ವೈವಿಧ್ಯತೆಗೆ ಮತ್ತೊಂದು ಹೆಸರು ‘ಕಮಲ ಹಾಸನ್’

ಗೊರೂರು ಶಿವೇಶ್

‘ಕಳತ್ತೂರು ಕಣ್ಣಮ್ಮ’ ಚಿತ್ರದ ಮೂಲಕ 6ನೇ ವಯಸ್ಸಿಗೆ ಚಲನಚಿತ್ರರಂಗವನ್ನು ಪ್ರವೇಶಿಸಿ ಸುಮಾರು 62 ವರ್ಷಗಳ ಕಾಲ ವಿಭಿನ್ನ ಪಾತ್ರಗಳಿಂದ ಭಾರತದ ಸಿನಿರಸಿಕರ ಮನಗೆದ್ದ ಪದ್ಮಭೂಷಣ ಕಮಲಹಾಸನ್ ಅಭಿನಯಸಿ ತನ್ನದೇ ನಿರ್ಮಾಣ ಸಂಸ್ಥೆ ರಾಜಕುಮಾರ್ ಮೂಲಕ ಹೊರತಂದ ವಿಕ್ರಮ ಚಿತ್ರ ಗಳಿಕೆಯಲ್ಲಿ 400 ಕೋಟಿಯನ್ನು ಮೀರಿದೆ.

ವಿಶ್ವರೂಪಂ 2 ಚಿತ್ರದ ವೈಫಲ್ಯ ಅರ್ಧಕ್ಕೆ ನಿಂತ ಮರುದನಾಯಗಂ ಇದೆಲ್ಲಕ್ಕೂ ಮಿಗಿಲಾಗಿ ರಾಜಕೀಯ ರಂಗ ಪ್ರವೇಶಿಸಿ ತನ್ನದೇ ಪಕ್ಷ ಸ್ಥಾಪಿಸಿ ಅತ್ಯಂತ ದೊಡ್ಡ ವೈಫಲ್ಯ ಅನುಭವಿಸಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಜೊತೆಗೆ ತಾವು ಕೊಯಮತ್ತೂರು ಕ್ಷೇತ್ರದಿಂದ ಸೋತು ನಿರಾಸೆ ಹೊಂದಿದ್ದ ಕಮಲ್ ಹಾಸನ್ ವಿಕ್ರಮ್ ಚಿತ್ರದ ಯಶಸ್ಸಿನ ನಂತರ ನಾನು ಇನ್ನೂ ಸಾಲಗಾರರ ಸಾಲ ತೀರಿಸಿ ನೆಮ್ಮದಿಯಿಂದ ಊಟ ಮಾಡುತ್ತೇನೆ ಎಂದಿದ್ದು ಅವರ ಅಭಿಮಾನಿಗಳಿಗೆ ಹಿಗ್ಗು ಮೂಡಿಸಿದೆ.

ಕೇವಲ ಎರಡು ಚಿತ್ರಗಳು ಹಿಟ್ಟಾದರೆ ತಮ್ಮ ಇಮೇಜಿಗೆ ಅಂಟಿಕೊಂಡು ಅದರಿಂದ ಆಚೆಬರದೆ ತಮ್ಮ ಅಭಿಮಾನಿಗಳಿಗಾಗಿ ನಟಿಸುವ ಇಂದಿನ ನಾಯಕನಟರ ನಡುವೆ ಸ್ಟಾರ್‍ಗಿರಿಗೆ ಆಸೆಪಡದೆ ಅಭಿನಯಕ್ಕೆ ಅವಕಾಶವಿರುವ ಮನುಷ್ಯನ ವಿವಿಧ ಮುಖಗಳನ್ನು ಅನಾವರಣಗೊಳಿಸುವ ವಿಭಿನ್ನ ಪಾತ್ರಗಳನ್ನು ಅರಸುತ್ತಾ ಆ ಪಾತ್ರಗಳನ್ನು ಅನುಭವಿಸಿ ಆ ಪಾತ್ರಗಳ ಮೂಲಕವೇ ಜನರಿಗೆ ಪರಿಚಯವಾಗುತ್ತಾ ಹೋದ ಕಮಲಹಾಸನ್ ಒಬ್ಬ ಮೇರು ನಟ.

ಈ ಕಾರಣಕ್ಕಾಗಿಯೇ ಕಮಲಹಾಸನ್ ಎಂದರೆ ನೆನಪಿಗೆ ಬರುವುದು ಮರೋಚರಿತ್ರದ ಭಗ್ನಪ್ರೇಮಿ ಬಾಲು, ಸ್ವಾತಿಮುತ್ತುವಿನ ಅಮಾಯಕ ಶಿವಯ್ಯ, ಸಾಗರಸಂಗಮಂನ ಭರತನಾಟ್ಯ ಕುಚಿಪುಡಿ, ಕಥಕ್‍ನ ನರ್ತಕ ಬಾಲಕೃಷ್ಣ, ಮೂನ್ರಂಪಿರೈಯ ದೈಹಿಕ ಶಿಕ್ಷಕ ಶ್ರೀನಿವಾಸ (ಶೀನಿ), ಅಪೂರ್ವಸಹೋದರರ್‍ನ ಕುಳ್ಳ, ಅವ್ವೈ ಷಣ್ಮುಖಿಯ ಘಾಟಿಮುದುಕಿ ಷಣ್ಮುಖಿ, ನಾಯಗನ್ ಚಿತ್ರದ ವೇಲು, ಅವಳ್ ಒರ್ ತೊಡರ್‍ಕಥೈಯ ಮೂರ್ಛೆರೋಗಿ ಪ್ರಸಾದ್, ಮನ್ಮಥಲೀಲೈನ ಸ್ತ್ರೀಲೋಲ ಮಧು, 16 ವಯದಿನಲೆಯ ಹಳ್ಳಿಯ ಮುಗ್ದ ಚಪ್ಪಾಣಿ, ಸೋಮುಕಡದಿ ಸೋಕುಕಡದಿಯ ನಕಲಿ ಡಾಕ್ಟರ್, ಕಲ್ಯಾಣರಾಮನ್‍ನ ಭೂತ ಮತ್ತು ಪುಷ್ಪಕವಿಮಾನದ ಹಾಗೂ ವರುಮಯಿನ್ ನೀರಂಸಿಗಪ್ಪುವಿನ ನಿರುದ್ಯೋಗಿ, ತಪ್ಪಿದ ತಾಳದ ಲಂಪಟ ದಶಾವತಾರಂನ ದಶಾವತಾರಿ, ವಿಶ್ವರೂಪಂನ ಭಯೋತ್ಪಾದಕ, ಅನ್ಬು ಶಿವಂನ ಕಾರ್ಮಿಕರ ನಾಯಕ, ತೆನಾಲಿಯ ಶ್ರೀಲಂಕಾ ತಮಿಳಿಗ, ಒರು ಖೈದಿಯನ್ ಡೈರಿಯ ಕೊಲೆಗಾರ. . . ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ವಿಶೇಷವೆಂದರೆ ಎಲ್ಲಾ ಚಿತ್ರಗಳಲ್ಲೂ ಹಾಸ್ಯ, ಶೃಂಗಾರ, ರೌದ್ರ, ಭೀಭತ್ಸ. ಹೀಗೆ ನವರಸಗಳನ್ನು ಜನರಿಗೆ ಉಣಬಡಿಸಿ ಆರರಿಂದ ಅರವತ್ತರವರೆಗಿನ ಅಬಾಲವೃದ್ಧರನ್ನು ರಂಜಿಸಿದ ನಟನೀತ.

ಬಾಲು ಮಹೇಂದ್ರ ನಿರ್ದೇಶಿಸಿದ ಮೊದಲ ಚಿತ್ರ ‘ಕೋಕಿಲ’ ನಾನು ನೋಡಿದ ಮೊದಲ ಕಮಲಹಾಸನ್ ಚಿತ್ರ.ನಾನು ಎಸೆಸೆಲ್ಸಿ ಪಾಸ್ ಮಾಡಿದಾಗ ಹಾಗೂ ನನ್ನಕ್ಕನ ಮದುವೆಯಾದ ಸಂದರ್ಭದಲ್ಲಿ ಮನೆಯವರ ಬೈಗುಳ ಗಳಿಲ್ಲದೆ ನೋಡಿದ ಚಿತ್ರವೆಂದು ಇಂದಿಗೂ ಆ ಕಪ್ಪು ಬಿಳುಪು ಚಿತ್ರ ನೆನಪಿದೆ.

ಕಮಲಹಾಸನ್ ಜೊತೆಗೆ ಬಾಲು ಮಹೇಂದ್ರ ಚಿತ್ರಗಳ ಮುಖ್ಯನಟಿ ಶೋಭ, ರೋಜಾರಮಣಿ ಸುತ್ತ ಸುತ್ತುವ ತ್ರಿಕೋನ ಪ್ರೇಮದ ಕಥೆಯಿದು. ಈ ಚಿತ್ರದ ಮೂಲಕ ಚಲನಚಿತ್ರದ ಪ್ರವೇಶಿಸಿ (ರಂಗ ನಿರ್ದೇಶಕ ಬಿ.ವಿ. ಕಾರಂತರ ಶಿಫಾರಸ್ಸಿನ ಮೇರೆಗೆ) ಮುಂದೆ ‘ಕೋಕಿಲ ಮೋಹನ್’ ಎಂದೇ ಖ್ಯಾತರಾಗಿ ಸುಮಾರು ಹತ್ತು ವರುಷಗಳಕಾಲ
ತಮಿಳು ಚಲನಚಿತ್ರರಂಗದಲ್ಲಿ ಯಶಸ್ವಿ ಮತ್ತು ಬೇಡಿಕೆನಟರಾದ ಕನ್ನಡನಟ ಮೋಹನ
ಈ ಚಿತ್ರದಿಂದ ಚಿತ್ರಜೀವನ ಪ್ರಾರಂಭಿಸಿದರು.

ವೃತ್ತಿಯ ಕಾರಣದಿಂದಾಗಿ ಸದಾ ಪ್ರವಾಸದಲ್ಲಿರುವ ತಂದೆ, ಪದೇ ಪದೆ ಖಾಯಿಲೆ ಬೀಳುವ ತಾಯಿ, ಮೆಡಿಕಲ್ ಓದುವ ಮಗಳು ಮತ್ತು ಕುಟುಂಬದ ಸದಸ್ಯಳೇ ಆಗಿಹೋಗಿರುವ ಕೆಲಸದಾಕೆಯ ಕುಟುಂಬವು ಆಪತ್ಕಾಲಕ್ಕೆ ಇರಲಿ
ಎಂದು ಪೇಯಿಂಗ್ ಗೆಸ್ಟ್‌ಗಾಗಿ ಅರಸುತ್ತಿರುವಾಗ ಬರುವ ನಾಯಕ ಬ್ಯಾಂಕ್ ಉದ್ಯೋಗಿ ವಿಜಯಕುಮಾರ್ (ಕಮಲಹಾಸನ್), ಕುಟುಂಬಕ್ಕೆ ಹತ್ತಿರವಾಗುತ್ತಾನೆ. ಮಗಳಿಗೆ ಆತ್ಮೀಯನಾಗುತ್ತಾನೆ. ಮುಂದೆ ಅನಿರೀಕ್ಷಿತ ಸಂದರ್ಭದಲ್ಲಿ ಕೆಲಸದಾಕೆಯೊಂದಿಗೆ ದೇಹ ಸಂಪರ್ಕ ಉಂಟಾಗಿ ಮನೆಯನ್ನು ತ್ಯಜಿಸುತ್ತಾನೆ. ಇದರ
ಅರಿವಿಲ್ಲದ ನಾಯಕಿ ನಾಯಕನನ್ನು ಅರಸುತ್ತಾ ಹೋಗುತ್ತಾಳೆ. ನಾಯಕ ಸಿಗುವನೇ? ಸಿಕ್ಕರೂ ಯಾವ ಸ್ಥಿತಿಯಲ್ಲಿ? ಎಂಬುದು ಚಿತ್ರದ ಕ್ಲೈಮ್ಯಾಕ್ಸ್ .ಚಿತ್ರ ಬಿಡುಗಡೆಯಾಗಿ 45 ವರ್ಷ ಕಳೆದರೂ ಕಾಡುವ ಚಿತ್ರವಾಗಿ ಉಳಿದಿದೆ.

ತಮಾಷೆಪ್ರಾರಂಭ, ಕುತೂಹಲದ ಮಧ್ಯಂತರ ಮತ್ತು ವಿಷಾದದ ಅಂತ್ಯ ಬಾಲುಮಹೇಂದ್ರರಿಂದ ಹಿಡಿದು ಮಣಿರತ್ನಂ, ಬಾಲಚಂದರ್‌ರಂಥ ನಿರ್ದೇಶಕರ ಚಿತ್ರಗಳ ಸಾಮಾನ್ಯ ಅಂಶ ಈ ಚಿತ್ರದಲ್ಲಿ ಇದೆ, ಈಸ್ಟ್ ಮನ್ ಕಲರ್ ಚಿತ್ರಗಳು ಜನಪ್ರಿಯವಾಗುತ್ತಿದ್ದ ಸಂದರ್ಭದಲ್ಲಿ ಕಪ್ಪು-ಬಿಳುಪು ನಲ್ಲಿ ನಿರ್ಮಾಣಗೊಂಡ ಚಿತ್ರ 1977ರಲ್ಲಿ ಬಿಡುಗಡೆಯಾಗಿ ಅವತ್ತಿನ ಮದ್ರಾಸ್‌ (ಇಂದಿನ ಚೆನ್ನೈ) ನಲ್ಲಿ 150 ದಿನಗಳ ಕಾಲ ಪ್ರದರ್ಶಿತವಾಗಿ
ಅತಿ ಹೆಚ್ಚು ದಿನ ಪ್ರದರ್ಶನಗೊಂಡ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಬಾಲುಮಹೇಂದ್ರರಿಗೆ ಅಪಾರ ಕೀರ್ತಿ ತಂದುಕೊಟ್ಟ ಚಿತ್ರ ಮೂನ್ರಾಂ ಪಿರೈ (ಬಿದಿಗೆ ಚಂದ್ರ). ಅದುವರೆಗಿನ ಅವರ ಎಲ್ಲಾ ಚಿತ್ರಗಳ ನಾಯಕಿ, 24
ವರ್ಷಕ್ಕೆ ಅನಿರೀಕ್ಷಿತ ಸಾವಿಗೀಡಾದ ನಟಿ ಶೋಭಾಳ ನೆನಪಿನಿಂದ ಹೊರಬರಲಾರದೆ ನಿರ್ಮಿಸಿದ ಚಿತ್ರವದು.ಭಾರತೀಯ ಚಿತ್ರರಂಗಕಂಡ ಅತ್ಯುತ್ತಮ ಚಿತ್ರಗಳಲ್ಲೊಂದು ಎಂಬ ಪ್ರಶಂಸೆಗೂ ಪಾತ್ರವಾದದ್ದಲ್ಲದೆ ಕಮಲಹಾಸನ್‌ರವರಿಗೆ ಅತ್ಯುತ್ತಮ ನಟ ಮತ್ತು ಬಾಲು ಮಹೇಂದ್ರರಿಗೆ ‘ಅತ್ಯುತ್ತಮ ಛಾಯಗ್ರಾಯಕ’ ರೆಂಬ ರಾಷ್ಟ್ರೀಯ ಪ್ರಶಸ್ತಿ ತಂದುಕೊಡುವುದರ ಜೊತೆಗೆ ಕಮರ್ಷಿಯಲ್ ಆಗಿ ಸೂಪರ್ ಹಿಟ್ ಆಗ
ಚಿತ್ರವೂ ಹೌದು.ಕಮಲಹಾಸನ್ ಶ್ರೀದೇವಿ ಪೈಪೋಟಿಯಲ್ಲಿ ಇರುವಂತೆ ನಟಿಸಿರುವ ಇದೇ ಚಿತ್ರ ಮುಂದೆ ಹಿಂದಿಯಲ್ಲಿ ಸದ್ಮ ಚಿತ್ರವಾಗಿ ಜನಪ್ರಿಯತೆ ಸಾಧಿಸಿತು .

ಈ ಚಿತ್ರದ ವೈಶಿಷ್ಟ್ಯವೆಂದರೆ ಚಿತ್ರದಲ್ಲಿ ಯಾವುದೇ ಕಮರ್ಶಿಯಲ್ ಎಲಿಮೆಂಟ್ ಇಲ್ಲದಿರುವುದು. ‘ಹ್ಯಾಪಿ ಗೋ ಲಕ್ಕಿ ಸ್ವಭಾವದ ನಾಯಕಿಗೆ (ಶ್ರೀದೇವಿ) ಅಪಘಾತಕ್ಕೀಡಾಗಿ ಪ್ರಜ್ಞೆ ಕಳೆದುಕೊಳ್ಳುವುದರ ಜೊತೆಗೆ ಹಳೆಯ
ನೆನಪುಗಳು ಮಾಸಿ ಆಸ್ಪತ್ರೆಗೆ ಸೇರುತ್ತಾಳೆ. ಅಲ್ಲಿಂದ ಅಪಹರಣಕ್ಕೊಳಗಾಗಿ ವೇಶ್ಯಾವಾಟಿಕೆ ಸೇರುತ್ತಾಳೆ. ಅದೇ ಸಂದರ್ಭದಲ್ಲಿ ಕುತೂಹಲ ಮತ್ತು ಸ್ನೇಹಿತನ ಪ್ರಲೋಭನೆಗೆ ಒಳಗಾಗಿ ದೈಹಿಕ ಶಿಕ್ಷಕ ಶ್ರೀನಿವಾಸ್ (ಕಮಲಹಾಸನ್) ಅದೇ ವೇಶ್ಯಾಮಂದಿರಕ್ಕೆ ಬಂದು ನಾಯಕಿಯ ಬಗ್ಗೆ ಅನುಕಂಪ ಮೂಡಿ ಅಪಾರ ಹಣ ನೀಡಿ ಅವಳನ್ನು
ಕೊಂಡು ಮನೆಗೆ ಕರೆತರುತ್ತಾನೆ.

ಮಗುವಿನಂತೆ ವರ್ತಿಸುವ ನಾಯಕಿಯನ್ನು ತಾಯಿಯಂತೆ ಪೊರೆವ ನಾಯಕ, ಆಕೆಯನ್ನು ಸಂತೋಷದಲ್ಲಿಡಲು ಮಾಡುವ ಮಂಗನಾಟಗಳು, ನೆರೆಹೊರೆಯವರು ನೀಡುವ ಸಹಕಾರ, ದೈನಂದಿನ ಜೀವನದಲ್ಲಿ ಆಕೆಯ ಮುಗ್ಧತೆಯಿಂದುಂಟಾಗುವ ತೊಂದರೆಗಳು, ಅವುಗಳನ್ನು ನಿರ್ವಹಿಸುವ ರೀತಿ ಒತ್ತಡ, ನೋವು-ನಲಿವುಗಳ
ಸಂಗಮದ ಪ್ರತೀಕದಂತಿದ್ದು ವೀಕ್ಷಕನ ನೆನಪಿನಲ್ಲಿ ಬಹುಕಾಲ ಉಳಿಯುತ್ತದೆ. ಆಕೆಯ ಚಿಕಿತ್ಸೆಗಾಗಿ
ಆಯುರ್ ವೇದ ಪಂಡಿತನ ಬಳಿ ಸೇರಿಸಿದ ಸಂದರ್ಭದಲ್ಲಿಯೇ ಆಕೆಯ ಮಾಹಿತಿ ಪಡೆದ ತಂದೆ-ತಾಯಿ ಪೋಲಿಸರ ಜೊತೆಗೆ ಹುಡುಕಿಕೊಂಡು ಬರುತ್ತಾರೆ.

ಹುಡುಗಿಯ ಅಪಹರಣದ ಹಿನ್ನೆಲೆಯಲ್ಲಿ ಪೋಲಿಸರಿಗೆ ಹೆದರಿದ ನಾಯಕ ಮರೆಯಾಗುತ್ತಾನೆ. ಇತ್ತ ನಾಯಕಿ ತಂದೆ ತಾಯಿಯನ್ನು ಗುರುತಿಸಿ ಅವರೊಡನೆ ಹೊರಟು ಊರಿಗೆ ಹೋಗಲು ರೈಲ್ವೆಸ್ಟೇಷನ್ ತಲುಪುತ್ತಾಳೆ. ಅವಳ ಕಾರಿನ ಹಿಂದೆಯೇ ಏಳುತ್ತಾ ಬೀಳುತ್ತಾ ಬರುವ ನಾಯಕನು ರೈಲ್ವೆ ಸ್ಟೇಷನ್ ತಲುಪುತ್ತಾನೆ. ಅಲ್ಲಿನ ಕ್ರೈಮಾಕ್ಸ್, ನಾಯಕಿ ತನ್ನನ್ನು ಗುರುತಿಸಲಿ ಎಂದು ಹಿಂದೆ ಮಾಡಿದ್ದ ಮಂಗನಾಟ ವನ್ನು ಮತ್ತೆ ಆಡುವ ನಾಯಕನ ದೃಶ್ಯ ಚಿತ್ರವನ್ನು ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವನ್ನಾಗಿಸಿದೆ.

ತೆಲುಗಿನಲ್ಲಿ ‘ಮರೋಚರಿತ್ರ’ ಮುಂದೆ ಹಿಂದಿಯಲ್ಲಿ ಅಪಾರ ಯಶಸ್ಸು ಸಾಧಿಸಿದ ಏಕ ದುಜೆ ಕೆ ಲಿಯೆ’, ‘ರೋಮಿಯೋ ಜೂಲಿಯಟ್’ನಂತೆ ಸಿನಿಮಾದಲ್ಲಿ ಅರಳಿದ ಪ್ರೇಮಕಾವ್ಯ.ಭಾಷೆ, ಆಚಾರ, ವಿಚಾರಗಳಲ್ಲಿ ಬೇರೆ ಬೇರೆಯಾದ ಅಕ್ಕಪಕ್ಕದ ಕುಟುಂಬಗಳು, ಅವರ ಮಕ್ಕಳಲ್ಲಿ ಅರಳುವ ಪ್ರೇಮ ಪೋಷಕರ ವಿರೋಧದಿಂದಾಗಿ
ಒಂದುವರ್ಷಗಳ ಕಾಲ ಬೇರ್ಪಡುವ ಒಳಗಾಗಿ ದೂರ ಸರಿಯುವ ಪ್ರೇಮಿಗಳು ಕೊನೆಯಲ್ಲಿನ ಅವರ ದುರಂತ ಅಂತ್ಯ ಆ ಕಾಲದಲ್ಲಿ ಭಾರತೀಯ ಚಲನಚಿತ್ರರಂಗಕ್ಕೆ ಹೊಸಭಾಷ್ಯ ಬರೆದ ಚಿತ್ರವೂ ಹೌದು. ಈ ಚಿತ್ರದಿಂದಾಗಿ ಬಾಲು – ಸ್ವಪ್ನ ಪಾತ್ರಗಳು ಅಮರ ಪ್ರೇಮಿಗಳ ಸಾಲಿಗೆ ಸೇರಿದವು.ಈ ಚಿತ್ರವು ಕೂಡ ಹಿಂದಿಯಲ್ಲಿ ಏಕ್ ದಿಜೆ ಕೆ ಲಿಯೇ ಚಿತ್ರವಾಗಿ ಜನಪ್ರಿಯತೆ ಸಾಧಿಸಿತು.

ತೆಲುಗಿನಲ್ಲಿ ನಿರ್ಮಾಣಗೊಂಡ ಮತ್ತೆರಡು ಚಿತ್ರಗಳು ಸಾಗರಸಂಗಮಂ, ಮತ್ತು ಸ್ವಾತಿ ಮುತ್ಯಂ. ಸಾಗರಸಂಗಮಂ ಸಮಾರಂಭಗಳಲ್ಲಿ ತರಕಾರಿ ಹೆಚ್ಚುವವಳ ಮಗನ ನೃತ್ಯ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಶ್ರೀಮಂತ ತರುಣಿ ದೊಡ್ಡ ಅವಕಾಶವನ್ನು ದೊರಕಿಸಿಕೊಟ್ಟರು ವಿಧಿಯಾಟದ ಬಲೆಯಲ್ಲಿ ಸಿಲುಕಿ ಬಳಸಿಕೊಳ್ಳಲಾಗದ
ಭರತನಾಟ್ಯ ಕಲಾವಿದನ ಚಿತ್ರವಾದರೆ, ಸ್ವಾತಿ ಮುತ್ಯಂ ಅಮಾಯಕನ ಜೀವನದಲ್ಲಿನ ಏರುಪೇರುಗಳ ಸುತ್ತ ಹೆಣೆದ ಚಿತ್ರ. ಈ ಕಥೆಗಳು ನಿಜ ಪ್ರೇಮದ ಹಿನ್ನೆಲೆಯನ್ನು ಹೊಂದಿರುವುದರಿಂದ ಬಹಳಷ್ಟು ಸನ್ನಿವೇಶಗಳು ಹೃದಯಸ್ಪರ್ಶಿಯಾಗಿರುವ ಜೊತೆಗೆ ಕಾಡುವ ಹಾಡು ಗಳಿಂದಾಗಿ ಇಂದಿಗೂ ಅಂದಿನ ಜನಪ್ರಿಯತೆಯನ್ನು ಉಳಿಸಿಕೊಂಡಿವೆ .

ಕನ್ನಡದಲ್ಲಿ 1977ರಲ್ಲಿ ‘ಕೋಕಿಲ’ ಚಿತ್ರದಲ್ಲಿ ನಟಿಸಿದ ಕಮಲಹಾಸನ್ ನಂತರ ಮರಿಯಾ ಮೈಡಾರ್ಲಿಂಗ್, ಬೆಂಕಿಯಲ್ಲಿ ಅರಳಿದ ಹೂವು (ಬಸ್‍ಕಂಡಕ್ಟರ್ ಪಾತ್ರದಲ್ಲಿ) ನಟಿಸಿದ್ದಾರೆ. ಇತ್ತೀಚಿನ ವರ್ಷದಲ್ಲಿ ರಮೇಶ್ ನಟಿಸಿ ನಿರ್ದೇಶಿಸಿದ ರಾಮಾ ಶಾಮ ಭಾಮ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದಲ್ಲದೆ ತಮ್ಮದೆ ದನಿ ನೀಡಿದ್ದಾರೆ. ವಿಶೇಷವೆಂದರೆ ಬಹುತೇಕ ನಮ್ಮ ಕನ್ನಡ ನಾಯಕನಟರೆ ಉತ್ತರಕರ್ನಾಟಕದ ಜವಾರಿ ಭಾಷೆಯನ್ನು ಮಾತಾಡಲು ಹಿಂದೆಮುಂದೆ ನೋಡುತ್ತಿರುವಾಗ ಆ ಭಾಷೆಯನ್ನು ಕಲಿತು ಚಿತ್ರದಲ್ಲಿ ಇದೇ ತಮ್ಮ ಮಾತೃಭಾಷೆಯಂತೆ ಮಾತಾಡಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಆ ಚಿತ್ರದ ಮುಂದಾ. . ಮುಂದಾ. . ಎಂಬ ಪದಗಳು ಈಗಲೂ ಕೇಳಿದರೂ ನಗೆಉಕ್ಕಿಸುತ್ತವೆ.

ಒಬ್ಬ ಶ್ರೇಷ್ಠ ಕಲಾವಿದನನ್ನು ರೂಪಿಸಲು ಕಾಲ, ಪ್ರದೇಶ, ಪರಿಸರ, ಸನ್ನಿವೇಶ ಪೂರಕವಾಗಿ ವರ್ತಿಸುತ್ತದೆ ಎಂಬುದು ಕಮಲಹಾಸನ್‍ರವರ ಉದಾಹರಣೆಯಲ್ಲಂತೂ ಸತ್ಯವಾಗಿದೆ. ಎಪ್ಪತ್ತು-ಎಂಭತ್ತರ ದಶಕದ ಶ್ರೇಷ್ಠ ನಿರ್ದೇಶಕರಾದ ಕೆ. ಬಾಲಚಂದರ್, ಭಾಗ್ಯರಾಜ್, ಮಣಿರತ್ನಂ, ಸಿಂಗಿತಂ ಶ್ರೀನಿವಾಸರಾವ್, ಕೆ.ವಿಶ್ವನಾಥ್, ಭಾರತಿರಾಜ, ಬಾಲುಮಹೇಂದ್ರರಂಥ ನಿರ್ದೇಶಕರು ತಮ್ಮ ನಿರ್ದೇಶನದ ಶೃಂಗದಲ್ಲಿದ್ದಾಗ ಅವರೊಡನೆ ನಟಿಸುವ ಅವಕಾಶ ದೊರತದ್ದು, ಕಮಲ್‍ರ ಅಭಿನಯಸಾಮಥ್ರ್ಯವನ್ನು ಒರೆಗೆ ಹಚ್ಚಲು ಸಹಾಯಕವಾಯಿತು.

ಬಾಲಚಂದರ್ ಅವರ ‘ಗಾಡ್‍ಫಾದರ್’ ಆಗಿ ಬಹುತೇಕ ಅವರ ಚಿತ್ರಗಳಲ್ಲಿ ಅವಕಾಶ ನೀಡಿದರು. ಹೀಗಾಗಿಯೆ ಕಮಲ್ ತಮ್ಮ ಸಂದರ್ಶನದಲ್ಲಿ ಬಾಲಚಂದರ್ ನನ್ನನ್ನು ಕಂಡುಹಿಡಿಯಲಿಲ್ (Discoveredt) ಬದಲಾಗಿ ಶೋಧಿಸಿದರು (Invented) ಎಂದಿದ್ದಾರೆ. ಮೇರುನಟ ಸೂಪರ್‍ಸ್ಟಾರ್ ರಜಿನಿಕಾಂತ್, ಹಾಗೂ ಕಮಲಹಾಸನ್ ಬಾಲಚಂದರ್ ಗರಡಿಯಿಂದ ಮೂಡಿದ ನಟರಾದರೂ ರಜನಿಕಾಂತ ಮಾಸ್ ಹೀರೋ ವಾದರೆ ಕಮಲಹಾಸನ್ ಕ್ಲಾಸ್ ಹೀರೊ ಹಾಗೆ ಉಳಿದರು.

ನಟನಾಗಿ ಅಷ್ಟೆ ಅಲ್ಲದೆ ಕಥೆಗಾರನಾಗಿ (ರಾಜಪಾರ್ವೈ, ಅಪೂರ್ವ ಸಹೋದರರ್ಗಳ್, ಮೈಕಲ್ ಮದನರಾಮರಾಜನ್, ದೇವರ್‍ಮಗನ್, ಮಹಾನದಿ, ದಶಾವತಾರಮ್, ವಿಶ್ವರೂಪಂ ಚಿತ್ರಗಳಿಗೆ ಇವರದೆ ಕಥೆ) ನಿರ್ದೇಶಕನಾಗಿ ಹೇರಾಮ್, ಚಾಚಿ420, ವಿಶ್ವರೂಪಂ ಚಿತ್ರಗಳನ್ನು ನಿರ್ದೇಶಿಸಿದಲ್ಲದೆ ತಮ್ಮ ರಾಜಕಮಲ್ ಎಂಟರ್‍ಪ್ರೈಸಸ್‍ನ ಮೂಲಕ ನಿರ್ಮಾಪಕನಾಗಿ, ನೃತ್ಯರ್ದೇಶಕನಾಗಿ, ಚಿತ್ರಗೀತೆಗಳಿಗೆ ಸಾಹಿತ್ಯ ನೀಡುವುದರ ಮೂಲಕ ಅವರ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಅನೇಕ ಏರು-ಪೇರುಗಳನ್ನು ಕಮಲ್ ಕಂಡಿದ್ದಾರೆ. ವಾಣಿಗಣಪತಿ ಹಾಗೂ ಸಾರಿಕರೊಂದಿಗಿನ ಅವರ ದಾಂಪತ್ಯ ಸಂಬಂಧ ಮುರಿದುಬಿದ್ದು, ಚಿತ್ರನಟಿ ಗೌತಮಿಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಕೆಲವರ್ಷ ಇದ್ದರು. ಈಗ ಅದು ಮುರಿದು ಬಿದ್ದಿದೆ. ಅವರ ಇಬ್ಬರು ಹೆಣ್ಣುಮಕ್ಕಳು ಶೃತಿಹಾಸನ್ ಚಿತ್ರನಟಿಯಾಗಿದ್ದರೆ ಅಕ್ಷರ ಹಾಸನ್ ಸಹನಿರ್ದೇಶಕಿಯಾಗಿ ನಟಿಯಾಗಿ ಚಲನಚಿತ್ರರಂಗದಲ್ಲಿದ್ದಾರೆ. ಇನ್ನು ಬಹುಭಾಷಾ ನಟಿ ಸುಹಾ ಸಿನಿ ಅಣ್ಣನ ಮಗಳು .ಅವರ ಸಹೋದರ ಚಾರುಹಾಸನ್ ನಟರಾಗಿದ್ದು ಕನ್ನಡದ ‘ತಬರನಕಥೆ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.

ತಮ್ಮ ಅಭಿನಯಕ್ಕಾಗಿ ಮೂರು ಬಾರಿ ರಾಷ್ಟ್ರಪ್ರಶಸ್ತಿಯನ್ನು ಲೆಕ್ಕವಿಲ್ಲದಷ್ಟ್ರು ಇತರೆ ಪ್ರಶಸ್ತಿಗಳನ್ನು ಭಾರತ ಸರ್ಕಾರದಿಂದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದ ಕಮಲಹಾಸನ್ ಚಿತ್ರ ಜೀವನ ಹಾಗೂ ವೈಯಕ್ತಿಕ ಜೀವನದಿಂದಾಗಿ ಸದಾ ಸುದ್ದಿಯಲ್ಲಿರುವವರು . ಅವರು ಇನ್ನೂರಕ್ಕೂ ಚಿತ್ರಗಳಲ್ಲಿ ಕನಿಷ್ಟ ಇಪ್ಪತ್ತು ಚಿತ್ರಗಳನ್ನಾದರೂ ಬೇರೆ ಬೇರೆ ಕಾರಣಕ್ಕೆ ಅತ್ಯುತ್ತಮ ಚಿತ್ರಗಳಾಗಿ IMDB ರೇಟಿಂಗ್ ನಲ್ಲಿ ಸೇರ್ಪಡೆಗೊಂಡಿರುವುದು ಅವರ ಕಲಾಪ್ರತಿಭೆಗೆ ಹಿಡಿದ ಕನ್ನಡಿ.ತೆಲುಗು, ಕನ್ನಡ, ಹಿಂದಿ, ಮಲೆಯಾಳಂ ಬಂಗಾಳಿ, ಹೀಗೆ ಭಾರತೀಯ ಭಾಷೆಗಳಲ್ಲಿ ತಮ್ಮ ಸಹಜ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಅವರು ಪಡೆದುಕೊಂಡಿರುವುದು ಕಲಾವಿದನಿಗೆ ದೇಶ, ಭಾಷೆಯ ಹಂಗಿಲ್ಲವೆಂಬುದನ್ನು ಮತ್ತೆ ರುಜುವಾತುಪಡಿಸಿದೆ.

‍ಲೇಖಕರು Admin

June 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: