ವಿಜಯಶ್ರೀ ಹಾಲಾಡಿ
ಗಾಢನಿದ್ದೆಯಲ್ಲಿದ್ದ ನಮ್ಮ ಬೆಕ್ಕು
ಅದುರಿ ಬೀಳುವುದನ್ನು ನೋಡಿದೆ
ನಾಯಿಯೂ ಹೀಗೆ ಸಣ್ಣಗೆ ಶಬ್ದ
-ಮಾಡುತ್ತ ಕನಸಿನ ಉದ್ವೇಗ
ಅನುಭವಿಸಿದ್ದನ್ನು ಕಂಡಿರುವೆ
ನೀವೂ ಎಷ್ಟೋ ಸಲ ನಿದ್ದೆಯಲ್ಲಿ
ಬಹು ಎತ್ತರದಿಂದ ಧಡಾರನೆ
ಪ್ರಪಾತಕ್ಕೆ ಬಿದ್ದು ಅರೆ ಎಚ್ಚರದಲ್ಲಿ
ಮಂಚವನ್ನು ಭದ್ರ ಹಿಡಿದಿರಬಹುದು
ನಿಜವೆಂದರೆ ಈ ಬೆಚ್ಚಿಬೀಳುವಿಕೆಗಾಗಿ
ನಾನು ಸದಾ ಕಾಯುತ್ತೇನೆ!
ಪ್ರತಿ ಇರುಳೂ ಸಜ್ಜಾಗಿ ಮಲಗುತ್ತೇನೆ
ಆಳ ನಿದ್ದೆಗೆ ಕನಸುಗಳಿಗೆ ಪ್ರಯಾಣಕ್ಕೆ
ಬೆರಗು ಸಾಹಸ ಸಂತಸದ
ತರಹೇವಾರಿ ಜಲಪಾತಗಳಲ್ಲಿ
ಮಿಂದು ಬೆಳದಿಂಗಳಲ್ಲಿ ವಿಹರಿಸಿ
ಹಿತವಾಗಿ ಅದುರಿಬಿದ್ದು ಹಗುರಾಗುವುದಕ್ಕೆ……
ಬೆಳಗ್ಗೆದ್ದರೆ ಹೊಸಹುಟ್ಟು
ನಿದ್ದೆ ಹಡೆದ ಹಸುಗೂಸು!
0 ಪ್ರತಿಕ್ರಿಯೆಗಳು