ಜೈಪುರದ ಗುಲಾಬಿ ನಗರದಲ್ಲಿ…

ಚಂದ್ರ ಸೌಗಂಧಿಕ

ಬೆಂಗಳೂರಿನಿಂದ Go airವಿಮಾನದಲ್ಲಿ ಎರಡೂವರೆ ತಾಸು ಪಯಣಿಸಿ ನಾವು ರಾಜಸ್ಥಾನದ ರಾಜಧಾನಿ ಜೈಪುರವನ್ನು ತಲುಪಿದಾಗ ಮಧ್ಯಾಹ್ನ 12:30.

ಅಂದು ನಾವು ಪಯಣಿಸಿದ ವಿಮಾನದ ವಿಶೇಷತೆಯನ್ನು ಗಗನಸಖಿ ಎರಡೆರಡುಬಾರಿ ಪುನರುಚ್ಚರಿಸಿದಳು. ವಿಮಾನ ಮುನ್ನಡೆಸುವ ಪೈಲೆಟ್ ಮತ್ತು ವಿಮಾನದ ಎಲ್ಲ ಸಿಬ್ಬಂದಿ ವರ್ಗ ಮಹಿಳೆಯರ ತಂಡವೇ ಇಂದು ವಿಮಾನಯಾನವನ್ನ ನಿರ್ವಹಿಸುವುದಾಗಿ ಪ್ರಕಟಿಸಿದಳು. ನಿರ್ಗಮನ ದಲ್ಲಿ ನಾನು ಆ ತಂಡದ ಎಲ್ಲ ಹೆಣ್ಣುಮಕ್ಕಳಿಗೆ ಅಭಿಮಾನದಿಂದ ಕೃತಜ್ಞತೆ ಹೇಳಿದೆ.

ಜೈಪುರದಲ್ಲಿ ನಾವು ವಿಮಾನ ನಿಲ್ದಾಣದಿಂದ ಹೊರಬಂದಾಗ ಹೊರಗಿನ ತಾಪಮಾನ 32 ಡಿಗ್ರಿ ಸೆಂಟಿಗ್ರೇಡ್. ಸೂರ್ಯನು ಭೂಮಿಗೆ ಸಮೀಪ ಬಂದಿದ್ದಾನೆ ಎನ್ನಿಸುವಷ್ಟು ಬಿಸಿಲು. ಆದರೂ ಬೆವರು ಹರಿಯುತ್ತಿರಲಿಲ್ಲ. ಮೊದಲೇ ನಿರ್ಧರಿಸಿದಂತೆ ನಮ್ಮನ್ನು ಕರೆದೊಯ್ಯಲಿರುವ ಟ್ಯಾಕ್ಸಿ ಡ್ರೈವರ್ ‘ಧರ್ಮವೀರ್’ ಏರ್ ಪೋರ್ಟ್ ನ ಹೊರಗಡೆ ಕಾಯುತ್ತಿದ್ದರು.

ಧರ್ಮವೀರ್ ಜಯಪುರದ ವಿಶಾಲವಾದ ರಸ್ತೆಗಳು ಎತ್ತರವಾದ ರಾಜಧಾನಿಯ ನಸುಗುಲಾಬಿ ಬಣ್ಣದ ಬೃಹತ್ ಕಟ್ಟಡಗಳನ್ನು ತೋರಿಸುತ್ತಾ ಇದು ವಿಧಾನಸೌಧ, ಇದು ಮ್ಯೂಸಿಯಂ, ಇದು ಲೈಬ್ರರಿ ಇದು ಪಾರ್ಕ್,ಎಂದು ವಿವರಿಸುತ್ತಾ ಹೋದರು. ಬಹಳಷ್ಟು ಎತ್ತರವಾದ ಕಾಂಪೌಂಡ್ ಗಳನ್ನು ಹೊಂದಿಕೊಂಡಿರುವ ಮಾರ್ಬಲ್ ಕಟ್ಟಡಗಳು ನಸುಗುಲಾಬಿ ಬಣ್ಣದಿಂದ ಬಿಸಿಲಿನ ಪ್ರಖರತೆಗೆ ಹೊಳೆಯುತ್ತಿತ್ತು.

ರಸ್ತೆಯ ಇಕ್ಕೆಲಗಳಲ್ಲೂ ಕಹಿಬೇವಿನ ಗಿಡಗಳು ಸೊಂಪಾಗಿ ಬೆಳೆದಿದ್ದವು. ಕೆಲವೆಡೆ ಮುತ್ತುಗದ ಮರಗಳು ಚಪ್ಪರದಂತೆ ಚಿಗುರಿ ನಿಂತಿದ್ದವು. ಪ್ರಯಾಣದುದ್ದಕ್ಕೂ. ಕಾಂಪೌಂಡ್ ಗಳನ್ನು ಏರಿ ಬೆಳೆದುನಿಂತ ವಿವಿಧ ಬಣ್ಣದ ಬೊಗನ್ ವಿಲ್ಲಾ ಪ್ರವಾಸಿಗರನ್ನು ಸ್ವಾಗತಿಸಲು ಅರಳಿ ನಿಂತಂತೆ ಭಾಸವಾಯಿತು. ಅಲ್ಲೊಂದು ಇಲ್ಲೊಂದು ಕುದುರೆಗಾಡಿ, ಒಂಟೆಯ ಗಾಡಿಗಳು, ಸೈಕಲ್ ರಿಕ್ಷಾಗಳು, ಸಿಗ್ನಲ್ ಗಳಲ್ಲಿ ಕಾಣಸಿಕ್ಕವು. ವಾಹನದಟ್ಟಣೆ ಬೆಂಗಳೂರಿನಂತೆ ಯೇ ಜೋರಾಗಿತ್ತು.1876 ರಲ್ಲಿ ವಿಕ್ಟೋರಿಯಾ ರಾಣಿಯ ಗಂಡ “ಪ್ರಿನ್ಸ್ ಅಲ್ಬರ್ಟ್” ನ ಸ್ವಾಗತಕ್ಕಾಗಿ ಜೈಪುರ ನಗರವನ್ನೇ ಗುಲಾಬಿ ಬಣ್ಣದಲ್ಲಿ ಹೊಳೆಯುವಂತೆ ಮಾಡಲಾಯಿತಂತೆ. ಇಂದಿಗೂ ಜೈಪುರವನ್ನು ಜನರು “ಪಿಂಕ್ ಸಿಟಿ” ಎಂದೇ ಕರೆಯುತ್ತಾರೆ.

ಮೊದಲೇ ನಿಶ್ಚಯಿಸಿದ ಮನೆಯಲ್ಲಿ ನಮ್ಮ ಲಗೇಜ್ ಇರಿಸಿ ಕೈಕಾಲು ಮುಖ ತೊಳೆದು ಕೊಂಡಾಗ ಹಿತವೆನಿಸಿತು.
ನಂತರ ಟ್ಯಾಕ್ಸಿ ಊಟದ ಹೋಟೆಲ್ ನ ಕಡೆಗೆ ಚಲಿಸಿತು. “ರಾಯಲ್ ದರ್ಬಾರ್” ಎನ್ನುವ ಹೋಟೆಲ್ ನ ಎದುರುಗಡೆ ಕುಳ್ಳ ಮನುಷ್ಯನೊಬ್ಬ ರಾಜಸ್ಥಾನಿ ಟೋಪಿ ಹಾಕಿ ಎಲ್ಲರಿಗೂ ಕೈಮುಗಿದು ನಮಸ್ಕಾರ ಮಾಡುತ್ತಿದ್ದ. ಇನ್ನು ಒಳಗಡೆ ಹೋದರೆ ಎಲ್ಲರಿಗೂ ಟೋಪಿ ಹಾಕಿಯಾರೇ?ಎನ್ನುವ ಭಯದಿಂದ ಒಳಗಡೆ ಹೋದರೆ ವಿಶಾಲವಾದ ಹೋಟೆಲಿನ ಸಿದ್ಧಗೊಂಡ ಟೇಬಲ್ಲು ಗ್ರಾಹಕರಿಗಾಗಿ ಕಾಯುತ್ತಿತ್ತು. . ದರ್ಬಾರಿನ “ಮೆನು” ಕಾರ್ಡಿನಲ್ಲಿರುವ ಕೆಲವೊಂದು ಆಹಾರವನ್ನು ಆಯ್ದುಕೊಂಡು ಸವಿದು (Amber ) ಅಂಬೇರ್ ಕೋಟೆ ಅರಮನೆ ಗೆ ಪಯಣಿಸಿದೆವು.

ರಾಜ ಮಾನಸಿಂಗ ನಿರ್ಮಿಸಿದ ಅಂಬೇರ್ ಕೋಟೆಗೆ ನೂರಾರು ವರ್ಷಗಳ ವರ್ಷಗಳ ವಾಸ್ತವ್ಯದ ಇತಿಹಾಸವೇ ಇದೆ. ರಜಪೂತ ಮತ್ತು ಮೊಘಲ ಸಮ್ಮಿಶ್ರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಅರಮನೆ ಮಾರ್ಬಲ್ ಮತ್ತು ಕೆಂಪುಕಲ್ಲಿನಿಂದ ಸುಂದರವಾಗಿ ರೂಪುಗೊಂಡಿದೆ. ಅರಮನೆಯಲ್ಲಿ ರಾಜನ ಸಾರ್ವಜನಿಕ ದರ್ಬಾರ್ ಹಾಲ್, ಮತ್ತು ಖಾಸಗಿ ಅಂತಃಪುರ ಗಳನ್ನೊಳಗೊಂಡ ವಿಭಾಗಗಳು ಪ್ರತ್ಯೇಕವಾಗಿ ಸಾಂಪ್ರದಾಯಕವಾಗಿ ನಿರ್ಮಾಣಗೊಂಡಿರುವುದು ವಿಶೇಷವಾಗಿದೆ.

ಅರಮನೆಯಲ್ಲಿರುವ ಕನ್ನಡಿಯ ಗೋಡೆಗಳು “ಶೀಶ ” ಮಹಲ್ ಆಕರ್ಷಕವಾಗಿದೆ. ಬೆಲ್ಜಿಯಂ ನಿಂದ ಆಮದು ಮಾಡಿಕೊಂಡ ಕನ್ನಡಿ ಗಳಿಂದ ನಿರ್ಮಾಣಗೊಂಡ ಗೋಡೆಯ ಕುಸುರಿ ತುಂಬಾ ಸುಂದರ. ಮಹಾರಾಜನ ಕಾಲದಲ್ಲಿ ಅರಮನೆಯ ಹವಾ ನಿಯಂತ್ರಣವನ್ನು ಸರಿದೂಗಿಸಲು ಇಲ್ಲಿ ಹಣತೆಗಳನ್ನ ಇಡುತ್ತಿದ್ದರಂತೆ. ದೀಪದ ಬೆಳಕು ಕನ್ನಡಿಯಲ್ಲಿ ಪ್ರತಿಫಲನ ಗೊಂಡಾಗ ಒಂದುರೀತಿಯ ಬೆಚ್ಚಗಿನ ಹವಾ ನಿರ್ಮಾಣಗೊಂಡು ಅಂತಪುರವು ಹವಾ ನಿಯಂತ್ರಣಕ್ಕೆ ಒಳ ಪಡುತ್ತಿತ್ತು ಎನ್ನುವುದನ್ನು ಅರಮನೆಯಾ ಗೈಡ್ ಬಾಬುಜಿ ತಿಳಿಸಿದರು.

ಅರಮನೆಯ ಬಂದು ಭಾಗದಲ್ಲಿ ದೇವಿಯ ದೇವಾಲಯವಿದೆ. ಅಲ್ಲಿಯೇ ಒಂದು ಹವಳದ ಗಣೇಶನ ಮೂರ್ತಿ ವಿಶೇಷವಾಗಿದೆ. ಉತ್ತರ ಭಾರತದ ಅರಾವಳಿ ಪರ್ವತದ ಬಂಡೆಕಲ್ಲುಗಳ ಮೇಲೆ ನಿರ್ಮಾಣಗೊಂಡ ಈ ಕೋಟೆಯು ಒಂದು ಅದ್ಭುತವಾದ ವಾಸ್ತುವಿನ್ಯಾಸ. ಅರಮನೆಯ ಮೇಲ್ಗಡೆ ಅನೇಕ ಸಣ್ಣ ಸಣ್ಣ ಕೋಣೆಗಳಿದ್ದು ರಾಣಿಯರ ವಾಸಕ್ಕೆ ಯೋಗ್ಯವಾಗಿ ನಿರ್ಮಾಣಗೊಂಡಿದೆ.

ಆ ಕಾಲದಲ್ಲಿ ಅಲ್ಲಿಗೆ ಪುರುಷ ಪ್ರವೇಶ ನಿಷಿದ್ಧವಾಗಿತ್ತು ಮತ್ತು ಅವರು ಯಾರಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ,
ಮಹಾರಾಜ ಅರಮನೆಯ ದ್ವಾರದಲ್ಲಿ ಸಂಚರಿಸುವಾಗ ರಾಣಿಯರು ಉಪ್ಪರಿಗೆಯಿಂದ ಗುಲಾಬಿಯ ದಳಗಳನ್ನು ಎಸೆಯುತ್ತಿದ್ದರು. ಎಂದು ತಿಳಿಸಿದ. ಮೇಲಿನ ಹಜಾರ ಒಂದರಲ್ಲಿ “ಮಹಾರಾಣಿಯು ಮೊದಲ ಮಳೆ ಬಿದ್ದಾಗ ನೃತ್ಯ ಮಾಡುತ್ತಿದ್ದ ಸ್ಥಳ” ಎಂದು ಛಾವಣಿ ಇಲ್ಲದ ತೆರೆದ ಪಡಸಾಲೆ ಯೊಂದನ್ನು ತೋರಿಸಿದ. ಅಂತಪುರದ ಸುತ್ತ ನೀರು ಹರಿದು ಬರುವಂತೆ ಮತ್ತು ಅದರೊಂದಿಗೆ ಸುಗಂಧ ದ್ರವ್ಯವನ್ನು ಬೆರೆಸಿ ಅಂತಃಪುರವನ್ನು ಸುಗಂಧಮಯ ಗೊಳಿಸುತ್ತಿದ್ದ ಮಹಾರಾಜನ ಜಾಣ್ಮೆ ಮೆಚ್ಚುವಂತದ್ದು.

ಒಳಾಂಗಣದ ಉದ್ಯಾನ ದಂತೆಯೇ ವಿನ್ಯಾಸ ಮಾಡಿದ ಶ್ರೀಗಂಧದ ಬಾಗಿಲಲ್ಲಿ ದಂತದ ಕೆತ್ತನೆಯನ್ನು ಕಾಣಬಹುದು. ತನ್ನ ರಾಜ್ಯದ ಜನತೆಯ ಬಗ್ಗೆ ಕಾಳಜಿಯನ್ನು ಹೊಂದಿದ್ದ ರಾಜ ಕುಡಿಯುವ ನೀರಿಗಾಗಿ ಹೆಚ್ಚು ಆದ್ಯತೆಗಳನ್ನು ನೀಡುತ್ತಿದ್ದ ಎನ್ನುವುದನ್ನು ಅವರು ಹೇಳಲು ಮರೆಯಲಿಲ್ಲ.

ಅರಮನೆಯ ಇನ್ನೊಂದು ಭಾಗದಲ್ಲಿ ಒಂದು ಪುಟ್ಟ ಕೊಳವಿದೆ ಈಗಅದರ ಸುತ್ತ ಹೂವಿನ ಗಿಡಗಳಿವೆ
ಹಿಂದೆ ಮಹಾರಾಜ ಕಾಶ್ಮೀರ ಕಣಿವೆಯಿಂದ ಕೇಸರಿ ಹೂವಿನ ಗಡ್ಡೆಗಳನ್ನು ತಂದು ಕೃತಕ ಹವಾ ನಿರ್ಮಾಣ ಮಾಡಿ ಅಲ್ಲಿ ಕೇಸರಿ ಬೆಳೆದು ರಾಣಿಯರಿಗೆ ನೀಡುತ್ತಿದ್ದನಂತೆ. ಸೌಂದರ್ಯ ಆರಾಧಕ ಕಲೋಪಾಸಕ ಮಹಾರಾಜ. ನೋಡಿದಷ್ಟು ಕಣ್ಮನ ತಣಿಯುವಂತೆ ಕುಸುರಿ ಗಳನ್ನೊಳಗೊಂಡ ಕಿಟಕಿ ಬಾಗಿಲುಗಳ ವಿನ್ಯಾಸ ಅಪೂರ್ವವಾದದ್ದು. ಜೈಪುರದಿಂದ 11 ಕಿಲೋಮೀಟರ್ ದೂರದಲ್ಲಿರುವ ಅರಮನೆಯ ಸೌಂದರ್ಯವನ್ನು (maota lake) ಮಾ ಓತ
ಕೊಳವು ಇಮ್ಮಡಿಗೊಳಿಸಿದೆ ಎನ್ನಬಹುದು.

ಅರಮನೆಯ ಕೆಲವೊಂದು ಭಾಗಗಳು ಶಿಥಿಲಾವಸ್ಥೆಗೆ ತಲುಪಿದ್ದು ರಾಜಸ್ಥಾನ ಸರಕಾರಇದರ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿಲ್ಲ ಎನ್ನಬಹುದು. ಕಗ್ಗಲ್ಲು ಗಳಿಂದ ಆವೃತವಾದ ಅರಮನೆಯ ದಾರಿ ಮತ್ತು ಏರಿಳಿತಗಳ ಪರ್ವತಗಳಲ್ಲಿ ಅರಮನೆಯನ್ನು ನಿರ್ಮಿಸಿರುವ ರೀತಿ ಮಹಾರಾಜನ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ. ಬಾಲಿವುಡ್ ಸಿನೆಮಾ “ಜೋಧಾಅಕ್ಬರ್” ಪದ್ಮಾವತಿ” ಸೇರಿದಂತೆ ಹಲವಾರು ಸಿನೆಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ ಎಂದು ಬಾಬು ತಿಳಿಸಿದರು.

ಜೈಪುರದ ಈ ಸುಂದರವಾದ ಅರಮನೆಯ ಫೋಟೋಗಳನ್ನು ಶರಣ್ ಸೆರೆಹಿಡಿದಿದ್ದಾರೆ.

‍ಲೇಖಕರು Admin

June 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: