ವೈಸಲಿನ್ ಮಾತ್ರೆಯ ಅಮ್ಮ ಮತ್ತು ಅಲಾರಾಂ ರೊಟ್ಟಿಯ ಸದ್ದು

ಶಿವರಾಜ ಬೆಟ್ಟದೂರು

ಎಪ್ಪತ್ತೈದು ವರುಷದ ನಮ್ಮಮ್ಮ
ಕಳೆದ ನಲವತ್ತು ವರುಷಗಳಿಂದ
ತಿನ್ನುತ್ತಲೇ ಇದ್ದಾಳೆ ಬಿಟ್ಟೂ ಬಿಡದೆ
ಐದರಿಂದ ಹತ್ತು ಮಿಲಿಗ್ರಾಂ ವೈಸಲಿನ್ ಮಾತ್ರೆ
ಪುಟಾಣಿ ಕಾಳಿನಂತೆ ದಿನಂಪ್ರತಿ

ಒಂದು ಕಾಲದ ಗಂಡ್ರಾಮಿ ಅಮ್ಮ
ಹೆಚ್ಚೂ ಕಡಮೆ ಕ್ವಿಂಟಾಲಿಗೂ ಹೆಚ್ಚು ಗುಳಿಗೆಗಳನ್ನು
ನುಂಗಿರಬೇಕು ಇಲ್ಲಿಯತನಕ
ಒಳಗೇ ಚೇಳು ಕುಟಿಕಿದಂತಹ
ಕೀಲು ನೋವಿನ ಶಮನಕ್ಕೆ

ಅಷ್ಟು ತಿಂದು ಬದುಕಿ ಉಳಿದದ್ದೊಂದು
ಗಿನ್ನೀಸ್ ದಾಖಲೆಯೇ ಸರಿ

‘ಊರು ದೂರ, ಕಾಡು ಸನೇವ’ ಎನ್ನುವ ಅಮ್ಮ
ವೈದ್ಯರ ಮಾತಿಗೆ ಕ್ಯಾರೆ ಅನ್ನದೆ
ನಮ್ಮ ಒತ್ತಾಯಕ್ಕೆ ಮಣಿದು ಬಿಟ್ಟುಬಿಟ್ಟಿದ್ದಳು ಒಮ್ಮೆ
ಗುಳಿಗೆ ತಿನ್ನುವುದನ್ನು
ಎಲ್ಲ ಏರುಪೇರಾಗಿ ಹಾಸಿಗೆ ಬಿಟ್ಟು ಏಳಲು ಆಗಲೇ ಇಲ್ಲ

ಅಲೋಪತಿ ಆಯಿತು ಆಯುರ್ವೇದ ಆಯಿತು
ಪತಿ ತೀರಿ ಹೋಗಿ ಹದಿನೈದು ವರುಷವಾಯಿತು
ಯಾವ ಔಷಧಿಯೂ ಹತ್ತುತ್ತಿಲ್ಲ ಆಕೆಯ ಮೈಗೆ
ವೈಸಲಿನ ವಿಷವೊಂದು ಬಿಟ್ಟು

ಮೂಳೆಯನ್ನು ಟೊಳ್ಳಾಗಿಸಿದ ಮಾತ್ರೆ
ಸಕ್ಕರೆ ಖಾಯಿಲೆಗೆ ಕಾರಣವಾದಂತೆ
ಬೀಸಕಲ್ಲಿಗೆ ಹಾಕಿ ಹಿಟ್ಟು ಬೀಸಿದಂತೆ
ಸಣ್ಣ ಮಾಡಿತು ಆಕೆಯನ್ನ

ಓದುವುದು ಕಲಿಯಲಿಲ್ಲ ಟಿವಿ ನೋಡುವುದೇ ಇಲ್ಲ
ತಂಬಾಕು ನಶಿಪುಡಿಯಂತಹ ಯಾವ ತಲುಬೂ ಇಲ್ಲ
ಹಾಲು ಹೈನದ ಅಮ್ಮ ಜೀವನಪೂರ್ತಿ ಮಾಡಿದಳು
ದಗದ ದಗದ ಬರೀ ದಗದ
ಕೌದಿ ಹೊಲೆಯುತ್ತ ಹಸನು ಮಾಡುತ್ತ ..
ಈಯಮ್ಮನ ಒಂದು ಕಾಲದ ಮಜ್ಜಿಗೆಗೆ
ಮುಗಿಬೀಳುತ್ತಿತ್ತು ಇಡೀ ಊರಿಗೆ ಊರೇ ಸಾಲುಗಟ್ಟಿ

ಸುಮ್ಮನೆ ಕೂಡುವ ಜಾಯಮಾನದವಳಲ್ಲ ಆಕೆ
ಬೆಳಬೆಳಿಗ್ಗೆ ಎದ್ದು ಮನೆಗೆಲಸ ಮುಗಿಸಿ
ಚಟ್ ಪಟ್ ಚಟ್ ಪಟ್ ಅಲಾರಾಂ ರೊಟ್ಟಿಯ ಸದ್ದಿಗೆ
ನಗರಕ್ಕೆ ನಗರವೇ ಎದ್ದು ಮುಖ ತೊಳೆದುಕೊಳ್ಳುತ್ತದೆ

ಬದಲಾದ ಸನ್ನಿವೇಶದಲ್ಲಿ
ನಗರ ಸೇರಬೇಕಾಯ್ತು ಅಮ್ಮ
ಗಂಡ ಸತ್ತ ಮಗಳಲ್ಲಿ ಲಕ್ಚರು ಮಗನಲ್ಲಿ
ಬೇಡವಾದ ಮಗನ ಊರಲ್ಲಿ
ಅಲ್ಲಿಷ್ಟು ದಿನ ಇಲ್ಲಿಷ್ಟು ದಿನ ಬೇಡವಾದರು ಇದ್ದು
ಅಟ್ಟದ ಮೇಲಿನ ಹಳೆಯ ಸಾಮಾನಿನಂತೆ
ಹೊಂದಿಕೊಳ್ಳುತ್ತಿದ್ದಾಳೆ
ನಿಧಾನಕ್ಕೆ ನಗರದ ಲಯಕ್ಕೆ

ಎಷ್ಟೊಂದು ಬೇನೆಗಳು ಜಗದಲ್ಲಿ
ಏಸೊಂದು ರಿಪೇರಿಗಳು ಬಾಳಲ್ಲಿ
ವ್ಯಸನದ ಮೂಲ ಬೇನೆಯೋ
ಬೇನೆಯ ಮೂಲ ವ್ಯಸನವೋ
ಮನಸಿನ ಶಮನ ದುಃಖವೋ
ಬದುಕಿನ ತೆವಲೇ ತಲುಬೋ
ಒಂದೂ ಗೊತ್ತಾಗುತ್ತಿಲ್ಲ
ಮಾತ್ರೆಗಳಿರದ ಮೂತ್ರಗಳಿರದ
ವಧುಶಾಲೆ ಮಧುಶಾಲೆಗಳಿರದ
ಇನ್ನಾವುದೋ ನೆಮ್ಮದಿ ಕೊಡುವ ತಾಣಗಳಿರದ
ಬದುಕನ್ನು ಊಹಿಸಿಕೊಂಡರೆ
ಹಗಲು ಬುಗುಲಾಗುತ್ತದೆ

ವ್ಯಸನದಿಂದ ತುಸು ಹೊತ್ತಿನ ಮುಕ್ತಿ ಪಡೆಯಬಹುದು
ಚೂರೇ ಚೂರು ಹೆಚ್ಚಾದರೆ ಬಾಧಿಸುವುದು ಸಂದೇಹ
ಪೀಡಿಸುವುದು ನಿತ್ರಾಣಗೊಳಿಸುವುದು
ದೃತಿಗೆಡಿಸಿ ಮತ್ತೆ ಪರೀಕ್ಷಿಸಿವುದು ದೇಹ

ಮಜ್ಜಿಗೆ ಕುಡಿಸಿ ಹಳ್ಳಿಯನ್ನು ತಂಪಾಗಿರಿಸಿದ್ದ
ಧಾಡಸಿ ಅಮ್ಮ
ನನಗೆ ಮಕ್ಕಳೇ ಇಲ್ಲ ಅನ್ನುವ ಅಮ್ಮ
ಒಳಗೇ ಕುದಿಯುತ್ತಾಳೆ ಮಾರಿದ ಎಮ್ಮೆಗೆ
ಶಪಿಸುತ್ತಾಳೆ ಟೈಲ್ಯಾಂಡಾದ ತುಂಗಭದ್ರೆಯ ನದಿ ಪಾತ್ರಕ್ಕೆ
ಏನೂ ಮಾಡಲಾಗದ ರೈತ ಮಗನ ನಿಟ್ಟುಸಿರಿಗೆ

ಆದರೆ ಒಪ್ಪಲೇಬೇಕು ಒಂದು ಮಾತು
ಹಡೆದ ಮಕ್ಕಳಿಗಿಂತ ಆಪ್ತ ಈ ಮಾತ್ರೆ ಈಕೆಗೆ

‍ಲೇಖಕರು Admin

May 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: