ವಿಷ್ಣು ಭಟ್ ಹೊಸ್ಮನೆ ಕಥೆ- ಸಂಭವ…

ವಿಷ್ಣು ಭಟ್ ಹೊಸ್ಮನೆ

ಬಿಟ್ಟ ಕಣ್ಣನ್ನು ಎವೆಯಿಕ್ಕದೆ ನೋಡಿದೆ. ನಾನು ನೋಡುತ್ತಿರುವ ವ್ಯಕ್ತಿ ಸುಕುಮಾರನೇ ಹೌದೋ? ಅಲ್ಲವೋ? ಎಂಬ ಪ್ರಶ್ನೆ ನನ್ನನ್ನು ಕಾಡಿತು. ಒಮ್ಮೆ ನಂಬದಾದೆ. ಆದರೆ ಥೇಟು ಅವನಂತೆಯೇ ಇದ್ದಾನೆ. ಮತ್ತೆಮತ್ತೆ ಅವನನ್ನೇ ಇಣುಕಿ ನೋಡಿದೆ. ಹೌದು, ಅವನು ನಾನು ಇಪ್ಪತ್ತು ವರುಷಗಳ ಹಿಂದೆ ನೋಡಿದ ಸುಕುಮಾರನೇ ಹೌದು. ಈಗ ವಯಸ್ಸು ಐವತ್ತಾಗಿರಬಹುದು. ಅದೇ ಎತ್ತರದ ಬಲಿಷ್ಠ ಜೀವ. ಆದರೆ ಆತ ಮುಂಚಿನಂತಿಲ್ಲ. ಜೀವ ಅದೇ, ಆದರೆ ಜೀವನ ಬದಲಾದಂತಿದೆ. ಜೀವನುತ್ಸಾಹ ತುಂಬಿದ ಮುಖ. ಆಗ ಇವನನ್ನು ನಮ್ಮೂರಿನವರೆಲ್ಲಾ ಹುಚ್ಚನೆಂದೇ ನಿರ್ಧರಿಸಿದ್ದರು. ಆತ ಇದ್ದುದೂ ಹಾಗೆಯೇ.

ಒಂದು ಬಟ್ಟೆಗಂಟು ಅವನ ಸಂಸಾರ, ಬಸ್‌ ಸ್ಟ್ಯಾಂಡ್ ಅವನ ಮನೆ. ಯಾರಿಗೂ ಏನನ್ನೂ ಮಾಡುವವನಲ್ಲ. ಊಟದ ಹೊತ್ತಿಗೆ ಯಾರದ್ದಾದರೂ ಮನೆಯ ಬಳಿ ಹೋಗಿ ನಿಲ್ಲುತ್ತಿದ್ದ. ಬಡಿಸಿದಷ್ಟನ್ನೂ ಬೇಕು-ಬೇಡ ಎನ್ನದೆ ಎಲ್ಲವನ್ನೂ ಒಟ್ಟಿಗೇ ಕಲಸಿಕೊಂಡು ಉಂಡು, ಎಲೆಯನ್ನು ಎಸೆದು, ನೆಲವರೆಸಿ ಹೊರಟು ಬಿಡುತ್ತಿದ್ದ. ನನಗೆ ಅವನನ್ನು ಮಾತನಾಡಿಸಬೇಕು ಎನ್ನಿಸುತ್ತಿತ್ತು. ಆದರೆ ಆತ ಹುಚ್ಚ ಎಂಬ ಭಯ. ಯಾಕೋ ಏನೋ ಅನುಕಂಪ. ನನ್ನ ಮನೆಯವರೂ ಅವನ ಬಳಿ ಏನನ್ನೂ ಕೇಳುತ್ತಿರಲಿಲ್ಲ.

‘ಸುಕುಮಾರ ಬಂದಿದ್ದಾನೆ, ಅವನಿಗೆ ಊಟ ಬಡಿಸಿ’ ಎಂದು ಹೆಂಗಸರಿಗೆ ಹೇಳಿ, ಬಾಳೆಲೆಯೊಂದನ್ನು ತಂದು ಕೊಟ್ಟರೆ ಗಂಡಸರ ಕೆಲಸ ಮುಗೀತು. ಹೆಂಗಸರೂ ಮಾತನಾಡಿಸದೇ ಬಡಿಸುತ್ತಿದ್ದರು. ಆ ಸುಕುಮಾರನೇ ಇವನಾ? ಎಂದು ಯೋಚಿಸುತ್ತಿದ್ದಾಗ ಮತ್ತೆ ಪರಮಾಶ್ಚರ್ಯ! ಸುಕುಮಾರನಿಗೆ ಮದುವೆಯೂ ಆಗಿದೆ. ಗಂಡ-ಹೆಂಡತಿ ಇಬ್ಬರೂ ಏನನ್ನೋ ಮಾತನಾಡಿಕೊಳ್ಳುತ್ತ ಮನೆಯ ಇದಿರು ನಿಂತಿದ್ದರು. ಒಮ್ಮೆ ಹೋಗಿ ಮಾತನಾಡಿಸಬೇಕೆಂದುಕೊಂಡು ಆ ಮನೆಯ ದಾರಿಯತ್ತ ತಿರುಗಿದೆ. ಅಷ್ಟು ಹೊತ್ತಿಗೆ ಆತ ಎತ್ತಲೋ ಹೊರಟುಹೋದ. ಅವನು ಸುಕುಮಾರನೇ ಹೌದೋ, ಅಲ್ಲವೋ? ಎಂಬುದನ್ನು ಇವತ್ತು ತಿಳಿದುಕೊಂಡೇ ಹೋಗಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿ ಆತನ ಮನೆಯತ್ತ ಕಾಲಿಟ್ಟೆ.
***

‘ಯಾರು ನೀನು? ಯಾರು ಬೇಕು?’
‘ಸು..ಸು..ಸುಕುಮಾರ’ ಎಂದೆ ತಡವರಿಸುತ್ತ.
‘ನಿನಗೆ ಅವರ ಪರಿಚಯವಿದ್ದಿರಬೇಕು ಅಲ್ಲವಾ? ಇಷ್ಟರ ವರೆಗೆ ಈ ಊರಿಗೆ ಅವರ ಹೆಸರನ್ನು ಹೇಳಿಕೊಂಡು ಬಂದವನು ನೀನೊಬ್ಬನೇ. ಅವರು ಈಗಷ್ಟೇ ತೋಟಕ್ಕೆ ಹೋದರು. ಸ್ವಲ್ಪ ಹೊತ್ತಿನಲ್ಲಿ ಬಂದು ಬಿಡುತ್ತಾರೆ. ಕುಳಿತುಕೋ. ಬಾಯಾರಿಕೆಗೆ ಬೇಕಾ?’
ನಾನು ‘ಇವಳು ಯಾರು?’ ಎಂಬಂತೆ ಅವಳನ್ನೇ ನೋಡುತ್ತ ನಿಂತೆ.
‘ಬಾ.. ಕುಳಿತುಕೋ’ ಎನ್ನುತ್ತ ಅವಳೇ ಮಾತಿಗಿಳಿದಳು.
‘ನಿನ್ನಲ್ಲಿರುವ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇದೆ. ಎಲ್ಲವನ್ನೂ ಹೇಳುತ್ತೇನೆ. ಅವರು ಬರುವುದರೊಳಗೆ ಹೇಳಿ ಮುಗಿಸಬೇಕು’ ಎನ್ನುತ್ತ ತಮ್ಮ ಕಥೆಯನ್ನು ಹೇಳಲು ಮಂದಾದಳು.

‘ನನ್ನೊಳಗಿನ ಪ್ರಶ್ನೆಗಳು ಇವಳಿಗೆ ಹೇಗೆ ತಿಳಿಯಿತು?’ ಎಂಬುದು ನನಗೆ ಗೊತ್ತಿಲ್ಲ. ಅವಳು ತನ್ನ ಮಾತನ್ನು ಮುಂದುವರಿಸಿದಳು.
‘ಹೌದು. ಅವನು ಈಗ ನನ್ನ ಗಂಡ. ನನ್ನ ಉತ್ಕಟ ಪ್ರೀತಿಯ ಪ್ರತಿಬಿಂಬ. ಇದನ್ನೆಲ್ಲ ಹೇಳುವ ವಯಸ್ಸಲ್ಲ ನನ್ನದು. ಆದರೂ ಪ್ರೀತಿಗೆ ವಯಸ್ಸಿಲ್ಲ ನೋಡು. ಅದಕ್ಕೆ..’ ಎನ್ನುವಾಗ ಅವಳ ಕಣ್ಣಲ್ಲಿ ಹೊಳಪಿತ್ತು, ಪ್ರೀತಿಯನ್ನು ಗೆದ್ದ ಖುಷಿಯಿತ್ತು. ಈ ವಯಸ್ಸಿನಲ್ಲಿಯೂ ಅಷ್ಟೊಂದು ಆಳವಾದ ಪ್ರೇಮವೇ? ಎಂದು ನನಗನಿಸಿದ್ದು ನಿಜ. ಯಾವುದೋ ಸಂಕೋಚ, ಆನಂದ, ಸಾರ್ಥಕತೆ ಎಲ್ಲವೂ ಅವಳ ಮುಖದಲ್ಲಿ ಪ್ರತಿಫಲಿಸುತ್ತಿತ್ತು.
“ಇವತ್ತಿಗೂ ಅವನೆಂದರೆ ನನಗೆ ಪ್ರಾಣ. ನಾಳೆಗೂ, ಕೊನೆಯ ವರೆಗೂ; ಮುಂದಿನ ಜನ್ಮಕೂ. ನೀನು ಹಿಂದೆ ನೋಡಿದ್ದ ಆ ಸುಕುಮಾರನೇ ನನ್ನ ಗಂಡ. ಯಾರೊಡನೆಯೂ ಮಾತಾಡದೇ, ಏನೂ ಕೆಲಸ ಮಾಡದೆ, ಬಟ್ಟೆಗಂಟಿನ ಜೊತೆ ಮಲಗೆದ್ದು, ಎಲ್ಲೋ ಉಂಡು ಬದುಕುತ್ತಿದ್ದವ ನನ್ನ ಗಂಡನಾದದ್ದಾದರೂ ಹೇಗೆ? ಎಂಬ ಪ್ರಶ್ನೆ ನಿನ್ನನ್ನು ಕಾಡುತ್ತಿರಬಹುದಲ್ಲವೇ?

ಹೌದು ಎಂಬಂತೆ ನಾನು ಗೋಣಾಡಿಸಿದೆ. ಅವಳ ಉತ್ಸಾಹ ಇನ್ನೂ ಹೆಚ್ಚಿತು. ಅವನು ಊರೂರು ಅಲೆಯುತ್ತಿದ್ದಾಗ ನಾನು ಕೆಲಸಕ್ಕೆ ಸೇರಿದ್ದ ಊರಿನ ಬಸ್ಟ್ಯಾಂಡಿನಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದ. ದಿನಾಲೂ ನೋಡುತ್ತ ನೋಡುತ್ತ ಅವನ ಬಗ್ಗೆ ಆಸಕ್ತಿ ಹುಟ್ಟಿತು. ಎಲ್ಲೋ ಉಣ್ಣುತ್ತಿದ್ದ. ಬಟ್ಟೆಯನ್ನು ಚೊಕ್ಕವಾಗಿಯೇ ಇಟ್ಟುಕೊಳ್ಳುತ್ತಿದ್ದ. ಹಾಗಾಗಿ ಎಲ್ಲೋ ಸ್ನಾನ ಮಾಡುತ್ತಿದ್ದ ಅಂದುಕೊಂಡಿದ್ದೆ. ವಾರಕ್ಕೊಮ್ಮೆ ಎಲ್ಲಿಯೋ ಹೋಗಿ ಶೇವ್ ಮಾಡಿಕೊಂಡು ಬರುತ್ತಿದ್ದ. ಅವನನ್ನು ಮಾತನಾಡಿಸಲೇ ಬೇಕೆಂದುಕೊಂಡು ಶತಾಯಗತಾಯ ಪ್ರಯತ್ನ ಮಾಡಿದೆ. ಒಂದು ಸುಂದರ ಗಳಿಗೆಯಲ್ಲಿ ಆತ ಮಾತನಾಡಿದ.

‘ನೀನು ರೇಣುಕಾ ಅಲ್ಲವಾ?’
ನನ್ನ ಎದೆ ಒಮ್ಮೆ ಹೊಡೆದುಕೊಂಡಿತು. ‘ಹೌದು’ ಎಂದು ಉತ್ತರಿಸಿದೆ.
ತಟ್ಟನೆ ನನ್ನ ಕೈಹಿಡಿದುಕೊಂಡ. ‘ರೇಣು ನನ್ನನ್ನು ಮತ್ತೆ ಬಿಟ್ಟು ಹೋಗಬೇಡ. ನಿನ್ನ ನೆನಪಿನಲ್ಲೇ ಕೊರಗಿ ಹೇಗಾಗಿದ್ದೇನೆ ನೋಡು. ನಾನು ನೀನು ಮದುವೆ ಮಾಡಿಕೊಂಡು ಎಲ್ಲಾದರೂ ಮನೆ ಮಾಡಿಕೊಳ್ಳುವ. ಕಾಡು ಕಡಿದು ತೋಟ ಮಾಡುವ ಶಕ್ತಿ ನನಗಿದೆ. ನಿನ್ನನ್ನು ಸಾಕುತ್ತೇನೆ. ನೀನು ಬೇಕು, ನಿನ್ನ ಪ್ರೀತಿ ಬೇಕು’ ಎನ್ನುತ್ತ ಕಣ್ಣೀರು ಹಾಕಿದ.

ನನ್ನ ಮನಸ್ಸೂ ಅವನನ್ನು ಬಯಸಿತ್ತು. ಪ್ರೀತಿ ಕುರುಡು ಅಂತಾರಲ್ಲ ಹಾಗೆ. ಆದರೆ ಅದನ್ನೇ ನಾನು ಪ್ರೀತಿಯ ಕಣ್ಣು ಎಂದುಕೊಂಡು ಅವನನ್ನು ಇಷ್ಟಪಟ್ಟೆ. ‘ಇಲ್ಲೇ ಕಾಯುತ್ತಿರು, ಇನ್ನೆರಡು ದಿನದಲ್ಲಿ ನಿನ್ನನ್ನು ನಾನು ಬಂದು ಸೇರಿಕೊಳ್ಳುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟೆ.
ಆತ ನಾನಿನ್ನು ತಿರುಗಿ ಬರಲಾರೆ ಎಂಬ ಅನುಮಾನದಿಂದಲೇ ನೋಡಿದ. ಕೈಮೇಲೆ ಕೈಯಿಟ್ಟು ಭಾಷೆ ಇಟ್ಟು ಹೇಳಿದೆ. ಆದರೂ ಅವನಿಗೆ ಅಪನಂಬಿಕೆ. ಕಣ್ಣು ಹನಿಗೂಡಿತ್ತು. ಸುಮ್ಮನೆ ತಲೆತಗ್ಗಿಸಿಕೊಂಡು ನಿಂತಿದ್ದ.

ನಾನು ಮನೆಯತ್ತ ಹೊರಟೆ. ನಾನು ಅವನ ಸಂಗಮಾಡಿದ್ದೇನೆ ಎಂಬ ಸುದ್ದಿ ಅದಾಗಲೇ ನನ್ನ ಮನೆಗೆ ತಲುಪಿತ್ತು. ಅಪ್ಪ-ಅಮ್ಮ ಇಲ್ಲದೆ ಬೆಳೆದ ನನಗೆ ಆ ಮನೆ ನನ್ನದಾಗಿಯೇ ಇರಲಿಲ್ಲ. ನನಗೆ ಆ ಮನೆ ಬೇಡವಾಗಿತ್ತು; ಅಲ್ಲಿ ಇದ್ದವರಿಗೂ ನಾನು ಬೇಡವಾಗಿತ್ತು. ಮಾರನೆಯ ದಿನ ಅವನಂತೆ ಬಟ್ಟೆಗಂಟನ್ನು ಕಟ್ಟಿಕೊಂಡು ಅಲ್ಲಿಂದ ಹೊರಬಿದ್ದೆ.

ಇವನು ಕಾಯುತ್ತಲೇ ಇದ್ದ. ನಾನು ಬಂದೆ. ಗಾರ್ಮೆಂಟಿನಲ್ಲಿ ಬಟ್ಟೆ ಹೊಲಿಯುವ ಕೆಲಸ ನನ್ನದು. ಬದುಕಿಗೆ ಸಾಕಾಗುವಷ್ಟು ಸಂಬಳ ಇತ್ತು. ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡ. ಮದುವೆಯಾದೆವು. ಅವನೆಂದಂತೆ ಆತ ಕಾಡನ್ನು ಕಡಿದು ತೋಟ ಮಾಡಿದ. ವಯಸ್ಸು ಮೀರಿದ್ದಕ್ಕೋ ಗೊತ್ತಿಲ್ಲ, ಮಕ್ಕಳಾಗಲಿಲ್ಲ. ಆತನಿಗೆ ನಾನೇ ಹೆಂಡತಿ, ನಾನೇ ಮಗಳು ಎಲ್ಲ’ ಎನ್ನುತ್ತ ನಗುಬೀರಿದಳು.
‘ನೀವು ಸುಕುಮಾರನ ಪ್ರೇಯಸಿ ರೇಣುಕೆಯಾ..?’ ಎಂದು ಆಶ್ಚರ್ಯದಿಂದಲೇ ಕೇಳಿದೆ.

‘ಅಲ್ಲ, ನಾನವನು ಪ್ರೀತಿಸಿದ್ದ, ಅವನು ಮೌನಿಯಾಗಲು ಕಾರಣಳಾಗಿದ್ದ ರೇಣುಕಾ ಅಲ್ಲವೇ ಅಲ್ಲ. ನಾನು ರೇವತಿ. ಅವನು ನನ್ನನ್ನೇ ರೇಣುಕೆ ಅಂದುಕೊಂಡಿದ್ದಾನೆ. ಅದಮ್ಯವಾದ ಪ್ರೀತಿಯನ್ನು ಕೊಡುತ್ತಿದ್ದಾನೆ. ನಾನು ನಿನ್ನವಳೆಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು ಎಂದುಕೊಂಡು ಬದುಕುತ್ತಿರುವ ಸುಖದ ಜೀವನ ನನ್ನದು. ತೋಟಕ್ಕೆ ಹೋಗು ಅವನು ಸಿಗುತ್ತಾನೆ. ಮತ್ತೆ ಊಟಕ್ಕೆ ಇಲ್ಲಿಗೇ ಬಾ. ಪಾಯಸ ಮಾಡಿ ಬಡಿಸುವೆ’ ಎಂದಳು ಖುಷಿಯಿಂದ.

***
ನಾನು ಅವನನ್ನು ಹುಡುಕುತ್ತ ಆ ತೋಟದ ಕಡೆಗೆ ಹೊರಟೆ. ‘ಸುಕುಮಾರ ..ಹೇಗಿದ್ದೀರಿ?’ ಎಂದೆ. ಆತ ತುಂಬಾ ಹೊತ್ತು ನೋಡಿದ ಬಳಿಕ ‘ನಿನ್ನನ್ನೆಲ್ಲೋ ನೋಡಿದಂತಿದೆ’ ಎಂದ ನನ್ನ ಮನೆಗೆ ಊಟಕ್ಕೆ ಬರುತ್ತಿದ್ದ ವಿಷಯವನ್ನು ನೆನಪಿಸಿದೆ. ಒಮ್ಮೆ ನಕ್ಕು ಬಿಟ್ಟ. ‘ನನಗೆ ನಿಮ್ಮನ್ನು ಕಂಡಾಗಲೆಲ್ಲ ಬೇಸರವಾಗುತಿತ್ತು. ನೀವು ಮಾತನಾಡದೇ ಇರುವುದನ್ನು ನೋಡಿ ಭಯವೂ ಆಗುತ್ತಿತ್ತು. ನಿಮ್ಮ ಮಾತನಾಡಿಸುವ ಹಂಬಲ ಇತ್ತು. ಆದರೆ ಆಗ ನಾನು ತುಂಬಾ ಚಿಕ್ಕವನಿದ್ದೆ. ನಿಮ್ಮನ್ನು ಮಾತನಾಡಿಸಲಾಗಲಿಲ್ಲ. ಇವತ್ತು ನಿಮ್ಮನ್ನು ನೋಡಿ ತುಂಬಾ ಖುಷಿ ಆಯಿತು’ ಎಂದೆ. ‘ಹೌದಾ! ಇದಕ್ಕೆಲ್ಲ ಕಾರಣ ಅವಳೇ’ ಎಂದ. ‘ನಾನು ನಿಮ್ಮ ಮನೆಗೆ ಹೋಗಿದ್ದೆ, ಎಲ್ಲವನ್ನೂ ನಿಮ್ಮ ಹೆಂಡತಿ ಹೇಳಿದರು’ ಎಂದು ಹೇಳಲು ನಾನು ಬಾಯಿ ತೆರೆಯುವ ಮೊದಲೇ ಅವನು ಮಾತನ್ನು ಶುರು ಮಾಡಿದ.

‘ಒಮ್ಮೆ ಇದ್ದಕ್ಕಿದ್ದ ಹಾಗೆ ಅವಳು ನಾನಿದ್ದಲ್ಲಿಗೆ ಬಂದಿದ್ದಳು. ಇಡೀ ದಿನ ಬಟ್ಟೆಯ ಗಂಟನ್ನು ಹೊತ್ತುಕೊಂಡು ಬಸ್‌ ಸ್ಟ್ಯಾಂಡ್ ನಲ್ಲಿ ಕುಳಿತಿರುತ್ತಿದ್ದಳು. ಎಷ್ಟೊತ್ತಿಗೋ ಎಲ್ಲಿಗೋ ಹೋಗಿ ಉಂಡು ಬರುತ್ತಿದ್ದಳು. ರಾತ್ರಿ ಎಲ್ಲಿ ಹೋಗುತ್ತಿದ್ದಳೋ ಗೊತ್ತಿಲ್ಲ. ನಾನು ಅವಳಿಗೆ ತೊಂದರೆಯಾಗಬಾರದೆಂದು ಬೇರೆ ಕಡೆಗೆ ಹೋಗಿ ಮಲಗುತ್ತಿದ್ದೆ. ಒಂದು ದಿನ ನನ್ನ ಬಳಿ ಬಂದು ‘ನೀನು ಕುಮಾರ ಅಲ್ಲವಾ? ಎಂದು ಕೇಳಿದಳು.’ ಅಲ್ಲ ಎನ್ನಬೇಕೋ? ಹೌದು ಅನ್ನಬೇಕೋ ತಿಳಿಯದೆ, ಸುಮ್ಮನೆ ತಲೆಯಲ್ಲಾಡಿಸಿದೆ.

‘ನನ್ನನ್ನು ಮದುವೆಯಾಗುವೆನೆಂದು ಪ್ರೀತಿ ತೋರಿ, ಮಾತು ಕೊಟ್ಟು ಮರೆಯಾದದ್ದು ಯಾಕೆ? ಎಂದು ಬಿಕ್ಕಿದಳು. ಅವಳು ಮಾತು ನನಗೊಂದೂ ಅರ್ಥವಾಗುತ್ತಿರಲಿಲ್ಲ. ನಿಧಾನವಾಗಿ ಅವಳ ಪ್ರೀತಿ ಅರ್ಥವಾಗುತ್ತ ಹೋಯಿತು. ಮತ್ತೆ ನಾನು ಮನುಷ್ಯನಾದೆ. ಒಂದು ದಿನ ಮದುವೆಯಾದೆವು. ಕಾಡು ಕಡಿದು ತೋಟ ಮಾಡಿದೆ. ಚಿಕ್ಕ ಮನೆಯಿದೆ. ಲೆಕ್ಕಹಾಕಲಾರದಷ್ಟು ಪ್ರೀತಿ ಕೊಡುತ್ತಲೇ ಇದ್ದಾಳೆ. ವಯಸ್ಸು ಮೀರಿದ್ದಕ್ಕೋ ಏನೋ ಇನ್ನೂ ಮಕ್ಕಳಾಗಿಲ್ಲ. ಅವಳಿಗೆ ನಾನೇ ಗಂಡ, ನಾನೇ ಮಗ. ಈಗ ನಾನು ಭೂಮಿಯಲ್ಲಿರುವ ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ’ ಎಂದು ನಕ್ಕುಬಿಟ್ಟ. ‘ನೀವು ಕುಮಾರನೋ? ನಮ್ಮ ಸುಕುಮಾರನೋ?’ ಎಂದೆ. ‘ನಾನು ಅದೇ ಸುಕುಮಾರನೇ, ಅವಳ ಕುಮಾರ ಎಲ್ಲಿದ್ದಾನೋ ಗೊತ್ತಿಲ್ಲ. ನಾನು ಅವಳಿಗೆ ಮಾತ್ರ ಕುಮಾರ’ ಎಂದ. ‘ಬಾ, ನಿನಗೆ ಪಾಯಸದ ಊಟ ಹಾಕಿಸುವೆ’ ಎನ್ನುತ್ತ ಮನೆಯತ್ತ ಕರೆದುಕೊಂಡು ಹೊರಟ.

‍ಲೇಖಕರು Admin

October 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: