–ಮಂಜುನಾಥ ಡಿ ಡೊಳ್ಳಿನ
ಕನ್ನಡ ನಾಡಿನಲ್ಲಿ ಹನ್ನೆರಡನೇ ನೇ ಶತಮಾನದ ವೈರಾಗ್ಯನಿಧಿ ,ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭುಗಳಿಂದ ಹಿಡಿದು, ಹದಿನೈದನೇ ಶತಮಾನದ ದಾಸರು,ಹದಿನೇಳನೇ ಶತಮಾನದ ನಿಜಗುಣ ಶಿವಯೋಗಿಗಳವರೆಗೆ. ಹತ್ತೊಂಬತ್ತನೇ ಶತಮಾನದ ಸಂತ ಶಿಶುನಾಳ ಶರೀಫರು,ಸದ್ಗುರು ಸಿದ್ಧಾರೂಢರಿಂದ ಮುಂದುವರೆದು ಕಡಕೋಳ ಮಡಿವಾಳಪ್ಪನವರು,ಹೊಸಳ್ಳಿಯ ಬೂದೀಶ್ವರ ಸ್ವಾಮಿಗಳು, ಬಳ್ಳಾರಿ ಜಿಲ್ಲೆಯ ಅಲ್ಲೀಪುರ ತಾತನವರು, ಮಧುರಚೆನ್ನರ ತನಕ ಅನೇಕ ಮಹಾನ್ ಚೇತನಗಳು ಯೋಗ, ಅನುಭಾವ ಮತ್ತು ತತ್ವಪದಗಳ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.
ಶಿವಯೋಗ, ರಾಜಯೋಗ, ಹಠಯೋಗ, ಸಿದ್ಧಿಸಮಾಧಿಯೋಗ ಹೀಗೆ ನಾನಾ ರೀತಿಗಳ ಕಠಿಣ ಯೋಗ ಸಾಧನೆಗೈದವರು. ಅಂತರಂಗದಲ್ಲಿ ಅರಿವಿನ ನಂದಾ ದೀವಿಗೆಯನ್ನು ಬೆಳಗಿಸಿಕೊಂಡವರು. ಸುತ್ತಲ ಪ್ರಪಂಚಕ್ಕೂ ಬೆಳಕಾದವರಿದ್ದಾರೆ. ಹಠಯೋಗದಲ್ಲಿ ಉನ್ನತ ಸಾಧನೆ ಮಾಡುತ್ತ, ಅಂತರಾಳದ ಅನುಭಾವ, ತಾತ್ವಿಕ ಶಕ್ತಿಗೆ ಆಡುನುಡಿಗಳಲ್ಲಿ ದೇಸೀಯ ಶೈಲಿಯ ಹಾಡುಗಳ ರೂಪ ನೀಡುತ್ತ ಯೋಗ ಹಾಗೂ ತತ್ವಪದಗಳ ಶ್ರೇಷ್ಠ ಪರಂಪರೆಯ ಮುಂದುವರೆದ ಭಾಗದಂತೆ ನಮ್ಮ ನಡುವೆ ಸದ್ದಿಲ್ಲದೇ ಸಾಧನೆ ಮಾಡಿದವರಲ್ಲಿ ಯೋಗಗುರು, ಯುಗಪ್ರವರ್ತಕ ಪಶುಪತಿಹಾಳದ ಡಾ.ಹೊನ್ನಪ್ಪ ಫಕೀರಪ್ಪ ನಾಯ್ಕರ ಅವರು ಒಬ್ಬರು.

ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ವಾಲ್ಮೀಕಿ ನಾಯಕ ಸಮುದಾಯದ ಡಾ.ಹೆಚ್.ಎಫ್.ನಾಯ್ಕರ ಅವರು ಸದ್ಗುರು ಶ್ರೀಸಿದ್ಧಾರೂಢರ ನಿಕಟ ಶಿಷ್ಯರಾಗಿದ್ದ ಉನ್ಮನಿಯೋಗಿ ಫಕೀರಪ್ಪ ನಾಯ್ಕರ ಹಾಗೂ ನೀಲಮ್ಮನವರ ಉದರದಲ್ಲಿ ಎಂಟನೇಯ ಮಗನಾಗಿ ಡಿಸೆಂಬರ್ 29,1936 ರಂದು ಜನಿಸಿದರು.
ಪಶುಪತಿಹಾಳ.ಕಳಸ,ಲಕ್ಷ್ಮೇಶ್ವರ,ಧಾರವಾಡಗಳಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಬಿ.ಎ.ಪದವಿ ವ್ಯಾಸಂಗ ಮಾಡುವಾಗ ಪ್ರಿನ್ಸಿಪಾಲರಾಗಿದ್ದ ಡಾ.ವಿ.ಕೆ.ಗೋಕಾಕ ಅವರ ಮೆಚ್ಚಿನ ಶಿಷ್ಯರಾಗಿ ಅವರ ಕ್ವಾರ್ಟರ್ಸಿನ ಒಂದು ಕೋಣೆಯಲ್ಲಿಯೇ ವಾಸವಾಗಿದ್ದರು.ಹಿರಿಯ ಸಾಹಿತಿಗಳಾದ ಪ್ರೊ.ಚಂಪಾ,ಡಾ.ಮಲ್ಲಿಕಾರ್ಜುನ ಸಿಂದಗಿ,ಸಂಶೋಧಕ ಪ್ರೊ.ದೇವೇಂದ್ರ ಮಾಧವನವರ ಮೊದಲಾದವರು ಆಗ ಅಲ್ಲಿ ನಾಯ್ಕರರ ಒಡನಾಡಿಗಳಾಗಿದ್ದರು.ಇವರು ಕುಸ್ತಿಯಲ್ಲಿ ಕರ್ನಾಟಕ ವಿ.ವಿ.ಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ನಿರಂತರವಾಗಿ ಬಹುಮಾನ ತರುತ್ತಿದ್ದರು. ಹಸಿವು,ಅನ್ನದ ಮಹತ್ವ ,ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ಜ್ವಲಂತ ಸಮಸ್ಯೆಯಾಗಿರುವ ಅಸಮಾನತೆ , ಹೀಗೆ ಬದುಕಿನ ನಾನಾ ಮಗ್ಗಲುಗಳು ಹೆಚ್.ಎಫ್.ನಾಯ್ಕರ ಅವರಿಗೆ ಬಾಲ್ಯದಿಂದಲೂ ಅನುಭವವಾಗುತ್ತಲೇ ಬಂದವು.ಕಂಡುಂಡ ಕಷ್ಟಗಳು ಅವರಲ್ಲಿ ಛಲ ಮೂಡಿಸಿದವು.ಜೊತೆಗೆ ಎಲ್ಲ ರೀತಿಯಿಂದಲೂ ಗಟ್ಟಿಗೊಳಿಸುತ್ತ ಹೋದವು.ಮುಂದೆ 1961 ರಲ್ಲಿ ಪೋಲಿಸ್ ಇಲಾಖೆಗೆ ಸಬ್ ಇನ್ಸಪೆಕ್ಟರ್ ಆಗಿ ಸೇರಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೇಗೈದು ಡಿ.ಐ.ಜಿ. ಆಗಿ 1992 ರಲಿ ಬಡ್ತಿ ಪಡೆದರು.1994ರಲ್ಲಿ ಸೇವಾ ನಿವೃತ್ತಿ ಹೊಂದಿದರು, ಸರಕಾರದ ಈ ಜವಾಬ್ದಾರಿಯ ನಡುವೆಯೂ ಯೋಗ ಹಾಗೂ ಆಧ್ಯಾತ್ಮದ ಸಾಧನೆಯನ್ನು ಸದಾ ಕಾಲ ಜಾಗೃತವಾಗಿಟ್ಟುಕೊಂಡು ಬಂದರು.
ಶಕ್ತಿಪಾತ ವಿದ್ಯೆಯ ನಿಜ ಸಾಧಕ
ಜಾಗತೀಕರಣದ ಈ ಕಾಲಘಟ್ಟದಲ್ಲಿ ಯೋಗ,ಪ್ರಾಣಾಯಾಮ ,ಧ್ಯಾನಗಳೂ ಕೂಡ ಮಾರುಕಟ್ಟೆಯ ಸರಕಾಗಿವೆ. ಕೆಲವೇ ಕೆಲವು ವಿದೇಶಿ ಹಣವಂತರನ್ನು ಒಳಗಿಟ್ಟುಕೊಂಡು ಆಧ್ಯಾತ್ಮ ಬೋಧಿಸುತ್ತೇವೆ ಎಂದು ಹೇಳಿಕೊಳ್ಳುವ ಆರ್ಟ ಆಫ್ ಲಿವಿಂಗ್ ಕೇಂದ್ರಗಳು, ಕುಂಡಲಿನಿ ವಿದ್ಯೆ ಕಲಿಸುತ್ತೇನೆಂದು ಹೇಳಿ ಜನರನ್ನು ಸಮೂಹಸನ್ನಿಗೆ ತಳ್ಳುತ್ತ,ವಂಚಿಸುತ್ತ ‘ನಿತ್ಯ ಆನಂದ ’ಅನುಭವಿಸುವ ಆಶ್ರಮಗಳು ತಲೆ ಎತ್ತಿವೆ. ಯೋಗದ ಅ.ಆ.ಇ.ಈ …. ಕೂಡ ಅರಿಯದವರು ಶಕ್ತಿಪಾತ ವಿದ್ಯೆ ಧಾರೆ ಎರೆಯುತ್ತೇನೆ ಎಂದು ಹೊರಟು ಮುಗ್ಧರನ್ನು ,ಅಮಾಯಕರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಇಂತಹವರ ಸಂಖ್ಯೆ ಅಧಿಕವಾಗಿರುವ ಈ ದಿನಗಳಲ್ಲಿ ಶಕ್ತಿಪಾತ ವಿದ್ಯೆಯಲ್ಲಿ ನಿಜ ಸಾಧನೆಮಾಡಿರುವ ಹೆಚ್.ಎಫ್.ನಾಯ್ಕರ ಅವರು ಅಂತಹ ಡೋಂಗಿ ಯೋಗಿಗಳ ಬಗೆಗೆ ತಮ್ಮದೇ ಆದ ಅನುಭಾವಿಕ ನೆಲೆಯಲ್ಲಿ ಬೇಸರ,ಆಕ್ರೋಶ ವ್ಯಕ್ತಪಡಿಸುವದು ಹೀಗೆ…
“ಬೇಜಾರ ಬೇಜಾರ ಬಂದದ
ಬಜಾರದೊಳಗ ಯೋಗದ ಹರಾಜ ನಡೆದದ
ಜಗ್ಗಿ ಜಿಗಿಯುವ ಹಗ್ಗದ ಯೋಗ ,ಸುಗ್ಗಿ ತಂದಿದೆ ಈಗೀಗ
ಹಗ್ಗಾ ಜಗ್ಗಿ ಹೊಡೆವರು ಲಾಗ,ಹಗ್ಗದ ಮೇಲೂ ನಡೆದಿದೆ ಯೋಗ
ಕಂಬಿ ಮೇಲಿನ ಕಸರತ್ತಂತೆ,ದೊಂಬರಾಟವೂ ಯೋಗವಂತೆ,
ತಂಬುದೊಳಗಿನ ಸರ್ಕಸ್ಸಂತೆ, ಶಂಭುಲಿಂಗ- ಇದು ಹುಚ್ಚರ ಸಂತೆ !”
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ನಿಕಟ ಶಿಷ್ಯರಾಗಿದ್ದ ಹೆಚ್.ಎಫ್.ನಾಯ್ಕರ ಅವರ ತಂದೆ ಫಕೀರಪ್ಪ ಅವರು ಸ್ವತಃ ಸಿದ್ಧಾರೂಢರಿಂದ ಹಠಯೋಗದ ದೀಕ್ಷೆ ಪಡೆದಿದ್ದರು. ಈ ಜ್ಞಾನವನ್ನು ಫಕೀರಪ್ಪನವರು ತಮ್ಮ ಮಗನಿಗೆ ಆರು ವರ್ಷದ ಬಾಲಕನಾಗಿದ್ದಾಗಲೇ ಶಕ್ತಿಪಾತದ ಮೂಲಕ ಧಾರೆ ಎರೆದರು. ಆ ದಾರಿಯಲ್ಲಿ ಸತತ ಸಾಧನೆ,ಕಠಿಣ ಪರಿಶ್ರಮ ಮಾಡಿಕೊಂಡು ಬಂದಿರುವ ಹೆಚ್.ಎಫ್.ನಾಯ್ಕರ ಹಠಯೋಗಿಯಾಗಿ ಸಾವಿರಾರು ಜನರಿಗೆ ಯೋಗ ಕಲಿಸಿದರು.ಅನುಭಾವಿ ಕವಿಯಾಗಿ ಸುಮಾರು 7800 ಕ್ಕೂ ಹೆಚ್ಚು ಅಪೌರುಷೇಯವಾದ ಅದ್ಭುತ ಲಯಬದ್ಧ ಕವಿತೆಗಳನ್ನು ರಚಿಸಿದ್ದಾರೆ.
ತಮ್ಮ ತಂದೆಯವರ ಮೂಲಕ ಹಠಯೋಗ ಕಲಿತ ನಾಯ್ಕರರಿಗೆ ,ಅವರ ತಾಯಿಯ ತವರೂರಾದ ಶಿರಹಟ್ಟಿ ತಾಲ್ಲೂಕಿನ ಕೊಂಚಗೇರಿ-ಬೂದಿಹಾಳದ ಪೂರ್ವಜರೊಬ್ಬರಿಂದ ವಜ್ರೋಳಿ ಮುದ್ರೆ ವಿದ್ಯೆಯ ಪರಿಚಯವೂ ಆಯಿತು. ವೀರ್ಯ ,ಹಸಿವು ನಿಗ್ರಹಿಸುವ ಈ ವಜ್ರೋಳಿಮುದ್ರೆ ಯೋಗದ ಕುರಿತು
“ಬಿಟ್‌ಬಿಟ್ಟು ಎಳೆದಾಗ ಬಟ್ಟಲ ಬೀಜ
ಹುಟ್ಟಿ ಮೇಲೇರಿತು ನೆತ್ತಿಗೆ ಸೂರ್ಯ
ಗುಟ್ಟಾಗಿ ನುಡಿಯಿತು ಕಷ್ಟದ ಕಾರ್ಯ
ಕೊಟ್ಟಾನೋ ನಮ್ಮಪ್ಪ ಇಷ್ಟೊಂದು ಧೈರ್ಯ”
ಎಂದು ಹೆಚ್.ಎಫ್.ನಾಯ್ಕರ ಹಾಡುತ್ತಾರೆ.
ಇಂತಹ ಸಾವಿರಾರು ಭಾವಪೂರ್ಣವಾದ,ಮನೋಜ್ಞವಾದ ,ಆತ್ಮ ಸಾಕ್ಷಾತ್ಕಾರದ ಕವಿತೆಗಳು ಇವರ ಅಂತರಾಳದಿಂದ ತಾನೇ ತಾನಾಗಿ ಹೊರ ಹೊಮ್ಮಿವೆ.
ವರನಟ ಡಾ.ರಾಜಕುಮಾರ್‌ಗೆ ಯೋಗಶಿಕ್ಷಣ
ಕನ್ನಡದ ವರನಟ ,ಶ್ರೇಷ್ಠ ಮಾನವತಾವಾದಿ ಡಾ.ರಾಜಕುಮಾರ ಅವರು ಕೂಡ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಹಾಗೂ ಅಲ್ಲಿನ ಗೋವಿಂದ ಸ್ವಾಮಿಗಳ ಬಗೆಗೆ ಅಪಾರ ಗೌರವ,ಭಕ್ತಿ ಹೊಂದಿದವರು. ಅಂತಹ ಸಂಸ್ಕಾರವಿದ್ದ ರಾಜಕುಮಾರ ಅವರಿಗೂ ಯೋಗ ಕಲಿಸಬೇಕು ಕನ್ನಡ ನಾಡಿಗೆ ಅವರ ಸೇವೆ ಚಿರಕಾಲ ಸಿಗಬೇಕು ಎಂಬ ಹೆಬ್ಬಯಕೆಯೊಂದಿಗೆ 1979 ರಲ್ಲಿ ಮದರಾಸಿನಲ್ಲಿದ್ದ ಡಾ.ರಾಜ್ ಗೆ ಯೋಗ ಶಿಕ್ಷಣ ಆರಂಭಿಸಿದರು.

ಇಬ್ಬರ ನಡುವೆ ಗುರು-ಶಿಷ್ಯರ ಸಂಬಂಧಕ್ಕಿಂತ, ಯೋಗ ಮಾರ್ಗದಲ್ಲಿನ ಮಹಾನ್ ಯೋಗ ಸಾಧಕರ ಸಂಬಂಧ ಏರ್ಪಟ್ಟಿತು.ಅಂಗ ಸಾಧನೆಯ ಆತ್ಯತಿಂಕ ಶ್ರದ್ಧೆ. ತಪಸ್ಸು, ಏಕಾಗ್ರತೆಯ ಮೂಲಕ ಡಾ.ರಾಜ್ ಕೂಡ ಡಾ.ಹೆಚ್.ಎಫ್.ನಾಯ್ಕರ ಅವರ ಮಹಾಯೋಗತಂತ್ರ ಕರಗತ ಮಾಡಿಕೊಂಡರು.ಕಾಮನಬಿಲ್ಲು,ಭಕ್ತ ಪ್ರಹ್ಲಾದ ಚಿತ್ರಗಳಲ್ಲಿ ಡಾ.ರಾಜಕುಮಾರ ಪ್ರದರ್ಶಿಸಿದ ಯೋಗದ ನಿರ್ದೇಶಕರೂ ಕೂಡ ಹೆಚ್.ಎಫ್.ನಾಯ್ಕರ್ ಅವರೇ .
ಯೋಗದ ಸರ್ವೋನ್ನತ ತಜ್ಞ, ಅಧಿಕೃತ ವಕ್ತಾರ
ಯೋಗಾಭ್ಯಾಸ ಕ್ಷೇತ್ರಕ್ಕೆ ಹೆಚ್.ಎಫ್.ನಾಯ್ಕರ ಅವರ ಕೊಡುಗೆ ಅಪಾರವಾದುದು. ಭಾರತದ ಯೋಗ ಪ್ರಸಾರದ ಪ್ರಥಮ ಪ್ರವರ್ತಕರಲ್ಲಿ ಒಬ್ಬರು.ಅವರ ಮಹಾಯೋಗ ತಂತ್ರವು ಅಂತಸ್ತು,ನಂಬಿಕೆಗಳು,ಜಾತಿ-ಮತಗಳು,ರಾಷ್ಟ್ರೀಯತೆಯನ್ನು ಕೂಡ ಮೀರಿದ್ದು ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಗುರುತಿಸಿ, 2013 ರ ಮಾರ್ಚ 31 ರಂದು ನಡೆದ 14 ನೇಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಿದೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಈ ಗೌರವವನ್ನು ಪ್ರದಾನ ಮಾಡಿದ್ದಾರೆ.

1979 ರಲ್ಲಿ ಬೆಂಗಳೂರಿನ ಇಂಜನೀಯರ್ಸ ಹಾಲ್ ನಲ್ಲಿ ನಡೆದ ಅಂತರರಾಷ್ಟ್ರೀಯ ಚಾಪ್ಟರ್‌ಗಳ ಸಮಾವೇಶವು “ಯೋಗದಲ್ಲಿ ಶ್ರೀ ಹೆಚ್.ಎಫ್.ನಾಯ್ಕರರು ಸರ್ವೋನ್ನತ ತಜ್ಞರು : ಯೋಗ ವಿಷಯದಲ್ಲಿ ಅವರದೇ ಕಡೆಯ ಮಾತು ಹಾಗೂ ಅದೇ ಸರಿ ಎಂದು ಜೆ.ಡಬ್ಲು.ಲೋಬೊ ಅವರು ಸ್ಪಷ್ಟವಾಗಿ ಅಧಿಕಾರಯುತವಾಗಿ ಘೋಷಣೆ ಮಾಡಿದ್ದಾರೆ.
ಹಿರಿಯ ಪೋಲಿಸ್ ಅಧಿಕಾರಿಯಾಗಿ ಹೆಚ್.ಎಫ್.ನಾಯ್ಕರ ಅವರು ಮಾಡಿದ ಸೇವೆ ಪರಿಗಣಿಸಿ ನಾಗಾಲ್ಯಾಂಡಿನ ವಿಶೇಷ ಕಾರ್ಯಪಡೆಯ ಶ್ರಮಸಾಧ್ಯ ಸೇವಾ ಪದಕ,ರಾಷ್ಟçಪತಿಗಳ ಚಿನ್ನದ ಪದಕ ಇವರನ್ನು ಹುಡುಕಿಕೊಂಡು ಬಂದಿವೆ.ಇವರ ಯೋಗ ಜ್ಞಾನ ಗುರುತಿಸಿ ಕರ್ನಾಟಕ ಸರಕಾರವು 1996 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಮಹಾಯೋಗ ಕ್ಷೇತ್ರದ ಮೂಲಕ ನಿರಂತರ ಯೋಗ ಶಿಕ್ಷಣ
ಡಾ.ಹೆಚ್.ಎಫ್.ನಾಯ್ಕರ ಅವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವ್ಯಾಲಿ ಸ್ಕೂಲ್ ಹತ್ತಿರದ ಬಿ.ಎಂ.ಕಾವಲ್ ನಲ್ಲಿ ಸುಮಾರು 10 ಎಕರೆಗಳಿಗೂ ವಿಶಾಲವಾದ ಜಮೀನಿನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿದ್ದಾರೆ. ಯೋಗಸಾಧನೆಗೆ ಪೂರಕವಾಗಿರುವ ಪ್ರಶಸ್ತ ವಾತಾವರಣವನ್ನು ಅಲ್ಲಿನ ಗಿಡ ಮರಗಳು ಸೃಷ್ಟಿಸಿವೆ. ಈ ಪ್ರಶಾಂತ ಸ್ಥಳದಲ್ಲಿ ತಮ್ಮ ಕೊನೆ ಉಸಿರಿರುವವರೆಗೂ ಉಚಿತವಾಗಿ ಟ್ರೇನರ್ಸ್ ಟ್ರೇನಿಂಗ್ ಕೋರ್ಸ್ ನಡೆಸಿದರು.

ವಜ್ರೋಳಿ ಮುದ್ರೆ,ಪಂಚೀಕರಣ,ಪರಕಾಯ ಪ್ರವೇಶ, ನಿರ್ವಿಕಲ್ಪ ಸಮಾಧಿ,ಸಮಾಧಿ ಮರಣ, ಪ್ರತಿರೂಪ ತಾಳುವದು ಹೀಗೆ ಮೊದಲಾದ ಅಲೌಕಿಕವಾದ ಯೋಗ ತಂತ್ರಗಳು ಡಾ.ನಾಯ್ಕರ ಅವರಿಗೆ ಸಿದ್ಧಿಸಿದ್ದವು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಕೆ.ಎಸ್.ಶ್ರೀಪ್ರಕಾಶ, ನೇತ್ರ ತಜ್ಞೆ ಡಾ.ಬಿಂದು ಕಮಲೇಶನ್ ಸೇರಿದಂತೆ ನೂರಾರು ಗಣ್ಯರು ಇವರೊಂದಿಗೆ ಕಳೆದ ಹಲವು ದಶಕಗಳಿಂದ ಯೋಗ ಸಾಧನೆ ಮಾಡಿದ್ದಾರೆ..
ಮಾಜಿ ಪ್ರಧಾನಿ ಇಂದಿರಾಗಾಂಧಿ, ದೇಶದ ವಿವಿಧ ರಾಜ್ಯಗಳ ರಾಜ್ಯಪಾಲರುಗಳು, ಮಂತ್ರಿಗಳು,ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರಷ್ಟೇ ಅಲ್ಲದೇ ಸಾವಿರಾರು ಗಣ್ಯರು ಶ್ರೀ ನಾಯ್ಕರ ಅವರ ಮಹಾಯೋಗ ಕ್ಷೇತ್ರಕ್ಕೆ ಭೇಟಿ ನೀಡಿ ಮಾರ್ಗದರ್ಶನ ಪಡೆದಿದ್ದಾರೆ.

ಜಾತಿ-ಮತ-ಪಂಥ ಮೀರಿ ಸಮಸ್ತ ಜೀವಕುಲ ಒಂದೇ ಎಂದು ಸಾರುವ ಅದ್ಭುತ ಯೋಗ ಸಂದೇಶ ಹೆಚ್.ಎಫ್.ನಾಯ್ಕರ ಅವರದ್ದು. ಯೋಗವನ್ನು ವಾಣಿಜ್ಯದ ಸೋಂಕಿಲ್ಲದೆ,ಮಾರುಕಟ್ಟೆಯ ಸರಕನ್ನಾಗಿಸದೇ, ಪ್ರಚಾರದ ಸಾಧನವನ್ನಾಗಿಯೂ ಮಾಡಿಕೊಳ್ಳದೇ ನಿರ್ಲಿಪ್ತವಾಗಿ, ನಿರಂತರವಾಗಿ ಸಾಧನೆಗೈದ ಹೆಚ್.ಎಫ್.ನಾಯ್ಕರ ಅವರು 2021 ರ ಮೇ 20 ರಂದು ತಮ್ಮ 85 ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿದರು. ಅವರ ಯೋಗ ಪ್ರತಿಭೆ ಹಾಗೂ ತತ್ವಪದ ಪರಂಪರೆಯ ಅನನ್ಯ ಕಾವ್ಯ ಪ್ರತಿಭೆಯನ್ನು ನಾಡು ಗುರುತಿಸಬೇಕಾಗಿದೆ. ಸಾಂಸ್ಕೃತಿಕ ,ಸಾಹಿತ್ಯಕ ದೃಷ್ಟಿಯಿಂದಲೂ ಇವರ ಕಾವ್ಯ ಮತ್ತು ಕೃತಿಗಳನ್ನು ಅಭ್ಯಸಿಸುವ ಅಗತ್ಯವಿದೆ.






0 Comments