‘ಕವಿತೆ ಬಂಚ್‌’ನಲ್ಲಿ ಪರಮೇಶ್ವರ ಗುರುಸ್ವಾಮಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಪರಮೇಶ್ವರ ಗುರುಸ್ವಾಮಿ
ಮೈಸೂರು ಮೂಲದ ಪರಮೇಶ್ವರ ಗುರುಸ್ವಾಮಿ ಬೆಂಗಳೂರು ವಾಸಿ. ಸಿನೆಮಾ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಆಸಕ್ತಿ.
ಸಿನೆಮಾ ತಾಂತ್ರಿಕತೆ ಮತ್ತು ಸಾಹಿತ್ಯದಲ್ಲಿ ಕಥನ ಪ್ರಯೋಗಗಳ ಬಗ್ಗೆ ವಿಶೇಷ ಆಸಕ್ತಿ.

1.

ಖಡಿಲು ಪಡಿಲು
ಸಿಡಿಲಿನ ಶಬ್ದಗಳು
ಠಣ್ ಠಣ್ ಪಣ್
ಲೋಹಗಳ ಶಬ್ದ
ಕೇಳಿ
ಇಲ್ಲೂ ಹಣಕಿದೆ.
ಶೂರಾಧಿಶೂರರ
ವೀರಾಧಿವೀರರ
ಮಾರಾಮಾರಿ ನಡೆಯುತ್ತಿತ್ತು
ಎಷ್ಟಕ್ಷೋಹಿಣಿಯಿತ್ತೋ
ಯಾರಿಗೆ ಗೊತ್ತು?
ಒರೆಗಳಿಂದ ಬತ್ತಳಿಕೆಗಳಿಂದ
ಸೆಳೆದು ಪ್ರಯೋಗಿಸುತ್ತಿರುವ
ನಾನಾ ಥರದ ಅಸ್ತ್ರಗಳ ಮುಖಾಮುಖಿ

ಖಣಾಖಣಿ
ನನ್ನ ಕೈಯಲ್ಲಿದ್ದುದು
ನಳನಳಿಸುವ ಒಂದು
ಹಸಿರು ಹುಲ್ಲು
ಹುಲ್ಲನ್ನು ಅಸ್ತ್ರವಾಗಿಸುವ ಮಂತ್ರ
ನನಗೆ ತಿಳಿದಿರಲಿಲ್ಲ
ಈಗಲೂ ಬೇಕಿಲ್ಲ
ಅಲ್ಲೇ ಕೆಸರಿನಲ್ಲಿ
ಯಾರಿಗೂ ತಿಳಿಯದಂತೆ
ಆ ಹುಲ್ಲನ್ನು
ನಾಟಿ ಮಾಡಿ
ಬಂದುಬಿಟ್ಟೆ!
ಯಾರಿಗೆ ಬೇಕು ಹೊಡೆದಾಟ?

2.

ಥೋ!….
ಒಮ್ಮೆ ಪಂಡಿತೋತ್ತಮರ ಗೋಷ್ಠಿಯೊಳಗೆ ಹಣಕಿ ಬಿಟ್ಟೆ!

ಥೋ!…..
ಇವನೊಬ್ಬ ಬುದ್ದಿವಂತ
ಅಂತ ಕರೆದುಬಿಟ್ಟರಾ!

ಥೋ!…..
ನನ್ನ ಐಕ್ಯೂ ಇವರ
ಮಟ್ಟಕ್ಕೆ ಇಲ್ಲಾ!

ಎಂದುಕೊಂಡು
ತಲೆಬುಡ ಯಾವುದೂ
ಎಟುಕಿಸಿಕೊಳ್ಳಲಾಗದೆ

ವಾಪಾಸು
ನನ್ನ ಮೈದಾನವೇ
ನನ್ನ ಲೆವಲು
ಅಂದುಕೊಂಡು
ನನ್ನ ಪಾಡಿಗೆ
ನಾನು
ಆಟವಾಡಿಕೊಂಡಿದ್ದೇನೆ
ನೆಮ್ಮದಿಯಾಗಿದ್ದೇನೆ!

ಥೋ!…..

3.

ತನ್ನದೇ ಒಂದು
ಕಾಲಿನ ಹೆಬ್ಬೆಟ್ಟನ್ನು
ತನ್ನದೇ ಇನ್ನೊಂದು
ಕಾಲಿನ ಹೆಬ್ಬೆಟ್ಟಿನಿಂದ
ಮೆಟ್ಟಿ‌, ಅದುಮಿ
ಆಕಾಶದಲ್ಲಿ ಹಾರಾಡುವ
ಕನಸು ಕಾಣುತ್ತಿರುವ ಯಕಃಶ್ಚಿತ್
ಜೀವವೇ,
ಮೊದಲು
ಬಿಡಿಸಿಕೋ ನಿನ್ನ
ರೊಳ್ಳೆಗಳಿಂದ,
ನಿನ್ನ ಖಾಸಗಿ ಮತ್ತು
ಸುತ್ತಲ ರೊಳ್ಳೆಗಳಿಂದ
ಮೊದಲು ಬಿಡಿಸಿಕೊ.

ಸರಪಳಿ ತನಗೆ ತಾನೇ ಕಳಚಿ
ಪಂಜರದಿಂದ ಬಿಡುಗಡೆ ಸಿಕ್ಕಿ
ಆಕಾಶದಲ್ಲೇನು
ಹಾರಾಡುವಿ?
ಮಂಗಳ ಗ್ರಹದಲ್ಲೋ
ಚಂದ್ರ ಲೋಕದಲ್ಲೋ
ವಿಶ್ವದಲ್ಲೆಲ್ಲಿ ಬೇಕಾದರೂ
ನಿನ್ನದೇ ಗೂಡು ಮಾಡಬಹುದು
ಸ್ವಚ್ಛಂದವಾಗಿ ವಿಹರಿಸಬಹುದು.

4.

ಮಲಗಿದ್ದೆ
ಪೂರ್ವಸೂರಿಗಳ
ತೊಡೆಗಳ ದಿಂಬು
ಮಾಡಿಕೊಂಡು.

ಅವರ ಮಂತ್ರ
ಘೋಷಗಳ ಪುರಾಣಗಳ
ಲಾಲಿ
ಕೇಳುತ್ತಾ ನಿದ್ರೆ
ಎಂಬ ಆರಾಮವಲಯದ
ಲೋಕದಲ್ಲಿ ವಿಹರಿಸುತ್ತಿದ್ದೆ.

ಎದ್ದ ಮೇಲೆ ಅರಿವಾಯಿತು
ಅದು ಐಷಾರಾಮಿ
ಸಂವೇದನೆಗಳ ಮಾಯಾ
ಮೋಹದ ಭ್ರಮಾ ಲೋಕ.
ನನ್ನನ್ನೇ ಹೀಗಳೆವ
ರುಚಿಕರ ಪಾಕ.

ತಲೆಯೇನೋ ಅವರ
ತೊಡೆಗಳ ಮೇಲೆ
ಆರಾಮಾಗಿ ಪವಡಿಸಿತ್ತು.
ಆದರೆ ನನ್ನ ದೇಹ, ಅವರು
ಉಗಿಯುವ ನೆಲದ ಮೇಲೆ
ಹೊರಳಾಡುತ್ತಿತ್ತು ಅರಿವಾಗದೆ.
ಕಾಲುಗಳು ಮಣ್ಣಿನಲ್ಲಿ ನಿಕೃಷ್ಟ.

ಅರಿವು ತಿಳಿದ ಮೇಲೆ
ನೆಲದ ಮೇಲೆ ನನ್ನದೇ
ಕಾಲೂಗಳೂರಿ ನಿಂತೆ.
ತಲೆಯಲ್ಲಿ ತುಂಬಿರುವ
ಅವರ ದೃಷ್ಟಿಯ ಮಾಯೆಯ
ಕೊಡವಿಕೊಳ್ಳುವುದು
ಎಷ್ಟು ಕಷ್ಟ ಎಂಬ
ಅರಿವಾಗುತ್ತಿದೆ ಈಗ.

5.

ನನ್ನ ಪಾಡಿಗೆ ನಾನು
ನಡೆದು
ಹೋಗುತ್ತಿದ್ದೆ ನನಗೆ ಬೇಕಾದ
ದಾರಿಯಲ್ಲಿ.

ನೋಡಿದವರೆಲ್ಲಾ,
‘ಓಹ್!
ನೀನು ನಡೆಯುವುದು
ಅವನ ರೀತಿ, ಇವಳ ರೀತಿ’
ಎಂದು ಉಬ್ಬಿಸಿದರು.

ಅವನ ರೀತಿ
ಇವಳ ರೀತಿ
ಹೆಜ್ಜೆಗಳನಿಡಲು ಯತ್ನಿಸಿದೆ.

ನನ್ನ ದಾರಿ ಕಳೆದು ಹೋಗಿತ್ತು!

6.

ವೈವಿಧ್ಯತೆ:
ಕರಡಿಗಳು ಹಲಸಿನ ಹಣ್ಣನ್ನು ಹಿದುಕಿ ಹಲಸಿನ ಬೀಜಗಳನ್ನು ಆಕಾಶಕ್ಕೆ ಚಿಮ್ಮಿಸಬಹುದು.
ಅಚ್ಚರಿ ಪಡದಿರಿ.

ನೋಡಿ,
ಕೋತಿಗಳು
ಬೆಂಡೆ ಬೀಜಗಳನ್ನು
ಅವರೆ ಕಾಳುಗಳನ್ನು
ಹುಣಿಸೆ ಬೀಜಗಳನ್ನು
ನೆಲ್ಲಿ ಬೀಜಗಳನ್ನು
ಮಿಡಿ ಮಾವಿನ ಓಟೆಗಳನ್ನು
ಬಟಾಣಿ ಕಾಳುಗಳನ್ನು
ನಿಂಬೆ ಬೀಜಗಳನ್ನು
ಆಕಾಶಕ್ಕೆ ಚಿಮ್ಮಿಸಿವೆ
ನಮ್ಮ ಜಾನಪದ ಕಲ್ಪನೆಗಳಲ್ಲಿ.

ಸಾವಿರ ರಾಮಾಯಣಗಳ ಮೇಲೆ
ಅಹಂಕಾರದ ಧಾರ್ಮಿಕ ಹೊದಿಕೆ
ಮುಸುಕಲಾಗುವುದೇ? ಇಲ್ಲ.

‍ಲೇಖಕರು Admin

October 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: