ಪಾಲಹಳ್ಳಿ ವಿಶ್ವನಾಥ್ ಕಥೆ- ಕಂದುಸುಂದರಿ…

ಪಾಲಹಳ್ಳಿ ವಿಶ್ವನಾಥ್

(ಸಾಕಿ (ಎಚ್.ಎಚ್.ಮನ್ರೊ 1870-1916) ವರ ‘ಬ್ರೆಡ್ ಅಂಡ್ ಬಟರ್ ಮಿಸ್’ ಕಥೆಯ ಕನ್ನಡ ರೂಪಾಂತರ)

ನಮಗೆಲ್ಲಾ ಕುದುರೆ ಜೂಜೆಂದರೆ ಪ್ರಾಣ. ವರ್ಷದಲ್ಲಿ 3 ತಿಂಗಳು ನಮಗೆ ಬೇರೆ ಯಾವುದರ ಬಗ್ಗೆಯೂ ಗಮನವಿರುವುದಿಲ್ಲ ಅರ್ಧ ಜೀವನ ರೇಸ್ ಕೋರ್ಸ ಬಳಿಯೇ ಕಳೆದುಹೋಗುತ್ತದ. ಉಳಿದ 9 ತಿಂಗಳುಗಳಲ್ಲಿ ಸಂಪಾದಿಸಿದ್ದೆಲ್ಲ 3 ತಿಂಗಳಲ್ಲಿ ಖರ್ಚಾಗಿ ಹೋಗುತ್ತಿತ್ತು. ಮುಂದಿನ ತಿಂಗಳು ಬೆಂಗಳೂರು ಡರ್ಬಿ! ಬಹಳ ಪ್ರತಿಷ್ಟಿತ ರೇಸ್! ಇದನ್ನು ನೋಡಲು ಎಲ್ಲೆಲ್ಲಿಂದಲೂ ಜನ ಬರುತ್ತಿದ್ದರು.ಇಂಗ್ಲೆಂಡಿನ ರಾಜರಾಣಿಯರಿಗೂ ಇದರಲ್ಲಿ ಆಸಕ್ತಿ ಇದ್ದು ಸುಮಾರು ಹಣವನ್ನು ಹಾಕುತ್ತಿದ್ದರಂತೆ. ಹಲವಾರು ಖ್ಯಾತ ಕುದುರೆಗಳು ಭಾಗವಿಸಲಿದ್ದವು : ಅಶ್ವಘೋಷ,ಹಯವದನ, ಧವಳಾಶ್ವ,ಕೃಷ್ಣಾಶ್ವ, ಇತ್ಯಾದಿ ಈ ಎಲ್ಲ ಕುದುರೆಗಳೂ ಅಲ್ಲಿ ಇಲ್ಲಿ ರೇಸುಗಳಲ್ಲಿ ಜಯಗಳಿಸಿದ್ದವು.

ಯಾವುದೂ ಕಳಪೆ ಏನಿರಲಿಲ್ಲ. ಆದರೆ ಡರ್ಬಿಯಲ್ಲಿ ಯಾವುದರ ಮೆಲೆ ದುಡ್ಡು ಹಾಕಬಹುದು? ಇವುಗಳ ಜೊತೆ ಕುದುರೆಮುಖ, ಕಂದುಸುಂದರಿ, ಹುರುಳಿಪೋತ ಎಂಬ ಖ್ಯಾತಿ ಗಳಿಸದ ಕುದುರೆಗಳೂ ‘ಲೆಕ್ಕಕ್ಕಿಲ್ಲ, ಆಟಕ್ಕುಂಟು’ ಎನ್ನುವ ತರಹ ಇದ್ದವು ಖ್ಯಾತ ಕುದುರೆಗಳಿಗೆ ಒಂದೊಂದಕ್ಕೂ ಏನಾದರೂ ಶಿಫಾರಸು ಇರುತ್ತಿತ್ತು. ಉದಾ: ಧವಳಾಶ್ವ (ಬಿಳಿಯ ಕುದುರೆ) ದ ಜಾಕಿಯ (ಕುದುರೆ ಸವಾರ) ಭಾವಮೈದನ ಪ್ರಕಾರ ಕುದುರೆಗೆ ಕಜಕಿಸ್ತಾನದ ಯಾವುದೋ ಹೊಸ ಆಹಾರ ಕೊಡುತ್ತಿದ್ದಾರಂತೆ. ಅಂದರೆ ಅದು ಗೆಲ್ಲುವ ಸಂಭವ ಹೆಚ್ಚೇ ಅಲ್ಲವೆ? ಕೃಷ್ಣಾಶ್ವ (ಕರಿ ಕುದುರೆ)ದ ವೇಗ ಪ್ರತಿ ದಿವಸವೂ ಹೆಚ್ಚಾಗುತ್ತಲೆ ಹೋಗುತ್ತಿದೆಯಂತೆ! ಅಶ್ವಗೋಷನಿಗೆ ಎಲ್ಲರಿಗಿಂತ ಹೆಚ್ಚು ಮರಿಗಳಂತೆ ! ನಮಗಂತೂ ಪ್ರತಿ ದಿನವೂ ಏನಾದರೂ ಹೊಸ ಸುದ್ದಿ ! ಅಂತೂ ನಮ್ಮೆಲ್ಲರ ತಲೆ ಕೆಡುತ್ತಿತ್ತು. ಆಗ ಶಾಂತಾರಾಮನನ್ನು ಏಕೆ ಕೇಳಬಾರದು ಎಂದು ಗೆಳೆಯರೊಬ್ಬರು ಸಲಹೆಕೊಟ್ಟರು.

ನಮ್ಮಲ್ಲೆಲ್ಲಾ ಶಾಂತಾರಾಮ್ ವಿಶೇಷ ವ್ಯಕ್ತಿ. ಅವನೋ ಇಂಜನಿಯರು. ಅವನು ಜ್ಯೋತಿಷಿಗಳ ವಂಶಕ್ಕೆಸೇರಿದವ. ಹಾಗೆಂದು ಅವನಿಗೆ ಅದರಲೆಲ್ಲಾ ನಂಬಿಕ ಇರಲಿಲ್ಲ.ಆದರೆ ಹೇಗೋ ಮನೆತನದ ವೃತ್ತಿಯ ಒಂದು ಅಂಶ ಶಾಂತಾರಾಮನಿಗೂ ಬಂದಿತ್ತು: ಭವಿಷ್ಯದತ್ತ ನೋಡುವ ಪ್ರವೃತ್ತಿ. ಎಲ್ಲರಂತೆ ಅವನಿಗೂ ಕನಸುಗಳು ಬೀಳುತ್ತಿದ್ದವು. ಆದರೆ ಶನಿವಾರದ ಕನಸಿನಲ್ಲಿ ಏನೋ ವಿಶೇಷವಿರುತ್ತಿತ್ತು. ಶಾಂತಾರಾಮನ ಈ ಪ್ರತಿಭೆಯನ್ನು ಚಿಕ್ಕಂದಿನಲ್ಲೆ ಮನೆಯವರು ಗುರುತಿಸಿದ್ದರು. ಇಂದಿರಾ ಗಾಂಧಿ 1980ರಲ್ಲಿ ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಂತಾಗ, ಶಾಂತಾರಾಮ ಇನ್ನೂ ಪುಟ್ಟ ಬಾಲಕ. ಆ ಸಮಯದಲ್ಲಿ ಒಂದು ಭಾನುವಾರ ಬೆಳಿಗ್ಗೆ ಅವನು ‘ ರಾತ್ರಿ ಕನಸು ಬಿದ್ದಿತ್ತು. ಪಕ್ಕದ ಮನೆ ಆಂಟಿ ಬಂದಿದ್ದರು’ ಎಂದನಂತೆ. ಮಗು ಎನೋ ಹೇಳ್ತಿದೆ ಎಂದು ಯಾರೂ ಗಮನ ಕೊಡಲಿಲ್ಲವಂತೆ. ಆದರೆ ಮುಂದಿನ ಶನಿವಾರ ರಾತ್ರಿಯೂ ಅವನಿಗೆ ಅದೇ ಕನಸು ಬಿದ್ದಿದ್ದಂತೆ. ಆಗ ಏನು ಹೇಳ್ತಿದಾನೆ ಇವನು ಎಂದು ಮನೆಯವರು ಯೋಚಿಸಲು ಶುರುಮಾಡಿದರಂತೆ. ಪಕ್ಕದ ಮನೆ ಆಂಟಿ ಯಾರು ? ಇಂದಿರಮ್ಮನವರೆ? ಅವರು ಯಾಕೆ ಇವನ ಕನಸಿನಲ್ಲಿ ಬರಲು ಹೋದರು? ಸರಿ, ಮೂರನೆಯ ಭಾನುವಾರವೂ ಅವನು ಇದೇ ಕನಸು ಹೇಳಿಕೊಂಡು ಎದ್ದ. ಎರಡು ದಿನಗಳ ನಂತರ ಚುನಾವಣೆಯ ಫಲಿತಾಂಶ ಬಂದಿತು. ಗೆದ್ದವರು ಯಾರು ?ಇಂದಿರಾ ಗಾಂಧಿ ! ಆಗ ಶಾಂತಾರಾಮನ ಅಮ್ಮನಿಗೆ ‘ ಓ ಈ ಮಗೂಗೆ ಎನೋ ರಹಸ್ಯ ವಿದ್ಯೆ ಇದೆ’ ಎಂದು ಅರ್ಥವಾಯಿತಂತೆ. ಆದರೆ ಅವನಿಗೆ ದೃಷ್ಟಿ ಬೀಳದಿರಲಿ ಎಂದು ಅವರು ಅದಕ್ಕೆ ಹೆಚ್ಚು ಪ್ರಚಾರ ಕೊಡಲಲಿಲ್ಲವಂತೆ..

ಇನ್ನು 3 ವರ್ಷ ದ ಮೆಲೆ ಮತ್ತೊಂದು ಘಟನೆ. ಶಾಂತಾರಾಮನ ಶನಿವಾರದ ಕನಸುಗಳಲ್ಲಿ ಕಪಿಲ್ ದೇವ ಕಾಣಿಸಿಕೊಳ್ಳಲು ಪ್ರಾರಂಭಿಸಿದರತೆ. ಆ ವಯಸ್ಸಿನ ಹುಡುಗರಿಗೆ ಕ್ರಿಕೆಟ್ಟಿನ ಕನಸು ಬೀಳುವುದು ಹೆಚ್ಚೆನಿಲ್ಲ. ಆದರೆ ಕಪಿಲ್ ದೇವ್ ರಾಜನ ತರಹ ಕಿರೀಟ ಹಾಕಿಕೊಂಡು. ಕುದುರೆಯ ಮೇಲೆ ಕುಳಿತಿದ್ರಂತೆ. ಅದೇ ಕನಸು ಎರಡು ಬಾರಿ ಬಿದ್ದ ನಂತರ ಅವನ ಅಪ್ಪ ಅಮ್ಮ ರಿಗೆ ಮಗ ಭವಿಷ್ಯ ನುಡಿಯುತ್ತಿರಬಹುದು ಎನ್ನಿಸಿತು. ಅಂದರೆ ಭಾರತ ವರ್ಲ್ಡ ಕಪ್ ಗಳಿಸುತ್ತಾ? ಯಾರಿಗಾರೂ ಅದನ್ನು ಹೇಳಿದ್ದರೆ ಬಿದ್ದು ಬಿದ್ದು ನಗುತ್ತಿದ್ದರು ಅಷ್ಟೆ . ಶಾಂತಾರಾಮನ ಅಪ್ಪ ಅವರ ಸಹೋದ್ಯೋಗಿಗಳ ಹತ್ತಿರ ಪಣ ಇಡಲು ಶುರುಮಾಡಿದರಂತೆ. ಹಾಗೇ ಅಮ್ಮನೂ ಅಕ್ಕ ಪಕ್ಕದ ಮನೆಯ ಹೆಂಗಸರ ಜೊತೆ ಪಣ ಇಡಲು ಶುರುಮಾಡಿದರಂತೆ. ಬಾರತ ಕಪ್ ಗಳಿಸಿತು ಎಂದು ನಮಗೆ ಈವತ್ತು ಗೊತ್ತು. ಅದರೆ ಅಂದು? ಅಂತೂ ಅವನ ಅಪ್ಪ ಅಮ್ಮ ಸುಮಾರು ದುಡ್ಡುಮಾಡಿ ಒಂದು ಕಲರ್ ಟಿವಿಯನ್ನು ಕೊಂಡುಕೊಂಡರಂತೆ !

ಶಾಲಾ ಕಾಲೇಜುಗಳಲ್ಲೂ ಅವನ ಈ ಪ್ರತಿಭೆ ಆಗಾಗ್ಗೆ ಕಾಣಬರುತ್ತಿತ್ತು. ಪರೀಕ್ಷೆಗಳ ಸಮಯದಲ್ಲಿ ಅವನಿಗೆ ಬಹಳ ಬೇಡಿಕೆ. ಅವನ ಕನಸುಗಳಲ್ಲಿ ಪರೀಕ್ಷೆಯ ಪ್ರಶ್ನೆಗಳ ಉತ್ತರಗಳು ಕಾನಿಸಿಕೊಳ್ಳತಿದ್ದವು ಎಂದು ಕಂಡುಕೊಂಡೆವು ನಮ್ಮಲ್ಲಿ ಇದ್ದ ಸ್ವಲ್ಪವೇ ಬುದ್ದಿ ಶಕ್ತಿ ಬಳಸಿಕೊಂಡು ಪ್ರಶ್ನೆಗಳನ್ನು ಊಹಿಸಿಕೊಳ್ಳಬೇಕಿತ್ತು. ನಾವೆಲ್ಲ ಡಿಗ್ರಿ ಪಾಸ್ ಮಾಡಿದ್ದೇ ಹಾಗೆ, ಒಟ್ಟಿನಲ್ಲಿ ಅವನಿಗೆ ಭವಿಷ್ಯದ ಸುಳಿ ಸಿಗುತ್ತಿತ್ತೇ ವಿನಾ ಭವಿಷ್ಯವೇ ತೆರೆದ ಕಾಗದವಾಗುತ್ತಿಎಲಿಲ್ಲ. ಒಂದು ಬಾರಿ ಸ್ಥಳೀಯ ಚುನಾವಣೆಗಳ ಬಗ್ಗೆ ಅವನಿಗೆ ಕನಸು ಬಿದ್ದಿತ್ತು.ಎಂದಿನಂತೆ ಕೈ ಮತ್ತು ಕಮಲದ ಮಧ್ಯೆ ಪೈಪೋಟಿ..ಮೂರನೆಯವರು ಸ್ವತಂತ್ರವಾಗಿ ನಿಂತಿದ್ದ ಪ್ರತಿಮಾದೇವಿ ಎಂಬ . ಆದರ್ಶವಾದಿ ಮಹಿಳೆ. ಜನ ಅವರನ್ನು ಹಾಸ್ಯವೂ ಮಾಡುತ್ತಿದ್ದರು.ಅವರಿಗೂ ತಾನು ಗೆಲ್ಲುವುದಿಲ್ಲ ವೆಂದು ತಿಳಿದಿತ್ತು.

ಶಾಂತಾರಾಮನ ಕನಸುಗಳಲ್ಲಿ ವಿಗ್ರಹಗಳು ಕಾಣಿಸಿಕೊಳ್ಳುತ್ತಿದ್ದವು ಕಡೆಯಲ್ಲಿ ಮತಗಳನ್ನುಎಣಿಸಿದಾಗ ಪ್ರತಿಮಾದೇವಿ ಗೆದ್ದಿದ್ದರು ! ಶಾಂತಾರಾಮ ನಮ್ಮ ಜೂಜಿನ ಗುಂಪಿನಲ್ಲಿ ಇರಲಿಲ್ಲ. ಅವನಿಗೆ ಇಷ್ಟವಿತ್ತೋ ಏನೋ, ಅದರೆ ಅವನ ಹಂಡತಿ ಗೆ ಈ ಹವ್ಯಾಸಗಳೆಲ್ಲಾ ಸರಿಬರುತ್ತಿರಲಿಲ್ಲ. ಆದರೂ ಅವನು ನಮ್ಮ ಹಿತೈಷಿ. ‘ಈ ಡರ್ಬಿ ವಿಷಯ ಏನಾದರೂ ಹೇಳೋ’ ಎಂದು ಒತ್ತಾಯಿಸಿದೆವು. ಇನ್ನೂ 3 ವಾರಗಳಿದ್ದವು . ಸರಿ, ಮುಂದಿನ ಭಾನುವಾರ ನಾವೆಲ್ಲಾ ಅವನ ಮನೆಗೆ ಹೋದೆವು. ‘ “ಜೂಜಿನ ಕನಸೇನೋ ಬಿತ್ತು. 5-6 ಕುದುರೆಗಳಿದ್ದವು. ಎರಡು ಕುದುರೆಗಳು ಒಂದೇ ಸಮಯಕ್ಕೆ ಗೆದ್ದವು “ಒಂದು ಬಿಳಿ ಕುದುರೆ, ಇನ್ನೊಂದು ಕರಿ ಕುದುರೆ” ಎಂದು ಹೇಳಿದ. ನಾವು ಮತ್ತೆ ತಲೆಯಮೇಲೆ ಕೈ ಇಟ್ಟುಕೊಳ್ಳಬೇಕಾಯಿತು. ಧವಳಾಶ್ವವೋ? ಕೃಷ್ನಾಶ್ವವೋ? ಏನು ತರಳೆ ಮಾಡಿಬಿಟ್ಟ ಶಾಂತಾರಾಮ ನಿಸಿತು. ‘”ಇನ್ನು ಸಮಯವಿದೆ, ಮುಂದಿನ ಶನಿವಾರ ಸರಿಯಾಗಿ ಗಮನಿಸು. ಒಂದೇ ಗೆಲ್ಲೋಕೆ ಸಾಧ್ಯ. ಮಲಗೊ ಮೊದಲು ಕಾಫಿ ಕುಡಿದಿರು. ಒಂದು ತರಹ ಎಚ್ಚರ ಇರುತ್ತೆ’ ಎಂದೆವು. ಭಾನುವಾರ ಅವನ ಮನೆಗೆ ಹೋದೆವು.

ಪುನ: ಅದೇ ಕಥೆ ! ಎರಡು ಕುದುರೆಗಳೂ ಒಂದೆ ಸಮಯದಲ್ಲಿ ಗೆಲ್ಲುವುದು ! ಅವನಿಗೆ ‘ ನೋಡು ಇದೇ ಕಡೆಯ ವಾರ,ಇನ್ನೊಂದು ಪ್ರಯತ್ನ ಮಾಡಿಬಿಡು. ಎಂದೆವು ಅವನಿಗೂ ಆತಂಕ ವಿರಬೇಕು ಇಡೀ ಶುಕ್ರವಾರ ರಾತ್ರಿ ನಿದ್ದೆಯೇ ಬರಲಲ್ಲವಂತೆ.ನಮಗೆಲ್ಲಾ ಯೋಚನೆಯಾಯಿತು . ನಿದ್ರೆ ಬರದಿದ್ದರೆ ಕನಸು ಎಲ್ಲಿಂದ ಬೀಳಬೇಕು? ಆಯುರ್ವೇದ ಕಷಾಯ ಕುಡಿಸಿದೆವು. ಅವನಿಗೆ ಗೊತ್ತಾಗದಂತೆ ಅದರಲ್ಲಿ ಸ್ವಲ್ಪ ಬ್ರಾಂಡಿಯು ಸೇರಿಸಿದೆವು. ಸರಿ,ಭಾನುವಾರ ಬೆಳಿಗ್ಗೆ ಶಾಂತಾರಾಮನ ಮನೆಗೆ ಹೋದೆವು. ಅವನು ಇನ್ನೂ ಎದ್ದಿರಲಿಲ್ಲ. ಎಬ್ಬಿಸಿದ ಮೆಲೆ ಕನಸಿನ ವಿಷಯ ಕೇಳಿದೆವು. ಯಾವ ಕನಸೂ ಬೀಳಲಿಲ್ಲ ಎಂದುಬಿಟ್ಟ. ಅವನ ಹಿಂದಿನ ಕನಸುಗಳನ್ನೇ ಮೆಲಕುಹಾಕುತ್ತ ವಾಪಸ್ಸು ಹೋದೆವು. ಬೆಂಗಳೂರು ಡರ್ಬಿಯಂತೂ ನಡೆಯಿತು. ಸುಮಾರು ಹಣಕೊಟ್ಟು ನಾವೆಲ್ಲಾ ನೋಡಲು ಹೋದೆವು. ಅದಕ್ಕಿಂತ ಹೆಚ್ಚಾಗಿ ಕುದುರೆಗಳ ಮೇಲೆ ದುಡ್ಡು ಹಾಕಿದೆವು. ಅರ್ಧ ಜನ ಧವಳಾಶ್ವದ ಮೆಲೆ, ಅರ್ದ ಜನ ಕೃಷ್ಣಾಶ್ವದ ಮೇಲೆ. ಯಾರಾದರೂ ಗೆಲ್ಲಲಿ, ಆಮಲೆ ಹಂಚಿಕೊಳ್ಳೋಣ ಎಂಬ ಯೋಜನೆ. ಆದರೆ ಕೊನೆಯಲ್ಲಿ ಗೆದ್ದದ್ದು ಯಾರೂ ನಿರೀಕ್ಷಿಸಿರದ ‘ಕಂದು ಸುಂದರಿ’! ಟ್ಯೂಬು ಲೈಟುಗಳ ತರಹ ನಿಧಾನವಾಗಿ ನಮಗೆ ಶಾಂತಾರಾಮನ ಕನಸಿನ ಅರ್ಥ ಹೊಳೆಯಿತು. ಕರಿ,ಬಿಳಿ ಒಟ್ಟಿಗೆ ಬರುತ್ತೆ ಅಂತ ಹೇಳಿದ್ದನಲ್ಲವೆ ಶಾಂತಾರಾಮ ! ಅವೆರಡು ಸೇರಿಸಿದರೆ ಸಿಗುವ ಬಣ್ಣ ಯಾವುದು? ಮನೆಯಲ್ಲೇ ಕುಳಿತು ‘ ಕಂದುಸಂದರಿ’ ಯ ಮೇಲೆ ಹಣ ಹಾಕಿದ್ದ ಶಾಂತಾರಾಮನ ಹೆಂಡತಿ ಒಂದೇ ದಿನದಲ್ಲಿ ಕೋಟ್ಯಾಧೀಶಳಾಗಿಬಿಟ್ಟಳು.

‍ಲೇಖಕರು Admin

May 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: