕಣ್ಮನ ಸೆಳೆದವಳು
ಎನ್ನುವುದು ನನ್ನ ನಂಬಿಕೆ
ಆದರೆ, ಇದೆಲ್ಲಾ ಆ ಶಿವ-ನಾರದರ
ಕುತಂತ್ರವೆನ್ನುವುದು ನನಗೇನು ಗೊತ್ತು?
ಆತ್ಮಲಿಂಗದ ತಪಕೆ ಕುಳಿತ ರಾವಣನ
ದಾರಿತಪ್ಪಿಸಲು ಹೋಗಿ ಶಿವೆಯು
ಸಿಕ್ಕಿಕೊಂಡಳು
ಅವಳನ್ನು ಉಳಿಸಿಕೊಳ್ಳಲು ನನ್ನನ್ನು ಬಲಿಕೊಟ್ಟರು
ಇಷ್ಟಾದರೂ ಕೊನೆವರೆಗೂ ಆ ಶಿವನನ್ನು
ಮನಸ್ಪೂರ್ತಿ ಪೂಜಿಸಿದವಳು ನಾನು

 

ನೀವೇ ಹೇಳಿ ಎಂದಾದರೂ ಆ ಬ್ರಹ್ಮದೇವರು
ವರ ಕೊಡಲು ಸರಸ್ವತಿಯೊಡನೆ
ಪ್ರತ್ಯಕ್ಷವಾಗಿರುವುದು ಕಂಡಿದ್ದೀರೇನು? ಇಲ್ಲ ತಾನೆ
ಹಾಗಿದ್ದಲ್ಲಿ ಶಿವನೇಕೆ ಶಿವೆಯೊಡನೆ ಬರಬೇಕಿತ್ತು?
ಇರಲಿ ಬಿಡಿ,
ಈ ರೀತಿಯಲ್ಲಾದರೂ ರಾವಣನಂತಹ ಅಪ್ರತಿಮ ವೀರ
ಬಾಳಸಂಗಾತಿಯಾದದ್ದು
ಏಳೇಳು ಜನ್ಮಗಳ ಪುಣ್ಯ ಎಂದು ನಂಬಿದವಳು ನಾನು
ಹಾಗೆಯೇ ಉರಿಯುವ ಜ್ವಾಲೆಯಂತಿದ್ದ
ರಾವಣನನ್ನು ಪ್ರೀತಿ, ಪ್ರೇಮದ ಅಮೃತಧಾರೆಯಲಿ
ಮೀಯಿಸಿ ತಂಪಾಗಿಸಿ
ನಮ್ಮ ದಾಂಪತ್ಯದ ಕಾಣಿಕೆಗಳು ಬೆಳೆಯುವ
ಸಂದರ್ಭದಲ್ಲಿಯೇ ಮತ್ತೆ ಅವರು
ದಿಕ್ಕು ತಪ್ಪಿದ್ದು
ನಾದಿನಿ ಶೂರ್ಪನಖಿಯ ಸೇಡಿನ
ಸಲುವಾಗಿ ಏರ್ಪಟ್ಟಿದ್ದು ಸೀತಾಪಹರಣ
ನನ್ನ ಸ್ಥಾನಕ್ಕೇ ಕುತ್ತು ಬಂದಾಗ ಎದ್ದ
ಹೃದಯದ ಬೇಗುದಿ ಎಲ್ಲಿ ಅವರನ್ನು
ಬೂದಿಯಾಗಿಸಿ ಬಿಡುವುದೋ ಎನ್ನುವ ಭಯ
ನನ್ನಲ್ಲಿತ್ತು

 

ನಾನು ಹೆಸರಿಗಷ್ಟೇ ಮಹಾರಾಣಿಯಾಗಿದ್ದೆ
ಈ ಪ್ರಕರಣದ ಬಗ್ಗೆ
ನನಗೆ ಯಾರೂ ಹೇಳಲೂ ಇಲ್ಲ,
ನನ್ನ ಅಭಿಪ್ರಾಯವ ಕೇಳಲೂ ಇಲ್ಲ
ಜಾನಕಿ ತಿರಸ್ಕರಿಸಿದರೂ ತಪ್ಪದ
ರಾವಣನ ಪರಿತಪನೆಗೆ
ನಮ್ಮ ಶಯನಗೃಹದ ಪ್ರತಿ ವಸ್ತುಗಳೂ ಸಾಕ್ಷಿ,
ಸೆರಗಿಗೆ ಕಟ್ಟಿಕೊಂಡ ಕೆಂಡದಂತಿದ್ದ
ಸವತಿಯಾಗುವವಳ ಕಣ್ಣ ಮುಂದಿಟ್ಟುಕೊಂಡೇ
ದಿನಗಳ ಸವೆಸಿದವಳು ನಾನು
ಆ ದಿನಗಳಲ್ಲಿ ನನ್ನನ್ನು ಮುಟ್ಟುವುದಿರಲಿ
ಅವರು ಮಾತನಾಡಿದ್ದೂ ಕಡಿಮೆಯೇ
ಜೊತೆಗಿದ್ದೂ ಇಲ್ಲದ ರಮಣ
ಬೇರೊಬ್ಬಳ ಕನವರಿಸುವುದ ಕಂಡು
ಪಟ್ಟ ಯಾತನೆ, ನಿಸ್ಸಹಾಯಕತೆ, ಅಸಹಾಯಕತೆ
ಸಂಕಟ, ಈರ್ಷೆ…
ಉಫ್,
ಯಾರಿಗೆ ಗೊತ್ತು ನನ್ನ ನೋವು?

ಇರಲಿ, ರಾಜ ಬಹುಪತ್ನಿ ವಲ್ಲಭ
ಎಂದು ಮನಸ್ಸಿಗೆ ಸಾಂತ್ವನಿಸಿ ಜಾನಕಿಯನ್ನು
ಕಿರಿಯ ರಾಣಿ ಎಂದು ಒಪ್ಪಿಕೊಳ್ಳಲೂ
ತಯಾರಿದ್ದೆ ಆದರೆ, ಒಲ್ಲೆ ಎನ್ನುವವಳ
ಮುಂದೆ ಪದೇ ಪದೇ ಪೀಡಿಸುವ ಇವರಿಗೆ
ರಾಜ ಘನತೆ, ಗಾಂಭೀರ್ಯ, ಕುಲಗೌರವ,
ಮನೆತನದ ಮಾನ, ಮರ್ಯಾದೆ ಬಗ್ಗೆ ತಿಳಿ ಹೇಳಿ
ಬದಲಿಸುವುದಾದರೂ ಹೇಗೆ
ಅದೂ ಲಂಕಾಧಿಪತಿಗೆ!

ಮಗಳ ವಯಸ್ಸಿನ ಸೀತೆಯ ವೇದನೆ, ವ್ಯಥೆ
ಅರಿವಾದರೂ
ಕಾದ ಬಾಣಲಿಯಲಿರುವ ನಾನು
ಬೆಂಕಿಗೆ ಬಿದ್ದವಳ ಬವಣೆ ಗಮನಿಸಲೆಂತು?
ಪುರುಷಪ್ರಧಾನ ಸಮಾಜದಲ್ಲಿ
ದನಿ ಎತ್ತಲೂ ಆಗದ
ಪಾಪದ ಹೆಣ್ಣು ನಾನೆಂದು
ಮಸೂರವ ಹಿಡಿದು ನೋಡಿದರೆ ಕಂಡೀತು ನಿಮಗೆ

ಇಂದಿಗೂ ಸೀತೆಯ ಪರ ವಾದಿಸುವವರಿದ್ದಾರೆ
ಅವಳಿಗಾಗಿ ತುಡಿಯುವವರಿದ್ದಾರೆ
ಉಪವಾಸ, ವನವಾಸ ಮಾಡಿದಳೆಂದು
ಅಯ್ಯೋ… ಎನ್ನುವವರಿದ್ದಾರೆ
ನನ್ನದು ಮಾತ್ರ
ಎಲೆ ಮರೆಯ ಕಾಯಿಯಂತೆಯೇ
ಬಿದ್ದು ಹೋದ ಬದುಕು
ಧರ್ಮ ರಕ್ಷಕರ ಕೈಗೆ ಸಿಕ್ಕಿ
ಬರಡಾದ ಬದುಕು

ರಾಮನಾದರೂ ಬಂದು ಮತ್ತೆ ಸೀತೆಯ ಸೇರಿದ
ಆದರೆ ನನ್ನವರು ಇಹಲೋಕವ ತ್ಯಜಿಸಿ
ನನ್ನನ್ನು ಒಂಟಿಯಾಗಿಸಿದರು
ಮಕ್ಕಳನ್ನೂ ಶೂರ್ಪನಖಿ ಸೇಡಿನ ಜ್ವಾಲೆಯಲ್ಲಿ
ಉರಿಯುವಂತೆ ಮಾಡಿದರು

 

ಆ ದಿನ…
ಇನ್ನೂ ನನ್ನನು ಇರಿದು ಇರಿದು ಕೊಲ್ಲುತ್ತದೆ
ನನ್ನವರು ನೆಲದ ಮೇಲೆ ಶವವಾಗಿ ಬಿದ್ದಿದ್ದರೆ
ಆ ಸೀತೆಯ ಕಣ್ಣುಗಳಲ್ಲಿ
ರಾಮ ವಿಜೃಂಬಿಸುತ್ತಿದ್ದ,
ನನ್ನೆಲ್ಲಾ ಬದುಕು ಕತ್ತೆಲೆಯ ಕೋಣೆಯಲ್ಲಿ
ಹುದುಗಿ ಹೋಗುವಾಗ,
ಅವಳ ಬಾಳಲ್ಲಿ ಬೆಳಕು
ಮತ್ತೆ ಮೂಡತೊಡಗಿತ್ತು
ಇಷ್ಟು ದಿನ ರಾವಣನನ್ನು ಯೋಗ್ಯ ಪತಿ, ತಂದೆ, ಅಣ್ಣ
ಬಂಧು ಎಂದು ಉದಾಹರಿಸುತ್ತಿದ್ದವರು
ಇನ್ನು ಮುಂದೆ ಹೆಸರೆತ್ತಲೂ ಹೇಸಿಗೆ ಪಡುತ್ತಾರೆ
ಕೊನೆಯವರೆಗೂ ಅವನ ಜೊತೆಗಿದ್ದೆ
ಬೆಳಕಿನ ದಾರಿಗೆಳೆಯಲು ಪ್ರಯತ್ನಿಸಿದೆ
ಆದರೆ ಬೆಳಕಿನ ಕಿರಣ ತಾನೂ ಕತ್ತಲೆಯಲ್ಲಡಗಿ
ನನ್ನನ್ನೂ ಅಂಧಕಾರಕ್ಕೆ ನೂಕಿತು
ಧರ್ಮ- ಅಧರ್ಮಗಳ ಬಿಡಿಸಿ ಹೇಳಲು ಹೊರಟ
ಶಿವನ ಪ್ರಯೋಗಕ್ಕೆ
ನನ್ನ ಬದುಕು ಸಿಕ್ಕಿಕೊಂಡಿತು
ಇಷ್ಟು ದಿನ ಅವರಿದ್ದೂ ಒಂಟಿಯಾಗಿದ್ದ
ಜೀವ ಈಗಿನಿಂದ ಅವರಿಲ್ಲದೆ
ಒಂಟಿಯಾಗಿದೆ
ಅಷ್ಟೆ…

‍ಲೇಖಕರು nalike

22 May, 2020

3 Comments

  1. Santhosh Undadi

    ಮಂಡೋದರಿಯ ಕತೆ ಮತ್ತು ವ್ಯಥೆಯನ್ನು ತುಂಬಾ ಸೋಗಸಾಗಿ ಪದಗಳಲ್ಲಿ ಹಿಡಿದಿಟ್ಟಿದ್ದಿರಿ. ಸೀತೆಯ ಕುರಿತು ಉಕ್ಕುವ ಅನುಕಂಪ , ಮಂಡೋದರಿಯ ಕುರಿತು ನಮಗೆ ಉಕ್ಕುವುದಿಲ್ಲ. ಇತ್ತೀಚೆಗೆ ರಾಮಾಯಣ ನೋಡಿದಾಗ ನನಗೂ ಮಂಡೋದರಿ, ಊರ್ಮಿಳಾ ಈ ಪಾತ್ರಗಳ ಒಳತೋಟಿಗಳ ಕುರಿತು ವಿಚಾರ ಬಂದಿತ್ತು. ನಿಮ್ಮ ಕವಿತೆ ಮಂಡೋದರಿ ಆ ಭಾವನೆಗಳನ್ನು ಸೆರೆಹಿಡಿದಿದೆ, ನಿಮ್ಮ ಭಾಷೆ ಮತ್ತು ಅಭಿವ್ಯಕ್ತಿ ಮಂಡೋದರಿಯ ಮೌನಕ್ಕೆ ಶಬ್ಧದ ರೂಪ ನೀಡಿದೆ.ಇತಿಹಾಸದ ಮಹಾನ್ ಕಥೆಗಳಲ್ಲಿ ನಾಯಕ, ನಾಯಕಿಯರ ವಿಜೃಂಭಣೆಯಲ್ಲಿ ಉಳಿದವರ ತ್ಯಾಗ ಮತ್ತು ಬಲಿದಾನಕ್ಕೆ ಬೆಲೆಯಿಲ್ಲದಿರುವದನ್ನು ನೀವು ಸರಿಯಾಗಿಯೇ ಗುರುತಿಸಿದ್ದಿರಿ. ಒಟ್ಟಿನಲ್ಲಿ ಒಳ್ಳೆಯ ಕವಿತೆ.

  2. Mirza

    Super jamuna

  3. Anantha M S

    Hi, The emotions of Mandodari well narrated.. nice one.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading