ಮಾನವತೆಯನ್ನು ಮೆರೆಸೋಣ ; ಕೋಮುದ್ವೇಷ ವನ್ನು ಹಿಮ್ಮೆಟ್ಟಿಸೋಣ….

ಮ ಶ್ರೀ ಮುರಳಿ ಕೃಷ್ಣ

ನಮ್ಮ ದೇಶ 1947ರಲ್ಲಿ ಇಭ್ಭಾಗವಾದಾಗ, ಕೋಮು ಹಿಂಸೆಗೆ ಅಪಾರ ಸಂಖೈಯ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆಸ್ತಿಪಾಸ್ತಿ ಧ್ವಂಸವಾಯಿತು. ದೊಡ್ಡ ಸಂಖ್ಯೆಯ ಕುಟುಂಬಗಳು ಬೀದಿಪಾಲಾದವು. ಅದೆಷ್ಟು ಮಕ್ಕಳು ಅನಾಥರಾದರೋ? ನಿಖರವಾದ ಅಂಕಿ-ಸಂಖ್ಯೆ, ಇಂತಹ ಹೃದಯವಿದ್ರಾವಕ ಘಟನೆಗಳು ಹಲವು ದಿನಗಳ ಕಾಲ ಸಂಭವಿಸಿದಾಗ ಸಿಗುವುದೇ?

ಆ ಕಾಲಘಟ್ಟದಲ್ಲಿ ಜರುಗಿದ ಅಮಾನವೀಯ ಕೋಮುದಳ್ಳುರಿಯನ್ನು ಶಮನಗೊಳಿಸುವುದರಲ್ಲಿ ನಮ್ಮ ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರು ಕಾರ್ಯೋನ್ಮುಖರಾದರು. ಅಂದಿನ ಅನೇಕ ನಾಯಕರು ದೆಹಲಿಯಲ್ಲಿ ಜಮಾಯಿಸಿ ನಮಗೆ ದೊರಕಿದ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಿಸುವ ತಯಾರಿಯಲ್ಲಿದ್ದರೇ  ಗಾಂಧೀಜಿಯವರು ಪಶ್ಚಿಮ ಬಂಗಾಳದ ನೌಖಾಲಿಯಲ್ಲಿ ಕೋಮುಗಲಭೆಯನ್ನು ಕೊನೆಗಾಣಿಸಲು ಹೆಣಗುತ್ತಿದ್ದರು!
ನಾವು ವಿದೇಶಿ ದಾಸ್ಯವನ್ನು ಕಿತ್ತೊಗೆದ ಆರು ತಿಂಗಳೊಳಗೆ ಗಾಂಧೀಜಿಯವರನ್ನು ಹಿಂದೂ ಮತಾಂಧ ನಾಥೂರಾಮ ಘೋಡ್ಸೆ ನಿರ್ದಯವಾಗಿ ಹತ್ಯೆ ಮಾಡಿದ.

ಇಂತಹ ಅನಪೇಕ್ಷಿತ, ದಾರುಣ ಘಟನೆಗಳು ನಮ್ಮ ಸ್ವತಂತ್ರ ಭಾರತದ ಬಗೆಗೆ ಅನೇಕ ತೆರನಾದ ಕನಸುಗಳನ್ನು ಕಟ್ಟಿಕೊಂಡವರ ಜಂಘಾಬಲವೇ ಉಡುಗಿಸಿದವು ಎಂದರೆ ಅತಿಶಯೋಕ್ತಿಯಾಗಲಾರದು. ಅನೇಕ ವರ್ಷಗಳ ಕಾಲ ಈ ಹೇಯ ಕೃತ್ಯಗಳ ಗಾಯ ನಮ್ಮ ಜನತೆಯನ್ನು ಕಾಡುತ್ತಲೇ ಇತ್ತು. ಗಾಯ ಆರಿದ ಮೇಲೂ ಅದರ ಕಲೆಗಳು ಕಹಿ ನೆನಪುಗಳನ್ನು ಜಾಗೃತಗೊಳಿಸುತ್ತಿದ್ದವು.

ನಂತರದ ಕೆಲವು ವರ್ಷಗಳಲ್ಲಿ ಕೋಮುದಂಗೆಗಳು ಕಡಿಮೆಯಾದಂತೆ ಕಂಡರೂ, ಅವು ಗಾಬರಿ ಹುಟ್ಟಿಸುವಂತಹ ರೀತಿಯಲ್ಲಿ ತಲೆದೋರುತ್ತಿದ್ದವು. ಸ್ವಾತಂತ್ರೋತ್ತರ ಭಾರತದಲ್ಲಿ ರಾಂಚಿ-ಹತಿಯಾ, ಮೊರಾದಾಬಾದ್, ನೆಲ್ಲಿ, ಭಿವಾಂಡಿ, ಮೀರತ್, ಭಾಗಲ್ಪೂರ್, ಮುಝಫರ್ನಗರ್, ಆಗ್ರಾ, ಸುರತ್, ಮುಂಬೈ ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿ ಜರುಗಿದ ಕೋಮುಹಿಂಸೆಯಲ್ಲಿ ಅನೇಕ ಅಮಾಯಕ ಮಂದಿ ಮೃತರಾದರು. 1984 ಮತ್ತು 2002ರಲ್ಲಿ ಕ್ರಮವಾಗಿ ದೆಹಲಿಯಲ್ಲಿ ಮತ್ತು ಗುಜರಾತಿನಲ್ಲಿ ಕೋಮುವಾದದ ಕಾರಣದಿಂದ ಮಾರಣಹೋಮವೇ ನಡೆದುಹೋಯಿತು.

ಕಳೆದ ಮೂರ್ನಾಲ್ಕು ದಶಕಗಳಿಂದ ರಾಜಕೀಯ ಮತ್ತು ಮತ ಮೇಳೈಸಿ ನಮ್ಮ  ಸಮ್ಮಿಳಿತ ಸಂಸ್ಕೃತಿಗೆ ದೊಡ್ಡ ಧಕ್ಕೆಯಾಗಿದೆ. ಕೋಮು ಧ್ರುವೀಕರಣರಿಂದ ರಾಜಕೀಯ ಲಾಭವನ್ನು ಪಡೆದು ಅಧಿಕಾರದ ಗದ್ದುಗೆಯನ್ನು ಹೇಗಾದರೂ ಏರಬೇಕೆನ್ನುವ ಹಪಾಹಪಿ ನಮ್ಮ ಸುಂದರ ಶಾಂತಿಯ ತೋಟಕ್ಕೆ ಅಗ್ನಿಸ್ಪರ್ಶವಾಗಿ ಪರಿಣಮಿಸಿದೆ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಬೆನ್ನೆಲುಬಾಗಿರುವ ಬಹುತ್ವದ ಮೇಲೆ ನಾನಾ ಬಗೆಯ ಆಕ್ರಮಣಗಳು ಅವ್ಯಾಹತವಾಗಿ ಜರುಗುತ್ತಿವೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳೂ ಹೆಚ್ಚಾಗುತ್ತಿವೆ. ಆಳುತ್ತಿರುವ ಸರ್ಕಾರದ ಟೀಕಾಕಾರರನ್ನು  ರಾಷ್ಟ್ರದ್ವೇಷಿಗಳೆಂದು ನವನವೀನ ರೀತಿಗಳಲ್ಲಿ ಜರೆಯಲಾಗುತ್ತಿದೆ.

ಮತನಿರಪೇಕ್ಷತಾವಾದ (ಸೆಕ್ಯುಲರ್ವಾದ) ಎತ್ತಿ ಹಿಡಿಯುವವರನ್ನು ಹೀಯಾಳಿಸಲಾಗುತ್ತಿದೆ.  ಕೋಮುವಾದಿ ವಿಷವನ್ನು ಪಸರಿಸುವ ಭಾಷಣಗಳಿಗೆ, ಸಮಾಜ- ವಿಚ್ಛಿದ್ರಕಾರಿ ಹೇಳಿಕೆಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕುಮ್ಮಕ್ಕನ್ನು ನೀಡಲಾಗುತ್ತಿದೆ. ಗುಂಪು ಹಿಂಸೆ (ಲಿಂಚಿಂಗ್) ಗೂ ಕೆಲವರು ಬಲಿಯಾಗುತ್ತಿದ್ದಾರೆ. ಆಹಾರ ಹಕ್ಕುಗಳ ಮೇಲೆ ಪ್ರಹಾರಗಳಾಗುತ್ತಿವೆ.  ಮಾನವಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ಅನೇಕ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ಅಂಗಗಳಲ್ಲೂ ಕೋಮುವಾದ ದಾಂಗುಡಿಯಿಟ್ಟು, ನೆಲಸುತ್ತಿರುವುದು ತೀವ್ರ ಆತಂಕಕಾರಿ ವಿಷಯವಾಗಿದೆ. ಇತ್ತೀಚೆಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಮುಖ ಪಕ್ಷದ ಮಹಿಳಾ ವಕ್ತಾರರೊಬ್ಬರು ಅಲ್ಪಸಂಖ್ಯಾತರ ಪ್ರವಾದಿಯ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಮಧ್ಯಪ್ರಾಚ್ಯ ಮತ್ತು ಇತರ ಕೆಲವು ದೇಶಗಳಲ್ಲಿ ವ್ಯಾಪಕ ಖಂಡನೆಗೆ ಒಳಗಾಯಿತು. ರಾಜತಾಂತ್ರಿಕ ವಲಯದಲ್ಲಿ ಭಾರತ ತಲೆತಗ್ಗಿಸಬೇಕಾಯಿತು!

ಇಂದು ರಾಜಾಸ್ಥಾನದ ಉದಯಪುರದಲ್ಲಿ  ಕನ್ನಯ್ಹಲಾಲ್ ಎಂಬ ದರ್ಜಿಯನ್ನು ಅಲ್ಪಸಂಖ್ಯಾತ ಮತಕ್ಕೆ ಸೇರಿದ ಇಬ್ಬರು ಮತಾಂಧರು ಆತ, ಮೇಲೆ ಪ್ರಸ್ತಾಪಿಸಿರುವ ಆಡಳಿತ ಪಕ್ಷದ ವಕ್ತಾರೆಯ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿದ್ದಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಡೀ ಹೇಯ ಕೃತ್ಯವನ್ನು ವೀಡಿಯೊ ಮಾಡಿ ಪ್ರಸರಣವನ್ನು ಮಾಡಲಾಗಿದೆ. ಅಲ್ಲದೇ, ಈ ಇಬ್ಬರು ಕೊಲೆಗಾರರು ಪ್ರಧಾನಿಗೂ ಬೆದರಿಕೆಯನ್ನು ಒಡ್ಡಿದ್ದಾರೆ ಎನ್ನಲಾಗಿದೆ. ಈ  ದಾರುಣ ಘಟನೆ ಅತ್ಯಂತ ಖಂಡನೀಯ. ಈ ಹೇಯ ಅಪರಾಧವನ್ನು ಎಸಗಿದವರ ವಿರುದ್ಧ ತೀವ್ರ ಕ್ರಮವನ್ನು ಕೂಡಲೇ ಜಾರಿ ಮಾಡಬೇಕು. ಕಠಿಣ ಶಿಕ್ಷೆಯನ್ನು ನೀಡಬೇಕು.

ಬೆಂಕಿಯನ್ನು ಹಚ್ಚುವುದು ಸುಲಭ. ನಂದಿಸುವುದು ಕಷ್ಟ. ಆದುದರಿಂದ ಮಾನವತೆಯನ್ನು ಮೆರೆಸಿ, ಕೋಮುದ್ವೇಷವನ್ನು ಹಿಮ್ಮೆಟ್ಟಿಸುವುದು ವರ್ತಮಾನದ ತುರ್ತು. ಕೋಮು ಸಾಮರಸ್ಯದ  ನಡೆ ನಮ್ಮ ದೇಶದ ಒಟ್ಟಾರೆ ಹಿತಕ್ಕೆ ಶ್ರೇಯಸ್ಕರ.

‍ಲೇಖಕರು Admin

June 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮ ಶ್ರೀ ಮುರಳಿ ಕೃಷ್ಣ

    ಧನ್ಯವಾದ….ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: